ಪ್ರಚಲಿತ

ಕನ್ನಡಕ್ಕೆ ಸಿಕ್ಕಿರುವ ರಾಜಾಶ್ರಯದ ಬಿಲ್ಲಿಕವಡೆ ತುಳು ಭಾಷೆಗೆ ಸಿಕ್ಕಿದ್ದರೆ ಕಥೆಯೇ ಬೇರೆ ಇರುತ್ತಿತ್ತು!!

ಕೆಲವು ವರ್ಷಗಳ ಹಿಂದೆ ಶ್ರವಣಬೆಳಗೊಳಕ್ಕೆ ಹೋದಾಗ ನಡೆದ ಪ್ರಸಂಗವಿದು. ನಾನು ದರ್ಬೆ ಎಂಬ ಸ್ನೇಹಿತರೊಂದಿಗೆ ಅಲ್ಲಿಗೆ ಹೋಗಿದ್ದೆ. ಅಲ್ಲಿ ಏಳೆಂಟು ಜನರನ್ನು ಭೇಟಿ ಮಾಡುವುದಿತ್ತು. ಅವರೆಲ್ಲರೂ ದಕ್ಷಿಣ ಕನ್ನಡದವರಾಗಿದ್ದರು. ಅವರ್ಯಾರಿಗೂ ದರ್ಬೆಯವರ ಪರಿಚಯವಿರಲಿಲ್ಲ. ನಾನು ಅವರೆಲ್ಲರಿಗೂ ದರ್ಬೆಯವರನ್ನು ಪರಿಚಯಿಸಿದೆ. ‘ಇವರು ನನ್ನ ಸ್ನೇಹಿತರು, ದರ್ಬೆ…’ ಎಂದು ಹೇಳುತ್ತಿರುವಂತೆ ಅವರಲ್ಲಿ ಎರಡು ಮಂದಿ ತಕ್ಷಣ ‘ದರ್ಬೆಯವರೆಂದರೆ
ದಕ್ಷಿಣ ಕನ್ನಡದವರಾ?’ ಎಂದು ಕೇಳಿದರು. ದರ್ಬೆಯವರು ‘ಹೌದು’ ಎಂದು ತಲೆಯಾಡಿಸಿದರು. ‘ಓಹೋ, ನಮ್ಮ ದಕ್ಷಿಣ ಕನ್ನಡದವರಾ? ಹಾಗಾದರೆ ತುಳು
ಬರುವುದಾ?’ ಎಂದು ಕೇಳಿದರು. ಅದಕ್ಕೆ ದರ್ಬೆ ‘ಹೌದು’ ಎಂದರು. ಸರಿ, ಅವರೆಲ್ಲರೂ ದರ್ಬೆಯವರನ್ನು ಸುತ್ತುವರಿದು, ಅವರ ಜತೆ ತುಳುನಲ್ಲಿ ಮಾತಾಡಲಾರಂಭಿಸಿದರು. ತಪ್ಪೇನಿಲ್ಲ ಬಿಡಿ. ನಮ್ಮ ಊರಿನವರು, ನಮ್ಮ ಮಾತೃಭಾಷೆ ಮಾತಾಡುವವರು ಸಿಕ್ಕರೆ ತಕ್ಷಣ ಆಪ್ತರಾಗುವುದು ಸಹಜ. ಆದರೆ
ತಪ್ಪಾಗಿದ್ದೇನೆಂದರೆ, ಅವರೆಲ್ಲರೂ ನನ್ನನ್ನು ಸಂಪೂರ್ಣ ಮೂಲೆಗುಂಪು ಮಾಡಿದ್ದರು. ಅನೇಕ ವರ್ಷಗಳಿಂದ ಪರಿಚಿತನಾದ ನನ್ನನ್ನು ಬಿಟ್ಟು, ಆಗ ತಾನೆ
ಪರಿಚಯವಾದವರೊಬ್ಬರು ಅವರೆಲ್ಲರಿಗೆ ಎಷ್ಟೋ ವರ್ಷಗಳ ಜಿಗ್ರಿದೋಸ್ತನಷ್ಟು ಆತ್ಮೀಯರಾಗಿದ್ದರು.

ಅಷ್ಟೊತ್ತಿಗೆ ಅಲ್ಲಿಗೆ ಒಬ್ಬ ಪ್ರಮುಖರು ಬಂದರು. ಆಗ ಅವರು ದರ್ಬೆಯನ್ನು ಹೇಗೆ ಪರಿಚಯಿಸಿದರು ಗೊತ್ತಾ? ‘ಇವರಿದ್ದಾರಲ್ಲ, ಇವರು ನಮ್ಮವರು. ದರ್ಬೆ ಅಂತ ಹೆಸರು. ಅವರಿದ್ದಾರಲ್ಲ, ಅವರು ವಿಶ್ವೇಶ್ವರ ಭಟ್ಟರು’ ಎಂದರು. ಆ ಕೆಲ ಕ್ಷಣದಲ್ಲಿ ಅವರಿಗೆಲ್ಲ ದರ್ಬೆ ನಮ್ಮವರಾಗಿದ್ದರು. ನಾನು ಯಾರೋ ಆಗಿದ್ದೆ!  ದರ್ಬೆ ತುಳು ಮಾತಾಡುವವರು ಎಂಬ ಒಂದೇ ಕಾರಣಕ್ಕೆ ದಿಢೀರ್ ನಿಕಟರಾದರು, ಆತ್ಮೀಯರಾದರು. ನಾನು ಅಷ್ಟು ವರ್ಷಗಳಿಂದ ಸುಪರಿಚಿತನಾಗಿದ್ದರೂ, ತುಳು ಮಾತಾಡುವವನಲ್ಲ ಎಂಬ ಕಾರಣಕ್ಕೆ ‘ಯಾರೋ’ ಆಗಿಹೋಗಿದ್ದೆ.

