ಇತಿಹಾಸ

ಇಡೀ ಭಾರತ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಸಂಭ್ರಮಪಡುತ್ತಿದ್ದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾತ್ರ ಏನು ಮಾಡುತ್ತಿತ್ತು ಗೊತ್ತೇನು?

ಸ್ವಾಮೀ.. ಆರೆಸ್ಸೆಸ್ ಬಗ್ಗೆ ನೀವು ಈಗ ಏನು ಬೇಕಾದರೂ ಹೇಳಿ. ಆದರೆ ಸ್ವಾತಂತ್ರ್ಯಕ್ಕಾಗಿ ಇಡೀ ದೇಶವೇ ಹೋರಾಡುತ್ತಿರುವಾಗ ನಿಮ್ಮ ಸಂಘಟನೆ
ಮಾತ್ರ ಮನೆಯಲ್ಲಿ ಕೂತು ಎಂಜಾಯ್ ಮಾಡುತ್ತಿದ್ದೀರಲ್ಲವೇ??? ಇಂತಹ ಒಂದು ಪ್ರಶ್ನೆಯನ್ನು ಕೇಳಿದವ ಬೇರಾರು ಇಲ್ಲ , ಒಬ್ಬ ಕಟ್ಟಾ ಕಮ್ಮಿನಿಷ್ಠವಾದೀ.. ಆತನಿಗೆ ನನ್ನ ಉತ್ತರವನ್ನು ತಲುಪಿಸಿದ್ದೇನೆ. ಆದರೆ ಸಮಾಜದಲ್ಲಿ ಅಂತಹ ಅನೇಕ ಎಡಬಿಡಂಗಿ ಎಡಪಂಥೀಯರಿದ್ದಾರಲ್ಲಾ?? ಅವರಿಗಾಗಿ ಈ ಲೇಖನ..!! ಹಾ.. ಆರೆಸ್ಸೆಸ್ ಬಗ್ಗೆ ತಿಳಿಯಬಯಸುವ ಮತ್ತೆಲ್ಲಾ ದೇಶಭಕ್ತರಿಗೂ ಇದು ಸಮರ್ಪಣೆ!!

1925ರ ವಿಜಯದಶಮಿ.. ಅಂದು ರಾಷ್ಟ್ರ ಸೇವೆಗೆಂದೇ ಮೀಸಲಾಗಿಡಬಹುದಾದ ಸಂಘವೊಂದು ಡಾ. ಹೆಡಗೆವಾರ್ ನೇತೃತ್ವದಲ್ಲಿ ಸ್ಥಾಪನೆಯಾಯಿತು.
ನಿಮಗೆ ಗೊತ್ತಿರಲಿಯೆಂದು ಇನ್ನೂ ಒಂದು ವಿಚಾರ ಹೇಳುತ್ತೇನೆ‌. ಭಾರತೀಯ‌ ಕಮ್ಮ್ಯುನಿಷ್ಠ್ ಪಕ್ಷ ಕೂಡ ಸ್ಥಾಪನೆಯಾದುದು‌ ಅದೇ ಇಸವಿಯ ಆಸುಪಾಸಿಗೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಆ ಎರಡೂ ಸಂಘಟನೆಯ ಹಾದಿ ಮಾತ್ರ ವಿಭಿನ್ನ. ಆರೆಸ್ಸೆಸ್ ಸಂಘಟನೆ ಅಷ್ಟೂ‌ ಬೆಳೆಯದಿದ್ದೂ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆಸಿದ‌ ಎಲ್ಲಾ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿತ್ತು. ಈ ವಿಚಾರವನ್ನು ಓರ್ವ ಆರೆಸ್ಸೆಸ್ ಪರ ವಾದ‌ ಮಂಡಿಸುತ್ತಿರುವವರು ಹೇಳುವ ಮಾತಲ್ಲ.. ಸ್ವತ: ಕಟ್ಟಾ ಕಮ್ಮ್ಯುನಿಷ್ಠ ವಾದಿಯಾದ ಆರೆಸ್ಸೆಸ್ ವಿರೋಧಿಯಾಗಿದ್ದ ನಂಬೂದಿರಿಪಾದ್ ಹೇಳಿದ ವಿಚಾರ. ಆತ ತನ್ನ ಪುಸ್ತಕವಾದ ‘ಬಿಜೆಪಿ-ಆರೆಸ್ಸೆಸ್ : ಸರಿಯಾದ ಸಂದರ್ಭದಲ್ಲಿ ಸೇವೆ” ಯಲ್ಲಿ ಇದರ ಕುರಿತಾಗಿ ಉಲ್ಲೇಖಿಸುತ್ತಾನೆ.

