ಅಂಕಣಪ್ರಚಲಿತ

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

“ಬರೇ ರಾಣಿಯೊಬ್ಬಳೇಕೆ; ನಿಮ್ಮ ಜನಾನವನ್ನು ಅಲಂಕರಿಸಲು ರಾಣೀವಾಸದ ಸುಂದರ ಸ್ತ್ರೀಯರೆಲ್ಲರೂ ಬರುತ್ತಿದ್ದಾರೆ ಜಹಂಪನಾ” ಎನ್ನುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸಿ ಸುಲ್ತಾನನ ಕಾಮದ ಹುಚ್ಚು ಕೆರಳುತ್ತಿದೆ. ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುವ ದೃಶ್ಯವನ್ನು ನೋಡಿದ ಮೇಲಂತೂ ಸ್ವರ್ಗಕ್ಕಿನ್ನು ಮೂರೇ ಗೇಣು ಎಂಬಂತೆ ಹುಚ್ಚನಂತೆ ಕುಣಿಯುತ್ತಾನೆ. ಪಲ್ಲಕ್ಕಿಗಳು ಹತ್ತಿರ ಬಂದವು; ಬಂದು ಸೆರೆಯಲ್ಲಿದ್ದ ತಮ್ಮರಸನನ್ನು ಕಂಡವು; ಒಂದು ಪಲ್ಲಕ್ಕಿ ರಾಜನನ್ನು ಹತ್ತಿಸಿಕೊಂಡು ನೋಡನೋಡುತ್ತಿದ್ದಂತೆ ಮರೆಯಾಯಿತು!

ತನ್ನ ಮನಸ್ಸನ್ನು ಸೂರೆಗೈದ ಸುಂದರಿಯನ್ನು ಕಾಣಲು ಕಾತರನಾಗಿರುವ ಸುಲ್ತಾನ ಕಂಡದ್ದು ಖರವಾಲ ಹಿಡಿದು ತನ್ನ ಸೇನೆಯನ್ನು ತರಿಯುತ್ತಿರುವ ಏಳುನೂರು ಸುಂದರಿಯನ್ನು! ಕಂಸ ತನ್ನ ಮರಣದ ಹಿಂದಿನ ರಾತ್ರಿ ಕಂಡ ಕೃಷ್ಣನಂತೆ; ಉರಿಯುವ ಒಂದು ದೀಪ ಸಾಸಿರವಾಗಿ ಪ್ರತಿಯೊಂದು ದೀಪವೂ ಕೃಷ್ಣನಾದಂತೆ! ಏಳ್ನೂರು ಜನರೇನೋ ತನ್ನ ಅಳಿದುಳಿದ ಅಗಾಧ ಸೇನೆಗೆ ಬಲಿಯಾಗಿ ಪ್ರಾಣ ಕಳೆದುಕೊಂಡರು! ಆದರೆ ಆ ಸುಂದರಿಯನ್ನು ಪಡೆಯದೇ ತನ್ನ ಪ್ರಾಣವೇ ಹೋಯಿತಲ್ಲ! ಒಂದು ಸುಂದರಿ ನೂರಾಗಿ, ಏಳು ನೂರಾಗಿ ನನ್ನ ಆಸೆಯನ್ನೇ ಹೀರಿಬಿಟ್ಟರಲ್ಲಾ ” ಯಾ ಅಲ್ಲಾಹ್” ಎಂದು ಚೀರಿದ ಸುಲ್ತಾನ್!

ಯಾವ ಸಿನಿಮೀಯ ದೃಶ್ಯಕ್ಕಿಂತ ಕಡಿಮೆಯಿದೆ ಇದು? ಆದರೆ ಅದು ಬರಿಯ ಕಥೆಯಲ್ಲಾ; ಇತಿಹಾಸ, ಅದನ್ನು ತಿರುಚಬೇಡ ಎಂದು ರಜಪೂತ ಕರಣಿ ಸೇನಾ ಕೊಟ್ಟ ಪ್ರಹಾರವನ್ನು ಬನ್ಸಾಲಿ ನೆನಪಲ್ಲಿಟ್ಟುಕೊಂಡಿರುವ ಸಾಧ್ಯತೆಯಿದೆಯೇ? ಬನ್ಸಾಲಿ ಜಗತ್ತಿಗೆ ತನ್ನ ಸೆಕ್ಯುಲರ್ ರೀಲ್ ತೋರಿಸುವುದಕ್ಕೆ ಮುಂಚೆ, ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸಿದ ಆ ಧರ್ಮಾತ್ಮೆಯ ರಿಯಲ್ ಇತಿಹಾಸದ, ಅಲಾವುದ್ದೀನನ ನಿಜ ಸ್ವರೂಪದ ಪರಿಚಯವಾಗಬೇಕಲ್ಲ? ಮಹಾರಾಣಿ ಪದ್ಮಿನಿ! ಚಿತ್ತೂರಿನಿಂದ 64. ಕಿ.ಮೀ. ದೂರದಲ್ಲಿರುವ ಸಿಂಗೋಲ್ ಎನ್ನುವ ಸಣ್ಣ ಸಂಸ್ಥಾನವೊಂದರ ಸರದಾರನ ಮಗಳು.

ರಾಣಾ ರತನ್ ಸಿಂಹನ ಧರ್ಮಪತ್ನಿ; ಅಪ್ರತಿಮ ಸುಂದರಿ. ತನ್ನ ಜೀವಕ್ಕಿಂತಲೂ ಪತಿಯ ಬಗೆಗೆ, ತನ್ನ ರಾಜ್ಯದ ಬಗೆಗೆ, ತನ್ನ ಪ್ರಜೆಗಳ ಬಗೆಗೆ, ತನ್ನ ನಾಡಿನ ಸ್ವಾತಂತ್ರ್ಯದ ಬಗೆಗೆ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿದವಳು. ಆದರ್ಶ ನಾರಿಯರು ಹೇಗಿರಬೇಕು ಎನ್ನುವುದಕ್ಕೆ ಪಥದರ್ಶಕಳಾದವಳು. ಆದರ್ಶ ನಾರಿಯ ಮೌಲ್ಯಗಳಿಗೇ ಧಕ್ಕೆ ಉಂಟಾಗುವ ಸನ್ನಿವೇಶ ಬಂದಾಗ ಧೈರ್ಯ-ಸ್ಥೈರ್ಯಗಳಿಂದ ಎದುರಿಸಿ, ಕೊನೆಗೆ ಬೇರೆ ದಾರಿಯೇ ಇಲ್ಲದಿದ್ದಾಗ ಆತ್ಮಸಮರ್ಪಣೆ ಮಾಡಿಕೊಂಡ ಧೀರ ವನಿತೆ ಆಕೆ. ಅವಳ ಜೀವನದಿಂದ ಸ್ಫೂರ್ತಿಗೊಂಡ ಕವಿಗಳು ಅನೇಕ. ರಾಜಸ್ಥಾನದ ಉದ್ದಕ್ಕೂ ಅವಳ ಬಗೆಗಿನ ಜಾನಪದ ಕಥೆಗಳು, ಹಾಡುಗಳು ಹರಡಿವೆ. ಜಟ್ಮಲ್ನ ಗೋರಾ-ಬಾದಲ್, ಮಲ್ಲಿಕ್ ಮೊಹಮ್ಮದ್ ಜಾಯಸೀಯ ಪದ್ಮಾವತ್, ಐನೆ ಅಕ್ಬರಿ, ಫರಿಸ್ತಾನ ಕೃತಿಗಳಲ್ಲಿ ಪದ್ಮಿನಿಯ ಕಥಾನಕವು ಕಾಣಿಸಿಕೊಂಡಿದೆ.

ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಬಲಿಷ್ಠನಾಗಿದ್ದ ಅಲಾವುದ್ದೀನ್ ಖಿಲ್ಜಿ ದೊಡ್ಡಪ್ಪ ಸುಲ್ತಾನ ಜಲಾಲುದ್ದೀನ್ ಖಿಲ್ಜಿಯ ಕೈಕೆಳಗೆ ಸುಬೇದಾರನಾಗಿದ್ದ. ಖಾರ ಮತ್ತು ಮಾಳವ ರಾಜ್ಯಗಳ ಪ್ರಾಂತ್ಯಾಧಿಕಾರಿಯಾಗಿದ್ದ, ಅತೀವ ಮಹತ್ವಾಕಾಂಕ್ಷಿಯಾಗಿದ್ದ ಈತ ಆಗ ಸಿರಿಸಂಪದಗಳಿಂದ ಮೆರೆಯುತ್ತಿದ್ದ ದೇವಗಿರಿಯ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯಲು ನಿಶ್ಚಯಿಸಿದ. ದೆಹಲಿಯಿಂದ ದೇವಗಿರಿಗೆ 700 ಮೈಲುಗಳು. ಸೈನಿಕರಿಗೆ ಆಹಾರ, ಕುದುರೆಗಳಿಗೆ ಮೇವು ಸಿಗದಿದ್ದರೆ ಇಡೀ ಸೈನ್ಯ ಹಸಿವಿನಿಂದ ನರಳಿ ನಾಶವಾಗುವ ಭಯ. ಪಥದಲ್ಲೆಷ್ಟೋ ಹಿಂದೂ ರಾಜ್ಯಗಳು. ಆದರೂ ದೊಡ್ಡಪ್ಪನಿಗೆ ಧೈರ್ಯ ತುಂಬಿ ಎಂಟು ಸಾವಿರ ಸೈನಿಕರೊಡನೆ ಹೊರಟ. ಮಾರ್ಗಮಧ್ಯದಲ್ಲಿ ಇಷ್ಟು ದೊಡ್ದ ಸೈನ್ಯವನ್ನು ಒಡಗೂಡಿ ಹೋಗುತ್ತಿರುವ ಇವನನ್ನು ಯಾರೂ ತಡೆಯಲಿಲ್ಲ. ದೇವಗಿರಿಯೂ ಯುದ್ಧದ ಸಿದ್ಧತೆಯಲ್ಲಿರಲಿಲ್ಲ.

Image result for alauddin khilji

ದೇವಗಿರಿಯ ರಾಜ ರಾಮದೇವ ಆ ಸಮಯದಲ್ಲಿ ಬೇರೊಂದು ಊರಿನಲ್ಲಿ ದೇವರ ದರ್ಶನಕ್ಕೆ ತೆರಳಿದ್ದ. ನಮ್ಮವರ ಗೂಢಚಾರ ವ್ಯವಸ್ಥೆ ಎಷ್ಟು ದುರವಸ್ಥೆಯಲ್ಲಿತ್ತು ಎನ್ನುವುದಕ್ಕೆ ಉದಾಹರಣೆ ಇದು. ಸೈನ್ಯವೂ ಮಗ ಶಂಕರದೇವನ ನೇತೃತ್ವದಲ್ಲಿ ಬೇರೊಂದು ಕಡೆ ಯುದ್ಧಕ್ಕೆ ತೆರಳಿತ್ತು. ಸುದ್ದಿ ತಿಳಿದಾಕ್ಷಣ ಬಂದು ಹಳ್ಳಿಯ ಜನರನ್ನೇ ಒಟ್ಟು ಸೇರಿಸಿ ಖಿಲ್ಜಿಯನ್ನು ಎದುರಿಸಿದನಾದರೂ ಗೆಲ್ಲಲಾಗಲಿಲ್ಲ. ಆ ಸಮಯಕ್ಕೆ ಕೋಟೆಗೆ ಮುತ್ತಿಗೆ ಹಾಕಿದ ಖಿಲ್ಜಿ “ನಾನು ಚಿಕ್ಕ ಸೈನ್ಯದೊಂದಿಗೆ ಬಂದಿದ್ದೇನೆ, ಹಿಂದೆ ಸುಲ್ತಾನರ ದೊಡ್ಡ ಸೈನ್ಯ ಸಾಗರದಂತೆ ಬರುತ್ತಿದೆ” ಎಂದು ಬೆದರಿಸಿದ.

ಭೀಮದೇವನ ಸಂಬಂಧಿಕರು, ಪುರಪ್ರಮುಖರು ಹಾಗೂ ಬ್ರಾಹ್ಮಣರನ್ನು ಬಂಧಿಸಿ ಸಂಕೋಲೆಗಳಿಂದ ಬಿಗಿದು ಕೋಟೆಯ ಎದುರು ಮೆರವಣಿಗೆ ನಡೆಸಿ ರಾಜನ ಮೇಲೆ ಒತ್ತಡ ಹೇರಿದ ಆ ಧೂರ್ತ. ರಾಜ ಬೇರೆ ದಾರಿ ಕಾಣದೆ ಕಪ್ಪ ಕೊಟ್ಟು ಸಂಧಿ ಮಾಡಿಕೊಳ್ಳಬೇಕಾಯಿತು. ಹೊರರಾಜ್ಯಕ್ಕೆ ಯುದ್ಧಕ್ಕೆ ಹೋದ ದೇವಗಿರಿಯ ಸೈನ್ಯ ಬಂದರೆ ತನ್ನ ಕಥೆ ಮುಗಿದಂತೆಯೇ ಎಂಬ ಭಯದಿಂದ ಖಿಲ್ಜಿ ಸಂಧಿಗೆ ಮರುಮಾತಿಲ್ಲದೆ ಒಪ್ಪಿದ.

