ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ನಂದಿಬೆಟ್ಟದ ಬಗ್ಗೆ ಎಲ್ಲರೂ ಕೇಳಿರಬಹುದು. ಆದರೆ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗ ನಂದೀಶ್ವರ
ದೇವಸ್ಥಾನದ ಬಗ್ಗೆ ಯಾರೂ ಕೇಳಿರಲೂ ಸಾಧ್ಯವೇ ಇಲ್ಲ!!. ಈ ಭೋಗ ನಂದೀಶ್ವರ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾದಂತಹ
ದೇವಾಲಯವಾಗಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ಈ ಭೋಗ ನಂದೀಶ್ವರ ದೇವಸ್ಥಾನ. ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿರುವ ಈ ದೇವಸ್ಥಾನ, ಭಾರತದ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಸಂರಕ್ಷಿಸಲಾಗಿದೆ. ನಂದಿಬೆಟ್ಟವು ಬಹಳ ಜನಪ್ರಿಯ ಪ್ರದೇಶವಾಗಿದ್ದರೂ ಕೂಡ ಈ ಭೋಗ ನಂದೀಶ್ವರ ದೇವಾಲಯದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ!!
ಕರ್ನಾಟಕದಲ್ಲಿರುವ 1000 ವರ್ಷಗಳ ಹಳೆಯ ಶಿವ ದೇವಾಲಯದ ಇತಿಹಾಸ ಮತ್ತು ವಾಸ್ತುಶಿಲ್ಪ!
ಭೋಗ ನಂದೀಶ್ವರ ದೇವಾಲಯದ ಇತಿಹಾಸ!
ಈ ಸುಂದರ ಪುರಾತನವಾದ ದೇವಾಲಯವು ಸುಮಾರು 1000 ವರ್ಷಗಳ ಇತಿಹಾಸವನ್ನು ಹೊಂದಿದೆ ಮಾತ್ರವಲ್ಲದೇ, 9ನೇ ಶತಮಾನಕ್ಕಿಂತಲೇ ಮೊದಲು ಈ ದೇವಾಲಯದ ರಚನೆಯಾಗಿದೆ ಎಂದು ಹೇಳಲಾಗುತ್ತಿದೆ!!!! ನಂದಿ ಬೆಟ್ಟದ ಪ್ರದೇಶವನ್ನು ವಿಭಿನ್ನ ರಾಜವಂಶಗಳ ರಾಜರುಗಳು ಆಳಿದ ಚಿತ್ರಣವನ್ನು ನಾವಿಲ್ಲಿ
ನೋಡಬಹುದಾಗಿದೆ. ಆದರೆ ದೇವಾಲಯದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪಗಳು ರಾರಾಜಿಸುತ್ತಿರುವುದರಿಂದ ಪ್ರೇಕ್ಷಕರ ತನುಮನವನ್ನು ತಣಿಸುವ ದೇವಾಲಯ ಎಂದು ಬಿಂಬಿತವಾಗಿದೆ.
ಮೂಲತಃ ಈ ದೇವಾಲಯವನ್ನು ಬಾನ ಸಾಮ್ರಾಜ್ಯದ ರಾಣಿ ರತ್ನಾವತಿ ಇದನ್ನು ಮೊದಲು ಕಟ್ಟಿದರು ಎಂದು ಹೇಳಲಾಗುತ್ತದೆ. ಬೋಗನಂದೀಶ್ವರ ದೇವಾಲಯವು ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಇದಕ್ಕೆ ಹೂಂದಿಕೊಂಡಂತೆ ಶ್ರೀ ಅರುಣಾಚಲೇಶ್ವರ ದೇವಾಲಯವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯಗಳಲ್ಲಿ ಗಂಗ, ಚೋಳರು, ಹೊಯ್ಸಳರು, ಪಲ್ಲವರು, ವಿಜಯನಗರದ ರಾಜರುಗ¼ಳು ಹೀಗೆ ಹಲವು ಸಾಮ್ರಾಜ್ಯದವರ ವಾಸ್ತುಶೈಲಿಯನ್ನು ಇಲ್ಲಿ ಕಾಣಬಹುದು. ಅಂದರೆ ಬಾನ ಸಾಮ್ರಾಜ್ಯದಲ್ಲಿ ಮೊದಲು ದೇವಾಸ್ಥಾನವನ್ನು ಕಟ್ಟಿದ್ದು ನಂತರ ಚೋಳರ ರಾಜ 11ನೇ ಶತಮಾನದಲ್ಲಿ ದೇವಸ್ಥಾನಕ್ಕೆ ಛಾವಣಿಯನ್ನು ಸೇರಿಸಿದರು. ನಂತರ ಹೊಯ್ಸಳರ ರಾಜವಂಶವು ದೇವಾಲಯದ ರಚನೆಯನ್ನು ಮಾಡಿದರೆ, ವಿಜಯನಗರದ ರಾಜರು ದೇವಾಲಯಕ್ಕೆ ಹೊರಗೋಡೆಯ ನಿರ್ಮಾಣ ಮತ್ತು ಕಟ್ಟಡಗಳನ್ನು 13ನೇ ಶತಮಾನದಲ್ಲಿ ಕಟ್ಟಿದರು ಎಂದು ಇತಿಹಾಸಗಳು ಹೇಳುತ್ತವೆ.
