ಪ್ರಚಲಿತ

ಪ್ರಕಾಶ್ ರೈ / ರಾಜ್ ಗೆ ಪ್ರತಾಪ್ ಸಿಂಹರಿಂದ ಕೆಲವು ನೇರ ಪ್ರಶ್ನೆಗಳು

ಪ್ರಕಾಶ್ ರೈ ಅವರೇ ನಮಸ್ಕಾರ…

ಮೊನ್ನೆ ನೀವು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅಂದಾಗ ಜೋರು ನಗು ಬಂದಿತು. ಯಾಕೆ ಗೊತ್ತೇ? ಆಕ್ಚುವಲಿ ನಿಮ್ಮ ವಿರುದ್ಧ ಯಾರು ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತು? ನನ್ನಂತಹಾ ಜನಸಾಮಾನ್ಯರು ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತು.

ಯಾಕೆಂದರೆ ನೀವು ಎತ್ತಿರುವ ಪ್ರಶ್ನೆಗಳು ಹೇಗಿತ್ತು ಎಂದು ಯೋಚಿಸಿ. ಆದರೆ ನೀವು ಸೈದ್ದಾಂತಿಕವಾಗಿ ವಾದ ನಡೆಸಿರುವುದರಿಂದ ನಾವೂ ಕೂಡಾ ಸೈದ್ಧಾಂತಿಕವಾಗಿಯೇ ಉತ್ತರ ಕೊಡುತ್ತಾ ಬಂದಿದ್ದೆವು. ಆದರೆ ನಿಮಗೆ ಪ್ರತಾಪ್ ಸಿಂಹ ಎತ್ತಿದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲು ತಾಖತ್ ಇಲ್ಲದೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬೆದರಿಕೆ ಹಾಕಿದ್ದೀರಿ.. ಓಕೆ… ಹಾಕಿಬಿಡಿ..

ಇಲ್ಲಿ ನಾನು ಪ್ರತಾಪ್ ಸಿಂಹ ಅವರು ನಿಮ್ಮ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳನ್ನೇ ಕೇಳುತ್ತಿದ್ದೇನೆ. ಅದಕ್ಕೆ ನೀವು ಸೈದ್ಧಾಂತಿಕವಾಗಿ ಉತ್ತರಿಸುತ್ತೀರಾ? ಅಷ್ಟೊಂದು ಧೈರ್ಯ ನಿಮ್ಮಲ್ಲಿದೆಯಾ? ಅಷ್ಟಕ್ಕೂ ನಿಮ್ಮ ಮಾನ ನಷ್ಟವಾಗುವಂತಹಾ ಪ್ರಶ್ನೆಗಳನ್ನು ಪ್ರತಾಪ್ ಸಿಂಹ ಎಲ್ಲಿ ಕೇಳಿದ್ದಾರೆ? ಅವರು ಕೇಳುವ ಪ್ರಶ್ನೆಗಳಿಗೆ ಸೈದ್ಧಾಂತಿಕವಾಗಿ ಉತ್ತರಿಸಿದ್ದರೆ ಇಂದು ನೀವು ಉನ್ನತ ಮಟ್ಟಕ್ಕೆ ಏರುತ್ತಿದ್ದಿರಿ. ಆದರೆ ಅದು ಬಿಟ್ಟು ನೀವು ಮಾಡಿದ್ದೇನು… ನಿಮಗೆ ತಾಖತ್ ಇದ್ದರೆ ಪ್ರತಾಪ್ ಸಿಂಹ ಎತ್ತಿದ ಪ್ರಶ್ನೆಯನ್ನೇ ಕೇಳುತ್ತೇನೆ. ಉತ್ತರಿಸಿ ನೋಡೋಣ.. ಇದು ನಿಮಗೆ ನನ್ನ ಬಹಿರಂಗ ಸವಾಲು…

ಪ್ರತಾಪ್ ಸಿಂಹ ಎತ್ತಿದ ಪ್ರಶ್ನೆಗಳು..

