ಇತಿಹಾಸ

ಅಕ್ಬರನ ವಿರುದ್ಧ ಸೆಡ್ಡುಹೊಡೆದು ನಿಂತ ಮಹಾರಾಣಾ ಪ್ರತಾಪಸಿಂಗ್ ರ ಬಗ್ಗೆ ನಿಮಗೆಷ್ಟು ಗೊತ್ತು?!

ನಾವು ಇತಿಹಾಸದ ಪುಟಗಳನ್ನ ಒಮ್ಮೆಮೆಲುಕು ಹಾಕುವುದಾದರೆ ನಮ್ಮ ಇತಿಹಾಸಕಾರರು ತಮ್ಮ ಶಬ್ಧ ಸಂಪತನ್ನ ಪರಕೀಯರ ವೈಭವಕ್ಕೆ ಮುಡಿಪಾಗಿ ಇಟ್ಟಿದ್ದರು ಅನಿಸುತ್ತೆ. ಇದು ಅವರು ನಮಗೆ ಮಾಡಿದ್ದ ಒಂದು ದೊಡ್ಡ ದ್ರೋಹ ಹಾಗು ಮೋಸವೇ ಸರಿ.

ಪರಕೀಯರ ದಬ್ಬಾಳಿಕೆಗೆ ತುತ್ತಾದ ಭಾರತದ ರಕ್ಷಣೆಗೆ ನಿಂತ ಇತಿಹಾಸದ ಪ್ರಸಿದ್ಧ ರಾಜ ಮಹಾರಾಜರು ಒಬ್ಬಿಬ್ಬರಲ್ಲ. ಇವರ ಪೈಕಿ ಅಗ್ರಗಣ್ಯ ಮಹಾರಾಣಾ ಪ್ರತಾಪಸಿಂಗ್ ಕೂಡ ಒಬ್ಬ.

ಮೊಘಲ್ ಸಾಮ್ರಾಟ ಅಕ್ಬರ್ ನ ಜಾಲದಿಂದ ತಪ್ಪಿಸಲೆಂದು ಸ್ವಾಭಿಮಾನಿ ರಜಪೂತರನ್ನು ಒಗ್ಗೂಡಿಸಿದ ರಾಣಾ, ಸ್ಥಿತ ಹೋರಾಟಪ್ರಜ್ಞೆಗೆ ಸಾಕ್ಷಿಯಾಗಿದ್ದಾನೆ.

ಮೇವಾಡದ ಮಹಾರಾಣಾ ಪ್ರತಾಪಸಿಂಗರ ಹೆಸರು ಸಾಹಸ, ಶೌರ್ಯ, ತ್ಯಾಗ ಮತ್ತು ಹುತಾತ್ಮತೆ ಇವುಗಳ ಪ್ರತೀಕವಾಗಿ ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರೇರಣಾದಾಯಕವಾಗಿದೆ.

1540 ನೇ ಇಸವಿಯಲ್ಲಿ ರಾಜಸ್ಥಾನದ ಮೇವಾಡದ ರಾಜಾ ರಾಣಾ ಉದಯಸಿಂಹನ ಜ್ಯೇಷ್ಠಪುತ್ರನಾಗಿ ಜನಿಸಿದ ಮಹಾರಾಣಾ ಪ್ರತಾಪಸಿಂಗ್, ಒಬ್ಬ ಮಹಾಪುರುಷನಾಗುವ ಎಲ್ಲ ಲಕ್ಷಣಗಳನ್ನೂ ಬಾಲ್ಯದಲ್ಲೇ ಹೊಂದಿದ್ದ.

ಭಾರತವನ್ನು ಆ ವರ್ಷಗಳಲ್ಲಿ ಮೊಘಲ್ ದೊರೆ ಅಕ್ಬರ್ ಆಳುತ್ತಿದ್ದ. ಬಹುತೇಕ ಎಲ್ಲ ರಜಪೂತ ರಾಜರೂ ಅಕ್ಬರನ ಅಧಿಪತ್ಯವನ್ನು ಒಪ್ಪಿಕೊಂಡಿದ್ದರು.

