ಪ್ರಚಲಿತ

ದ.ಕೊರಿಯಾದಲ್ಲಿ ಮರಣ ಶಾಸನ ಬರೆದ ಪೇಷಂಟ್ 31…!

ಕೊರೊನಾ ಸೋಂಕಿತರ ಹುಚ್ಚಾಟ ಮುಂದೆ ಇಡೀ ದೇಶಕ್ಕೆ ಯಾವ ಪರಿಣಾಮ ಉಂಟು ಮಾಡುತ್ತದೆ ಎನ್ನುವುದಕ್ಕೆ ದ.ಕೊರಿಯಾವೇ ಸಾಕ್ಷಿ.‌ ಒಬ್ಬರು ಮಾಡುವ ಬೇಜವಾಬ್ದಾರಿ ಇಡೀ ದೇಶವನ್ನೇ ಬುಡಮೇಲು‌ ಮಾಡಬಹುದು ಎನ್ನುವುದಕ್ಕೆ ದ.ಕೊರಿಯಾಕ್ಕಿಂತ ಬೇರೆ ಸಾಕ್ಷಿ ಇಲ್ಲ.‌

ದಕ್ಷಿಣ ಕೊರಿಯಾದಲ್ಲಿ ಮೊತ್ತ ಮೊದಲ ಬಾರಿಗೆ ಜ.20ರಂದು ಕೊರೋನಾ ಕೇಸ್ ದಾಖಲಾಯಿತು. ಚೀನಾದ ವುಹಾನ್‍ನಿಂದ ಸಿಯೋಲ್‍ಗೆ ಬಂದಿಳಿದ 35 ವಯಸ್ಸಿನ ಸೋಂಕುಪೀಡಿತ ಮಹಿಳೆಯನ್ನು ದಿಗ್ಬಂಧನದಲ್ಲಿ ಇಡಲಾಯಿತು. ನಾವು‌‌ ಕೊರೊನಾದಿಂದ ಪಾರಾದೆವು ಎಂದು ಇಡೀ ದೇಶವೇ ಸಂಭ್ರಮಿಸಿತು.

ಇದಾದ ಬಳಿಕ ಅಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಕರಣಗಳು ದಾಖಲಾಗುತ್ತ ಹೋದವು. ಅಲ್ಲಿಂದ ಮುಂದಿನ ನಾಲ್ಕು ವಾರಗಳ ಕಾಲ ಕೊರಿಯಾದಲ್ಲಿ 30 ಮಂದಿ ಕೊರೋನಾ ಸೋಂಕಿಗೀಡಾದರು.

ಇದೇನು ಅಷ್ಟೊಂದು ಕಳವಳಕಾರಿಯಾಗಿಲ್ಲ ಎಂದು ದೇಶವಾಸಿಗಳು ಭಾವಿಸಿದರು.‌ ನಮ್ಮ ದೇಶ ಉತ್ತಮವಾಗಿ ಕೊರೊನಾ‌ ನಿಯಂತ್ರಿಸಿದೆ ಎಂದು ಇಡೀ ದೇಶ ಸಂಭ್ರಮಿಸಿತು. ಇಡೀ ವಿಶ್ವವೇ ದ.ಕೊರಿಯಾವನ್ನು ಕೊಂಡಾಡಿತು.

ಚೀನಾದ ಸಮೀಪದ ರಾಷ್ಟ್ರವಾಗಿರುವ ದ.ಕೊರಿಯಾ ಎಷ್ಟೊಂದು ಚೆನ್ನಾಗಿ ಕೊರೊನಾ ನಿಯಂತ್ರಿಸಿದೆ ಎಂದೆಲ್ಲಾ ಸುದ್ದಿಗಳು ಹಬ್ಬಿದವು.

ಆದರೆ ಕೊರೊನಾವನ್ನು ಹಬ್ಬಿಸಿದ್ದು ಒಬ್ಬಳು ಮಹಿಳೆ.‌

30 ರ ಗಡಿಯಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾ‌ ಸಂಖ್ಯೆಯನ್ನು 31 ಕ್ಕೆ ಏರಿಸಿ ‘ಪೇಷಂಟ್-31’ ಎಂಬ ಕುಖ್ಯಾತಿಗೆ ಪಾತ್ರಳಾದಳು.