ತುಳು ಶಕ್ತಿ ಅಂಥದ್ದು! 

ನನಗೆ ಎಷ್ಟೋ ಸಲ ಅನಿಸಿದೆ, ನಾನೇನಾದರೂ ಮಂಗಳೂರಿನಲ್ಲಿ ಮೂರು ತಿಂಗಳು ಇದ್ದಿದ್ದರೆ, ತುಳು ಕಲಿಯುತ್ತಿದ್ದೆ, ತುಳು ಕಲಿತಿದ್ದರೆ, ತುಳು ಭಾಷೆಯಲ್ಲಿ
ಪತ್ರಿಕೆಯನ್ನು ಆರಂಭಿಸಿ ‘ಉದಯವಾಣಿ’ಪತ್ರಿಕೆಯನ್ನು ಪ್ರಸರಣದಲ್ಲಿ ಹಿಂದಕ್ಕೆ ಹಾಕುತ್ತಿದ್ದೆ ಎಂದು.  ತುಳು ಗೊತ್ತಿಲ್ಲದೇ ಮಂಗಳೂರನ್ನು ಪ್ರವೇಶಿಸಬಹುದು. ಆದರೆ ಮಂಗಳೂರಿಗರ ಅಂತರಂಗ ಪ್ರವೇಶಿಸುವುದು ಸಾಧ್ಯವೇ ಇಲ್ಲ. ಅಷ್ಟಕ್ಕೂ ತುಳು ಒಂದು ಭಾಷೆ ಅಲ್ಲವೇ ಅಲ್ಲ. ತುಳು ಒಂದು ಸಂಸ್ಕೃತಿ, ಆಚರಣೆ, ಸಂಪ್ರದಾಯ ಹಾಗೂ ಅವೆಲ್ಲಕ್ಕಿಂತ ಹೆಚ್ಚಾಗಿ ತುಳು ಒಂದು ಪುಟ್ಟ, ಅಪ್ಪಟ ಧರ್ಮ. ದಕ್ಷಿಣ ಕನ್ನಡದಲ್ಲಿ ಹಲವು ಧರ್ಮೀಯರಿರಬಹುದು. ಆದರೆ ಅವರೆಲ್ಲ ತಮ್ಮ ತಮ್ಮ ಧರ್ಮವನ್ನು ಎಷ್ಟು ಪಾಲಿಸುತ್ತಾರೋ, ಅನುಸರಿಸುತ್ತಾರೋ ಗೊತ್ತಿಲ್ಲ. ಆದರೆ ಅವರು ಯಾವುದೇ ಧರ್ಮದವರಾಗಿರಲಿ ಕಡ್ಡಾಯವಾಗಿ ತುಳು ಧರ್ಮವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಕೊಂಕಣಿಗರು, ಬಂಟರು, ಬೆಸ್ತರು,ಕ್ರಿಶ್ಚಿಯನ್ನರು, ಬ್ರಾಹ್ಮಣರು,ಮುಸಲ್ಮಾನರು, ಜೈನರು, ಶೆಟ್ಟರು.. ಇವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ತಮ್ಮ ಮಾತೃಭಾಷೆಯನ್ನೋ, ಆಡುಭಾಷೆಯನ್ನೋ ಮಾತಾಡುತ್ತಾರೆ.

