ನಿಷ್ಠುರವಾದಿಗಳು ಲೋಕ ವಿರೋಧಿಯಾಗುತ್ತಾರೆ ಎನ್ನುವುದಕ್ಕೆ ಮಾಜಿ ಸಿಎಂ ಡಿ.ದೇವರಾಜ್ ಅರಸ್ ಅವರ ಜೀವನ ಚರಿತ್ರೆಯೇ ಸಾಕ್ಷಿ.
ಎಲ್ಲಕ್ಕಿಂತ ಮೊದಲಿಗೆ ಹೇಳಬೇಕಾದ ಮಾತೆಂದರೆ, ಇಂದಿನ ಕರ್ನಾಟಕದ ರಾಜಕಾರಣಿಗಳನೇಕರು ಅವರನ್ನು ಪಕ್ಷಭೇದ ಮರೆತು ಸಿಕ್ಕಾಬಟ್ಟೆ ಹೊಗಳುತ್ತಿರುವುದು ತುಂಬಾ ತಮಾಷೆಯಾಗಿದೆ. “ದೇವರಾಜೇ ಅರಸ್’ (ತನ್ನ ಹೆಸರನ್ನು ಹೀಗೆ ಉಚ್ಚರಿಸಬೇಕೆಂದು ಅವರು ಬಯಸುತ್ತಿದ್ದರು) ಅವರ ಬುದ್ಧಿಶಕ್ತಿ ಹಾಗೂ ಹೃದಯವಂತಿಕೆಯನ್ನು ಇಂದು ಹಾಡಿ ಹೊಗಳುತ್ತಿರುವ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಅಂದು 1979-80ರಲ್ಲಿ ಅರಸ್ ಅವರಿಗೆ ದ್ರೋಹ ಬಗೆದಿದ್ದವರೇ! ದೇವರಾಜ ಅರಸ್ ಅವರು ರಾಜೀನಾಮೆ ನೀಡಿದ್ದು 1980ರ ಜನವರಿ 7ರಂದು.
1975ರಲ್ಲಿ ಹೇರಿದ್ದ ಎಮರ್ಜೆನ್ಸಿಯಿಂದ ಜನರು ರೋಶಿ ಹೋಗಿ 1977ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡಿದ್ದರು. ರಾಯ ಬರೇಲಿ ಪ್ರಧಾನಿಯಾಗಿದ್ದ ಇಂದಿರಾ ಸೋತರೆ,ಅಮೇಠಿಯಲ್ಲಿ ಮಗ ಸಂಜಯ್ ಸೋತಿದ್ದ. ಆ ದಿನಗಳಲ್ಲಿ ಇಂದಿರಾಳಿಗೆ ರಾಜಕೀಯ ಪುನರ್ಜನ್ಮ ನೀಡಲು ಮುಂದಾದವರು ದೇವರಾಜ ಅರಸರು.
ಇಂದಿರಾಳನ್ನು ಚಿಕ್ಕಮಗಳೂರು ಕ್ಷೇತ್ರಕ್ಕೆ ಚುನಾವಣೆಗೆ ನಿಲ್ಲಿಸಿ ಹಗಲಿರುಳ ಶ್ರಮಿಸಿ ಲೋಕಸಭೆಗೆ ಇಂದಿರಾಳನ್ನು ಮರುಪ್ರವೇಶವಾಗುವಂತೆ ಮಾಡಿ ಅಧಿಕಾರದ ಗದ್ದುಗೆಗೆ ಕೂರಿಸಿದರು.
ಗದ್ದುಗೆ ಏರಿದ ತಕ್ಷಣ ಇಂದಿರಾ ಏರಿಬಂದ ಮೆಟ್ಟಿಲುಗಳನ್ನು ಕಡೆಗಣಿಸಲು ಶುರುಮಾಡಿದಳು. ದೇವರಾಜ ಅರಸರನ್ನು ಕಾಲಕಸದಂತೆ ನೋಡಲು ಶುರು ಮಾಡಿದಳು. ಭೇಟಿಯಾಗಲು ಬಂದರೆ ನಿರಾಕರಿಸಿದಳು. ಇಂದಿರಾ ಸಂಜಯ್ ದರ್ಬಾರಿನಿಂದ ದೇವರಾಜ ಅರಸರಿಗೆ ಆ ಪಕ್ಷದಲ್ಲಿ ಉಸಿರು ಕಟ್ಟಿದಂತಾಯ್ತು. ತಾವೇ ರಾಜಕೀಯ ಪುನರ್ಜಜನ್ಮ ನೀಡಿ ಅವರಿಂದ ಕಡೆಗಣಿಸಲ್ಪಟ್ಟರು.
