ಆರ್ಥಿಕ ಹೊಡೆತದಿಂದ ದೇಶವನ್ನು ಪಾರು ಮಾಡಲು ಮೋದಿ ಸರ್ಕಾರ ಮೋಡಿ ಮಾಡುತ್ತಲೇ ಇದ್ದು, ವಿದೇಶಿ ಬ್ಯಾಂಕ್ ಗಳಿಂದ ಕಪ್ಪು ಹಣವನ್ನು ಮರಳಿತರುವ ಕುರಿತಾಗಿ ಕಸರತ್ತು ಸಾಗಿದ್ದರೆ, ಮತ್ತೊಂದೆಡೆ ದೇಶದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ನಗದಾಗಿ ಪರಿವರ್ತಿಸುವ ಸಲುವಾಗಿ ಕೇಂದ್ರ ಸರಕಾರ ಚಿನ್ನ ನಗದೀಕರಣ ಯೋಜನೆಯನ್ನು ಜಾರಿಗೆ ತಂದಿದೆ!!
ಆಭರಣ ರೂಪದಲ್ಲಿ ಚಿನ್ನವನ್ನು ಉಪಯೋಗಿಸುವುದಾದರೆ ಮಾತ್ರ ಭೌತಿಕ ರೂಪದ ಚಿನ್ನವನ್ನು ಖರೀದಿಸಬಹುದಾಗಿದ್ದು, ಹೂಡಿಕೆ ಅಥವಾ ಉಳಿತಾಯಕ್ಕಾದರೆ ಚಿನ್ನದ ಬಾಂಡ್‍ಗಳನ್ನು ಖರೀದಿಸಬಹುದಾಗಿದೆ. ನಮ್ಮ ದೇಶದಲ್ಲಿರುವ ಚಿನ್ನವನ್ನು ಅರ್ಥವ್ಯವಸ್ಥೆಯಲ್ಲಿ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು 2015ರ ಸೆಪ್ಟೆಂಬರ್ ನಲ್ಲಿ ಚಿನ್ನ ನಗದೀಕರಣ ಯೋಜನೆಯನ್ನು ಜಾರಿಗೆ ತಂದಿತು. ಅಲ್ಲದೆ, ಉಳಿತಾಯಕ್ಕಾಗಿ ಚಿನ್ನದ ಬಾಂಡ್ ಗಳನ್ನು ಹಂತ-ಹಂತವಾಗಿ ಬಿಡುಗಡೆಗೊಳಿಸುತ್ತಿದೆ. 2015ರ ನವೆಂಬರ್ ನಿಂದ ಪ್ರಾರಂಭವಾದ ಚಿನ್ನದ ಬಾಂಡ್ ಯೋಜನೆಯಲ್ಲಿ ಇದುವರೆಗೆ 6 ಹಂತಗಳಲ್ಲಿ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಭಾರತ ಅತೀ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದ್ದು, ಈ ಚಿನ್ನವನ್ನು ಬಳಸಿಕೊಳ್ಳಲು ಮಹತ್ವಾಕಾಂಕ್ಷಿ ಚಿನ್ನ ನಗದೀಕರಣ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಚಿನ್ನದ ನಗದೀಕರಣದ ಹೊಸ ಕ್ರಾಂತಿ ಜಾಗತಿಕ ಅರ್ಥವ್ಯವಸ್ಥೆಗೆ ಹೊಸದೊಂದು ಸೂತ್ರವೆನಿಸಿದೆ ಎಂದು ವಿತ್ತೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಕೇಂದ್ರ ಸರ್ಕಾರ ಚಿನ್ನದ ನಗದೀಕರಣಕ್ಕೆ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ ಸವರನ್ ಗೋಲ್ಡ್ ಬಾಂಡ್ ಗೆ ತಾತ್ವಿಕ ಒಪ್ಪಿಗೆ ನೀಡಿದೆ. ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದೇ ಇದರ ಉದ್ದೇಶವಾಗಿದೆ!!
ಕೇಂದ್ರ ಸರ್ಕಾರದ ಚಿನ್ನದ ಬಾಂಡ್ ಗಳ ವೈಶಿಷ್ಟ್ಯಗಳು:
* ಕನಿಷ್ಠ 1 ಗ್ರಾಂ. ಕೊಳ್ಳುವ ಮೂಲಕ ಉಳಿತಾಯ ಮಾಡಬಹುದು. ಗರಿಷ್ಠ 500 ಗ್ರಾಂ.ವರೆಗೆ ಒಂದು ಆರ್ಥಿಕ ವರ್ಷದಲ್ಲಿ ಉಳಿತಾಯ ಮಾಡಬಹುದು.