ರಾಜ ಹಣ ಕೊಟ್ಟು ತನ್ನವರಲ್ಲಿ ಅನೇಕರನ್ನು ಸೆರೆಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಯುವರಾಜ ಶಂಕರದೇವನ ಸೈನ್ಯ ಬಂದು ಖಿಲ್ಜಿಯ ಸೈನ್ಯವನ್ನು ಸದೆಬಡಿಯಲಾರಂಭಿಸಿತು. ಇನ್ನೇನು ಖಿಲ್ಜಿಯ ಕಥೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಯುವರಾಜನಿಗೆ ಸಹಾಯಕ್ಕೆಂದು ಕೋಟೆಯೊಳಗಿನಿಂದ ಸೈನಿಕರು ಉತ್ಸಾಹದಿಂದ ಹೊರಬರಲಾರಂಭಿಸಿದರು.

ಆಗ ಎದ್ದ ಧೂಳನ್ನು ಕಂಡು ಇದು ದೆಹಲಿಯ ಮಹಾಸೈನ್ಯ ಎಂದು ಬೆದರಿದ ಶಂಕರದೇವನ ಸೈನಿಕರು ಓಡಿ ಹೋದರು. ಗೊಂಡ್ವಾನ ಹಾಗೂ ಖಾನ್ ದೇಶಗಳ ಮೂಲಕ ಹಿಂದಿರುಗುವಾಗ ಖಿಲ್ಜಿ ತಾನು ಸೆರೆಯಲ್ಲಿರಿಸಿಕೊಂಡು ಬಂದಿದ್ದ ಕೃಷಿಕರನ್ನು ಹಾಗೂ ಇತರ ಪ್ರಮುಖ ಜನರನ್ನು ಅಪಾರ ಪ್ರಮಾಣದ ಹಣಕ್ಕೆ ಮಾರಿದ. ಚಿನ್ನ, ಬೆಳ್ಳಿ, ರತ್ನ ಮೊದಲಾದ ಅಪಾರ ಸಂಪತ್ತಿನೊಡನೆ ಹಿಂದಿರುಗಿದ ವಿಜಯಿ ಅಲಾವುದ್ದೀನನನ್ನು ಸುಲ್ತಾನ್ ಜಲಾಲುದ್ದೀನನು ಗಂಗಾತೀರದಲ್ಲಿ ಸ್ವಾಗತಿಸುವಂತೆ ನಿಷ್ಕರ್ಷೆಯಾಯಿತು. ಗುಪ್ತವಾಗಿ ಮೊದಲೇ ನಿರ್ಧರಿಸಿದ್ದಂತೆ ಸಂದರ್ಶನದ ವೇಳೆಯಲ್ಲಿ ಅಲಾವುದ್ದೀನ್ ಕುತಂತ್ರದಿಂದ ದೊಡ್ಡಪ್ಪನನ್ನು ಕೊಲೆಮಾಡಿ, ತನ್ನ ವಿರೋಧಿಗಳನ್ನೂ ಕೊಲೆಗೈದು ದಕ್ಷಿಣದಿಂದ ದೋಚಿ ತಂದಿದ್ದ ಐಶ್ವರ್ಯವನ್ನು ತನಗೆ ಬೇಕಾದವರಿಗೆ ಹಂಚಿ, ದೆಹಲಿ ಸಿಂಹಾಸನದ ಮೇಲೆ ಅಭಿಷಿಕ್ತನಾದ.

ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ ಅಲಾವುದ್ದೀನ್. ದಕ್ಷಿಣದ ಹಿಂದು ರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ ಈತನ ಆಳ್ವಿಕೆ ಭಯೋತ್ಪಾದನೆಯ, ರಕ್ತಪಾತದ ಕಾಲವಾಗಿತ್ತು. ಕ್ರೌರ್ಯ, ಮೋಸಗಳಿಂದ ಗುಜರಾತ್, ರಣತಂಬೂರ್ ಮತ್ತು ಮೇವಾರ್ ರಾಜ್ಯಗಳನ್ನು ವಶಪಡಿಸಿಕೊಂಡ ಖಿಲ್ಜಿಯ ಮತಾಂಧತೆಗೆ ನಹರ್ವಾಲ್, ಅಸಾವಾಲ್, ವನ್ಮನ್ತಾಲಿ, ಸೂರತ್, ಕ್ಯಾಂಬೇ ಹಾಗೂ ಸೋಮನಾಥಗಳಲ್ಲಿ ಹಲವು ದೇವಾಲಯಗಳು ಬಲಿಯಾದವು.

ಚಿತ್ತೋಡಿನಲ್ಲಿ ಮೂವತ್ತು ಸಾವಿರ ಕಾಫಿರರು ಖಿಲ್ಜಿಯೆಂಬ ಇಸ್ಲಾಮೀ ಖಡ್ಗಕ್ಕೆ ಬಲಿಯಾದರು. ಅಪಾರ ಪ್ರಮಾಣದ ಸಂಪತ್ತು, ಸ್ತ್ರೀಪುರುಷರು ಅವನ ವಶವಾದರು. ಮಾಳವ, ಸೇವಣ, ಜಾಲೋರಗಳ ಮೇಲಿನ ದಾಳಿಯಲ್ಲೂ ಹಲವರು ಸೆರೆಸಿಕ್ಕು ಖಿಲ್ಜಿಯ ಗುಲಾಮರಾಗಬೇಕಾಯಿತು. ರಾಜ ರಾಮಚಂದ್ರ ಕ್ರಮವಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿರಲಿಲ್ಲವೆಂಬ ನೆಪದ ಮೇಲೆ ತನ್ನ ಮೊದಲ ದಾಳಿಯಲ್ಲಿ ದೇವಗಿರಿಯನ್ನು ಮುತ್ತಿ ಕೊಳ್ಳೆ ಹೊಡೆದ. ಎರಡನೆಯ ದಂಡಯಾತ್ರೆಯಲ್ಲಿ ವಾರಂಗಲ್ಲಿನ ಪ್ರತಾಪರುದ್ರನನ್ನು ಸೋಲಿಸಿದ.