ಕರ್ನಾಟಕದ ಗುಂಡುರಾಯರು ಸಂಜಯ್ ಗಾಂಧಿಯೊಂದಿಗೆ ಚೆನ್ನಾಗಿದ್ದುದರಿಂದ ಗುಂಡುರಾಯರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿ ದೇವರಾಜ ಅರಸರಿಗೆ ಜಾಗವಿಲ್ಲದಂತೆ ಮಾಡಿದರು. ಇದರಿಂದ ಅರಸರು ಸಹಜವಾಗಿ ಅಸಹನೆಯಲ್ಲಿ ಕುಗ್ಗಿದ್ದರು.ರಾಜಕೀಯ ಪುನರ್ಜನ್ಮ ನೀಡಿ ಕೊನೆಗೆ ತಾವೇ ರಾಜಕೀಯ ನೆಲೆ ಕಳೆದುಕೊಂಡರು.
ಇಂದಿರಾ ಮತ್ತು ಸಂಜಯರ ಈ ವರ್ತನೆಯಿಂದ ಕುದ್ದು ಹೋಗಿ ಪಕ್ಷ ಕಟ್ಟಿ ರಾಷ್ಟ್ರ ರಾಜಕಾರಣದಲ್ಲಿ ಧುಮುಕಿ ಸೋತರು. ಇಂದಿರಾಳಿಂದ ದೇವರಾಜ ಅರಸರ ರಾಜಕೀಯ ಬದುಕು ದುರಂತ ಅಂತ್ಯ ಕಂಡಿತು.
ದೇವರಾಜ್ ಅರಸ್ ಅವರಿಗೆ ಜನಸೇವೆ ಒಂದೇ ಧ್ಯೇಯವಾಗಿತ್ತು. ನಿಸ್ವಾರ್ಥ ರಾಜಕಾರಣ ಅವರದ್ದಾಗಿತ್ತು ಎಂಬುದಾಗಿ ತಮ್ಮ ಪಕ್ಷದವರೇ ಹೇಳುತ್ತಾರೆ. ಆದರೆ ಯಾವ ಅರಸರು ಇಂದಿರಾ ಗಾಂಧಿಯವರನ್ನು ಗದ್ದುಗೆ ಏರಲು ಸಹಾಯ ಮಾಡಿದರೋ ಅವರನ್ನೇ ತುಳಿಯುವ ಯತ್ನ ಮಾಡಿದರು. ತಮ್ಮ ಪಕ್ಷದ ಸ್ನೇಹಿತರೊಂದಿಗೆ ಅಲ್ಲದೇ ಇತರ ಪಕ್ಷದ ಸ್ನೇಹಿತರೊಂದಿಗೂ ಬಾಂಧವ್ಯವನ್ನು ಹೊಂದಿದ್ದರು ಅರಸರು. ಇದೇ ನೆಪವಾಗಿಟ್ಟುಕೊಂಡು ದೇವರಾಜ ಅರಸ್
ಅವರನ್ನು ಕಾಂಗ್ರೆಸ್ ಪಕ್ಷದಿಂದ ತೊರೆಯುವಂತೆ ಮಾಡಲಾಯಿತು.
ಇಂದಿರಾ ಗಾಂಧಿಯವರಿಗೆ ಅರಸ್ ಅವರನ್ನು ತೆಗೆದುಹಾಕಲು ಅಷ್ಟು ಸುಲಭವೂ ಇರಲಿಲ್ಲ. ಯಾಕೆಂದರೆ 155 ಸದಸ್ಯರಲ್ಲಿ ಕನಿಷ್ಟವೆಂದರೂ 100 ಜನ ಅರಸರ ಬೆಂಬಲಿಗೆ ನಿಂತಿದ್ದರು. ಇದೇ ವಿಚಾರ ಇಂದಿರಾ ಅವರಿಗೆ ಮುಳುವಾಗಿತ್ತು.