* 8 ವರ್ಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ.
* ಅವಶ್ಯವೆನಿಸಿದರೆ 5 ವರ್ಷಗಳ ನಂತರ ಹಿಂಪಡೆಯಬಹುದು.
* ಶೇ. 2.75ರ ವಾರ್ಷಿಕ ಬಡ್ಡಿ ನಿಗದಿಪಡಿಸಲಾಗಿದ್ದು, ಗಳಿಸಿದ ಬಡ್ಡಿಯನ್ನು ಅರ್ಧವಾರ್ಷಿಕವಾಗಿ ಹೂಡಿಕೆದಾರರಿಗೆ ಮರಳಿಸಲಾಗುತ್ತದೆ.
* ಮೊದಲ ಎರಡು ಹಂತದ ಚಿನ್ನದ ಬಾಂಡ್ ಗಳು, ಒಂದು ವರ್ಷದ ಅವಧಿಯಲ್ಲಿ ಶೇ.18ರಿಂದ 20ರಷ್ಟು ಗಳಿಕೆಯನ್ನು ನೀಡಿವೆ.
* ಮೂರನೇ ಹಂತದ ಬಾಂಡ್ ಗಳು ಶೇ.7ರಿಂದ 9ರಷ್ಟು ಗಳಿಕೆಯನ್ನು ನೀಡಿವೆ.
ಚಿನ್ನವೆಂದರೆ ಭಾರತೀಯರಿಗೆ ಅತಿಯಾದ ವ್ಯಾಮೋಹ. ಇಂದು ಚಿನ್ನದ ಬಳಕೆ ಕೇವಲ ಆಭರಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಲ ಪಡೆಯಲು, ಬಂಡವಾಳದ ರೂಪದಲ್ಲಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ. ಚಿನ್ನದ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿನ್ನ ನಗದೀಕರಣ ಯೋಜನೆಯನ್ನು ಜಾರಿ ಮಾಡಿದೆ. ಅಷ್ಟೇ ಅಲ್ಲದೇ, ಚಿನ್ನದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಹಿಡಿತ ಸಾಧಿಸುವುದು ಮತ್ತು ಸಾಲ ಪಡೆಯುವಿಕೆಯ ಚಿನ್ನ ಹೇಗಿರಬೇಕು ಇತ್ಯಾದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಗೆ ಅನೇಕ ಮೂಲ ಸೌಕರ್ಯಗಳ ಅಗತ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ ನಗರಗಳಲ್ಲಿ ಮಾತ್ರ ಯೋಜನೆ ಕಾರ್ಯಗತ ಮಾಡಲು ಮುಂದಾಗಿದೆ.
ಏನಿದು ಚಿನ್ನ ನಗದೀಕರಣ ಯೋಜನೆ?
ಯಾವುದೇ ಚಿನ್ನದ ಪತ್ರಗಳನ್ನು ಹೊರತುಪಡಿಸಿ ಚಿನ್ನವನ್ನು ಬಂಡವಾಳ ಅಥವಾ ಹೂಡಿಕೆ ರೂಪದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಹೂಡಿಕೆಗೂ ಮುನ್ನ ನಿಮ್ಮ ಬಳಿ ಇರುವ ಚಿನ್ನವನ್ನು ಅನೇಕ ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಅಂದರೆ ಪರಿಶುದ್ಧತೆಯನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಪರೀಕ್ಷೆಗಳ ಸ್ಪಷ್ಟ ವಿಧಾನವನ್ನು ತಿಳಿಸುವುದೇ ಚಿನ್ನ ನಗದೀಕರಣ ಯೋಜನೆ. ಇಂದು ಚಿನ್ನದ ಬಳಕೆ ಕೇವಲ ಆಭರಣಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಸಾಲ ಪಡೆಯಲು, ಬಂಡವಾಳದ ರೀತಿ, ಚಿನ್ನದ ಪತ್ರಗಳ ಹೆಸರಿನಲ್ಲಿ ಹೀಗೆ ನೂರಾರು ಬಗೆಯಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ “ಚಿನ್ನ ನಗದೀಕರಣ ಯೋಜನೆ”ಯನ್ನು ಜಾರಿ ಮಾಡಹೊರಟಿದೆ.