“ಸಾವರ್ಕರ್ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತರಾಗಿದ್ದ ಮತ್ತು ಸ್ಫೂರ್ತಿ ಪಡೆದವರಲ್ಲಿ ಒಬ್ಬರು ಆರೆಸ್ಸೆಸ್ ಸ್ಥಾಪಕರಾದ ಡಾ. ಹೆಡ್ಜೆವಾರ್. ಗಾಂಧಿ
ನೇತೃತ್ವದ ಚಳವಳಿಯಲ್ಲಿ ಪಾಲ್ಗೊಂಡ ರಾಷ್ಟ್ರೀಯತಾವಾದಿ, ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸನ್ನು ಮುಂದುವರೆಸಿದರು ಮತ್ತು 1930 ರಲ್ಲಿ ಉಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಂಡರು.”(ಪುಟ : 8)

ನೆನಪಿರಲಿ. ಆ ಹೋರಾಟದಲ್ಲಿ ಸ್ವತ: ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದವರು ಡಾಕ್ಟರ್ ಜೀ. ಆ ಕಾಲದಲ್ಲಿ ಆರೆಸ್ಸೆಸ್ ಕೇವಲ ಬ್ರಿಟಿಷರ ವಿರೋಧವನ್ನು
ಎದುರಿಸಿದ್ದಲ್ಲ, ಕಮ್ಮಿನಿಷ್ಠರನ್ನೂ ಹಾಗೂ ಅನೇಕ ಸ್ವಾರ್ಥಿಗಳಿಂದಲೇ ತುಂಬಿದ್ದ ಮುಖವಾಡದ ಕಾಂಗ್ರೆಸ್ ನ ವಿರೋಧವನ್ನೂ ಕೂಡ. ಆದರೆ ಈ ಕಡೆ‌ ಕಮ್ಮಿನಿಷ್ಠ ಪಕ್ಷ‌ ಮಾತ್ರ ದೇಶದ ಪರ ಚಿಂತಿಸುವುದು, ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಬಿಡಿ, ಬದಲಾಗಿ ದೇಶವಿರೋಧಿ ಚಟುವಟಿಕೆಯಲ್ಲಿ ತಲ್ಲೀನವಾಗಿತ್ತು. ವಿಶ್ವಯುದ್ಧ 2 ರ ಸಂದರ್ಭದಲ್ಲಿ ಬ್ರಿಟಿಷರಿಗೆ ಪ್ರೋತ್ಸಾಹಿಸುತ್ತಾ ನೇತಾಜಿ ಸುಭಾಷರನ್ನು ಹಿಟ್ಲರ್ ನ ದಲ್ಲಾಳಿ ಎಂದೆಲ್ಲಾ ಪ್ರಚಾರ ಮಾಡುತ್ತಾ ಕಾಲ ಕಳೆಯುತ್ತಿತ್ತು. ಹಾ.. ಬಹುಶ: ಇದಕ್ಕೇ ಇರಬೇಕು ಅವರನ್ನು ದೇಶಕ್ಕೆ ಕಮ್ಮಿ ನಿಷ್ಠೆ ಯಿರುವ ಪಕ್ಷವೆಂದು ಕರೆಯುವುದು.. ವಾಸ್ತವವೇ ಇದು.!!

