ಆತ್ಮೀಯ ಬಿಜೆಪಿ ಮುಖಂಡರೇ…. ,
ಊಟ ಮಾಡಿ ಎಸೆದ ಎಂಜಲು ಎಲೆಯಲ್ಲಿ ಮತ್ತೆ ಊಟ ಮಾಡುತ್ತೀರಾ? ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾದ ನಾನು ಈ ಪ್ರಶ್ನೆಯನ್ನು ಕೇಳಲೇಬೇಕಾದ
ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಆಕ್ರೋಶದ ನುಡಿ ನನ್ನದೊಬ್ಬನದಷ್ಟೇ ಅಲ್ಲ, ನನ್ನಂಥಾ ಸಾವಿರಾರು ಕಾರ್ಯಕರ್ತರು ನಿಮ್ಮಲ್ಲಿ ಇದೇ ಪ್ರಶ್ನೆಯನ್ನು ಕೇಳಬಹುದು.
ಯಾಕಂತೀರಾ…? ಅದಕ್ಕೆ ಕಾರಣವೂ ಇದೆ…
ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ನಿಮಗೆ ನಮ್ಮ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಿಮ್ಮ ನೆನಪಿದೆ. ಯಾಕೆಂದರೆ ಅಧಿಕಾರದಲ್ಲಿ
ನಿಮ್ಮನ್ನು ಕೂರಿಸಲು ನಿಮಗಿಂತ ಹೆಚ್ಚು ನಾನು, ನನ್ನಂಥಾ ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ರಾತ್ರಿ ಹಗಲು ಬ್ಯಾನರ್, ಬಂಟಿಂಗ್ಸ್ ಕಟ್ಟಿದ್ದೇವೆ. ನಿಮ್ಮ ಜೊತೆ
ಕ್ಯಾಂಪೇನ್ ಮಾಡಿದ್ದೇವೆ. ನಿಮಗೆ ಓಟು ಹಾಕಿ ಓಟು ಹಾಕಿ ಎಂದು ಮನೆಮನೆಗೆ ಪ್ರಚಾರಕ್ಕೆ ತೆರಳಿದ್ದೇವೆ. ಓಟು ಹಾಕಲು ಜನರನ್ನು ಹುರಿದುಂಬಿಸಿ, ಅವರನ್ನು
ಮತಗಟ್ಟೆಗೆ ಕರೆದುಕೊಂಡು ಬಂದಿದ್ದೇವೆ. ಬಿಜೆಪಿ ಪಕ್ಷದಲ್ಲಿ ಯಾವ ಕಾರ್ಯಕರ್ತನೂ ಹಣಕ್ಕಾಗಿ ದುಡಿಯುವುದಿಲ್ಲ ಎಂದು ನಿಮಗೂ ಗೊತ್ತಿದೆ. ಆದರೂ ನಿಮಗೆ
ನನ್ನಂಥಾ ಕಾರ್ಯಕರ್ತರಿಗೆ ದ್ರೋಹ ಎಸಗಲು ಮನಸಾದರೂ ಹೇಗೆ ಬಂತು?
ಇಂದು ಬಿಜೆಪಿ ದೇಶದ ಅಧಿಕಾರ ನಡೆಸುತ್ತಿದೆ ಎಂದರೆ ಅದಕ್ಕೆ ನನ್ನಂತಹಾ ಕೋಟಿಗಟ್ಟಲೆ ಕಾರ್ಯಕರ್ತರ ಶ್ರಮವಿದೆ. ನಾವು ಊಟ, ತಿಂಡಿ, ನಿದ್ದೆಗೆಟ್ಟು ಬಿಜೆಪಿ
ಪರವಾಗಿ ಕೆಲಸ ಮಾಡಿದ್ದೇವೆ ಎಂಬ ನೆನಪು ನಿಮಗೆ ಅಷ್ಟು ಬೇಗನೆ ಹೋಗಬಾರದಿತ್ತು.
ಬಿಜೆಪಿ ಎಂಬುವುದು ಕಾರ್ಯಕರ್ತರ ಪಕ್ಷ ಎನ್ನುವುದು ನನಗೆ ಗೊತ್ತಿದೆ. ಬಿಜೆಪಿಯ ಕಾರ್ಯಕರ್ತರಾಗಿದ್ದುಕೊಂಡೇ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಇದೇ ಪಕ್ಷದಲ್ಲಿ ಇಂದು ಕಾರ್ಯಕರ್ತರಿಗೆ ಬೆಲೆಯೇ ಇಲ್ಲ. ನಾವು ಜೀವನ ಪೂರ್ತಿ ಕಾರ್ಯಕರ್ತರಾಗಿದ್ದುಕೊಂಡೇ ಸಾಯಬೇಕಾ? ನಮಗೂ ರಾಜಕೀಯ ಪ್ರವೇಶಿಸಿ ದೇಶ ಸೇವೆ ಮಾಡಬೇಕೆಂದು ಮನಸಿಲ್ವಾ…. ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವ ಸಿದ್ಧಾಂತಕ್ಕೆ ಬೆಲೆಯೇ ಇಲ್ಲವಾ? ಛೇ ನಿಮಗೆ ಅಧಿಕಾರದ ಅಮಲು ಬರಬಾರದಿತ್ತು. ನನ್ನಂಥಾ ಕಾರ್ಯಕರ್ತರನ್ನು ಚೆನ್ನಾಗಿ ಉಪಯೋಗಿಸಿ ಕೊನೆಗೆ ಸಿಪ್ಪೆ ತಿಂದು ಬೀಜ ಎಸೆದಂತೆ ಎಸೆಯಬಾರದಿತ್ತು. ನನಗೂ ನನ್ನ ದೇಶದ ಬಗ್ಗೆ ಸಾಕಷ್ಟು ಕನಸಿದೆ. ಈ ಕನಸಿಗೆ ನೀವು ತಣ್ಣೀರು ಎರಚಬಾರದಿತ್ತು. ಇಷ್ಟು ಬೇಗ ನಾನು ನಿಮಗೆ ಬೇಡವಾಗಿ ಹೋದೆನಲ್ಲಾ… ಖಂಡಿತಾ ನನಗೆ ಕಣ್ಣೀರು ಬರುತ್ತದೆ. ನಿಜ ನಾವು ನಿಮ್ಮ ಬಲಿಪಶುಗಳಾದೆವು.
ನಾನು ಯಾಕಾಗಿ ಇಷ್ಟು ಹತಾಶೆಯಿಂದ ಮಾತಾಡುತ್ತಿದ್ದೇನೆ ಎಂದು ಅನಿಸಬಹುದು. ಅದಕ್ಕೆ ಕಾರಣವೂ ಇದೆ. ಯಾಕೆಂದರೆ ನಿಮ್ಮಂತಹಾ ಪಕ್ಷದ ಮುಖಂಡರು ಒಂದು ಕಾಲದಲ್ಲಿ ನನ್ನದೇ ತರ ಕಾರ್ಯಕರ್ತರಂತೆ ತಿರುಗಾಡಿದ್ದಿರಿ. ಆದರೆ ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಕ್ಕೆ ಇಂದು ನೀವು ಎಂಎಲ್‍ಎ, ಎಂಪಿ, ಸಚಿವರಾಗಿದ್ದೀರಿ. ನನಗೂ ಎಂಪಿ, ಎಂಎಲ್‍ಎ ಆಗಬೇಕೆಂದು ಮನಸಿಲ್ಲವೇ?
ನನ್ನ ಮಾತನ್ನು ನೀವು ಗಮನದಲ್ಲಿಟ್ಟುಕೊಂಡು ಓದಿ. ಆಗ ನನ್ನ ನೋವು ನಿಮಗೆ ಖಂಡಿತಾ ಅರ್ಥವಾಗುತ್ತದೆ.