ಯೋಜನೆಯ ಪ್ರಮುಖ ಅಂಶಗಳು:
* ಚಿನ್ನದ ಪರಿಶುದ್ಧತೆ ಅಳೆಯುವ ಕೇಂದ್ರಗಳು ಸದ್ಯ ಭಾರತದಲ್ಲಿ (ಬಿಎಸ್ ಐ) 350 ಹಾಲ್ ಮಾರ್ಕಿಂಗ್ ಕೇಂದ್ರಗಳಿದ್ದು, ಚಿನ್ನದ ಆಭರಣದ ಪರಿಶುದ್ಧತೆಯನ್ನು ಇವೇ ನಿರ್ಧರಿಸುತ್ತಿವೆ. ಇಲ್ಲಿ ಚಿನ್ನದ ಪರಿಶುದ್ಧತೆ ಅಳೆಯಲಾಗುವುದು.
* ಪ್ರಾಥಮಿಕ ಪರೀಕ್ಷೆಯು ಎಕ್ಸ್.ಆರ್.ಎಫ್ ಯಂತ್ರದ ಮೂಲಕ ಚಿನ್ನದ ಪರಿಶುದ್ಧತೆಯ ಲೆಕ್ಕಚಾರ ಮಾಡಲಾಗುತ್ತದೆ. ಚಿನ್ನ ಪರಿಶೀಲನೆ ಮಾಡಬೇಕಾದವರು ಕೆವೈಸಿ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಬೇಕಾಗುತ್ತದೆ.
* ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲ ಪ್ರಮಾಣವು ನಷ್ಟವಾಗುತ್ತದೆ ಎಂದು ಹೆಚ್ಚಿನವರು ಇಂದಿಗೂ ನಂಬಿಕೊಂಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಲ್ಲ ಬಗೆಯ ಪರಿಶೀಲನೆ ನೋಡುವ ಅವಕಾಶವೂ ಆಭರಣ ಮಾಲೀಕರಿಗೆ ಇರುವುದಿಲ್ಲ.
* ಚಿನ್ನ ಪರಿಶೀಲನಾ ಪ್ರಮಾಣ ಪತ್ರ ಚಿನ್ನದ ಪರಿಶುದ್ಧತೆ ಫಲಿತಾಂಶ ಬಂದ ನಂತರ ಗ್ರಾಹಕ ಅದನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಲುಬಹುದು. ತಿರಸ್ಕಾರ ಮಾಡುವುದಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಪ್ಪಿಕೊಂಡರೆ ಪರಿಶೀಲನೆಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
* ನಿಯಮಾವಳಿಗಳ ಪ್ರಕಾರ ಪರೀಕ್ಷೆಗೆ ಒಳಪಡಿಸಲು ಕನಿಷ್ಠ 30 ಗ್ರಾಂ ಚಿನ್ನವನ್ನಾದರೂ ಹೊಂದಿರಬೇಕಾಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಇಂಥ ಕ್ರಮಗಳು ನೆರವಾಗುತ್ತದೆ ಎಂದು ಭಾವಿಸಲಾಗಿದೆ.
ಆದರೆ ಚಿನ್ನದ ಯೋಜನೆಗಳಲ್ಲಿ ಯಾವುದೇ ರೀತಿಯ ಹೆಚ್ಚುವರಿ ಬದಲಾವಣೆ ಮಾಡಲಾಗಿಲ್ಲ. ಆದರೆ ಚಿನ್ನದ ಬಾಂಡ್ ಮತ್ತು ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಪದ್ಧತಿ ಜಾರಿಯಲ್ಲೇ ಇರುತ್ತದೆ. ಇನ್ನು ಜನರಲ್ಲಿ ಉಳಿತಾಯದ ಮನೋಭಾವ ಹೆಚ್ಚಳ ಮಾಡುವ ಉದ್ದೇಶದಿಂದ ಆರಂಭವಾದ ಯೋಜನೆಗೆ ಅಂಥ ಪ್ರತಿಕ್ರಿಯೆ ಸಿಗದೇ ಇದ್ದರೂ ಸರ್ಕಾರ ಅದನ್ನು ಮುಂದುವರಿಸಿಕೊಂಡೇ ಹೋಗಲಿದೆ.