ತಂದೆ ಉದಯಸಿಂಹನ ಇಚ್ಛೆಯಂತೆ, ಅವನ ಪಟ್ಟಾಭಿಷೇಕ ಮಾಡಲು ಸಿದ್ಧತೆ ನಡೆಸಿದರೂ, ಪ್ರಜೆಗಳ ಒತ್ತಾಸೆಯ ಮೇರೆಗೆ ರಾಣಾ ಪ್ರತಾಪ ರಾಜನಾದನು. ಸಿಂಹಾಸನವೇರಿದ ರಾಣಾ ಪ್ರತಾಪ, ಮೇವಾಡವನ್ನು ಮೊಘಲರಿಂದ ಮುಕ್ತಿಗೊಳಿಸುವ ಪ್ರತಿಜ್ಞೆ ಮಾಡಿದ.

ನನ್ನ ಶೂರ ರಜಪೂತ ಬಾಂಧವರೇ, ನಮ್ಮ ಮಾತೃಭೂಮಿ, ಪುಣ್ಯಭೂಮಿ ಮೇವಾಡ ಮುಸಲ್ಮಾನರ ವಶದಲ್ಲಿದೆ. ಇಂದು ನಾನು ನಿಮ್ಮ ಮುಂದೆ ಪ್ರತಿಜ್ಞೆ ಮಾಡುವುದೇನೆಂದರೆ, ಚಿತ್ತೋಡ ಸ್ವತಂತ್ರವಾಗುವ ತನಕ ನಾನು ಬೆಳ್ಳಿಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ. ಮೆತ್ತಗಿನ ಹಾಸಿಗೆಯಲ್ಲಿ ಮಲಗುವುದಿಲ್ಲ, ರಾಜವೈಭವವನ್ನು ಅನುಭವಿಸುವುದಿಲ್ಲ, ಅದರ ಬದಲು ನಾನು ಪತ್ರಾವಳಿಯಲ್ಲಿ ಊಟ ಮಾಡುವೆನು, ಭೂಮಿಯ ಮೇಲೆ ಮಲಗುವೆನು ಹಾಗೂ ಗುಡಿಸಲಿನಲ್ಲಿ ವಾಸಿಸುವೆನು. ಶೂರ ಸರದಾರರೇ, ಚಿತ್ತೋಡ ಸ್ವತಂತ್ರಗೊಳಿಸುವ ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿಕ್ಕಾಗಿ ತನು-ಮನ-ಧನದಿಂದ ನೀವೆಲ್ಲರೂ ಸಹಾಯ ಮಾಡುವಿರಿ ಎಂದು ನನಗೆ ವಿಶ್ವಾಸವಿದೆ.’

ಈ ಪ್ರತಿಜ್ಞೆ ಮತ್ತು ಸಂಕಲ್ಪವನ್ನು ಜೀವನಪೂರ್ತಿ ಪಾಲಿಸಿದ ರಾಣಾ ಪ್ರತಾಪ ಎಲ್ಲ ಸರದಾರರ, ಸಾಮಂತರ ಸಹಕಾರದೊಂದಿಗೆ ಸುಸಜ್ಜಿತ ಸೈನ್ಯವನ್ನು ಕಟ್ಟಲು ಪ್ರಾರಂಭಿಸಿದ.

ಮೇವಾಡದ ನಾಲ್ಕೂ ಸೀಮೆಯಲ್ಲಿ ಮುಸಲ್ಮಾನರು ಮುತ್ತಿಗೆ ಹಾಕಿದ್ದರು. ಮಹಾರಾಣಾ ಪ್ರತಾಪಸಿಂಗರ ತಮ್ಮಂದಿರಾದ ಶಕ್ತಿಸಿಂಹ ಹಾಗೂ ಜಗಮಲ್ಲ ಇವರಿಬ್ಬರೂ ಅಕ್ಬರ ವಶದಲ್ಲಿದ್ದರು.

ಶತ್ರುವಿನೊಂದಿಗೆ ಹೋರಾಡಲು ಶಕ್ತಿಶಾಲಿ ಸೈನ್ಯವನ್ನು ನಿರ್ಮಿಸುವುದು ಮಹಾರಾಣಾ ಪ್ರತಾಪ ಸಿಂಹರ ಮೊದಲ ಸಮಸ್ಯೆಯಾಗಿತ್ತು. ಅದಕ್ಕಾಗಿ ಅಪಾರವಾದ ಹಣದ ಅವಶ್ಯಕತೆಯಿತ್ತು. ಮಹಾರಾಣಾ ಪ್ರತಾಪಸಿಂಗರ ಬೊಕ್ಕಸ ಖಾಲಿಯಾಗಿತ್ತು.

