ಅಂಕಣ

ಪುರುಷರಿಗೂ ಪ್ರವೇಶ ನಿಷೇಧಿಸಿದ ದೇಗುಲಗಳು ಇವೆ ಎಂದರೆ ನಂಬುವಿರಾ?!

ಹಿಂದೂ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಹಲವಾರು ಮಂದಿ ಬೋಂಗು ಬಿಡುತ್ತಾರೆ. ಕಾಲಕ್ರಮೇಣ ಕಟ್ಟುಪಾಡುಗಳೆಲ್ಲಾ ನಶಿಸಿ ಹಿಂದೂ
ಸ್ತ್ರೀಪುರುಷರು ಸಮಾನರಾಗಿ ದೇವಸ್ಥಾನಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಆದರೂ ಇಂದು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶವಿಲ್ಲ. ಈ ದೇಗುಲಕ್ಕೆ ಹತ್ತರಿಂದ 50ರೊಳಗಿನ ವಯೋಮಿತಿಯ ಮಹಿಳೆಯರಿಗೆ ಪ್ರವೇಶವಿಲ್ಲ. ಈ ದೇಗುಲಕ್ಕೆ ಹೆಣ್ಣುಮಕ್ಕಳಿಗೂ ಪ್ರವೇಶ ಕೊಡಬೇಕೆಂದು ಹಲವಾರು ಮಂದಿ ಮಹಿಳಾವಾದಿಗಳು ಹೋರಾಟ ನಡೆಸುತ್ತಲೇ ಇದ್ದಾರೆ…

ಆದರೆ ನಂಬ್ರೀರೋ ಬಿಡ್ತಿರೋ ಇಂದು ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಪುರುಷರಿಗೂ ಪ್ರವೇಶ ನಿಷೇಧಿಸಿದ ದೇಗುಲಗಳು ಇಂದು ದೇಶದಾದ್ಯಂತ ಇವೆ
ಎನ್ನುವುದನ್ನು ನಂಬಲೇ ಬೇಕಾದ ಸತ್ಯ. ಆಧ್ಯಾತ್ಮ ದೃಷ್ಟಿಕೋನದಿಂದಲೋ ಅಥವಾ ಸಂಪ್ರದಾಯದ ದೃಷ್ಟಿಕೋನದಿಂದಲೋ ಒಂದೊಂದು ದೇಗುಲಗಳು ಒಂದೊಂದು ಕಟ್ಟುಪಾಡುಗಳನ್ನು ಒಳಗೊಂಡಿದೆ. ಅದರಂತೆಯೇ ಇಂದು ಹಲವು ಪ್ರಮುಖ ದೇಗುಲಗಳಲ್ಲಿ ಪುರುಷರಿಗೂ ದೇಗುಲ ಪ್ರವೇಶ ನಿಷೇಧಿಸಲಾಗಿದೆ.

ಸಾಮಾನ್ಯವಾಗಿ ಋತುಮತಿಯಾದ ಹೆಣ್ಣುಮಕ್ಕಳಿಗೆ ದೇವಸ್ಥಾನ ಪ್ರವೇಶವಿರುವುದಿಲ್ಲ. ಮಗುವಿಗೆ ಜನ್ಮ ನೀಡಿದಾಗಲೂ ಕೆಲವು ದಿನಗಳ ಕಾಲ ದೇವಸ್ಥಾನ ಪ್ರವೇಶ ಇರುವುದಿಲ್ಲ. ಅದರ ಹೊರತು ಮಹಿಳೆಯರಿಗೂ ಮುಕ್ತವಾಗಿ ದೇವಸ್ಥಾನ ಪ್ರವೇಶಿಸಲು ಅವಕಾಶವಿದೆ. ಇದರ ಹೊರತಾಗಿಯೂ ಶಬರಿಮಲೆ ದೇಗುಲಕ್ಕೆ
ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಹಲವಾರು ಮಹಿಳಾವಾದಿಗಳು ಹೋರಾಟ ನಡೆಸುತ್ತಿದ್ದಾರೆ. ಸೋಜಿಗದ ಸಂಗತಿ ಎಂದರೆ ಇಂದು ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶವಿರುವುದಿಲ್ಲ. ಆದರೆ ಈ ಬಗ್ಗೆ ಎಲ್ಲೂ ಹೋರಾಟ ಕಂಡುಬರುವುದಿಲ್ಲ… ಇರಲಿ. ಹಾಗಾದರೆ ಪುರುಷರಿಗೂ ಪ್ರವೇಶ ನಿಷೇಧಿಸಿದ ದೇಗುಲಗಳಿವೆ ಎಂದು ಗೊತ್ತಿದೆಯೇ? ಈ ದೇಶದ ಪ್ರಮುಖ ಎಂಟು ದೇಗುಲಗಳಿಗೆ ಪುರುಷರಿಗೆ ನಿಷೇಧಿಸಲಾಗಿದೆ.