ಇನ್ನು ಪ್ರಸಕ್ತ ವರ್ಷದಲ್ಲಿ ಚಿನ್ನದ ಬಾಂಡ್ ಯೋಜನೆಯನ್ನು ಇನ್ನಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ವಾರ್ಷಿಕ ಹೂಡಿಕೆ ಮಿತಿಯನ್ನು 500 ಗ್ರಾಂನಿಂದ 4 ಕೆ.ಜಿಗೆ ಏರಿಕೆ ಮಾಡಿದೆ. ಹಾಗಾಗಿ ವೈಯಕ್ತಿಕವಾಗಿ 4ಕೆ.ಜಿಗೆ, ಹಿಂದೂ ಅವಿಭಕ್ತ ಕುಟುಂಬಕ್ಕೆ 4ಕೆ.ಜಿ ಮತ್ತು ಟ್ರಸ್ಟ್‍ಗಳಿಗೆ 20ಕೆ.ಜಿವರೆಗೂ ಹೂಡಿಕೆ ಮಿತಿ ನಿಗದಿಮಾಡಲಾಗಿದೆ. ಅಷ್ಟೇ ಅಲ್ಲದೇ, ಹಣಕಾಸು ವರ್ಷದ ಆಧಾರದ ಮೇಲೆ ಹೂಡಿಕೆ ಮಿತಿ ನಿರ್ಧಾರವಾಗಲಿದ್ದು, ಷೇರುಪೇಟೆಯ ವಹಿವಾಟಿನ ಅವಧಿಯಲ್ಲಿ ಖರೀದಿಸಿದ ಚಿನ್ನದ ಬಾಂಡ್ ಸಹ ಒಳಗೊಂಡಿರಲಿದೆ. ಇನ್ನು ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳು ಹೊಂದಿರುವ ಚಿನ್ನದ ಬಾಂಡ್‍ಗೆ ಈ ಮಿತಿ ಇರುವುದಿಲ್ಲ. ಇನ್ನು ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದ ರೀತಿಯಲ್ಲಿ ಚಿನ್ನದ ಬಾಂಡ್ ಯೋಜನೆ ಸಫಲವಾಗಿಲ್ಲ. ಯೋಜನೆಯಿಂದ 2015-16ರಲ್ಲಿ 15 ಸಾವಿರ ಕೋಟಿ ಮತ್ತು 2016-17ರಲ್ಲಿ 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿತ್ತು. ಆದರೆ ಇದುವರೆಗೆ ಒಟ್ಟಾರೆಯಾಗಿ 4,769 ಕೋಟಿಯಷ್ಟು ಮಾತ್ರವೇ ಸಂಗ್ರಹವಾಗಿದೆ.
ಚಿನ್ನ ನಗದೀಕರಣ ಯೋಜನೆಯಲ್ಲಿ ಬಳಕೆ ಮಾಡದ ಚಿನ್ನವನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಗೆ ಬ್ಯಾಂಕ್ ಗಳಲ್ಲಿ ಠೇವಣಿ ಇಡಬಹುದಾಗಿದ್ದು, ಇದು ಕಪ್ಪುಹಣ ವಿನಾಯಿತಿ ಯೋಜನೆ ಅಲ್ಲ, ಆದರೆ ಇದಕ್ಕೆ ಸಾಮನ್ಯ ತೆರಿಗೆ ನೀತಿ ಅನ್ವಯವಾಗುತ್ತದೆ. ಹಾಗಾಗಿ ಪ್ರತಿವರ್ಷ 1,000 ಟನ್ ಚಿನ್ನ ಆಮದಾಗಲಿದ್ದು, ಬಂಡವಾಳ ಹೂಡಿಕೆಗಾಗಿ ಜನರು ಅಷ್ಟು ಚಿನ್ನವನ್ನು ಬಳಸದೆ ಇಟ್ಟಿರುತ್ತಾರೆ. ಚಿನ್ನ ನಗದೀಕರಣ ಯೋಜನೆಯ ಉಪಯೋಗ ಪಡೆದುಕೊಂಡು ಜನರು ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟು ಅದಕ್ಕೆ ಬಡ್ಡಿ ಪಡೆಯಬಹುದಾಗಿದೆ!!
