ಪ್ರಚಲಿತ

ನಮ್ಮ ಪಾರಂಪರಿಕ ತಾಣಗಳು ಶ್ರದ್ಧಾ ಭಕ್ತಿಯ ಕೇಂದ್ರಗಳು ಮಾತ್ರವಲ್ಲ, ಶತಮಾನಗಳ ಕಾಲ ವಿವಿಧ ದಾಳಿಯನ್ನು ಮೆಟ್ಟಿ ನಿಂತ ನಮ್ಮ ಸ್ವಾಭಿಮಾನದ ಕುರುಹುಗಳೂ ಹೌದು!

ಮೊನ್ನೆ,
ಹಾಸನ ಜಿಲ್ಲೆಯ ದೊಡ್ಡಗದ್ದವನಹಳ್ಳಿಯ ಹೊಯ್ಸಳರ ಕಾಲದ ದೇವಸ್ಥಾನದ ಕಾಳಿಕಾ ಮೂರ್ತಿ ರಾತ್ರೋರಾತ್ರಿ ಭಗ್ನಗೊಂಡಿತು. ಕಾರಣದ ಬಗ್ಗೆ ಈಗಲೂ ಸ್ಪಷ್ಟತೆ ಇಲ್ಲ. ನಮ್ಮ ಐತಿಹಾಸಿಕ ಕುರುಹುಗಳಾದ ದೇವಸ್ಥಾನಗಳ ಕಡೆಗೆ ಇಂತಹ ತಾತ್ಸಾರವೇಕೆ? ಅವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಲ್ಲವೇ? ನಮ್ಮ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಮೇಲಾದ ದಾಳಿಯನ್ನು ಮೆಟ್ಟಿ ನಿಂತ ನಮ್ಮ ಸ್ವಾಭಿಮಾನದ ಸಂಕೇತವೂ ಹೌದು. ಗತವೈಭವ ಸಾರುವಲ್ಲಿ ನಮ್ಮ ಪಾರಂಪರಿಕ ತಾಣಗಳಿಗಿಂತ ಉತ್ತಮ ಉದಾಹರಣೆಗಳು ಬೇರೆ ಯಾವುದಿದೆ.

ಮತ್ತೊಮ್ಮೆ ನಮ್ಮ ಗಮನ ಹಂಪಿಯ ಕಡೆಗೆ ನಿಲ್ಲಿಸೋಣ. ಹೇಳಿದಷ್ಟು ಮುಗಿಯದ, ನೋಡಿದಷ್ಟು ಮನ ತಣಿಯದ ವಿಸ್ಮಯಗಳ ತಾಣ ಹಂಪಿ.
ಹಂಪಿ, ಅಥವಾ ಹಂಪಿ ಸ್ಮಾರಕಗಳ ಸಮೂಹ ಎಂದೇ ಕರೆಯಲ್ಪಡುವ ಈ ಭವ್ಯ ತಾಣ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ದಕ್ಷಿಣ ಭಾರತದ, ಕರ್ನಾಟಕ ರಾಜ್ಯದಲ್ಲಿರುವ ಹಂಪಿ, 14 ನೇ ಶತಮಾನದಲ್ಲಿ ಭಾರತವನ್ನು ಆಳಿದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ನಗರ.
ಪರ್ಷಿಯಾ, ಯೂರೋಪ್ ದೇಶದಿಂದ ಭಾರತಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳ ಯಾತ್ರಾ ಬರಹಗಳಲ್ಲಿ ಹಂಪಿಯ ಅಧ್ಭುತ ವರ್ಣನೆ ಕಾಣಸಿಗುತ್ತದೆ. ಅದರಲ್ಲಿಯೂ ಪೋರ್ಚುಗೀಸ್ ಯಾತ್ರಿಕರು ಹಂಪಿಯ ವೈಭವವನ್ನು ಕಂಡು ಮೂಕವಿಸ್ಮಿತರಾದ ಬಗ್ಗೆ ಬರೆದುಕೊಳ್ಳುತ್ತಾರೆ.
