ಪ್ರಚಲಿತ

ಬಯ್ಯಿಸಿಕೊಂಡೂ ನಿಮ್ಮ ಸಿನಿಮಾ ನೋಡುವ ಶೋಕಿ ಹಿಂದೂಗಳಿಗಿಲ್ಲ, ಚೇತನ್‌!

ಮೊದಲಿಗೇ ಹೇಳಿಬಿಡ್ತೀನಿ, ನಾನೇನು ನಟ ಚೇತನ್‌ ಅವರ ವಿರೋಧಿಯಲ್ಲ. ಅವರಿಂದ ನನಗೆ ಆಗಬೇಕಾಗಿದ್ದೇನೂ ಇಲ್ಲ. ನಿಜ ಹೇಳಬೇಕೆಂದರೆ, ನಾವಿಬ್ಬರೂ ಪರಸ್ಪರ ಮಾತಾಡಿಕೊಳ್ಳುವಷ್ಟು ಪರಿಚಿತರು. ಈಗ ಮೊನ್ನೆ ತಾನೆ, ನಾನು ಅವರಿಗೆ ಫೋನ್‌ ಮಾಡಿ, ನನ್ನ ಸ್ನೇಹಿತರೊಬ್ಬರ ಹೊಸ ಜಿಮ್‌ ಉದ್ಘಾಟನೆಗೆ ನೀವೇ ಬರಬೇಕು ಎಂದು ಕರೆದಿದ್ದೆ. ಸಿದ್ಧಾಂತಗಳೇನೇ ಇರಲಿ, ದೇಹವನ್ನು ಜಿಮ್‌ ಮಾಡಿ ಫಿಟ್‌ ಆಗಿಟ್ಟುಕೊಂಡಿದ್ದಾರೆ ಎನ್ನುವುದನ್ನು ತಲೆಯಲ್ಲಿಟ್ಟುಕೊಂಡು ಮಾತ್ರ ನಾನು ಅವರನ್ನು ಆಹ್ವಾನಿಸಿದ್ದೆ. ವೈಯಕ್ತಿಕವಾಗಿ ಅವರು ಇಷ್ಟು ಪರಿಚಯವಿದ್ದರೂ ಅವರ ಕೆಲವು ನಿಲುವುಗಳನ್ನು ನಾನು ಸುತಾರಾಂ ಒಪ್ಪಿಕೊಳ್ಳಲು ತಯಾರಿಲ್ಲ. ಕಾರಣ ಅವರು ಅದರ ಸಂಪೂರ್ಣ ಸತ್ಯ ತಿಳಿದುಕೊಳ್ಳದೇ ಇರುವುದು.
ಇತ್ತೀಚೆಗೆ, ಅಂದರೆ, ಕಳೆದ ಶುಕ್ರವಾರದಂದು ಅವರ ಸಿನಿಮಾ ತೆರೆಕಂಡಿದೆ. ಈ ಸಮಯದಲ್ಲೇ ಕೆಲವೆಡೆ ಅವರ ಸಿನಿಮಾ ರದ್ದು ಮಾಡಿಸಿದ್ದಾರೆ ಎಂಬ ಸುದ್ದಿ ಬಂತು. ಕಾರಣ ಬಹಳ ಸ್ಪಷ್ಟ. ಇಷ್ಟು ದಿನ ಚೇತನ್‌ ಕೆಲವು ಕಾರ್ಯಕ್ರಮದಲ್ಲಿ, ತಾವು ಸಿನಿಮಾ ಹೊರಗೂ ಹೀರೋ ಎಂಬಂತೆ ವೀರಾವೇಶದಲ್ಲಿ ಆಡಿದ್ದ ಮಾತುಗಳು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಹಿಂದುತ್ವದ ಬಗ್ಗೆ ಅವರಿಗಿರುವ ಅಸಡ್ಡೆ. ಹಿಂದುತ್ವವೇ ಸರಿ ಇಲ್ಲ ಎನ್ನುವ ಅವರ ಮನೋಭಾವ.

