ನಮಸ್ಕಾರ ಕುಮಾರಣ್ಣ!
ನಾನು ನಿಮ್ಮ ಅಭಿಮಾನಿ! ಜೆಡಿಎಸ್ ನ ಕಾರ್ಯಕರ್ತನಾಗಿಯೂ ಕೆಲಸ ಮಾಡಿದ್ದೇನೆ. ಬಹಳ ಸಂತಸದ ವಿಚಾರವೆಂದರೆ ನೀವು ಕ್ಷೇಮವಾಗಿರುವುದು. ಚುನಾವಣೆ ಹತ್ತಿರ ಬರುತ್ತಲಿದೆ, ಆರೋಗ್ಯವನ್ನೂ ಲೆಕ್ಕಿಸದೇ ಪ್ರಚಾರಕ್ಕೆ ಹೊರಟಿದ್ದು ಪ್ರಶಂಸನೀಯ ಅಣ್ಣ!
ನಾನು ಜಾತಿಯಾಧಾರಿತವಾಗಿ ನಿಮ್ಮನ್ನು ಬೆಂಬಲಿಸಿದೆನೋ ಅಥವಾ ರೈತರ ಕಷ್ಟ ನೋಡಿ ನೀವು ಕೊಟ್ಟ ಭರವಣೆಗಳನ್ನು ನೋಡಿ ಬೆಂಬಲಿಸಿದೆನೋ.. ಒಟ್ಟಾರೆಯಾಗಿ ಜೆಡಿಎಸ್ ಎಂದರೆ ನನಗೆ ‘ನಮ್ಮದು’ ಎನ್ನುವ ಅಭಿಮಾನ, ಹೆಮ್ಮೆ, ಕೆಲವೊಮ್ಮೆ ದರ್ಪವೂ ಕೂಡ ಇತ್ತು! ಆದರೆ.. ನಿಮ್ಮ ಹತ್ತಿರ ಮನದಿಂಗಿತವನ್ನು ಹೇಳಲೇಬೇಕೆಂದೆನಿಸುತ್ತಿದೆ. ಅದಕ್ಕಾಗಿ ಈ ಪತ್ರ.
1. ನಿಮ್ಮದು ದಕ್ಷ ಆಡಳಿತ ಎಂದು ವಾದಿಸಿದ್ದೇನೆ ಗೆಳೆಯರ ಹತ್ತಿರ. ನಿರಪರಾಧಿಗಳಿಗೆ ಖಂಡಿತವಾಗಿಯೂ ನ್ಯಾಯ ಕೊಡಿಸುವವರು ಕುಮಾರಣ್ಣ ಮಾತ್ರ ಎಂದು
ಬಲವಾಗಿ ನಂಬಿಕೆ ಇಟ್ಟು ಜಗಳವನ್ನೂ ಆಡಿದ್ದೇನೆ.. ಆದರೆ, ಇವತ್ತು ನೀವು ಮಾಡಿದ್ದೇನು ಅಣ್ಣ?!
ಡಿವೈಎಸ್ಪಿ ಗಣಪತಿಯವರ ಸಾವಿಗೆ ನೇರ ಹಾಗೂ ಮುಖ್ಯ ಆರೋಪಿಯಾದ ಕೆ.ಜೆ.ಜಾರ್ಜ್ ನನ್ನು ವಿರೋಧಿಸುವುದು ಬಿಟ್ಟು ಅವರ ಪರ ಮಾತಾಡಿದಿರಿ. ರಾಜೀನಾಮೆ ಕೊಡುವ ಅಗತ್ಯವೇನೂ ಇಲ್ಲ ಎಂದು ಮುಖ್ಯಮಂತ್ರಿಯವರ ಅಭಿಪ್ರಾಯವನ್ನೇ ನೀವೂ ಮಂಡಿಸಿದಿರಿ! ಹಾಗಾದರೆ, ನೀವು ಪದೇ ಪದೇ ನಮ್ಮೆದುರಲ್ಲಿಯೇ ಹೇಳುತ್ತಿದ್ದ ಪ್ರಾಮಾಣಿಕ ಆಡಳಿತದ ಸಿದ್ಧಾಂತವಿದೆಯೇ? ಒಬ್ಬ ದಕ್ಷ ಅಧಿಕಾರಿಯ ಸಾವಿಗೆ ನೀವು ನ್ಯಾಯವನ್ನು ಹೀಗೆ ಕೊಟ್ಟುಬಿಟ್ಟಿರಾ ಅಣ್ಣ?!