ರಿಸರ್ವ್ ಬ್ಯಾಂಕ್ ಚಿನ್ನ ನಗದೀಕರಣ ಯೋಜನೆ ಅನುಷ್ಠಾನಕ್ಕೆ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಬ್ಯಾಂಕ್ ಆರಂಭಿಸಿದ್ದು, ಯೋಜನೆಯ ಅನುಷ್ಠಾನವನ್ನು ಪ್ರಕಟಿಸಲಾಗಿದೆ. ಅವುಗಳು
1. ಚಿನ್ನ ನಗದೀಕರಣ ಯೋಜನೆಯಲ್ಲಿ, ಗ್ರಾಹಕರು ತಮ್ಮ ಚಿನ್ನವನ್ನು ಬ್ಯಾಂಕ್‍ನಲ್ಲಿ ಠೇವಣಿಯಾಗಿಟ್ಟು ಅದಕ್ಕೆ ಬಡ್ಡಿ ಪಡೆಯಬಹುದು.
2. ಒಂದು ಬಾರಿ 995 ಶುದ್ಧತೆಯ ಕನಿಷ್ಟ 30 ಗ್ರಾಂ ಚಿನ್ನವನ್ನು ( ಚಿನ್ನದ ಗಟ್ಟಿ, ನಾಣ್ಯಗಳು, ಆಭರಣಗಳು) ಠೇವಣಿಯಾಗಿ ಇಡಬಹುದು ಎಂದು ಆರ್‍ಬಿಐ ಹೇಳಿದೆ. ಯೋಜನೆಯಡಿಯಲ್ಲಿ ಚಿನ್ನದ ಠೇವಣಿಗೆ ಗರಿಷ್ಠ ಮಿತಿಯಿಲ್ಲ.
3. ಎಲ್ಲಾ ವಾಣಿಜ್ಯ ಬ್ಯಾಂಕ್‍ಗಳಿಗೆ ಈ ಯೋಜನೆ ಆಫರ್ ಮಾಡಲು ಅವಕಾಶವಿದೆ. ಈ ಠೇವಣಿಗಳಿಗೆ ಬಡ್ಡಿ ದರವನ್ನು ನಿಗದಿ ಮಾಡಲು ಅವು ಮುಕ್ತವಾಗಿವೆ ಎಂದು ಆರ್‍ಬಿಐ ತಿಳಿಸಿದೆ.
4. ಯೋಜನೆ ಮುಗಿದ ಕೂಡಲೇ ಆ ಸಂದರ್ಭದಲ್ಲಿ ಚಿನ್ನದ ದರಕ್ಕೆ ಅಸಲು ಮತ್ತು ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಠೇವಣಿದಾರ ಚಿನ್ನವನ್ನು ವಾಪಸು ಪಡೆಯಬಹುದು ಅಥವಾ ಅದರ ಮೌಲ್ಯಕ್ಕೆ ಸಮನಾದ ರೂಪಾಯಿ ಪಡೆಯಬಹುದು. ಚಿನ್ನ ಠೇವಣಿ ಖಾತೆ ತೆರೆಯುವಾಗ ಹೂಡಿಕೆದಾರ ಆಯ್ಕೆಯನ್ನು ಸೂಚಿಸಬೇಕು ಮತ್ತು ಅದನ್ನು ಆಯ್ಕೆ ಮಾಡಿಕೊಂಡ ಮೇಲೆ ಬದಲಾಯಿಸುವಂತಿಲ್ಲ.
5. ಯೋಜನೆಯಡಿಯಲ್ಲಿ ಬ್ಯಾಂಕ್‍ಗಳಿಗೆ ಮೂರು ರೀತಿಯ ಠೇವಣಿಗಳನ್ನು ಸ್ವೀಕರಿಸಲು ಅವಕಾಶವಿದೆ. ಅಲ್ಪಕಾಲೀನ(1ರಿಂದ 3 ವರ್ಷ) ಮಧ್ಯಕಾಲೀನ( 5ರಿಂದ 7 ವರ್ಷ) ಮತ್ತು ದೀರ್ಘಕಾಲೀನ(12-15 ವರ್ಷ).