ಅವರು ಎಂದಿಗೂ ’ಅಕ್ಬರನಿಗಿಂತ ನಾವು ದುರ್ಬಲರಾಗಿದ್ದೇವೆ’ ಎಂಬ ನಿರಾಶಾ ಭಾವನೆಯನ್ನ ತನ್ನ ಪ್ರಜೆಗಳೆಡೆಗಾಗಲಿ ಸೈನ್ಯದೆದುರಾಗಲಿ ತೋರ್ಪಡಿಸಲಿಲ್ಲ.

ನಮ್ಮ ಮಾತೃಭೂಮಿಯನ್ನು ಮುಸಲ್ಮಾನರ ಗುಲಾಮಗಿರಿಯಿಂದ ಶೀಘ್ರದಲ್ಲಿ ಹೇಗೆ ಮುಕ್ತವಾಗಿಸುವುದು ಎನ್ನುವ ಒಂದೇ ಹಂಬಲ ಅವರಲ್ಲಿತ್ತು.

ಭಾಮಾಶಾಹ ಎಂಬ ಹೆಸರಿನ ರಜಪುತ ಸರದಾರ ಮಹಾರಾಣಾ ಪ್ರತಾಪಸಿಂಹರ ಪೂರ್ವಜರ ರಾಜಸಭೆಯಲ್ಲಿ ಮಂತ್ರಿಯಾಗಿದ್ದನು. ತನ್ನ ಸ್ವಾಮಿಯು ಅರಣ್ಯದಲ್ಲಿ ಅಲೆದಾಡುವಂತಹ ಆಪತ್ತು ನೋಡಿ ಅವನ ಮನಸ್ಸಿಗೆ ಚುಚ್ಚುತ್ತಿತ್ತು. ಮಹಾರಾಣಾ ಪ್ರತಾಪಸಿಂಹರ ಸ್ಥಿತಿಯನ್ನು ನೋಡಿ ಭಾಮಾಶಾಹನ ಮನಸ್ಸು ಕರಗಿತು. ಅವನು 25 ಸಾವಿರ ಸೈನಿಕರನ್ನು 12 ವರ್ಷ ಪಾಲನೆ ಪೋಷಣೆ ಮಾಡುವಷ್ಟು ಸಂಪತ್ತನ್ನು ಸ್ವಾಮಿಯ ಚರಣಕ್ಕೆ ಅರ್ಪಣೆ ಮಾಡಿದಾಗ ಮಹಾರಾಣಾ ಪ್ರತಾಪಸಿಂಹರ ಅಂತಃಕರಣ ಕೃತಜ್ಞತೆಯಿಂದ ತುಂಬಿಹೋಯಿತು.

ಪ್ರಾರಂಭದಲ್ಲಿ ಪ್ರತಾಪಸಿಂಗರು ಭಾಮಾಶಾಹನ ಸಂಪತ್ತನ್ನು ನಮ್ರತೆಯಿಂದ ತಿರಸ್ಕರಿಸಿದರು; ಆದರೆ ಭಾಮಾಶಾಹನ ಮನಃಪೂರ್ವಕ ಆಗ್ರಹಕ್ಕಾಗಿ ಕೊನೆಗೆ ಅದನ್ನ ಅವರು ಸ್ವೀಕರಿಸಿದರು.

ಭಾಮಾಶಾಹನ ಕೊಡುಗೆಯ ನಂತರ ಮಹಾರಾಣಾ ಪ್ರತಾಪಸಿಂಗರಿಗೆ ಅನೇಕ ಸ್ಥಳಗಳಿಂದ ಹಣ ಬರಲು ಪ್ರಾರಂಭವಾಯಿತು. ಈ ಹಣವನ್ನು ಉಪಯೋಗಿಸಿ ಅವರು ತನ್ನ ಸೈನ್ಯಬಲವನ್ನು ಹೆಚ್ಚಿಸಿಕೊಂಡರು ಹಾಗೂ ಸಂಪೂರ್ಣ ಮೇವಾಡ ಪ್ರಾಂತವನ್ನು ಸ್ವತಂತ್ರಗೊಳಿಸಿದರು. ಆದರೆ ಇನ್ನೂ ಚಿತ್ತೋಡ ಮುಸಲ್ಮಾನರ ವಶದಲ್ಲಿಯೇ ಇತ್ತು.