ತುಂಗಭದ್ರಾ ನದಿಯ ತೀರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಹಂಪಿ ಇತಿಹಾಸದಲ್ಲಿ, ಅತ್ಯಂತ ಶ್ರೀಮಂತ, ವೈಭವೋಪೇತ ನಗರ ಎಂದೇ ಖ್ಯಾತಿ ಗಳಿಸಿದೆ. ಇಡೀ ನಗರದಲ್ಲಿ ಹಲವಾರು ದೇವಸ್ಥಾನಗಳು, ಅರಮನೆಗಳು, ಸುಸಜ್ಜಿತ ಮಾರುಕಟ್ಟೆ, ವ್ಯಾಪಾರ ವಿನಿಮಯದ ಸ್ಥಳಗಳು ಕಾಣ ಸಿಗುವುದರ ಬಗ್ಗೆ ವಿದೇಶಿ ಯಾತ್ರಿಕರ ಪ್ರಬಂಧಗಳು ಹಾಗೂ ಸ್ಥಳೀಯ ಶಾಸನಗಳು ಸಾಕ್ಷಿ ನುಡಿಯುತ್ತವೆ.
ಕ್ರಿ.ಶ. 1500 ಇಸವಿಯ ಹೊತ್ತಿಗೆ, ಮಧ್ಯಯುಗದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ನಗರವಾಗಿತ್ತು. ಬೀಜಿಂಗ್ ಅನ್ನು ಬಿಟ್ಟರೆ ವಿಸ್ತೀರ್ಣದಲ್ಲಿ ಹಂಪಿಯನ್ನು ಮೀರಿಸುವ ನಗರ ಇನ್ನೊಂದಿರಲಿಲ್ಲ.
ಆ ಕಾಲಕ್ಕೆ ಬಹುಶಃ ಹಂಪಿಯೇ ಭಾರತದ ಅತ್ಯಂತ ಶ್ರೀಮಂತ ನಗರ. ಪರ್ಷಿಯಾ ಹಾಗೂ ಪೋರ್ಚುಗಲ್ ನ ವ್ಯಾಪಾರಿಗಳಿಗೆ ಹಂಪಿ ಸ್ವರ್ಗ ಸಮಾನ. ಯಾಕೆಂದರೆ ಹಂಪಿಯಲ್ಲಿ ಸಿಗದ ವಸ್ತುಗಳಿಲ್ಲ, ಸಿಗದ ಮುತ್ತು ರತ್ನಗಳು ಇರಲಿಲ್ಲ.
ಇಂತಹ ಭವ್ಯ ತಾಣ ಮುಸ್ಲಿಂ ಸುಲ್ತಾನರ ಕುದೃಷ್ಟಿಗೆ ಈಡಾದದ್ದು ಅತ್ಯಂತ ದುಃಖಕರ ಸಂಗತಿ. ವಿಜಯನಗರವನ್ನು ಮಣಿಸಲಾಗದೆ ಎಲ್ಲಾ ಮುಸ್ಲಿಂ ಸುಲ್ತಾನರೂ ಒಟ್ಟುಗೂಡಿ ಹಂಪಿಯ ಮೇಲೆ ಆಕ್ರಮಣ ನಡೆಸಿದರು. ಅವರ ದಾಳಿಗೆ, ದ್ವೇಷಕ್ಕೆ ತುತ್ತಾದ ಹಂಪೆ, ಹಾಳು ಕೊಂಪೆಯಾಯಿತು.
1565 ರಲ್ಲಿ ಬಹಮನಿ ಸುಲ್ತಾನರ ಅಟ್ಟಹಾಸಕ್ಕೆ ಬಲಿಯಾದ ಹಂಪೆ ಇಂದೂ ಕೂಡ ತನ್ನ ಗತ ವೈಭವವನ್ನು ತನ್ನ ಭಗ್ನಾವಷೇಶಗಳ ಮೂಲಕ ಸಾರಿ ಹೇಳುತ್ತಿದೆ.
ಇಂದಿನ ಕರ್ನಾಟಕದ ಹೊಸಪೇಟೆ ತಾಲ್ಲೂಕಿನ ಸಮೀಪವಿರುವ ಹಂಪಿಯ ಅವಶೇಷಗಳು ಸುಮಾರು 4100 ಚದರ ಅಡಿಗಳಷ್ಟು ವಿಶಾಲವಾದ ಭೂಪ್ರದೇಶದಲ್ಲಿ ಹರಡಿಕೊಂಡಿದೆ.
ಯುನೆಸ್ಕೋ ವಿವರಣೆಯ ಪ್ರಕಾರ, ಕಠಿಣ ಪರಿಶ್ರಮದಿಂದ ಮೂಡಿದ ಭವ್ಯತೆಯ ದರ್ಶನ ನೀಡುವ ತಾಣವೇ ಹಂಪಿ. ಇವತ್ತಿಗೂ ಕಾಣಸಿಗುವ ಅವಶೇಷಗಳ ಸಂಖ್ಯೆಯೇ ಸಾರಿ ಸುಮಾರು 1600, ಹಾಗಾದರೆ ಅಂದಿನ ಭವ್ಯತೆ ಹೇಗಿದ್ದಿರ ಬಹುದು?!