ಆದರೆ ಅಂಗಳದಲ್ಲಿ ಕಾಲಿಟ್ಟರೆ ತುಳು! ಜಾತಿ ಯಾವುದೇ ಇರಲಿ ಮಾತಿಗೆ ತುಳು ಬೇಕು. ಧರ್ಮ ಯಾವುದೇ ಇರಲಿ, ಮಾತುಕತೆಗೆ ತುಳು ಇರಲೇಬೇಕು. ಅಂತಸ್ತು, ಸ್ಥಾನಮಾನ ಯಾವುದೇ ಇರಲಿ, ಆಪಸ್ನಾತಿಗೆ ತುಳು ಬೇಕು. ಇಬ್ಬರನ್ನು ಹತ್ತಿರ ಬೆಸೆಯಲು ಹಣ,ವ್ಯಕ್ತಿತ್ವ, ಸ್ಥಾನಮಾನ, ಗುಣ ಲಕ್ಷಣಗಳಿಗಿಂತ ತುಳುವೇ ಪ್ರಧಾನ. ಎಲ್ಲವೂ ಇದ್ದು ತುಳು ಮಾತ್ರ ಗೊತ್ತಿಲ್ಲ ಅಂದ್ರೆ ಉಳಿದುದೆಲ್ಲ ಬುರ್ನಾಸು, ಗೌಣ.  ಅದು ಪರಕೀಯ ಸ್ಥಳವಾಗಿರಬಹುದು, ಗುರುತು ಪರಿಚಯವಿಲ್ಲದ ದೇಶವಾಗಿರಬಹುದು, ನಿಮ್ಮ ಕಿಸೆಯಲ್ಲಿ ದಮಡಿ ಕಾಸು ಇಲ್ಲದಿರಬಹುದು, ನಿಮಗೆ ತುಳು ಬರುತ್ತದೆಂಬುದು ಮತ್ತೊಬ್ಬ ತುಳು ಭಾಷಿಕನಿಗೆ ಗೊತ್ತಾದರೆ ಸಾಕು, ಬಾರಹ ಖೂನ್ ಮಾಫ್! ಆತ ನಿಮ್ಮನ್ನು ಹಾಗೆ ಬಿಟ್ಟು ಹೋಗುವುದಿಲ್ಲ. ನೀವು ಅವನ ಪಾಲಿಗೆ ‘ದರ್ಬೆ’! ಬಾಯಲ್ಲಿ ತುಳು ಎಲ್ಲಿಯವರೆಗೆ ನುಲಿಯುತ್ತಿರುತ್ತದೆಯೋ, ಅಲ್ಲಿಯವರೆಗೆ ದಕ್ಷಿಣ ಕನ್ನಡದಲ್ಲಿ ನೀವು ಏಕಾಂಗಿಯೂ ಅಲ್ಲ, ಅಪರಿಚಿತರೂ ಅಲ್ಲ, ಅಬ್ಬೇಪಾರಿಯೂ ಅಲ್ಲ, ನಿಮ್ಮ ವೈಫೈಗೆ ತುಳು ಭಾಷೆ ಗೊತ್ತಿದ್ದರೆ ಪಾಸ್‌ವರ್ಡ್ ಬೇಕಿಲ್ಲ!

ಡೈರೆಕ್ಟ್‌ ಕನೆಕ್ಟ್‌ ಆಗಿಬಿಡುತ್ತೀರಿ.ತುಳು ಭಾಷಿಕರ ಭಾಷಾ ಉತ್ಕಟತೆ ಹಿಮಾಲಯದ ಮೇಲೆ ಗುಲಗಂಜಿ ಅಂದರೆ ಹಿಮಾಲಯಕ್ಕಿಂತ ಹೆಚ್ಚು ಹೆಚ್ಚು. ಕರ್ನಾಟಕದಲ್ಲಿ ಕಡಲಕಿನಾರೆ ಸುಮಾರು 315ಕಿ.ಮಿ ಹರಡಿಕೊಂಡಿದ್ದರೆ, ಅದರ ಅರ್ಧಕ್ಕಿಂತ ತುಸು ಕಡಿಮೆ ತೀರದ ಗುಂಟ ವ್ಯಾಪಿಸಿರುವ ಪ್ರದೇಶದಲ್ಲಿನ ಜನ ಈ ಭಾಷೆಯನ್ನು ಮಾತಾಡುತ್ತಾರೆ. ಇವರನ್ನೆಲ್ಲ ಲೆಕ್ಕ ಹಾಕಿದರೆ, ಇಪ್ಪತ್ತೈದು ಮೂವತ್ತು ಲಕ್ಷಗಳನ್ನು ದಾಟಲಿಕ್ಕಿಲ್ಲ. ಇವರಲ್ಲಿ ನೂರಾರು ಜಾತಿಗಳಿರಬಹುದು. ಭಾಷೆ ವಿಷಯಕ್ಕೆ ಬಂದರೆ ಅವರದು ಒಂದೇ ಜಾತಿ. ಅದು ತುಳು. ಎಷ್ಟೋ ಸಲ ಈ ಭಾಷಾ ಉತ್ಕಟ ಪ್ರೇಮ ಕಂಡು ಅನಿಸಿದ್ದಿದೆ, ಇವರೆಲ್ಲ ಮೊದಲು ತುಳು ಭಾಷಿಕರು ಹಾಗೂ ಆನಂತರ ಮನುಷ್ಯರು! ಇದು ವ್ಯಂಗ್ಯವೂ ಅಲ್ಲ, ಅತಿಶಯೋಕ್ತಿಯೂ ಅಲ್ಲ. ಕನ್ನಡದಲ್ಲಿ ಭೇದ- ಭಾವ ಇರಬಹುದು. ಆದರೆ ತುಳುನಲ್ಲಿ ಭಾವ(ನೆಂಟ) ಮಾತ್ರ. ಅಂದರೆ ತುಳು ಮಾತಾಡುವವರೆಲ್ಲ ನೆಂಟರೇ. ಬೇಕಾದರೆ ಪರೀಕ್ಷಿಸಿ ನೋಡಿ. ಬಾಲಿವುಡ್‌ನ ಖ್ಯಾತ ಅಭಿನೇತ್ರಿಗಳಾದ ಐಶ್ವರ್ಯ ರೈ
ಅಥವಾ ಶಿಲ್ಪಾ ಶೆಟ್ಟಿ ಅವರ ಸಂದರ್ಶನವನ್ನು ಅಪೇಕ್ಷಿಸಿದರೆ ಸಿಗಲಿಕ್ಕಿಲ್ಲ.