ನಿಮಗೆ ಅರಿವಿರಲಿಯೆಂದು ಒಂದು ವಿಚಾರ ತಿಳಿಯಬಯಸುತ್ತೇನೆ.ರಾಜ್ಯಸಭೆಯ ಮಾಜಿ ಕಾಂಗ್ರೆಸ್ ಸದಸ್ಯ ಎಫ್.ಎಂ. ಖಾನ್ ಅವರು ಅರಸ್ ಅವರ ರಾಜೀನಾಮಗೆ ಒತ್ತಾಯ ಹೇರುವ ಸಲುವಾಗಿ ಅವರ ಅಧಿಕೃತ ನಿವಾಸವಾದ ಬಾಲಬ್ರೂಯಿಯ ಮೇಲೆ ಮುತ್ತಿಗೆ ಹಾಕುವಂತೆ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದರು. ಯಾರ ಬಗ್ಗೆ ಇಂದು ಕರ್ನಾಟಕದ ಮಂದಿಗೆ ಏನೂ ನೆನಪಿಲ್ಲವೋ, ಯಾರು ಇಂದು ರಾಜ್ಯ ರಾಜಕಾರಣದಲ್ಲಿ ಮರವೆಗೆ ಸಂದಿದ್ದಾರೋ ಅಂಥ ಖಾನ್ ಅವರು, ಅರಸ್ ಅವರ ಉತ್ತರಾಧಿಕಾರಿಯಾಗಿ ಬಂದ ಆರ್. ಗುಂಡೂರಾವ್ ಅವರ ನಿಕಟವರ್ತಿಯಾಗಿದ್ದವರು. ಗುಂಡೂರಾವ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದುದು ಸಂಜಯ್ ಗಾಂಧಿಯವರೇ ಆಗಿದ್ದರೂ ಅನೇಕ ವಿಷಯಗಳಲ್ಲಿ ಗುಂಡೂರಾವ್ ಅವರು ಅರಸ್ ಅವರಿಗೆ ಋಣಿಯೆನ್ನುವುದು ರಾಜ್ಯದ ಚರಿತ್ರೆಗೆ ತಿಳಿದಿದೆ! ಅಂದು ಬಾಲಬ್ರೂಯಿಯ ಮೇಲೆ ಮುತ್ತಿಗೆ ಹಾಕಿದ್ದ ಅಂದಿನ ಯುವ ಕಾಂಗ್ರೆಸ್‌ನ ಅನೇಕರು ಇಂದು ನಮ್ಮ ಸುತ್ತಮುತ್ತ ಇದ್ದಾರೆ. ಅರಸ್ ಅವರಿಗೆ ಅಂದು ರಾಜೀನಾಮೆ ನೀಡುವುದಲ್ಲದೆ ಬೇರೆ ಆಯ್ಕೆಯೇ ಇರಲಿಲ್ಲ. ಅಂದಿನ ಆ ದುರದೃಷ್ಟದ ಸಂಜೆ ನಿಜಕ್ಕೂ ಭೀತಿಯ ವಾತಾವರಣದಿಂದ ನಡುಗುತ್ತಿದ್ದ ಸಂಜೆಯಾಗಿತ್ತು; ನೆರೆಯ ಪಾಕಿಸ್ಥಾನ, ಬಾಂಗ್ಲಾದೇಶ ಹಾಗೆಯೇ ಆಫ್ರಿಕನ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಿಲಿಟರಿ ಸಂಚನ್ನು ನೆನಪಿಸಿಕೊಡುವ ಸಂಜೆಯಾಗಿತ್ತು ಅದು.