1313ರಲ್ಲಿ ಹೊಯ್ಸಳ 3ನೆಯ ವೀರಬಲ್ಲಾಳನನ್ನು ಸೋಲಿಸಿ ದೋರಸಮುದ್ರವನ್ನು ಕೊಳ್ಳೆ ಹೊಡೆದ. ಮಧುರೈ ಹಾಗೂ ರಾಮೇಶ್ವರದವರೆಗೂ ದಂಡೆತ್ತಿ ಹೋಗಿ ಪಾಂಡ್ಯರನ್ನು ಸೋಲಿಸಿ ವಿಶೇಷವಾದ ಐಶ್ವರ್ಯವನ್ನು ದೋಚಿದ. ಈ ದಂಡಯಾತ್ರೆಗಳಿಂದ ಲಕ್ಷಾಂತರ ಮಂದಿ ಮಡಿದರು, ಅನೇಕ ಪಟ್ಟಣಗಳು ಹಾಗೂ ದೇವಾಲಯಗಳು ಸರ್ವನಾಶವಾದವು. ಹಲವಾರು ಮಸೀದಿಗಳು ಮೇಲೆದ್ದವು. ಅಪಾರ ಸಂಪತ್ತು ಸೂರೆಯಾಯಿತು. ಮತಾಂಧ ಅಲ್ಲಾವುದ್ದೀನನು ಎರಡನೆ ಸಿಕಂದರನಾಗುವೆನೆಂಬ ಕನಸು ಕಾಣುತ್ತಿದ್ದ. ಹಿಂದುತ್ವವನ್ನೇ ಸಂಪೂರ್ಣವಾಗಿ ನಾಶಗೊಳಿಸಬೇಕೆಂದು ಪಣ ತೊಟ್ಟಿದ್ದನಾತ. ಆಕ್ರಮಿತ ರಾಜ್ಯಗಳ ರಾಣಿ, ಮಹಾರಾಣಿಯರನ್ನು ತನಗೆ, ತನ್ನ ಸರದಾರಿಗೆ ಹಂಚಿ, ಹಿಂದೂಗಳ ಪಾವಿತ್ರ್ಯವನ್ನು ಭಗ್ನಗೊಳಿಸುವುದು, ಇಸ್ಲಾಮೀ ಮತವನ್ನು ಇಲ್ಲಿನವರ ಮೇಲೆ ಹೇರುವುದು ಅವನ ಗುರಿಯಾಗಿತ್ತು.

ಗುಜರಾತಿನ ಮೇಲೆ ದಂಡೆತ್ತಿ ಹೋದಾಗ ಸೆರೆಸಿಕ್ಕ ಗುಲಾಮರಲ್ಲಿ ಸ್ವುರದ್ರೂಪಿ ಯುವಕನಾಗಿದ್ದ ಮಲ್ಲಿಕಾಫರ್ ಕೂಡ ಒಬ್ಬ. ಸಲಿಂಗಕಾಮಿಯಾಗಿದ್ದ ಖಿಲ್ಜಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಗೊಳಿಸಿ ಆತನಿಗೆ ಮಲ್ಲಿಕಾಫರ್ ಎಂದು ಹೆಸರಿಟ್ಟು, ತನ್ನೊಡನೆ ಇರಿಸಿಕೊಂಡಿದ್ದ. ಸುಂದರ ಯುವಕರನ್ನು ನಪುಂಸಕರನ್ನಾಗಿಸಿ ತನ್ನ ಜನಾನಕ್ಕೆ ಸೇರಿಸಿಕೊಳ್ಳುವುದು ಮೊಘಲ್ ಸುಲ್ತಾನರ ಚಟವಾಗಿತ್ತು.

ಅಲ್ಲಾವುದ್ದೀನನ ಜನಾನದಲ್ಲೇ ಇಂತಹ ಐವತ್ತು ಸಾವಿರ ಜನ ಇದ್ದರಂತೆ! ಸೋಮನಾಥದ ಮೇಲೆ ದಾಳಿ ಮಾಡಿದಾಗ ಖಿಲ್ಜಿ ವಶಪಡಿಸಿಕೊಂಡ ಸ್ತ್ರೀಯರ ಹಾಗೂ ಎಳೆಯ ಹುಡುಗ-ಹುಡುಗಿಯರ ಸಂಖ್ಯೆ ಇಪ್ಪತ್ತು ಸಾವಿರ! ಇವರೆಲ್ಲರೂ ಖಿಲ್ಜಿಯ ಜನಾನಾ ಸೇರಿದರು ಎಂದು ಬೇರೆ ಹೇಳಬೇಕಾಗಿಲ್ಲ! ಮಂಗೋಲಿಯನ್ನರ ಜೊತೆಗಿನ ಯುದ್ಧದಲ್ಲಿ 1700 ಅಧಿಕಾರಿಗಳು, ಪುರುಷ ಹಾಗೂ ಸ್ತ್ರೀಯರನ್ನು ಗುಲಾಮರನ್ನಾಗಿಸಿ ದೆಹಲಿಗೆ ರವಾನಿಸಿದ. ಮುಸ್ಲಿಮರಾಗಿದ್ದೂ ನಾಸ್ತಿಕರಾದ ಕಾರಣ ಮಂಗೋಲಿಯನ್ನರನ್ನು ನಿಯೋಮುಸ್ಲಿಮರೆನ್ನಲಾಗುತ್ತಿತ್ತು.

1305ರಲ್ಲಿ ಜೈಲಲ್ಲಿದ್ದ 8000 ಮಂಗೋಲಿಯನ್ನರ ತಲೆ ಕಡಿದು ಅವರ ರುಂಡಗಳನ್ನು ನಿರ್ಮಾಣ ಹಂತದಲ್ಲಿದ್ದ ಸಿರಿ ಕೋಟೆಯ ಮೇಲೆ ನೇತು ಹಾಕಿದ! ಅನೇಕ ಮಂಗೋಲಿಯನ್ ಸ್ತ್ರೀ, ಪುರುಷ ಹಾಗೂ ಮಕ್ಕಳನ್ನು ದೆಹಲಿ ಹಾಗೂ ಭಾರತದ ಹಲವೆಡೆ ಮಾರಲಾಯಿತು! ಹೀಗೆ ಗುಲಾಮರ ಸಂಗ್ರಹ ಅವನ ದಿನನಿತ್ಯದ ಕಾಯಕವಾಗಿತ್ತು. ಹೊಸ ಮಂದೆ ಬಂದಂತೆ ಹಳೆಯವರನ್ನು ಗುಲಾಮ ಸಂತೆಯಲ್ಲಿ ಮಾರಲಾಗುತ್ತಿತ್ತು.