ಈ ಹಿಂದೂ ಸಾಮ್ರಾಜ್ಯದ ರಾಜಧಾನಿಯು, ಹಲವಾರು ಕೋಟೆಗಳು, ಅರಮನೆಗಳು, ವಿಶಾಲವಾದ ಸಭಾ ಮಂಟಪಗಳು, ದೇವಸ್ಥಾನಗಳು, ಪುಷ್ಕರಣಿಗಳು ಹೀಗೆ.. ಹಲವಾರು ಶಿಲ್ಪ ಕಲೆಯ ಅಭೂತಪೂರ್ವ ದರ್ಶನ ನಮಗೆ ಮಾಡಿಸುತ್ತದೆ.
ಹಂಪಿ, ವಿಜಯನಗರ ಸಾಮ್ರಾಜ್ಯಕ್ಕೆ ಮೊದಲೇ ಅಸ್ತಿತ್ವದಲ್ಲಿದ್ದ ನಗರ. ಅಶೋಕನ ಕಾಲದ ಶಿಲಾ ಶಾಸನಗಳಲ್ಲಿ, ರಾಮಾಯಣ, ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರವೆಂದು ಹಂಪಿಯನ್ನು ಉಲ್ಲೇಖಿಸಲಾಗಿದೆ.
ಇಂದಿಗೂ ಹಂಪಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ. ವಿರೂಪಾಕ್ಷ ದೇವಸ್ಥಾನ ಹಾಗೂ ಆದಿ ಶಂಕರಾಚಾರ್ಯ ರ ಪರಂಪರೆಯಲ್ಲಿ ಬಂದ ವಿದ್ಯಾರಣ್ಯರ ನೆಲೆಬೀಡು ಹಂಪಿ.
ಹಂಪಿಯ ಐತಿಹ್ಯ:
ಹಂಪಿ ಎಂದೇ ಪ್ರಖ್ಯಾತವಾಗಿರುವ ಈ ನಗರಕ್ಕೆ ಪಂಪಾ ಕ್ಷೇತ್ರ ಅಥವಾ ಕಿಷ್ಕಿಂದ ಕ್ಷೇತ್ರ ಅಥವಾ ಭಾಸ್ಕರ ಕ್ಷೇತ್ರ ಎಂಬ ಹೆಸರುಗಳೂ ಇವೆ.
ಪಂಪಾ ಎನ್ನುವ ಹೆಸರು ಪಾರ್ವತಿ ದೇವಿಯಿಂದ ಬಂದದ್ದು.
ಶಿವನನ್ನು ಪತಿಯಾಗಿ ಪಡೆಯಲು ಇಚ್ಛಿಸಿದ ಪಾರ್ವತಿ ದೇವಿಯ ನೆರವಿಗೆ ಇಂದ್ರ ಹಾಗೂ ಕಾಮದೇವರು ಬಂದು, ಸಮಾಧಿ ಸ್ಥಿತಿಯಲ್ಲಿದ್ದ ಶಿವನನ್ನು ಎಚ್ಚರಿಸುವ ಪ್ರಯತ್ನ ನಡೆಯಿತು. ಶಿವನ ಮೂರನೇ ಕಣ್ಣಿನ ಜ್ವಾಲೆ ಕಾಮನನ್ನು ದಾಹಿಸಿತು. ಪಾರ್ವತಿ ಮಾತ್ರ ಧೃತಿಗೆಡಲಿಲ್ಲ. ಬ್ರಹ್ಮಚಾರಿಣಿ ರೂಪದಲ್ಲಿ ಕಠಿಣ ತಪಸ್ಸು ಆಚರಿಸಿ a ಮಹಾದೇವನನ್ನು ಒಲಿಸಿಕೊಂಡಳು ಪಾರ್ವತಿ. ಆಕೆ ತಪಸ್ಸು ಆಚರಿಸಿದ ಪರ್ವತ, ಹೇಮಕೂಟ ಹಂಪಿಯಲ್ಲಿದೆ. ಇದೇ ಕಾರಣದಿಂದ ಪಾರ್ವತಿಗೆ ಪಂಪಾ ಎಂಬ ಹೆಸರೂ ಶಿವನಿಗೆ ಪಂಪಾಪತಿ ಎಂಬ ಹೆಸರೂ ಒದಗಿ ಬಂದಿತು. ಬರುಬರುತ್ತಾ ಸಂಸ್ಕೃತದ ಪಂಪಾ ಕನ್ನಡದಲ್ಲಿ ಹಂಪೆ ಅಥವಾ ಹಂಪಿಯಾಯಿತು.
