ಅಂಕಣ

ಪ್ರಕಾಶ್ ರೈ ಯವರೇ! ಕೊಟ್ಟಷ್ಟು ಕಾಸು ತೆಗೆದುಕೊಂಡು ನಟಿಸಿಕೊಂಡಿರುವ ಬದಲು ನಿಮಗೆ ಯಾಕೆ ಬೇಕಿತ್ತು ಸ್ವಾಮಿ ಸಾಕ್ಷಿ ಹೇಳುವ ಉಸಾಬರಿ?!

ಪ್ರಶಾಂತ್‌ ಪೂಜಾರಿ,
ಪ್ರವೀಣ್‌ ಪೂಜಾರಿ,
ಮಾಗಳಿ ರವಿ,
ರಾಜು ಕ್ಯಾತಮಾರನಹಳ್ಳಿ
ರುದ್ರೇಶ್‌,
ವಿಶ್ವನಾಥ್‌
ಶರತ್‌ ಮಡಿವಾಳ… ಇನ್ನೂ ಪಟ್ಟಿ ಸಾಗುತ್ತಲೇ ಇದೆ. ಇದು ಮಂಗಳೂರು ಚಲೋ ಹೋರಾಟಗಾರರ ಪಟ್ಟಿಯಲ್ಲ. ಬದಲಿಗೆ ಕಮ್ಯುನಿಸ್ಟರು, ಇಸ್ಲಾಮಿಕ್‌
ಮೂಲಭೂತವಾದಿಗಳಿಂದ ಬೀದಿ ಹೆಣವಾದವರು. ತಾಯಿ, ತಂದೆ, ಹೆಂಡತಿ, ಮಕ್ಕಳು ಎಲ್ಲರನ್ನೂ ಅನಾಥರನ್ನಾಗಿ ಮಾಡಿ ಹೋದವರಿವರು. ಇದೆಲ್ಲ ನಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ ಈ ಸಂಗತಿಗಳ್ಯಾವುದೂ ಸಮಾಜಪರ ಚಿಂತಕ, ಮನುಷ್ಯತ್ವಕ್ಕೆ ಮಿಡಿಯುವ ಪ್ರಕಾಶ್‌ ರೈ ಅಲಿಯಾಸ್‌ ಪ್ರಕಾಶ್‌ ರಾಜ್‌ಗೆ ಗೊತ್ತಿಲ್ಲ ಎಂಬುದು ಮಾತ್ರ ದುರಂತ.

ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯ ಎದುರಿಗೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದನ್ನು ಖಂಡಿಸಿ ಅನೇಕರು ಹೋರಾಟ ಸಹ ಮಾಡಿದರು. ಒಬ್ಬೊಬ್ಬರ ಹೋರಾಟ ಒಂದೊಂದು ದಿಕ್ಕಿಗೆ ಹೋಗುತ್ತಿದೆ. ಆದರೆ ಮಧ್ಯದಲ್ಲಿ ಪ್ರಕಾಶ್‌ ರೈ ಎಲ್ಲಿಂದ ಬಂದರು ಎಂದೇ ಗೊತ್ತಾಗಲಿಲ್ಲ. ಬಂದವರೇ ನೇರವಾಗಿ ಇದು ’ಕರ್ನಾಟಕದಲ್ಲಿ ಏನಾಗುತ್ತಿದೆ? ಸೈದ್ಧಾಂತಿಕ ದ್ವೇಷಕ್ಕಾಗಿ ಬಲಪಂಥೀಯ ಉದ್ಧಟರು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಬಿಟ್ಟರು. ಪ್ರಕಾಶ್‌ ರೈ ಅವರೇ, ಗೌರಿ ಲಂಕೇಶ್‌ ಸತ್ತಾಗ ಮಾತ್ರ ನಿಮಗೆ ಮಾನವೀಯತೆ ನೆನಪಾಗಿದ್ದಾ ಅಥವಾ ಪಟ್ಟಿಯಲ್ಲಿರುವ ಮಂದಿ ಸತ್ತಾಗಲೂ ನಿಮಗೆ ಹೀಗೇ ಕರುಳು ಚುರುಕ್‌ ಎಂದಿತ್ತಾ? ಗೌರಿ ಲಂಕೇಶ್‌ರನ್ನು ಕೊಲ್ಲಬಾರದಿತ್ತು, ಕೊಂದವರಿಗೆ ಶಿಕ್ಷೆಯಾಗಬೇಕು ಇತ್ಯಾದಿಗಳೆಲ್ಲವೂ ನಿಜ. ಆದರೆ ಇಷ್ಟು ದಿನ ಕಣ್ಣಿಗೇ ಕಾಣದ ನೀವು ಏಕಾಏಕಿ ಬಂದು ಗೌರಿ ಹತ್ಯೆಯಾದಾಗಲೇ ’ಕರ್ನಾಟಕದಲ್ಲಿ ಏನಾಗುತ್ತಿದೆ?’ ಎಂದು ಹೇಳುತ್ತಿದ್ದೀರಲ್ಲ ಹಾಗಾದರೆ ಇಷ್ಟು ದಿನ ಕರ್ನಾಟಕದಲ್ಲಿ ಏನಾಗುತ್ತಿತ್ತು ಎಂದು ಗೊತ್ತಿಲ್ಲವಾ? ಹಿಂದೂಗಳು ಸತ್ತಾಗ ಒಂದು ದಿನವಾದರೂ ನಿದ್ದೆಯಿಂದ ಎದ್ದು ಬಂದು ’ಕರ್ನಾಟಕದಲ್ಲಿ ಏನಾಗುತ್ತಿದೆ?’ ಎಂದು ಕೇಳಿದ್ದಿರಾ? ಅಥವಾ ಸಂತಾಪ ಸೂಚಕ ಮಾತುಗಳಾದರೂ ಬಂತಾ ಬಾಯಲ್ಲಿ? ಇಲ್ಲ. ಬರೋದೂ ಇಲ್ಲ. ಏಕೆಂದರೆ ಸತ್ತವರು ನಿಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುವವರಲ್ಲವಲ್ಲ ಅದಕ್ಕೆ. ಹೇಳಿ ಕನ್ನಡ ಪತ್ರಿಕೆಗಳಲ್ಲಿ ಎಂದಾದರೂ ನಿಮ್ಮ ಹೇಳಿಕ ಪ್ರಕಟವಾಗಿದೆಯಾ? ಪ್ರಕಾಶ್‌ ನಿಮಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳನ್ನು ಸರಾಗವಾಗಿ ಮಾತಾಡಲು ಬರುತ್ತದೆ. ಅಂದರೆ ನೀವು ಕೇರಳದ ಜನರಿಗೂ ಬಹಳ ಹತ್ತಿರ ಎಂದುಕೊಳ್ಳೋಣ.