ಸೂಫಿ ಅಮೀರ್ ಖುಸ್ರು ಬರೆಯುತ್ತಾನೆ “ತುರ್ಕರು ಯಾವಾಗ ಬೇಕಾದರೂ ಹಿಂದೂಗಳನ್ನು ವಶಪಡಿಸಿಕೊಳ್ಳಬಹುದು, ಖರೀದಿಸಬಹುದು ಹಾಗೂ ಮಾರಬಹುದು. ಹಾಗಾಗಿ ಖಿಲ್ಜಿಯ ಈ ಕಾರ್ಯದಲ್ಲೇನೂ ತಪ್ಪಿಲ್ಲ!” ಎಂದು! ಎಪ್ಪತ್ತು ಸಾವಿರ ಗುಲಾಮರು ಖಿಲ್ಜಿಯ ಬಳಿ ಇದ್ದರೆಂದು ಅವನು ತನ್ನ “ನಹ್ ಸಿಪೇರ್ಹ್”ನಲ್ಲಿ ಬರೆಯುತ್ತಾನೆ. ಖಿಲ್ಜಿ ತನ್ನ ಗುಲಾಮ ಸಂತೆಯಲ್ಲಿ ದರವನ್ನೂ ನಿಗದಿಪಡಿಸಿದ್ದ. ಕೆಲಸದ ಹುಡುಗಿಯರಿಗೆ 5ರಿಂದ 12 ತನ್ಖಾಗಳು, ಸುಂದರ ಸ್ತ್ರೀಯರಿಗೆ 20-40 ತನ್ಖಾಗಳು, ಸುಂದರ ಹುಡುಗರಿಗೆ 20-30 ತನ್ಖಾಗಳು, ಸಣ್ಣ ಮಕ್ಕಳಿಗೆ 80-100 ತನ್ಖಾಗಳು, ಗಂಡಸರ ದರ 100-200 ತನ್ಖಾಗಳಾಗಿತ್ತು.

ಖಿಲ್ಜಿಯ ಆಡಳಿತ ವ್ಯವಸ್ಥೆಯಂತೂ ಹಿಂದೂಗಳನ್ನು ಗೋಳು ಹೊಯ್ದುಕೊಂಡಿತ್ತು. ಆತ ಭೂಮಿಯ ಆದಾಯವನ್ನು ಉತ್ಪಾದನೆಯ ಅರ್ಧಕ್ಕೇರಿಸಿ ಅದಕ್ಕೆ ತಕ್ಕಂತೆ ತೆರಿಗೆ ವಿಧಿಸಿದ. ಜಾನುವಾರುಗಳು ಹಾಗೂ ಮನೆಯ ತೆರಿಗೆಯ ಮೇಲೆ ತೆರಿಗೆ ವಿಧಿಸಿದ. ರೈತರು ತಾವು ಬೆಳೆದುದನ್ನು ಕಡ್ಡಾಯವಾಗಿ ನಿಗದಿ ಪಡಿಸಿದ ಬೆಲೆಗೆ ವ್ಯಾಪಾರಿಗಳಿಗೆ ಮಾರಬೇಕಾಗಿತ್ತು. ಈ ವ್ಯಾಪಾರಿಗಳು ತಿರುಗಿ ಅದನ್ನು ಸುಲ್ತಾನನ ಖಜಾನೆಗೆ ಮಾರಬೇಕಾಗಿತ್ತು.

ಇದರಲ್ಲಿ ಅವರಾರಿಗೂ ಕನಿಷ್ಟ ಲಾಭವೂ ಉಳಿಯುತ್ತಿರಲಿಲ್ಲ. ವ್ಯಾಪಾರಿಗಳು ಸುಲ್ತಾನನಿಗೆ ನಿಯಮಿತ ಸರಬರಾಜು ಮಾಡುತ್ತಿದ್ದಾರೆ ಎಂದು ಖಚಿತಪಡಿಸಲು ತಮ್ಮ ಹೆಂಡತಿ ಮಕ್ಕಳನ್ನು ರಾಜಧಾನಿಯಲ್ಲಿ ಒತ್ತೆಯಾಳುಗಳನ್ನಾಗಿ ಇಡಬೇಕಾಗಿತ್ತು. ಹೀಗೆ ಬಡವರಾದ ಹಿಂದೂಗಳು ಹೊಟ್ಟೆಪಾಡಿಗಾಗಿ ತಮ್ಮ ಮನೆಯ ಹೆಂಗಳೆಯರನ್ನು ಮುಸ್ಲಿಮರ ಮನೆಗೆಲಸಕ್ಕೆ ಕಳುಹಿಸಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಯಿತು.

ಅಲ್ಲಾವುದ್ದೀನನ ಮರಣದ ಹದಿನೆಂಟು ವರ್ಷಗಳ ಬಳಿಕ ದೆಹಲಿಗೆ ಭೇಟಿ ನೀಡಿದ್ದ ಇಬ್ನ್ ಬತ್ತುತಾಹ್ ತಾನುಂಡದ್ದು ಅರಮನೆಯ ಉಗ್ರಾಣದಲ್ಲಿದ್ದ ಅಲಾವುದ್ದೀನನ ಕಾಲದ ಅಕ್ಕಿ ಎಂದು ಬರೆದಿದ್ದಾನೆ. ಅಷ್ಟರ ಮಟ್ಟಿಗೆ ಖಜಾನೆ ತುಂಬಿ ಕೊಳೆಯುತ್ತಿತ್ತು. ಹಿಂದೂಗಳು ಸುಲಿಗೆಗೊಳಗಾಗಿ ಸಾಯುತ್ತಿದ್ದರು!

ಇಂತಹ ಕ್ರೂರಿ ಕಾಮಾಂಧನ ಕಿವಿಗೆ ಪದ್ಮಿನಿಯ ಸುದ್ದಿ ಬಿತ್ತು. ಮಹಾರಾಣಿ ಪದ್ಮಿನಿಯ ಸೌಂದರ್ಯದ ಗುಣಗಾನವನ್ನು ಕೇಳಿದ ಅಲಾವುದ್ದೀನ್ ಖಿಲ್ಜಿ ಹೇಗಾದರೂ ಮಾಡಿ ಆಕೆಯನ್ನು ತನ್ನವಳನ್ನಾಗಿಸಬೇಕೆಂಬ ದುರಾಸೆಯಲ್ಲಿ ಚಿತ್ತೋಡನ್ನು ಮುತ್ತಿದ. ಯುದ್ಧವೆಂದರೇ ಕಳೆಗಟ್ಟುವ ಕುಲ ರಜಪೂತರದ್ದು. ಹುಟ್ಟಿದ್ದೇ ಯುದ್ಧಕ್ಕಾಗಿಯೇನೋ ಎನ್ನುವಂತೆ ಹೋರಾಡುವ ರಣಕಲಿಗಳು ಅವರು. ಗುರ್ಜರದ ರಾಣಿ ಕಮಲಾದೇವಿಯನ್ನು ಅಪಹರಿಸಿ ಅವಳ ಬಾಳನ್ನು ಸರ್ವನಾಶಗೈದಿದ್ದ ಖಿಲ್ಜಿಗೆ ರಜಪೂತ ವೀರರ ಶೌರ್ಯ ಸಾಹಸಗಳ ಪರಿಚಯವಾಗಿರಲಿಲ್ಲವೇನೋ.

