ಅಂಕಣಇತಿಹಾಸ

ಧರ್ಮಕ್ಷೇತ್ರ‌‌ ಎಂದೇ‌ ಪ್ರಸಿದ್ಧಿ ಪಡೆದ ‘ಕುರುಕ್ಷೇತ್ರ’ದ ಸೃಷ್ಟಿ ಆಗಿದ್ದು ಹೇಗೆ?

ಧರ್ಮಕ್ಷೇತ್ರ ಕುರುಕ್ಷೇತ್ರ ವಂಶದೀಪಕನಾದ ಕುರುಭೂಪತಿಯು ಮಹತ್ತಾದ ಯಜ್ಞವನ್ನು ಮಾಡಲು ಭೂಮಿಯನ್ನು ಅನ್ವೇಷಣೆ ಮಾಡಿದನು .

ಪೂರ್ವದಲ್ಲಿ ಅವತಾರ ಸ್ವರೂಪಿಯಾದ ಭಾರ್ಗವರಾಮನು ಕೃತ್ರಿಯ ಸಂಹಾರವನ್ನು ಮಾಡಿ ಪಿತೃತರ್ಪಣ ಮಾಡಲು ಸಮಂತಪಂಚಕದ ಆ ಪರಿಸರವನ್ನು ಆರಿಸಿಕೊಂಡಿದ್ದನು . ಸಮೀಪದಲ್ಲಿ ಸರಸ್ವತಿ ಮತ್ತು ದೃಷದ್ವತಿ ನದಿಗಳೆರಡು ಹರಿದು ಹೋಗುತ್ತಿದ್ದುವು . ತರಂತುಕ , ರಾಮಪ್ರದ , ಮಚುಕ್ಕರ , ಆರಂತುಕ ಮತ್ತು ವಿಶಸನ ಎಂಬ ಪಂಚಕ್ಷೇತ್ರಗಳ ಪುಣ್ಯಭೂಮಿಯನ್ನು ಕುರುಭೂಪತಿಯು ಆರಿಸಿಕೊಂಡನು .

ಆ ಪವಿತ್ರ ಸನ್ನಿಧಿಯಲ್ಲಿ ಬ್ರಹ್ಮನು ಮತ್ತು ದೇವಾದಿದೇವತೆಗಳು ಪೂರ್ವದಲ್ಲಿ ಹೋಮ ಹವನಾದಿಗಳನ್ನು ಮಾಡಿದ್ದರು . ಉತ್ತರವೇದಿ , ಅಂತರ್ವೇದಿ ಎಂದು ಕರೆಯಲ್ಪಡುವ ಯಜ್ಞಪಶುಗಳ ವಿಶಸನವು ನಡೆದುದರಿಂದ ವಿಶಸನ ಕ್ಷೇತ್ರವೆಂದು ಕರೆಯಲ್ಪಟ್ಟಿತು . .

ಕುರುರಾಜನು ಯಮಧರ್ಮನನ್ನು ಒಲಿಸಿ ಅವನಿಂದ ಕೋಣವನ್ನು, ಪರಶಿವನಿಂದ ನಂದಿಯನ್ನು ವಿಶ್ವಕರ್ಮನಿಂದ ಕನಕದ ನೇಗಿಲನ್ನು ಪಡೆದು ಉಳುವುದಕ್ಕೆ ಪ್ರಾರಂಭಿಸಿದನು . ಇಂದ್ರನು ಪ್ರತ್ಯಕ್ಷನಾಗಿ ‘ ಯಾಕೆ ಉಳುತ್ತಿರುವೆ ಎಂದು ಪ್ರಶ್ನಿಸಿದನು . ‘ ಧರ್ಮದ ಬೀಜವನ್ನು ಬಿತ್ತಿ ಬೆಳೆಸುವುದಕ್ಕೆ ‘ ಎಂಬ ಉತ್ತರ ಅವನಿಂದ ಕೂಡಲೇ ಬಂತು . ಮತ್ತೆ ಸ್ವಲ್ಪಹೊತ್ತಿನಲ್ಲಿ ಶ್ರೀ ಹರಿಯೇ ಬಂದು ರಾಜನನ್ನು ಅದೇ ರೀತಿಯಾಗಿ ಪ್ರಶ್ನಿಸಿದನು . ಕುರುರಾಜನ ಉತ್ತರದಲ್ಲಿ ಬದಲಾವಣೆಯಾಗಲಿಲ್ಲ.