ಅಕಸ್ಮಾತ್, ಜೆಡಿಎಸ್ ಸರಕಾರವೇ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಬಹುಷಃ ಕಾಂಗ್ರೆಸ್ ಮಾಡಿದ ಅನ್ಯಾಯವನ್ನೇ ನಿಮ್ಮ ಆಡಳಿತದಲ್ಲಿ ಮುಂದುವರೆಸುತ್ತೀರಿ ಎಂದಾಯಿತು! ದಕ್ಷ ಹಾಗೂ ಪ್ರಾಮಾಣಿಕರ ಬದುಕು ಏನಾದೀತು ?
ಇವತ್ತು, ನಿಜಕ್ಕೂ ನನ್ನ ನಂಬಿಕೆ ಮುರಿದು ಹೋಗಿದೆ. . ಯಾಕೆಂದರೆ ನಾನೂ ಕೂಡ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯಕರ್ತನೇ!
2. ಮಾಧ್ಯಮಗಳನ್ನು ಕರೆಸಿ ಪರ ಪಕ್ಷಗಳ ಮೇಲೆ ಆರೋಪವನ್ನು ನೀವು ಹೊರಿಸುತ್ತಿದ್ದಿರಿ. ಪ್ರಶ್ನೆಗಳನ್ನು ಎಸೆಯುತ್ತಿದ್ದಿರಿ. ಆಗೆಲ್ಲ, ಹೆಮ್ಮೆ ಅನ್ನಿಸುತ್ತಿತ್ತು ನನಗೆ.. ಆದರೆ, ಆರೋಪಗಳೆಲ್ಲ ತುಂಬಿದ ಸೂಟ್ ಕೇಸ್ ಕೈ ಗೆ ಬಂದ ಕೂಡಲೇ ಮರೆಯಾಗಿ ಹೋಗುತ್ತಿತ್ತು. ಯಾವುದೇ ಆರೋಪಗಳನ್ನೂ ಸಹ ನೀವು ಬೆನ್ನಟ್ಟಿ ಸಾಬೀತು ಪಡಿಸಲೇ ಇಲ್ಲ. ಇದನ್ನು ಕಣ್ಣಾರೆ ನೋಡಿಯೂ ನಾನು ಸುಮ್ಮನಿದ್ದೆ. ಯಾಕೆಂದರೆ, ನಾನು ನಿಮ್ಮ ಹತ್ತಿರದ ಅಭಿಮಾನಿಯಾಗಿದ್ದೆ!
3. ರೇವಣ್ಣನ ಮಗ ಪ್ರಜ್ವಲ್ ‘ಸೂಟ್ ಕೇಸ್ ಇದ್ದರೆ ಮಾತ್ರ ಸೀಟು ಇಲ್ಲಿ’ ಎಂದಾಗ ಆತ ಹೇಳಿದ್ದು ಸತ್ಯವಾಗಿದ್ದರೂ ನಾನು ವಿರೋಧಿಸಿದ್ದೆ. ಸ್ನೇಹಿತರು ಪಕ್ಷದವರೇ ಹೀಗೆ ಹೇಳಕ್ ಶುರು ಹಚ್ಚಾವ್ರೆ ನಿಂದೇನು ಮತ್ತೆ ಎಂದಾಗಲೂ ನಾನು ಜೆಡಿಎಸ್ ಪರ ಇದ್ದೆ. ಯಾಕೆ ಗೊತ್ತಾ? ನಾನು ನಿಮ್ಮ ಕುಟುಂಬದ ಅಭಿಮಾನಿಯಾಗಿದ್ದೆ!