ಹಿಂದುತ್ವವನ್ನು ವಿರೋಧಿಸುತ್ತೇನೆ ಎನ್ನುವ ಚೇತನ್‌ ತಮ್ಮ ಸಿನಿಮಾವನ್ನು ಯಾವುದಾದರೂ ಬೇರೆ ಧರ್ಮದ ಏರಿಯಾಗಳಲ್ಲಿ ಸಿನಿಮಾ ಪ್ರದರ್ಶಿಸಬೇಕಲ್ಲವೇ? ಅಷ್ಟು ಹಿಂದುತ್ವದ ಮೇಲೆ ಅಸಡ್ಡೆಯಿರುವವರು ಏಕೆ ಶಿವಾಜಿನಗರದಲ್ಲಿ ಮಾತ್ರ ಸಿನಿಮಾ ರಿಲೀಸ್‌ ಮಾಡಬಾರದು? ಈ ಪ್ರಶ್ನೆಯೂ ತರ್ಕವಿಲ್ಲದ್ದು ಅನಿಸುತ್ತದೆ ಅಲ್ವಾ? ಹೀಗಿರಬೇಕಾದರೆ ಯಾಕಾಗಿ ಹಿಂದುತ್ವದ ಮೇಲೆ ಚೇತನ್‌ ತಮ್ಮ ದ್ವೇಷಕಾರಬೇಕು?
ನಾನು ಮೊದಲಿನಿಂದಲೂ ಚೇತನ್‌ ಅವರನ್ನು ಗಮನಿಸುತ್ತಿದ್ದೇನೆ. ಅವರು ದಿಡ್ಡಳ್ಳಿ ಪ್ರಕರಣದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಪರ ನಿಂತು ಅವರನ್ನು ನಿರಾಶ್ರಿತರನ್ನಾಗಿ ಮಾಡುತ್ತಿರುವುದನ್ನು ವಿರೋಧಿಸಿ ಅವರು ಹೋರಾಟ ಮಾಡುತ್ತಿದ್ದಾಗ ಅದನ್ನು ನಾನೂ ಬೆಂಬಲಿಸಿದ್ದೆ.

ಕೆಲವು ರಾಜಕಾರಣಿಗಳು ನನಗೆ ಚೇತನ್‌ರ ಮೂಲ ಉದ್ದೇಶ ಏನಿದೆ ಹಾಗೂ ಅವರನ್ನು ಬೆಂಬಲಿಸುತ್ತಿರುವುದು ಯಾರು ಎಂದು ಹೇಳಿದಾಗಲೂ ನಾನದನ್ನು ಒಪ್ಪಿರಲಿಲ್ಲ. ಆದರೆ ನನ್ನ ಪ್ರಕಾರ ಬಹಳ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದು ದಿಡ್ಡಳ್ಳಿ ಪ್ರಕರಣವೊಂದರಲ್ಲಿ ಮಾತ್ರ. ಅಲ್ಲಿಂದ ನಟ ಚೇತನ್‌ಗೆ ಹೋರಾಟಗಾರ ಎಂಬ ಪಟ್ಟ ಬಂತು. ಅಲ್ಲಿಂದ ಎಡಪಂಥೀಯರು, ಚಿಂತಕರು, ಪ್ರಗತಿಪರರು ಎಂಬ ಬೋರ್ಡನ್ನು ಸ್ವತಃ ತಾವೇ ನೇತುಹಾಕಿಕೊಂಡಿರುವವರೆಲ್ಲ ಪರಿಚಯ ಆದರು. ಚೇತನ್‌ರ ವಾದ, ಮಾತು, ನಿಲುವುಗಳೆಲ್ಲ ಎಡಬಿಡಂಗಿಗಳ ಹಾಗೆ ಆಗಿದ್ದು ಅಲ್ಲಿಂದಲೇ.
ನಟ ಚೇತನ್‌ ಅವರು ಎಲ್ಲಾದರೂ ಇಸ್ಲಾಮಿಕ್‌ ಮೂಲಭೂತವಾದಿಗಳು, ಕ್ರಿಶ್ಚಿಯನ್ನರ ಅಟ್ಟಹಾಸ, ಮತಾಂತರ ಇಂಥವುಗಳನ್ನೇನಾದರೂ ವಿರೋಧಿಸಿದ್ದಾರಾ? ಇಲ್ಲ… ಅಂಥ ವಿಡಿಯೋ ನಿಮಗೆ ಗೂಗಲ್‌ನಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಅಸಲಿಗೆ ಅವರು ಇಸ್ಲಾಮಿಕ್‌ ಮೂಲಭೂತವಾದಿಗಳನ್ನು ಕೇವಲ ಮನಸ್ಸಲ್ಲೇ ವಿರೋಧಿಸುತ್ತಿರಬಹಹುದು, ಆದರೆ ಹಿಂದುತ್ವ, ಬ್ರಾಹ್ಮಣ್ಯವನ್ನು ಮಾತ್ರ ಮೈಕ್‌ ಮುಂದೆ, ನಾಲ್ಕು ಜನರ ಚಪ್ಪಾಳೆ ಬರುವವರೆಗೂ ವಿರೋಧಿಸುತ್ತಾರೆ.
ಕೇರಳದಲ್ಲಿ ಸಾಲು ಸಾಲು ಹತ್ಯೆಗಳಾಯ್ತು.

