ಪ್ರಚಲಿತ

ಚುನಾವಣೆಗೆ ಸ್ಪರ್ಧಿಸಿದ್ರೆ ಕೊಲೆಯಾಗಿ ಹೋಗ್ತೀಯಾ ಹುಷಾರ್!!

ಇದ್ಯಾವುದೇ ನಟೋರಿಸ್ ರೌಡಿಯದ್ದಾಗಲೀ, ಗ್ಯಾಂಗಸ್ಟರ್‍ನಿಂದಾಗಲೀ, ಭೂಗತ ಲೋಕದ ಪಾತಕಿಯಿಂದಾಗಲೀ ಅಥವಾ ಗಾಂಜಾ ತಂಡದಿದ್ದಾಗಲೀ ಬಂದ ಕೊಲೆಬೆದರಿಕೆಯಲ್ಲ. ಇದು ಒಂದು ಕ್ಷೇತ್ರದ ಜವಾಬ್ದಾರಿಯುತ, ಜನರ ಸಂಕಷ್ಟವನ್ನು ಪರಿಹರಿಸಿ ನ್ಯಾಯ ಒದಗಿಸಬೇಕಾದ ಶಾಸಕನೊಬ್ಬ ಬಡ ಶಿಕ್ಷಕಿಗೆ ಹಾಕಿದ ಕೊಲೆ ಬೆದರಿಕೆ. ಈ ಘನಾಂದಾರಿ ಕೆಲಸವನ್ನು ಮಾಡಿದವನ್ಯಾರು ಗೊತ್ತೇ..? ಜೆಡಿಎಸ್ ಪಕ್ಷದ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ..

ಯಾವುದೇ ನಟೋರಿಯಸ್ ರೌಡಿಗಿಂತಲೂ ಕಮ್ಮಿ ಇಲ್ಲದಂತೆ ಒಬ್ಬಳು ಮಹಿಳೆಯನ್ನು `ನೀನು ನೆಲಮಂಗಲಕ್ಕೆ ಬಂದರೆ ಕೊಚ್ಚಿ ಕೊಲೆ ಮಾಡುತ್ತೇನೆ…’ ಎಂದು ಪಕ್ಕಾ ಲೋಕಲ್ ಲಾಂಗ್ವೇಜ್ ಬಳಸಿ ಅಬ್ಬರಿಸುವ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿಯ ಆಟಾಟೋಪ ರಾಜ್ಯದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ನೆಲಮಂಗಲದ ಸರಕಾರಿ ಶಾಲಾ ಶಿಕ್ಷಕಿ ಶಿವಕುಮಾರಿ ಎಂಬವರು ನೆಲಮಂಗಲದ ಭ್ರಷ್ಟಾಚಾರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ ಖಂಡಿಸಿ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಅಪ್‍ಲೋಡ್ ಮಾಡಿದ್ದರು. ಇದರಿಂದ ಕುಪಿತನಾದ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿ ಶಿವಕುಮಾರಿ ಅವರ ಅಣ್ಣ ರಾಜು ಎಂಬವರನ್ನು ಕರೆಸಿ ಮಾತಾಡಿ, `ಈಕೆ ಚುನಾವಣೆಯಲ್ಲಿ ಕಂಟೆಸ್ಟ್ ಮಾಡಿದ್ರೆ ಕೆಲಸವನ್ನು ಕಳೆದು ಕೊಳ್ಳುತ್ತಾಳೆ. ಜೊತೆಗೆ ನೆಲಮಂಗಲದಲ್ಲಿ ಕೊಲೆಯಾಗಿ ಹೋಗುತ್ತಾಳೆ. ಸುಮ್ನೆ ಇದನ್ನೆಲ್ಲಾ ಬಿಟ್ಟು ಸೈಲೆಂಟಾಗಿ ಇರೋದಕ್ಕೆ ಹೇಳೋದು ಒಳ್ಳೇದು…’ ಎಂದು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಶಿವಕುಮಾರಿ ಆರೋಪಿಸಿದ್ದಾರೆ. `ಶಾಸಕರ ತೋರಿದ ದರ್ಪಕ್ಕೆ ಸಂಬಂಧಿಸಿ ತನ್ನ ಬಳಿ ಎಲ್ಲಾ ದಾಖಲೆಗಳಿದ್ದು, ಅದನ್ನೆಲ್ಲಾ ರಿಲೀಸ್ ಮಾಡ್ತೀನಿ, ಅಲ್ಲದೆ ಈ ಬಾರಿ ಬಾರಿ ನೆಲಮಂಗಲ ಮೀಸಲು ಕ್ಷೇತ್ರದಿಂದಲೇ ಕಂಟೆಸ್ಟ್ ಮಾಡ್ತೀನಿ’ ಅಂತ ಸವಾಲನ್ನು ಹಾಕಿದ್ದಾರೆ.