ಅದೇ ನೀವು ತುಳುನಲ್ಲಿ ಕೇಳಿದರೆ, ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ತುಳು ಮಾತಾಡುತ್ತೀರೆಂಬುದು ಗೊತ್ತಾದರೆ, ಇಡೀ ಸಂದರ್ಶನದಲ್ಲಿ ಅಪ್ಪಿತಪ್ಪಿಯೂ ಅವರು ಇಂಗ್ಲಿಷ್, ಹಿಂದಿ ಬಳಸಲಿಕ್ಕಿಲ್ಲ!  ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿಯವರು ಎದುರಾದರೆ, ನೀವು ತುಳು ಮಾತಾಡುತ್ತೀರಿ ಎಂಬುದು ಗೊತ್ತಾದರೆ, ಅವರು ‘ಸ್ಟಾರ್‌ಗಿರಿ’ಯನ್ನೆಲ್ಲ ಬಿಟ್ಟು ಸಾಮಾನ್ಯರಂತಾಗಿಬಿಡುತ್ತಾರೆ. ತುಳು ಭಾಷೆಯಲ್ಲಿ ಅಂಥ ಮಾಂತ್ರಿಕ ಶಕ್ತಿಯಿದೆ. ಕೆಲವು ವರ್ಷಗಳ ಹಿಂದೆ, ಮಾಜಿ ಮಂತ್ರಿ ದಿವಂಗತ ಡಾ. ಜೀವರಾಜ ಆಳ್ವರನ್ನು ಭೇಟಿಯಾಗಿದ್ದೆ. ಅವರು ನನ್ನ ಹೆಸರು ಕೇಳುತ್ತಲೇ, ತೀರಾ ಸಹಜವಾಗಿಯೇ ತುಳುನಲ್ಲಿ ಮಾತನಾಡಲಾರಂಭಿಸಿದರು. ‘ಇಲ್ಲ ನನಗೆ ತುಳು ಬರುವುದಿಲ್ಲ’ ಎಂದು ಹೇಳಿದಾಗ ನನ್ನನ್ನು ಉದಾಸೀನದಿಂದ ನೋಡಿದ ಆ ಮುಖ ಮುದ್ರೆಯನ್ನು ನಾನೆಂದೂ ಮರೆಯಲಾರೆ.

ತುಳು ಭಾಷೆಗೆ ಎಲ್ಲರನ್ನೂ ಒಳಗೊಳ್ಳುವ, ಕೂರಿಸುವ, ಒಟ್ಟಿಗೆ ಕರೆದುಕೊಂಡು ಹೋಗುವ ಚುಂಬಕ ಶಕ್ತಿಯಿದೆ. ಅದು ಕೇವಲ ಭಾಷೆ ಅಥವಾ ಸಂವಹನವಷ್ಟೇ ಅಲ್ಲ. ಅದೊಂದು ಅಸ್ತಿತ್ವದ, ಅಸ್ಮಿತೆಯ ಸಂಕೇತ. ಅದು ಕೇವಲ ಹೃದಯ ಭಾಷೆಯೊಂದೇ ಅಲ್ಲ, ರಕ್ತದ ಭಾಷೆಯೂ ಹೌದು. ನೀವು ಕನ್ನಡ ಮಾತಾಡಿದರೆ ಕನ್ನಡಿಗರು. ಅದೇ ತುಳು ಮಾತಾಡಿದರೆ ನಮ್ಮವರು. ಒಬ್ಬ ತುಳು ಮಾತಾಡುವವನಿಗೆ, ಮತ್ತೊಬ್ಬ ತುಳು ಮಾತಾಡುತ್ತಾನೆಂಬುದು ಗೊತ್ತಾದರೆ, ಆತನ ನಾಲಗೆ ಮೇಲೆ ಬೇರೆ ಭಾಷೆ ನಲಿದಾಡುವುದಿಲ್ಲ. ಅದೇ ಒಬ್ಬ ಕನ್ನಡಿಗನಿಗೆ ಎದುರಿಗಿದ್ದವನೂ ಕನ್ನಡಿಗನೇ ಎಂಬುದು ಗೊತ್ತಿದ್ದರೂ, ಇಂಗ್ಲಿಷ್‌ನಲ್ಲಿ ಮಾತಾಡುತ್ತಾನೆ. ಹಾಗಂತ ತುಳು ಭಾಷಿಕರೇನು ಬೇರೆ ರಾಜ್ಯದವರಲ್ಲ, ಬೇರೆ ದೇಶದವರಲ್ಲ.

ತುಳು ಭಾಷಿಕ ಮೂಲತಃ ಕನ್ನಡಿಗನೇ. ಆದರೂ ತುಳು ಭಾಷಿಕನಿಗೂ ಕನ್ನಡಿಗನಿಗೂ ಅದೆಷ್ಟು ವ್ಯತ್ಯಾಸ, ಅಂತರ? ಕಾರಣ ಅವರಿಗೆ ಕನ್ನಡ ಬರೀ ಭಾಷೆ, ಆದರೆ ತುಳು ಹಾಗಲ್ಲ, ಅದು ಅವನ ಉಸಿರು. ತುಳು ಮಾತಾಡುವುದರಿಂದ ಅನ್ನ ಸಿಗುವುದಿಲ್ಲ, ಉದ್ಯೋಗ ಸಿಗಲಿಕ್ಕಿಲ್ಲ, ಆದರೆ ಆತ ಅನ್ನ, ಉದ್ಯೋಗ ಬಿಟ್ಟಾನು, ಉಸಿರು ಬಿಡಲಾರ. ಕನ್ನಡಿಗರಿಗೂ, ತುಳು ಭಾಷಿಕರಿಗೂ ಇಷ್ಟೇ ವ್ಯತ್ಯಾಸ. ಯಾವುದೇ ಭಾಷೆಯಾದರೂ ‘ಆಮಿಷದ’ ಭಾಷೆ ಆಗಬಾರದು. ಅದು ಉಸಿರಿನ ಭಾಷೆಯಾಗಬೇಕು. ಕನ್ನಡಿಗರೆಲ್ಲರೂ ತುಳು ಭಾಷಿಕರಿಂದ ಕಲಿಯಬೇಕಾಗಿದ್ದು ಇದು. ಕನ್ನಡವನ್ನು ಮನ್ನಿಸುತ್ತಲೇ, ತುಳುವನ್ನು ಮೆರೆಸುವ ಅವರ ಉತ್ಕಟ ಭಾಷಾ ಪ್ರೇಮ ಎಂಥವರಿಗೂ ಮಾದರಿ.

