ಅಂಕಣಪ್ರಚಲಿತ

ಗೋಬಿ ಮಂಚೂರಿ, ಸಮೋಸ ಸವಿಯುವಾಗ ಆತನ ನೆನಪೂ ನಮಗೆ ಕಾಡದು.. ಅಲ್ಲವೇ??

ಆ ವ್ಯಕ್ತಿ ವಿದ್ಯಾವಂತನಲ್ಲ. ಆ ವ್ಯಕ್ತಿಗೆ ತಂತ್ರಜ್ಞಾನದ ಬಗ್ಗೆ ಅರಿವಿಲ್ಲ. ಆ ವ್ಯಕ್ತಿಗೆ ಕುವಂಪು, ಬೇಂದ್ರೆ ಯಾರು ಅಂತ‌ ಗೊತ್ತಿಲ್ಲ. ಆದರೂ ಆತ‌ ಮಹಾ ಚಾಣಾಕ್ಷ. ಯಾಕೆಂದರೆ ಆತನಿಗೆ ಮಳೆಯ ಆರ್ಭಟದ ಅರಿವಿದೆ., ಬಿಸಿಲಿನ ಪ್ರಖರತೆಯ‌ ಅರಿವಿದೆ, ಇವೆಲ್ಲಕ್ಕಿಂತ‌ ಮುಖ್ಯವಾಗಿ ಆತನಿಗೆ ಭೂಮಿಯನ್ನು ಸೀಳುವುದು ಗೊತ್ತು. ಎರಡು ಗ್ರಾಮಿನ ಬೀಜಕ್ಕೆ ಕ್ವಿಂಟಾಲ್ ಗಟ್ಟಲೆ ತೂಕ ಬರಿಸುವುದು ಗೊತ್ತು..

ಕಾರಣ.. ಆತ ಒಬ್ಬ ರೈತ…!!

ನಮ್ಮ ದೇಶದ ದುರವಸ್ಥೆ ನೋಡಿ. ಇಡೀ ಜಗತ್ತಿನ ಹಸಿವನ್ನು ನೀಗಿಸುವ ಈ ಮನುಷ್ಯ ಇವತ್ತು ಅದೆಲ್ಲೋ ಇರಬೇಕಾಗಿತ್ತು. ಆದರೆ ಗುಡಿಸಲುನಲ್ಲಿ ವಾಸ ಮಾಡುತ್ತಿದ್ದಾನೆ. ತಮಾಷೆಯ ವಿಚಾರವೇನು ಗೊತ್ತಾ? ನಮಗೆಲ್ಲಾ ಗೋಬಿ ಮಂಚೂರಿಗೆಂದು ಆತ‌ ಬೆಳೆಸಿದ ಕಾಲಿಫ್ಲವರ್ ಬೇಕು. ಗರಿಗರಿ ಸಮೋಸಕ್ಕೆಂದು ಆತನ ಆಲೂಗಡ್ಡೆ ಬೇಕು.‌ಆದರೆ ಇವೆಲ್ಲವನ್ನೂ ನೀರುಣಿಸಿ ಬೆಳೆಸಿದ ರೈತ ಮಾತ್ರ ನಗಣ್ಯ ! ತಾನು ಬೆಳೆದ ಬೆಳೆಗೆ ಸರಿಯಾದ‌ ಬೆಲೆಯೂ ಸಿಗದೇ ಅಂತಿಮವಾಗಿ ಆತ್ಯಹತ್ಯೆ‌ ಮಾಡಿದರೆ, ಅಂಥದೊಂದು ಸಾವು ನಮ್ಮಲ್ಲಿ ಒಂದು ವಿಷಾದದ ಉಸಿರನ್ನೂ ಹುಟ್ಟಿಸುವುದಿಲ್ಲ… ನಾಚಿಕೆಗೇಡಿನ ಸಂಗತಿಯಲ್ಲವೇ ಇದು ???

