ಪ್ರಚಲಿತ

ಜಯ ಜಯ ದುರ್ಗೆ!!!! ನವರಾತ್ರಿಯ ಈ ನವದುರ್ಗೆಯರ ವೈಶಿಷ್ಟ್ಯದ ಬಗ್ಗೆ ನಿಮಗೆಷ್ಟು ಗೊತ್ತು?!

ಭಾರತ ಕಲೆ ಸಂಸ್ಕøತಿಗಳ ತವರುನೆಲೆ!! ನಾನಾ ಹಬ್ಬಹರಿದಿನಗಳನ್ನು ಆಚರಿಸುವ ರಾಷ್ಟ್ರ ನಮ್ಮದು, ಅದರಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ
ನವರಾತ್ರಿ. ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ ನವರಾತ್ರಿಯ ವೈಭೋಗ!!! ಹೌದು.. ನವದುರ್ಗೆಯರನ್ನು ಆರಾಧಿಸುವ ಪುಣ್ಯದಿನಗಳು ಎಂದರೆ ತಪ್ಪಾಗಲಾರದು. ದುಷ್ಟ ಸಂಹಾರ ಶಿಷ್ಟ ರಕ್ಷಣೆಯ ಪರಿಪಾಲನೆಯನ್ನು ಹೊಂದಿರುವ ಜಗತ್ತಿನಲ್ಲಿ ಸೃಷ್ಟಿ, ಪೆÇೀಷಣೆ, ಲಯ, ಮುಖ್ಯ ಆಧಾರಗಳಾಗಿದೆ!! ಜಗನ್ಮಾತೆಯನ್ನು ನವವಿಧವಾಗಿ ಪೂಜಿಸುವುದು ಈ ನವರಾತ್ರಿಯ ವೈಶಿಷ್ಟ್ಯ.

ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಆರಾಧಿಸುತ್ತೆವೆ!!

ನವರಾತ್ರಿ ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಿ, ಹತ್ತನೇಯ ದಿನ ‘ವಿಜಯ ದಶಮಿ’ಯನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ!!! ಆ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಅಷ್ಟೇ ಅಲ್ಲದೇ, “ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ | ದುಃಖಪ್ರಣಾಶಿನೀಂ ಧನ್ಯಾಂ ಪ್ರಪದ್ಯೇsಹಂ ಶಮೀಂ ಶುಭಾಮ್ || ಎಂಬ ಮಂತ್ರದಿಂದ ಶ್ರದ್ಧಾಭಕ್ತಿಯಿಂದ ಪೂಜಿಸಬೇಕು. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್‍ಪ್ರಸಿದ್ಧಿಯನ್ನು ಪಡೆದಿದೆ.

ದುರ್ಗೆಯ ನವರಾತ್ರಿ ಭಾರತದಾದ್ಯಂತ ವಿಭಿನ್ನ ರೂಪಗಳನ್ನು ತಾಳಿ ಭಾರತೀಯ ಪರ್ವಗಳಲ್ಲೇ ವಿಶಿಷ್ಟ ಸ್ಥಾನವನ್ನು ಸಂಪಾದಿಸಿದೆ. ದುರ್ಗಾಷ್ಟಮಿಯನ್ನು ನವರಾತ್ರಿಯ ಎಂಟನೇ ದಿನದಂದು ಆಚರಣೆ ಮಾಡುವುದುಂಟು. ಹತ್ತನೆಯ ದಿನವನ್ನು ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ವಿಜಯದಶಮಿಯ ಅರ್ಥ ಹೆಸರೇ ಸೂಚಿಸುವಂತೆ ವಿಜಯ, ಗೆಲುವು ಸೂಚಿಸುವ ಹಬ್ಬ. ವಿಜಯದಶಮಿ ಆಚರಿಸುವುದಕ್ಕೂ ಹಲವು ಸಂಕೇತಗಳಿದ್ದು, ಮಹಾದುರ್ಗೆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯದ ದಿನ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನ ಎಂಬುದರ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದುಂಟು.