ಕೇರಳದಲ್ಲಿ ಎಷ್ಟು ಹಿಂದೂಗಳ ಹತ್ಯೆಯಾಯಿತು ಗೊತ್ತಾ? ಆಯ್ತು ನಿಮ್ಮದೇ ಶೈಲಿಯಲ್ಲಿ ಹೇಳುವುದಾದರೆ ಎಷ್ಟು ಜನ ಬಲಪಂಥೀಯ ಉದ್ಧಟರನ್ನು ಎಡಪಂಥೀಯ ಉಗ್ರರು ಕೊಂದಿದ್ದಾರೆ ಗೊತ್ತಾ? ಪ್ರತಿಸಲ ಆರೆಸ್ಸೆಸ್‌ ಪ್ರಮುಖವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವಾಗ ಮಲಯಾಳಂನಲ್ಲಿ ಎಷ್ಟು ಸಲ “ಕೇರಳದಲ್ಲಿ ಏನಾಗುತ್ತಿದೆ?” ಎಂದು ಕೇಳಿದ್ದಿರಿ ಸ್ವಾಮಿ? ಇಲ್ಲ, ಅದೂ ಇಲ್ಲ. ಕಾರಣ, ಅವರ‍್ಯಾರೂ ನಿಮ್ಮ ಸಿದ್ಧಾಂತವನ್ನು ಒಪ್ಪುವವರಲ್ಲ.

