ಪ್ರಚಲಿತ

ಇವಿಎಂನಲ್ಲಿ ಮೋಸ ಇದ್ದರೆ ಪತ್ತೆಹಚ್ಚಿರಿ ಎಂದು ಬಹಿರಂಗ ಸವಾಲು ಹಾಕಿದರೂ, ಪತ್ತೆಹಚ್ಚಲು ಯಾರೂ ಮುಂದೆ ಬಂದಿಲ್ಲ!! ಯಾಕೆ ಗೊತ್ತೇ?

ಚುನಾವಣೆ ಗೆಲ್ಲಲಾಗದವರೆಲ್ಲಾ ಇಂದು ಇವಿಎಂ ಯಂತ್ರದಲ್ಲಿ ಮೋಸವಿದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ!!

ಕುಣಿಯಲು ಬಾರದವ ಅಂಗಳ ಡೊಂಕೆಂದನಂತೆ. ಹಂಗಾಗಿದೆ ಪರಿಸ್ಥಿತಿ. ಯಾಕೆಂದರೆ ಚುನಾವಣೆ ಗೆಲ್ಲಲಾಗದವರೆಲ್ಲಾ ಇಂದು ಇವಿಎಂ ಯಂತ್ರದಲ್ಲಿ ಮೋಸವಿದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಈ ರೀತಿ ಬೊಬ್ಬಿಡುವವರಿಗೆ ಖಂಡಿತಾ ನಾಚಿಗೆಯಾಗಬೇಕು. ಯಾಕೆ ಗೊತ್ತೇ?! ಇವಿಎಂನಲ್ಲಿ ಮೋಸ ಇದ್ದರೆ ಪತ್ತೆ ಹಚ್ಚಿ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗ ಸವಾಲು ಹಾಕಿದ್ದರೂ ಇದನ್ನು ಪತ್ತೆಹಚ್ಚಲು ಯಾರೊಬ್ಬರೂ ಮುಂದೆ ಬಂದಿಲ್ಲ.

ನಮ್ಮ ದೇಶದಲ್ಲಿ ಇಡೀ ವಿಶ್ವಕ್ಕೇ ಸಾಫ್ಟ್‍ವೇರ್ ಡಿಸೈನ್ ಮಾಡಿಕೊಡುವ ಎಂಥೆಂಥದ್ದೋ ಸಾಫ್ಟ್‍ವೇರ್ ತಜ್ಞರಿದ್ದಾರೆ, ಎಥಿಕಲ್ ಹ್ಯಾಕರ್ಸ್ ಇದ್ದಾರೆ.
ಸಾಫ್ಟ್‍ವೇರನ್ನೇ ಸರ್ವನಾಶ ಮಾಡಿ, ಇಡೀ ವಿಶ್ವಕ್ಕೇ ಛಾಲೆಂಜ್ ಮಾಡುವವರು ನಮ್ಮಲ್ಲಿದ್ದಾರೆ. ಒಂದು ದೇಶದ ಸಾಫ್ಟ್‍ವೇರ್‍ಗೆ ಕನ್ನ ಹಾಕಿ ಅದನ್ನು ಲಗಾಡಿ ತೆಗೆಯುವವರಿದ್ದಾರೆ. ಒಮ್ಮೆ ಪಾಕಿಸ್ತಾನ ರಕ್ಷಣಾ ವ್ಯವಸ್ಥೆಯ ಸಾಫ್ಟ್‍ವೇರನ್ನೇ ಬಂದ್ ಮಾಡಿ ಬುದ್ಧಿ ಕಲಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಇವಿಎಂ ಮಿಷೀನಲ್ಲಿ ದೋಷ ಪತ್ತೆ ಹಚ್ಚಲು ಯಾರೊಬ್ಬರೂ ಯಾಕೆ ಮುಂದೆ ಬಂದಿಲ್ಲ? ಯಾರೆಲ್ಲಾ ಇದರಲ್ಲಿ ಮೋಸ ಇದೆ ಎಂದು ಅಂದುಕೊಂಡಿದ್ದರೋ ಅವರಿಗೆಲ್ಲಾ ಖಂಡಿತಾ ನಾಚಿಕೆಯಾಗಬೇಕು. ಯಾಕೆಂದರೆ ಜನರೆಲ್ಲಾ ಇವರನ್ನು ತಿರಸ್ಕರಿಸಿದರೂ ಇವಿಎಂನಲ್ಲಿ ದೋಷವಿದೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ!

ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಹೀಗೆ ಹಲವಾರು ಪಕ್ಷಗಳು ಠೇವಣಿ ಕಳೆದುಕೊಳ್ಳುವಷ್ಟು ಸೋತುಬಿಟ್ಟವು. ಆದರೆ ಇದನ್ನೆಲ್ಲಾ ಒಪ್ಪಿಕೊಳ್ಳದ ಅವರು ಮಾತ್ರ ಇವಿಎಂ ನಲ್ಲಿ ದೋಷ ಅಂದುಬಿಟ್ಟರು. ಯಾವ ಬಟನ್ ಒತ್ತಿದರೂ ಬಿಜೆಪಿಗೇ ಮತ ಹೋಗುತ್ತಿತ್ತು ಎಂದುಬಿಟ್ಟರು. ಈಗ ಯಾರೆಲ್ಲಾ ಇವಿಎಂನಲ್ಲಿ ದೋಷ ಇದೆ ಎಂದು ಹೇಳುತ್ತಾರೋ ಈ ಪದ್ಧತಿಯನ್ನು ಜಾರಿಗೆ ತಂದವರ್ಯಾರು ಎಂದು ಅವರಿಗೆಲ್ಲಾ ಗೊತ್ತಿಲ್ಲ. ಯಾಕೆಂದರೆ ಈ ಪದ್ಧತಿಯನ್ನು ಕಾಂಗ್ರೆಸಿಗರೇ ಜಾರಿಗೆ ತಂದಿದ್ದಾರೆ. ಇದೀಗ ಅದರಲ್ಲಿಯೇ ದೋಷವಿದೆ ಎನ್ನುವವರೆಲ್ಲಾ ತನ್ನದೇ ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಆಪ್ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂತಾದವರೆಲ್ಲಾ ಮತಯಂತ್ರದಲ್ಲಿನ ದೋಷವೇ ಬಿಜೆಪಿಯ ಗೆಲುವಿಗೆ ಕಾರಣ ಎಂದು ಆರೋಪಿಸುತ್ತಾರೆ. ಆದರೆ ಕರ್ನಾಟಕದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಾಗ ಎಲ್ಲರ ಬಾಯಿಗೆ ಬೀಗ ಬಿದ್ದಿತ್ತು. ಆದರೆ ಇದೀಗ ಕಾಂಗ್ರೆಸ್ ಪಕ್ಷ ಮತ್ತೆ ಮಕಾಡೆ ಮಲಗಿದೆ. ಅದಕ್ಕಾಗಿ ಮತ್ತೆ ಪುಕಾರು ಹಬ್ಬಿಸುತ್ತಿದ್ದಾರೆ.

ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ದಲ್ಲಿನ ದೋಷವೇ ಬಿಜೆಪಿಯ ಗೆಲುವಿಗೆ ಕಾರಣವಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ. ಅಷ್ಟಕ್ಕೂ ಇವಿಎಂನಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳಿಗೆ ಹಾಕಿದ ಮತಗಳು ಮತಗಳು ಸಹ ಬಿಜೆಪಿ ಪಾಲಾಗಿವೆ. ಇದರಿಂದಾಗಿ ಮತಯಂತ್ರದಲ್ಲಿ ದೋಷವಿರುವುದು ಖಚಿತವಾಗಿದೆ ಎಂದು ಮಾಯಾವತಿ ಆರೋಪಿಸಿದ್ದರು. ಇವಿಎಂನಲ್ಲಿ ಯಾರಿಗೆ ವೋಟು ಹಾಕಿದ್ರೂ ಅದು ಬಿಜೆಪಿಗೆ ಹೋಗುತ್ತದೆ ಎಂದು ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಆರೋಪಿಸಿತ್ತು. ಕಾಂಗ್ರೆಸ್ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ಇತರೆ ಎಡಪಕ್ಷಗಳು ಕಳೆದ ಫೆಬ್ರವರಿಯಲ್ಲಿ ನಡೆದ ಪಂಚರಾಜ್ಯ ಚುನಾವಣೆ ವೇಳೆ ಮತಯಂತ್ರಗಳು ದೋಷದಿಂದ ಕೂಡಿದ್ದವು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಆದರೆ ದೋಷ ಪತ್ತೆ ಹಚ್ಚಿ ಎಂದು ಸವಾಲು ಹಾಕಿದಾಗ ಇವರೆಲ್ಲಾ ನಾಪತ್ತೆಯಾಗಿದ್ದು ಯಾಕೆ?

ವಿದ್ಯುನ್ಮಾನ ಮತಯಂತ್ರದ ಬಗ್ಗೆ ಚುನಾವಣಾ ಆಯೋಗ ಏನು ಹೇಳಿದೆ ಗೊತ್ತೇ?

