ಅಂಕಣ

ಡಿ.ಕೆ. ಶಿವಕುಮಾರ್ ಅವರೇ ನನ್ನದೊಂದು ಬಹಿರಂಗ ಪತ್ರ! ಇದನ್ನು ಓದಿ ನನ್ನನ್ನು ಜೈಲಿಗಟ್ಟಬೇಡಿ ಪ್ಲೀಸ್!!

ಆತ್ಮೀಯ ಡಿ.ಕೆ. ಶಿವಕುಮಾರ್ ಅವರೇ ತಮಗಿದೋ ಆದರದ ಪ್ರಣಾಮಗಳು… ಹೇಗಿದ್ದೀರಿ ಮತ್ತೆ? ಆರಾಮ ತಾನೆ…? ತುಂಬಾ ದಿನಗಳಿಂದ ನಿಮಗೆ ಪತ್ರ ಬರೀಬೇಕೂಂತಾ ಇದ್ದೆ. ಆದ್ರೆ ನೆನಪೇ ಆಗ್ತಿರಲಿಲ್ಲ. ಆದ್ರೆ ಈಗ ಎಕ್ಸಾಂ ಹತ್ತಿರ ಬರ್ತಾ ಇದೆ. ಯಾವಾಗ ನೋಡಿದ್ರೂ ಪವರ್‍ಕಟ್. ಅದಕ್ಕಾಗಿಯೇ ನಾನಿಂದು ಪತ್ರ ಬರೆಯುತ್ತಿದ್ದೇನೆ. ಈ ಪತ್ರವನ್ನು ನೋಡಿ ನೀವು ನನ್ನ ಜೈಲಿಗಟ್ಟುವುದಿಲ್ಲ ಎಂಬ ಭರವಸೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ. ಪ್ಲೀಸ್ ನನ್ನ ಜೈಲಿಗಟ್ಟಬೇಡಿ…

ಎಷ್ಟಾದ್ರೂ ನೀವು ಕನಕಪುರದ ಬಂಡೆ ತಾನೇ… ಬಂಡೆಗೆ ಮಂಡೆ ಬಡಿದರೆ ಮಂಡೆಯೇ ಪುಡಿಯಾಗುವುದಲ್ಲವೇ… ನಿಮ್ಮಂತಹಾ ಬಂಡೆಗೆ ನನ್ನಂತಾ ಚಿಕ್ಕ ಹುಡುಗಿ ಮಂಡೆ ಬಡಿದರೆ ನನ್ನ ಮಂಡೆಯ ಗತಿಯೇನು? ಒಂದುವೇಳೆ ನಿಮಗೆ ಸಿಟ್ಟು ಬಂದು ನಮ್ಮ ಮನೆಗೆ ಪೊಲೀಸರನ್ನು ಕಳಿಸಿ ದರದರ ಎಳೆದುಕೊಂಡು ಹೋಗಿ ಜೈಲಿಗಟ್ಟಿದರೆ ನನ್ನ ಗತಿಯೇನು? ಸಮಸ್ಯೆ ಹೇಳಿದವರನ್ನು ಜೈಲಿಗಟ್ಟಿ ರೌಡಿಸಂ ತೋರಿಸುವವರ ಮುಂದೆ ನನ್ನಂತಹಾ ಬಡಪಾಯಿಗಳು ಭಯಪಡುವಂತಹಾ ಕಾಲ ಬಂದಿದೆ. ಅದಕ್ಕೆ ನನಗೆ ಕನಕಪುರದ ಬಂಡೆಗೆ ಮಂಡೆ ಬಡಿಯಲು ಭಯ…