6. ಯೋಜನೆಯ ಉದ್ದೇಶವು ಮನೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿರುವ 20,000 ಟನ್ ಅಂದಾಜು ಚಿನ್ನದ ಸ್ವಲ್ಪ ಭಾಗವನ್ನು ಸಂಗ್ರಹಿಸಿ ಚಿನ್ನದ ಆಮದಿನ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವುದಾಗಿದೆ. ಕ್ಯಾಬಿನೆಟ್ ಕಳೆದ ತಿಂಗಳು ಈ ಯೋಜನೆಯನ್ನು ಅನುಮೋದಿಸಿದೆ.
ಇನ್ನು 2016ರಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಿನ್ನ ನಗದೀಕರಣ ಯೋಜನೆ ಅಡಿ ಇಲ್ಲಿಯವರೆಗೆ 71 ಠೇವಣಿದಾರರು 3,014 ಕೋಟಿ ಮೌಲ್ಯದ 1,131 ಕೆ.ಜಿಗಳಷ್ಟು ಚಿನ್ನವನ್ನು ಠೇವಣಿ ರೂಪದಲ್ಲಿ ಇಟ್ಟಿದ್ದರು. ಈ ಬಗ್ಗೆ ಜಯಂತ್ ಸಿನ್ಹಾ ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದು, ಮನೆ ಹಾಗೂ ದೇವಸ್ಥಾನಗಳಲ್ಲಿ ಅನುಪಯುಕ್ತವಾಗಿರುವ 52 ಲಕ್ಷ ಕೋಟಿ ಮೌಲ್ಯದ 20 ಸಾವಿರ ಟನ್ ಚಿನ್ನವನ್ನು ಮತ್ತೆ ಚಲಾವಣೆಗೆ ತರಲು ಚಿನ್ನದ ನಗದೀಕರಣ ಯೋಜನೆ ರೂಪಿಸಲಾಗಿದೆ. ಎರಡು ಹಂತದ ಚಿನ್ನದ ಬಾಂಡ್ ಯೋಜನೆಗಳಿಂದ 3,80,617 ಹೂಡಿಕೆದಾರರಿಂದ 992 ಕೋಟಿ ಮೌಲ್ಯದ ಒಟ್ಟು 3,786 ಕೆ.ಜಿ ಚಿನ್ನವನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ!!
2016-17 ರ ಬಜೆಟ್ ನಲ್ಲಿ ಚಿನ್ನದ ಯೋಜನೆಗಳಿಗೆ ಸಿಗುವ ಲಾಭ!!!
ಚಿನ್ನದ ಬಾಂಡ್ ಮತ್ತು ಚಿನ್ನ ನಗದೀಕರಣ ಯೋಜನೆ ಮೊದಲಿನಂತೆ ಇದ್ದು, ಹೂಕೆದಾರರು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ತಮ್ಮ ಬಳಿ ಇರುವ ಚಿನ್ನವನ್ನು ಮುರಿಯಲು ಗ್ರಾಹಕರು ಹಿಂದೇಟು ಹಾಕುತ್ತಿರುವುದು ಯೋಜನೆ ಹಿನ್ನಡೆಗೆ ಪ್ರಮುಖ ಕಾರಣ. ಹಾಗಾಗಿ ಇದಕ್ಕೆ ಯಾವ ಪರ್ಯಾಯ ಕ್ರಮವನ್ನು ನೀಡಲು ಸಾಧ್ಯವಾಗದೇ ಇದ್ದು,ಹೊಸದಾಗಿ ಬಾಂಡ್ ಖರೀದಿ ಮಾಡಿದರೆ ಹೂಡಿಕೆ ಲೆಕ್ಕದಲ್ಲಿ ಬಹಳ ಉತ್ತಮವಾಗಲಿದೆ. ಹಾಗಾಗಿ ಚಿನ್ನಾಭರಣ ಅಥವಾ ಚಿನ್ನದ ಬಿಸ್ಕಟ್ ಖರೀದಿ ಮಾಡುವ ಬದಲು ಬಾಂಡ್ ಯೋಜನೆಯಲ್ಲಿ ಹಣ ತೊಡಗಿಸುವುದೆ ಒಳಿತಾಗಿದ್ದು ಇದರಿಂದ ತೆರಿಗೆ ಲಾಭ, ಕಳ್ಳತನದಿಂದ ಮುಕ್ತಿ, ಭದ್ರತೆ ಇದರೊಂದಿಗೆ ಕೂಡಿಕೊಂಡು ಬರುತ್ತದೆ!!
– ಅಲೋಖಾ