ನವರಾತ್ರಿಯ ಹತ್ತನೇ ದಿನ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಈಗಲೂ ದಸರಾ ಹಬ್ಬದ ಹತ್ತನೆಯ ದಿನದಂದು ಶ್ರೀರಾಮನ ವಿಜಯವನ್ನು ಆಚರಿಸಲು ಹಲವೆಡೆ ರಾವಣನ ವಿಗ್ರಹವನ್ನು ಸೃಷ್ಟಿಸಿ ಸುಡುವುದುಂಟು. ಹೀಗೆ ವಿಜಯದಶಮಿಗೆ ನಾನಾ ರೀತಿಯ ಪೌರಾಣಿಕ ಕಥೆಗಳಿವೆ.
ದುರ್ಗಾಪೂಜೆಯನ್ನು 9 ದಿನಗಳ ಕಾಲ ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು. 9 ದಿನಗಳಲ್ಲಿಯೂ ಪ್ರತಿಯೊಂದು ದಿನಕ್ಕೂ ಒಂದೊಂದು ವಿಶೇಷತೆ ಇದೆ. ಆ ದಿನಗಳ ವಿಶೇಷತೆ ಈ ಕೆಳಕಂಡಂತಿದೆ.

1ನೇ ದಿನವನ್ನು ಪಾಡ್ಯದ ದಿನವೆಂದು ಅಂದರೆ ಯೋಗನಿದ್ರಾ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
2ನೇ ದಿನವನ್ನು ಬಿದಿಗೆ ದಿನ ಅಂದರೆ ದೇವಜಾತ ದುರ್ಗಾ ಪೂಜೆಯಂದು ಪೂಜಿಸುತ್ತಾರೆ.
3ನೇ ದಿನವನ್ನು ತದಿಗೆ ದಿನ ಅಂದರೆ ಮಹಿಷಾಸುರ ಮರ್ಥಿನಿ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
4ನೇ ದಿನವನ್ನು ಚತುರ್ದಶಿ ದಿನ ಅಂದರೆ ಶೈಲ ಜಾತಾ ದುರ್ಗಾ ಪೂಜಾದಿನವೆಂದು ಪೂಜಿಸುತ್ತಾರೆ.
5ನೇ ದಿನವನ್ನು ಪಂಚಮಿ ದಿನ ಅಂದರೆ ದೂಮೃಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
6ನೇ ದಿನವನ್ನು ಶಷ್ಠಿ ದಿನ ಅಂದರೆ ಚಂಡ-ಮುಂಡಹಾ ದುರ್ಗಾ ಪೂಜಾ ದಿನವೆಂದು ಪೂಜಿಸುತ್ತಾರೆ.
7ನೇ ದಿನವನ್ನು ಸಪ್ತಮಿ ಅಂದರೆ ರಕ್ತಬೀಜ ದುರ್ಗಾಪೂಜಾದಿನವೆಂದು ಪೂಜಿಸುತ್ತಾರೆ.
8ನೇ ದಿನವನ್ನು ಅಷ್ಟಮಿ ದಿನ ಅಂದರೆ ದುರ್ಗಾಷ್ಠಮಿ ಎಂದು ಪೂಜಿಸುತ್ತಾರೆ.
9ನೇ ದಿನದ ಕಡ ನವರಾತ್ರಿ ಮಹಾನವಮಿ ದಿನ ಅಂದರೆ ಶುಂಭಹಾ ದುರ್ಗಾ ಪೂಜೆಯೆಂದು ಪೂಜಿಸುತ್ತಾರೆ.

ನವದುರ್ಗೆಯರ ಅವತಾರಗಳು ಮತ್ತು ವೈಶಿಷ್ಟ್ಯ:

ಶೈಲಪುತ್ರೀ

“ಶೈಲಮ್” ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ
ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ
ಶೈಲಪುತ್ರಿ.