ಚಿತ್ತೋಡಿನ ಕಲಿಗಳು ಬೆಂಕಿಯ ಚೆಂಡುಗಳಂತೆ ಉರಿದೆದ್ದರು. ಖಿಲ್ಜಿಯ ಸೈನ್ಯ ಸುಟ್ಟುರಿದು ಹೋಯಿತು. ಯಾವಾಗ ಸೋಲು ಖಚಿತವಾಯಿತೋ ಆಗ ಮೋಸದ ಹಾದಿಗಿಳಿದ ಖಿಲ್ಜಿ. “ಪದ್ಮಿನಿ ದೇವಿ ನನಗೆ ಸೋದರಿ ಸಮಾನ; ಒಂದು ಸಲ ಆಕೆಯ ಮುಖ ತೋರಿಸಿ ಸಾಕು, ಸಂತೋಷದಿಂದ ಹಿಂದಿರುಗುತ್ತೇನೆ” ಎಂದು ಮಹಾರಾಜ ರಾವಲ್ ರತನ್ ಸಿಂಹನಲ್ಲಿ ಗೋಗರೆದ. “ನಮ್ಮ ರಾಣಿಯ ಮುಖ ನಿನಗೇಕೆ ತೋರಿಸಬೇಕು?” ಎಂದು ಕ್ಯಾಕರಿಸಿ ಉಗಿದಿದ್ದರೆ ಕೇಳುವವರ್ಯಾರೂ ಇರಲಿಲ್ಲ. ಆದರೆ ಔದಾರ್ಯಕ್ಕೆ ಹೆಸರಾದ ರಜಪೂತರು “ನಿನಗೆ ನೇರವಾಗಿ ಮುಖ ತೋರಿಸಲು ಸಾಧ್ಯವಿಲ್ಲ.

ಬೇಕಾದರೆ ಕನ್ನಡಿಯಲ್ಲಿ ನೋಡಿಕೋ” ಎಂದು ದಯಾಳುತನ ತೋರಿದರು. ಸಪರಿವಾರ ಸಮೇತ ರಾಣಿಯ ಪ್ರತಿಬಿಂಬ ನೋಡಲು ಚಿತ್ತೈಸಿದ ಖಿಲ್ಜಿ. ಗ್ರಹಸ್ಥ ಧರ್ಮದಂತೆ ಅವನನ್ನು ಬೀಳ್ಕೊಡುವ ಸಲುವಾಗಿ ಅವನ ಡೇರೆಯವರೆಗೆ ನಡೆದ ಮಹಾರಾಜ. ಈ ಧರ್ಮ ಕರ್ಮಗಳು ಕಾಫಿರರಿಗೆ ಮಾತ್ರ. ಧರ್ಮದ ಪರಿಕಲ್ಪನೆಯೇ ಇಲ್ಲದ ವಿಗ್ರಹ ಭಂಜಕರಿಗೆ ಇವೆಲ್ಲಾ ಅರ್ಥವಾಗುವುದಾದರೂ ಹೇಗೆ? ರಾಜ ತಮ್ಮ ಜೊತೆ ಬಂದ ಸಮಯ ಸಾಧಿಸಿ ಅವನನ್ನು ಬಂಧಿಸಿ ಸೆರೆಯಲ್ಲಿಟ್ಟ ಖಿಲ್ಜಿ. ಪದ್ಮಿನಿಯನ್ನು ನನಗೆ ಒಪ್ಪಿಸಿದರೆ ಮಾತ್ರ ರಾಜನನ್ನು ಸೆರೆಯಿಂದ ಬಿಟ್ಟು ಬಿಡುವುದಾಗಿ ಷರತ್ತು ವಿಧಿಸಿದ. ಅಮಾಯಕನಂತೆ ಶತ್ರುವಿನ ಕೈಯಲ್ಲಿ ಬಿದ್ದ ತಮ್ಮ ಅರಸನನ್ನು ಬಿಡಿಸಿಕೊಳ್ಳಲು ರಾಣಿಯೊಡನೆ ರಜಪೂತ ಯೋಧರು ಕೈಗೊಂಡ ಉಪಾಯದ ಪ್ರಕಾರ ನಡೆದದ್ದೇ ಮೇಲೆ ವರ್ಣಿಸಿದ ಘಟನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಪದ್ಮಿನಿಯೂ ಒಂದು ಕೂಟನೀತಿಯನ್ನು ಯೋಜಿಸಿದಳು.

ತಾನು ಬರುತ್ತಿರುವುದಾಗಿಯೂ, ತನ್ನೊಂದಿಗೆ ಮಹಾರಾಣಿಗೆ ಯೋಗ್ಯವಾಗಿರುವಂತೆ ಏಳುನೂರು ಸಖಿಯರು, ಇನ್ನೂ ಕೆಲವು ರಜಪೂತ ಕನ್ಯೆಯರು ಬರುತ್ತಾರೆ, ಅವರಲ್ಲಿ ಕೆಲವರು ತನ್ನೊಂದಿಗೆ ದೆಹಲಿಗೆ ಬರುತ್ತಾರೆ, ಉಳಿದವರು ಹಿಂತಿರುಗುತ್ತಾರೆಂದೂ, ದೆಹಲಿಗೆ ಹೊರಡುವುದಕ್ಕೆ ಮುಂಚೆ ಸೈನಿಕ ಪಹರೆ ಇಲ್ಲದೆ ತನ್ನ ಪತಿಯನ್ನು ಸಂಧಿಸಬೇಕಾಗಿದೆ. ಇದಕ್ಕೆ ಒಪ್ಪಿದಲ್ಲಿ ಮಾತ್ರ ತಾನು ಬರುವುದಾಗಿಯೂ ಬರೆದು ತಿಳಿಸಿದಳು. ಹೆಚ್ಚು ಯೋಚನೆ ಮಾಡದೆ ಖಿಲ್ಜಿ ಒಪ್ಪಿಕೊಂಡ. ಅಂತೆಯೇ ವೀರರಾದ ಗೋರಾ ಮತ್ತು ಸುಂದರ ಮೈಕಟ್ಟಿನ ಬಾದಲ್ ಎನ್ನುವ ಈರ್ವರು ಸಾಹಸಿಗಳ ಸಹಾಯದಿಂದ 700 ಪಲ್ಲಕ್ಕಿಗಳಲ್ಲಿ ಸಖಿಯರಾಗಿ ವೇಷ ಬದಲಾಯಿಸಿಕೊಂಡ ಸಶಸ್ತ್ರ ಸೈನಿಕರು ಪದ್ಮಿನಿ ಸಮೇತ ಅಲ್ಲಾವುದ್ದೀನನ ಬಿಡಾರವನ್ನು ತಲುಪಿದರು. ಕೂಡಲೆ ರತ್ನಸಿಂಹನ ಬಿಡುಗಡೆ ಮಾಡಿ ಪದ್ಮಿನಿಯು ಚಿತ್ತೂರಿಗೆ ಹಿಂತಿರುಗಿದಳು.

