ಅಂಕಣ

ಪಾಕಿಸ್ಥಾನಿಗಳು, ‘ನಿಮ್ಮ ಮಗ ಯುದ್ಧ ಕೈದಿಯಾಗಿದ್ದಾನೆ’ ಎಂದಾಗ ಫೀಲ್ಡ್ ಮಾರ್ಷಲ್ ಕರಿಯಪ್ಪನವರು ಕೊಟ್ಟ ಉತ್ತರ ಅಯ್ಯುಬ್ ಖಾನ್ ನನ್ನು ಬೆಚ್ಚಿ ಬೀಳಿಸಿತ್ತು!

ಭಾರತೀಯ ಸೇನೆಯು ತ್ಯಾಗ, ಬಲಿದಾನ ಮತ್ತು ನಿಸ್ವಾರ್ಥತೆಗೆ ಹೆಸರು ಪಡೆದಿದೆ. ತನ್ನ ರಾಷ್ಟ್ರ ರಕ್ಷಣೆಗಾಗಿ ನಮ್ಮ ಸೈನಿಕರು ಹೆಚ್ಚಿನ ಸಮಯದವರೆಗೆ ತಮ್ಮ
ಕುಟುಂಬದಿಂದ ದೂರವಿರುತ್ತಾರೆ. ಕುಟುಂಬ ಮತ್ತು ರಾಷ್ಟ್ರದ ವಿಚಾರ ಬಂದಾಗ ಭಾರತೀಯ ಸೈನಿಕನ ಮೊದಲ ಆಯ್ಕೆ ರಾಷ್ಟ್ರವೇ ಆಗಿರುತ್ತದೆ ಹೊರತು
ಕುಟುಂಬವಲ್ಲ.

ಇಂಥದ್ದೇ ಒಂದು ಘಟನೆಯನ್ನು ಬಿಂಬಿಸುವ ಅದ್ಭುತವಾದ ಕಥೆಯೊಂದಿದೆ. ರಾಷ್ಟ್ರ ಮತ್ತು ಕುಟುಂಬದ ವಿಚಾರ ಬಂದಾಗ ಆ ವೀರ ಸೈನಿಕ ರಾಷ್ಟ್ರವನ್ನೇ ಆಯ್ಕೆ
ಮಾಡಿದ! ಆ ವೀರ ಸೈನಿಕ ಬೇರ್ಯಾರೂ ಅಲ್ಲ, ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ.

ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಅವರ ಪುತ್ರ ಏರ್‍ಮಾರ್ಷಲ್ ಕೆ.ಸಿ. ನಂದ ಕರಿಯಪ್ಪ. ನಂದ ಕಾರ್ಯಪ್ಪ ಕೂಡಾ ತಂದೆಯಷ್ಟೇ ಅಪ್ರತಿಮ ದೇಶಭಕ್ತ.
1965 ರ ಯುದ್ಧದಲ್ಲಿ, ಫೀಲ್ಡ್ ಮಾರ್ಷಲ್ ಕರಿಯಪ್ಪ ಅವರ ಪುತ್ರ, ಏರ್ ಮಾರ್ಷಲ್ ಕೆ.ಸಿ. ನಂದಾ ಕರಿಯಪ್ಪ, ಸ್ಕ್ವಾರ್ಡನ್ ನಂ.20(ನೌಕಾತಂಡ) ಇದರ ಲೀಡರ್ ಆಗಿದ್ದರು. ಈ ವೇಳೆ ಪಾಕಿಸ್ತಾನದ ವಾಯುನೆಲೆಯಿಂದ ನಂದಾ ಕರಿಯಪ್ಪನಿದ್ದ ಸ್ಕ್ವಾರ್ಡನ್‍ಗೆ ದಾಳಿ ನಡೆಯಿತು. ಸ್ಕ್ವಾರ್ಡನ್‍ನ ಹೊಡೆದುರುಳಿಸಿದ ಪಾಕಿಸ್ತಾನದ ವಾಯುಸೇನೆ, ನಂದಾ ಕರಿಯಪ್ಪ ಸೇರಿ ಎಲ್ಲರನ್ನೂ ಯುದ್ಧಖೈದಿಗಳನ್ನಾಗಿ ಸೆರೆ ಹಿಡಿಯಿತು.

ಕೆ.ಸಿ. ನಂದಾ ಕರಿಯಪ್ಪರ ಗುರುತು ಹಿಡಿದ ಪಾಕಿಸ್ತಾನದ ಸೇನೆ, ಜ್ಯೂನಿಯರ್ ಕರಿಯಪ್ಪನನ್ನು ಸೆರೆ ಹಿಡಿದಿರುವುದಾಗಿ ಆಯುಬ್ ಖಾನ್ ರೇಡಿಯೋದಲ್ಲಿ ತಿಳಿಸಿದ. ಇದೇ ಅಯೂಬ್ ಖಾನ್ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆ ಮಿಲಿಟರಿಯಲ್ಲಿ ಕರಿಯಪ್ಪನವರ ಕಿರಿಯನಾಗಿದ್ದ.

ನಿವೃತ್ತಿ ಅಂಚಿನಲ್ಲಿದ್ದ ಕೆ.ಎಂ ಕರಿಯಪ್ಪ ಅವರು ತನ್ನ ಹುಟ್ಟೂರದ ಮೆರ್ಕರಾದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಪಾಕಿಸ್ತಾನದ ಆಯುಬ್ ಖಾನ್ ಕೆ.ಎಂ. ಕರಿಯಪ್ಪರನ್ನು ಸಂಪರ್ಕಿಸಿ ನಿಮ್ಮ ಪುತ್ರ ಸೆರೆಹಿಡಿಯಲ್ಪಟ್ಟಿದ್ದು, ಸುರಕ್ಷಿತನಾಗಿದ್ದಾನೆ, ಅಲ್ಲದೆ ನಿಮ್ಮ ಪುತ್ರನನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ.