ಹನುಮಂತನ ಜನ್ಮಸ್ಥಾನ ಕಿಷ್ಕಿಂಧೆ ಇದೇ ಹಂಪಿ ಕ್ಷೇತ್ರ ಹಾಗಾಗಿ ರಾಮಾಯಣದಲ್ಲಿ ಕೂಡ ಇದರ ಉಲ್ಲೇಖವಿದೆ. ಆಶ್ಚರ್ಯಕರ ಸಂಗತಿಯೆಂದರೆ, ರಾಮಾಯಣದಲ್ಲಿ ಕಾಣಸಿಗುವ ವಿವರಣೆ ಇಂದಿನ ಹಂಪಿಗೆ ಬಹಳಷ್ಟು ತಾಳೆಹೊಂದುತ್ತದೆ. ಸೀತಾ ದೇವಿಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರು ಇದೇ ಸ್ಥಳದಲ್ಲಿ ಸುಗ್ರೀವ ಹಾಗೂ ಹನುಮಂತನನ್ನು ಭೇಟಿಯಾದದ್ದು.
ನಿಟ್ಟೂರಿನಲ್ಲಿ ದೊರೆತ ಅಶೋಕನ ಕಾಲದ ಶಿಲಾಶಾಸನ ದಲ್ಲೀ ಹಂಪಿಯು ಕ್ರಿ.ಪೂ.269-232 ರಲ್ಲಿ ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ವಿವರಿಸಲಾಗಿದೆ. ಬ್ರಾಹ್ಮೀ ಲಿಪಿಯಲ್ಲಿ ಇರುವ ಈ ಶಾಸನ ಉತ್ಖನನದ ಸಮಯದಲ್ಲಿ ದೊರೆತ ಅಪರೂಪದ ಪುರಾವೆ. ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಕೂಡ ಪಂಪಾಪುರದ ಉಲ್ಲೇಖವಿದೆ.
10 ನೇ ಶತಮಾನದ ಹೊತ್ತಿಗೆ, ಹಂಪಿಯು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರವಾಗಿ ಅದಾಗಲೇ ಪ್ರಸಿದ್ಧಿ ಪಡೆದಿತ್ತು. ಕಲ್ಯಾಣ ಚಾಲುಕ್ಯರು ವಿರೂಪಾಕ್ಷ ದೇವಸ್ಥಾನಕ್ಕೆ ನೀಡಿದ ಕಾಣಿಕೆಗಳ ಕುರಿತಾದ ಮಾಹಿತಿ ಶಾಸನಗಳಲ್ಲಿ ಲಭ್ಯ. 11-13 ನೇ ಶತಮಾನದ ಶಾಸನಗಳಲ್ಲಿ ಪಂಪಾ ದೇವಿಗೆ ಸಮರ್ಪಿಸುವ ಕಾಣಿಕೆ ಎಂಬಾಗಿತಿ ದೊರೆತರೆ,12 ರಿಂದ 14 ನೇ ಶತಮಾನದಲ್ಲಿ ಹೊಯ್ಸಳರು ಪಂಪಾ ದೇವಿಗೆ, ಶಿವನಿಗೆ ದೇವಸ್ಥಾನಗಳನ್ನು ಕಟ್ಟಿದ ಬಗ್ಗೆ ಶಾಸನಗಳಲ್ಲಿ ಬರೆಯಲಾಗಿದೆ. ಹೊಯ್ಸಳರ ದೊರೆಯನ್ನು ಪಂಪೆಯ ಒಡೆಯ ಎಂದೇ ಕರೆಯಲಾಗಿದೆ. ವಿರೂಪಾಕ್ಷ ಪಟ್ಟಣ, ವಿಜಯ ವಿರೂಪಾಕ್ಷ ಪುರ ಎಂಬ ಹೆಸರು ಹಂಪಿಗೆ ಬದಲಾಗಿ ಪ್ರಯೋಗ ಗೊಂಡಿದೆ.