ಅರಸ್ ಮತ್ತವರ ಪಕ್ಷದ ಸುತ್ತಮುತ್ತ :
ಇಂದಿರಾ ಗಾಂಧಿಯವರಿಂದ ದೂರವಾದ ಬಳಿಕ ಅರಸ್ ಅವರು ಅಸ್ತಿತ್ವಕ್ಕೆ ತಂದಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷ ಅವರ ಬೆನ್ನಹಿಂದೆಯೇ ಮಾಯವಾಯಿತು. ಹೇಗೆ
ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಬಳಿಕ ಅಸ್ತಿತ್ವಕ್ಕೆ ತಂದಿದ್ದ ಕರ್ನಾಟಕ ಜನತಾ ಪಕ್ಷ ಕೂಡ ಇಂದು ಹೇಳಹೆಸರಿಲ್ಲದೆ ಹೋಗಿದೆಯೋ ಅದೇ ರೀತಿಯಾಗಿತ್ತು ಅರಸ್ ಕಥನ.. 1978ರಲ್ಲಿ ಚುನಾಯಿತರಾಗಿದ್ದ ಕರ್ನಾಟಕ ಕಾಂಗ್ರೆಸ್ ಶಾಸಕರು ಆ ಪಕ್ಷದಿಂದ ಹಾರಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಎಚ್.ಡಿ. ದೇವೇಗೌಡರ ನೇತೃತ್ವದ ಜನತಾಪಾರ್ಟಿಯ ಸ್ಥಿತಿ ಇನ್ನೂ ಶೋಚನೀಯವಾಗಿತ್ತು. ಅದರ 59 ಶಾಸಕರ ಪೈಕಿ 46 ಮಂದಿ ಕರ್ನಾಟಕ ಕಾಂಗ್ರೆಸ್‌ನ ಮೂಲಕ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದರು.
ದೇವರಾಜ ಅರಸ್ ನೇತೃತ್ವದ ಕಾಂಗ್ರೆಸ್ (ಅರಸ್) ಪಕ್ಷ 1980ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿ ಅಕ್ಷರಶಃ ಅಂತರ್ಧಾನವಾಯಿತು. 1982ರ ಮೇ 18ರಂದು ಅವರು ವಿಧಿವಶರಾದಾಗ ಅವರು ಅಕ್ಷರಶಃ ಒಂಟಿಯಾಗಿದ್ದರು. ಕಾಂಗ್ರೆಸ್‌ನ ಯಾವ ನಾಯಕನೂ ನಾಯಕಿಯೂ ಅವರ ಪರ ಇರಲಿಲ್ಲ. ಸರ್ಪಸುತ್ತು ಉಲ್ಬಣಿಸಿ ಅವರು ಕೊನೆಯುಸಿರೆಳೆದರು. ಇಂದು ಕಾಂಗ್ರೆಸ್ ಪಕ್ಷದ ಹೊರಗಡೆಯೂ ಅರಸ್ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ ಎಂದೇನೋ ಹೇಳಬಹುದು. ಅರಸ್ ಕರ್ನಾಟಕದ ಸೂತ್ರಧಾರರಾಗಿದ್ದಾಗ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿಯೂ ಇರಲಿಲ್ಲ. ಅರಸ್ ಅವರಿಂದ ಸಿದ್ದರಾಮಯ್ಯ ಪ್ರೇರಣೆ ಪಡೆದಿದ್ದಿರಬಹುದು, ಆ ಮಾತು ಬೇರೆ. ದೇವರಾಜ ಅರಸ್ ಅವರ ಜನ್ಮಶತಮಾನೋತ್ಸವದ ಸಂದರ್ಭದಂದು ಕಾಂಗ್ರೆಸ್ ಸದಸ್ಯರ ಪಾಲಿಗೆ ಸಿದ್ದರಾಮಯ್ಯನವರನ್ನು ಕುರಿತ ತಮ್ಮ ಭಾವನೆಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟಿತ್ತು. ಅಲ್ಲಿಯೂ ಅವರು ಅದನ್ನು ತನ್ಮ ರಾಜಕಾರಣದ ಸ್ವಾರ್ಥಕ್ಕೆ ಬಳಸಿದರು. ಸಿದ್ದರಾಮಯ್ಯನವರನ್ನು ದೇವರಾಜ ಅರಸ್ ಅವರಿಗೆ ಹೋಲಿಸಲಾಗದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ವರದಿಗಳು ಹೇಳುತ್ತಿವೆ.
