ಪ್ರಚಲಿತ

ಮನೆಯಿಂದ ಯಾರೂ ಹೊರಬರಬೇಡಿ: ಭಾನುವಾರ ಜನತಾ ಕಫ್ರ್ಯೂಗೆ ಮೋದಿ ಕರೆ

ನವದೆಹಲಿ: ಮಾರ್ಚ್ 22ರಂದು ಇಡೀ ದಿನ ಯಾರೂ ಮನೆಯಿಂದ ಹೊರಗೆ ಬರಬೇಡಿ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಜನತೆ ಮನೆಯಲ್ಲಿ ಇರುವ ಸಂಕಲ್ಪ ತೊಡಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಕೊರೊನಾ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆ ನಿಯಂತ್ರಣಕ್ಕಾಗಿ ಸದ್ಯ ದೇಶದಲ್ಲಿ ಕೈಗೊಂಡ ಪ್ರಯತ್ನ, ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಕೊರೊನಾ ಹಿಮ್ಮೆಟ್ಟಿಸಲು ನಾಗರಿಕರ ಜವಾಬ್ದಾರಿ ಕುರಿತು ನರೇಂದ್ರ ಮೋದಿ ದೇಶವಾಸಿಗಳನ್ನು ಉದ್ದೇಶಿಸಿ ಭಾಷಣ ಮಾಡಿರುವ ಮೋದಿ ರೀತಿ ಕರೆ ನೀಡಿದ್ದಾರೆ. ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ.


`ಇಡೀ ದೇಶದಲ್ಲಿ ನಾವು ಜನತಾ ಕಫ್ರ್ಯೂ ಜಾರಿ ಮಾಡಬೇಕು. ಮುಂದಿನ ಒಂದು ದಿನ ನಾವು ಇದನ್ನು ಪಾಲಿಸೋಣ. ಇದರಿಂದ ನಮ್ಮ ಮುಂದೆ ಬರಬಹುದಾದ ಸವಾಲುಗಳನ್ನು ಎದುರಿಸಲು ಸಜ್ಜಾಗಲು ತಿಳಿಯಲು ಸಾಧ್ಯವಾಗುತ್ತದೆ.
ಮಾರ್ಚ್ 22ರಂದು ಇಡೀ ದಿನ ಯಾರೂ ಮನೆಯಿಂದ ಹೊರಗೆ ಬರಬೇಡಿ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಜನತೆ ಮನೆಯಲ್ಲಿ ಇರುವ ಸಂಕಲ್ಪ ತೊಡಬೇಕು. ಅಂದು ಎಲ್ಲರೂ ಸಂಜೆ 5 ಗಂಟೆಗೆ ಮನೆಯ ಬಾಗಿಲ ಬಳಿ ಬಂದು, ಮಹಡಿಯಲ್ಲಿ ನಿಂತುಕೊಂಡು ಐದು ನಿಮಿಷ ಚಪ್ಪಾಳೆ ಹೊಡೆದು ನಮಗಾಗಿ ದುಡಿಯುತ್ತಿರುವವರಿಗೆ ಧನ್ಯವಾದ ಅರ್ಪಿಸೋಣ. ಸೇವಾ ಧರ್ಮದಲ್ಲಿ ತೊಡಗಿರುವವರನ್ನು ನಾವು ಸ್ಮರಿಸೋಣ.
ಜ್ವರ, ನೆಗಡಿ, ಕೆಮ್ಮು ಅಥವಾ ಗಂಟಲು ನೋವು ಕಂಡುಬಂದರೆ ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಕುಟುಂಬದ ವೈದ್ಯರು, ವೈದ್ಯ ಸ್ನೇಹಿತರು ಅಥವಾ ಕುಟುಂಬದಲ್ಲೇ ಇರುವ ವೈದ್ಯರಿಗೆ ದೂರವಾಣಿ ಕರೆ ಮಾಡಿ ಸಲಹೆ ಪಡೆಯಿರಿ. ಸುಮ್ಮನೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡ.