ದಕ್ಷ ಪ್ರಜಾಪತಿಯ ಮಗಳು ಸತಿ. ಇವಳ ಪತಿ ಭಗವಾನ್ ಶಂಕರ. ಒಮ್ಮೆ ದಕ್ಷ ಪ್ರಜಾಪತಿ ಒಂದು ಯಜ್ಞವನ್ನು ಏರ್ಪಡಿಸಿ, ತನ್ನಳಿಯ ಭಗವಾನ್ ಶಂಕರನೊಬ್ಬನನ್ನು ಬಿಟ್ಟು ಉಳಿದವರೆಲ್ಲರಿಗೂ ಹವಿಸ್ಸನ್ನು ಸ್ವೀಕರಿಸಲು ಆಮಂತ್ರಿಸಿದ್ದನು. ಆಮಂತ್ರಣವಿಲ್ಲದ ಯಜ್ಞಕ್ಕೆ ಭಗವಾನ್ ಶಂಕರನಿಗೆ ಹೋಗಲು ಮನಸ್ಸಿರಲಿಲ್ಲ ಹಾಗೂ ತನ್ನ ಮಡದಿ ಸತಿಯೂ ಹೋಗಬಾರದೆಂಬ ಇಚ್ಛೆ ಅವನದಾಗಿತ್ತು. ಆದರೆ ಪತಿ ಭಗವಾನ್ ಶಂಕರನ ಮಾತನ್ನು ಧಿಧಿಕ್ಕರಿಸಿ ತನ್ನ ತವರುಮನೆಗೆ ಯಜ್ಞಕ್ಕೆ ಸತಿ ಹೋದಳು. ಆಗ ತನ್ನ ತಂದೆಯಿಂದ ನಿರ್ಲಕ್ಷ iÀುP್ಕಳಗಾಗಿ, ಇತ್ತ ತಾನು ತನ್ನ ಪತಿಯ ಮಾತನ್ನೂ ಕೇಳಲಿಲ್ಲ ಅತ್ತ ತಂದೆಯೂ ಗೌರವಿಸಲಿಲ್ಲ ಎಂಬ ದ್ವಂದ್ವದಲ್ಲಿ ಸಿಲುಕಿ ಅವಮಾನಿತಳಾದಳು. ಗಂಡನ ಮಾತನ್ನು ಧಿಧಿಕ್ಕರಿಸಿದ ತನ್ನ ತಪ್ಪಿಗಾಗಿ ಯೋಗಾಗ್ನಿಯಿಂದ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರೀ’ ಎಂದು ಕರೆಸಿಕೊಂಡಳು. ಮುಂದೆ ಭಗವಾನ್ ಶಂಕರನ ಮಡದಿಯಾಗಿ ಪಾರ್ವತೀ, ಹೈಮವತೀ ಎಂದೂ ಪೂಜಿಸಲ್ಪಟ್ಟಳು. ಇವಳು ತನ್ನ ವಾಹನ ವೃಷಭದ ಮೇಲೆ ಆಸೀನಳಾಗಿ, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದು ಶೋಭಾಯಮಾನಳಾಗಿದ್ದಾಳೆ.