ಮುದ್ದಣ, ಪಂಜೆ ಮಂಗೇಶರಾಯರು, ಕಾರ್ನಾಡ ಸದಾಶಿವರಾಯರು, ಬೆನಗಲ್ ರಾಮರಾಯರು, ಕಯ್ಯಾರ ಕಿಞ್ಞಣ್ಣ ರೈ, ಕೇಶವ ಮಂದಾರ ಭಟ್ಟರು,
ಕಡೇಂಗೊಡ್ಲು ಶಂಕರಭಟ್ಟರು, ಕು.ಶಿ. ಹರಿದಾಸ ಭಟ್ಟರು, ಬನ್ನಂಜೆ ಗೋವಿಂದಾಚಾರ್ಯರು, ಶೇಣಿ ಗೋಪಾಲಕೃಷ್ಣ ಭಟ್ಟರು, ಕುಂಬ್ಳೆ ಸುಂದರರಾವ್, ಲಕ್ಷ್ಮೀಶ
ತೋಳ್ಪಾಡಿ, ಬಿ.ಎ ವಿವೇಕ ರೈ.. ಇವರೆಲ್ಲರೂ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಬೆಳಗಿದವರು. ಆದರೆ ಇವರೆಲ್ಲರೂ ತುಳುನಾಡಿದ ಅಪ್ರತಿಮ ಪ್ರತಿಭೆಗಳು. ತುಳುವನ್ನು ಮೈಮನದಲ್ಲಿ ತುಂಬಿಕೊಂಡು ಇವರೆಲ್ಲರೂ ಕನ್ನಡವನ್ನು ಕಟ್ಟಿದವರು. ಇವರ್ಯಾರೂ ಕನ್ನಡವನ್ನು ಉದಾಸೀನ ಮಾಡಿದವರಲ್ಲ. ಆದರೆ ತುಳುವನ್ನು ಉಸಿರಾಗಿಸಿಕೊಂಡವರು. ರೆವರೆಂಡ್ ಫರ್ಡಿನಾಂಡ್ ಕಿಟೆಲ್, ಮೋಗ್ಲಿಂಗ್ ಮುಂತಾದ ಕ್ರಿಶ್ಚಿಯನ್ ಮಿಶನರಿಗಳು ಕನ್ನಡದ ಪ್ರವೇಶವನ್ನು ತುಳುವಿಂದಲೇ ಆರಂಭಿಸಿದವರು. ತುಳು ಕೇವಲ ಆಡು ಭಾಷೆಯಷ್ಟೇ ಅಲ್ಲ, ಸಂಸ್ಕೃತಿ, ಸೊಗಡು ಪ್ರಾದೇಶಿಕ ವಾಸನೆಯುಳ್ಳ ಸಂಪದ್ಭರಿತ ಭಾಷೆಯೂ ಹೌದು. ನೀವೇನಾದರೂ ಏಳೆಂಟು ತಿಂಗಳುಗಳ ಕಾಲ ದಕ್ಷಿಣ ಕನ್ನಡದ ಯಾವುದಾದರೂ ಊರಿನಲ್ಲಿದ್ದರೆ, ತುಳು ಕಲಿಯದೇ ಇರುವುದಿಲ್ಲ.