ಚೇತನ್‌ ಪತ್ತೆ ಇಲ್ಲ… ಬೆಂಗಳೂರಿನಲ್ಲೇ ಸಂಘ ಪರಿವಾರ ಮತ್ತು ಹಿಂದೂಗಳ ಹತ್ಯೆಯಾಯ್ತು. ಚೇತನ್‌ ಇದ್ದಾರೆ ಎಂಬುದೇ ಜನರಿಗೆ ತಿಳಿಯಲಿಲ್ಲ. ಗೌರಿ ಲಂಕೇಶ್‌ ಹತ್ಯೆ ಆಯ್ತು, ಮೈ‌ಕ್‌ ಮುಂದೆ, ಮತ್ತು ಊರಲ್ಲಿರುವ ಟಿವಿ ಚಾನೆಲ್‌ ತುಂಬ ಚೇತನ್‌ ಚೇತನ್‌ ಚೇತನ್‌… ಸರಿ ಗೌರಿ ಲಂಕೇಶ್‌ ಒಬ್ಬ ಪತ್ರಕರ್ತೆ, ಪತ್ರಿಕೋದ್ಯಮದ ಮೂಲಕ ಸಮಾಜವನ್ನು ತಿದ್ದಿ, ತೀಡಿ ಉದ್ಧಾರ ಮಾಡುತ್ತಲೇ ಇದ್ದರು, ಅದಕ್ಕೆ ಚೇತನ್‌ ಗೌರಿ ಪರ ಧ್ವನಿ ಎತ್ತಿದ್ದರೂ ಎಂದೇ ತಿಳಿಯೋಣ.

ಆದರೆ ಎರಡ್ಮೂರು ದಿನದ ಹಿಂದಷ್ಟೇ ಬೆಂಗಳೂರಿನ ಇಂಡಿಯಾ ಟುಡೇ ಕಚೇರಿಯ ಮೇಲೆ ಶಿಯಾ ಮುಸ್ಲಿಮರು ಕ‌ಲ್ಲು ಎಸೆಯುತ್ತಾ, ರೋಹಿತ್‌ ಸರ್ದಾನಾ ಎಂಬ ಪತ್ರಕರ್ತನ ವಿರುದ್ಧ ಘೋಷಣೆ ಕೂಗುತ್ತಿದ್ದರು. ರೋಹಿತ್‌ ಸರ್ದಾನಾ ನಿನ್ನನ್ನು ಕೊಂದೇ ಬಿಡುತ್ತೇವೆ, ನಿನ್ನ ಅಮ್ಮ ಅಕ್ಕನನ್ನು ಅತ್ಯಾಚಾರ ಮಾಡುತ್ತೇವೆ, ನಿನ್ನ ರುಂಡ ಚೆಂಡಾಡುತ್ತೇವೆ ಎಂದು ದುಬೈ, ಕತಾರ್‌, ಪಾಕಿಸ್ತಾನ, ಬಾಂಗ್ಲಾದೇಶ, ಯುಎಸ್‌ಎ, ಕೇರಳ, ಬೆಂಗಳೂರು ಎಲ್ಲ ಕಡೆಯಿಂದಲೂ ಬೆದರಿಕೆ ಕರೆಗಳು ಅವರಿಗೆ ಬಂದ ಬಗ್ಗೆ ಇಲ್ಲೇ ಬೆಂಗಳೂರಲ್ಲೇ ಇದ್ದು ಒಂದೇ ಒಂದು ಮಾತಾಡಿಲ್ಲವಲ್ಲ?