1. ನಿಮ್ಮ ನಿಜವಾದ ಹೆಸರೇನು? ಪ್ರಕಾಶ್ ರೈಯೋ ಅಥವಾ ಪ್ರಕಾಶ್ ರಾಜೋ? ಎರಡು ಹೆಸರು, ಎರಡು ಮುಖ, ಇಬ್ಬಂದಿ ನಿಲುವು.. ಎಡಬಿಡಂಗಿ ಮಾತು ಯಾಕೆ ಸ್ವಾಮಿ? ಇದು ಪ್ರತಾಪ್ ಸಿಂಹ ಎತ್ತಿದ ಮೊದಲ ಪ್ರಶ್ನೆ.. ಇಲ್ಲಿ ಪ್ರತಾಪ್‍ಗೆ ಇರುವ ಸಂಶಯವೇ ನನ್ನ ಸಂಶಯ ಕೂಡಾ.. ಹಾಗಾದರೆ ನಿಮ್ಮ ನಿಜ ನಾಮಧೇಯ ಏನು ಎಂಬುವುದನ್ನು ಹಿನ್ನೆಲೆ ಮುನ್ನೆಲೆಯೊಂದಿಗೆ ವಿವರಿಸಿ.. ಸುಮ್ನೆ ಎರಡೆರಡು ಹೆಸರು ಯಾಕೆ?

2. ಗೌರಿ ಲಂಕೇಶ್ ಹತ್ಯೆಯಾದಾಗ ಆಕೆ ಆಪ್ತ ಗೆಳತಿ ಎಂದು ನಿಮಗೆ ನೋವು, ದುಃಖ, ಹತಾಶೆ ಉಂಟಾದವು. ನಾವೂ ಕೂಡಾ ನಮ್ಮ ಕರ್ನಾಟಕದಲ್ಲಿ 12 ಮಂದಿ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ನಮಗೂ ನೋವು, ದುಃಖ, ಹತಾಶೆ ಜೊತೆಗೆ ಆಕ್ರೋಶವೂ ಇದೆ. ಆದರೆ ಗೌರಿಗೆ ಮಿಡಿದ ನಿಮ್ಮ ಮನ ನಮ್ಮ 12 ಜನ ಕಾರ್ಯಕರ್ತರು ಕೊಲೆಯಾದಾಗ ಕನಿಷ್ಠ ಸಂತಾಪವನ್ನೂ ವ್ಯಕ್ತಪಡಿಸಿಲ್ಲ ಏಕೆ? ನಿಮಗೆ ಸಾವಲ್ಲೂ ನಮ್ಮವರು, ಬೇರೆಯವರು ಎಂಬ ತಾರತಮ್ಯ ಯಾಕೆ? ಈ ಬಗ್ಗೆ ನಿಮಗೆ ಉತ್ತರಿಸಲು ಸಾಧ್ಯವೇ ಪ್ರಕಾಶ್?

3. ಗೌರಿ ಹತ್ಯೆಯಾದಾಗ ನಿಮಗೆ ಹತಾಶೆ, ದುಃಖ, ಉಂಟಾಯಿತು. ಆದರೆ ನಿಮ್ಮೂರಿನವರೇ ಆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾದಾಗ ಯಾಕೆ ಆಗಲಿಲ್ಲ? ನಿಮ್ಮ ಸ್ನೇಹಿತರಾಗಿದ್ದರೆ ಮಾತ್ರ ನಿಮ್ಮ ಮನ ಮಿಡಿಯುವುದೇ? ಯಾಕೆ ಮಿಡಿಯಲಿಲ್ಲ ಪ್ರಕಾಶ್? ಪ್ರತಾಪ್ ಸಿಂಹ ಎತ್ತಿದ ಪ್ರಶ್ನೆಯೂ ನನ್ನಂತಹಾ ನೂರಾರು ಮಂದಿಯನ್ನು ಕಾಡಲಾರಂಭಿಸಿದೆ.. ಉತ್ತರಿಸುತ್ತೀರಾ?