ಬ್ರಹ್ಮಚಾರಿಣಿ

“ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|” ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.’ಬ್ರಹ್ಮ’ ಎಂದರೆ ತಪಸ್ಸು. ಹಿಮವಂತನ ಪುತ್ರಿಯಾದ ಮಾತ್ರಕ್ಕೇ ಇವಳು ಭಗವಾನ್ ಶಂಕರನ ಮಡದಿಯಾಗಲು ಅರ್ಹಳಾಗಿರಲಿಲ್ಲ. ತ್ರಿಲೋಕ ಸಂಚಾರಿ ನಾರದರ ಸಲಹೆಯಂತೆ ಭಗವಾನ್ ಶಂಕರನನ್ನು ಪತಿಯಾಗಿ ವರಿಸಲು ಬಹಳ ಕಠಿಣವಾದ ತಪಸ್ಸನ್ನು ಕೈಗೊಂಡಳು. ಆ ತಪಸ್ಸು ಹೇಗಿತ್ತೆಂದರೆ, ಒಂದು ಸಾವಿರ ವರುಷ ಫಲಮೂಲ ಸೇವನೆ, ನಂತರದ ನೂರು ವರುಷ ನಾನಾ ರೀತಿಯ ಪರ್ಣಗಳ ಸೇವನೆ, ಮೂರು ಸಾವಿರ ವರುಷಗಳು ನೆಲದ ಮೇಲೆ ಉದುರಿದ ಬಿಲ್ವಪತ್ರೆಗಳ ಸೇವನೆ ಕೊನೆಗೆ ಎಲ್ಲವನ್ನೂ ಬಿಟ್ಟು ಬರೀ ಗಾಳಿ ಸೇವನೆ ಮಾಡುತ್ತಾ ಭಗವಾನ್ ಶಂಕರನನ್ನು ಕುರಿತು ತಪಸ್ಸು ಮಾಡುತ್ತಿದ್ದಳು. ಪರ್ಣಸೇವನೆಯನ್ನೂ ಬಿಟ್ಟುದರಿಂದ ‘ಅಪರ್ಣಾ’ ಎಂದೂ ಕರೆಯಿಸಿಕೊಂಡಳು. ಇಂತಹ ಕಠಿಣ ತಪಸ್ಸಿನಿಂದ ದೇಹವು ಕೃಶವಾಯಿತು. ತಾಯಿಯಾದ ಮೇನಾದೇವಿಗೆ ದು:ಖವಾಯಿತು. ಅವಳ ಈ ತಪಸ್ಸಿನಿಂದ ಮೂರೂ ಲೋಕಗಳಲ್ಲೂ ಹಾಹಾಕಾರವೆದ್ದಿತು. ಕೊನೆಗೆ ಬ್ರಹ್ಮದೇವನು ಪ್ರತ್ಯಕ್ಷ ನಾಗಿ ‘ನಿನ್ನಂತೆ ಇದುವರೆಗೆ ಯಾರೂ ತಪಸ್ಸು ಮಾಡಿರಲಿಲ್ಲ. ನಿನ್ನ ಮನದಿಷ್ಟವು ನೆರವೇರುವುದು. ನಿನ್ನ ತಪಸ್ಸಿನ ಅಗ್ನಿಯಿಂದ ಪ್ರಪಂಚವು ಅಲ್ಲೋಲ ಕಲ್ಲೋಲವಾಗಿದೆ. ಭಗವಾನ್ ಶಿವನೇ ನಿನ್ನ ಪತಿಯಾಗುವನು’ ಎಂದು ಅವಳನ್ನು ಮಾತಾಪಿತೃರೊಂದಿಗೆ ಸೇರುವಂತೆ ಹೇಳಿದನು. ಇಂತಹ ತಪಸ್ಸಿನ ಕಾರಣದಿಂದ ‘ಬ್ರಹ್ಮಚಾರಿಣೀ’ ಎಂದು ಹೆಸರುವಾಸಿಯಾಗಿ ಭಕ್ತರನ್ನು ಆಶೀರ್ವದಿಸುವ ಮಾತೆಯ ಸ್ವರೂಪವು ಜ್ಯೋತಿರ್ಯುಕ್ತವಾಗಿದ್ದು, ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲುವಿನಿಂದ ಶೋಭಾಯಮಾನಳಾಗಿದ್ದಾಳೆ. ಇವಳ ಆರಾಧನೆ ಮಾಡುವುದರಿಂದ ಸದಾಚಾರ ಸಂಯಮಗಳ ವೃದ್ಧಿಯಾಗಿ ಭಕ್ತರಿಗೆ ಸಿದ್ಧಿ, ವಿಜಯ ಪ್ರಾಪ್ತಿಯಾಗುತ್ತದೆ.

ಚಂದ್ರಘಂಟಾ

“ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|” ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.
ಮಾತೆ ದುರ್ಗೆಯು ಅಸುರರನ್ನು, ಅತ್ಯಾಚಾರೀ ದಾನವರನ್ನು, ದೈತ್ಯರನ್ನು ನಡುಗಿಸಲು ಘಂಟಾನಾದವನ್ನು ಮಾಡುತ್ತಿರುತ್ತಾಳೆ. ತನ್ನ ಮಸ್ತಕದಲ್ಲಿ ಗಂಟೆಯ ಆಕಾರದ ಚಂದ್ರನನ್ನು ಧರಿಸಿರುವುದಕ್ಕಾಗಿ ಇವಳಿಗೆ ‘ಚಂದ್ರಘಂಟಾ’ ಎಂಬ ಹೆಸರು. ಕನಕವರ್ಣ ಶೋಭಿತಳಾಗಿರುವ ಇವಳ ಸ್ವರೂಪವು ಶಾಂತಿದಾಯಕವಾಗಿದೆ. ಇವಳ ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರಗಳು ಶೋಭಿತವಾಗಿವೆ. ಇವಳ ವಾಹನವು ಸಿಂಹವಾಗಿದೆ. ಇವಳ ಮುದ್ರೆಯು ಯಾವಾಗಲೂ ಯುಧ್ಧಕ್ಕೆ ಅಭಿಮುಖವಾದಂತಿರುತ್ತದೆ. ಸಿಂಹದೊಂದಿಗೆ ಒಡಗೂಡಿ ದುಷ್ಟ ಶಕ್ತಿಗಳ ಮೇಲೆರಗಿ ಶಾಂತಿಸ್ಥಾಪನೆಗೆ ಕಾರಣವಾಗಿರುವ ಮಾತೆಯ ಸ್ವರೂಪವು ಭಕ್ತರೆಲ್ಲರಿಗೂ ಶ್ರೇಯಸ್ಕರವಾಗಿರುತ್ತದೆ. ನಿರ್ವಂಚನೆಯಿಂದ, ಏಕಾಗ್ರಚಿತ್ತದಿಂದ ಚಂದ್ರಘಂಟಾ ಮಾತೆಯಲ್ಲಿ ಶರಣು ಹೊಂದಿದರೆ, ಧ್ಯಾನ ಮಾಡುವಾಗ ಘಂಟೆಯಧ್ವನಿ ಮೊಳಗಿ, ಕಷ್ಟ ಪರಿಹಾರವಾಗುವುದು ನಿಶ್ಚಿತ.