ತಿರುವನಂಥಪುರದ ಪಾರ್ವತಿ ದೇಗುಲ:

ಕೇರಳದ ತಿರುವನಂಥಪುರಂನಲ್ಲಿರುವ ಪಾರ್ವತಿ ದೇವಿ ಮಂದಿರ 51 ಶಕ್ತಿ ಪೀಠಗಳಲ್ಲಿ ಒಂದೆನಿಸಿದೆ. ಈ ದೇವರನ್ನು ಸನ್ಯಾಸಿನಿ ದೇವರೆಂದೂ ಕರೆಯುತ್ತಾರೆ. ಈ ದೇವಿ ಸನ್ಯಾಸಿನಿ ದೇವಿಯಾಗಿರುವುದರಿಂದ ಇಲ್ಲಿ ಗರ್ಭಗುಡಿಗೆ ಪ್ರವೇಶ ನಿಷೇಧಿಸಲಾಗಿದೆ. ಪ್ರತೀ ವರ್ಷ ಲಕ್ಷಾಂತರ ಮಂದಿ ನಾರಿಯರು ಈ ದೇಗುಲವನ್ನು ಪ್ರವೇಶಿಸುತ್ತಾರೆ. ಆದರೆ ಪುರುಷರಿಗೆ ಈ ಅವಕಾಶವಿಲ್ಲ. ಆದ್ದರಿಂದಲೇ ಇದನ್ನು ನಾರಿ ಶಬರಿಮಲೆ ಎಂದು ಕರೆಯುತ್ತಾರೆ. ಶಬರಿದೇಗುಲದ ಬಗ್ಗೆ ಮಾತಾಡುವವರು ನಾರಿದೇಗುಲವೂ ಇದೆ ಎಂದು ಮಾತಾಡುವುದಿಲ್ಲ.

ಚಕ್ಕುಲತುಕಾವು ದೇವಸ್ಥಾನ:

ಇದು ಕೇರಳದಲ್ಲಿರುವ ದೇವಿ ಭಗವತಿಯ ದೇವಸ್ಥಾನ. ಪ್ರತೀ ವರ್ಷದ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ `ಧನು’ ಎಂದು ಕರೆಯಲ್ಪಡುವ ಆಚರಣೆಯಲ್ಲಿ ಇಲ್ಲಿ `ನಾರಿ ಪೂಜೆ’ ನಡೆಯುತ್ತದೆ. ಮಹಿಳೆಯರು 10 ದಿನ ಉಪವಾಸವಿದ್ದು, ಈ ದಿನ ಇಲ್ಲಿಗೆ ಬರುತ್ತಾರೆ. ಇಲ್ಲಿನ ಪುರುಷ ಅರ್ಚಕರು ಮಹಿಳೆಯರ ಪಾದಗಳನ್ನು
ತೊಳೆಯುತ್ತಾರೆ. ಈ `ನಾರಿ ಪೂಜೆ’ ಯಂದು ಪುರುಷ ಅರ್ಚಕರನ್ನು ಹೊರತುಪಡಿಸಿ ಬೇರೆ ಪುರುಷರಿಗೆ ದೇವಸ್ಥಾನದ ಒಳಗೆ ಪ್ರವೇಶ ನಿಷಿದ್ಧವಿರುತ್ತದೆ. ಈ ನಾರಿ ಪೂಜೆಯಲ್ಲಿ ಒಂದೇ ಬಾರಿ 30 ಲಕ್ಷ ಮಹಿಳೆಯರು ಭಾಗವಹಿಸಿದ್ದು ವಿಶ್ವದಾಖಲೆ ಪುಟ ಸೇರಿದೆ. ಉತ್ಸವಗಳ ದಿನ ಇಡೀ ದೇವಸ್ಥಾನದಲ್ಲಿ ಕೇವಲ ಮಹಿಳೆಯರೇ ತುಂಬಿರುತ್ತಾರೆ.