4. ಕನ್ನಡ ಚಾನೆಲ್‍ನ ಸಂದರ್ಶನ ಒಂದರಲ್ಲಿ ಕಾವೇರಿ ವಿಷಯವಾಗಿ ಕೇಳಿದ ಪ್ರಶ್ನೆಗೆ ನಿರೂಪಕಿಯ ಮೇಲೆ ಸಿಟ್ಟಾಗಿ ನಾನು ಒಬ್ಬ ನಟ, ನಟನಾಗಲು ಬಿಡಿ ಎಂದು ಅಬ್ಬರಿಸಿ ಹೊರ ನಡೆದಿರಲ್ಲಾ ತಮಿಳುನಾಡು ರೈತರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದರಲ್ಲ ಆಗ ನೀವೊಬ್ಬ ನಟನಷ್ಟೆ ಎಂಬುವುದು ಮರೆತು ಹೋಗಿತ್ತಾ ಅಥವಾ ನೀವು ಕನ್ನಡಿಗರ ಪರವೋ ಅಥವಾ ತಮಿಳರ ಪರವೋ? ವಸಿ ಬಿಡಿಸಿ ಹೇಳಿ ಸ್ವಾಮಿ…?

5. ಗೌರಿ ಲಂಕೇಶ್ ಹತ್ಯೆಯಾದ ಬೆನ್ನಲ್ಲೇ ವಿನಾಕಾರಣ ಸಂಘಪರಿವಾರದ ಮೇಲೆ ನೀವು ಗೂಬೆ ಕೂರಿಸಿದ್ರಿ. ಮೋದಿ ಮತ್ತು ಯೋಗಿಯನ್ನು ಎಲ್ಲರಿಗಿಂತ ದೊಡ್ಡ ನಟರು ಎಂದು ಜರಿದಿರಿ. ನಿಜವಾಗಿಯೂ ನಾವು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬೇಕು ನೀವಲ್ಲ. ಅಲ್ಲವೇ?

6. ಗೌರಿ ಲಂಕೇಶ್ ಪತ್ರಿಕೆಯ ಹಳೆಯ ಸಂಚಿಕೆಗಳ ಮುಖಪುಟವನ್ನು ಹಾಗೂ ಅವುಗಳ ಹೆಡ್‍ಲೈನ್ ನೋಡಿ. ಬಳಸಿರುವ ಭಾಷೆ ಗಮನಿಸಿ ಸಾಕು. ಯಾರು ಯಾರ ವಿರುದ್ಧ ಮಾನನಷ್ಟ ಹಾಗೂ ತೇಜೋವಧೆ ಮೊಕದ್ದಮೆ ಹಾಕಬೇಕಿತ್ತು ಎಂದು ಇದನ್ನು ನೋಡುವಾಗ ಅರಿವಾಗುತ್ತದೆ. ಬೇಕಾದರೆ ಪತ್ರಿಕೆಯ ಕೆಲವು ಸ್ಯಾಂಪಲ್‍ಗಳನ್ನು ನೋಡಿ..