ನನ್ನನ್ನು ಜೈಲಿಗಟ್ಟಬೇಡಿ ಅನ್ನೋದಕ್ಕೂ ಒಂದು ಕಾರಣವಿದೆ ಸರ್… ಯಾಕೆ ಗೊತ್ತಾ? ಸುಳ್ಯ ತಾಲೂಕಿನ ಬೆಳ್ಳಾರೆಯ ಸಾಮಾಜಿಕ ಕಾರ್ಯಕರ್ತ, ಕೃಷಿಕ ಸಾಯಿ ಗಿರಿಧರ್ ರೈ ಅವರು ನಿಮ್ಮಲ್ಲೇನೋ ವಿದ್ಯುತ್ ಸಮಸ್ಯೆ ಹೇಳಿಕೊಂಡಿದ್ದರಂತಲ್ಲಾ. ಆಗ ನೀವು ಸಿಟ್ಟುಗೊಂಡ ಸುಳ್ಯದ ಪೊಲೀಸರಿಗೆ ಫೋನ್ ಮಾಡಿ, ಅದ್ಯಾವನೋ ಸಮಸ್ಯೆ ಅಂತ ನನ್ನ ತಲೆ ತಿನ್ತಾ ಇದ್ದಾನೆ ಅವನನ್ನು ಜೈಲಿಗಟ್ಟಿ ಎಂದು ಸೂಚಿಸಿದ್ದಿರಲ್ವಾ… ಪೊಲೀಸರು ನಿಮ್ಮ ಮಾತಿಗೆ ಮರ್ಯಾದೆ ಕೊಟ್ಟು ಮೂರು ವಾಹನಗಳಲ್ಲಿ ಮನೆಗೆ ಬಂದು ಮನೆಯವರು ಕುಯ್ಯೋಮುರಿಯೋ ಎಂದು ಬೊಬ್ಬಿಟ್ಟರೂ ನೇರವಾಗಿ ಮನೆಯ ಹಿಂಬಾಗಿಲನ್ನು ಮುರಿದು ಸಮಸ್ಯೆ ಹೇಳಿದವರನ್ನು ದರದರನೆ ಎಳೆದುಕೊಂಡು ಹೋಗಿ, ಅವರ ಬೆನ್ನು ಮೂಳೆ ಮುರಿದು ಲಾಕಪ್ಪಿಗೆ ದೂಡಿದ್ರಂತಲ್ವಾ…. ಅದಕ್ಕಾಗಿಯೇ ನನಗೆ ನಿಮ್ಮಲ್ಲಿ ಸಮಸ್ಯೆ ಹೇಳಲು ಭಯ. ಆದ್ರೂ ಭಂಡ ಧೈರ್ಯದಿಂದ ಸಮಸ್ಯೆ ಹೇಳುತ್ತಿದ್ದೇನೆ. ಸ್ವಲ್ಪ ಶಾಂತಚಿತ್ತರಾಗಿ ಕೇಳಿ…

ನನಗೆ ಗೊತ್ತು! ಐಟಿಯವರು ರೈಡ್ ಮಾಡಿದ್ದರಿಂದ ನಿಮ್ಮ ಮೂಡ್ ಹಾಳಾಗಿದೆ ಅಂತ. ನಿಮ್ಮ 400 ಕೋಟಿ ರೂ. ಆಸ್ತಿ ಖೋತಾ ಆಗುತ್ತದೆ ಎಂದಾಗ ಯಾರಿಗಾದ್ರೂ ಟೆನ್ಷನ್ ಆಗದೇ ಇರುತ್ತದಾ? ನನ್ನ ಬ್ಯಾಗ್‍ನಲ್ಲಿರುವ ಹತ್ತು ರೂ. ಪ್ಯಾಕೆಟ್‍ಮನಿ ಬಿಸಾಡಿಹೋದಾಗಲೇ ಇಷ್ಟು ಟೆನ್ಷನ್ ಆಗುವಾಗ ನಿಮ್ಮ 400 ಕೋಟಿ ಹಣಕ್ಕೆ ಧಕ್ಕೆ ಬಂದಾಗ ಟೆನ್ಷನ್ ಆಗದೇ ಇರುತ್ತದಾ? ಅದಕ್ಕೆಲ್ಲಾ ಟೆನ್ಷನ್ ಮಾಡ್ಬೇಡಿ. ನೀವು ನ್ಯಾಯವಾಗಿ ದುಡಿದ ಹಣವೇ ಆಗಿದ್ರೆ ಅದೆಲ್ಲಿಗೂ ಹೋಗುವುದಿಲ್ಲ. ಇನ್ನೊಬ್ಬರ ದುಡ್ಡು ನಮಗ್ಯಾಕೆ ಅಲ್ವಾ..?

ಡಿಕೆಶಿ ಸರ್, ಮೊನ್ನೆವರೆಗೂ ಟೈಂಟು ಟೈಂ ಕರೆಂಟ್ ಹೋಗ್ತಾ ಇರ್ಲಿಲ್ಲ. ಕರ್ನಾಟಕದಲ್ಲಿ ಕರೆಂಟ್ ಸಮಸ್ಯೆ ಇಲ್ಲ ಅಂತ ಬಹಳ ಖುಷಿಯಲ್ಲಿದ್ದೆ. ಆದ್ರೆ ಇದೀಗ ಮತ್ತೆ ಕರೆಂಟ್ ಕೈಕೊಡಲಾರಂಭಿಸಿದೆ. ಕರ್ನಾಟಕಕ್ಕೆ ಮತ್ತೆ ಕತ್ತಲೆ ಭಾಗ್ಯ. ಅದೆಂಥದೋ ಲೋಡ್‍ಶೆಡ್ಡಿಂಗ್ ಅಂತೆ. ಏನ್‍ಮಾರಾಯ್ರೆ ಮೊನ್ನೆ ಮೊನ್ನೆವರೆಗೂ ಮಳೆ ಬರ್ತಾ ಇತ್ತು.. ಆಗ್ಲೇ ಲೋಡುಶೆಡ್ಡಿಂಗ್ ಶುರು ಮಾಡಿದ್ರಾ? ಈವಾಗ್ಲೇ ಹೀಗೆ. ಇನ್ನು ಮುಂದೆ ಗತಿಯೇನು? ಎರಡು ದಿನಗಳಿಂದ ಸಂಜೆ ಏಳರ ನಂತ್ರ ಕರೆಂಟ್ ಹೋದ್ರೆ ಮತ್ತೆ ಬರುವುದು 9 ಗಂಟೆಯ ನಂತರವೇ.. ಅದೂ ಕೂಡಾ ಬಂದ್ರೆ ಬಂತು ಇಲ್ಲವಾದರೆ ಇಲ್ಲ. ಅಲ್ಲಾ ಸ್ವಾಮಿ ಪರೀಕ್ಷೆ ಬೇರೆ ಹತ್ರ ಬರ್ತಾ ಇದೆ. ಹೀಗೆಯೇ ಆದ್ರೆ ನಾವು ಓದೋದು ಯಾವಾಗ? ಎಕ್ಸಾಂ ಬೇರೆ ಹತ್ರ ಬರ್ತಾ ಇದೆ. ನನ್ನಣ್ಣ ಕಾಲೇಜಿಗೆ ಹೋಗೋದು. ಅವನಿಗೆ ತುಂಬಾ ಓದ್ಲಿಕ್ಕಿದೆ. ಆದ್ರೆ ಈ ವಿದ್ಯುತ್ ಸಮಸ್ಯೆಯಿಂದಾಗಿ ಓದೋಕೆ ಸಾಧ್ಯವಾಗ್ತಾ ಇಲ್ಲ.

