ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ಜಾರಿಗೆ ತಂದಿದ್ದ ನೇರ ನಗದು ವರ್ಗಾವಣೆ ಪದ್ಧತಿಯಿಂದ 58 ಸಾವಿರ ಕೋಟಿ ರೂಪಾಯಿ ಕೋಟಿಗಳಷ್ಟು ಉಳಿತಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಡುಗೆ ಅನಿಲ, ಸೀಮೆಎಣ್ಣೆ ಮತ್ತು ಆಹಾರ ಸಬ್ಸಿಡಿಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಪಾಲಾಗುತ್ತಿದ್ದ ಸಬ್ಸಿಡಿ ಸದ್ಭಳಕೆಯಾಗುತ್ತಿದ್ದು ಸೋರಿಕೆಗೆ ಕಡಿವಾಣ ಬಿದ್ದಿದೆ.!! ಜತೆಗೆ ಸರ್ಕಾರ ಬೊಕ್ಕಸಕ್ಕೆ ಗಮನಾರ್ಹ ಪ್ರಮಾಣದಲ್ಲಿ ಉಳಿತಾಯ ಕೂಡ ಸಾಧ್ಯವಾಗಿದೆ. ಸರ್ಕಾರ ಇದುವರೆಗೆ 3 ಕೋಟಿಗಳಷ್ಟು ಅಕ್ರಮ ಎಲ್‍ಪಿಜಿ ಸಂಪರ್ಕ ಮತ್ತು 2 ಕೋಟಿ 7 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿರೋದು ಈ ಸಕ್ಸಸ್‍ಗೆ ಕಾರಣವಾಗಿದೆ.
ನೇರ ನಗದು ವರ್ಗಾವಣೆ ಅನ್ನುವುದು ಸಮಾಜ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅನುಕೂಲಗಳನ್ನು ಹಂಚಲು ಇಡೀ ಜಗತ್ತಿನಲ್ಲಿ ಅನುಸರಿಸುತ್ತಿರುವ ಮಾರ್ಗ.
ಅದನ್ನು ಅರಿತುಕೊಂಡೇ ಹಲವು ಪ್ರಾಯೋಗಿಕ ಯೋಜನೆಗಳು ಯುಪಿಎ ಸರಕಾರದ ಅಧಿಕಾರಾವಧಿಯಲ್ಲಿ ಜಾರಿಗೆ ಬಂದವು. ಹಿಂದಿನ ಸರಕಾರದಲ್ಲಿ ಹಣಕಾಸು
ವ್ಯವಸ್ಥೆಯಗಲೀ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯವಾಗಲೀ ಸರಿಯಾಗಿಲ್ಲದ ಕಾರಣ ಯೋಜನೆ ಯಶಸ್ಸು ಕಾಣಲಿಲ್ಲ. ಅಂದಹಾಗೆ ನೇರ ನಗದು ವರ್ಗಾವಣೆಯ ಉಪಯೋಗ ಅರಿತು ಮೋದಿ ನೇತೃತ್ವದ ಸರಕಾರ ಈ ಯೋಜನೆಯನ್ನು ಅಭಿವೃದ್ಧಿಪಡಿಸಿ ನೇರ ನಗದು ಯೋಜನೆಯನ್ನು ಜನರಿಗೆ ಉಪಕಾರಿಯನ್ನಾಗಿ ಮಾಡುತ್ತಾರೆ.
ಸಬ್ಸಿಡಿ ನೇರ ನಗದು ವರ್ಗಾವಣೆ ಅಂದರೆ ಏನು? ಅದು ಏಕೆ ಮುಖ್ಯ?
