ಗೌರಿ ಲಂಕೇಶ್…..!!!! ಈಕೆಯನ್ನು ಕೊಂದ ಹಂತಕ ಎಲ್ಲಿ ಅಡಗಿ ಕುಳಿತಿದ್ದಾನೋ ಗೊತ್ತಿಲ್ಲ. ಈಕೆಯನ್ನು ಆತ ಯಾಕೆ ಕೊಂದಿದ್ದಾನೋ ಎಂಬುವುದು ಆತನಿಗೇ ಗೊತ್ತು. ಆದರೆ ತಲೆಯಲ್ಲಿ ಲದ್ದಿ ತುಂಬಿಕೊಂಡ ಸ್ವಘೋಷಿತ ಬುದ್ಧಿ ಜೀವಿಗಳೆಲ್ಲಾ ಸೆಪ್ಟೆಂಬರ್ 12ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಗೌರಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸ್ತಾರಂತೆ. ಮಾಡಲಿ ಬಿಡಿ ಯಾಕೆಂದರೆ ಗೌರಿಯನ್ನು ಕೊಂದ ಹಂತಕ ಆದಷ್ಟು ಬೇಗ ಸಿಕ್ಕಿಬೀಳಲಿ ಎಂಬುವುದೇ ನನ್ನ ಆಶಯ ಕೂಡಾ…ಆದರೆ ಈ ಪ್ರತಿಭಟನೆ ನಡೆಸುವವರಿಗೆ ಗೌರಿ ಹಂತಕರು ಸಿಕ್ಕಿಬೀಳಬೇಕೆನ್ನುವ ಉದ್ದೇಶವನ್ನೇ ಹೊಂದಿಲ್ಲ ಎಂದೆನಿಸುತ್ತದೆ. ಯಾಕೆ ಗೊತ್ತಾ ಪ್ರತಿಭಟನೆಯ ನೆಪದಲ್ಲಿ ಒಂದಷ್ಟು ಜನರನ್ನು ಸೇರಿಸಿ, ಮೈಕ್‍ನಲ್ಲಿ ಹಿಂದೂ ಧರ್ಮ, ಸಂಘಪರಿವಾರ, ಮೋದಿಗೆ ಬಯ್ಯುವ ಒಂದು ಸಮಾವೇಶದಂತೆ ಆಗಬಹುದು. ಅಲ್ಲದೆ ಈ ಕೊಲೆಯನ್ನು ಯಾವುದಾದರೂ ಹಿಂದೂ ಸಂಘಟನೆಯ ತಲೆಗೆ ಕಟ್ಟಲು ನಡೆಸಿದ ಹುನ್ನಾರದಂತೆ ಕಂಡುಬರುತ್ತಿದೆ. ಒಟ್ಟಾರೆ ಈ ಪ್ರತಿಭಟನೆ ದಿಕ್ಕು ತಪ್ಪುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ರೀತಿ ಅನುಮಾನ ಮೂಡಲು ಒಂದು ಕಾರಣವೂ ಇದೆ.
ಹಿಂದೂಗಳಿಗೆ ಅವಮಾನ….!
ಗೌರಿ ಅಕ್ಕನ ಹಂತಕ ಸಿಗಲೆಂದು ಮಾಡುವ ಪ್ರತಿಭಟನೆ ಒಂದು ಒಳ್ಳೆಯ ನಿರ್ಧಾರ. ಯಾಕೆಂದರೆ ಭಾರತದಲ್ಲಿ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ ಇಲ್ಲಿ
ಪ್ರತಿಭಟನೆಗೆ ತಯಾರಿಸಿದ ಪೋಸ್ಟರ್ ನೋಡಿದರೆ ಯಾರಿಗಾದರೂ ರಕ್ತ ಕುದಿಯಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇನ್ನೊಬ್ಬರ ನಂಬಿಕೆ, ಶ್ರದ್ಧೆಯನ್ನೇ ಅಲುಗಾಡಿಸುವ ನೀಚಮಟ್ಟಕ್ಕೆ ಇಳಿದಿದ್ದಾರೆ ಈ ಗೌರಿ ಪರ ಹೋರಾಟಗಾರರು. ಅಷ್ಟಕ್ಕೂ ಇವರು ಮಾಡಿದ ಘನಾಂದಾರಿ ಕೆಲಸವೇನು ಗೊತ್ತಾ?
ಪ್ರತಿಭಟನೆಗೆ ಬಳಸಿದ ಪೋಸ್ಟರ್‍ನಲ್ಲಿ ತ್ರಿಶೂಲದಿಂದ ಲೇಖನಿಯನ್ನು ಕೊಲ್ಲುತ್ತಿರುವಂತೆ ಬಿಂಬಿಸಿ ಹಿಂದೂಗಳು ಕ್ರೂರಿಗಳು ಎಂದು ಚಿತ್ರಿಸಿ, ಸಮಾಜದ ಕೋಮು ಸಾಮರಸ್ಯವನ್ನು ಕದಡಲು ಇನ್ನಿಲ್ಲದ ಪ್ರಯತ್ನ ಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಈ ಪೋಸ್ಟರ್ ಕೋಮುಗಲಭೆಗೆ ಪ್ರೇರೇಪಣೆ ನೀಡುವಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಇನ್ನೊಬ್ಬರ ಧಾರ್ಮಿಕ ನಂಬಿಕೆಯನ್ನು ಕೆಟ್ಟದಾಗಿ ಬಿಂಬಿಸಿದರೆ ಅದು ಸಂವಿಧಾನ ವಿರೋಧ ಅನಿಸುತ್ತದೆ.