ಶಿಯಾ ಮುಸ್ಲಿಮರು ಹಾಗೆ ಕಲ್ಲು ಎಸೆಯುತ್ತಿರುವುದು, ಅವಾಜ್‌ ಹಾಕುತ್ತಿರುವುದು ಸಾಂವಿಧಾನಿಕವೇ? ಅದನ್ನು ಚೇತನ್‌ ಒಪ್ಪುತ್ತಾರೆಯೇ? ಚೇತನ್‌ ನಿಜವಾಗಿಯೂ ಮಾನವತಾವಾದದ, ಪ್ರಗತಿಪರ ವಾದವನ್ನು ಮಾಡುತ್ತಿದಾರೆ ಎಂದಾಗಿದ್ದರೆ ಜನರು ನಿಜವಾಗಿಯೂ ಅವರನ್ನು ಒಪ್ಪುತ್ತಿದ್ದರು. ನನ್ನ ಸಿನಿಮಾ ಪ್ರದರ್ಶನವಾಗುವುದಕ್ಕೆ ಬಿಡಿ ಎಂದು ಚೇತನ್‌ ಗೋಗರೆಯುವ ಪರಿಸ್ಥಿತಿ ಬರುತ್ತಿರಲಿಲ್ಲ.

ಚೇತನ್‌ ಬಹಳ ಸೆಲೆಕ್ಟಿವ್‌ ಆಗಿ, ಯಾವುದಕ್ಕೆ ಹೋರಾಟ ಮಾಡಬೇಕು, ಯಾವುದಕ್ಕೆ ಬಾಯಿ ಮುಚ್ಚಿಕೊಂಡಿರಬೇಕು ಎಂದು ಹೋರಾಟ ಮಾಡುತ್ತಿರುವುದಕ್ಕೆ ಮತ್ತು ಕೇವಲ ಹಿಂದೂ ಧರ್ಮದ ಬಗ್ಗೆ ವಿಷ ಕಾರುತ್ತಿರುವುದಕ್ಕಾಗಿಯೇ ಚೇತನ್‌ಗೆ ಈ ಪರಿಸ್ಥಿತಿ ಬಂದಿದೆ.
ಇಷ್ಟು ವಿಷ ಕಾರುವ ಮನಸ್ಥಿತಿಯನ್ನಿಟ್ಟುಕೊಂಡು ನನ್ನ ಸಿನಿಮಾವನ್ನು ಅದೇ ಹಿಂದೂಗಳು ನೋಡಬೇಕು, ಗೆಲ್ಲಿಸಬೇಕು ಎಂದು ಚೇತನ್‌ ಹೇಗೆ ಅಪೇಕ್ಷಿಸುತ್ತಾರೆ ಹೇಳಿ? ಅಥವಾ ಯಾವ ಬಾಯಿಯಿಂದ ಕೇಳುತ್ತಾರೆ?
ಈಗ ಅತಿರಥ ಸಿನಿಮಾದ ಹೀರೋ ಚೇತನ್‌ ಹೇಳುತ್ತಾರೆ, ನಮ್ಮ ಸಿನಿಮಾದಲ್ಲಿ ನನ್ನದು ಒಂದು ಸಣ್ಣ ಪಾತ್ರ ಅಷ್ಟೇ, ಇನ್ನೂ ಬಹಳಷ್ಟು ಜನ ತಂತ್ರಜ್ಞರು, ನಟರು, ನಿರ್ದೇಶಕರು ಎಲ್ಲರೂ ಕೆಲಸ ಮಾಡಿದ್ದಾರೆ, ನನ್ನೊಬ್ಬನಿಂದ ಅವರ ಕುಟುಂಬಕ್ಕೆಲ್ಲ ತೊಂದರೆ ಆಗುವುದು ಬೇಡ ಎಂದು ಫೇಸ್ಬುಕ್‌ ಪೋಸ್ಟ್‌ ಹಾಕಿದ್ದಾರೆ.

ಈ ಪರಿಜ್ಞಾನ ಚೇತನ್‌ಗೆ ಸಿನಿಮಾ ಮಾಡುವಾಗ ಇರಲಿಲ್ಲವಾ? ಸಿನಿಮಾ ರಿಲೀಸ್‌ಗೆ ಮೂರ‍್ನಾಲ್ಕು ದಿನದ ಹಿಂದಿನವರೆಗೂ ಇಲ್ಲದ ಕಾಳಜಿ, ಸಿನಿಮಾ ರಿಲೀಸ್‌ ಆಗಿ ಜನರು ಪ್ರದರ್ಶನ ನಿಲ್ಲಿಸಿದಾಗ ಜಾಗೃತವಾಯಿತೇ? ಸಿನಿಮಾದವರ ಕುಟುಂಬಕ್ಕೆ ತೊಂದರೆಯಾಗುತ್ತೆ ಎಂದು ಗೊತ್ತಿದ್ದೂ ಚೇತನ್‌ ಹಿಂದುತ್ವದ ವಿರುದ್ಧ ಮಾತಾಡುವುದನನ್ನು ಬಿಡುವುದಿಲ್ಲ, ಆದರೆ ಹಿಂದೂಗಳೂ ಇವರಂತೆ ಪ್ರತಿಭಟಿಸುವ ಹಾಗಿಲ್ಲ ಎಂದು ಹೇಗೆ ಹೇಳುತ್ತಾರೆ?