ಸರಕಾರವು ನೀಡುವ ಸಹಾಯಧನ, ಸರಕುಗಳ ಮೇಲಿನ ರಿಯಾಯಿತಿಯನ್ನು ಫಲಾನುಭವಿಯ ಖಾತೆಗೆ ನೇರವಾಗಿ ಜಮೆ ಮಾಡುವುದಕ್ಕೆ ಸಬ್ಸಿಡಿ ನೇರ ನಗದು
ವರ್ಗಾವಣೆ ಅನ್ನುತ್ತಾರೆ. ಇದರಿಂದ ಸಮಾಜ ಕಲ್ಯಾಣ ಯೋಜನೆಗಳಲ್ಲಿನ ಸೋರಿಕೆಯನ್ನು ತಡೆಯಬಹುದು. ಜತೆಗೆ ಮಧ್ಯವರ್ತಿಗಳ ಪ್ರವೇಶವೂ ನಿಂತು, ಸರಕಾರದ ಯೋಜನೆಗಳ ದುರುಪಯೋಗ ತಡೆಯಬಹುದು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಪರಿಸ್ಥಿತಿ ಹೇಗಿದೆ? ಎಲ್ಲ ಒಳ್ಳೆ ಯೋಜನೆಗಳಂತೆಯೇ ನೇರ ನಗದು ವರ್ಗಾವಣೆ ಕೂಡ ಯಾವುದೇ ಸರಕಾರಕ್ಕೆ ಕಷ್ಟವಾದದ್ದೇ. ವಿವಿಧ ಇಲಾಖೆಗಳ ಮಧ್ಯೆ ಹೊಂದಾಣಿಕೆ ಕೂಡ ಬಹಳ ಮುಖ್ಯವಾಗುತ್ತದೆ. ಜತೆಗೆ ಹಣಕಾಸಿನ ವ್ಯವಸ್ಥೆ ಹಾಗೂ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯ ಕೂಡ ತುಂಬ ಮುಖ್ಯ. ಸರಕಾರದ ಯೋಜನೆಗಳಲ್ಲಿ ಈ ಪದ್ಧತಿ ತರಲು ವ್ಯವಸ್ಥಿತವಾಗಿ ಕ್ರಮ ಅನುಸರಿಸಲಾಗುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ ಎಲ್‍ಪಿಜಿ ಗೆ ಅಂದರೆ ಅಡುಗೆ ಅನಿಲಕ್ಕೆ ಈ ರೀತಿ ಸಬ್ಸಿಡಿ ಹಣ ವರ್ಗಾವಣೆಯಲ್ಲಿ ಯಶಸ್ಸು ಕಾಣದಿರುವುದಕ್ಕೆ ಕಾರಣ ಬ್ಯಾಂಕಿಂಗ್ ವ್ಯವಸ್ಥೆ ಎಲ್ಲ ಕಡೆ ಇರಲಿಲ್ಲ ಹಾಗೂ ಮೂಲಸೌಕರ್ಯದ್ದೇ ಕೊರತೆ ಇತ್ತು.
ಆದ್ದರಿಂದಲೇ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಜನ್ ಧನ್ ಖಾತೆಗಳನ್ನು ಮಾಡಿಸಿತು. ಇಪ್ಪತ್ತೆಂಟು ಕೋಟಿಗೂ ಹೆಚ್ಚು ಜನ್ ಧನ್ ಖಾತೆ
ಮಾಡಿಸಿದ್ದರಿಂದ ನೇರ ನಗದು ವರ್ಗಾವಣೆ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿತು. ಇನ್ನು ಆಧಾರ ನೋಂದಣಿ ಹಾಗೂ ಅದನ್ನು ಬ್ಯಾಂಕ್ ಖಾತೆಗಳಿಗೆ
ಜೋಡಣೆ ಮಾಡುವುದಕ್ಕೆ ತೆಗೆದುಕೊಂಡ ಕ್ಷಿಪ್ರ ಕ್ರಮ ಕೂಡ ಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಸದ್ಯಕ್ಕೆ ಹದಿನೈದು ಸಚಿವಾಲಯಗಳ ಎಂಬತ್ತಕ್ಕೂ ಹೆಚ್ಚು ಯೋಜನೆಗಳು ನೇರ ನಗದು ವರ್ಗಾವಣೆ ಅಡಿಯಲ್ಲಿ ಬಂದಿವೆ. ಈ ರೀತಿ ನೇರ ನಗದು ವರ್ಗಾವಣೆಯ ಪರಿಣಾಮಕಾರಿ ಅನುಷ್ಠಾನದಿಂದ ಕಳೆದ ಮೂರು ವರ್ಷದಲ್ಲಿ ಐವತ್ತು ಸಾವಿರ ಕೋಟಿಗೂ ಹೆಚ್ಚು ಹಣ ಉಳಿತಾಯ ಆಗಿದೆ. ಯುಪಿಎ ಸರಕಾರದ ಅವಧಿಯಲ್ಲಿ 7,367 ಕೋಟಿ ರುಪಾಯಿ ಮಾತ್ರ ಈ ಪದ್ಧತಿಯಲ್ಲಿ ವಿತರಿಸಲಾಗಿತ್ತು. ಆಗ ಹತ್ತೂ ಮುಕ್ಕಾಲು ಕೋಟಿಯಷ್ಟು ಫಲಾನುಭವಿಗಳಿದ್ದರು. ಎನ್‍ಡಿಎ ಅಧಿಕಾರಕ್ಕೆ ಬಂದ ಮೇಲೆ 2016-17ರಲ್ಲಿ 74, 502 ಕೋಟಿ ರುಪಾಯಿಯನ್ನು ವಿತರಿಸಲಾಗಿದೆ. ಮೂವತ್ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ.