ಗಾಂಧಿ ನೇತೃತ್ವದಲ್ಲಾದ ಪ್ರತೀ ಹೋರಾಟದಲ್ಲಿ ತಮ್ಮನ್ನು ತಾವು ಸಮರ್ಪಿಸಿದ ಇದೇ ಸಂಘಟನೆ ಸ್ವಾತಂತ್ರ್ಯ ಲಭಿಸಿದ ತಕ್ಷಣ
ಸೆರೆಮನೆವಾಸಿಯಾಯಿತು. ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕಾಯಿತು. ಕಾರಣ ಗಾಂಧಿಯನ್ನು ಹತ್ಯೆ‌ ಮಾಡಿದವರು ಇದೇ ಆರೆಸ್ಸೆಸ್ ಎಂಬುದಾಗಿ ಅವರು ಚಿಂತಿಸಿದ‌ ಫಲ.. ತನ್ನ ಅಧಿಕಾರದ ಲಲಾಸೆಯಿಂದ ಇಡೀ ದೇಶವನ್ನು ಲೂಟಿ ಮಾಡಿದ್ದಷ್ಚೇ‌ ಅಲ್ಲ, ಬದಲಾಗಿ ಸ್ವಾತಂತ್ರ್ಯ‌ಹೋರಾಟಗಾರರನ್ನು ಅವಮಾನಿಸಿತ್ತು. ಸ್ವತ: ಸಾವರ್ಕರ್ ಮನೆಗೆ ಕಲ್ಲು ಬಿದ್ದಿತ್ತು!!! ಸಂಘ ನಿಷೇಧಕ್ಕೆ‌ ಒಳಗಾಯಿತು. ಹೋರಾಟಗಳು ಮತ್ತೆ ಪ್ರಾರಂಭವಾದವು.

ಸಂಘದ ಕಾರ್ಯಕರ್ತರನ್ನು ಸೆರೆಮನೆ ತಳ್ಳಿದ ಕಾಂಗ್ರೆಸ್ ಪಕ್ಷ, ಅಲ್ಲಿ ಪೋಲೀಸರಿಂದ ಸುಖಾಸುಮ್ಮನೆ ಲಾಠಿ ಚಾರ್ಜ್‌ಮಾಡಿಸಿತ್ತು. ಯಾವುದೇ
ತಪ್ಪುಗಳನ್ನು ಮಾಡಿರದ‌ ಅನೇಕರು ತಮ್ಮ ಜೀವನವೆಲ್ಲಾ ಅಂಗವಿಕಲತೆಯಿಂದಲೇ ಬದುಕುವ ಪರಿಸ್ಥಿತಿ ಎದುರಾಯಿತು. ಆದರೆ ಕೆಲವರಿದ್ದರು. ಯಾವ ಉದ್ದೇಶಕ್ಕಾಗಿ ತಾವು ಬದುಕಬೇಕೆಂದು ಶಾಖೆಯಲ್ಲಿ ಕಲಿಸಲಾಗಿತ್ತೋ, ಅಕ್ಷರಶ: ಆ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿದವರು. “ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್” ಧರ್ಮದ ಉಳಿವಿಗಾಗಿ ಹೋರಾಡುತ್ತೇನೆಂಬ ಸಂಕಲ್ಪ.

ಬಲಿದಾನಿಗಳಾದ‌ ಅದೆಷ್ಟು ವೀರರ ಕಥನ ಹೇಳಲಿ?!!!

ಕಾಸರಗೋಡಿನ ಕೃಷ್ಣ ರಾವ್ ಎಂಬ ಅಪ್ರತಿಮ ದೇಶಭಕ್ತ!!!