ಕೂಷ್ಮಾಂಡಾ

“ಕುತ್ಸಿತಃ ಉಷ್ಮಾಃ ಕೂಷ್ಮಾಃ|?ಕುತ್ಸಿತಃ” ಅಂದರೆ ಸಹಿಸಲು ಕಠಿಣವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). “ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|” ಇದರ ಅರ್ಥವು: ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು ಸೃಷ್ಟಿಯು ಆಗಬೇಕಾಗಿರುವಾಗ, ಅಂಧಕಾರ ಪಸರಿಸಿದ್ದಾಗ, ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡ ರಚನೆಗೆ ಕಾರಣಳಾದ ಮಾತೆಯೇ ಆದಿಶಕ್ತಿ. ಯಾವ ಶಕ್ತಿಗೂ
ಸಾಧ್ಯವಿಲ್ಲದ್ದೆಂದರೆ ಸೂರ್ಯಮಂಡಲದಲ್ಲಿ ಪ್ರವೇಶಿಸುವುದು. ಆದರೆ ಮಾತೆ ಆದಿದೇವಿಯ ಶಕ್ತಿ, ಕಾಂತಿ, ಪ್ರಭೆ ಕೇವಲ ಸೂರ್ಯನೊಂದಿಗೆ ಮಾತ್ರ ತುಲನೆ
ಮಾಡಬಹುದು. ಬ್ರಹ್ಮಾಂಡದ ಪ್ರತೀ ಜೀವಿಯಲ್ಲಿಯೂ ಇವಳದೇ ಛಾಯೆಯಿರುವುದು. ದುಷ್ಟಶಕ್ತಿಗಳ ಸಂಹಾರದಲ್ಲಿ ನಿರತಳಾಗಿರುವ ಇವಳಿಗೆ ಕುಂಬಳಕಾಯಿಯ
ಬಲಿಯು ಅತ್ಯಂತ ಪ್ರಿಯ. ಸಂಸ್ಕ್ರತದಲ್ಲಿ ಕೂಷ್ಮಾಂಡವೆಂದರೆ ಕುಂಬಳಕಾಯಿ. ಆದುದರಿಂದಲೇ ಇವಳ ನಾಮ ‘ಕೂಷ್ಮಾಂಡಾ’. ಅಷ್ಟಭುಜಾದೇವಿ ಎಂದೂ
ಖ್ಯಾತಳಾಗಿರುವ ಇವಳ ಎಂಟು ಕೈಗಳಲ್ಲಿ ಕ್ರಮವಾಗಿ ಕಮಂಡಲು, ಧನುಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆ ಮತ್ತು ರುದ್ರಾಕ್ಷಿ ಮಾಲೆ ಇವೆ. ತಾಯಿ ಕೂಷ್ಮಾಂಡಾ ದೇವಿ ಅಲ್ಪಸೇವಾತೃಪ್ತಳು. ಜಗನ್ಮಾತೆಯಾಗಿರುವ ಇವಳ ಪೂಜೆ ಮಾಡಿದಲ್ಲಿ ಭಕ್ತರ ಎಲ್ಲ ರೋಗ-ಶೋಕಾದಿಗಳು ನಿವಾರಣೆಯಾಗುತ್ತವೆ.