4. ಅಣ್ಣ, ನಿಮಗೆ ನೆನಪಿರಬಹುದು. ಅಪ್ಪಾಜಿಯವರು ‘ಮರುಜನ್ಮವಿದ್ದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ’ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಅದು ಒಕ್ಕಲಿಗ ಗೌಡರಿಗೆ ಮಾಡಿದ ಬಹುದೊಡ್ಡ ಅವಮಾನ ಎಂದು ಗೊತ್ತಿದ್ದರೂ ಮತ್ತೆ ನಿಮ್ಮ ಕಾಲ ಹತ್ತಿರ ಬಂದಿದ್ದೆ. ಯಾಕೆಂದರೆ, ನಾನು ಅಪ್ಪಾಜಿಯವರನ್ನು ದೇವರೆಂದೇ ಅಂದುಕೊಂಡಿದ್ದೆ.
5. ಅಪ್ಪಾಜಿಯವರು ಮತ್ತೆ ಮತ್ತೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾಗ ಅದೆಷ್ಟೇ ಕೆರಳಿದರೂ ಸಹ ಸುಮ್ಮನೇ ಇದ್ದೆ. ಮತ್ತೆ ಅಪ್ಪಾಜಿ ಪರ ಮಾತಾಡಿದ್ದೆ. ಯಾಕೆಂದರೆ ನಾನು ಜೆಡಿಎಸ್ ನನ್ನು ಕುರುಡನಂತೆ ನಂಬಿದ್ದೆ.
6. ಪ್ರತೀ ಚುನಾವಣೆಯಲ್ಲೂ ಕೊನೇ ಬಾರಿಯ ಚುನಾವಣೆ ಅಂತಲೇ ಟೋಪಿ ಇಕ್ತಾರಲ್ಲೋ ನಿನ್ ಅಪ್ಪಾಜಿ ಎಂದಾಗಲೂ ನಾನು ಸಮರ್ಥಿಸಿದ್ದೆ.
ರಾಜಕೀಯದಲ್ಲಿ ಇದೆಲ್ಲ ಮಾಮೂಲು ಎಂದೆಲ್ಲ ವಾದಿಸಿ ಸಮರ್ಥಿಸಿಕೊಂಡಿದ್ದೆ. ಯಾಕೆಂದರೆ, ನಿಮ್ಮನ್ನು ಬಲು ಹತ್ತಿರದಿಂದ ನೋಡಿದ್ದ ಅಭಿಮಾನಿಯಾಗಿದ್ದೆ ನಾನು.
7. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೊರಡ್ತೇನೆ ಅಂದು ಅಪ್ಪಾಜಿಯವರು ಹುಟ್ಟಿದ ಕನ್ನಡ ಮಣ್ಣಿಗೆ ಅವಮಾನ ಮಾಡಿದಾಗಲೂ ಮುಚ್ರೋ ಬಾಯಿ ಅಂತಲೇ ಟೀಕಾಕಾರರಿಗೆ ಧಮಕಿ ಹಾಕಿದ್ದೆ. ಯಾಕೆಂದರೆ ನಾನು ನಿಮ್ಮ ಬಹಳದೊಡ್ಡ ಅಭಿಮಾನಿಯಾಗಿದ್ದೆ.