ಆ ಹೋರಾಟದಲ್ಲಿ ಭಾಗಿಯಾದ ಕೃಷ್ಣರಾವಿನ ಕಥನ ಬಹಳ ಪ್ರೇರಣಾಕಾರಿ. ಅವರು ಇಬ್ಬರು ಅಣ್ಣ-ತಮ್ಮಂದಿರು. ಇಬ್ಬರೂ ನಿಷ್ಠಾವಂತ ಕಾರ್ಯಕರ್ತರು. ಅಣ್ಣ
ರಾಜಮಾಧವ ರಾವ್ 1947ರಲ್ಲಿ ತೃತೀಯ ವರ್ಷದ ಶಿಕ್ಷಣ ಪೂರೈಸಿದ್ದರು. ತಮ್ಮ ಕೃಷ್ಣ ಪದವೀಧರ. ಉತ್ಸಾಹಿ ತರುಣ.

ಕಾಸರಗೋಡಿನ ಪ್ರಥಮ ದಿನ (ದಿ. 10-12) ಸಂಜೆಯ‌ತನಕ ಮುಂದಾಳುತನ ವಹಿಸಿದ್ದ ಕೃಷ್ಣರಾವ್ ಅಂದು ಏಟು ತಿಂದು ಬಂಧಿತರಾಗಿದ್ದರು ದಿ. 13ರಂದು
ನಿಶ್ಶರ್ತವಾಗಿ ಬಿಡುಗಡೆಯಾದರು. ಆದರೆ ಮನೆಗೆ ಸಹ ಹೋಗದೇ ಅಂದೇ ಅವರು ಎರಡನೇ ಬಾರಿಗೆ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಎರಡನೆಯ ಬಾರಿ ಬಂಧಿತರಾದ ಅವರಿಗೆ ಕೇವಲ ದಂಡ ವಿಧಿಸಿ ಪುನ: ಬಿಟ್ಟುಬಿಟ್ಟರು. ಆದರೆ ಅವರಲ್ಲಿ ಹರಿತಿದ್ದುದು ರಾಷ್ಟೀಯ ಚಿಂತನೆಯ ರಕ್ತ.. ಸುಮ್ಮನಿರಲು ಬಿಡುತ್ತದೆಯೇ?? ದಿ. 23ರಂದು ಅವರು ಹೊಸದುರ್ಗದ ತಂಡದಲ್ಲಿ ಸೇರಿ ಮೂರನೆಯ ಬಾರಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಈ ಬಾರಿ ಪೋಲೀಸ್ ಠಾಣೆಯಲ್ಲಿ ಅವರನ್ನು ಕ್ರೂರವಾಗಿ ಥಳಿಸಲಾಯಿತು. ಈ ಪ್ರಸಂಗದಲ್ಲಿ ಒಂದು ಲಾಠಿಯೇ ಮುರಿದುಹೋಯಿತು ಎನ್ನಲಾಗಿದೆ. ಶರೀರದಲ್ಲಾಗುತ್ತಿದ್ದ ಯಾತನೆಯಿಂದಾಗಿ ಲಾಕಪ್ ನಲ್ಲಿದ್ದಾಗಲೇ ಮರುದಿನವೇ ಅವರ ಮೈ ಬಿಸಿಯೇರಿತು. ಆದರೆ ಒಂದೆರಡು ದಿನಗಳಲ್ಲಿ ಚೇತರಿಕೆಯಾಯಿತು. ಈ ಸ್ಥಿತಿಯಲ್ಲಿ‌ ಬಿಡುಗಡೆಯಾಗಿ ಹೊರಹೋಗಲು ಅವರು ತೀವ್ರವಾಗಿ ಪ್ರತಿಭಟಿಸಿದರೂ ಪೋಲೀಸರು ಅವರನ್ನು ಪುನ: ದಂಡ ವಿಧಿಸಿ ಬಿಟ್ಟುಬಿಟ್ಟರು. ಕೃಷ್ಣರಾವ್ ಮಂಗಳೂರಿಗೆ ಬಂದು ನಾಲ್ಕನೆಯ ಬಾರಿ ಸತ್ಯಾಗ್ರಹದಲ್ಲಿ ಭಾಗವಹಿಸುವ ಚಿಂತನೆಯಲ್ಲಿದ್ದರು. ಆದರೆ ಅಷ್ಟರಲ್ಲಿ ಸತ್ಯಾಗ್ರಹವೇ ಸ್ಥಗಿತವಾಗಿತ್ತು. ಅವರಿಗಿದ್ದ ದು:ಖವೆಂದರೆ ತನ್ನೆಲ್ಲಾ ಸಹಕಾರಿಗಳು ಸೆರೆಮನೆಯಲ್ಲಿರಬೇಕಾದರೆ ತಾನು ಮಾತ್ರ ಹೊರಗೆ ಉಳಿಯುವಂತಾಯಿತಲ್ಲಾ ಎಂಬುದೇ. ಈ ಚಡಬಡಿಕೆಯ ಕಾರಣದಿಂದ ಮಂಗಳೂರಿನಿಂದ ಕಣ್ಣಾನೂರು ಸೆರೆಮನೆಗೆ ರೈಲಿನಲ್ಲಿ ಕರೆದೊಯ್ಯಲಾಗುತ್ತಿದ್ದ ಪ್ರತೀ ತಂಡವನ್ನು ಕಾಸರಗೋಡಿನ ರೈಲ್ವೇ ನಿಲ್ದಾಣದಲ್ಲಿ ಕಾಣಲು ಬಂದು, ಅದರಲ್ಲಿದ್ದವರಿಗೆ ತಿಂಡಿ ಪಾನೀಯ ಒದಗಿಸುವುದರಲ್ಲಿ ಸಂತಸ ಕಾಣುತ್ತಿದ್ದರು.