ಲೇಖನಿಯನ್ನು ಕೊಲ್ಲಲು ತ್ರಿಶೂಲವನ್ನೇ ಯಾಕೆ ಬಳಸಿರುವುದನ್ನು ನೋಡಿದಾಗ ಪ್ರತಿಭಟನಾಕಾರರ ಉದ್ದೇಶ ಏನೆಂದು ಈಗಲೇ ಸ್ಪಷ್ಟವಾಗಿ ಹೇಳಿಬಿಡಬಹುದು. ಯಾಕೆಂದರೆ ತ್ರಿಶೂಲವನ್ನು ಹಿಡಿದಿರುವುದು ಈಶ್ವರ. ದುಷ್ಟರನ್ನು ಸಂಹಾರ ಮಾಡಲು ಸಾಕ್ಷಾತ್ ಶಿವ ತ್ರಿಶೂಲವನ್ನು ಹಿಡಿದಿದ್ದಾನೆ. ಅಲ್ಲದೆ ಪುರಾಣಗಳಲ್ಲಿ ಹಲವು ದೇವತೆಗಳು ತ್ರಿಶೂಲಧಾರಿಯಾಗಿದ್ದಾರೆ. ಇಂತಹಾ ತ್ರಿಶೂಲದಲ್ಲಿ ಲೇಖನಿಯನ್ನು ಕೊಲ್ಲುವಂತೆ ಬಿಂಬಿಸಲಾಗಿದೆ ಎಂದರೆ ಪ್ರತಿಭಟನಾಕಾರರ ಉದ್ದೇಶ ಏನಿದೆ ಎಂಬುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು. ಒಂದು ಧರ್ಮದ ಧಾರ್ಮಿಕ ನಂಬಿಕೆಯ ಬಗ್ಗೆ ಅವಹೇಳನ ಮಾಡುವುದೆಂದರೆ ಅದು ಕಾನೂನು ವಿರುದ್ಧವಾದ ಕೆಲಸವಾಗಿದೆ. ಯಾಕೆಂದರೆ ಯಾವುದೇ ಧರ್ಮಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ದೇಶದ ಪ್ರತೀ ಪ್ರಜೆಗಳ ಕರ್ತವ್ಯ. ಆದರೆ ಜನರ ಭಾವನೆಗಳ ಜೊತೆ ಆಟವಾಡಿ ಇನ್ನೊಂದು ಧರ್ಮವನ್ನು ಎತ್ತಿಕಟ್ಟಿ ಅವರ ಕೋಮುಭಾವನೆಯನ್ನು ಕೆರಳುವಂತೆ ಮಾಡುವುದು ಕಾನೂನು ವಿರೋಧಿ ಚಟುವಟಿಕೆಯಾಗುತ್ತದೆ.
ಈ ಹಿಂದೆ ಕೆಲವೊಂದು ಆನ್‍ಲೈನ್ ಮಾರ್ಕೆಟ್ ಕಂಪೆನಿಗಳು ಹಿಂದೂ ದೇವರ ಭಾವಚಿತ್ರವನ್ನು ಅವಹೇಳನಕಾರಿಯಾಗಿ ಚಿತ್ರಿಸಿರಿವುದಕ್ಕೆ ಹಿಂದೂಗಳಿಂದ ಸರೀ
ಉಗಿಸಿಕೊಂಡಿದ್ದವು. ಸಾವಿರಾರು ಹಿಂದೂಗಳು ಆ ಕಂಪೆನಿಗಳ ವಿರುದ್ಧ ಕಾನೂನು ಹೋರಾಟ ಮಾಡಿದ್ದರಿಂದ ಕಂಪೆನಿಗಳು ಹೆದರಿದ್ದಲ್ಲದೆ ತನ್ನ ತಪ್ಪಿನ ಬಗ್ಗೆ
ಬಹಿರಂಗವಾಗಿ ಕ್ಷಮೆ ಕೇಳಿತ್ತು.