ಭಾರತದ ಭೂಮಿಯೆಂದರೆ ಅದು ಕೃಷಿಗೆ ಯೋಗ್ಯವಾದ ಭೂಮಿ. ನಮ್ಮ ದೇಶದ ವಾತಾವರಣವನ್ನು ನಾವು ನಿರೀಕ್ಷಿಸಬಹುದು.. ಆದರೆ ಇತರೆ ದೇಶಗಳಿಗೆ ಹಾಗಲ್ಲ. ಅಲ್ಲಿ ಯಾವಾಗ ಮಂಜು ಕವಿಯುತ್ತೆ, ಯಾವಾಗ ಬಿಸಿಲು ಬರುತ್ತೆ ಅನ್ನುವುದು ಖಾತ್ರಿಯಿಲ್ಲ. ಒಟ್ಟಿನಲ್ಲಿ ಅಲ್ಲಿ ಒಂಥರಾ ಅನಿಶ್ಚಿತ ಬದುಕು. ಹೀಗಾಗಿ ಅಲ್ಲಿ ಕೃಷಿ ಬೆಳೆದಿಲ್ಲ. ನಮ್ಮಲ್ಲಿ ಎಲ್ಲವೂ ನಿರೀಕ್ಷಿತ. ಆದರೂ ನಮ್ಮ ದೇಶದ ರೈತನಿಗೆ ಈ ಪರಿಸ್ಥಿತಿ ಯಾಕೆ ಬಂತು?? ಅವಲೋಕನ ಮಾಡಬೇಕಿದೆ..

ಬ್ರಿಟಿಷರು ಭಾರತಕ್ಕೆ ಆಗಮಿಸುವ ಮುಂಚೆ ಇಲ್ಲಿನ ಕೃಷಿಯ ಸ್ಥಿತಿ ನೋಡಿದರೆ ನೀವು ಬೆಚ್ಚಿಬೀಳುತ್ತೀರಿ. ನಿಜ. ಇವತ್ತಿಗೆ ನೂರು, ಇನ್ನೂರು ವರ್ಷಗಳ ಮುಂಚೆ ಭಾರತ‌ ಹಾಗೂ ಚೀನಾಗಳೆರಡರ ಆಹಾರ ಉತ್ಪಾದನೆ ಜಗತ್ತಿನ ಉತ್ಪಾದನೆಯ 70% ನಷ್ಟಿದ್ದವು. ಬ್ರಿಟನ್ನಿನ ಒಂದು ಎಕರೆ ಭೂಮಿಯಲ್ಲಿ ಬೆಳೆಯುವ ಆಹಾರ ಧಾನ್ಯಕ್ಕೆ ಹೋಲಿಸಿದರೆ ಅದರ ಮೂರು ಪಟ್ಟು ಜಾಸ್ತಿ ಇಲ್ಲಿನ ರೈತರು ಒಂದು ಎಕರೆಯಲ್ಲಿ ಬೆಳೆಸುತ್ತಿದ್ದರು. ಒಂದು ಕಾಲದಲ್ಲಿ ಶ್ರೀಮಂತನಾಗಿದ್ದ, ಅತಿಯಾಗಿ ಗೌರವಿಸಲ್ಪಡುತ್ತಿದ್ದ ಅದೇ ರೈತ ಇವತ್ತು ಬಡ ರೈತ ಹಾಗೂ ಆತ ನಮಗೆಲ್ಲಾ ಕ್ಷುಲ್ಲಕ ವ್ಯಕ್ತಿಯಾಗಿದ್ದಾನೆ.

ಬ್ರಿಟಿಷರು ಭಾರತವನ್ನು‌ ವಶಪಡಿಸಲು ಹಲವು ಮಾರ್ಗಗಳನ್ನು ಆಲೋಚಿಸುತ್ತಿದ್ದರು. ಆಗ ಅವರು ಮಾಡಿದ್ದು ರೈತನ – ತೇಜೋವಧೆ. ಯಾಕೆಂದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು, ಯಾವದೇ ದೇಶದ ಜನತೆಯನ್ನು ಗುಲಾಮರನ್ನಾಗಿಸಬೇಕಾದರೆ , ಪ್ರಥಮವಾಗಿ ಆ ದೇಶದ ಆರ್ಥಿಕ ವ್ಯವಸ್ಥೆಯನ್ನು ಹದೆಗಡಿಸಬೇಕೆಂಬುದು. ನಂತರ ರಾಜಕೀಯ ವ್ಯವಸ್ಥೆ. ಇಷ್ಟು ಮಾಡಿದರೆ ತನ್ನಿಂತಾನೆ ಸಾಮಾಜಿಕ ವ್ಯವಸ್ಥೆ ಕುಸಿಯುತ್ತದೆ.