14 ನೇ ಶತಮಾನದ ನಂತರ:
ಇಸ್ಲಾಂನ ದಾಳಿಕೋರರು, ದಕ್ಷಿಣ ಭಾರತಕ್ಕೆ ದಾಳಿ ಇಟ್ಟಾಗ ಇಲ್ಲಿನ ದೇವಾಲಯಗಳನ್ನು ನಾಶಪಡಿಸಿದ ಇತಿಹಾಸ ತಿಳಿದಿರುವುದೇ. ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಮೊಹಮ್ಮದ್ ಬಿನ್ ತುಘಲಕ್ ದಾಳಿ ಮಾಡಿ ಹೊಯ್ಸಳರ ರಾಜಧಾನಿಯಾಗಿದ್ದ ದ್ವಾರಸಮುದ್ರದ ಸಂಪತ್ತನ್ನು ದೋಚಿ ಅಲ್ಲಿನ ದೇವಾಲಯಗಳನ್ನು ವಿರೂಪಗೊಳಿಸಿ ಅಟ್ಟಹಾಸ ಮೆರೆದರು.
ಕರ್ನಾಟಕದಲ್ಲಿ ಜೌಹರ್ ಮಾದರಿಯಲ್ಲೇ ಕಂಪಿಲಿಯ ಮಹಿಳೆಯರು ತುಘಲಕ್ ನ ದಾಸ್ಯಕ್ಕೆ ಈಡಾಗದೆ ತಮ್ಮನ್ನು ತಾವೇ ಅಗ್ನಿಗೆ ಸಮರ್ಪಿಸಿಕೊಂಡ ಇತಿಹಾಸ ಶಿಲಾ ಶಾಸನಗಳಲ್ಲಿ ಅಮರವಾಗಿವೆ.

1336 ರಲ್ಲಿ ಕಂಪಿಲಿಯ ಪತನದ ನಂತರ ಬಂದ ವಿಜಯನಗರ ಸಾಮ್ರಾಜ್ಯವು ತನ್ನ ಹೆಸರನ್ನು ಮಾತ್ರವಲ್ಲದೆ ಹಂಪಿಯ ವೈಭವವನ್ನು ದಶ ದಿಕ್ಕುಗಳಲ್ಲಿ ಪಸರಿಸುವಂತೆ ಮಾಡಿತು.
ಹಂಪಿಯ ಕಣ್ಣು ಕೋರೈಸುವ ಚೆಲುವಿನಿಂದ, ಶ್ರೀಮಂತಿಕೆಯಿಂದ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸಿತ್ತು. ಆದರೆ ಬಹಮನಿ ಸುಲ್ತಾನರು ಮಾತ್ರ ಹಂಪಿಯ ವೈಭವವನ್ನು ನುಚ್ಚು ನೂರು ಮಾಡಿ, ಸಂಪತ್ತನ್ನೆಲ್ಲ ದೋಚಿದ್ದು ಮಾತ್ರವಲ್ಲದೆ, ವಿಜಯನಗರದ ಅರಸರ ಶಿರಚ್ಛೇದನ ಮಾಡಿ, ತಾಳಿಕೋಟೆಯ ಯುದ್ಧದ ನಂತರ ಹಿಂದೂಗಳ ಮೇಲೆ ಬರ್ಬರವಾದ ವಸಾಹತು ಹೇಳಿಬಿಟ್ಟರು. ನಮ್ಮ ದೇವಸ್ಥಾನಗಳು ವಿರೂಪಗೊಂಡವು, ಸ್ತ್ರೀಯರು ಸೆರೆಯಾದರು, ಹಂಪಿಯ ಕೀರ್ತಿ ಮಣ್ಣಿನ ಧೂಳಿನಲ್ಲಿ ಒಂದಾಗಿ ನಶಿಸಿಹೋಯಿತು.

ಸುಲ್ತಾನರು ಹಚ್ಚಿದ ಬೆಂಕಿ ಆರು ತಿಂಗಳುಗಳ ಕಾಲ ಹಂಪಿಯನ್ನು ದಹಿಸಿತು. ವೈಭವವನ್ನು ಆಪೋಶನ ತೆಗೆದುಕೊಂಡು ತನ್ನ ನೋವಿನ ಕಥೆ ಸಾರಲಿ ಎಂದೇ ಉಳಿಸಿಹೋದಂತೆ ಭಾಸವಾಗುವ ಭಗ್ನಾವಷೇಶವಾಗಿ ಹಂಪಿ, ಕೇವಲ ಸ್ಮಾರಕಗಳ ಸಮೂಹವಾಗಿ ಉಳಿದುಹೋಯಿತು.

Related Articles

FOR DAILY ALERTS
Close