ಸ್ತ್ರೀ ರೂಪದಲ್ಲಿದ್ದ ಸೈನಿಕರು ಸುಲ್ತಾನನ ಸೈನ್ಯದ ಮೇಲೆ ಬಿದ್ದರು. ಅಲ್ಲಾವುದ್ದೀನನಿಗೆ ಜ್ಞಾನೋದಯವಾಗುವ ವೇಳೆ ಹಕ್ಕಿ ಹಾರಿಹೋಗಿತ್ತು. ಆದರೆ ಈ ಸಾಹಸ ಕಾರ್ಯದಲ್ಲಿ ಗೋರಾ, ಬಾದಲ್ ಎಂಬ ಇಬ್ಬರು ಅದ್ವಿತೀಯ ಯೋಧರನ್ನು ಕಳೆದುಕೊಳ್ಳಬೇಕಾಯಿತು ರಜಪೂತ ಸೇನೆ.

ಈ ಘಟನೆಯಿಂದ ದಿಘ್ಭ್ರಮೆಗೊಂಡು ಬಳಿಕ ಚೇತರಿಸಿಕೊಂಡು ತನ್ನ ಪುರಕ್ಕೆ ನಡೆದ ಖಿಲ್ಜಿ. ಅವನು ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಮರು ವರ್ಷವೇ ಸರ್ವ ಸನ್ನದ್ಧನಾಗಿ ಬೃಹತ್ ಸೈನ್ಯದೊಂದಿಗೆ ಚಿತ್ತೋಡ್ ಮೇಲೆ ದಂಡೆತ್ತಿ ಬಂದ. ಆರು ತಿಂಗಳ ಕಾಲ ಕೋಟೆಗೆ ಮುತ್ತಿಗೆ ಹಾಕಿ ದಿಗ್ಬಂಧನ ಮಾಡಿದ. ಎಲ್ಲಾ ದಾಸ್ತಾನು ಮುಗಿಯುತ್ತಾ ಬಂದಾಗ ಆಹಾರವಿಲ್ಲದೆ ಸಾಯುವ ಬದಲು ಯುದ್ಧವೇ ಉತ್ತಮವೆಂದು ಭಾವಿಸಿ ಯುದ್ಧಕ್ಕಿಳಿದ ರಜಪೂತ ಪಡೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ವೀರ ಸ್ವರ್ಗ ಪಡೆಯಿತು.

ಮಹಾರಾಜ ರತನ್ ಸಿಂಗ್ ತನ್ನ ಮೂವತ್ತು ಸಾವಿರ ಸೈನಿಕರೊಂದಿಗೆ ಅಸುನೀಗಿದ. ಸೈತಾನನ ತೆವಲಿಗೆ ತನ್ನ ಪಾವಿತ್ರ್ಯತೆಯನ್ನು ಕೆಡಿಸಿಕೊಳ್ಳುವುದಕ್ಕಿಂತ ಅಗ್ನಿದೇವನ ಪವಿತ್ರ ಮಡಿಲೇ ಸೂಕ್ತವೆಂದು ಪದ್ಮಿನಿ ನಿರ್ಧರಿಸಿಯಾಗಿತ್ತು. ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ಜೀವಹರ ವಿಧಾನವೇ ಎಷ್ಟು ಭಯಂಕರ! ಸೇನೆ ಸೋಲನ್ನಪ್ಪುತ್ತಿರುವ ಸುದ್ದಿ ಕೇಳಿದೊಡನೆ ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ರಾಣಿ ಪದ್ಮಿನಿ ಸಹಿತವಾಗಿ ರಜಪೂತ ಸ್ತ್ರೀಯರೆಲ್ಲಾ ಅಗ್ನಿ ಪ್ರವೇಶ ಮಾಡಿದರು.

ತಮ್ಮ ಕುಲಗೌರವ, ಮಣ್ಣಿನ ಗೌರವವನ್ನು ಕಾಪಾಡಲು ಅಗ್ನಿಪ್ರವೇಶ ಮಾಡಿದ ಅವರ ಆತ್ಮಬಲದ ಮುಂದೆ ಅಲಾವುದ್ದೀನನ ಗೆಲುವು ತೃಣಸಮಾನವಾಯಿತು. ತುಂಬು ಆಸೆಯಿಂದ ಕೋಟೆ ಹೊಕ್ಕ ಖಿಲ್ಜಿಗೆ ಕಂಡಿದ್ದು ಸ್ಮಶಾನ ಸದೃಶ ನಗರ. ಕಾಮಾಂಧ ಖಿಲ್ಜಿಗೆ ಸಿಕ್ಕಿದ್ದು ಒಂದು ಹಿಡಿ ಬೂದಿ! ನಿಜಹೇಳಬೇಕೆಂದರೆ ಸತ್ತದ್ದು ಅಲಾವುದ್ದೀನನೇ. ಪರಸ್ತ್ರೀಯನ್ನು ಬಯಸಿದವ ಇದ್ದೂ ಸತ್ತಂತಲ್ಲವೇ? ಪದ್ಮಿನಿ ತನ್ನ ಪಾತಿವ್ರತ್ಯವನ್ನು ಅಸೀಮ ಆತ್ಮಬಲದಿಂದ ರಕ್ಷಿಸಿಕೊಂಡು ಅಜರಾಮರಳಾದಳು.

ಶೀಲ ರಕ್ಷಣೆಗಾಗಿ ಅಗ್ನಿಗೆ ಹಾರಿದ ಪವಿತ್ರ ಪದ್ಮಿನಿಯನ್ನು ಅಲಾವುದ್ದೀನ ಜೊತೆ “ಕಿಸ್ಸಿಂಗ್ ಸೀನ್”ನಲ್ಲಿ ತನಗಿಷ್ಟ ಬಂದಂತೆ ಅಪವಿತ್ರೆಯನ್ನಾಗಿ ತೋರಿಸಹೊರಟ ಬನ್ಸಾಲಿಯಾಗಲೀ, ಬಾಲಿವುಡ್ಡಿನ ಇತರ ನಿರ್ದೇಶಕರಾಗಲೀ ಇತಿಹಾಸವನ್ನು ತಿರುಚುತ್ತಿರುವುದು ಇದೇ ಮೊದಲೇನಲ್ಲ.