ರೈತನ ಮೇಲೆ ಪ್ರಹಾರವನ್ನೇ ಮಾಡಲಾಯಿತು. ಆತನ ಮೇಲೆ ಅನಾಮತ್ತಾಗಿ 50% ತೆರಿಗೆ ಹಾಕಲಾಯಿತು. ತೆರಿಗೆ ನೀಡದವರನ್ನು ನಿರ್ದಯತೆಯಿಂದ ಹತ್ಯೆ ಮಾಡಲಾಯಿತು. ಅವರಿಗೆ ನಿಮ್ಮ ಜೇಬನ್ನು ಕತ್ತರಿಸುನ ಯೋಜನೆ ಬಂದಾಗಲೆಲ್ಲ ನೇರವಾಗಿ ಯಾವತ್ತೂ ಅವರು ಜೇಬಿಗೆ ಕೈ ಹಾಕಲ್ಲ. ಅದಕ್ಕೆ ಒಂದು ಕಾನೂನನ್ನು ಸಿದ್ಧ ಪಡಿಸುತ್ತಾರೆ. ನಂತರ ಅದೇ ಕಾನೂನನ್ನು ಪಾಲಿಸುತ್ತೇವೆಂದು ಹೇಳಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಾರೆ.

ರೈತ ಬೆಳೆದ ಬೆಳೆಯ ಅರ್ಧದಷ್ಟು ಸರಕಾರಕ್ಕೆ ಕೊಡಬೇಕೆಂದು ಫರ್ಮಾನು ಹೊರಡಿಸಿದ ಮೇಲೆ ಮತ್ತೊಂದು ಕಾನೂನು ತರಲಾಯಿತು. ಅದು ಭೂ-ಸ್ವಾಧೀನ ಕಾಯಿದೆ. ಇಂಥ ಒಂದು ಕಾನೂನು ಬರುವುದಕ್ಕೆ ಮುಂಚೆ ಇಲ್ಲಿನ ರೈತ ತನ್ನ ಭೂಮಿಯನ್ನು ಬಿಡಿ, ಸ್ವತ: ಹಾಲನ್ನೂ ಮಾರಿದವನಲ್ಲ. ಯಾಕೆಂದರೆ ಪ್ರತೀ ಭಾರತೀಯನೂ ಕೃಷಿ ಮಾಡುತ್ತಿದ್ದ. ಭಾರತದ ಆಧಾರಸ್ತಂಭವೇ ಕೃಷಿಯಾಗಿತ್ತಲ್ಲವೇ ಒಂದು ಕಾಲದಲ್ಲಿ?? ಅಂಥಾದ್ದರಲ್ಲಿ ಡಾಲ್ ಹೌಸೀಯೆಂಬ ಭ್ರಷ್ಟ ಅಧಿಕಾರಿ ಈ ಕಾನೂನನ್ನೇ ನೆಪವಾಗಿಟ್ಟು ರೈತರ ಸಾವಿರಾರು ಎಕರೆ ಭೂಮಿಯನ್ನು ಕಸಿದುಕೊಂಡ. ಆಗ ನಮ್ಮ ರೈತರೆಲ್ಲ ತಮ್ಮ ಕಸುಬಿನ ಮೇಲೆಯೇ ಜಿಗುಪ್ಸೆಗೊಳ್ಳತೊಡಗಿದರು. ಇಷ್ಟಾದ ಮೇಲೂ ಭಾರತೀಯ ರೈತನ ಜೀವಂತ ಸಮಾಧಿಗೆಂದು ಬ್ರಿಟಿಷರು ಮಾಡಿದ, ರೂಪಿಸಿದ ಅಂತಿಮ ಕುತಂತ್ರವೇ ಗೋಹತ್ಯೆ.

ಗೋವು ಕೃಷಿಯ ಅವಿಭಾಜ್ಯ ಅಂಗವೇ ಆಗಿತ್ತು. ಹಾಗಾಗಿ ಅವುಗಳನ್ನು ಹತ್ಯೆಗೈದರೆ ಭಾರತದ ಆರ್ಥಿಕತೆ ಮಣ್ಣುಪಾಲಾಗುತ್ತದೆಂಬ ಸ್ಪಷ್ಟನಿಲುವು ಅವರಲ್ಲಿತ್ತು. ಅದರ ಹಾಲು ಕುಡಿದ ರೈತ ದಣಿವಿಲ್ಲದೇ ಇಡೀ ದಿವಸ ತನ್ನ ಬೆವರಿನಿಂದ ಹೊಲವನ್ನು ತೊಯ್ಯಿಸುತ್ತಿದ್ದರೆ, ಮಗದೊ೦ಡೆ ಅದೇ ಹಸುವಿನ ಮೂತ್ರವನ್ನು ಕೀಟನಾಶಕದಂತೆ, ಅದರ ವಿಸರ್ಜನೆಯನ್ನು ಗೊಬ್ಬರದಂತೆ ಬಳಸುತ್ತಿದ್ದ. ಇದನ್ನೆಲ್ಲಾ ಗಮನಿಸಿದ ಬ್ರ್ಟಿಷರು ಹಸುವಿನ ರುಂಡವನ್ನು ಕತ್ತರಿಸತೊಡಗಿದರು.