ಆದರೆ ಭಾರತದ ಪುರಾತತ್ವ ಶಾಸ್ತ್ರದ ಸಮೀಕ್ಷೆಯ ಪ್ರಕಾರ , ಸಿ.806ರ ನೋಲಂಬ ರಾಜವಂಶದ ದೊರೆ ನೋಲಂಬಾದಿರಾಜ ಮತ್ತು ರಾಷ್ಟ್ರಕೂಟ ಚಕ್ರವರ್ತಿ 3ನೇ ಗೋವಿಂದ ತದನಂತರದಲ್ಲಿ ಬಾನಾ ರಾಜರುಗಳಾದ ಜಯಾತೇಜ ಮತ್ತು ದತ್ತಿಯ ಅವರು ಸಿ.810ರಲ್ಲಿ ಆರಂಭಿಕ ಶಾಸನಗಳಲ್ಲಿ ಈ ದೇವಾಲಯದ ಇತಿಹಾಸವನ್ನು ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಭೋಗನಂದಿಶ್ವರ ದೇವಾಸ್ಥಾನವು ಬಹಳ ಹಳೆಯ ದೇವಾಲಯವಾಗಿದ್ದು, ಇದು ಮೂರು ದೇವಾಲಯವನ್ನು ಹೊಂದಿದೆ. ಭೋಗನಂದೇಶ್ವರ ದೇವಾಲಯವನ್ನು ಸೇರಿ ಅರುಣಾಚಲೇಶ್ವರ ದೇವಾಲಯ ಹಾಗೂ ಉಮಾಮಹೇಶ್ವರ ದೇವಾಲಯ. ಅರುಣಾಚಲೇಶ್ವರ ದೇವಾಲಯವು ಶಿವನ ಬಾಲ್ಯವನ್ನು ಪ್ರತಿನಿಧಿಸಿದರೆ, ಭೋಗ ನಂದೀಶ್ವರ ದೇವಾಲಯವು ಯೌವನವನ್ನು ಮತ್ತು ಯೋಗ ನಂದೀಶ್ವರ ದೇವಾಲಯವು ಬೆಟ್ಟದ ತಪ್ಪಲಿನಲ್ಲಿದ್ದು ಅಂತಿಮ ನಿಲುವನ್ನು ಪ್ರತಿನಿಧಿಸುತ್ತದೆ.
ಅರುಣಾಚಲೇಶ್ವರ ದೇವಾಲಯ: ಇದನ್ನು ಗಂಗರು ಕಟ್ಟಿದ ದೇವಾಲಯವಾಗಿದ್ದು, ಇಲ್ಲಿ ದೇವ ಗಣೇಶನ ವಿಶಿಷ್ಟ ರೂಪವಾದ ಸಿಂಹ ಗಣಪತಿ ಅಥವ ಉಗ್ರ ಗಣಪತಿಯ ವಿಗ್ರಹವಿದೆ. ಅದಲ್ಲದೇ, ದೇವಾಲಯದ ಮುಂಭಾಗದಲ್ಲಿ ನಂದಿಯ ವಿಗ್ರಹವಿದು, ಇದನ್ನು ಗ್ರಾನೈಟ್‍ನಿಂದ ಮಾಡಲಾಗಿದೆ.