ಆದರೆ ಅವರ ಸ್ವಂತ ಆರೋಗ್ಯ ಕ್ಷೀಣಿಸ ಪ್ರಾರಂಭವಾಗಿತ್ತು. ಶರೀರದಲ್ಲಿ ಅಪಾರ ನೋವು ಅನುಭವಿಸುತ್ತಿದ್ದ ಅವರು ಕೆಲವೇ ದಿನಗಳ ಕಾಯಿಲೆಯಲ್ಲಿ
ನರಳಿ ಮಾರ್ಚ್ 24 ರಂದು ಸ್ವಗೃಹದಲ್ಲಿಯೇ ಪ್ರಾಣತ್ಯಾಗ ಮಾಡಿದರು..

ಇಂತಹ ಅದೆಷ್ಚು ಬಲಿದಾನಗಳು ಈ ರಾಷ್ಟ್ರದ ಅಂತ:ಸತ್ವದ ರಕ್ಷಣೆಗೋಸ್ಕರ ಆಗಿವೆಯೋ ಆ ದೇವನೇ ಬಲ್ಲ. ಪಂಜಾಬಿನ ಗೋವರ್ಧನ, ಕರುನಾಡಿನ
ಕೃಷ್ಣಭಟ್, ವಿದರ್ಭದ ಬಾಲ ಚೌಧರಿ, ಉತ್ತರಪ್ರದೇಶದ ರಾಮದುಲಾರೆ ಪಾಂಡೆ.. ಪಟ್ಟಿ ಹೀಗೆ ಸಾಗುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಅರೆಬಿರಿದ ಅನಾಘ್ರಾಣಿತ
ಜೀವನಪುಷ್ಪಗಳು ತಾಯಿ ಭಾರತಿಯ ಪೂಜೆಗೆ ತಮ್ಮನ್ನು ಸಮರ್ಪಿಸಿ ಸಂಘದ ಚರಿತ್ರೆಯಲ್ಲಿ ರಕ್ತಾಂಕಿತವಾಗಿಸಿದ್ದವು..!!