ನೀವು ಈ ಬಾರಿ ಕರ್ನಾಟಕದಲ್ಲಿ ಅಧಿಕಾರ ಪಡೆಯಲೇಬೇಕೆಂದು ಕೆಲವು ಕಾಂಗ್ರೆಸ್ ಮುಖಂಡರಿಗೆ ಗಾಳ ಹಾಕುತ್ತಿದ್ದೀರಿ ಎಂಬ ವರ್ತಮಾನ ನನಗೆ ಸಿಕ್ಕಿದೆ. ಕಾಂಗ್ರೆಸ್ ಮುಖಂಡರಾದ ಆರ್.ವಿ. ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಚಿತ್ರನಟಿ ರಮ್ಯ… ಹೀಗೆ ಹಲವಾರು ಮಂದಿಯನ್ನು ಸೆಳೆಯಲು ನೀವು ಕಸರತ್ತು ನಡೆಸುತ್ತಿದ್ದೀರಿ. ಅಲ್ಲದೆ ಕೆಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಬರಲು ಹಿಂಬಾಗಿಲ ರಾಜಕೀಯ ಮಾಡುತ್ತಿದ್ದಾರಂತೆ. ಒಂದಷ್ಟು ಮಂದಿ ಕಾಂಗ್ರೆಸಿಗರನ್ನು ಬಿಜೆಪಿಗೆ ಸೆಳೆದು ಅವರಿಗೆ ಟಿಕೆಟ್ ನೀಡಿ ಮತ್ತೆ ಕಾಂಗ್ರೆಸಿಗರನ್ನು ಅಧಿಕಾರದಲ್ಲಿ ಕುಳ್ಳಿರಿಸಲು ಇನ್ನಿಲ್ಲದ ಪ್ರಯತ್ನ ನಡೆಸುವ ಸುದ್ದಿಯೊಂದು ನನ್ನ ಕಿವಿಗೆ ಅಪ್ಪಳಿಸಿದ ಬಳಿಕ ನನ್ನ ಉತ್ಸಾಹವೇ ಇಳಿದುಹೋಗಿದೆ. ಕಾಂಗ್ರೆಸ್‍ನಲ್ಲಿದ್ದಾಗ ಹಿಂದೂ ವಿರೋಧಿಗಳಾಗಿದ್ದು ನನ್ನಂತಹಾ ಕಾರ್ಯಕರ್ತರನ್ನು ಜೈಲು, ಪೊಲೀಸ್ ಸ್ಟೇಷನ್ ಅಲೆದಾಡಿಸಿದ ಆ ಖದೀಮರಿಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟು, ಅವರ ಗೆಲುವಿಗೆ ನಾವು ಶ್ರಮಿಸಬೇಕಾ? ಖಂಡಿತಾ ಸಾಧ್ಯವಿಲ್ಲ… ನನ್ನಂಥಾ ಕಾರ್ಯಕರ್ತನ ನೋವು, ದುಃಖ, ದುಮ್ಮಾನ ನಿಮಗೆ ಗೊತ್ತಿದ್ದರೆ ನೀವು ಖಂಡಿತಾ ಈ ತಪ್ಪು ಮಾಡುತ್ತಿರಲಿಲ್ಲ.
ಬಿಜೆಪಿ ಸಿದ್ಧಾಂತವನ್ನು ಅಷ್ಟು ಬೇಗಾ ಮರೆತಿರಾ ಓ ನನ್ನ ಬಿಜಿಪಿ ಮುಖಂಡರೇ….?
ಬಿಜೆಪಿಯ ಸಿದ್ಧಾಂತವೇನು? ಆರೆಸ್ಸೆಸ್‍ನಲ್ಲಿರುವ ದೇಶಭಕ್ತ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದಾರೆ. ನಮಗೆ ದೇಶಭಕ್ತಿ, ಸಿದ್ಧಾಂತ ಚೆನ್ನಾಗಿ ಗೊತ್ತಿದೆ. ಪ್ರತಿದಿನ ಬೆಳಗ್ಗೆ ಎದ್ದು ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಎಂದು ಪ್ರಾರ್ಥಿಸುತ್ತೇವೆ. ದೇಶವನ್ನು ನಾನು ನಮ್ಮ ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಪೂಜಿಸುತ್ತೇವೆ. ದೇಶದ ಅಭಿವೃದ್ಧಿ ಹೇಗಾಗಬೇಕು, ಭವಿಷ್ಯದ ಭಾರತ ಹೇಗಿರಬೇಕು? ಹೀಗೆ ನರೇಂದ್ರ ಮೋದಿಯಲ್ಲಿರುವ ಚಿಂತನೆಗಳು ನನ್ನಂತಹಾ ಸಾಮಾನ್ಯ ಕಾರ್ಯಕರ್ತನಲ್ಲೂ ಇದೆ. ನಾವು ಕಾಂಗ್ರೆಸಿಗರಂತೆ ಹಣಕ್ಕಾಗಿ ಬರುವ ಕಾರ್ಯಕರ್ತರಲ್ಲ. ದೇಶದಲ್ಲಿ ಹಿಂದುತ್ವ ಅಧಿಕಾರ ಇರಬೇಕೆಂದು ನಾವು ಯಾವುದಕ್ಕೂ ಅಪೇಕ್ಷೆ ಪಡದೆ ಕೆಲಸ ಮಾಡುವವರು ನಾವು. ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ನಾವು ಎಷ್ಟು ದೇವರಿಗೆ ಹರಕೆ ಹೊರುತ್ತೇವೆ ಎಂದು ನಿಮಗೆ ಗೊತ್ತಾ?