ಮಹಾರಾಣಾ ಪ್ರತಾಪಸಿಂಹರನ್ನು ಮೋಸದಿಂದ ತನ್ನ ಗುಲಾಮನನ್ನಾಗಿ ಮಾಡಲು ಅಕ್ಬರನು ಸತತ ಪ್ರಯತ್ನ ಮಾಡಿದನು, ಆದರೆ ಅದು ವ್ಯರ್ಥವಾಯಿತು. ಕೊನೆಗೆ ಅಕ್ಬರನು ಮಹಾರಾಣಾ ಪ್ರತಾಪಸಿಂಹರನ್ನು ಮುಗಿಸಿಬಿಡೋಕೆ ತನ್ನ ಪುತ್ರ ಜಹಾಂಗೀರ ನೇತೃತ್ವದಲ್ಲಿ ಬಾದಶಾಹೀ ಸೈನ್ಯವನ್ನು ಕಳಿಸಿದನು. ಅಕ್ಬರನಿಗೆ ಶರಣಾಗಿರುವ ಜಯಪುರದ ರಾಜಾ ಮಾನಸಿಂಗ್ ಮತ್ತು ಮತಾಂತರವಾಗಿದ್ದ ರಜಪುತ ಸರದಾರ ಮಹಾಬತಖಾನ್ ಇವರೊಂದಿಗೆ ಸೈನ್ಯಗಳು ಮಹಾರಾಣಾ ಪ್ರತಾಪಸಿಂಗರ ಮೇಲೆ ದಂಡೆತ್ತಿ ಹೋದವು.

ಮಹಾರಾಣಾ ಪ್ರತಾಪ ಸಿಂಗರ 28 ಸಾವಿರ ಸೈನ್ಯ ಹಾಗೂ ಅಕ್ಬರನ 2 ಲಕ್ಷ ಸೈನ್ಯ ಹಳದಿಘಾಟಿನಲ್ಲಿ ಮುಖಾಮುಖಿಯಾಯಿತು.

ಹೋರಾಟದ ಆವೇಶದಲ್ಲಿ ಮಹಾರಾಣಾ ಪ್ರತಾಪಸಿಂಹರು ತನ್ನ ಕುದುರೆಯ ಮೇಲಿಂದ ನೇರವಾಗಿ ಜಹಾಂಗೀರನ ಆನೆಯ ಮೇಲೇರಿ ಹೋದರು. ಇತಿಹಾಸ ಪ್ರಸಿದ್ಧ ’ಚೇತಕ್’ ಎಂಬ ಕುದುರೆಯೂ ಅಂಜದೆ ಜಹಾಂಗೀರನ ಆನೆಯ ಮೇಲೆಯೇ ಜಿಗಿಯಿತು, ರಾಣಾ ಪ್ರತಾಪಸಿಂಗರು ಭರ್ಜಿಯನ್ನೆಸೆದರು.

ಜಹಾಂಗೀರ ಮಾವುತನ ಹಿಂದೆ ಆಶ್ರಯ ಪಡೆದ ಕಾರಣ ಭರ್ಜಿ(dart) ಮಾವುತನಿಗೆ ತಗುಲಿ ಅವನು ಸಾವನ್ನಪ್ಪಿದನು. ಆದರೆ ಜಹಾಂಗೀರ ಬದುಕಿದನು.

ಸಾವಿರಾರು ಮುಸಲ್ಮಾನ ಸೈನಿಕರು ಸುತ್ತುವರಿದಿರುವ ಭದ್ರಕೋಟೆಯೊಳಗೆ ನುಗ್ಗಿ ನೇರವಾಗಿ ಸೇನಾಪತಿಯ ಮೇಲೆಯೇ ಹಲ್ಲೆ ಮಾಡಿದರು.

ಅನಂತರ ಬಂದ ಅಕ್ಬರನಿಗೆ ಸ್ವತಃ 6 ತಿಂಗಳು ಯುದ್ಧ ನಡೆಸಿಯೂ ಮಹಾರಾಣಾ ಪ್ರತಾಪಸಿಂಹರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅಕ್ಬರ ಬರಿಗೈಯಲ್ಲಿ ದೆಹಲಿಗೆ ಹಿಂತಿರುಗಿದನು.

ಕೊನೆಯ ಪ್ರಯತ್ನವೆಂದು ಅಕ್ಬರನು 1584 ರಲ್ಲಿ ಮಹಾಪರಾಕ್ರಮಿ ಸೇನಾಪತಿ ಜಗನ್ನಾಥನಿಗೆ ವಿಶಾಲವಾದ ಸೈನ್ಯವನ್ನು ನೀಡಿ ಮೇವಾಡದ ಮೇಲೆ ಆಕ್ರಮಿಸಲು ಕಳಿಸಿದನು. 2 ವರ್ಷ ಎಷ್ಟೇ ಪ್ರಯತ್ನ ಮಾಡಿದರೂ ಮಹಾರಾಣಾ ಪ್ರತಾಪಸಿಂಗರನ್ನು ಹಿಡಿಯಲು ಅವನಿಗೂ ಸಾಧ್ಯವಾಗಲಿಲ್ಲ.