ಈಗ ನೀವೇ ಯೋಚಿಸಿ.‌ ಒಂದು ಕಡೆ ಭಾರತೀಯರೆಲ್ಲರೂ ಅತಿಯಾದ ಸಂಭ್ರಮದಲ್ಲಿದ್ದರು, ಮತ್ತೊಂದು ಕಡೆ‌ ತಮ್ಮನ್ನು ತಾವು ರಕ್ಷಿಸುವುದಕ್ಕೋಸ್ಕರ
ಹೋರಾಟಗಳು ಪ್ರಾರಂಭವಾಗಿದ್ದವು..ಹಾ.. ಅವರೂ ಭಾರತೀಯರೇ ಆಗಿದ್ದರು!! ಎಂತಹ ವಿಡಂಬನೆಯಲ್ಲವೇ ಇದು..ಯಾರದ್ದೋ ರಾಜಕೀಯ ಪಿತೂರಿಗೆ, ಯಾರದ್ದೋ ಸ್ವಾರ್ಥಕ್ಕೆ ಬಲಿಯಾದುದು ಮಾತ್ರ ರಾಷ್ಟ್ರಭಕ್ತರ ಮಹಾಸಮೂಹವೆಂಬುದು ಮಾತ್ರ ಸತ್ಯ.. ಮಹಾತ್ಮನ ಹಾದಿಯಲ್ಲೇ ನಡೆದು ಬಂದ ಆರೆಸ್ಸೆಸ್ ಅಂದು ಅದೇ ಮಹಾತ್ಮನ ಹೆಸರಿನಿಂದ ಫನಘೋರ ಶಿಕ್ಷೆಯನ್ನು ಅನುಭವಿಸಿತ್ತು. ಆದರೆ ಇವತ್ತು ಅದಾವುದನ್ನೂ ಪರಿಗಣಿಸದೇ ಮುನ್ನಡೆಯುತ್ತಲೇ ಇದ್ದು ವಿಶ್ವಕ್ಕೆ ಆಧಾರವಾಗಿ, ಸಂಸ್ಕಾರದ ಕೇಂದ್ರವಾಗಿ ಬೆಳೆದು ನಿಂತಿದೆ.

ಅಂದು ವಿವೇಕಾನಂದರು ಹೇಳಿದ್ದರಲ್ಲವೇ.. ನಿಜ.. ಸ್ವಾತಂತ್ರ್ಯ ತಂದುಕೊಡಬಲ್ಲ ಶಕ್ತಿಯನ್ನು ನನ್ನ ಯುವಕರು ಹೊಂದಿದ್ದಾರೆ. ಆದರೆ ತದನಂತರ ಆ
ಸ್ವಾತಂತ್ರ್ಯವನ್ನು ಉಳಿಸಬಲ್ಲವರಾರು?? ಈ ಪ್ರಶ್ನೆಗೆ ಉತ್ತರ ಯಾವುದು ಹಾಗಾದರೆ?? ಇದೇ ಆರೆಸ್ಸೆಸ್. ಅತಿಶಯೋಕ್ತಿಯ ಮಾತಲ್ಲ ಇದು. ವಾಸ್ತವ ಸಂಗತಿ.

ಯಾರದ್ದೋ ಸ್ವಾರ್ಥಕ್ಕೆ ಬಲಿಯಾದ ಸ್ವಯಂ ಸೇವಕರ ಕುರಿತಾಗಿ ಅರಿವಿದೆಯಾ ನಮಗೆ?? ದೇಶವಿಡೀ ಸ್ವತಂತ್ರ ಆದ ಖುಷಿಯಲ್ಲಿದ್ದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆರೆಸ್ಸೆಸ್ ಮಾತ್ರ ಸೆರೆಮನೆಯಲ್ಲಿತ್ತು!!!

– ವಸಿಷ್ಠ

Tags

Related Articles

Close