ಪ್ರಚಲಿತ

ನಿಮಗೆ 18 ತುಂಬಿದೆಯಾ? ಯಾರಿಗೆ ಮತ ಚಲಾಯಿಸಬೇಕು ಎನ್ನುವ ಗೊಂದಲದಲ್ಲಿದ್ದರೆ ಒಮ್ಮೆ ಈ ಕ್ಷೇತ್ರ ನೋಡ ಬನ್ನಿ!

ಸಮಾಜಮುಖಿ ಜೀವನವನ್ನು ಅರಸಿ ಸಣ್ಣ ವಯಸ್ಸಿನಲ್ಲೇ ಹುಟ್ಟಿದ ಊರು, ಮನೆ, ಸಂಸಾರ ತೊರೆದು ಬಂದ ನರೇಂದ್ರ ಮೋದಿ ಈಗ ಪ್ರಧಾನಿ ಹುದ್ದೆಗೇರಿ ರಾಷ್ಟ್ರ ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವುದು ಅವರ ತವರು ಜಿಲ್ಲೆ ಮೆಹಸಾನ ಮಾತ್ರವಲ್ಲ, ಇಡೀ ಗುಜರಾತ್‍ಗೆ ಹೆಮ್ಮೆ-ಅಭಿಮಾನದ ವಿಷಯ.

ರಾಜ್ಯದ ಉದ್ದಗಲಕ್ಕೂ ವಿಶಾಲವಾಗಿ ಹಬ್ಬಿರುವ ರಸ್ತೆಗಳೇ ಮೋದಿ ಆಡಳಿತದ ಯಶಸ್ವೀಗಾಥೆಯನ್ನು ಬಿಚ್ಚಿಡುತ್ತವೆ. ಒಬ್ಬ ಜನನಾಯಕನಲ್ಲಿ ಇಚ್ಛಾಶಕ್ತಿಯಿದ್ದರೆ ರಾಜ್ಯವನ್ನು ಹೇಗೆ ಪ್ರಗತಿಪಥದಲ್ಲಿ ಕೊಂಡೊಯ್ಯಬಹುದು ಎಂಬುದಕ್ಕೆ ಮೋದಿಯೇ ಪ್ರತ್ಯಕ್ಷ ಉದಾಹರಣೆ.

ಮುಸ್ಲಿಂ ಬಾಹುಳ್ಯವಿರುವ ಗೋಧ್ರಾ ಕ್ಷೇತ್ರದ ಆಟೋ ಚಾಲಕ ಮೆಹಬೂಬ್ ಹುಸೇನ್ `ಮೋದಿ ವಿಕಾಸ ಪುರುಷ’ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. `2002ರಿಂದ ಗುಜರಾತ್ ಭಾರೀ ಪರಿವರ್ತನೆಗೆ ಸಾಕ್ಷಿಯಾಗಿದೆ. ಆದರೆ ನಾವು ಬಿಜೆಪಿಗೆ ಮೊದಲಿಂದಲೂ ಮತ ಹಾಕಿಲ್ಲ. ನಮ್ಮ ಧರ್ಮಗುರುಗಳು ಹೇಳಿದ ಅಭ್ಯರ್ಥಿಗೆ ಮತ ಹಾಕುತ್ತೇವೆ’ ಎಂದರು.

ಮೋದಿ ಅಭಿವೃದ್ಧಿ ಮಾದರಿಗೆ ಅವರ ಜನ್ಮಸ್ಥಾನ ವಡ್‍ನಗರ ಕೂಡ ಕನ್ನಡಿ ಎನ್ನಬಹುದು. ಇದು ರಾಜಧಾನಿ ಗಾಂಧಿನಗರದಿಂದ 150 ಕಿಮೀ ದೂರದಲ್ಲಿದೆ. ಇಲ್ಲಿನ ರೈಲ್ವೆ ನಿಲ್ದಾಣದಲ್ಲೇ ಮೋದಿ ಬಾಲ್ಯದಲ್ಲಿ ತಂದೆ ದಾಮೋದರ್ ದಾಸ್ ಜತೆ ಚಹಾ ಮಾರುತ್ತಿದ್ದರು. 2001ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ವಡ್ ನಗರದ ಚಿತ್ರಣ ಬದಲಾಯಿಸಿದ ಮೋದಿ, ಸ್ವಹಿತಾಸಕ್ತಿ-ಸ್ವಜನ ಪಕ್ಷಪಾತ ಲೆಕ್ಕಾಚಾರ ಹಾಕದೆ, ಕುಟುಂಬಸ್ಥರು, ಸಂಬಂಧಿಕರನ್ನು ರಾಜಕೀಯದಿಂದ ದೂರವಿರಿಸಿದ್ದು ಕೂಡ ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಗ್ರಾಮಸ್ಥರೇ ಹೇಳುತ್ತಾರೆ.

