ಪ್ರಚಲಿತ

ಡಿಕೆಶಿ ಜೊತೆ ಆದಾಯ ತೆರಿಗೆ ದಾಳಿಗೊಳಗಾದ ದ್ವಾರಕ್ ನಾಥ ಯಾರು ? ಜ್ಯೋತಿಷಿಯೊಬ್ಬ ಕುಬೇರನಾದ ಕತೆ.

ಸಾಮಾನ್ಯವಾಗಿ ತೆರಿಗೆ ಅಧಿಕಾರಿಗಳು ಸಚಿವರ ಮನೆಗೆ ದಾಳಿ ಮಾಡಿದರೆ ಅವರ ಸಂಬಂಧಿಕರನ್ನು ಅಥವಾ ಮನೆಯವರನ್ನು ವಿಚಾರಣೆ ಮಾಡುತ್ತಾರೆ. ಆದರೆ ಡಿಕೆಶಿಯವರ ಮನೆಗೆ ದಾಳಿ ಮಾಡಿ ತನಿಖೆ ಮಾಡುವ ವೇಳೆ ಅವರು ತನಿಖೆ ಮಾಡಿದ್ದು ಓರ್ವ ಪ್ರಖ್ಯಾತಿ ಜ್ಯೋತಿಷಿಯನ್ನು.. ಹೌದು.. ಜ್ಯೋತಿಷಿ ದ್ವಾರಕನಾಥ ಅವರನ್ನು ತನಿಖೆ ಮಾಡಲಾಗಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿದ್ದಾರೆ. ನಿಮ್ಮ ಸಮಸ್ಯೆಯನ್ನು ನಮ್ಮಲ್ಲಿ ಹೇಳಿ, ನಾವು ಸಮಸ್ಯೆಷನ್ನು ಪರಿಹರಿಸುತ್ತೇವೆಂದು ಹೇಳುತ್ತಿದ್ದ ಜ್ಯೋತಿಷಿ ದ್ವಾರಕನಾಥರೇ ಸಮಸ್ಯೆಗೆ ಸಿಲುಕಿ ದಾರಿ ತೋಚದಂತಾಗಿದ್ದಾರೆ ಅನ್ನುವುದೇ ಅಚ್ಚರಿಯ ಸಂಗತಿ‌.

ವಿವಾದಗಳು ಅವರಿಗೆ ಹೊಸತೇನಲ್ಲ. ಈ ಹಿಂದೆಯೂ ಅನೇಕ ವಿವಾದಗಳು ಇವರಿಗೆ ಅಂಟಿದ್ದವು‌. ಅದನ್ನು ತಿಳಿಯುವ ಮುಂಚೆ ಇವರ ಹಿನ್ನಲೆಯನ್ನು ಗಮನಿಸೋಣ. ಇವರ ತಂದೆ ಬೆಳ್ಳೂರು ಶಂಕರನಾರಾಯಣ ರು ಹೆಸರಾಂತ ಜ್ಯೋತಿಷಿಯಾಗಿದ್ದರು. ಆದರೆ ಇವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮಗ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಇವರ ಮೇಲೆ ಅವ್ಯವಹಾರದ‌ ಆರೋಪ ಕೇಳಿಬಂದಿತು. ಅದರಿಂದಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಯಿತು. ನಂತರ ಕೋರ್ಟಿನಲ್ಲಿ ದೋಷಮುಕ್ತರೆಂದು ಸಾಬೀತಾದ ಮೇಲೆ ತಮ್ಮ ಕೆಲಸಕ್ಕೆ ರಾಜಿನಾಮೆಯನ್ನಿಟ್ಟರು. ತದನಂತರ ಜ್ಯೋತಿಷ್ಯವನ್ನು ಅಭ್ಯಸಿಸಿ ಅದನ್ನೇ ವೃತ್ತಿಯನ್ನಾಗಿಸಿದರು.

ಅನೇಕರಿಗೆ ಅರಿವಿರುವಂತೆಯೇ ಇವರು ನಿಖರ ಭವಿಷ್ಯಕ್ಕೆ ಹೆಸರಾದವರು. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರೊಂದಿಗೆ ನಿಕಟ ಸಂಪರ್ಕವನ್ನು ಹೋಂದಿದ್ದರು. ಅವರ ಅಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರಿಂದಾಗಿ ದ್ವಾರಕನಾಥರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪರಿಚಯವೂ ಆಯಿತು. ತುರ್ತು ಪರಿಸ್ಥಿಯ ನಂತರ ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ವಿಜಯರಾಗುತ್ತಾರೆಂದು ಭವಿಷ್ಯ ನುಡಿದಿದ್ದರು ದ್ವಾರಕನಾಥ್. 2014 ರಲ್ಲಿ ಅಮೇರಿಕಾದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ 2014 ರ ಭಾರತದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಅಭೂತಪೂರ್ವವಾಗಿ ಗೆಲ್ಲಲಿದೆ ಎಂದಿದ್ದರು. ಈ ಎಲ್ಲಾ ಸಂಗತಿಗಳಿಂದಾಗಿ ಅವರ ಕೀರ್ತಿ ಹಾಗೂ ಪ್ರಭಾವ ಉನ್ನತ ಮಟ್ಟಕ್ಕೇರಿತು.