ಸ್ಕಂದಮಾತಾ

ಕಾರ್ತಿಕೇಯ, ಮಯೂರವಾಹನ, ಕುಮಾರ, ಶಕ್ತಿಧರ ಮುಂತಾದ ನಾಮಗಳಿಂದ ಭಜಿಸಲ್ಪಡುವ ಭಗವಾನ್ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ಸಿಂಹಾರೂಢಳಾಗಿರುವ ಸ್ಕಂದಮಾತೆಯ ತೊಡೆಯ ಮೇಲೆ ಸ್ಕಂದನು ಬಾಲರೂಪದಲ್ಲಿ ಆಸೀನನಾಗಿದ್ದಾನೆ. ಇವಳ ಶರೀರದ ವರ್ಣವು ಬೆಳ್ಳಗಿದ್ದು ಮಮತಾಮಯಿಯಾಗಿ, ಮಾತೃಸ್ವರೂಪಿಯಾಗಿ ವಿರಾಜಿಸುತ್ತಿದ್ದಾಳೆ. ಬಲಕೈಯು ಬಾಲಕ ಸ್ಕಂದನನ್ನು ಆಧರಿಸಿ ಹಿಡಿದಿದ್ದು, ಇನ್ನೊಂದು ಬಲಕೈಯಲ್ಲಿ ಹಾಗೂ ಒಂದು ಎಡಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಎರಡನೇ ಎಡಕೈಯಲ್ಲಿ ವರಮುದ್ರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಸ್ಕಂದಮಾತೆಯ ಆರಾಧನೆ ಮಾಡಿದಲ್ಲಿ ಭಗವಾನ್ ಸ್ಕಂದನ ಉಪಾಸನೆಯನ್ನೂ ಮಾಡಿದಂತಾಗುತ್ತದೆ. ತನ್ನನ್ನು ಆರಾಧಿಧಿಸುವವರನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾಳೆ ಸ್ಕಂದಮಾತೆ.

ಕಾತ್ಯಾಯನೀ

“ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|” (ಕಾತ್ಯಾಯನನ ಮಗಳು ಕಾತ್ಯಾಯನಿ) ಅಯನ ಎಂದರೆ ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ?. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
‘ಕಾತ್ಯ’ ಗೋತ್ರದಲ್ಲಿ ಹುಟ್ಟಿದ ಮಹರ್ಷಿ ಕಾತ್ಯಾಯನರು ಮಾತೆ ದುರ್ಗೆಯ ಅರಾಧಕರಾಗಿದ್ದರು. ದೇವಿಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದ್ದರು. ದೇವಿಯು ತನ್ನ ಮಗಳಾಗಿ ಹುಟ್ಟಬೇಕೆಂದು ಅವರ ಇಚ್ಛೆಯಾಗಿತ್ತು. ಕಾಲಕಳೆದಂತೆ, ಪೃಥ್ವಿಯಲ್ಲಿ ಮಹಿಷಾಸುರನ ಉಪಟಳ ಜಾಸ್ತಿಯಾದಾಗ ತ್ರಿಮೂರ್ತಿಗಳು ಸೇರಿ ತಮ್ಮ ತೇಜದ ಅಂಶವನ್ನಿತ್ತು ದೇವಿಯನ್ನು ಸೃಷ್ಟಿಸಿದರು ಹಾಗೂ ಅವಳ ಮೊಟ್ಟಮೊದಲ ಪೂಜೆಯನ್ನು ನೆರೆವೇರಿಸುವಂತೆ ಮಹರ್ಷಿ ಕಾತ್ಯಾಯನರಿಗೆ ಅರುಹಿದರು. ಈ ಪ್ರಸಂಗದಿಂದ ಆ ದೇವಿಗೆ ‘ಕಾತ್ಯಾಯನೀ’ ಎಂಬ ನಾಮಕರಣವಾಯಿತು. ಅಶ್ವೀಜ ಶುಕ್ಲ ಸಪ್ತಮಿ, ಅಷ್ಟಮಿ ಮತ್ತು ನವಮಿಯಂದು ಮಹರ್ಷಿ ಕಾತ್ಯಾಯನರಿಂದ ಪೂಜಿತಳಾಗಿ ದಶಮಿಯಂದು ಮಹಿಷಾಸುರ ವಧೆ ಮಾಡಿದ್ದಳು. ಸಿಂಹವಾಹಿನಿಯಾದ ಇವಳಿಗೆ ನಾಲ್ಕು ಕೈಗಳಿದ್ದು, ಬಲಗಡೆಯ ಕೈಗಳಲ್ಲಿ ಅಭಯ ಮತ್ತು ವರಮುದ್ರೆಯಿದ್ದರೆ ಎಡಗಡೆಯ ಕೈಗಳಲ್ಲಿ ಖಡ್ಗ ಮತ್ತು ಕಮಲ ಹಿಡಿದಿದ್ದಾಳೆ. ಶ್ರೀಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದೀ ನದಿಯ ದಡದಲ್ಲಿ ಕಾತ್ಯಾಯನಿಯ ಆರಾಧನೆ ಮಾಡಿದ್ದರು. ಕಾತ್ಯಾಯನಿಯ ಪಾದಗಳಲ್ಲಿ ಶರಣು ಹೊಂದುವುದರಿಂದ ರೋಗ, ಭಯ, ಶೋಕ ಹಾಗೂ ಸಂತಾಪಗಳು ನಾಶವಾಗಿ ಭಕ್ತರಿಗೆ ಧರ್ಮಾರ್ಥಕಾಮಮೋಕ್ಷ ಗಳ ಪ್ರಾಪ್ತಿಯಾಗುತ್ತದೆ.