ಪಹಲ್-ಎ ಯಶಸ್ಸು
ಎಲ್‍ಪಿಜಿಗೆ ಸಬ್ಸಿಡಿಯನ್ನು ನವೆಂಬರ್ ನಲ್ಲಿ ಪರಿಚಯಿಸಿದಾಗ ಸ್ವಯಂಪ್ರೇರಿತರಾಗಿ ನೋಂದಣಿ ಆದವರಿಗೆ ಮಾತ್ರ ನೇರ ನಗದು ವರ್ಗಾವಣೆ ಮಾಡಲಾಗುತ್ತಿತ್ತು. ಹದಿನೇಳೂವರೆ ಕೋಟಿ ಮಂದಿ ಇದೀಗ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆ ಮೂಲಕ ಪಡೆಯುತ್ತಿದ್ದಾರೆ. ಇದರಿಂದ ಅಡುಗೆ ಅನಿಲ ಸಿಲಿಂಡರ್ ಗಳ ಕಾಳದಂಧೆಯನ್ನು ಮಟ್ಟ ಹಾಕಲು ಸರಕಾರಕ್ಕೆ ಸಾಧ್ಯವಾಯಿತು.
ಗೊಬ್ಬರದ ಸಹಾಯಧನ ಇನ್ನು ಬಹು ನಿರೀಕ್ಷಿತ ಗೊಬ್ಬರ ಸಹಾಯಧನವು ಈ ವರ್ಷದಿಂದ ಜಾರಿಗೆ ಬರಲಿದೆ. ಎಪ್ಪತ್ತು ಸಾವಿರ ಕೋಟಿ ರುಪಾಯಿಯನ್ನು ಎರಡು ಲಕ್ಷ ಪಾಯಿಂಟ್ ಆಫ್ ಸೇಲ್ಸ್ ಮಶೀನ್ ಮೂಲಕ ವಿತರಿಸಲಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣದ ಮೂಲಕ ರೈತರು ಅದನ್ನು ಪಡೆಯಲಿದ್ದಾರೆ. ಮಾರಾಟ ನಂತರ ಸಬ್ಸಿಡಿ ವಿತರಿಸುವ ಯೋಜನೆ ಈಗಾಗಲೇ ಪ್ರಾಯೋಗಿಕವಾಗಿ ದೇಶದ ಹದಿನೇಳು ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ಅದರ ಅನುಷ್ಠಾನ ಪರಿಣಾಮಕಾರಿಯಾಗಿ ಆದರೆ ಆರ್ಥಿಕ ಸುಧಾರಣೆಯಲ್ಲೇ ಮೈಲುಗಲ್ಲಾಗಲಿದೆ. ಗೊಬ್ಬರ ಸಬ್ಸಿಡಿಯಲ್ಲಿ ಈಗ ಆಗುತ್ತಿರುವ ಸೋರಿಕೆ ತಡೆಯುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದ ಸಾಲಿನಲ್ಲಿ ಸಬ್ಸಿಡಿ ನೇರ ನಗದು ಯೋಜನೆ ಜನರಿಗೆ ಅತ್ಯಂತ ದೊಡ್ಡ ಉಪಕಾರಿಯಾದ ಯೋಜನೆಯೆಂದೇ
ಹೇಳಬಹುದು..
-ಪವಿತ್ರ