ನಿಮ್ಮ ವರ್ತನೆಯ ಮೇಲೇ ಜನರ ವರ್ತನೆಯೂ ಅವಲಂಬಿಸಿರುತ್ತದೆ ಎಂಬ ಸಣ್ಣ ಕಾಮನ್‌ಸೆನ್ಸ್‌ ಸಹ ಇಲ್ಲವಾ ಚೇತನ್‌ಗೆ? ಮಾಡಿದ ಕರ್ಮವನ್ನು ಅನುಭವಿಸಲೇಬೇಕಲ್ಲವೇ? “ದಯವಿಟ್ಟು ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ, ಏನೇ ಇದ್ದರೂ ಕುಳಿತು ಮಾತಾಡೋಣ” ಎಂದು ಫೇಸ್ಬುಕ್‌ನಲ್ಲಿ ಇಂಗ್ಲಿಷಿನಲ್ಲಿ ಹಾಕಿರುವ ಪೋಸ್ಟ್‌ನಲ್ಲೂ ಹಿಂದುತ್ವದ ವಿರುದ್ಧ ಅವರಿಗಿರುವ ದ್ವೇಷವನ್ನು ಕಾರಿದ್ದಾರೆಯೇ ವಿನಾ ಇಸ್ಲಾಮಿಕ್‌ ಮೂಲಭೂತವಾದದ ವಿರುದ್ಧವೂ ತನ್ನ ಹೋರಾಟ ಇದೆ ಎಂದು ಒಂದು ಮಾತೂ ಹೇಳಲಿಲ್ಲ.
Remember: our fight is not against those of any religion; our fight is against the violence imposed in the name of religion & the imposition of a monolithic identity that erodes the inherent diversity/plurality of our Indian nation-state (e.g., Hindutva).
ಯಾವುದೇ ಧರ್ಮದ ಕ್ರೌರ್ಯದ ವಿರುದ್ಧ ಹೋರಾಟ ಮಾಡುತ್ತೇನೆ ಎನ್ನುವ ಚೇತನ್‌ ಕೊನೆಗೆ ಒಂದು ಉದಾಹರಣಗೆ ಎಂಬ ಬ್ರಾಕೆಟ್‌ನಲ್ಲಿ ಒಂದು ಬಾಂಬ್‌ ಇಟ್ಟಿದ್ದಾರೆ. (ಉದಾಹರಣೆಗೆ ಹಿಂದುತ್ವ) ಎಂದಿದ್ದಾರೆ. ಅಂದರೆ, ಮೇಲೆ ಹೇಳಿದ ಕ್ರೌರ್ಯ ಮತ್ತೊಂದು ಎಲ್ಲವೂ ಹಿಂದೂ ಧರ್ಮದಲ್ಲೇ ಇದೆ ಅಂತಾಯಿತಲ್ಲ?
ಹೇಳಿ, ಇಂಥ ಪರಿಸ್ಥಿತಿಯಲ್ಲೂ ನೀವು ಹಿಂದುತ್ವದ ವಿರುದ್ಧ ಇರುವ ದ್ವೇಷ ಬಿಟ್ಟುಕೊಡುವುದಿಲ್ಲ ಎಂದ ಮೇಲೆ ಹಿಂದೂಗಳು ನಿಮ್ಮನ್ನು, ನಿಮ್ಮ ಸಿನಿಮಾವನ್ನು ಯಾವ ಪುರುಷಾರ್ಥಕ್ಕಾಗಿ ಗೆಲ್ಲಿಸಬೇಕು? ಹಿಂದುತ್ವ ಇಲ್ಲ ಸಲ್ಲದ್ದನ್ನು ಮಾತಾಡಿದ ಮೇಲೂ ಚೇತನ್‌ ಸಿನಿಮಾ ನೋಡುವುದಕ್ಕೆ ಹಿಂದೂಗಳು ತಮ್ಮೆಲ್ಲ ಆತ್ಮಗೌರವ, ಸ್ವಾಭಿಮಾನ ಬಿಟ್ಟು ಸಿನಿಮಾ ಪೋಸ್ಟರ್‌ ಕೆಳಗೆ ಬಾಯಿ ತೆಗೆದು ನಿಂತಿಲ್ಲ.