ಹಾಗೆಂದು ಅದಕ್ಕೆ ಬಹಳ ಪ್ರಯಾಸಪಡಬೇಕಿಲ್ಲ. ಅಲ್ಲಿನ ಸಹವಾಸ, ಸೋಂಕುಗಳಿಂದಲೇ ಸಹಜವಾಗಿ, ಸಾಂಕ್ರಾಮಿಕದಂತೆ ತುಳು ಮನಸ್ಸಿನೊಳಗೆ ಇಳಿಯಲಾರಂಭಿಸುತ್ತದೆ. ಒಂದು ಸಂಸ್ಕೃತಿ ಹಾಗೂ ಪರಿಸರವೇ ಪರಕೀಯನನ್ನು ತನ್ನೊಳಗೆ ಬಿಟ್ಟುಕೊಳ್ಳುತ್ತಾ ಹೋಗುತ್ತದೆ. ಅಲ್ಲದೇ ಅವನನ್ನು ತನ್ನವನನ್ನಾಗಿ ಮಾಡುತ್ತದೆ. ತುಳು ಭಾಷೆಗೆ ಜಾತಿ, ಮತ, ಪಂಗಡ, ಕೋಮು, ಮೇಲು-ಕೀಳು,ಧರ್ಮ, ಪಂಥ, ದೇಶ, ಕಾಲ.. ಹೀಗೆ ಯಾವುದೂ ಇಲ್ಲ. ತುಳುವೇ ಜಾತಿ, ತುಳುವೇ ಧರ್ಮ. ತುಳುವೇ ತಾರಾಮಂಡಲ, ಆಗ ಅದು ನಮ್ಮ ಕುಡ್ಲ! ಈ ವಿಷಯದಲ್ಲಿ ತುಳು ಇಂಗ್ಲಿಷ್‌ನಂತೆ ಪ್ರಚ್ಛನ್ನ. ಇಂಗ್ಲಿಷಿಗಿಂತ ಚೆನ್ನ.ಕಾರಣ ತುಳು ಎಂದಾಕ್ಷಣ ಒಂದು ಸಂಸ್ಕೃತಿ, ಜನಪದ, ಜನಜೀವನ,ಜನನಾಡಿ, ಪ್ರದೇಶ, ಆಚರಣೆ, ಸೊಗಡು ಎಲ್ಲವೂ ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಇದು ಯಾರೋ ನೀಡಿದ ಆದೇಶವಲ್ಲ, ಸರಕಾರದ ಕಾರ್ಯಕ್ರಮವಲ್ಲ, ತುಳು ಭಾಷೆಗೆ ಪ್ರಾಧಿಕಾರವಿಲ್ಲ, ಕಾವಲು ಸಮಿತಿಗಳಿಲ್ಲ, ವಿಶ್ವವಿದ್ಯಾಲಯಗಳಿಲ್ಲ, ಪ್ರತ್ಯೇಕ ಮಂತ್ರಿ ಖಾತೆ ಇಲ್ಲ, ಸರಕಾರಿ ನಿಗಮವೂ ಇಲ್ಲ,ತುಳು ಕಡ್ಡಾಯ ಮಾಡಿ ಎಂಬ ಬೇಡಿಕೆಯೂ ಇಲ್ಲ. ಇನ್ನು ಶಾಸ್ತ್ರೀಯ ಸ್ಥಾನಮಾನದ ಆಗ್ರಹದ ಪ್ರಶ್ನೆಯೂ ಇಲ್ಲ. ಆದರೆ ಸರಕಾರದ ಬೆಂಬಲ, ಪ್ರಭುತ್ವದ ಸಹಕಾರವಿಲ್ಲದಿದ್ದರೂ ತುಳು ಇಂದು ವಿಶ್ವವ್ಯಾಪಿಯಾಗಿದೆ. ಆ ಭಾಷೆಯನ್ನು ಆಡುವ
ಅಲ್ಪಸಂಖ್ಯಾತರಲ್ಲಿಯೂ ಗಟ್ಟಿಯಾಗಿ ಬೇರೂರಿದೆ. ಅಲ್ಲದೇ ದಿನದಿಂದ ದಿನಕ್ಕೆ ಬೆಳೆದು ಜನಪ್ರಿಯವಾಗುತ್ತಿದೆ. ಕನ್ನಡಕ್ಕೆ ಸಿಕ್ಕಿರುವ ‘ರಾಜಾಶ್ರಯ’ದ ಬಿಲ್ಲಿ ಕವಡೆ
ತುಳುಗೆ ಸಿಕ್ಕಿದ್ದಿದ್ದರೆ ಅದರ ಕತೆಯೇ ಬೇರೆ ಇತ್ತು.

ಆದರೆ ತುಳುಗೆ ಅದ್ಯಾಾವುದೂ ಬೇಡ. ಕಾರಣ ಅದಕ್ಕೆ ಎಲ್ಲ ಪ್ರಜೆಗಳ, ಜನರ ಆಶ್ರಯ ಸಿಕ್ಕಿದೆ. ವಿಧಾನ ಸೌಧದಲ್ಲಿ ರಾಜಾಶ್ರಯ ಪಡೆಯುವುದಕ್ಕಿಂತ, ಎರಡು ಜಿಲ್ಲೆಗಳ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಆ ಭಾಗದ ಜನರಿರುವೆಡೆ ಜೀವಂತವಾಗಿರುವುದು ಕೋಟಿ ಪಾಲು ವಾಸಿ. ಕನ್ನಡಕ್ಕೂ,ತುಳುಗೂ ಇರುವ ವ್ಯತ್ಯಾಸವಿದು. ಸೋಜಿಗವೆಂದರೆ ತುಳು ಭಾಷಿಕರ್ಯಾಾರೂ ಕನ್ನಡ ವಿರೋಧಿಗಳಲ್ಲ. ಕನ್ನಡ ಮಾತಾಡುತ್ತಲೇ, ಓದುತ್ತಲೇ, ಬರೆಯುತ್ತಲೇ ತಮ್ಮ ಭಾಷೆಯನ್ನು ಜತನದಿಂದ ಪೊರೆದವರು. ಕನ್ನಡಕ್ಕೆ ಪ್ರತಿಸ್ಪರ್ಧಿ ಎಂಬ ಪೋಸು ಕೊಡಲಿಲ್ಲ. ಬದಲು ಕನ್ನಡದ ಜತೆಜತೆಗೆ ಸಂವಾದಿಯಾಗಿ ಬೆಳೆದವರು.