ಕಾಲರಾತ್ರೀ

ಗಾಢಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಬ್ರಹ್ಮಾಂಡದಂತೆ
ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ವಿದ್ಯುತ್ತಿನ ಕಿರಣಗಳು ಪರಿಸರದಲ್ಲಿ ಪಸರಿಸಿವೆ. ಇವಳು ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು
ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ. ಭಯಂಕರ
ರೂಪಧಾರಿಣಿಯಾಗಿದ್ದರೂ ಶುಭ ಫಲಗಳನ್ನೇ ನೀಡುವ ‘ಶುಭಂಕರಿ’ಯ ಉಪಾಸನೆಯಿಂದ ಭಕ್ತರಲ್ಲಿ ಮನೆಮಾಡಿರುವ ಗೃಹಬಾಧೆ, ಜಂತುಭಯ, ಚೋರಭಯ,
ಶತ್ರುಭಯ, ಜಲಭಯ, ಅಗ್ನಿಭಯವೇ ಮುಂತಾದ ಎಲ್ಲ ಭಯಗಳೂ ನಿವಾರಣೆಯಾಗುವುದರಲ್ಲಿ ಸಂದೇಹವೇ ಇಲ್ಲ.

ಮಹಾಗೌರೀ
ಭಗವಾನ್ ಶಂಕರನನ್ನು ವರಿಸಲು ಘೋರ ತಪಸ್ಸು ಮಾಡಿದಾಗ ಇವಳ ಶರೀರವೆಲ್ಲಾ ಕಪ್ಪಿಟ್ಟಿತ್ತು. ತಪಸ್ಸಿಗೆ ಸಂತುಷ್ಟನಾದ ಶಿವನು ಇವಳು ಬಿಳುಪಿನ
ಮೈಕಾಂತಿಯನ್ನು ಹೊಂದುವುದಕ್ಕಾಗಿ ಗಂಗೆಯ ಪವಿತ್ರ ಜಲವನ್ನು ಇವಳ ಶರೀರದ ಮೇಲೆ ಹರಿಸಿದ್ದರಿಂದ ಮೈಯೆಲ್ಲಾ ವಿದ್ಯುತ್ತಿನ ಕಾಂತಿಯಂತೆ ಹೊಳೆಯತೊಡಗಿತು. ಮಹಾಗೌರಿಯ ವಯಸ್ಸು ಕೇವಲ ಎಂಟು ಎಂದು ತಿಳಿಯಲಾಗಿದೆ. ಶ್ವೇತ ವೃಷಭ ವಾಹನೆಯಾಗಿರುವ ಇವಳ ಬಿಳುಪನ್ನು ಹುಣ್ಣಿಮೆಯ ಚಂದ್ರ, ಶಂಖ ಹಾಗೂ ಕಂದಪುಷ್ಪಗಳಿಗೆ ಹೋಲಿಸಲಾಗಿದೆ. ಸರ್ವಾಂಗಾಭರಣಾದಿ ಶ್ವೇತವಸ್ತ್ರ ಭೂಷಿತೆಯಾಗಿರುವ ಇವಳ ಬಲಕೈಯಲ್ಲಿ ಅಭಯಮುದ್ರೆ ಮತ್ತು ತ್ರಿಶೂಲವಿದ್ದು ಎಡಕೈಗಳಲ್ಲಿ ವರದಮುದ್ರೆ ಹಾಗೂ ಡಮರು ಇವೆ. ‘ಅಷ್ಟವರ್ಷಾ ಭವೇದ್ ಗೌರಿ’ ಯಾಗಿರುವ ಇವಳನ್ನು ಉಪಾಸಿಸಿದಾಗ ಸಂಚಿತ ಪಾಪಗಳು ತೊಳೆದುಹೋಗುತ್ತವೆ. ಸಂತಾಪ, ದು:ಖಗಳ ನಿವಾರಣೆಯಾಗುವುದು ಖಚಿತ.

