ಪ್ರಚಲಿತ

ಕಲ್ಲಡ್ಕ ಭಟ್ಟರ ವಿರುದ್ಧದ ದ್ವೇಷಕ್ಕೆ ಮಕ್ಕಳನ್ನು ಬಲಿ ಹಾಕಿತೇ ಸರ್ಕಾರ? ಪೋಸ್ಟ್ ಕಾರ್ಡ್ ಬಳಿ ಇದೆ ಎಕ್ಸ್ ಕ್ಲೂಸಿವ್ ಮಾಹಿತಿ!

ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಯಾವ ಮುಚ್ಚುಮರೆಯೂ ಇಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ದ್ವೇಷ ಸಾಧಿಸುತ್ತಿರುವುದು ಕರ್ನಾಟಕದ ಜನತೆಗೆ ತಿಳಿಯದ ವಿಷಯವೇನೂ ಅಲ್ಲ.ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯನ್ನು ಯಾವ ಯಾವ ರೀತಿಯಲ್ಲೆಲ್ಲಾ ಅವರ ವಿರುದ್ಧದ ಸಂಚಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಒಂದು ವಿಡಿಯೋ ಸಹಾ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು.ಆದರೆ ಸರ್ಕಾರ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇಷ್ಟೊಂದು ಕೆಳ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಎನ್ನುವುದು ಮಾತ್ರ ಊಹಿಸಲೂ ಸಾಧ್ಯವಿರಲಿಲ್ಲ.

ಕೆಲ ದಿನಗಳಿಂದ ಸರ್ಕಾರದ ಒಂದು ಆದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಒಂದು ವೇಳೆ ಆ ಸರ್ಕಾರೀ ಆದೇಶ ನಿಜವೇ ಆಗಿದ್ದರೆ ಈ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಈ ನಡೆಯನ್ನು ಖಂಡಿಸಲೇ ಬೇಕಿದೆ.ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧದ ದ್ವೇಷ ಸಾಧನೆಗಾಗಿ ಸರ್ಕಾರ ಆಯ್ದುಕೊಂಡ ಮಾರ್ಗ ನಿಜಕ್ಕೂ ಆತಂಕ ಹುಟ್ಟಿಸುವಂತಹದ್ದಾಗಿದೆ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗೆ ಊಟ ಹಾಗೂ ಇತರ ಖರ್ಚುಗಳಿಗಾಗಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ನೀಡಲಾಗುತ್ತಿದ್ದ ಎಲ್ಲಾ ರೀತಿಯ ಧನ ಸಹಾಯವನ್ನು ಇದೀಗ ನಿಲ್ಲಿಸಲಾಗಿದೆ!

ಅಂದ ಹಾಗೆ ಆ ಶಾಲೆಯೇನೂ ಕೇವಲ ಮೇಲ್ವರ್ಗದ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಶಾಲೆಯಲ್ಲ.ಅಹಿಂದ ಮಕ್ಕಳೂ ಸೇರಿದಂತೆ ಎಲ್ಲಾ ವರ್ಗದ ಮಕ್ಕಳೂ ಅಲ್ಲಿ ಪಾಠ ಕಲಿಯುತ್ತಿವೆ.ಹೀಗಿರುವಾಗ ಯಾವುದೋ ನಿಯಮದ ಪ್ರಕಾರ ಹಿಂದೂ ದೇವಾಲಯದಿಂದ ಬಂದ ಆದಾಯವನ್ನು ಶಾಲಾ ಮಕ್ಕಳ ಊಟಕ್ಕೂ ನೀಡಲಾಗದು ಎಂದು ಧಿಡೀರನೆ ಆದೇಶ ಹೊರಡಿಸುವುದು ಎಷ್ಟು ಸರಿ?ಕಲ್ಲಡ್ಕ ಪ್ರಭಾಕರ ಭಟ್ಟರು ನಿಮ್ಮ ರಾಜಕೀಯ ವಿರೋಧಿಗಳೆಂದೇ ಒಪ್ಪಿಕೊಳ್ಳೋಣ.ಆದರೆ ಆ ಸಾವಿರಾರು ಮಕ್ಕಳು ನಿಮಗೇನು ಮಾಡಿದ್ದವು ಸ್ವಾಮಿ?ಅದೇಕೆ ನಿಮ್ಮ ನಿಮ್ಮ ರಾಜಕೀಯ ದ್ವೇಷಕ್ಕೆ ಮಕ್ಕಳ ಊಟ,ವಿದ್ಯೆ ಕಸಿಯುತ್ತಿದ್ದೀರಿ?