ಇಸ್ರೇಲಿಗಳಿಗೆ ತಮ್ಮ ಹೃದಯ ಭಾಷೆಯಾದ ಹೀಬ್ರೂ ಮೇಲೆ ತಾಯ್ನಾಡಿನ ಮಮತೆ. ಜಗತ್ತಿನಲ್ಲೆಡೆಯಿರುವ ಯಹೂದಿಯರು ಒಂದಾಗಿರುವುದೇ ಹೀಬ್ರೂ
ಮೂಲಕ. ಮೃತಭಾಷೆ ಎಂದು ಕರೆಯಿಸಿಕೊಂಡ ಅದಕ್ಕೆ ಪುನರ್‌ಜನ್ಮ ಕೊಟ್ಟರು. ಭಾಷೆ ಸತ್ತು ತಾವು ಬದುಕಿ ಪ್ರಯೋಜನವಿಲ್ಲ ಎಂದು ಬಲವಾಗಿ ನಂಬಿದವರು.
ಅದಕ್ಕಾಗಿ ಅಕ್ಷರಶಃ ಬದುಕು ಸವೆಸಿದವರು ಹಾಗೂ ಜೀವ ಕೊಟ್ಟವರು. ಭಾಷೆ ವಿಷಯದಲ್ಲಿ ಅವರು ಎಂಥ ತ್ಯಾಗಕ್ಕಾದರೂ ಸಿದ್ಧ. ಆ ವಿಷಯದಲ್ಲಿ ಅವರದು ಉಗ್ರಗಾಮಿ ನಿಲುವು. ಇಸ್ರೇಲ್ ತಂತ್ರಜ್ಞಾನದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ದೇಶ. ಈ ಕಾರಣದಿಂದ ಆ ದೇಶದಲ್ಲಿ ಸಹಜವಾಗಿ ಇಂಗ್ಲಿಷ್ ವ್ಯಾಪಿಸಿಬಿಡಬೇಕಿತ್ತು. ಪ್ರದೇಶಿಕ ಭಾಷೆಯಾದ ಹೀಬ್ರೂ ಮೇಲೆ ಸವಾರಿ ಮಾಡಬೇಕಿತ್ತು. ಆದರೆ ಹೀಬ್ರೂ ಪ್ರಭಾವ ಹೇಗಿದೆಯೆಂದರೆ, ಅಲ್ಲಿ ಇಂಗ್ಲಿಷ್‌ಗೆ ತಲೆಯೆತ್ತಲು ಬಿಟ್ಟಿಲ್ಲ. ಭಾಷೆ ಉತ್ಕಟತೆಯಲ್ಲಿ ಇಸ್ರೇಲಿಗಳಿಗೆ ಸರಿಸಮ ಅಥವಾ ಒಂದು ಕೈ ಹೆಚ್ಚು ಎಂದು ಯಾರನ್ನಾದರೂ ಹೇಳಬಹುದಾದರೆ, ಅದು ತುಳು ಭಾಷಿಕರು.

ಈ ಎಲ್ಲಾ ಕಾರಣಗಳಿಂದ ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರು ಧರ್ಮಸ್ಥಳಕ್ಕೆ ಬಂದಾಗ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಮಸ್ತ ತುಳುನಾಡಿನವರ ಪರವಾಗಿ ಆ ಭಾಷೆಯನ್ನು ಸಂವಿಧಾನದ ಎಂಟನೇ ಷೆಡ್ಯೂಲ್‌ನಲ್ಲಿ ಸೇರಿಸುವಂತೆ ಮನವಿ ಮಾಡಿದ್ದು. ಕೇವಲ ಎರಡು ಜಿಲ್ಲೆಗಳ ಜನರ ಕೊರಳ ಹಾಗೂ ಕರುಳ ಭಾಷೆಯಾದ ತುಳು, ದೇಶ-ವಿದೇಶ ವ್ಯಾಪಿಸಿರುವ ಅಪರೂಪದ,ಅದ್ಭುತವೆನಿಸುವ ಅನನ್ಯತೆಯ ಸಾಕ್ಷಾತ್ಕಾರವಿದು.