ಚೇತನ್‌ ನೀವು ನನ್ನ ಜತೆ ಒಂದು ಒಳ್ಳೆಯ ವಿಶ್ವಾಸದಲ್ಲಿದ್ದೀರಿ ಎಂದು ಹೇಳುತ್ತೇನೆ ಕೇಳಿ, “ಭಾರತ ಸುರಕ್ಷಿತ ರಾಷ್ಟ್ರವಲ್ಲ” ಎಂದು ಎಸಿ ರೂಮ್‌ನಲ್ಲಿ, ಹೊರಗಡೆ ಹತ್ತು ಹಿಂದೂ ಸೆಕ್ಯೂರಿಟಿ ಗಾರ್ಡ್‌ಗಳನ್ನಿಟ್ಟುಕೊಂಡು, ಬಾಗಿಲು ಚಿಲಕ ಹಾಕಿಕೊಂಡು ಹೇಳುವ ಆಮಿರ್‌ ಖಾನ್‌ರನ್ನೇ ನಮ್ಮ ಜನ ಏಕಾಏಕಿ ತಿರಸ್ಕರಿಸಿಬಿಟ್ಟರು. ಹತ್ತು ಹಲವು ಬ್ರಾಂಡ್‌ಗಳು, ಆಮಿರ್‌ ಖಾನ್‌ ಅವರನ್ನು ಬ್ರ‍್ಯಾಂಡ್‌ ಅಂಬ್ಯಾಸಿಡರ್‌ ಸ್ಥಾನದಿಂದ ಕಿತ್ತೊಗೆದು ಹಚ್ಚಾ ಎಂದಿರಬೇಕಾದರೆ ಮೂರು ಪಿಚ್ಚರ್‌ ಮಾಡಿರುವ ಚೇತನ್‌ ಯಾರು ಹೇಳಿ?
ಒಬ್ಬ ನಟನಾಗಿದ್ದು ಎಲ್ಲ ಧರ್ಮದಲ್ಲಿರುವ ನ್ಯೂನತೆಗಳನ್ನು ಎತ್ತಿ ಹೇಳಿ, ಆಗ ಜನರು ನಿಮ್ಮನ್ನು ಶ್ಲಾಘಿಸದಿದ್ದರೆ ಹೇಳಿ. ಇಲ್ಲ ಯಾವುದೇ ಧರ್ಮದ ಸಹವಾಸನೇ ಬೇಡಪ್ಪಾ ಎಂದು ಯಶ್ ಮಾಡುವ ಹಾಗೆ ಸಮಾಜಮುಖಿ ಕೆಲಸ ಮಾಡಿ. ಇಲ್ಲ ನಾನು ಹಿಂದುತ್ವ, ಬ್ರಾಹ್ಮಣ್ಯ ಇತ್ಯಾದಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳದೇ, ತನಗೆ ಗೊತ್ತಿರುವುದೇ ಸತ್ಯ ಎಂದು ಅದರನ್ನೇ ಬಯ್ಯುತ್ತಾ ಇರುತ್ತೇನೆ ಎಂದರೆ, ದಯವಿಟ್ಟು ನೀವು ನಟ ಆಗಬೇಕೋ? ಹೋರಾಟಗಾರ ಆಗಬೇಕೋ? ಎಂದು ಮತ್ತೊಮ್ಮೆ ನಿರ್ಧಾರ ಮಾಡಿ. ನಿಮ್ಮ ಬಳಿ ಬಯ್ಯಿಸಿಕೊಂಡೂ ಸಿನಿಮಾ ನೋಡುವ ಶೋಕಿ ಅಂತೂ ಹಿಂದೂಗಳಿಗೆ ಖಂಡಿತಾ ಇಲ್ಲ.
ನಮ್ಮ ನಿಮ್ಮ ಸಂಬಂಧ ವೈಯಕ್ತಿಕವಾಗಿ ಈಗಿರುವಂತೇ ಇರಲಿ ಎಂದು ಆಶಿಸುತ್ತಾ…!

-ಚಿರಂಜೀವಿ ಭಟ್‌

Tags

Related Articles

Close