ಹೀಗೆ ಏನೇನೋ ಆಗಿ ಹೋಯಿತು ಕುಮಾರಣ್ಣ! ಆದರೂ ಸುಮ್ಮನಿದ್ದೆ ನಾನು! ಆದರೆ, ಇನ್ನು ಸಹಿಸಲಿಕ್ಕೆ ಸಾಧ್ಯವೇ ಇಲ್ಲ. ಯಾಕೆ ಗೊತ್ತಾ? ಒಬ್ಬ ದಕ್ಷ ಅಧಿಕಾರಿಗೆ ನ್ಯಾಯ ಒದಗಿಸುವಲ್ಲಿ ನೀವು ಹಿಂದೇಟು ಹೊಡೆದಿರಿ ಇವತ್ತು. ಅದನ್ನು ಸಮರ್ಥಿಸಿಕೊಂಡಿರಿ. . ಇನ್ನೊಂದೆರಡು ವರ್ಷಗಳಲ್ಲಿ ನನ್ನ ಮಕ್ಕಳೂ ಸಹ ಅಧಿಕಾರಿಯ ಸ್ಥಾನಕ್ಕೆ ಬರುವವರೇ. ಮುಂದೊಂದು ದಿನ ಡಿವೈಎಸ್ಪಿ ಗಣಪತಿಯವರ ಗತಿಯೇ ನನ್ನ ಮಕ್ಕಳಿಗಾದರೆ? ಇದಕ್ಕೆಲ್ಲ ಉತ್ತರ ಬೇಕಿದೆ ಅಣ್ಣ.
ಸತ್ಯ ಹೇಳುತ್ತೇನೆ! ಜೆಡಿಎಸ್ ಗೆ ತೀರಾ ಎನ್ನುವಷ್ಟು ಕೆಲಸ ಮಾಡಿದ್ದೇನೆ. ನಿಮ್ಮ ಕುಟುಂಬವನ್ನು ತೀರಾ ಎನ್ನುವಷ್ಟು ಹತ್ತಿರದಿಂದ ನೋಡಿ ದೇವರೆನ್ನುವಷ್ಟು ಅಭಿಮಾನವಿರಿಸಿಕೊಂಡಿದ್ದವನು ನಾನು. ಆದರೆ, ಇವತ್ತು ನನ್ನ ಹಾಗೂ ಜೆಡಿಎಸ್ ನ ಅದೆಷ್ಟೋ ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಯಾಕೆ ಗೊತ್ತಾ? ಮತ್ತೆ ನಾನು ಅಪ್ರಾಮಾಣಿಕನಾಗಲು, ದಕ್ಷ ಅಧಿಕಾರಿಯ ಸಾವಿಗೆ ಅನ್ಯಾಯವೆಸಗುತ್ತಿರುವವರ ಪಕ್ಷದ ಕಾರ್ಯಕರ್ತನಾಗಿರಲು ಒಬ್ಬ ಸ್ವಾಭಿಮಾನಿಯಾದ ದಕ್ಷ ಒಕ್ಕಲಿಗನಾಗಿದ್ದರಿಂದ ಸಹಿಸಲು ಸಾಧ್ಯವೇ ಇಲ್ಲ!
ಹಾಗಂತ ನಿಮ್ಮ ಪಕ್ಷ ಬಿಟ್ಟ ತಕ್ಷಣ ಬೇರೆ ಪಕ್ಷಕ್ಕೆ ಓಡಿ ಹೋಗಿ ಆಸರೆ ಕೇಳಿಕೊಂಡು ಹೋಗುವ ಬಯಕೆಯೂ ಇಲ್ಲ. ಬೇರೆ ಪಕ್ಷದವರು ಪ್ರಾಮಾಣಿಕ ಆಡಳಿತ ಕೊಡುತ್ತಾರೆಂದು ಮನವರಿಕೆಯಾದರೆ ಹೋಗುತ್ತೇನೆ. ಆದರೆ.. ಜೆಡಿಎಸ್ ಗೆ ಮಾತ್ರ ಮರಳುವುದಿಲ್ಲ.
– ಡಿ. ರಂಗೇ ಗೌಡ, ಮಂಡ್ಯ