ಪ್ರಚಲಿತ

ಬ್ರೇಕಿಂಗ್ ನ್ಯೂಸ್: ಸಚಿವ ಡಿ.ಕೆ.ಶಿವಕುಮಾರ್ ಮನೆ, ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕೂಡಿ ಹಾಕಿರುವ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ದಾಳಿ

ರಾಮನಗರ: ಕರ್ನಾಟಕದ ಕಾಂಗ್ರೆಸಿನ ದೊಡ್ಡ ನಾಯಕ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿ ಅರ್ ಪಿ ಎಫ್ ಯೋಧರ ಭದ್ರತೆಯೊಂದಿಗೆ 5 ಇನ್ನೋವಾ ಕಾರುಗಳಲ್ಲಿ ಆಗಮಿಸಿರುವ ಸುಮಾರು 20 ಅಧಿಕಾರಿಗಳು ಡಿಕೆಶಿ ಮನೆ ಹಾಗೂ ಕಚೇರಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಡಿ.ಕೆ.ಶಿ ಸಹೋದರ ಸಂಸದ ಡಿ.ಕೆ ಸುರೇಶ್ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಸುಮಾರು 10 ಕಡೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಡಿಕೆಶಿ ನಿವಾಸಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಡಿ.ಕೆ ಶಿವಕುಮಾರ್ ಗೆ ಸೇರಿದ ಕನಕಪುರ ಮನೆಯ ಮೇಲೂ ಪರಿಶೀಲನೆ ನಡೆಸಲಾಗುತ್ತಿದೆ. ಎಂಎಲ್ ಸಿ ಎಸ್. ರವಿ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಜ್ಯ ಸಭಾ ಚುನಾವಣೆಯಲ್ಲಿ ಸೋನಿಯ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ರನ್ನು ಗೆಲ್ಲಿಸುವ ಸಲುವಾಗಿ ಗುಜರಾತಿನ 40 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ಗೆ ಕರೆಸಿಕೊಳ್ಳಲಾಗಿದೆ. ಶಾಸಕರ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಬುಕ್ ಮಾಡಿದ್ದ ರೆಸಾರ್ಟ್ ನ ರೂಂ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು, ಒಳಬರುವ ಹಾಗೂ ಹೊರ ಹೋಗುವ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

Tags

Related Articles

Close