15 ವರ್ಷಗಳ ಹಿಂದೆ ಗುಜರಾತ್‍ನ ಸಾಮಾನ್ಯ ಹಳ್ಳಿಯಂತಿದ್ದ ವಡ್ ನಗರ ಈಗ ಮಾದರಿ ಪಟ್ಟಣವಾಗಿ ರೂಪುಗೊಂಡಿದೆ. ಅದ್ಭುತ ವಿನ್ಯಾಸಗಳೊಂದಿಗೆ ತಲೆ ಎತ್ತುತ್ತಿರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆಗಳು, ಮೆಡಿಕಲ್ ಕಾಲೇಜು ವಡ್ ನಗರದ ಪರಿವರ್ತನೆಗೆ ನಾಂದಿ ಹಾಡಿವೆ. ಮೋದಿ ಪ್ರಧಾನಿಯಾದ ಮೇಲಂತೂ ಇಲ್ಲಿ ಅಂಗಡಿ, ಮುಂಗಟ್ಟು, ಹೋಟೆಲ್?ಗಳು, ವಿವಿಧ ಖಾಸಗಿ ಸಂಸ್ಥೆಗಳ ಶಾಖೆಗಳೂ ತೆರೆದುಕೊಂಡಿರುವುದರಿಂದ, ಸ್ಥಳೀಯರಿಗೆ, ಶಿಕ್ಷಿತ ಮಂದಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಸ್ವಚ್ಛತೆ ವಿಷಯದಲ್ಲೂ ವಡ್?ನಗರ ಇತರ ಪಟ್ಟಣಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. `ವಡ್‍ನಗರದ ಬಳಿ ಮೋದಿಯವರು ಧರೋ ಡ್ಯಾಂ ನಿರ್ಮಾಣ ಮಾಡಿದ್ದರಿಂದ ನರ್ಮದಾ ನದಿ ನೀರನ್ನೇ ಗ್ರಾಮಸ್ಥರು ಬಳಸಿಕೊಳ್ಳುತ್ತಿದ್ದಾರೆ. ಈ ಡ್ಯಾಮ್ ನಿಂದಾಗಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆಯೇ ಎದುರಾಗಿಲ್ಲ’ ಎನ್ನುತ್ತಾರೆ ಇಲ್ಲಿನ ಹೋಟೆಲ್ ಮಾಲೀಕ ಮಹಮ್ಮದ್.

ಬಾಲ್ಯವಿವಾಹವಾಗಿ, ನಂತರ ಸಂಸಾರ ತೊರೆದು ರಾಷ್ಟೀಯ ಸ್ವಯಂಸೇವಕ ಸಂಘ ಸೇರಿಕೊಂಡ ಬಳಿಕ ವಡ್ ನಗರದ ಕಡೆ ಮೋದಿ ಹೆಚ್ಚು ತಲೆ ಹಾಕುತ್ತಿರಲಿಲ್ಲವಂತೆ. ಆದರೆ ತಾಯಿ ಹೀರಾ ಬೆನ್ ಅವರನ್ನು ಭೇಟಿ ಮಾಡಲೆಂದು ಅಪರೂಪಕ್ಕೊಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದರಂತೆ. ಮುಖ್ಯಮಂತ್ರಿಯಾದ ಬಳಿಕವೂ ಅವರು ವಡ್ ನಗರಕ್ಕೆ ಬೆರಳೆಣಿಕೆಯಷ್ಟು ಸಲವಷ್ಟೇ ಬಂದಿದ್ದಾರೆ. ದೇಶದ ಪ್ರಧಾನಿಯಾಗಿ ಮೂರೂವರೆ ವರ್ಷ ಕಳೆದ ಬಳಿಕ ಇಲ್ಲಿಗೆ ಬಂದಿದ್ದ ಮೋದಿಗೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ನೀಡಿದ್ದರು.