ಮಹಾರಾಣಾ ಪ್ರತಾಪಸಿಂಹರ ಮರಣ ಹುಲ್ಲಿನ ಹಾಸಿಗೆಯಲ್ಲಿ ಆಗಿತ್ತು. ಕೊನೆಯುಸಿರೆಳೆಯುವ ತನಕ (1597)ಮೃದುವಾದ ಹಾಸಿಗೆಯಲ್ಲಿ ಮಲಗಲಿಲ್ಲ ಏಕೆಂದರೆ ಚಿತ್ತೋಡ ಸ್ವತಂತ್ರಗೊಳಿಸುವ ಪ್ರತಿಜ್ಞೆಯು ಪೂರ್ಣಗೊಳ್ಳಲಿಲ್ಲ. ಕೊನೆಯ ಕ್ಷಣದಲ್ಲಿ ತಮ್ಮ ಪುತ್ರ ಅಮರಸಿಂಹನ ಕೈಹಿಡಿದುಕೊಂಡು ಅವರು ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಜವಾಬ್ಧಾರಿಯನ್ನು ಅವನಿಗೆ ವಹಿಸಿಕೊಟ್ಟು ಶಾಂತರೀತಿಯಲ್ಲಿ ಪ್ರಾಣ ತ್ಯಜಿಸಿದರು.

ಅಕ್ಬರನಂತಹ ಕ್ರೂರ(Cruel) ಬಾದಶಾಹನೊಂದಿಗೆ ಮಹಾರಾಣಾ ಪ್ರತಾಪ ಸಿಂಹರು ಮಾಡಿದ ಸಂಘರ್ಷಕ್ಕೆ ಇತಿಹಾಸದಲ್ಲಿ ಪರ್ಯಾಯ ಉದಾಹರಣೆ ಇಲ್ಲ. ಹೆಚ್ಚುಕಡಿಮೆ ಸಂಪೂರ್ಣ ರಾಜಸ್ಥಾನ ಅಕ್ಬರನ ವಶಕ್ಕೆ ಹೋಗಿರುವಾಗ ಮಹಾರಾಣಾ ಪ್ರತಾಪಸಿಂಹರು ತಮ್ಮ ಸಣ್ಣದಾದ ಭೂಮಿಗಾಗಿ 25 ವರ್ಷ ಹೋರಾಡಿದರು. ಅಷ್ಟೇ ಅಲ್ಲ, ಅವರು ಮುಸಲ್ಮಾನರ ಹಿಡಿತದಿಂದ ರಾಜಸ್ಥಾನದ ಬಹಳಷ್ಟು ಭೂಮಿಯನ್ನೂ ಸ್ವತಂತ್ರಗೊಳಿಸಿದರು. ಅಪಾರವಾದ ಕಷ್ಟ ನಷ್ಟಗಳನ್ನು ಸಹಿಸಿಯೂ ಅವರು ತಮ್ಮ ರಾಷ್ಟ್ರದ ಪ್ರತಿಷ್ಠೆಗೆ ಆಘಾತವಾಗಲು ಬಿಡಲಿಲ್ಲ.

ನಾವು ಅವರ ಬಗ್ಗೆ ಇಷ್ಟು ತಿಳಿದುಕೊಂಡ ಮೇಲೆ ‘ಸ್ವಾತಂತ್ರ್ಯ ಎಂಬ ಶಬ್ಧದ ಪರ್ಯಾಯವೇ ಮಹಾರಾಣಾ ಪ್ರತಾಪಸಿಂಹ’ ಅಂತ ಅನ್ನಬಹುದು. ರಾಣಾ ಪ್ರತಾಪಸಿಂಹರ ಶೌರ್ಯವು ಇಂದಿಗೂ ಪ್ರತಿಯೊಬ್ಬ ಹಿಂದೂವನ್ನು ರೋಮಾಂಚನಗೊಳಿಸುತ್ತದೆ!ಧರ್ಮಕ್ಕಾಗಿ ಪ್ರಾಣವನ್ನೂ ಪಣಕ್ಕಿಡಲು ಕಲಿಸುತ್ತದೆ!!

– ಪ್ರಭಾಕರ ಜವಳಿ

Tags

Related Articles

Close