ತುಳು ಮಟ್ಟಕ್ಕಲ್ಲದ್ದಿದ್ದರೂ ಒಂದು ರೀತಿಯಲ್ಲಿ ಅದೇ ಉತ್ಕಟತೆಯಿರುವವರು ಕೊಂಕಣಿಗರು. ಇಬ್ಬರು ಕೊಂಕಣಿಗರು ಸಿಕ್ಕರೆ ಅವರು ಬಾಯ್ತುಂಬಾ ಕೊಂಕಣಿಯನ್ನು ಚಪ್ಪರಿಸುತ್ತಾರೆ ಹಾಗಂತ ಅವರು ಕನ್ನಡಿಗರೇ. ಕನ್ನಡಕ್ಕೆ ಇಂದು ಬೇಕಾಗಿರುವುದು ಈ ತುಳು,ಕೊಂಕಣಿ ಹೀಬ್ರೂ ಭಾಷಿಕರ ಉತ್ಕಟ ಪ್ರೇಮ, ಕರುಳಬಳ್ಳಿಯ ಸ್ನೇಹ . ಹೇರಿಕೆಯ,ತೋರಿಕೆಯ ಹುಸಿ ಪ್ರೇಮ ಅಲ್ಲ. ವರ್ಷಕ್ಕೊಮ್ಮೆ ಬರುವ ನವೆಂಬರ ಮಾಸಿಕ ಪ್ರೇಮವೂ ಅಲ್ಲ. ತುಳು ಹಾಗೂ ಹೀಬ್ರೂ ಭಾಷಿಕರೆಂದೂ ಬೇರೆ ಭಾಷೆಗಳಿಂದ ತಮ್ಮ ಭಾಷೆಗೆ ಕುತ್ತು ಬಂತು, ತಮ್ಮ ಭಾಷೆ ಅವಸಾನದ ಅಂಚಿನಲ್ಲಿದೆ ಎಂದೆಲ್ಲ ರಗಳೆ,ರಾದ್ಧಾಂತ ಮಾಡಿದ್ದನ್ನು ನಾನಂತೂ ಕೇಳಿಲ್ಲ. ಅದೇ ವರಸೆಯಲ್ಲಿ ತುಳು ರಕ್ಷಣೆ,ಭಕ್ಷಣೆ ವೇದಿಕೆಗಳನ್ನು ಕಟ್ಟಿಕೊಂಡು ಹಫ್ತಾವಸೂಲಿ ಮಾಡಿದ್ದನ್ನು ನೋಡಿಲ್ಲ. ಕನ್ನಡದಂತೆ ತುಳು ಕೆಲವರಿಗೆ ದಂಧೆಯಾಗಿಲ್ಲ , ಉಪಕಸುಬು ಆಗಿಲ್ಲ. ಕಾರಣ ತುಳು ಭಾಷೆ ಅಲ್ಲಿ ಜನರ ಮಧ್ಯೆ ಭದ್ರವಾಗಿದೆ, ಬೆಚ್ಚಗಿದೆ. ಯಾಕೆಂದರೆ ಜನ ಅದನ್ನು ಸಹಜ ಒತ್ತಾಸೆಯಿಂದ ಮಾತನಾಡುತ್ತಾರೆ. ಬೇರೆ ಭಾಷೆಗಳ ಹೂದೋಟಗಳ ಮಧ್ಯೆಯೇ ಅದೂ ಹುಲುಸಾಗಿ ಬೆಳೆಯುತ್ತಿದೆ.

ಇಂಗ್ಲಿಷ್ ಹೊಡೆತವನ್ನು ತಡೆಯಲು, ಇಂಥ ಭಾಷಾ ಉತ್ಕಟತೆಯೊಂದೇ ಮದ್ದು. ಹಾಗೆಂದು ಈ ಮದ್ದು ಹಿಮಾಲಯದಲ್ಲೋ, ಅಮೇಜಾನ್ ನದಿ ಕೊಳ್ಳದಲ್ಲೋ ಇಲ್ಲ. ನಮ್ಮೊಳಗೇ ಇದೆ. ಕನ್ನಡಕ್ಕೆ ಬೇಕಾಗಿದ್ದು ಅದೊಂದೇ. ಮತ್ತೆ ಹೇಳುತ್ತೇನೆ, ಈ ವಿಷಯದಲ್ಲಿ ನಮ್ಮ ಕಣ್ಣೆದುರಿನ ಆದರ್ಶ ಅಂದ್ರೆ ತುಳು ಭಾಷಿಕರು. ಕನ್ನಡದವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತಾಡುವ, ಕನ್ನಡ ಗೊತ್ತಿದ್ದರೂ ನನಗೆ ಕನ್ನಡದಲ್ಲಿ ಮಾತನಾಡಲು ಕಷ್ಟ, ದಯವಿಟ್ಟು ಕ್ಷಮಿಸಿ, ನಾನು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆಂದು ಭಾಷೆ ಬದಲಿಸುವ ಭಾಷುಂಬೆ (ಗೋಸುಂಬೆಗಳಂತೆ)ಗಳಲ್ಲ. ಇಂಥ ದರಿದ್ರ, ಗುಲಾಮಿ ಮನಸ್ಥಿತಿಯಿಂದ ಕನ್ನಡ ಉದ್ಧಾರವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರೇ ಕನ್ನಡಕ್ಕೆ ಮಾರಕ. ಇಂಥವರು ಕನ್ನಡದ ಬಗ್ಗೆ ಸ್ವಲ್ಪವೂ ಗೌರವ ಇಲ್ಲದವರು. ತಾವು ಕೆಟ್ಟಿದ್ದಲ್ಲದೇ ಬೇರೆಯವರನ್ನೂ ಕೆಡಿಸುತ್ತಾರೆ. ಇಂಥವರು ಇಂಗ್ಲಿಷನ್ನೇ ಅಮರಿಕೊಳ್ಳಲಿ. ಆದರೆ ಕನ್ನಡವನ್ನು ಹೇಗೆ ಪೊರೆಯಬೇಕೆಂಬುದನ್ನು ತುಳು ಭಾಷಿಕರಿಂದ ನೋಡಿ ಕಲಿಯಬೇಕು. ತಪ್ಪಿಲ್ಲ ಬಿಡಿ.

ಲೇಖನ: ವಿಶ್ವೇಶ್ವರ್ ಭಟ್

Tags

Related Articles

Close