ನೀವು ಬೇಕಾದರೆ ಹೌದೋ ಇಲ್ಲವೋ ಪರೀಕ್ಷೆ ಮಾಡಿ ನೋಡಿ, ಹಿಂದೂವೊಬ್ಬನ ಹತ್ಯೆಯಾದಾಗ ಎಡಪಂಥೀಯ ಉದ್ಧಟರು ಎಂಬ ಪದಪುಂಜ ಬರುತ್ತದೋ ಇಲ್ಲವೋ ಎಂದು. ಖಂಡಿತವಾಗಿಯೂ ಬರುವುದಿಲ್ಲ. ಇದಕ್ಕೆ ಅವರದ್ದೇ ಇತಿಹಾಸ ನಮಗೆ ದಾಖಲೆಯನ್ನು ನೀಡುತ್ತದೆ. ಕರ್ನಾಟಕದಲ್ಲಿ ಕೆಲ ತಿಂಗಳುಗಳ ಹಿಂದೆ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗಲಭೆಗಳಾಯಿತು. ಆಗ ಈ ಮಹಾಶಯರ ಬಳಿ ಖಾಸಗಿ ಚಾನೆಲ್‌ ಒಂದ ನಿರೂಪಕಿ ಕಾವೇರಿ ನೀರಿನ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಯಾವನೋ ಇವರ ಮನೆ ಮೇಲೇ ಕಲ್ಲು ಎಸೆದವರ ಹಾಗೆ ಎಗರಿ ಬಿದ್ದರು. ನಿರೂಪಕಿಗೆ ಬಯ್ದು ಎದ್ದು ಹೋದರು. ಕಡೆಗೆ ಎಲ್ಲ ಮಾಧ್ಯಮಗಳು ಇವರ ಉದ್ಧಟತನವನ್ನು, ಅಹಂಕಾರವನ್ನು ಟಿವಿ ಪರದ ಮೇಲೆ ಬಿತ್ತರಿಸಿ, ಪ್ರಶ್ನಿಸಲು ಶುರುವಿಟ್ಟಾಗ “ನಾನು ಒಬ್ಬ ನಟ, ನನ್ನನ್ನು ನಟನನ್ನಾಗಷ್ಟೇ ನೋಡಿ. ನನ್ನನ್ನು ಇದಕ್ಕೆಲ್ಲ ಎಳೆಯಬೇಡಿ ಎಂದು ಗೋಗರೆದು ಜಾರಿಕೊಂಡಿದ್ದರು. ಆಮೇಲೆ ಆಸಾಮಿ ಕರ್ನಾಟಕದ ಕಡೆ ತಲೆಯೇ ಹಾಕಿರಲಿಲ್ಲ. ಆದರೆ ಇವರು ತಮಿಳುನಾಡಿನ ರೈತರ ಪರ ಬೀದಿಯಲ್ಲೇ ಕುಳಿತು ಹೋರಾಟ ಮಾಡಿದ್ದರು. ಈಗ ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದಿದ್ದಾರೆ. “ನಾನು ಒಬ್ಬ ನಟ, ನನ್ನನ್ನು ನಟನನ್ನಾಗಷ್ಟೇ ನೋಡಿ” ಎಂದು ಹೇಳುವ ಮನುಷ್ಯ ಈಗೇಕೆ ಬಂದಿದ್ದು? ಅಥವಾ ಇವರನ್ನು ಹೇಳಿಕೆ ಕೊಡಿ ಎಂದು ಕುತ್ತಿಗೆ ಪಟ್ಟಿ ಮೇಲೆ ಕುಳಿತಿದ್ದಾದರೂ ಯಾರು? ಅಂದರೆ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ್ದೇನೆಂದರೆ, ಯಾವ ಪಟಾಕಿ ಪ್ರಕಾಶ್‌ ಬುಡದಲ್ಲೇ ಢಂ ಎನ್ನುತ್ತದೆಯೋ ಅಂಥ ವಿಷಯಗಳಿಗೆಲ್ಲ ನಾನೊಬ್ಬ ನಟ, ಲೊಟ್ಟೆ ಲುಸ್ಕು ಎಂದು ಮಾಯವಾಗಿಬಿಡುತ್ತಾರೆ. ಬೇರೆಯವರ ಬುಡದಲ್ಲಿ ಪಟಾಕಿ ಇದ್ದಾಗ ಮಾತ್ರ “ಏನಾಗುತ್ತಿದೆ ಕರ್ನಾಟಕದಲ್ಲಿ?” ಎಂದು ಬಂದುಬಿಡುತ್ತಾರೆ. ಅಲ್ಲಿಗೆ ನೀವೊಬ್ಬ ನಟ ಎನ್ನುವುದನ್ನು ಮತ್ತೊಮ್ಮೆ ಚೆನ್ನಾಗೇ ಸಾಬೀತು ಮಾಡಿದ್ದೀರ. ಪ್ರಕಾಶ್ ರೈ ಅವರೇ ನೀವು ಯಾವ ವಿಷಯದಲ್ಲಿ “ನಾನೊಬ್ಬ ನಟ” ಎಂದು ಬೋರ್ಡ್‌ ನೇತು ಹಾಕಿಕೊಂಡಿರುತ್ತೀರಿ, ಇನ್ನು ಯಾವ ವಿಷಯಕ್ಕೆ ನಿಮ್ಮ ಕಣ್ಣೀರಿನ ಕಟ್ಟೆ ಒಡೆದು, ಹರಿದು ದಳದಳನೇ ಹರಿಯುತ್ತದೆ ಮತ್ತು ನೀವು ಎಷ್ಟು ಹೊತ್ತಿಂದ ಎಷ್ಟು ಹೊತ್ತಿನ ತನಕ ಅಥವಾ ಎಷ್ಟು ತಿಂಗಳುಗಳ ಕಾಲ ಚಿಂತಕ, ಸಮಾಜಪರವಾಗಿರುತ್ತೀರಿ ಎಂದು ಮೊದಲೇ ತಿಳಿಸಿಬಿಡಿ.