ಅನೇಕ ಪ್ರಭಾವಿ ರಾಜಕಾರಣಿಗಳು, ಬಾಲಿವುಡ್ ನಟ-ನಟಿಯರು, ಕ್ರೀಡಾಪಟುಗಳು ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳು ಇವರ ಶಿಷ್ಯರಾದರು. ಜ್ಯೋತಿಷಿಯ ಮಾರ್ಗದರ್ಶನ ಸಲಹೆ-ಸೂಚನೆಗಳನ್ನು ಪಡೆಯುತ್ತಾ ಇದ್ದರು. ಇವರಿಗಿದ್ದ ಅಂತಹ ಪ್ರಭಾವಗಳಿಂದ ಅನೇಕ ಭಾರಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಇವರ ಮನೆಯಲ್ಲೇ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ನಿಧನರಾಗಿದ್ದರು. ಅದು ಸಾಮಾನ್ಯ ಸಾವಾಗಿರಲಿಲ್ಲ, ಬದಲಾಗಿ ಸಂಶಯಾಸ್ಪದ ಸಾವಾಗಿತ್ತು. ಆಗ ಅರಸು ಮನೆತನದವರು ತನಿಖೆಗಾಗಿ ಅಗ್ರಹಿಸಿದ್ದರು. ಆದರೆ ಇವರು ತಮ್ಮ ಪ್ರಭಾವವನ್ನು ಬಳಸಿ ಈ ವಿವಾದದಿಂದ ಪಾರಾಗಿದ್ದರು. ಇಂತಹ ಕೆಲವು ವಿವಾದಗಳಿಂದ ತಮ್ಮ ಪ್ರಭಾವವನ್ನು ಬಳಸಿ ಪಾರಾದವರು ದ್ವಾರಕನಾಥ್ .

ಇಂತಹ ಪ್ರಭಾವಿ ಜ್ಯೋತಿಷಿಯ ಸ್ನೇಹ ಡಿಕೆಶಿಯವರಿಗೆ ಇವತ್ತು ನಿನ್ನೆಯದಲ್ಲವೆಂಬುದು ಸೋಜಿಗದ ಸಂಗತಿ. ಎಸ್ ಜೆ ಆರ್ ಸಿ ಕಾಲೇಜಿನಲ್ಲಿ ಡಿಕೆಶಿ ವಿದ್ಯಾರ್ಥಿ ನಾಯಕರಾಗಿದ್ದರು. ಆಗಲೇ ಅವರ ಪಕಿಚಯ ಇವರಿಗಾಗಿತ್ತು. ಜ್ಯೋತಿಷಿ ಪ್ರಭಾವದಿಂದಾಗಿ 25 ನೆಯ ವಯಸ್ಸಿಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಲಭಿಸಿತ್ತು. ನಂತರ ತಮ್ಮ ದೆಹಲಿಯ ಪ್ರಭಾವ ಬಳಸಿ ಬಂಗಾರಪ್ಪರವರ ಸಂಪುಟದಲ್ಲಿ ಬಂಧಿಖಾನೆ ಸಚಿವರನ್ನಾಗಿ ನೇಮಿಸುವಲ್ಲಿಯೂ ಮಹತ್ವದ ಪಾತ್ರವನ್ನು ದ್ವಾರಕನಾಥ್ ಅವರು ವಹಿಸಿದ್ದರು.

ತನಿಖಾಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದು ಪ್ರಥಮ ಬಾರಿಗೆಯಾ?? ಖಂಡಿತಾ ಅಲ್ಲ. ಮಗಳನ್ನು ವೈದ್ಯೆ ಮಾಡಲು ಹೋಗಿ ಸಿಬಿಐಗೆ ಸಿಕ್ಕಿಬಿದ್ದಿದ್ದರು. ಧರಂ ಸಿಂಗ್ ಸಿಎಂ ಆಗಿದ್ದಾಗ ರಾಜೀವ್ ಗಾಂಧಿ ವಿವಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ತಮ್ಮ ಮಗಳಿಗೆ ಪಿಜಿ ಸೀಟ್ ಕೊಡಿಸಿದ್ದು ಬಹಳ ದೊಡ್ಡ ವಿವಾದವಾಗಿತ್ತು. ತಮ್ಮ ಮಗಳನ್ನು ವೈದ್ಯೆಯಳನ್ನಾಗಿಸಲು ವಿವಿಯ ಉಪಕುಲಪತಿಗಳನ್ನೇ ತಮ್ಮ ಆಪ್ತರನ್ನು ಮಾಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು . ಆ ಪ್ರಕರಣದಲ್ಲಿ ಉಪಕುಲಾಪತಿ ಡಾ. ಪ್ರಭಾಕರ್ , ದ್ವಾರಕನಾಥ ಹಾಗೂ ತಮ್ಮ ಮಗಳನ್ನು ಸಿಬಿಐ ತನಿಖೆ ಮಾಡಿತ್ತು.

ಇನ್ನೂ ಹಲವಾರು ಪ್ರಕರಣಗಳಲ್ಲಿ ಇವರು ತನಿಖೆಯನ್ನೆದುರಿಸಿದ್ದಾರೆ. ಈಗ ಮಗದೊಂದು. ಒಟ್ಟಾರೆಯಾಗಿ ಮಾಡಿದ್ದಣ್ಣೋ ಮಹರಾಯ ಅನ್ನುವ ಸ್ಥಿತಿ ನಿರ್ಮಾಣವಾಗಿದೆ ಅನ್ನುವುದು ಮಾತ್ರ ಸತ್ಯ

Tags

Related Articles

Close