ಕಾಂಗ್ರೆಸ್‍ನಲ್ಲಿದ್ದುಕೊಂಡು ದೇಶವಿರೋಧ ಹೇಳಿಕೆ ನೀಡಿ, ನಮ್ಮನ್ನು ಜೈಲಿಗೆ ತಳ್ಳಿದವರ ಪರವಾಗಿ ನಾವಿಂದು ಖಂಡಿತಾ ಪ್ರಚಾರ ನಡೆಸುವುದಿಲ್ಲ. ನೀವು ಏನು
ಮಾಡುತ್ತೀರೋ ನೀವೇ ಮಾಡಿಕೊಳ್ಳಿ.
ಆತ್ಮೀಯ ಬಿಜೆಪಿ ಮುಖಂಡರೇ…. ಊಟ ಮಾಡಿ ಎಸೆದ ಎಂಜಲು ಎಲೆಯಲ್ಲಿ ಮತ್ತೆ ಊಟ ಮಾಡುತ್ತೀರಾ? ಹೀಗೆಂದು ನಾನು ಮೊದಲೇ ಪ್ರಶ್ನಿಸಿದ್ದೆ. ಈ ಪ್ರಶ್ನೆ
ಯಾಕೆಂದು ಈಗ ವಿವರಿಸಿ ಹೇಳುತ್ತೇನೆ ಕೇಳಿ. ಕಾಂಗ್ರೆಸ್ ಮುಖಂಡರೆಂದರೆ ಊಟ ಮಾಡಿ ಎಸೆದ ಎಲೆಗಳ ತರ. ಯಾಕೆಂದರೆ ಜನರು ಅವರನ್ನು ಎಂದೋ ತಿರಸ್ಕರಿಸಿದ್ದಾರೆ. ಇಂಥದರಲ್ಲಿ ಊಟ ಮಾಡಿದ ಎಲೆಯನ್ನು ತೊಳೆದು ಮತ್ತೆ ಅದರಲ್ಲಿ ಊಟ ಬಡಿಸುವಂತೆ ಕಾಂಗ್ರೆಸಿಗರಿಗೆ ಬಿಜೆಪಿಯಿಂದ ಟಿಕೆಟ್ ಕೊಡ್ತೀರೆಂದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದರ್ಥವೇ?
ಯಾಕೆ ಬಿಜೆಪಿಯಲ್ಲಿ ಸ್ಪರ್ಧಿಸಲು ಜನರೇ ಇಲ್ಲವೇ? ನನ್ನಂಥಾ ಬಿಜೆಪಿಗಾಗಿ ದುಡಿದ ಕಾರ್ಯಕರ್ತನಿಗೆ ಟಿಕೆಟ್ ಕೊಡುವುದನ್ನು ಬಿಟ್ಟು ಕಾಂಗ್ರೆಸ್ ಮುಖಂಡರಿಗೆ ಯಾಕೆ ಟಿಕೆಟ್ ಕೊಡ್ತೀರಿ? ಒಂದಂತೂ ಸ್ಪಷ್ಟ ನೀವು ಏನು ಮಾಡ್ತೀರೋ ಬಿಡ್ತಿರೋ… ಈ ಸಲ ಖಂಡಿತವಾಗಿ ನಾವು ಚುನಾವಣೆಯ ಪ್ರಚಾರಕ್ಕೆ ಬರುವುದಿಲ್ಲ. ಯಾಕೆಂದರೆ ಕಾಂಗ್ರೆಸಿಗರು ನಮಗೆ ಯಾವ ರೀತಿ ದೌರ್ಜನ್ಯ ಎಸಗಿದ್ದರು ಎಂದು ನಿಮಗೆ ಮರೆತಿರಬಹುದು ಆದರೆ ನನಗೆ ಮರೆತಿಲ್ಲ. ಅದಕ್ಕಾಗಿ ಮತ್ತೊಮ್ಮೆ ನೆನಪಿಸುತ್ತೇನೆ…
ಬಿಜೆಪಿ ಕಾರ್ಯಕರ್ತರೆಂದರೆ ನಾವೆಲ್ಲಾ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ನಾನು ಗೋವನ್ನು ಮಾತೆ ಎಂದು ಪರಿಗಣಿಸುತ್ತೇವೆ. ಮತಾಂಧರು
ಗೋವನ್ನು ಸಾಗಿಸುವಾಗ ಅದನ್ನು ರಕ್ಷಿಸಿದ್ದೇವೆ. ನಮ್ಮ ಮೇಲೆ ಅನೇಕ ಕೇಸ್ ಬಿದ್ದಿದ್ದು ಇಂದಿಗೂ ಕೋರ್ಟ್ ಕಚೇರಿ ಎಂದು ಅಲೆದಾಡುತ್ತೇವೆ. ಸಾಕಷ್ಟು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದೇವೆ. ನಮ್ಮನ್ನು ಜೈಲು ಶಿಕ್ಷೆ ಮಾಡುವಂತೆ ಮಾಡಿದ್ದು ಯಾರು ಗೊತ್ತಾ….? ಇದೇ ಕಾಂಗ್ರೆಸಿಗರು… ಇವರಿಗಾಗಿ ನಾನು ಪ್ರಚಾರ ಮಾಡಬೇಕಾ?