ಉಮಾಮಹೇಶ್ವರ ದೇವಾಲಯ: ಹೊಯ್ಸಳರು ಉಮಾಮಹೇಶ್ವರ ದೇವಾಲಯವನ್ನು ನಿರ್ಮಿಸಿದ್ದು, ಇದು ಉಮಾ ಮತ್ತು ಮಹೇಶ್ವರರ ಪವಿತ್ರ ಸ್ಥಳವಾಗಿದೆ. ಇಲ್ಲಿರುವ ಕಲ್ಯಾಣ ಮಂಟಪದ ಸುತ್ತಲೂ ನಾಲ್ಕು ಸ್ತಂಭಗಳಿವೆ, ಈ ನಾಲ್ಕು ಸ್ತಂಭಗಳಲ್ಲಿ ದೈವಿಕ ದಂಪತಿಗಳು ಅಂದರೆ ಶಿವ ಮತ್ತು ಪಾರ್ವತಿ, ಬ್ರಹ್ಮ ಮತ್ತು ಸರಸ್ವತಿ, ವಿಷ್ಣು ಮತ್ತು ಲಕ್ಷ್ಮೀ, ಅಗ್ನಿದೇವ ಮತ್ತು ಸ್ವಾಹಾದೇವಿಯರನ್ನು ಚಿತ್ರಿಸಲಾಗಿದೆ.
ಭೋಗ ನಂದೀಶ್ವರ ದೇವಾಲಯ : ಇದು ಚೋಳರಿಂದ ನಿರ್ಮಿಸಲ್ಪಟ್ಟಿದ್ದು, ಚೋಳರ ದೊರೆ ರಾಜೇಂದ್ರ ಚೋಳನ ಚಿತ್ರವನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ
ಸುಂದರವಾದ ಕಲಾಕೃತಿಗಳನ್ನು ಚೋಳರು, ಕಂಬಗಳ ಮೇಲೆ ಕೆತ್ತನೆ ಮಾಡಿರುವುದನ್ನು ಕಾಣಬಹುದಾಗಿದೆ.
ಅಲ್ಲದೇ ಇದರೊಂದಿಗೆ ವಿಜಯನಗರ ರಾಜರುಗಳು ನಿರ್ಮಿಸಿರುವ ಕಲ್ಯಾಣ ಮಂಟಪ ಮತ್ತು ತುಲಾಭಾರ ಮಂಟಪಗಳಿವೆ.
ಭೋಗ ನಂದೀಶ್ವರ ದೇವಾಲಯಕ್ಕೆ ಹೋಗುವುದು ಹೇಗೆ?
ಇದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು, ನೀವು ಬೆಂಗಳೂರಿನಿಂದ ಪ್ರಯಾಣಿಸುವುದಾದರೆ 60 ಕೀ. ಮೀ ದೂರದಲ್ಲಿದೆ. ಭೋಗ ನಂದೀಶ್ವರ ದೇವಾಲಯಕ್ಕಿಂತ ಮೊದಲು ಕಾಣ ಸಿಗುವುದೇ ನಂದಿ ಬೆಟ್ಟ. ನಂದಿಬೆಟ್ಟದಿಂದ ಈ ದೇವಸ್ಥಾನಕ್ಕೆ ಆಟೋರಿಕ್ಷಾದ ಮೂಲಕ ಹೋದಾಗ ಈ ಭವ್ಯದೇವಾಲಯವನ್ನು ಕಣ್ಪುಂಬಿಕೊಳ್ಳಬಹುದಾಗಿದೆ. ಈ ದೇವಸ್ಥಾನ ಬಹಳ ಪ್ರಾಚೀನ ಹಾಗೂ ಶಿವರಾತ್ರಿಯ ಕಾಲದಲ್ಲಿ ಇಲ್ಲಿನ ಸಂಭ್ರಮವನ್ನು ನೋಡಿ ಆನಂದಿಸಬಹುದು.
– ಅಲೋಖಾ
source: