ಪ್ರಚಲಿತ

ದಲಿತರನ್ನ ಅರ್ಚಕನ್ನಾಗಿ ನೇಮಿಸಿದರೆ ತಮ್ಮ ಗಂಜಿಗೇ ಕುತ್ತು ಬರಬಹುದು ಅಂತ ಬುದ್ಧಿಜೀವಿಗಳಿಗೆ ಅನಿಸಿದ್ಯಾಕೆ?

ದಲಿತರು ಇಂಜಿನಿಯರ್ , ಡಾಕ್ಟರ್, ರಾಜಕಾರಣಿ, ರಾಷ್ಟ್ರಪತಿ ಆಗುವುದಾದರೆ ಅರ್ಚಕರಾಗಬಾರದೇಕೆ ಎಂಬ ಪ್ರಶ್ನೆಯೊಂದಿಗೆ ಮಾನ್ಯ ಮುಖ್ಯ ಮಂತ್ರಿಗಳು ದಲಿತರನ್ನು ಅರ್ಚಕರನ್ನಾಗಿ ನೇಮಕ ಮಾಡುವ ಪ್ರಸ್ತಾಪವನ್ನ ಮುಂದಿಟ್ಟಿದ್ದಾರೆ. ಅವರ ಈ ನಿರ್ಧಾರ ಅತ್ಯುತ್ತಮವಾದುದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಗುಜರಾತ್, ಕೇರಳ, ತಮಿಳುನಾಡು ಈ ಕೆಲಸವನ್ನ ಮಾಡಿದೆ.

ದಲಿತರನ್ನ ಅರ್ಚಕನ್ನಾಗಿ ನೇಮಿಸುವುದನ್ನ ಈಗಾಗಲೇ ಅರ್ಚಕ ವೃತ್ತಿಯನ್ನ ಪಾರಂಪರಿಕವಾಗಿ ಆಚರಿಸುತ್ತ ಬಂದಿರುವ ಬ್ರಾಹ್ಮಣರು ವಿರೋಧಿಸುತ್ತಿಲ್ಲ. ಬದಲಿಗೆ ದಲಿತರನ್ನ ಗುತ್ತಿಗೆ ತಗೆದುಕೊಂಡವರಂತೆ ಮಾತನಾಡುವ ಸೋ ಕಾಲ್ಡ್ ಬುದ್ಧಿಜೀವಿಗಳೇ ಇದನ್ನ ಒಳಗೊಳಗೇ ವಿರೋಧ ಮಾಡುತ್ತಿದ್ದಾರೆ.
ದಲಿತರಿಗೆ ವೇದ ಶಾಸ್ತ್ರಗಳ ತರಬೇತಿ ನೀಡಿ ಅರ್ಚಕನ್ನಾಗಿ ಮಾಡಿದರೆ ಅವರು ವೈದಿಕರಾಗಿ ಬಿಡುತ್ತಾರೆ, ತಮ್ಮ ಅಸ್ತಿತ್ವ ಮತ್ತು ಡೊಂಗೀ ಹೋರಾಟ ಹಾರಾಟಗಳು, ಮೂರೊತ್ತಿನ ಗಂಜೀಗೂ ಕುತ್ತುಬಂದೀತೆಂಬ ಭಯದಲ್ಲಿದ್ದಾರೆ ಈ ಬುದ್ಧಿಜೀವಿಗಳು.

ಅರ್ಚಕನಾಗುವವನು ಆಗಮಾದಿ, ವೇದ ಪಾರಂಗತನಾಗಿರಬೇಕು, ಮಾಂಸಹಾರ ಪರಿತ್ಯಾಗಿಯಾಗಬೇಕು. ಶುದ್ಧ ಸಸ್ಯಹಾರಿಯಾಗಿ ಮಡಿ ಮಾಡಬೇಕು. ದಲಿತರಿಗೆ ವೇದಾಧ್ಯಯನವಾದರೆ, ಅರ್ಚಕರಾದರೆ ದಲಿತರ ಆಹಾರ ಕ್ರಮ, ಹಿಂದಿನಿಂದ ಆಚರಿಸಿಕೊಂಡು ಬಂದ ತಮ್ಮ ಕಸುಬು, ದಲಿತ ಸಂಸ್ಕೃತಿ ನಾಶವಾಗಿಬಿಡುತ್ತದೆ. ‌ಪುರೋಹಿತಶಾಯಿಯಾಗಿ ಬದಲಾಗಿ ಬಲಪಂಥೀಯ ಚಿಂತನೆಗೆ ಆನೆ ಬಲ ಬಂದು ಬಿಡುತ್ತದೆ ಎಂಬಾದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬ್ರಾಹ್ಮಣರು ವೇದಾಧ್ಯಯನದಿಂದ ದೂರವಿಟ್ಟರು, ಸಂಸ್ಕೃತವನ್ನ ಕಲಿಸಲಿಲ್ಲ, ಕಿವಿಯೊಗಳಗೆ ಕಾದ ಸೀಸವನ್ನ ಸುರಿದು ಬಿಟ್ಟರು ಎಂದು ಪುಂಖಾನು ಪುಂಖವಾಗಿ ಬರೆದು ಭಾಷಣಮಾಡಿದವರು ಇಂದು ಅದೇ ದಲಿತ ಸಮುದಾಯಕ್ಕೆ ವೇದ ಕಲಿಸಲು ಸಂಸ್ಕೃತ ಶಿಕ್ಷಣ ನೀಡ ಹೊರಟರೆ “ವೈದಿಕಶಾಹಿ” ಹೇರಿಕೆ ಎಂದು ಬೊಬ್ಬೆಯೊಡಿಯುತ್ತಿದ್ದಾರೆ.

ಅರ್ಚನಿಗಿರುವ ಸಂಭಾವನೆ ಅತೀ ಕಡಿಮೆ, ಈ ಕಾಲದಲಿ ಜೀವನಸಾಗಿಸಲು ಕಷ್ಟ ಎಂದು ಹೇಳುತ್ತಿರುವರು ಅದೇ ಅರ್ಚಕ ವೃತ್ತಿ ಮಾಡಿಕೊಂಡು ಬಂದಿರುವ ಬ್ರಾಹ್ಮಣ ಸಮುದಾಯದಲ್ಲೂ ಕಡು ಬಡವರಿದ್ದಾರೆ ಎಂದು ಮರೆತೇ ಬಿಟ್ಟಿದ್ದಾರೆ.

ದಲಿತರನ್ನ ಅರ್ಚಕನ್ನಾಗಿ ನೇಮಿಸಬೇಡಿ , ಪೌರಕಾರ್ಮಿಕನ್ನಾಗಿ ಮೇಲ್ಜಾತಿಯವರನ್ನ ನೇಮಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವದನ್ನ ನೋಡಿದರೆ ದಲಿತರು ಮುಂದೆಬರಬೇಕು ಎನ್ನುವುದಕ್ಕಿಂತ ಮೇಲ್ಜಾತಿಯ ವರು ದಮನವಾಗಬೇಕೆಂಬುದೆ ಅವರ ಆಂತರ್ಯಭಾವ ಹೊರತು ಮತ್ತೇನಲ್ಲ.

ಇಂದಿನ ದಲಿತ ಹೋರಾಟವು ಜಾತಿಭೇದ ಮರೆಸಿ ಸಾಮರಸ್ಯ ಸಾಮಾಜಿಕ ನ್ಯಾಯ ಒದಗಿಸುವ ಬದಲಾಗಿ ಬ್ರಾಹ್ಮಣ ದ್ವೇಷ ಬಿತ್ತಿ ಜಾತಿಗಳ ಮಧ್ಯೆ ಮತ್ತೆ ಒಡಕುಗಳನ್ನು ತರುತ್ತಿದ್ದಾರೆ. ಒಟ್ಟು ಮಾಡುದನ್ನ ಬಿಟ್ಟು ಬಿರುಕು ಮೂಡಿಸುತ್ತಿದ್ದಾರಷ್ಟೇ.

ಇನ್ನು ಸನಾತನ ಧರ್ಮದ ವಿಚಾರಕ್ಕೆ ಬಂದರೆ ವರ್ಣಗಳು ಹುಟ್ಟಿನಿಂದ ನಿರ್ಮಿತವಾದುದ್ದಲ್ಲ. ಕರ್ಮ ಮತ್ತು ಗುಣ ಆಧಾರಿತ. ಇದನ್ನೆ ಶ್ರೀಕೃಷ್ಣ ಭಗವದ್ಗೀತೆಯಲ್ಲೂ ಹೇಳಿರುವುದು.

ಹಾಗಾಗಿ ಯಾರುಬೇಕಿದ್ದರೂ ಬ್ರಾಹ್ಮಣನಾಗಬಹುದಿತ್ತು, ಶೂದ್ರಾದಿ ಕ್ಷತ್ರಿಯನಾಗ ಬಹುದಿತ್ತು. ಕಾಲಕ್ರಮೇಣ ವರ್ಣ ಹುಟ್ಟಿಗೆ ಅಂಟಿಕೊಂಟು ತನ್ನ ಮೂಲ ಆಶಯವನ್ನೆ ಕಳೆದುಕೊಂಡಿತು.

ಒಟ್ಟಿನಲ್ಲಿ ಹಿಂದುತ್ವ ತತ್ವ ಮತ್ತು ಜಾತಿ ಸಾಮರಸ್ಯಕ್ಕೆ ದಲಿತರನ್ನು ಅರ್ಚಕರನ್ನಾಗಿ ನೇಮಿಸುವುದು ಹೆಚ್ಚು ಬಲವನ್ನ ನೀಡುತ್ತದೆ. ಎಡ – ಬಲವೆನ್ನದೇ ಎಲ್ಲರೂ ಸ್ವಾಗತಿಸಿ ಸಾಮರಸ್ಯವ ಬಲಪಡಿಸಬೇಕು.

ಆದರೆ ದಲಿತರನ್ನ ಅರ್ಚಕರನ್ನಾಗಿ ನೇಮಿಸಿ ಎನ್ನುವುದು ದಲಿತರ ಕೂಗಲ್ಲ, ದಲಿತರಿಗೆ ತನ್ನನ್ನು ದಲಿತ ದಲಿತ ಎಂದು ಇದೇ ಬುದ್ಧಿಜೀವಿಗಳು ಗುರಾಣಿಯಾಗಿ ತಮ್ಮ ಗಂಜಿಗಾಗಿ ಬಳಸಿಕೊಂಡು ತಮ್ಮನ್ನ ಅದೇ ಸ್ಥಿತಿಯಲ್ಲೇ ನೋಡಬಯಸಿ ತಮ್ಮ ತೆವಲಿಗಾಗಿ, ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರೋದು ಬದಲಾಗಬೇಕಿದೆ ಎನ್ನುವುದು ದಲಿತರ ಮನದಾಳದ ಮಾತಾಗಿದೆ.

ನಾನೂ ಕೂಡ ಒಬ್ಬ ದಲಿತನೇ, ನನಗೂ ಈ ಆಂತರ್ಯದ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ.

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನಮ್ಮನ್ನ ಇದೇ ಸ್ಥಿತಿಯಲ್ಲಿಟ್ಟು ಇಂದು ನಮ್ಮನ್ನ ತಮ್ಮ ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರೋದನ್ನ ನೋಡಿಯಾದರೂ ನಮ್ಮ ಜನ ಬದಲಾಗಬೇಕು.

ಭಾರತದಲ್ಲಿ ಸಮಾನತೆ ಬರಲಿ ಅನ್ನೋದು ಬಾಬಾಸಾಹೇಬರ ಆಶಯವಾಗಿತ್ತು ಆದರೆ ಅವರ ಮಾತಿಗೆ ಎಳ್ಳಷ್ಟೂ ಕಿಮ್ಮತ್ತು ಕೊಡದ ರಾಜಕಾರಣಿಗಳು ನಮ್ಮನ್ನ ಶೋಷಿತ ಸಮುದಾಯದವರಾಗೇ ಇರುವ ಹಾಗೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರೋದಂತೂ ಸತ್ಯ.

– ಸುಧೀಂದ್ರ ಗೌಡ

Related Articles

Close