ಜಿಲ್ಲೆಯಲ್ಲಿ ಅನೇಕ ಕೋಮುಗಲಭೆ ನಡೆದಿದೆ. ಅದರಲ್ಲಿ ಬಲಿಪಶುಗಳಾಗಿದ್ದು ನನ್ನಂಥಾ ಬಿಜೆಪಿ ಕಾರ್ಯಕರ್ತರು. ಪೊಲೀಸರು ನಿಮ್ಮಲ್ಲಿ ನಮಗೆ ಒಂದಷ್ಟು ಮಂದಿ
ಹುಡುಗರನ್ನು ಕೊಡಿ ಎಂದು ಕೇಳಿದಾಗ ನಾವೇ ಮುಂದಾಗಿ ಜೈಲಿಗೆ ಹೋಗಿ ಬಂದಿದ್ದೇವೆ. ಪಿಟಿಕೇಸ್ ಇರಬಹುದೆಂದು ಠಾಣೆಗೆ ಹೋದರೆ ಅಲ್ಲಿ ನಮಗೆ
ಕೊಲೆಯತ್ನದಂಥಾ ಕೇಸ್ ಬಿದ್ದಿತ್ತು. ನಮಗೆ ಇಷ್ಟು ದೊಡ್ಡ ಕೇಸ್ ಬೀಳಲು ಕಾರಣ ಇದೇ ಕಾಂಗ್ರೆಸಿಗರು. ಇವರ ಪರವಾಗಿ ನಾವು ಚುನಾವಣೆ ಪ್ರಚಾರ ಮಾಡಬೇಕಾ?
ಅಲ್ಪಸಂಖ್ಯಾತರಿಗೆ ಹಲವು ಭಾಗ್ಯಗಳನ್ನು ಕರುಣಿಸಿ, ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿಕೊಂಡು, ಹಿಂದೂ ವಿರೋಧಿಗಳಿಗೆ ನಾವು ಮತ್ತೆ ಪ್ರಚಾರ ಮಾಡಬೇಕಾ?
ಕಾಂಗ್ರೆಸಿಗರು ಭಾರತದ ವಿರೋಧಿ ಹೇಳಿಕೆ ನೀಡಿದಾಗ ಪ್ರತಿಭಟನೆ ನಡೆಸಿದ್ದೇವೆ. ಚಳುವಳಿ ಮಾಡಿದ್ದೇವೆ. ಪೊಲೀಸರ ಲಾಠಿ, ಬೂಟಿನಿಂದ ಪೆಟ್ಟು ತಿಂದಿದ್ದೇವೆ. ಈ ಕಾಂಗ್ರೆಸಿಗರು ಪೊಲೀಸರಲ್ಲಿ ನಮ್ಮ ಮೇಲೆ ಕೇಸ್ ಹಾಕಿಸುತ್ತಿದ್ದರು ಇಂಥವರಿಗಾಗಿ ನಾವು ಕ್ಯಾಂಪೈನ್ ಮಾಡ್ಬೇಕಾ….