ಆರಂಭದಲ್ಲೇ ಸೋಂಕಿನ ಲಕ್ಷಣ ಹೊಂದಿದ್ದ ಈ ಮಹಿಳೆ ಮೂರ್ಖತನ ಮೆರೆದ ಕಾರಣ ಇಡೀ ದೇಶಕ್ಕೆ ಕೊರೊನಾ ಹಬ್ಬಿಸಿದಳು.
ದ.ಕೊರಿಯಾದ ಡೆಯಗು ಪ್ರಾಂತ್ಯದಲ್ಲಿ ಶಿಂಚೆಯೊಂಚಿ ಆಫ್ ಜೀಸಸ್ ಎನ್ನುವ ಚರ್ಚ್ ಇದೆ. ಇಲ್ಲಿ ಫೆಬ್ರವರಿ ಆರಂಭದಲ್ಲಿ ಎರಡು ಬಾರಿ ಭಾನುವಾರದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಕೊರೊನಾ ಪಸರಲು ಕಾರಣಳಾದಳು. ಅಂದಾಜು 2000 ಮಂದಿಯ‌ ನೇರ ಸಂಪರ್ಕಕ್ಕೆ ಬಂದ ಕಾರಣ ಇಂದು ಕೊರಿಯ ಹೆಣಗಾಡುವ ಸ್ಥಿತಿಗೆ ತಂದಿಟ್ಟಳು.

ಆರಂಭದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಈಕೆ ಗುಣಮುಖಗೊಂಡು ಅಲ್ಲಿನವರಿಗೂ ಕೊರೊನಾ ಹಬ್ಬಿಸಿದಳು. ಕೊರೊನಾದ ಗುಣಲಕ್ಣಣ ಹೊಂದಿರುವುದರಿಂದ ವೈದ್ಯರು ತಪಾಸಣೆ ನಡೆಸುವಂತೆ ಎಚ್ಚರಿಸಿದರೂ‌ ಆಕೆ ಕಿವಿಗೆ ಹಾಕಲಿಲ್ಲ. ನಂತರ ಆಕೆ ಮತ್ತೆ ಪ್ರಾರ್ಥನಾ ಶಿಬಿರದಲ್ಲಿ‌ ಭಾಗವಹಿಸಿದಳು.

ಫೆಬ್ರವರಿ 10ರಂದು‌ ಮತ್ತೆ ಜ್ವರ ಮತ್ತೆ ಉಲ್ಬಣಿಸಿದ ಕಾರಣ ಆಸ್ಪತ್ರೆಗೆ ದಾಖಲಾದಳು. ವೈದ್ಯರು ಮತ್ತೆ ಎಚ್ಚರಿಸಿದರೂ ಕೇಳಲಿಲ್ಲ.
ಫೆಬ್ರವರಿ 15ರಂದು ಹೊಟೇಲಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಲ್ಲಿ ಸಾಮೂಹಿಕವಾಗಿ ಊಟ ಮಾಡಿದಳು.
ಇದಾದ ಬಳಿಕ‌ ಚರ್ಚಿನ ಕಾರ್ಯಕ್ರಮದಲ್ಲೂ ಭಾಗವಹಿಸಿದಳು. ಇಲ್ಲಿಯೂ ಒಂದಷ್ಟು ಮಂದಿಗೆ ಕೊರೊನಾ‌ ಅಂಟಿಸಿದಳು.

ಫೆ.15ರಂದು ನಿಮಗೆ ಕೊರೊನಾ ವೈರಸ್ ಇರಬಹುದು. ಪರೀಕ್ಷಿಸೋಣ ಎಂದು ವೈದ್ಯರು ಆಕೆಗೆ ಹೇಳಿದಾಗ ನಾನೇಕೆ ಕೊರೊನಾ ಪರೀಕ್ಷೆಗೆ ಒಳಪಡಲಿ, ನಾನು ಯಾವ ವಿದೇಶಿಯರನ್ನೂ ಭೇಟಿ ಮಾಡಿಲ್ಲ. ವಿದೇಶಕ್ಕೂ ಹೋಗಿಲ್ಲ, ನನಗೆ ಕೊರೊನಾ ಬಂದಿಲ್ಲ ಎಂದು ವೈದ್ಯರ ಜೊತೆ ಜಗಳವಾಡಿದ್ದಳು.