ಒಟ್ಟು ಆರು ಪ್ರಶ್ನೆಗಳನ್ನು ಪ್ರತಾಪ್ ಸಿಂಹ ಕೇಳಿದ್ದಾರೆ. ನೀವು ಇದುವರೆಗೂ ಒಂದು ಪ್ರಶ್ನೆಗಾದರೂ ಉತ್ತರ ನೀಡಿದ್ದೀರಾ? ಯಾಕೆ ನೀಡಿಲ್ಲ? ಅದು ಬಿಟ್ಟು ಟ್ರೋಲ್ ಗೂಂಡಾಗಿರಿ, ತೇಜೋವಧೆ, ಇಂತಿಷ್ಟು ದಿನ ಪ್ರತಾಪ್ ಉತ್ತರಿಸಬೇಕು ಎಂದು ಒತ್ತಡ ಹೇರಿದಿರಲ್ಲ ಯಾಕೆ ಸ್ವಾಮಿ ಈ ಇಬ್ಬಂದಿತನ? ನಿಮಗೆ ಸೈದ್ಧಾಂತಿಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲವೇ? ನೀವು ಪ್ರತಾಪ್ ಸಿಂಹರಿಗೆ ಮಾನನಷ್ಟ ಮೊಕದ್ದಮೆ ಹಾಕಿ ಏನು ಸಾಧಿಸಬೇಕೆಂದು ಹೊರಟಿದ್ದೀರಿ? ಪ್ರತಾಪ್ ಕೇಳಿದ ಆರು ಪ್ರಶ್ನೆಗಳಿಗೆ ಉತ್ತರಿಸಲಾಗದ ನೀವು ಅವರ ಮೇಲೆ ಯಾವ ಮುಖ ಹೊತ್ತು ಮಾನನಷ್ಟ ಮೊಕದ್ದಮೆ ಹಾಕುತೀರಿ?

ಇಷ್ಟು ದೊಡ್ಡ ಸ್ಟಾರ್ ನಟನಾಗಿ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ? ನಿಮ್ಮ ನಿಲುವೇನು? ನಿಮ್ಮ ಸಿದ್ಧಾಂತವೇನು? ಎಡಸಿದ್ಧಾಂತದಲ್ಲೇ ಕಾಲ ಕಳೆಯುತ್ತಾ ಅದನ್ನೇ ಜಪಿಸುತ್ತಾ ಕಾಲ ಕಳೆಯುವ ನೀವು ಬೇರೆಯವರ ನೋವುಗಳು ಯಾಕೆ ಅರ್ಥವಾಗುವುದಿಲ್ಲ? ಈ ಎಲ್ಲಾ ಪ್ರಶ್ನೆಗಳನ್ನು ಪ್ರತಾಪ್ ಸಿಂಹ ಅವರು ಕೇಳಿದ್ದು ತಪ್ಪಾ? ಅಥವಾ ನಿಮ್ಮನ್ನು ಪ್ರಶ್ನೆಯನ್ನೇ ಮಾಡಬಾರದ ಪ್ರಶ್ನಾತೀತ ವ್ಯಕ್ತಿಯೇ? ಪ್ರಶ್ನೆ ಕೇಳುವುದರಿಂದ ನಿಮ್ಮ ಗಂಟೇನೂ ಹೋಗುತ್ತದೆ?

ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ. ಯಾರು ಯಾರನ್ನು ಬೇಕಾದರೂ ಪ್ರಶ್ನಿಸಬಹುದು ಎಂಬುವುದನ್ನು ಮರೆತಿರಾ ಸ್ವಾಮಿ? ಅಷ್ಟಕ್ಕೂ ನಿಮಗೆ ಏನಾಗಿದೆ? ಪ್ರಶ್ನೆ ಮಾಡುವವರ ಮೇಲೆಲ್ಲಾ ಮಾನನಷ್ಟ ಮೊಕದ್ದಮೆ ಹೂಡುವುದಾದರೆ ಎಷ್ಟು ಮಂದಿ ನಿಮ್ಮಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ಒಮ್ಮೆ ಫೇಸ್‍ಬುಕ್‍ನತ್ತ ಕಣ್ಣಾಡಿಸಿ. ಅವರೆಲ್ಲರ ಮೇಲೆಯೂ ಮಾನನಷ್ಟ ಮೊಕದ್ದಮೆ ಹೂಡಿ.. ಅಥವಾ ನಿಮ್ಮನ್ನು ಟ್ರೋಲ್ ಮಾಡಬಾರದೇ? ನೀವು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ನಿಮ್ಮ ಭಜನೆ ಮಾಡಬೇಕೆಂದು ಅಂದುಕೊಂಡಿದ್ದೀರಾ?