ಚಹಾ ಅಂಗಡಿ ಇಂದು ಸ್ಮಾರಕ

1970ರ ದಶಕದಲ್ಲಿ ವಡ್ ನಗರ ರೈಲ್ವೆ ನಿಲ್ದಾಣದಲ್ಲಿ ಮೋದಿ ಟೀ ಮಾರುತ್ತಿದ್ದ ಅಂಗಡಿ ಈಗ ದೇಶದ ಗಮನಸೆಳೆದಿದೆ. ವಡ್ ನಗರ ಮೂಲಕ ಸಾಗುವ ನೂರಾರು ಪ್ರವಾಸಿಗರು ರೈಲ್ವೆ ನಿಲ್ದಾಣದ ಚಹಾ ಅಂಗಡಿ ವೀಕ್ಷಿಸಿಯೇ ಮುಂದೆ ಸಾಗುತ್ತಾರೆ. ಕೇಂದ್ರ ಸರ್ಕಾರ ಈ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡಿದ್ದು, ಶೇಕಡಾ 60ರಷ್ಟು ಕೆಲಸ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡುವ ಪ್ರಯತ್ನ ನಡೆದಿದ್ದರೂ, ಮೋದಿ ಟೀ ಅಂಗಡಿ ಮಾತ್ರ ಹಾಗೆಯೇ ಇದೆ. ಅಂಗಡಿಯ ಮೂಲ ಸ್ವರೂಪವನ್ನು ಕಾಪಾಡಿಕೊಂಡು ಅದನ್ನು ಪ್ರವಾಸಿಗರ ಆಕರ್ಷಣೆಯನ್ನಾಗಿ ಮಾಡಲಿದ್ದೇವೆ ಎಂದು ಕೆಲ ದಿನಗಳ ಹಿಂದೆ ವಡ್ ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಸಂಸ್ಕೃತಿ ಸಚಿವ ಡಾ. ಮಹೇಶ್ ಶರ್ಮ ಹೇಳಿದ್ದರು. ನಿಲ್ದಾಣದಲ್ಲಿ ಮಾಧ್ಯಮದ ಮಾತಿಗೆ ಸಿಕ್ಕ ಖೇಡಾ ಜಿಲ್ಲೆಯ ವಾವಡಾ ಗ್ರಾಮದ ಭರತ್ ಮಕ್ವಾನ, `ಚಹಾ ಮಾರುವ ಹುಡುಗ ದೇಶದ ಪ್ರಧಾನಿ ಆಗಿರುವುದು ಸಮೃದ್ಧ ಪ್ರಜಾಪ್ರಭುತ್ವದ ಸಂಕೇತ. ಅವರು ಕೇವಲ ಸ್ವಹಿತದ ಬಗ್ಗೆ ಯೋಚಿಸುತ್ತಿದ್ದರೆ ಪ್ರಧಾನಿ ಆಗುತ್ತಿರಲಿಲ್ಲ. ವಡ್ ನಗರ ಬದಲಾದ ರೀತಿ ನೋಡಿಯೇ ನಾನು ನಿಬ್ಬೆರಗಾಗಿದ್ದೇನೆ’ ಎಂದರು.

ಜೋಪಡಿಯಲ್ಲಿ ಮೋದಿ ಕುಟುಂಬಸ್ಥರು

ಮೋದಿ ಕುಟುಂಬಸ್ಥರಲ್ಲಿ ಕೆಲವರು ಈಗಲೂ ವಡ್‍ನಗರದ ಗಾಂಚಿ ಓಡ್‍ನಲ್ಲೇ (ಗಾಣಿಗರ ಓಣಿ) ವಾಸಿಸುತ್ತಿದ್ದಾರೆ. ತಮ್ಮ ತಂದೆ ತಾಯಿ ಜತೆ ಮೋದಿ ಬಾಲ್ಯ ಕಳೆದದ್ದು ಇದೇ ಓಣಿಯಲ್ಲಿ. ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿರುವ ಸೋದರ ಸಂಬಂಧಿ ಅರವಿಂದ ಬಾಯ್-ರಂಜನಾ ಬೆನ್ ಮೋದಿ ದಂಪತಿಗೆ ಈಗಲೂ ಗೋಣಿಚೀಲಗಳ ಮಾರಾಟವೇ ಜೀವನಾಧಾರ. `ಮುಖ್ಯಮಂತ್ರಿ, ಪ್ರಧಾನಿಯಾದ ಮೇಲೂ ಮೋದಿ ನನ್ನ ಪತಿಗೆ ಫೆÇೀನ್ ಮಾಡುತ್ತಿರುತ್ತಾರೆ. 6 ವರ್ಷಗಳ ಹಿಂದೆ ಪತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಮೋದಿ ಇಲ್ಲಿಗೆ ಬಂದಿದ್ದರು. ಆ ಬಳಿಕ ದೂರವಾಣಿಯಲ್ಲಷ್ಟೇ ಮಾತುಕತೆ’ ಎಂದು ರಂಜನಾ ಬೆನ್ ಮಾಹಿತಿ ಹಂಚಿಕೊಂಡರು.