ಕರ್ನಾಟಕದಲ್ಲಿ ಇನ್ನು ಮುಂದೆ ಕರೆಂಟಿಗೆ ಬರ ಬರುವುದಿಲ್ಲ, ದಿನದ 24 ಗಂಟೆಯೂ ಕರೆಂಟ್ ಬರ್ತದೆ ಎಂದು ನೀವು ಸುಳ್ಳು ಹೇಳಿದ್ದು ಯಾಕೆ? ಐದು ವರ್ಷಗಳಿಂದ ನಿಮಗೆ ವಿದ್ಯುತ್ ಸಮಸ್ಯೆ ನಿವಾರಿಸಲಾಗಿಲ್ಲವೇ? ನೀವು ಇಂಧನ ಸಚಿವರಾಗಿದ್ದಂತೆ ಎಲ್ಲಾ ವಿದ್ಯುತ್ ಸಮಸ್ಯೆ ಸರಿಯಾಗುತ್ತದೆ ಎಂದು ಭಾವಿಸಿದ್ದೆ ಆದ್ರೆ ಅದೆಲ್ಲಾ ಸುಳ್ಳಾಗಿ ಹೋಯ್ತೇ. ಅದೇನೋ ಶಾಖ ವಿದ್ಯುತ್‍ಗೆ ಕಲ್ಲಿದ್ದಲು ಕೂಡಾ ಬರದೆ ಮುಚ್ಚುವ ಸ್ಥಿತಿಯಲ್ಲಿದೆ ಎಂದು ಪತ್ರಿಕೆಯಲ್ಲಿ ಬಂದಿತ್ತು. ನೀವು ಇಷ್ಟರವರೆಗೆ ಎಲ್ಲಿ ಗೂಟ ಹೊಡೆದು ಕೂತಿದ್ರಿ..? ಶಾಖ ವಿದ್ಯುತ್‍ಗೆ ಕಲ್ಲಿದ್ದಲು ಪೂರೈಸಿದ್ದೇ ಆಗಿದ್ರೆ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಬಹುದಿತ್ತಂತೆ.. ಆದ್ರೆ ನೀವ್ಯಾಕೆ ಹಾಗೆ ಮಾಡ್ಲಿಲ್ಲ? ಇದನ್ನೆಲ್ಲಾ ಕೇಳುವಾಗ ನಿಮಗೆ ಸಿಟ್ಟು ಬರಬಹುದಲ್ವೇ?

ನೀವು ಮಾಡಿದ ಸಾಧನೆ ಇಷ್ಟೆ. ಲೈನ್‍ಮ್ಯಾನ್ ಎಂಬ ಹೆಸರನ್ನು ಪವರ್‍ಮ್ಯಾನ್ ಆಗಿ ಬದಲಾಯಿಸಿರುವುದು! ಲೈನ್‍ಮ್ಯಾನ್‍ಗಳ ಸಮಸ್ಯೆಗೆ ನೀವು ದನಿಯಾಗಿದ್ದೀರಾ? ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಲೈನ್‍ಮ್ಯಾನ್‍ಗಳನ್ನು ಮನೆಗೆ ಕಳುಹಿಸಿ ಆಮೇಲೆ ಪರೀಕ್ಷೆ ಬರೆಸಿದಿರಿ. ಎಸ್‍ಎಸ್‍ಎಲ್‍ಸಿ, ಐಟಿಐ ಆದವರನ್ನು ಕೆಲಸಕ್ಕೆ ಸೇರಿಸುವುದಾಗಿ ಹೇಳಿದ್ದಕ್ಕೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ರು. ಇದರಲ್ಲಿ ನನ್ನ ದೊಡ್ಡಮ್ಮನ ಮಗ ಕೂಡಾ ಒಬ್ಬ. ಆದ್ರೆ ಅರ್ಜಿ ಸಲ್ಲಿಸಿದವರ ಕಥೆ ಅಷ್ಟೆ. ಇದರಲ್ಲಿಯೂ ಗೋಲ್‍ಮಾಲ್ ನಡೆದಿದ್ದು ಕಂಬ ಹತ್ತಲು ಗೊತ್ತಿಲ್ಲದವರನ್ನು ಕೆಲಸಕ್ಕೆ ಸೇರಿಸಿದ್ರಿ. ಇನ್ನು ಕೆಲಸ ಮಾಡುವ ಲೈನ್‍ಮ್ಯಾನ್‍ಗಳಿಗೆ ವಿದ್ಯುತ್ ನಿರೋಧಕ ಕವಚ, ಹೆಲ್ಮೆಟ್, ಕಂಬ ಹತ್ತುವ ಸಾಮಗ್ರಿ ಕೊಟ್ಟಿದ್ದೀರಾ?