ನೀವು ಎಲ್ಲರಿಗೂ ಪೂರಕವಾಗಿ ಎಲ್ಲರಿಗೂ ಬೇಕಾಗುವಂತ ಪ್ರಶ್ನೆಯನ್ನು ಕೇಳಿದ್ದರೆ ಖಂಡಿತಾ ನಿಮ್ಮನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಅದು ಬಿಟ್ಟು ನೀವು ಒಬ್ಬರನ್ನು ನೋಯಿಸುವ ರೀತಿಯಲ್ಲಿ, ಒಬ್ಬರ ಸಿದ್ಧಾಂತವನ್ನು ಅವಹೇಳನ ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಿದ್ದೀರಿ.. ಅದು ಸರಿಯೇ.. ನಿಮ್ಮನ್ನು ಪ್ರತಾಪ್ ಒಬ್ಬರಷ್ಟೇ ಅಲ್ಲ ಕರ್ನಾಟಕದ ಹಲವಾರು ಮಂದಿ ಪ್ರಶ್ನಿಸಿದ್ದಾರೆ ಎನ್ನುವುದನ್ನು ಮರೆತಿದ್ದೀರಾ?

ಇಲ್ಲಿ ಪ್ರತಾಪ್ ಸಿಂಹ ಕೇಳಿರುವ ಪ್ರಶ್ನೆಗಳು ಕೇವಲ ಪ್ರತಾಪರಿಗಷ್ಟೇ ಮೀಸಲಾಗಿಲ್ಲ. ಬದಲಿಗೆ ನನ್ನಂತಹಾ ಸಾವಿರಾರು ಮಂದಿಯ ಪ್ರಶ್ನೆಯೂ ಆಗಿದೆ. ನಿಮ್ಮ ಉತ್ತರಗಳಿಗೆ ನಾನು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಒಂದು ವೇದಿಕೆಯಲ್ಲಿ ಈ ಆರು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿ. ಆಮೇಲೆ ನಿಮ್ಮನ್ನು ಯಾವತ್ತೂ ಪ್ರಶ್ನೆಯನ್ನೇ ಕೇಳುವುದಿಲ್ಲ. ಇದು ಮಾತ್ರ ಸತ್ಯ. ಯಾಕೆಂದರೆ ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ.

ಒಂದು ವೇಳೆ ನಾನು ತಪ್ಪು ಮಾಡಿದ್ರೆ ನೀವು ನನ್ನನ್ನೂ ಪ್ರಶ್ನಿಸಬಹುದು. ನಮ್ಮ ಪ್ರಶ್ನೆಯಲ್ಲಿ ತಪ್ಪಿದ್ದರೆ ಅದನ್ನು ಧಾರಾಳವಾಗಿ ನೀವು ಕೇಳಬಹುದು. ಆದರೆ ಅದು ಬಿಟ್ಟು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬೆದರಿಸಿ ಪ್ರಶ್ನೆಗಳಿಂದ ಪಲಾಯನ ಮಾಡಬೇಡಿ. ನಿಮಗೆ ಉತ್ತರಿಸಲಾಗದಿದ್ದರೆ ನಿಮ್ಮ ಮೇಲೆ ನಾವೆಲ್ಲಾ ಸೇರಿ ಮಾನನಷ್ಟ ಮೊಕ್ಕದ್ದಮೆ ಹೂಡಬೇಕಾಗುತ್ತದೆ. ಚಾಯಿಸ್ ನಿಮ್ಮದು. ಯಾವಾಗ ಉತ್ತರಿಸುತ್ತೀರಿ ಎಂದು ಕಾಯುತ್ತಾ ಇರುತ್ತೇವೆ…

ಚೇಕಿತಾನ

Related Articles

Close