ನೀವು ಅಧಿಕಾರದ ಆಸೆಗಾಗಿ ಸ್ವಾಭಿಮಾನ, ಆತ್ಮಾಭಿಮಾನವನ್ನು ಎಲ್ಲವನ್ನೂ ಬಿಟ್ಟು ಕಾಂಗ್ರೆಸಿಗರಿಗೆ ಟಿಕೆಟ್ ಕೊಡುತ್ತೀರಿ ಎಂದರೆ ನೀವು ಕಾರ್ಯಕರ್ತರಿಗೆ ಮಾಡುವ ಇದಕ್ಕಿಂತ ದೊಡ್ಡ ದ್ರೋಹ ಬೇರೊಂದಿಲ್ಲ.
ಆರ್.ವಿ. ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಚಿತ್ರನಟಿ ರಮ್ಯ. ಮುಂತಾದವರು ಬಿಜೆಪಿಗೆ ಬರುತ್ತಾರೆ ಅಥವಾ ನೀವೇ ಅವರನ್ನು ಬೆಜೆಪಿಗೆ ಸೆಳೆಯುತ್ತೀರೀ ಎಂಬ ಸುದ್ದಿ ಇದೆ. ಇವರೆಲ್ಲಾ ಕಾಂಗ್ರೆಸಿಗರಾಗಿದ್ದುಕೊಂಡು ನಮ್ಮನ್ನು ಯಾವ ರೀತಿ ತುಳಿದಿದ್ದಾರೆಂದು ಗೊತ್ತು. ಇವರೆಲ್ಲಾ ಅವಕಾಶವಾದಿ ರಾಜಕಾರಣಿಗಳು. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಲು ಹೇಸದವರು. ಮುಂದಿನ ಬಾರಿ ಅಧಿಕಾರಕ್ಕಾಗಿ ಮತ್ತೆ ಬಿಜೆಪಿಯನ್ನು ತೊರೆಯೋಲ್ಲ ಎಂದು ಏನು ಗ್ಯಾರಂಟಿ ಇದೆ?
ಇನ್ನು ಪ್ರಮೋದ್ ಮಧ್ವರಾಜ್ ಕಳೆದ ವರ್ಷದಿಂದ ಬಿಜೆಪಿ ಸೇರ್ತಾರೆಂದು ಸುದ್ದಿ ಇದೆ. ಈ ಸಲ ಅದು ಖಚಿತವಾಗಿದೆ. ಗೋ ವಿಚಾರದಲ್ಲಿ ಅವರು ಎಷ್ಟು ಮಂದಿಯನ್ನು ಜೈಲಿಂದ ಜೈಲಿಗೆ ಅಲೆದಾಡಿಸಿದ್ದಾರೆಂದು ಚೆನ್ನಾಗಿ ಗೊತ್ತಿದೆ. ಬಿಜೆಪಿಗರ ಮೇಲೆ ಯಾವ ರೀತಿ ಹೇಳಿಕೆ ನೀಡಿದ್ದಾರೆಂದೂ ಗೊತ್ತು. ಅಮಿತ್ ಶಾ, ಪ್ರಭಾಕರ ಭಟ್ಟ ಹೇಳುವ ಹಿಂದುತ್ವ ಬೇಕಿಲ್ಲ ಎನ್ನುವ, ಸಂಘಪರಿವಾರದ ವಿರುದ್ಧ ಮಾತಾಡುವ ಪ್ರಮೋದ್ ನಿಮಗೆ ಹೇಗೆ ಪಥ್ಯವಾದ ಬಿಜೆಪಿಗರೇ?
ಇವರ ತಾಯಿ ಮನೋರಮಾ ಮಧ್ವರಾಜ್ ಒಬ್ಬರು ಅವಕಾಶವಾದಿ ರಾಜಕಾರಣಿ ಎಂದು ಸಾವೀತಾಗಿದೆ. ಬಿಜೆಪಿಯ ವಿಪ್ ಉಲ್ಲಂಘಿಸಿ ಅಣು ಒಪ್ಪಂದದ ಕುರಿತು
ಕಾಂಗ್ರೆಸ್ ಬೆಂಬಲಿಸಿದ್ದ ಮನೋರಮಾ ಎಷ್ಟು ಬಾರಿ ಪಕ್ಷ ಬದಲಿಸಿದ್ದರು ಎಂದು ಗೊತ್ತೇ ಇದೆ.