2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 13000 ಸೋಲಾರ್ ಪ್ಯಾನಲ್ ಬಳಸಲು ನಿರ್ಧರಿಸಿದ್ದೇನೆ ಎಂದು ನೀವ್ಯಾಕೆ ಹೇಳಿದ್ದು? ಇದು ಕೇಂದ್ರದ ಸಬ್ಸಿಡಿಯಿಂದಾಗುವ ಯೋಜನೆಯಾಗಿದ್ದರೂ ತನ್ನ ಯೋಜನೆಯೆಂದು ಸುಳ್ಳು ಹೇಳಿದ್ದು ಯಾಕೆ? ಅದನ್ನು ಮುಂಚೆಯೇ ಆರಂಭಿಸಿದ್ದಿದ್ದರೆ ಎಂದೋ ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತಿತ್ತು. ಆದರೆ ಇದನ್ನು ಮಾಡಲಾಗದೆ ಇದೀಗ ಆ ಯೋಜನೆ ತನ್ನದೆಂದು ಯಾಕೆ ಹೇಳಿದಿರಿ ಸ್ವಾಮಿ?

ಶೋಭಾ ಕರಂದ್ಲಾಜೆಯ ಕಾಲದ ಪವರ್ ಪ್ರೋಜೆಕ್ಟ್‍ಗಳನ್ನೇ ಮುಂದುವರಿಸಲು ಸಾಧ್ಯವಾಗದೆ ಕರ್ನಾಟಕವನ್ನು ಕತ್ತಲಲ್ಲಿಟ್ಟ ನೀವು ಅದ್ಯಾವ ಸೀಮೆಯ ಪವರ್‍ಮಿನಿಸ್ಟರ್ ಸ್ವಾಮಿ? ತಾನು ಕನಕಪುರದ ಬಂಡೆ ಎನ್ನುವುದು ಯಾಕೆ? ನಿಮ್ಮ ಹಣಬಲ, ತೋಳ್ಬಲದಿಂದ ತಾನು ಕನಕಪುರದ ಬಂಡೆ ಎಂದು ಹೇಳಬಹುದು. ಆದರೆ ಆ ಬಂಡೆಯನ್ನು ಒಡೆಯಲು ಚಿಕ್ಕದೊಂದು ಸಣ್ಣೆ ಸಾಕು ಅದನ್ನು ನೆನಪಿಡಿ ಸ್ವಾಮೀ. ಡಿಕೆಶಿ ಒಬ್ಬ ಕೋತ್ವಾಲ ರಾಮಚಂದ್ರನಿಗೆ ಟೀ ತೆಗೆದುಕೊಂಡು ಹೋಗಿ ಕೊಡ್ತಿದ್ದ ಚೇಲಾ ಆಗಿದ್ದ ಎಂದು ಸಿ.ಪಿ.ಯೋಗೇಶ್ವರ್ ನಿಮ್ಮ ಬಗ್ಗೆ ಹೇಳಿದ್ದು ನೆನಪಿದೆಯೇ? ನನಗಂತೂ ಚೆನ್ನಾಗಿ ನೆನಪಿದೆ… ಆಗ ನಾನು ಇನ್ನೂ ಚಿಕ್ಕವಳಿದ್ದೆ..

ಇರಲಿಬಿಡಿ… ಇವತ್ತಿಗೆ ಇಷ್ಟು ಸಾಕು ಎಂದುಕೊಂಡಿದ್ದೇನೆ. ಮುಂದಿನ ಪತ್ರದಲ್ಲಿ ಮತ್ತಷ್ಟು ವಿಷಯಗಳನ್ನು ಪ್ರಸ್ತಾಪಿಸುವೆ. ನನ್ನ ಪತ್ರ ಓದಿ ನಿಮಗೆ ಕೋಪ ಬಂದಿದ್ರೆ ಸ್ವಲ್ಪ ನೀರು ಕುಡಿದು ರಿಲಾಕ್ಸ್ ಆಗಿ. ಕೋಪದ ಆವೇಶದಲ್ಲಿ ನನ್ನನ್ನು ಜೈಲಿಗಟ್ಟುವ ಕೆಲಸ ಮಾಡಬೇಡಿ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ.

ಇತೀ
ಶರಣ್ಯಾ ಕೆ.ಎಸ್.
ಸರಕಾರಿ ಪ್ರೌಢ ಶಾಲೆ ಬೆಂಗಳೂರು

Tags

Related Articles

Close