ಬಹುಸಂಖ್ಯಾತ ಧಾರ್ಮಿಕ ಪಂಗಡವಾಗಿರಲಿ ಅಥವಾ ಅಲ್ಪಸಂಖ್ಯಾತ ಪಂಗಡವಾಗಿರಲಿ, ಪ್ರತ್ಯಕ್ಷವಾಗಿ ಆಗಲಿ ಅಥವಾ ಪರೋಕ್ಷವಾಗಿ ಆಗಲಿ ದ್ವೇಷ ಪ್ರಚೋದಿಸಲು ಭಾರತದ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಜಗತ್ತಿನಲ್ಲಿ ಧರ್ಮದ ವಿಷಯಕ್ಕಾಗಿ ಒಡಕು ಹಾಗೂ ದ್ವೇಷ ಹೆಚ್ಚಾಗುತ್ತಿದೆ. ಎಲ್ಲಾ ಧಾರ್ಮಿಕ ನಂಬಿಕೆಗಳ ನಡುವೆ ಪರಸ್ಪರ ಗೌರವ ಅಗತ್ಯ ಎಂದು ಭಾರತ ಪ್ರಾಚೀನ ಕಾಲದಿಂದಲೂ ಪ್ರತಿಪಾದಿಸುತ್ತಿರುವ ತತ್ವ. ಆದ್ದರಿಂದ ಗೌರಿ ಲಂಕೇಶ್ ಪರ ಮಾಡಿರುವ ಪೋಸ್ಟರ್ ಸಮಾಜದಲ್ಲಿ ಅಸಹನೆಯನ್ನು ಎಬ್ಬಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಗೌರಿಯನ್ನು ಯಾಕೆ ಕೊಂದರು, ಯಾರು ಕೊಂದರು ಎಂದು ಇನ್ನೂ ಗೊತ್ತಾಗಿಲ್ಲ. ಆಕೆಯನ್ನು ನಕ್ಸಲೈಟ್ಸ್‍ಗಳೇ ಕೊಂದರೆಂಬ ಬಗ್ಗೆ ಸಂದೇಹವಿದೆ. ಕೊಲೆಯ ಬಗ್ಗೆ ಯಾವುದೇ ಸುಳಿವುಗಳು ಸಿಗದೇ ಇದ್ದರೂ ಪ್ರಗತಿಪರರು ಮಾತ್ರ ಅದನ್ನು ಬಲಪಂಥೀಯರ ತಲೆಗೆ ಕಟ್ಟಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಶುರುವಾಗಿದೆ ಕಾನೂನು ಹೋರಾಟದ ಅಭಿಯಾನ…!
`ಪ್ರತಿರೋಧ ಸಮಾವೇಶ, ನಾನು ಗೌರಿ’ ಎಂದು ಬರೆಯಲಾದ ಪೋಸ್ಟರ್‍ಗಳಲ್ಲಿ ಲೇಖನಿಯನ್ನು ತ್ರಿಶೂಲದಿಂದ ಕೊಲ್ಲುವಂತೆ ಬಿಂಬಿಸಿರುವುದು ಹಿಂದೂಗಳ ಧಾರ್ಮಿಕ ನಂಬಿಕೆಯ ಪ್ರಶ್ನೆಯಾಗಿರುವುದರಿಂದ ಇದರ ಬಗ್ಗೆ ಕಾನೂನು ಕ್ರಮ ಜರುಗಿಸಬಹುದು. ತ್ರಿಶೂಲ ಹಿಂದೂಗಳ ಧಾರ್ಮಿಕ ನಂಬಿಕೆಯ ಒಂದು ಸಂಕೇತವಾಗಿದೆ. ಅದನ್ನು ಹಿಂದೂಗಳ ಆರಾಧ್ಯ ದೇವರಾದ ಶಿವದೇವರು ಹಿಡಿದಿರುತ್ತಾರೆ. ಅದರಲ್ಲಿ ಲೇಖನಿಯನ್ನು ಕೊಲ್ಲುವಂತೆ ಚಿತ್ರಿಸಿರುವುದು ಹಿಂದೂಗಳ ಧಾರ್ಮಿಕ ನಂಬಿಕೆಯ ಅಘಾತ ಉಂಟು ಮಾಡಿರುವುದರಿಂದ ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಕಾನೂನು ಪರಿಪಾಲಕರನ್ನು ಆಗ್ರಹಿಸಬಹುದು ಎಂಬ ದೊಡ್ಡ ಮಟ್ಟದ ಆನ್‍ಲೈನ್ ಅಭಿಯಾನ ಶುರುವಾಗಿದೆ.
ಪೋಸ್ಟರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಪ್ರತಿಯೊಬ್ಬರೂ ಅವರವರ ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೆ ಇದೊಂದು
ಸಾಮೂಹಿಕ ಹೋರಾಟವಾಗುವದರಲ್ಲಿ ಎರಡು ಮಾತಿಲ್ಲ. ಹಿಂದೂಗಳನ್ನು ಅವಹೇಳನಗೈದ ಝಾಕಿರ್ ನಾೈಕ್, ಕೆ.ಎಸ್. ಭಗವಾನ್, ಚಲನಚಿತ್ರ, ಆನ್‍ಲೈನ್
ಮಾರ್ಕೆಟಿಂಗ್, ಮುಂತಾದ ಕಡೆಗಳಲ್ಲಿ ಹಿಂದೂಗಳು ಕಾನೂನು ಹೋರಾಟ ಮಾಡಿದ್ದಾರೆ. ಆದ್ದರಿಂದ ಈ ಪೋಸ್ಟರ್ ವಿರುದ್ಧ ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರು ನೀಡಬಹುದು ಎಂಬ ಅಭಿಯಾನ ಶುರುವಾಗಿದೆ.
ಚೇಕಿತಾನ