ಆದರೆ ಈಕೆಗೆ ಜ್ವರ ಉಲ್ಬಣಿಸಿ ಆಸ್ಪತ್ರೆಗೆ ದಾಖಲಾಗಿ ವೈದ್ಯರು ತಪಾಸಣೆ ನಡೆಸಿದಾಗ ಈಕೆಗೆ ಕೊರೊನಾ‌ ಸೋಂಕಿರುವುದು ಕಂಡು ಬಂತು. ತಕ್ಷಣ ವೈದ್ಯರು ಆಕೆಯನ್ನು ಐಸೋಲೇಟೆಡ್ ವಾರ್ಡ್ ಗೆ ಶಿಪ್ಟ್‌ ಮಾಡಿದರು.

ಅಷ್ಟರವರೆಗೆ ಆಕೆ ಬರೋಬ್ಬರಿ 10 ಸಾವಿರ ಮಂದಿಯ ನೇರ ಸಂಪರ್ಕಕ್ಕೆ ಬಂದಿದ್ದಳು. ಇದರಲ್ಲಿ 1200 ಮಂದಿಗೆ‌ ಕೊರೊನಾ ತಗುಲಿರುವುದು ಗಮನಕ್ಕೆ ಬಂದಿತು.‌

9000 ಗಡಿ ದಾಟಿದ ಕೊರಿಯಾ

ಇದೀಗ ದ.ಕೊರಿಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9000ವನ್ನು ಮೀರಿದೆ. ಮೃತಪಟ್ಟವರ ಸಂಖ್ಯೆ 120. ಇಡೀ ಜಗತ್ತಿನಲ್ಲಿ ಕೊರೊನಾ ಸೋಂಕಿತರ‌‌ ಸಂಖ್ಯೆಯಲ್ಲಿ 8ನೇ ಸ್ಥಾನದಲ್ಲಿದೆ. ನಿನ್ನೆ ಮತ್ತೆ 10 ಮಂದಿ‌ ಮೃತರಾಗಿದ್ದಾರೆ. 60 ಮಂದಿಯ ಸ್ಥಿತಿ ಗಂಭೀರವಾಗಿದೆ. ಇಂದು ಡೆಯಗು ಪ್ರಾಂತ್ಯವನ್ನು‌ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.

ಅತ್ಯಾಧುನಿಕ ಆಸ್ಪತ್ರೆಗಳನ್ನು ಹೊಂದಿರುವ ವಿಶ್ವದ ಪ್ರಥಮ ರಾಷ್ಟ್ರ ಎಂದು ಬೀಗುವ ದ.ಕೊರಿಯಾ ಕೊರೊನಾ ಪಸರುವುದನ್ನು ತಪ್ಪಿಸಲಾಗದೆ ಮಕಾಡೆ ಮಲಗಿದೆ.

ಮನೆಯಲ್ಲೇ ಇರಿ:
ಭಾರತ ಉತ್ತಮ ವೈದ್ಯಕೀಯ ವ್ಯವಸ್ಥೆಯಲ್ಲಿ‌ ಜಗತ್ತಿನ 140ನೇ ಸ್ಥಾನದಲ್ಲಿದೆ. ಆರಂಭದಲ್ಲಿ ಕೇರಳದಲ್ಲಿ ಕಾಣಿಸಿದ ಕೊರೊನಾ ಇದೀಗ ಭಾರತದಲ್ಲಿ 511 ಮಂದಿಯಲ್ಲಿ‌ ಕಾಣಿಸಿ 10 ಮಂದಿ‌ ಮೃತರಾಗಿದ್ದಾರೆ. ಒಂದು ವೇಳೆ ನಾವು ಊರೆಲ್ಲಾ ಸುತ್ತಾಡಿದರೆ ಏನಾಗಬಹುದು ಎಂದು ಕೊಂಚ ಆಲೋಚಿಸೋಣ. ಮನೆಯಲ್ಲೇ ಇದ್ದುಕೊಂಡು ಕೊರೊನಾವನ್ನು ಹಿಮ್ಮೆಟ್ಟಿಸೋಣ. ಯಾಕೆಂದರೆ ಬೇರೆಯವರ ತಪ್ಪುಗಳಿಂದ ಪಾಠ ಕಲಿಯದವರನ್ನು‌ ಮೂರ್ಖರು ಎಂದು ಕರೆಯಲಾಗುತ್ತದೆ.

-ಜೀಎಂ

Tags

Related Articles

FOR DAILY ALERTS
Close