ವಡ್‍ನಗರ ಮೆಹಸಾನ ಜಿಲ್ಲೆಗೆ ಸೇರಿದ್ದು, ಪಾಟಿದಾರ ಮೀಸಲಾತಿ ಆಂದೋಲನದ ಪ್ರಮುಖ ಕೇಂದ್ರವೂ ಹೌದು. ಹಾಲಿ ವಿಧಾನಸಭೆಯಲ್ಲಿ ಜಿಲ್ಲೆಯ 5 ಬಿಜೆಪಿ ಮತ್ತು 2 ಕಾಂಗ್ರೆಸ್ ಶಾಸಕರಿದ್ದಾರೆ. ಪಾಟಿದಾರರ ಸರ್ದಾರ್ ಪಟೇಲ್ ಗ್ರೂಪ್‍ನ (ಎಸ್ಪಿಜಿ) ಕೇಂದ್ರ ಕಚೇರಿ ಮೆಹಸಾನದಲ್ಲೇ ಇದೆ. ಇದರ ಸೋಷಿಯಲ್ ಮೀಡಿಯಾ ವಿಭಾಗ ನೋಡಿಕೊಳ್ಳುತ್ತಿದ್ದ ಹಾರ್ದಿಕ್ ಪಟೇಲ್, ಈಗ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ರಚಿಸಿ (ಪಿಎಎಎಸ್) ಮೀಸಲಾತಿ ಬೇಡಿಕೆ ಮುಂದಿಟ್ಟು ರಾಜಕೀಯಕ್ಕೆ ಧುಮುಕಿದ್ದಾರೆ. ಜಿಲ್ಲೆಯಲ್ಲಿರುವ ಸುಮಾರು 4 ಲಕ್ಷ ಕಡ್ವಾ ಪಾಟಿದಾರರು ಮತ್ತು 3.5 ಲಕ್ಷ ಠಾಕೂರರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆಯಿದೆ. `ಹಾರ್ದಿಕ್ ಬೆಂಬಲಿಗ ಪಾಟಿದಾರರು ಏನೇ ಹೇಳಿದರೂ, ಇದೇ ಜಿಲ್ಲೆಯ ವ್ಯಕ್ತಿ ದೇಶದ ಪ್ರಧಾನಿ ಆಗಿರುವಾಗ ಅವರನ್ನು ನಾವೇಕೆ ಸೋಲಿಸಬೇಕು’ ಎಂಬ ಚರ್ಚೆಯೂ ಪಾಟಿದಾರರ ಮಧ್ಯೆ ನಡೆದಿದೆ.

ಬಿಹಾರದಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದರೂ ಲಾಲು ಪ್ರಸಾದ್ ಯಾದವ್ ತವರು ನೆಲ ಪುಲ್ವಾರಿಯಾವನ್ನು ಸುಧಾರಿಸಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇಡೀ ಗಾಂಧಿ ಕುಟುಂಬ ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಅಮೇಠಿಯನ್ನು ದಶಕಗಳಿಂದ ಪ್ರತಿನಿಧಿಸಿದ್ದರೂ, ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂಬ ಮಾತಿದೆ. ಗುಜರಾತ್‍ನಲ್ಲಿ ವಡ್‍ನಗರ ಸೇರಿದಂತೆ ಸಮಗ್ರವಾಗಿ ಮೋದಿ ಕೈಗೊಂಡ ಅಭಿವೃದ್ಧಿ ಕ್ರಮಗಳೇ 22 ವರ್ಷಗಳಿಂದ ಬಿಜೆಪಿಯನ್ನು ರಕ್ಷಿಸುತ್ತಾ ಬಂದಿದೆ.

ಇದೇ ಕಾರಣಕ್ಕೆ ಕಾಂಗ್ರೆಸ್ ಈ ಬಾರಿ ಜಾತಿಯನ್ನೇ ಚುನಾವಣಾ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸ ಹೊರಟಿದೆ. ಮತದಾರ ಜಾತಿಯನ್ನು ಮೀರಿ ಅಭಿವೃದ್ಧಿಯನ್ನೇ ಪರಿಗಣಿಸಿ ಮತ ಹಾಕಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗಲಿಕ್ಕಿಲ್ಲ.

ಕೃಪೆ: ವಿಜಯವಾಣಿ

-ಪವಿತ್ರ

Tags

Related Articles

Close