ಶಾಸಕರ ದರ್ಪಕ್ಕೆ ಪ್ರತಿಯಾಗಿ ಶಿಕ್ಷಕಿ ಶಿವಕುಮಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದು. ನೆಲಮಂಗಲ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸವಾಲು ಹಾಕಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕಿ ಶಿವಕುಮಾರಿ, `ನಾನು ನನ್ನ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಿದ್ದೀನಿ. ಅದು ನನ್ನ ಹಕ್ಕು. ಆದರೆ ಶ್ರೀನಿವಾಸ ಮೂರ್ತಿ ನನ್ನ ಅಣ್ಣ ರಾಜು ಅವರನ್ನು ಕರೆದು, `ನೋಡು ಕುಮಾರಿಗೆ ಎಲೆಕ್ಷನ್‍ಗೆ ಬರ್ಬೇಡ ಅಂತ ಹೇಳು… ಅವಳೇನಾದ್ರೂ ಬಂದ್ರೆ ಕೆಲಸ ಕಳೆದುಕೊಳ್ಳುತ್ತಾಳೆ. ಅಲ್ಲದೆ ನೆಲಮಂಗಲದಲ್ಲಿ ಕೊಚ್ಚಿ ಹಾಕಿ ಬಿಡ್ತಾರೆ. ಇದೆಲ್ಲಾ ಬೇಡ ಅಂತ ಹೇಳು. ನಾನು ಅವಳಿಗೆ ಗೊತ್ತಿಲ್ಲದಂತೆ ಜನ ಕಳಿಸಿದ್ದೀನಿ. ನನಗೆ ಇದರಿಂದ ತೊಂದರೆಯಾದ್ರೂ ಸರಿ..’ ಎಂದು ಬೆದರಿಸಿದ್ದಾಗಿ ಆರೋಪಿಸಿದ್ದಾರೆ.

ನೆಲಮಂಗಲಲ್ಲಿ ರಾಜಕೀಯ ತಾಂಡವವಾಡುತ್ತಿದ್ದು, ಭ್ರಷ್ಟಾಚಾರ ಜಾಸ್ತಿಯಾಗಿದೆ. ಅದಕ್ಕಾಗಿ ಎಲೆಕ್ಷನ್‍ಗೆ ನಿಲ್ತೇನೆ ಅಂತ ಹೇಳಿದ್ದೆ. ಆದರೆ ಎಲೆಕ್ಷನ್‍ಗೆ ಇನ್ನೂ ದಿನ
ನಿಗದಿಯಾಗಿಲ್ಲ. ಅಲ್ಲದೆ ನಾನು ಪಕ್ಷದಿಂದ ಟಿಕೆಟನ್ನೂ ಕೇಳಿಲ್ಲ. ಆದರೂ ಶ್ರೀನಿವಾಸ ಮೂರ್ತಿ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಸಿ ನೋಟಿಸ್ ಜಾರಿ
ಮಾಡಿಸಿದ್ದಾರೆ. ನನ್ನ ಮೇಲೆ ಒತ್ತಡವನ್ನೂ ಹಾಕಲಾಗಿದೆ. ಇದಕ್ಕಾಗಿ ನಾನು ಮಾಧ್ಯಮಗಳ ಮುಂದೆ ಹೋಗುತ್ತೇನೆ ಎಂದಾಗ, ರಿಪೋರ್ಟ್ ಮಾಡಿ ಎಂದು ಹೇಳಿಕೆ ಬದಲಾಯಿಸಿದ್ದಾರೆ ಎಂದು ಶಿವಕುಮಾರಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಾಲತಾಣಗಳಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇಲ್ಲವೇ ಎಂದು ಶಿವಕುಮಾರಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾದ ಮೂರ್ತಿ, ತಾನೂ ಯಾವುದೇ ಬೆದರಿಕೆಯೊಡ್ಡಿಲ್ಲ, ಇದೆಲ್ಲಾ ತನ್ನ ಜೇಜೋವಧೇ ಮಾಡಲು ಯತ್ನಿಸುತ್ತಿರುವುದು, ನಾನು ಶಾಸಕ: ನಾನು ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದ್ದೆ. ಜೊತೆಗೆ ಡಿಡಿಪಿಐ.. ಬಿಇಒ ಮುಖಾಂತರ ಒತ್ತಡ ಹೇರಿಲ್ಲ ಇದೆಲ್ಲಾ ಸುಳ್ಳಾರೋಪ ಎಂದು ತಿಳಿಸಿದ್ದಾರೆ.

ಶಿಕ್ಷಕಿ ತನಗೆ ಕೊಲೆ ಬೆದರಿಕೆ ಬಂದಿದೆ ಎಂದು ನೇರವಾಗಿ ಆರೋಪಿಸುತ್ತಿರುವಾಗ ಕೊನೆಗೆ ತನ್ನ ಬಂಡವಾಳ ಬಟಾಬಯಲಾಯಿತು ಎಂದಾಗ ಶ್ರೀನಿವಾಸ ಮೂರ್ತಿ ತನ್ನ ರಾಗವನ್ನೇ ಬದಲಾಯಿಸಿದ್ದಾರೆ.

ಜಾಲತಾಣದಲ್ಲಿ ತನ್ನ ಬಂಡವಾಳವನ್ನು ಬಯಲು ಮಾಡಿರುವುದಕ್ಕೆ ಈ ರೀತಿ ಕೊಲೆ ಬೆದರಿಕೆಯೊಡ್ಡುತ್ತಿರುವ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿ ಒಂದು ಕೇತ್ರದ ಎಂಎಲ್‍ಎ ಆಗಿದ್ದುಕೊಂಡು ಈ ರೀತಿ ವರ್ತಿಸುತ್ತಿರುವುದು ಸರಿಯೇ… ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇ ಗೌಡ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಏನು ಹೇಳುತ್ತಾರೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

 

-ಚೇಕಿತಾನ

Tags

Related Articles

Close