ಒಬ್ಬ ರಾಜಕಾರಣಿಯಾಗಿ ಅರಸ್ ಅವರ ಅತ್ಯುತ್ತಮ ವರ್ಷಗಳೆಂದರೆ ಇಂದಿರಾ ಗಾಂಧಿಯವರೊಂದಿಗೆ ಇದ್ದಾಗಿನ ವರ್ಷಗಳು; ಅವರು ತೆಗೆದುಕೊಂಡಿದ್ದ ಹೆಚ್ಚಿನ ಕ್ರಮಗಳು ಇಂದಿರಾ ಅವರ ಸಮಾಜವಾದಿ ನೀತಿ ನಿರ್ಧಾರಗಳ ವಿಸ್ತೃತ ರೂಪಗಳೇ. ಆದರೆ ದುರಂತವೇನು ಗೊತ್ತಾ?? ಅರಸ್ ಅವರು ಜಾರಿಗೊಳಿಸಿದ್ದ ಇಂಥ ನೀತಿನಿರ್ಧಾರಗಳ ಶ್ರೇಯಸ್ಸು ದೊರೆತುದು ಅರಸ್ ಅವರಿಗಲ್ಲ, ಬದಲಾಗಿ ಇಂದಿರಾ ಗಾಂಧಿಗೆ. ಜನ ಅರಸರನ್ನು ಹೊಗಳುವುದಕ್ಕಿಂತ ಹೆಚ್ಚಾಗಿ ಇಂದಿರಾರನ್ನು ಹೊಗಳಿದರು. ಅರಸ್ ಅವರು ಇಂದಿರಾ ಕಾಂಗ್ರೆಸ್‌ನಿಂದ ಒಮ್ಮೆ ಹೊರನಡೆದ ಬಳಿಕ ಅವರು ರಾಜಕೀಯವಾಗಿ ದಯನೀಯ ಸೋಲನ್ನು ಕಾಣುವಂತಾದುದಕ್ಕೆ ಇದೇ ಕಾರಣ. ಮೊರಾರ್ಜಿ ದೇಸಾಯಿಯವರ ಜನತಾ ಸರಕಾರದ ಆಯುಷ್ಯ ಕುರಿತಂತೆ ಅರಸ್ ಹಾಕಿಕೊಂಡ ಲೆಕ್ಕಾಚಾರ ತಪ್ಪಿತು. ಮೊರಾರ್ಜಿ ಸರಕಾರ ಅಷ್ಟು ಬೇಗನೆ ಉರುಳುವುದೆಂದು ಅರಸ್ ಅವರು ಬಹುಶಃ ನಿರೀಕ್ಷಿಸಿರಲಿಲ್ಲ. ದೇಸಾಯಿ ಅವರು ಒಳ್ಳೆಯ ಆಡಳಿತಗಾರನೆಂಬ ಮೆಚ್ಚುಗೆ ಅವರಲ್ಲಿತ್ತು.
ಬಡವರ, ದೀನ-ದಲಿತರ ಬಂಧುವಾಗಿದ್ದರು ದೇವರಾಜ್ ಅರಸ್ :
ಡಿ.ದೇವರಾಜ್ ಅರಸ್ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆಯ ಮೂಲಕ ಸಾವಿರಾರು ಎಕರೆ ಜಮೀನನ್ನು ಭೂ ಮಾಲೀಕರಿಂದ ಕಿತ್ತು ಭೂಮಿ ಉಳುತ್ತಿದ್ದ ರೈತರಿಗೆ ಹಂಚಿಕೆ ಮಾಡಿದರು. ಅಲ್ಲದೆ ಜೀವಂತವಾಗಿದ್ದ ಜೀತ ಪದ್ಧತಿ ಬುಡ ಸಮೇತ ಕಿತ್ತು ಹಾಕಿದ ಮಹಾನ್ ಕ್ರಾಂತಿಕಾರಕ ಪುರುಷ . ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎನ್ನುವ ಧ್ಯೇಯದಲ್ಲಿ ನಂಬಿಕೆಯಿಟ್ಟು, ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ವಂಚಿತರಾಗಿದ್ದ 33 ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮೇಲೆತ್ತಲು ಹಿಂದುಳಿದ ವರ್ಗಗಳ ಆಯೋಗ ರಚಿಸಿ ಆ ಮೂಲಕ ವಿವಿಧ ಮಹತ್ವ ಪೂರ್ಣ ಕಾರ್ಯಕ್ರವನ್ನು ಜಾರಿಗೆ ತಂತ ಕೀರ್ತಿ ಡಿ.ದೇವರಾಜ್ ಅರಸ್‌ರಿಗೆ ಸಲ್ಲಬೇಕು.