ಬ್ರಹ್ಮ ದೇವಸ್ಥಾನ

ರಾಜಸ್ಥಾನದ ಪುಷ್ಕರದಲ್ಲಿ 14ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಬ್ರಹ್ಮ ದೇವಸ್ಥಾನದ ಆವರಣಕ್ಕೆ ವಿವಾಹಿತ ಪುರುಷರಿಗೆ ಪ್ರವೇಶದ ಅವಕಾಶವೇ ಇಲ್ಲ. ಇದು ವಿಶ್ವದಲ್ಲಿರುವ ಏಕೈಕ ಬ್ರಹ್ಮ ದೇವಸ್ಥಾನ ಎಂದೆನಿಸಿದೆ. ಇದಕ್ಕೆ ಸಾಕ್ಷಿಯಾಗಿ ಪುರಾಣ ಕತೆಯೊಂದಿದೆ. ಪುರಾಣದ ಪ್ರಕಾರ ಬ್ರಹ್ಮ ದೇವನು ಇಲ್ಲಿರುವ ಪುಷ್ಕರ ಸರೋವರದಲ್ಲಿ ಯಜ್ಞ ಮಾಡುತ್ತಿರುವಾಗ ಪತ್ನಿ ದೇವಿ ಸರಸ್ವತಿ ಬರುವಾಗ ತಡವಾದ ಕಾರಣ ಬ್ರಹ್ಮನು ದೇವಿ ಗಾಯತ್ರಿಯನ್ನು ಮದುವೆಯಾಗಿ ಯಜ್ಞದ
ವಿಧಿವಿಧಾನಗಳನ್ನು ಪೂರೈಸಿದರಂತೆ. ಅದರಿಂದ ಕೋಪಗೊಂಡ ಸರಸ್ವತಿಯು’ ಇನ್ನು ಈ ದೇವಸ್ಥಾನಕ್ಕೆ ಯಾವ ವಿವಾಹಿತ ಪುರುಷನಿಗೂ ಪ್ರವೇಶವಿಲ್ಲ, ತಪ್ಪಿದರೆ ಆತನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ’ ಎಂದು ಶಾಪ ಕೊಟ್ಟಳಂತೆ. ಅದರಂತೆ ಇಂದಿಗೂ ಈ ದೇಗುಲಕ್ಕೆ ಪುರುಷರಿಗೆ ಪ್ರವೇಶವಿಲ್ಲ.

ಮಾತಾ ದೇವಸ್ಥಾನ

ಬಿಹಾರದ ಮುಜಾಫ್ಫರ್ ನಗರದಲ್ಲಿರುವ ಈ ದೇವಸ್ಥಾನದಲ್ಲಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಆದರೆ ಪುರುಷರಿಗೆ
ಸಂಪೂರ್ಣವಾಗಿ ಪ್ರವೇಶ ನಿಷೇಧಿಸಲಾಗಿದ್ದು, ಪುರುಷ ಅರ್ಚಕರಿಗೂ ಇಲ್ಲಿ ಪ್ರವೇಶವಿಲ್ಲ. ಇಂಥದೊಂದು ದೇವಸ್ಥಾನವೂ ಇದೆ ಎಂದು ಅಚ್ಚರಿಯಾಗದೆ ಇರದು.

ಭಗತಿ ಮಾ

ಭಗವತಿ ಮಾ ದೇವಸ್ಥಾನ ಕನ್ಯಾಕುಮಾರಿಯಲ್ಲಿದ್ದು, ಕನ್ಯಾ ಮಾ ಭಗವತಿ ದುರ್ಗಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಶಿವನನ್ನು
ಪತಿಯನ್ನಾಗಿ ಪಡೆಯಲು ಪಾರ್ವತಿಯು ಸಮುದ್ರದ ಮಧ್ಯ ಹೋಗಿ ತಪಸ್ಸಿಗೆ ಕುಳಿತಿದ್ದಳಂತೆ. ಅದಕ್ಕಾಗಿಯೇ ಪುರುಷರಿಗೆ ಈ ದೇಗುಲ ಪ್ರವೇಶ ನಿಷೇಧ ಹೇರಲಾಗಿದೆ. ಆದ್ದರಿಂದ ಈ ದೇವಸ್ಥಾನದೊಳಗೆ ಕೇವಲ ಮಹಿಳೆಯರಿಗೆ ಪ್ರವೇಶವಿದ್ದು, ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಾ ದೇವಸ್ಥಾನ

ಬಿಹಾರದ ಮಿರ್ಜಾಪುರದಲ್ಲಿ ಇರುವ ಈ ದೇವಸ್ಥಾನಕ್ಕೆ ನಿರ್ದಿಷ್ಟ ಸಮಯದಲ್ಲಿ ಪುರುಷರ ಪ್ರವೇಶ ನಿಷೇಧಿಸಲಾಗಿದೆ. ಈ ನಿರ್ದಿಷ್ಟ ಸಮಯದಲ್ಲಿ ಪುರುಷ ಭಕ್ತರಿಗೂ ಪ್ರವೇಶವಿಲ್ಲ. ಕೇವಲ ಮಹಿಳೆಯರೇ ಬಂದು ಪೂಜೆ ಸಲ್ಲಿಸುತ್ತಾರೆ. ಇದು ಇಲ್ಲಿನ ವಿಶೇಷತೆ.