ವಿಪ್ರರೂಪಿಯಾದ ಶ್ರೀ ಹರಿಯು ‘ ಹೇಗೆ ಬಿತ್ತುವ ಮತ್ತು ಹೇಗೆ ಪೋಷಿಸುವೆ ‘ ಎಂದು ಕುತೂಹಲದಿಂದ ಕೇಳಿದನು ಆಗ ಕುರುನೃಪಾಲನು ವಿಪ್ರೋತ್ತಮನಲ್ಲಿ ತನ್ನ ಮನಸ್ಸಿನ ಅನಿಸಿಕೆಯನ್ನು ವ್ಯಕ್ತ ಪಡಿಸಿದನು . ಬ್ರಾಹ್ಮಣೋತ್ತಮಾ ! ನೀನು ಕೇಳಿದ ಪ್ರಶ್ನೆಗೆ ಸರಿಯಾಗಿ ನಾನು ಉತ್ತರಿಸಿ ಬಹುದು , ಆದರ ಧೈರ್ಯವಿಲ್ಲ . ಪ್ರಾಮಾಣಿಕವಾಗಿ ಹೇಳುವುದಿದ್ದರೆ ನನಗೆ ಯುಕ್ತವಾದ ಮಾರ್ಗದ ಅರಿವಿಲ್ಲ . ಸಜ್ಜನರು ನಡೆದು ಹೋದ ದಾರಿಯನ್ನು ಅರ್ಥವಿಸಿಕೊಂಡು ನಿಷ್ಠಾಪರನಾಗಿ ಸದಾಚಾರವನ್ನು ಬೆಳೆಸಿದ್ದೇನೆ . ಮನಸ್ಸಿನಲ್ಲಿ ಏನೇನೋ ಆಸೆಗಳು ಅಂಟಿಕೊಂಡಿವೆ . ಈ ಪ್ರದೇಶವನ್ನು ಧರ್ಮಕ್ಷೇತ್ರವನ್ನಾಗಿ ಮಾಡುವ ಬಲವತ್ತರವಾದ ಇಚ್ಚೆಯೊಂದಿದೆ . ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ . ನಶ್ವರವಾದ ಈ ಶರೀರವನ್ನು ಚೆಲ್ಲಿಯಾದರೂ ಗುರಿಯನ್ನು ಮುಟ್ಟಬೇಕನ್ನುವ ಹಂಬಲವಿದೆ . ನನ್ನೀ ಕ್ರಿಯೆಯು ಭಗವಂತನಿಗೆ ಪ್ರಿಯವಾಗಬೇಕು , ಹಾಗೆ ನನ್ನ ಕರ್ಮವು ಜಗತ್ತಿನ ಒಳಿತಿಗೆ ಕಾರಣವಾಗಬೇಕಾಗಿದೆ . ಯಜ್ಞ ದ ಅಧಿಪತಿಯು ಕಲ್ಯಾಣಗುಣಪರಿಪೂರ್ಣ ಭಗವಂತನಷ್ಟೆ. ನನ್ನೀ ತನುವನ್ನು ಈ ಕ್ಷೇತ್ರದಲ್ಲಿ ಅರ್ಪಿಸಿ , ಮಣ್ಣಿನೊಂದಿಗೆ ಮಣ್ಣಾಗಿ ಬೆರೆಯುತ್ತೇನೆ , ಮುಂದ ಈ ಭವ್ಯವಾದ ಕ್ಷೇತ್ರದಲ್ಲಿ ಜರಗುವ ಎಲ್ಲಾ ಸತ್ಕಾರ್ಯಗಳಲ್ಲಿ ಒಂದಕ್ಕೆ ನೂರರಷ್ಟು ಫಲ ಸಿದ್ದಿಸಲಿ ಎಂದನು.

ರಾಜನ ದೃಢ ಚಿತ್ತವನ್ನು ಕಂಡು ಬ್ರಾಹ್ಮಣನು ಹರ್ಷಿತನಾದನು . ” ರಾಜಾ ನೀನು ಉಳುತ್ತಿರು , ಬಿತ್ತುವ ಕೆಲಸವನ್ನು ನಾನು ಗೈಯುತ್ತೇನೆ . ಈ ಕ್ಷೇತ್ರವು ಫಲವನ್ನು ವಿಪುಲವಾಗಿ ಬೆಳೆಸುತ್ತದೆ . ಶ್ರದ್ದಾನ್ವಿತರು ಕೊಯ್ಯಲಿ ಮತ್ತು ಪುನಃ ಬಿತ್ತಿ ಬೆಳೆಸಲಿ , ನಿನ್ನ ಕಾರ್ಯವು ನಿರ್ದಿಷ್ಟವಾಗಿ ನಡೆಯಲಿ , ನಾನು ನಿನಗೆ ಸಹಾಯಕನಾಗಿ ಹಿಂಬಾಲಿಸುತ್ತೇನೆ .