ಪ್ರಕಾಶ್‌ ನೀವು ಮೊದಲು ಘಟನೆ ಏನಾಯ್ತು, ಏನಾಗಿಲ್ಲ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ. ನಾಲ್ಕು ನಾಲ್ಕು ಭಾಷೆ ಬಂದರಷ್ಟೇ ಸಾಲದು, ಜತೆಗೆ ಓದಿ
ತಿಳಿದುಕೊಳ್ಳುವುದಕ್ಕೂ ಬರಬೇಕು. ಕಲಬುರ್ಗಿ ಹತ್ಯೆಯನ್ನು ಗೌರಿ ಹತ್ಯೆಯ ಸಮಯದಲ್ಲಿ ನೆನಪಿಸಿಕೊಂಡಾಗಲೇ ತಿಳಿಯಿತು ನಿಮಗೆ ಕಲಬುರ್ಗಿ ಹತ್ಯೆಯ ಬಗ್ಗೆ
ನಯಾಪೈಸೆ ಗೊತ್ತಿಲ್ಲ ಎಂದು. ಅಷ್ಟರ ಮಟ್ಟಿಗಿದೆ ನಿಮ್ಮ ಬುದ್ಧಿಮತ್ತೆ. ಇನ್ನು ನಿನ್ನೆ ನಡೆದಿರುವ ಘಟನೆ ಬಗ್ಗೆ ನಿನ್ನೆ ರಾತ್ರಿಯೇ ಸಂಶೋಧಿಸುವುದೆಲ್ಲ ದೂರವೇ
ಉಳಿಯಿತು. ಗೌರಿ ಮೇಲೆ ನಿಮಗೆ ನಿಜವಾಗಿಯೂ ಗೌರವವಿದ್ದರೆ, ಅವರ ಸಾವು ನಿಮ್ಮ ಹೃದಯದ ತಂತಿಯನ್ನು ಮೀಟಿದ್ದರೆ, ಅವರನ್ನು ಕೊಲೆ ಮಾಡಿದವರ‍್ಯಾರು ಎಂದು ಪೊಲೀಸರಿಗೆ ಮಾಹಿತಿ ನೀಡಿ. ಅದನ್ನು ಬಿಟ್ಟು ಬಲಪಂಥೀಯ ಉದ್ಧಟರು, ಬಲಪಂಥೀಯರ ದ್ವೇಷ ಎಂದು ಬಲಪಂಥೀಯರಿಗೆ ಬಯ್ದು ತೆವಲು ತೀರಿಸಿಕೊಳ್ಳಬೇಡಿ. ಯಾರು ಕೊಲೆ ಮಾಡಿದ್ದಾರೆ, ಯಾರನ್ನು ಖಂಡಿಸಬೇಕು ಎಂದು ಹೇಳಲು ನೀವೇನು ಕೋರ್ಟೂ ಅಲ್ಲ, ಜಡ್ಜೂ ಅಲ್ಲ. ಗೌರಿ ಆತ್ಮಕ್ಕೆ ನೀವು ಇಂಥ ಮಾತಾಡಿ ಶಾಂತಿ ಕೊಡುವುದು ಬೇಕಿಲ್ಲ. ಸುಮ್ಮನಿದ್ದರೆ ಅಷ್ಟೇ ಸಾಕು.

ಪ್ರಕಾಶ್‌ ನಿಮ್ಮ ಬಣ್ಣದ ಮಾತುಗಳು ಏನಿದ್ದರೂ ಸಿನಿಮಾದಲ್ಲಿ ಮಾತ್ರ ಇಟ್ಟುಕೊಳ್ಳಿ. ಪರದೆಯ ಹೊರ ಬಂದು ಏನೇನೋ ಮಾತಾಡಿ ಪೆಕರನಾಗಬೇಡಿ. ಏಕೆಂದರೆ ನಿಮ್ಮ ಮಾತನ್ನು ನಂಬಲು ಜನರು ಯಾರೂ ನಿಮ್ಮ ಸಿನಿಮಾ ನೊಡುತ್ತಿಲ್ಲ ಎಂಬುದನ್ನು ಮರೆಯದಿರಿ. ನಿಮ್ಮ ನಾನೊಬ್ಬ ನಟ ಎಂಬ ನಾಟಕ ನೋಡಿ ನೋಡಿ ಜನರೂ ರೋಸಿ ಹೋಗಿದ್ದಾರೆ.

-ಚಿರು ಭಟ್

Tags

Related Articles

Close