ಕಾಮ್ರುಪ್ ಕಾಮಾಕ್ಯ ದೇವಸ್ಥಾನ

ಅಸ್ಸಾಂನಲ್ಲಿರುವ ಕಾಮಾಕ್ಯ ದೇವಿಯ ದೇಗುಲ ಒಂದು ವಿಚಿತ್ರ. ಕಾಮಾಕ್ಯ ದೇವಿಯ ಋತುಚಕ್ರದ ಅವಧಿಯನ್ನು ಪೂಜಿಸುವ ಈ ದೇವಸ್ಥಾನದಲ್ಲಿ ಮಹಿಳೆಯರು
ಕೇವಲ ಋತುಚಕ್ರದ ಸಮಯದಲ್ಲಿ ಮಾತ್ರ ಈ ದೇವಸ್ಥಾನಕ್ಕೆ ಹೋಗಬಹುದು. ಉಳಿದಂತೆ ಅವಕಾಶವೇ ಇಲ್ಲ. ಈ ದೇಗುಲದಲ್ಲಿ ಮಹಿಳಾ ಅರ್ಚಕರು ಅಥವಾ ಮಹಿಳಾ ಸನ್ಯಾಸಿಗಳು ಮಾತ್ರ ಪೂಜೆ ನೆರವೇರಿಸಬಹುದು. ಪುರಾಣದ ಪ್ರಕಾರ ವಿಷ್ಣು ದೇವನು ತನ್ನ ಸುದರ್ಶನ ಚಕ್ರದಿಂದ ಮಾಸತಿಯ ಸೊಂಟವನ್ನು ತುಂಡರಿಸಿದಾಗ ಅದು ಹೋಗಿ ಬಿದ್ದ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲಾಯಿತು ಎನ್ನಲಾಗುತ್ತಿದೆ. ಆದ್ದರಿಂದ ಈ ದೇಗುಲಕ್ಕೆ ಪುರುಷರ ಪ್ರವೇಶ ನಿಷೇಧಿಸಲಾಗಿದೆ.

ತ್ರೈಂಬಕೇಶ್ವರ ದೇಗುಲ

ಮಹಾರಾಷ್ಟ್ರದ ನಾಸಿಕ್‍ನಲ್ಲಿ ಶಿವನ ದೇವಸ್ಥಾನವೊಂದಿದೆ. ಇದು ಬಹಳ ಪುರಾನತ ಹಾಗೂ ಪೌರಾಣಿಕ ದೇಗುಲ. 2016ರವರೆಗೆ ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಬಾಂಬೆ ಹೈಕೋರ್ಟ್ ತೀರ್ಪಿನ ನಂತರ ಮಹಿಳೆಯರಿಗೆ ಪೂರ್ಣ ಪ್ರವೇಶ ನೀಡಲಾಗಿದ್ದು, ಆದರೆ ಪುರುಷರನ್ನು ಸಂಪೂರ್ಣವಾಗಿ ಹೊರಹಾಕಲಾಗಿದೆ.

ಹಿಂದೂಗಳ ದೇವಸ್ಥಾನವೆಂದರೆನೇ ವಿಚಿತ್ರ. ಒಂದೊಂದು ದೇವಸ್ಥಾನ ಒಂದೊಂದು ವೈಚಿತ್ರ್ಯಗಳನ್ನು ಹೊಂದಿದೆ. ಅಲ್ಲಿ ಪೂಜಿಸುವ ರೀತಿ, ಆ ದೇವರ ಹಿನ್ನೆಲೆ,
ಇತಿಹಾಸ, ಶೈಲಿ ಎಲ್ಲವೂ ಒಂದಕ್ಕೊಂದು ವ್ಯತ್ಯಾಸವನ್ನು ಹೊಂದಿದೆ. ಆದರೂ ಇಂದು ದೇಗುಲದ ಪುರಾತನ ಸಂಪ್ರದಾಯಗಳನ್ನು ಮೆಟ್ಟಿನಿಲ್ಲಲಾಗುತ್ತಿದೆ. ಹಿಂದೂಗಳ ಪ್ರತಿಯೊಂದೂ ಸಂಪ್ರದಾಯಗಳನ್ನು ಪ್ರಶ್ನಿಸಲಾಗುತ್ತಿದೆ. ಅದೇ ರೀತಿ ದೇಗುಲ ಪ್ರವೇಶವೂ ಒಂದು. ಆದರೆ ಮಹಿಳೆಯರಿಗೆ ಮಾತ್ರ ಪ್ರವೇಶ ಅವಕಾಶವಿರುವ ದೇಗುಲಗಳೂ ಹಿಂದೂಗಳಲ್ಲಿ ಇದೆ ಎಂದರೆ ಹಿಂದೂ ಧರ್ಮ ಎಷ್ಟು ವಿಶಿಷ್ಠವಾಗಿದೆ ಎಂದೆನಿಸಬಹುದು…

-ಚೇಕಿತಾನ

Tags

Related Articles

Close