ಈ ವೇಳೆ ಕೆ.ಎಂ. ಕರಿಯಪ್ಪನವರ ಉತ್ತರ ಅಮೋಘವಾಗಿತ್ತು. ಆ ಉತ್ತರಕ್ಕೆ ಬೆಲೆಕಟ್ಟಲೂ ಸಾಧ್ಯವಿಲ್ಲ.

ಆಯೂಬ್ ತಾನು ಸ್ವಾತಂತ್ರ್ಯ ಪೂರ್ವದಲ್ಲಿ ಕರಿಯಪ್ಪನವರ ಕೈಕೆಳಗೆ ದುಡಿಯುತ್ತಿದ್ದೆ ಎಂಬ ಕಾರಣಕ್ಕೆ ಅವರ ಪುತ್ರನಿಗೆ ರಿಯಾಯಿತಿ ತೋರಿಸುವ ಪ್ರಲೋಬನೆ
ತೋರಿಸಿದ. ಆಯೂಬ್ ಹೇಳಿದಿಷ್ಟು, `ನಮ್ಮಲ್ಲಿ ಯುದ್ಧಖೈದಿಯಾಗಿರುವ ನಿಮ್ಮ ಪುತ್ರನೊಬ್ಬನನ್ನು ಬಿಡುಗಡೆ ಮಾಡುತ್ತೇನೆ. ಯಾರಿಗೂ ಸಿಗದಂಥಹಾ ಉತ್ತಮ ಔಷಧ ನೀಡುತ್ತೇನೆ…’ ಅದಕ್ಕೆ ಕೆ.ಎಂ. ಕರಿಯಪ್ಪನವರ ಉತ್ತರ ಹೀಗಿತ್ತು,

`ಅವ ನನ್ನ ಮಗನಿರಬಹುದು, ಆದರೆ ಈಗ ಆತ ಭಾರತ ಮಾತೆಯ ಪುತ್ರ. ತನ್ನ ದೇಶದ ರಕ್ಷಣೆಗಾಗಿ ಭಾರತದ ಹೆಮ್ಮೆಯ ಸೈನಿಕನಾಗಿ ಹೋರಾಟ ನಡೆಸಿದ್ದಾನೆ. ನನ್ನ ಪುತ್ರನ ಬಗ್ಗೆ ಇರುವ ಕಾಳಜಿಗೆ ನಿಮ್ಮನ್ನು ಅಭಿನಂದಿಸುತ್ತೇನೆ. ಆದರೆ ನನ್ನದೊಂದು ವಿನಂತಿ ಇದೆ, ಒಂದು ವೇಳೆ ಬಿಡುಗಡೆ ಮಾಡುವುದಿದ್ದರೆ ಎಲ್ಲಾ ಯುದ್ಧಖೈದಿಗಳನ್ನು ಬಿಡುಗಡೆ ಮಾಡಿ, ಇಲ್ಲವಾದರೆ ಬೇಡ. ನನ್ನ ಮಗನೆಂಬ ಕಾರಣಕ್ಕೆ ಅವನಿಗೆ ವಿಶೇಷ ಚಿಕಿತ್ಸೆ ಕೊಡಬೇಡಿ. ಕೊಡುವುದಾದದೆ ಎಲ್ಲರಿಗೂ ಒಂದೇ ತರದ ಚಿಕಿತ್ಸೆ ನೀಡಿ…’

ಇಂಥದೊಂದು ಉತ್ತರವನ್ನು ಸ್ವತಃ ಆಯೂಬ್ ಖಾನ್ ಕೂಡಾ ನಿರೀಕ್ಷಿಸಿರಲಿಕ್ಕಿಲ್ಲ. ಕೆ.ಎಂ. ಕರಿಯಪ್ಪನವರಂತಹಾ ತ್ಯಾಗವೀರ, ಹೆಮ್ಮೆಯ ಸೈನಿಕರಿರುವುದರಿಂದಲೇ ಭಾರತ ಇಂದು ವಿಶ್ವದಲ್ಲಿ ತಲೆ ಎತ್ತಿ ನಿಂತಿದೆ. ಬೇರೆ ಯಾವ ದೇಶದ ಸೈನಿಕರೂ ತಮ್ಮ ದೇಶದ ಬಗ್ಗೆ ಭಾರತೀಯ ಸೈನಿಕರಷ್ಟು ಸಮರ್ಪಣಾ ಭಾವವನ್ನು ತೋರಿಸಿರಲಿಕ್ಕಿಲ್ಲ. ಈ ಭಾವದಿಂದಲೇ ಭಾರತ ಇಂದು ಜಗತ್ತಿನ ನಾಲ್ಕನೇ ಬಲಾಡ್ಯ ಸೈನ್ಯವಾಗಿ ಹೆಸರು ಪಡೆದಿದೆ.

ಕರಿಯಪ್ಪನವರ ವೀರತನಕ್ಕೆ ಈ ಘಟನೆಯೊಂದು ಸಾಕು. ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು,
ದೂರದರ್ಶಕ ಯಂತ್ರವಿಲ್ಲದಿರುವ ಕೋವಿಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ
ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು.

ಸ್ವಾತಂತ್ರ್ಯಾನಂತರ ಕರಿಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕರಿಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‍ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು. 1949ರ ಜನವರಿ 15ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕರಿಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕರಾದರು. ಕರಿಯಪ್ಪನವರ ಸೇವೆ ಭಾರತೀಯ ಸೇನೆಗೆ ಅಮೋಘವಾದುದು!!

-ಚೇಕಿತಾನ

Tags

Related Articles

Close