ಬಾಲಿವುಡ್ಡಿನ ಒಂದು ಸಿನಿಮಾವಾದರೂ ಈ ದೇಶದ ಮೇಲೆ ಮುಗಿಬಿದ್ದು ಮಾನ, ಪ್ರಾಣ, ಧನ ಹೀಗೆ ಸಕಲವನ್ನೂ ದೋಚಿದ ಮುಸ್ಲಿಂ ಪೈಶಾಚಿಕತೆಯ ದರ್ಶನ ಮಾಡಿಸಿದ್ದಾವೆಯೇ? ಮುಸ್ಲಿಂ ಬಾದಶಹಾರನ್ನು ವೀರರಂತೆ, ಆದರ್ಶ ಪ್ರೇಮಿಗಳಂತೆ, ಮಾನವೀಯತೆಯೇ ಮೈವೆತ್ತವರಂತೆ ತೋರಿಸಿದ ಚಿತ್ರಗಳೇ ಎಲ್ಲವೂ! ಮೊಘಲ್-ಇ-ಅಜಂ, ಅನಾರ್ಕಲಿ, ಜೋಧಾ ಅಕ್ಬರ್ ಮುಂತಾದ ಚಿತ್ರಗಳು ಒಂದೇ ದಿವಸದಲ್ಲಿ ಮೂವತ್ತು ಸಾವಿರ ಜನರನ್ನು ಕೊಚ್ಚಿ ಹಾಕಿದ, ತನ್ನ ಗುರು ಭೈರಾಂಖಾನನನ್ನೇ ಕೊಂದು ಅವನ ಹೆಂಡತಿಯನ್ನು ತನ್ನ ಜನಾನಾಕ್ಕೆ ಸೇರಿಸಿಕೊಂಡ, ನೌಕರರ ಸಣ್ಣ ತಪ್ಪಿಗೇ ಗೋಪುರದ ಕೆಳಕ್ಕೆ ತಳ್ಳಿ ಶಿಕ್ಷಿಸುತ್ತಿದ್ದ, ಮಾನಧನರಾದ ಎಂಟು ಸಾವಿರ ಸ್ತ್ರೀಯರು ಧಗಧಗಿಸುವ ಬೆಂಕಿಯಲ್ಲಿ ಉರಿಯುವುದನ್ನು ಕಂಡು ವಿಕಟ್ಟಹಾಸ ಮಾಡಿದ, ಮೀನಾ ಬಜಾರನ್ನು ಮಾಡಿ ಸಾಲು ಸಾಲು ಹಿಂದೂ ಸ್ತ್ರೀಯರ ಅತ್ಯಾಚಾರ ಮಾಡಿದ ಅಕ್ಬರನನ್ನು ಧೀರೋದಾತ್ತನಂತೆ ಬಿಂಬಿಸಿದವು! ತಾಜ್ ಮಹಲ್ ಚಿತ್ರ ತನ್ನ ಮಗಳನ್ನೇ ಕಾಮಿಸಿದ್ದ, ಮಕ್ಕಳನ್ನು ಹೆರುವ ಯಂತ್ರದಂತೆ ಪತ್ನಿ ಮುಮ್ತಾಜಳನ್ನು ಬಳಸಿಕೊಂಡ ಮದನಕಾಮರಾಜ ಷಹಜಹಾನನನ್ನು ಅಮರ ಪ್ರೇಮಿಯಂತೆ ವೈಭವೀಕರಿಸಿತು. ಎಷ್ಟು ರೀಲು ಸುತ್ತುತ್ತೀರೋ ಅಷ್ಟು ಕೋಟಿ ರೂಪಾಯಿಗಳನ್ನು ನಿಮಗೆ ಬಿಸಾಕುತ್ತೇವೆ ಎನ್ನುವ ದಾವೂದ್ ಹಿಡಿತದ ಭೂಗತ ಸಾಮ್ರಾಜ್ಯವಿರುವಾಗ ಇತಿಹಾಸವನ್ನೇಕೆ ವರ್ತಮಾನವನ್ನೂ ಇವರು ತಿರುಚಬಲ್ಲರು.

ಸುದ್ದಿವಾಹಿನಿಗಳು ಮಾತ್ರವಲ್ಲ ಮತಿಗೆಟ್ಟ ಹಿಂದೂ ಸಮಾಜ ಇಂತಹ ಚಿತ್ರಗಳನ್ನು ಬೆಂಬಲಿಸುತ್ತಲೇ ಬಂದಿವೆ. ಪದ್ಮಾವತ್ ಕೇವಲ ಕಲ್ಪಿತ ಕಾವ್ಯ, ಅಂಥ ನಿಜ ಘಟನೆಗಳು ನಡೆಯಲೇ ಇಲ್ಲ ಎಂದು ಬೊಬ್ಬಿರಿವ ಪಡೆಯೇ ಇದೆ. ಇತಿಹಾಸವನ್ನು ನಮಗೆ ಬೇಕಾದಂತೆ ತಿರುಚುವ ಕಲಾಸ್ವಾತಂತ್ರ್ಯ ನಮಗಿದೆ ಎನ್ನುವ ಇದೇ ವೈಚಾರಿಕ ಭಂಡರು ಭಗವಂತ ಶಿವನನ್ನು ಟಾಯ್ಲೆಟ್ಟಿನಲ್ಲಿ ಅಟ್ಟಾಡಿಸಿದರೂ ನಮ್ಮವರು ಕಲೆಯ ಹೆಸರಲ್ಲಿ ವೀಕ್ಷಿಸಿ ಆನಂದಿಸುತ್ತಾರೆ! ಇಂತಹ ಚಿತ್ರಗಳನ್ನು ನೋಡಿ ಆಸ್ವಾದಿಸುವ ದಡ್ಡಶಿಖಾಮಣಿ ಹಿಂದೂಗಳು ಇರುವವರೆಗೆ ಕಲೆಯ ಹೆಸರಲ್ಲಿ ತಮ್ಮ ಅಜೆಂಡಾಗಳನ್ನು ಹಿಂದೂ ಮನಸ್ಸಿನಲ್ಲಿ ನೆಟ್ಟು ಬೆಳೆಸುವ ಧೂರ್ತರು ಇದ್ದೇ ಇರುತ್ತಾರೆ.

– ರಾಜೇಶ್ ರಾವ್

Tags

Related Articles

Close