ಇನ್ನು ಚಲನಚಿತ್ರ ನಟಿ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದಾಳೆ ಎಂದು ಎಲ್ಲರಿಗೂ ಗೊತ್ತೇ ಇದೆ. ಪಾಕಿಸ್ತಾನವನ್ನು ಸ್ವರ್ಗ ಎಂದು ಕರೆದು ಮಂಗಳೂರನ್ನು ನರಕ
ಎಂದ ರಮ್ಯಾ ಆ ಬಳಿಕ ಯಾವ ರೀತಿ ಹೇಳಿದ್ದಾಳೆಂದು ನಮಗೆ ಚೆನ್ನಾಗಿ ಗೊತ್ತಿದೆ. ಹೀಗೆ ಕಾಂಗ್ರೆಸ್‍ನಲ್ಲಿದ್ದುಕೊಂಡು, ನಮ್ಮನ್ನು ಪ್ರತೀಸಾರಿಯೂ ತುಳಿಯುತ್ತಿದ್ದ ಕಾಂಗ್ರೆಸಿಗರನ್ನು ಬಿಜೆಪಿಗೆ ಬರಮಾಡಿಕೊಳ್ಳುವುದೂ ಒಂದೇ, ಬಿಜೆಪಿ ಕಾರ್ಯಕರ್ತರಿಗೆ ಸಮಾಧಿ ಕಟ್ಟುವುದೂ ಒಂದೆ…
ಈಗಾಗಲೇ ಬಿಜೆಪಿ ಹಲವಾರು ಕಾರ್ಯಕರ್ತರುನ್ನು ಕಳೆದುಕೊಂಡಿದೆ. ಉದಾಹರಣೆಗೆ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತ ರುದ್ರೇಶ್ , ಕ್ಯಾತಮಾರನಹಳ್ಳಿ ರಾಜು, ಕುಟ್ಟಪ್ಪ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹೀಗೆ ಹಲವರನ್ನು ಕಳೆದುಕೊಂಡಿದ್ದೇವೆ. ಕೇರಳದಲ್ಲಿ ಏನು ನಡೆಯುತ್ತಿದೆ ಎಂದು ಚೆನ್ನಾಗಿ ಗೊತ್ತಿದೆ. ಇದಕ್ಕೆ ಪರೋಕ್ಷವಾಗಿ ಯಾರು ಕಾರಣ ಎಂದು ನಿಮಗೆ ವಿವರಿಸಿ ಹೇಳಬೇಕಾಗಿಲ್ಲ. ಆದರೆ ನೀವು ಅಂಥವರನ್ನೇ ಪಕ್ಷಕ್ಕೆ ಬರಮಾಡಿಕೊಂಡು ನನ್ನಂತಹಾ ನೂರಾರು ಕಾರ್ಯಕರ್ತರಿಗೆ ದ್ರೋಹ ಎಸಗಿದ್ದೀರಿ. ಇಂಥಾ ದ್ರೋಹವನ್ನು ನೀವು ಮರೆತಿರಬಹುದು ಆದರೆ ನಮಗೆ ಮರೆಯಲು ಖಂಡಿತಾ ಸಾಧ್ಯವೇ ಇಲ್ಲ.
ಬಿಜೆಪಿ ಮುಖಂಡರೇ ನಿಮಗೆ ತಾಖತ್ ಇದ್ದರೆ ಬಿಜೆಪಿಗೆ ಹಿಂಬಾಗಿಲಿನಿಂದ ಬರುವ ಯಾವುದೇ ಬೇರೆ ಪಕ್ಷದವರನ್ನು ಬಿಜೆಪಿಗೆ ಬರಮಾಡಿಕೊಳ್ಳಬೇಡಿ. ಬಿಜೆಪಿಯಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅವರನ್ನು ಗೆಲ್ಲಿಸಲು ಪ್ರಯತ್ನಿಸಿ. ಒಂದು ವೇಳೆ ಅದು ನಿಮ್ಮಿಂದ ಸಾಧ್ಯವಾಗದಿದ್ದರೆ ನನ್ನಂತಹಾ ನಿಷ್ಠಾವಂತ ಕಾರ್ಯಕರ್ತರನ್ನು ಮರೆತುಬಿಡಿ. ನನಗೆ ಬಿಜೆಪಿ ಇನ್ನೊಂದು ಕಾಂಗ್ರೆಸ್ ಪಕ್ಷ ಆಗುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ.
ಗುಡ್‍ಬೈ…!!
ಇತೀ ನಿಮ್ಮ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ
-ಸುಂದರ್