ಮುಂದೆಂದೂ ಆ ರೈತ ಮೇಲೇಳದಂತೆ ಮಾಡಿ ಕುತಂತ್ರಿಗಳು ಅಲ್ಲಿಂದ ಕಾಲ್ಕಿತ್ತರು.. ಆದರೆ ಭಾರತೀಯರಾದ ‌ನಮಗೇನಾಗಿದೆ??ರೈತನೆಂದರೆ ನಮಗೆ ಯಾವತ್ತೂ ಅಸಡ್ಡೆ. ತಂತ್ರಯಾನದ ಅಭಿವೃದ್ದಿಗೆ ತಕ್ಷಣ ಸಾಲ ನೀಡುವ ಬ್ಯಾಂಕುಗಳು ರೈತರನ್ನು ತಿಂಗಳುಗಟ್ಟಲೇ ಅಲೆದಾಡಿಸುತ್ತವೆ. ಅತ್ತ‌‌ ವರಮಾನವೂ ಇಲ್ಲದೇ, ಇತ್ತ ಸಾಲವೂ ಸಿಗದೇ, ಬೆಳೆಯನ್ನೂ ಬೆಳೆಸಲಾಗದ ಅಶಕ್ತ‌ ರೈತನ ನೋವು ನಮಗೆ ಕಾಣಿಸುವದೇ ಇಲ್ಲ.

ಗೋಬಿ ಮಂಚೂರಿ ಸವಿಯುವ ಮುನ್ನ ನೇಗಿಲು ಹೊರಲಾಗದೇ, ನಿಶ್ಶಕ್ತಿಯಿಂದ ಕುಸಿದು ಬೀಳುತ್ತಿರುವ ಆ ಮನುಷ್ಯನ ಚಿತ್ರ ನಮ್ಮ ಕಣ್ಣೆದುರಿಗೆ ಬರುವುದೇ ಇಲ್ಲ!!!

ಮೆಕಾಲೆ ಭಾರತದಲ್ಲಿ ಆಂಗ್ಲ ಭಾಷೆಯನ್ನು ಪರಿಚಯಿಸಬೇಕಾದರೆ ತನ್ನ ತಂದೆಗೆ ಬರೆದ ಪತ್ರದಲ್ಲಿ ಒಂದು ಮಾತನ್ನು ಉಲ್ಲೇಖ ಮಾಡುತ್ತಾನೆ, “ಡಿಯರ್ ಫಾದರ್. ಇಲ್ಲಿ ಎಲ್ಲವೂ ಯೋಜನಾಬದ್ಧವಾಗಿ ನಡೆಯುತ್ತಿದೆ. ನೀವೇ ನೋಡುತ್ತಿರಿ. ಇನ್ನು ಕೆಲವೇ ವರ್ಷಗಳು ಅಷ್ಟೇ. ಇಂಡಿಯಾದಲ್ಲಿ ಜನರ ದೇಹ ಮಾತ್ರ ಭಾರತೀಯರದ್ದಾಗಿರುತ್ತದೆ, ಆದರೆ ಬುದ್ಧಿ ಮಾತ್ರ ವಿದೇಶೀಯರದ್ದಾಗಿರುತ್ತದೆ.”

ನೀವೇ ಅವಲೋಕನ ಮಾಡಿ ನೋಡಿ. ಅಂದು ಆತ‌ ನುಡಿದ ಮಾತನ್ನು ಇಂದು ನಾವೆಲ್ಲಾ ನನಸು ಮಾಡಲು ಪ್ರಯತ್ನಿಸುತ್ತಿದ್ದೇವೆ. ದು:ಸ್ಥಿತಿಯೆಂದರೆ ಇದೇ ಅಲ್ಲವೇ??

– ವಸಿಷ್ಠ

Tags

Related Articles

Close