ಮುಜರಾಯಿ ಇಲಾಖೆಗೆ ಸೇರಿದ ಹಿಂದೂ ದೇವಾಲಯವಾದ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಗಳೆರಡರ  ಮಕ್ಕಳಿಗಾಗಿ ಇದುವರೆಗೆ ಒಟ್ಟು 2,83,25,424 ರೂ ಗಳನ್ನೂ ಖರ್ಚು ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ.ಈಗ ಧಿಡೀರನೆ ಇಂತಹಾ ಆದೇಶವೊಂದನ್ನು ಹೊರಡಿಸಿದರೆ ಆ ಶಾಲೆಗಳ ವಿದ್ಯಾರ್ಥಿಗಳ ಊಟ ಹಾಗೂ ಇನ್ನಿತರ ಖರ್ಚುಗಳಿಗಾಗಿ ಬೇರೆ ಯಾವ ವ್ಯವಸ್ಥೆಗಳನ್ನು ಮಾಡಿದ್ದೀರಿ? ಅದೆಲ್ಲಕ್ಕಿಂತಲೂ ಮುಖ್ಯವಾಗಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು 2002 ರ ನಿಯಮಗಳಲ್ಲಿ ಈ ರೀತಿ ದೇವಾಲಯಗಳ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಅವಕಾಶವಿರುವುದಿಲ್ಲ’ ಎನ್ನುವ ಕಾರಣವನ್ನು ನೀಡಲಾಗಿದೆ.ಹಾಗಾದರೆ ಈ ನಿಯಮಗಳು ಇಷ್ಟು ವರ್ಷಗಳವರೆಗೂ ಸರ್ಕಾರಕ್ಕೆ ತಿಳಿದೇ ಇರಲಿಲ್ಲವೇ ಅಥವಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ನಿಯಮಗಳು ಮಾನ್ಯ ಘನ ಸರ್ಕಾರಕ್ಕೆ ಜ್ಞಾಪಕಕ್ಕೆ ಬಂದವೇ?ಅಷ್ಟಕ್ಕೂ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು,ಕರಾವಳಿಯ ಇತರ ಸಚಿವರು,ಮುಖ್ಯಮಂತ್ರಿಗಳು ಹೋರಾಡುತ್ತಿರುವ ಸಂಧರ್ಭದಲ್ಲೇ ಸರ್ಕಾರದ ಈ ಆದೇಶಕ್ಕೆ ಸಹಿ ಬಿದ್ದದ್ದನ್ನು ಕೇವಲ ಕಾಕತಾಳೀಯ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿದೆಯೇ?

ಸರ್ಕಾರೀ ಕಾನೂನುಗಳು,ನಿಯಮಗಳು ಏನಾದರೂ ಇರಲಿ.ಆ ಹಣ ಹಿಂದೂ ದೇವಾಲಯದ ಹುಂಡಿಗೆ ಹಿಂದೂಗಳೇ ಹಾಕಿದ ಹಣ.ಆ ಹಣದ ಹತ್ತರಲ್ಲಿ ಒಂದು ಭಾಗ ಶಾಲೆಯೊಂದರ ಮಕ್ಕಳ ವಿದ್ಯಾರ್ಜನೆಗಾಗಿ,ಅಲ್ಲಿನ ಮಕ್ಕಳ ಊಟಕ್ಕಾಗಿ ಬಳಸಿಕೊಳ್ಳುವುದರಲ್ಲಿ ನೈತಿಕವಾಗಿ ಏನು ತಪ್ಪಿದೆ?ನಮ್ಮ ದೇವಾಲಯಗಳಿಂದ ಸರ್ಕಾರ ಗಳಿಸುವ ಹಣದಲ್ಲಿ ದೇವಾಲಯಗಳನ್ನೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ,ಅರ್ಚಕರಿಗೂ ಕಾಲಕಾಲಕ್ಕೆ ಸರಿಯಾದ ವೇತನ ನೀಡುತ್ತಿಲ್ಲ,ಮತ್ತೆ ಇದೀಗ ಶಾಲಾ ಮಕ್ಕಳ ಊಟಕ್ಕೆ ಕೂಡಾ ಆ ಹಣವನ್ನು ಬಳಸಿಕೊಳ್ಳುವಂತಿಲ್ಲ! ಹಾಗಾದರೆ ಹಿಂದೂ ದೇವಾಲಯಗಳ ಮೂಲಕ ಹಿಂದೂಗಳಿಂದ ದೊರಕುವ ನೂರಾರು ಕೋಟಿ ಹಣವೆಲ್ಲಾ ಎಲ್ಲಿ ಹೋಗಿ ಸೇರುತ್ತಿದೆ?

ಯಾವುದಕ್ಕೂ ಸರ್ಕಾರ ಇಂತಹದ್ದೊಂದು ಆದೇಶ ಹೊರಡಿಸಿರುವುದು ನಿಜವೇ ಅಥವಾ ಮಾಧ್ಯಮಗಳ ಸೃಷ್ಟಿಯೇ ಎನ್ನುವ ಗೊಂದಲ ಸಾರ್ವಜನಿಕರಲ್ಲಿ ಕಾಡುತ್ತಿದ್ದು ಸರ್ಕಾರ ಈ ಕೂಡಲೇ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಲೇಬೇಕು ಎನ್ನುವ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ.

-ಪ್ರವೀಣ್ ಕುಮಾರ್ ಮಾವಿನಕಾಡು

Tags

Related Articles

Close