‘ ಭೂಮಿ ಉಳುವ ಪವಿತ್ರ ಕಾರ್ಯ ಪುನಃ ಪ್ರಾರಂಭವಾಯಿತು . ಶ್ರೀ ಹರಿಯ ದಿವ್ಯ ಸುದರ್ಶನವು ಕುರುಪತಿಯನ್ನು ಅನುಸರಿಸಿ ಅವನ ಶರೀರವು ಛಿದ್ರ ಛಿದ್ರ ವಾಯಿತು . ಅರಸನ ದೇಹ ನಶಿಸಿ ಆರಸನ ಆಸೆ ಈಡೇರಿತು . ಮಣ್ಣಿಗೆ ಅರ್ಪಿಸಲ್ಪಟ್ಟಿ ನುಚ್ಚುನೂರಾದ ಮಾಂಸಖಂಡಗಳಿಂದ ಮಣ್ಣು ಪವಿತ್ರವಾಗಿ ಸುದರ್ಶನ ಮರೆಯಾಯಿತು .

ಇಹದಲ್ಲಿ ಕ್ಷೇತ್ರಪಾಲಕನಾಗಿ ಸರ್ವಾರ್ಪಣ ಮನೋಭಾವನೆಯಿಂದ ತನುವನ್ನು ಅರ್ಪಿಸಿದ ಕುರುರಾಜನ ಹೆಸರು ಅಮರವಾಯಿತು . ಭಗವಂತನ ‘ ಸುದರ್ಶನ ‘ ತತ್ವ ಮಾತ್ರ ಉಳಿದು ಆ ಭೂಮಿ ಧರ್ಮಕ್ಷೇತ್ರವಾದ ಕುರುಕ್ಷೇತ್ರವಾಗಿ ಪ್ರಸಿದ್ದಿಯನ್ನು ಪಡೆಯಿತು .

ರಾಜನ ಅವಸಾನದ ತರುವಾಯ ವಿಡೂರಥನು ಚಂದ್ರವಂಶದ ಚಕ್ರವರ್ತಿ ಯಾದನು . ಅವನ ಧರ್ಮಪತ್ನಿಯಲ್ಲಿ ಅರುಗ್ವಂತನೆಂಬ ಮಗನು ಉದಿಸಿ ವಂಶ ಮುಂದುವರಿಯಿತು . ಮುಂದೆ ಕುಮಾರನಾದ ಪರೀಕ್ಷಿತನು ಆಳಿದನು . ಅವನ ಮಗನು ಭೀಮ . ಆ ಮೇಲೆ ಪರ್ಯಾಶ್ರವಸ ಅಥವಾ ಪ್ರತೀಪಚಕ್ರವರ್ತಿಯು ಚಂದ್ರವಂಶದ ಕೀರ್ತಿಯನ್ನು ಮರೆಸಿದನು .

ಅವನು ಶೈಬ್ಯ ದೇಶದಧಿಪತಿಯ ಪುತ್ರಿ ಸುನಂದೆಯನ್ನು ವಿವಾಹವಾದನು . ಅವಳ ಗರ್ಭಾಂಬುಧಿಯಲ್ಲಿ ಜನಿಸಿದವರೇ ದೇವಾಪಿ , ಶಂತನು ಮತ್ತು ಬಾಹ್ಲೀಕ ಎಂಬ ಪುತ್ರತ್ರಯರು , ದೇವಾಪಿಯು ರೋಗಗ್ರಸ್ತನಾದುದರಿಂದ ರಾಜ್ಯವನ್ನು ಒಪ್ಪದೆ ಕಾಡನ್ನು ಸೇರಿದನು . ಶಂತನು ಚಂದ್ರವಂಶದ ಕೀರ್ತಿಯನ್ನು ಪಸರಿಸುವ ಮಹಾಚಕ್ರವರ್ತಿಯಾದನು . ಮುಂದೆ ಕೌರವರು ಹಾಗೂ ಪಾಂಡವರ ಮಧ್ಯೆ ಯುದ್ಧ ನಡೆದ ಸ್ಥಳವೂ ಇದೇ ಕುರುಕ್ಷೇತ್ರವಾಗಿದೆ.‌

ಭಗವಾನ್‌ ಶ್ರೀಕೃಷ್ಣ ಧರ್ಮವಂತರಾದ ಪಾಂಡವರಿಗೆ ಸಹಾಯ‌ ಮಾಡಿ ಅಧರ್ಮವನ್ನು‌ ನಾಶಮಾಡಿದನು…

(ಗ್ರಂಥ‌ ಕೃಪೆ: ಕೆ. ಅನಂತರಾಮ ರಾವ್ ಅವರ ಸಂಪೂರ್ಣ ‌ಮಹಾಭಾರತದ ಆಯ್ದ ಭಾಗ)

Tags

Related Articles

FOR DAILY ALERTS
Close