ಯಾವುದೇ ಒಂದು ಸಮುದಾಯ ಪ್ರಗತಿ ಪಥದತ್ತ ಸಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡ ಅವರು ಹಿಂದುಳಿದ ವರ್ಗಗಳ ಶಿಕ್ಷಣಕ್ಕಾಗಿ ಹಲವು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಮುಂದುವರಿಯಲು ಮಹತ್ತರವಾದ ಕೊಡುಗೆ ನೀಡಿ ರಾಜ್ಯದ ದಲಿತ ಮತ್ತು ಹಿಂದುಳಿದ ವರ್ಗಗಳ ನೇತಾರರಾಗಿ ಹೊರ ಹೊಮ್ಮಿದರು..
ಇದನ್ನು ವಿಪರ್ಯಾಸವೆನ್ನಲೋ, ದುರಂತವೆಂದು ಬಣ್ಣಿಸಲೋ ಅರ್ಥವಾಗುತ್ತಿಲ್ಲ. ಯಾವ ವ್ಯಕ್ತಿ ಕರ್ನಾಟಕ ಕಾಂಗ್ರೆಸ್ ಗೆ ಆಧಾರವಾಗಿದ್ದರೋ, ಕರ್ನಾಟಕ ರಾಜಕಾರಣದ ದಂತಕಥೆಯಾದರೋ ಇವತ್ತು ಅಂತಹ ಶ್ರೇಷ್ಠ ವ್ಯಕ್ತಿತ್ವವನ್ನೂ ಕನಿಷ್ಠ ಪಕ್ಷ ನೆನಪಿಸಿಕೊಳ್ಳುವ ಕಾರ್ಯವನ್ನು ಅದೇ ಪಕ್ಷದವರು ಮಾಡುತ್ತಿಲ್ಲ. ಬಡವರ ಬಂಧುವೆಂದೇ ಕರೆಯಲಾಗುತ್ತಿದ್ದ ಅರಸ್ ಇವತ್ತು ಯಾರಿಗೂ ಬೇಡವಾಗಿ ಹೋದರು. ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರನ್ನೂ ಇದೇ ರೀತಿಯಾದ ನಿಷ್ಕೃತ್ಯ ಭಾವನೆಯಿಂದ ನೋಡಿ, ಅವರನ್ನೂ ಮೂಲೆಗುಂಪಾಗಿಸಿತ್ತು ಕಾಂಗ್ರೆಸ್. ದಕ್ಷ, ಪ್ರಾಮಾಣಿಕ ರಾಜಕಾರಣಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲವೆಂಬುದು ಅನೇಕ ನಿದರ್ಶನಗಳಿಂದ ಸಾಬೀತಾಗುತ್ತಿವೆ.
ಮಿತ್ರರೇ, ಈಗ ಒಂದು ಪ್ರಶ್ನೆಗೆ ಉತ್ತರಿಸಿ. ನಮ್ಮ ಕನಸಿನ ಕರ್ನಾಟಕವನ್ನು ನಿರ್ಮಿಸಲು ಈ ಪ್ರಶ್ನೆಗೆ ಉತ್ತರವನ್ನು ಬಯಸುವುದು ಅನಿವಾರ್ಯವೇ ಸರಿ.
ದಲಿತರ ಹಾಗೂ ಹಿಂದುಳಿದವರ ಬಂಧುವಾಗಿದ್ದ ಕರ್ನಾಟಕದ ದಂತಕಥೆಯಾದವರನ್ನೇ ಮೂಲೆಗುಂಪಾಗಿಸಿದ ಪಕ್ಷಕ್ಕೆ ನಾವು ಯಾಕೆ ಮತ ಹಾಕಬೇಕು ಹೇಳಿ??
– ವಸಿಷ್ಠ