ಇವಿಎಂ ತಿರುಚುವಿಕೆಗೆ ಅವಕಾಶ ಇಲ್ಲದಷ್ಟು ಸಮರ್ಥವಾಗಿದೆ. ಅದನ್ನು ತಯಾರಿಸಿದವರಿಗೂ ದುರುಪಯೋಗಮಾಡಲು ಅಕ್ರಮವಾಗಿ ವ್ಯತ್ಯಾಸ ಮಾಡಲು ಅಸಾಧ್ಯ. ಯಂತ್ರದ ನಿಖರ ನಿರ್ವಹಣೆ, ಶಕ್ತಿಯುತವಾದ ಋಜುತ್ವವನ್ನು ಯಾರಿಂದಲೂ ಬದಲಿಸಲಾಗದು. ಇದನ್ನು ಹ್ಯಾಕ್ ಮಾಡಲೂ ಸಾಧ್ಯವಿಲ್ಲ. ಅದರ ತಾಂತ್ರಿಕತೆ ಸುರಕ್ಷತೆಯನ್ನು ಕಾಯ್ದಿರಿಸಿದೆ. ಟ್ಯಾಂಪರ್ ಡಿಟೆಕ್ಷನ್ ಸೇರ್ಪಡೆ ಮಾಡಲಾಗಿದ್ದು, ಯಾವನಾದರೂ ಅದನ್ನು ತೆರೆಯಲೆತ್ನಿಸಿದರೆ ಅದು ತಕ್ಷಣ ಕಾರ್ಯಗತಗೊಳಿಸುತ್ತದೆ. ಆದರೆ ಅದನ್ನು ತಿರುಚಲು ಸಾಧ್ಯವೇ ಇಲ್ಲ. ಅಲ್ಲದೆ ಇದನ್ನು ಭಾರತದಲ್ಲೇ ರೂಪಿಸಲಾಗಿದ್ದು, ಅದರಲ್ಲಿನ ಫಂಕ್ಷನ್‍ಗೆ ದೇಶೀಯವಾದ ಬರಹ ಬಳಸಲಾಗಿದೆ. ಅದರ ತಂತ್ರಾಂಶ ಯಾವ ರೀತಿ ಎಂದು ಯಾರಿಂದಲೂ ಪತ್ತೆಹಚ್ಚಲು ಸಾಧ್ಯವಿಲ್ಲ. ಇಷ್ಟೆಲ್ಲಾ ಸಮರ್ಥನೆಯನ್ನು ಚುನಾವಣಾ ಆಯೋಗ ಕೊಡುತ್ತಿದ್ದರೂ ಪುಕಾರು ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಅವರಿಗೇ ನಷ್ಟ ಎನ್ನುವುದು ಅರ್ಥವಾಗುವುದಿಲ್ಲ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್, ಇವಿಎಂನಲ್ಲಿ ಯಾವ ರೀತಿ ಮೋಸ ಆಗುತ್ತದೆ ಎಂದು ಸಾಬೀತುಪಡಿಸುವಂತೆ ಕೇಂದ್ರ ಚುನಾವಣಾ ಆಯೋಗ ಬಹಿರಂಗ ಸವಾಲು ಹಾಕಿದ್ದರೂ, ಇದನ್ನು ಪತ್ತೆ ಹಚ್ಚಲು ಯಾರೂ ಮುಂದೆ ಬಂದಿಲ್ಲ. ಒಂದು ವೇಳೆ ಮೋಸ ಆಗುತ್ತಿರುವುದು ನಿಜವೇ ಆಗಿದ್ದರೆ ದೇಶದಲ್ಲಿ ಸಾಫ್ಟ್‍ವೇರ್ ದಿಗ್ಗಜರು, ಪರಿಣತರು ಸಾಕಷ್ಟು ಮಂದಿ ಇದ್ದಾರೆ. ಆದರೆ ಯಾರೂ ಕೂಡಾ ಮುಂದೆ ಬಂದಿಲ್ಲ. ಅಲ್ಲದೆ ಇವಿಎಂಗಳ ಜೊತೆಗೆ ಮತದಾರ ಅವನು ಚಲಾಯಿಸಿದ ಮತವನ್ನು ಕಾಗದದ ಚೀಟಿಯಲ್ಲಿ ಖಾತರಿಪಡಿಸಿಕೊಳ್ಳುವ ವಿವಿಪಿಎ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಮೋಸ ಆಗಲು ಸಾಧ್ಯವೇ ಇಲ್ಲ. ಇವಿಎಂಗಳ ಪ್ರಾತ್ಯಕ್ಷಿಕೆಯನ್ನು ರಾಜಕೀಯ ಪಕ್ಷಗಳು, ಮಾಧ್ಯಮದವರ, ಸಂಘಸಂಸ್ಥೆಗಳ ಪ್ರತಿನಿಧಿಗಳ ಮುಂದೆ ತೋರಿಸಲಾಗುವುದು ಎಂದು ಸಂಜೀವ ಕುಮಾರ್ ತಿಳಿಸಿದ್ದಾರೆ.

ಚುನಾವಣಾ ಆಯೋಗ ಇಷ್ಟೆಲ್ಲಾ ಬಹಿರಂಗವಾಗಿ ಸವಾಲು ಹಾಕುತ್ತಿದ್ದರೂ ಮೋಸ ಆಗುವುದನ್ನು ಪತ್ತೆಹಚ್ಚಲು ಯಾರೂ ಕೂಡಾ ಮುಂದೆ ಬಂದಿಲ್ಲ ಅಂದರೆ ಏನರ್ಥ? ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿದವರಿಗೆ ಇದೆಲ್ಲಾ ಯಾವಾಗ ಅರ್ಥವಾಗುತ್ತದೋ ಗೊತ್ತಿಲ್ಲ. ಆದರೆ ಮತ ಹಾಕುವ ಮತದಾರ ಮಾತ್ರ ಇದನ್ನು ಅರ್ಥಮಾಡಿಕೊಂಡರೆ ಸಾಕು..

-ಚೇಕಿತಾನ

Tags

Related Articles

Close