ಸಿಧ್ದಿದಾತ್ರೀ

ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ಮೋಕ್ಷ ಅಥವಾ ಸಿದ್ಧಿ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವ ಅಷ್ಟಸಿದ್ಧಿಗಳನ್ನೀಯುವ ಶ್ರೀದುರ್ಗೆಯ ಒಂಬತ್ತನೆಯ ರೂಪವೇ ಸಿಧ್ಧಿದಾತ್ರೀ. ಭಗವಾನ್ ಶಿವನು ಇವಳಿಂದಲೇ ಅಷ್ಟಸಿಧ್ದಿಗಳನ್ನು ಪಡೆದಿದ್ದರಿಂದ ಅರ್ಧನಾರೀಶ್ವರ ಎಂಬುದಾಗಿ ಪ್ರಸಿದ್ಧನಾಗಿದ್ದಾನೆ. ಕಮಲಪುಷ್ಪದಮೇಲೆ ತೇಜೋಮಯಿಯಾಗಿ, ಪ್ರಸನ್ನವದನಳಾಗಿ, ಅಭಯಕಾರಿಣಿಯಾಗಿ ವಿರಾಜಮಾನಳಾಗಿರುವ ಇವಳ ಬಲಕೈಗಳಲ್ಲಿ ಚಕ್ರ ಮತ್ತು ಗದೆಯಿದ್ದು ಎಡಕೈಗಳಲ್ಲಿ ಶಂಖ ಮತ್ತು ಕಮಲ ಪುಷ್ಪಗಳಿವೆ. ಶಾಸ್ತ್ರೀಯ ವಿಧಾನದಿಂದ ಹಾಗೂ ಅತ್ಯಂತ ನಿಷ್ಠೆಯಿಂದ ಸಿದ್ಧ್ಧದಾತ್ರೀಯ ಉಪಾಸನೆ ಮಾಡುವ ಭಕ್ತರನ್ನು ಅರಿಷಡ್ವರ್ಗಗಳಿಂದ ಪಾರುಮಾಡಿ ತನ್ನೊಳಗಿರುವ ಪರಮಾತ್ಮನನ್ನು ಅರಿಯುವುದಕ್ಕಾಗಿ ಸರ್ವಸಿಧ್ಧಿಗಳನ್ನಿತ್ತು ಆಶೀರ್ವದಿಸುವುದಕ್ಕಾಗಿಯೇ ದೇವಿಯು ಅವತರಿಸಿರುವಳು.

ಸುಮಂಗಲಿಯರು ಈ ನವರಾತ್ರಿಯ ದಿನದಂದು ದೇವಿಯ ಆರಾಧನೆ ಮಾಡುವುದರಿಂದ ದೇವಿಯು ಸಕಲ ಸಂತೋಷಗಳನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ ನವರಾತ್ರಿಯ ಮೊದಲ ಮೂರು ದಿನ ದುರ್ಗೆಯನ್ನು ಪೂಜಿಸಲಾಗುತ್ತದೆ. ಅಸುರ ಶಕ್ತಿಯನ್ನು ದಮನಿಸುವ ಜೊತೆಗೆ ನಮ್ಮೊಳಗಿರುವ ಹುದುಗಿರುವ ದುಷ್ಟತೆ, ಕೌರ್ಯಗಳ ಮೇಲೆ ವಿಜಯಿಸುವ ಕಾಲ. ನಂತರದ ಮೂರು ದಿನ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಈಕೆ ಜಗದ ಮಕ್ಕಳಿಗೆ ಸಂಪತ್ತು, ಮಮತೆ, ಸಮೃದ್ದಿ, ಧಾರೆ ಎರೆಯವ ಪ್ರತೀಕವಾಗಿರುತ್ತಾಳೆ ಎನ್ನುವ ದೃಷ್ಟಿಯಿಂದ. ಹೀಗೆ ನವರಾತ್ರಿಯಲ್ಲಿ ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸುವ ಪುಣ್ಯ ದಿನವಾಗಿದೆ!!!

-ಅಲೋಖಾ

Tags

Related Articles

Close