ಈ ಕೊರೊನಾ ವೈರಸ್ ಮಾಹಾಮಾರಿ ಮಧ್ಯಮ ವರ್ಗವನ್ನು, ಕೆಳ ಮಧ್ಯಮ ವರ್ಗಕ್ಕೆ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದು ಕೆಲವು ತಿಂಗಳಿಂದ ನಾವು ಇದರ ಬಗ್ಗೆ ಹೋರಾಡುತ್ತಿದ್ದೇವೆ. ಈಗ ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಕೊರೊನಾ ವೈರಸ್ ಮನುಕುಲವನ್ನೇ ಸಂಕಟಕ್ಕೆ ಸಿಲುಕಿಸಿದೆ. ಕೊರೊನಾ ಸೋಂಕು ಹಬ್ಬಿದ ದೇಶದಲ್ಲಿ ಅತಿ ಕೆಲವೇ ದಿನಗಳಲ್ಲಿ ಕಬಂಧ ಬಾಹು ಚಾಚಿದೆ. ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಭಾರತದಲ್ಲಿ ಕೆಲವೇ ದಿನಗಳಲ್ಲಿ ವೈರಸ್ ಹರಡಿದೆ. ಇದರ ವಿರುದ್ಧ ಹೋರಾಡಬೇಕಾದರೆ ಎರಡು ಪ್ರಮುಖ ನಿರ್ಧಾರ ಕೈಗೊಳ್ಳಬೇಕಾಗಿದೆ.
ನಾವು ಸಂಕಲ್ಪ ತೊಡೋಣ. ಸಂಯಮದಿಂದ ಇರೋಣ. ವೈರಸ್ ನಿಯಂತ್ರಣಕ್ಕೆ ಸಂಕಲ್ಪ ತೊಡೋಣ. ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳುವುದು ಬೇಡ. ಈಗ ಕೊರೊನಾಗೆ ಔಷಧ ಕಂಡುಹಿಡಿಯದ ಕಾರಣ ನಾವು ಸ್ವಯಂ ಪರ್ಯಾಯ ಕ್ರಮ ಕೈಗೊಳ್ಳಬೇಕಾಗಿದೆ.


ನಾವು ಸ್ವಸ್ಥವಾಗಿರೋಣ. ಇಡೀ ಜಗತ್ತನ್ನು ಸ್ವಸ್ಥವಾಗಿಸೋಣ. ಮುಂದಿನ ಕೆಲವು ವಾರಗಳ ಕಾಲ ಎಲ್ಲರೂ ಮನೆಯಲ್ಲಿದ್ದರೆ ಎಲ್ಲವೂ ಕ್ಷೇಮ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಮನೆಯಲ್ಲಿ ಹಿರಿಯರು, ಕಿರಿಯರು ಇದ್ದರೆ ಅವರನ್ನು ಹೊರಗೆ ಬಿಡಲೇ ಬೇಡಿ. ಇದನ್ನು ಕೆಲವು ವಾರಗಳ ಕಾಲ ಅಭ್ಯಾಸ ಮಾಡಿ.
ಪ್ರತಿ ಬಾರಿ ನಾನು ನಿಮ್ಮನ್ನು ಏನಾದರೂ ಕೇಳಿದಾಗ ಅದನ್ನು ಕೊಟ್ಟು ಆಶೀರ್ವದಿಸಿದ್ದೀರಿ. ಈಗ ನಾನು ಮತ್ತೊಮ್ಮೆ ನಿಮ್ಮ ಕೇಳುತ್ತಿದ್ದೇನೆ. ನಿಮ್ಮ ಮುಂದಿನ ಕೆಲವು ದಿನಗಳು ನನಗೆ ಬೇಕಾಗಿದೆ. ಕೊರೊನಾ ವೈರಸ್‍ಗಾಗಿ ಇದುವರೆಗೆ ಯಾವುದೇ ಔಷಧ ಕಂಡುಹಿಡಿಯಲಾಗಿಲ್ಲ. ಹೀಗಾಗಿ ನಾವೆಲ್ಲರೂ ಎಚ್ಚರದಿಂದಿರಬೇಕು.
ಕೆಲವು ಪ್ರಾಕೃತಿಕ ಸಮಸ್ಯೆಗಳು ಕೇವಲ ಒಂದು ರಾಜ್ಯ, ಒಂದು ದೇಶಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಕೊರೊನಾ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಇದರ ವಿರುದ್ಧ ನಾವು ಹೋರಾಡಬೇಕಾಗಿದೆ.


ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಸರಕಾರಿ ಆರಂಭಿಸಿರುವ ಕ್ರಮಗಳಿಗೆ ವ್ಯಕ್ತಿಗಳು, ಸ್ಥಳೀಯ ಸಮುದಾಯಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಸೋಂಕು ನಿಯಂತ್ರಣಕ್ಕಾಗಿ ಇನ್ನು ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮತ್ತು ತಾಂತ್ರಿಕ ಪರಿಣತರು ಸಮಾಲೋಚನೆಗಳನ್ನು ತೀವ್ರಗೊಳಿಸಬೇಕು ಎಂದು ಕೂಡ ಪ್ರಧಾನಿ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಅಧಿಕಾರಿಗಳ ಜತೆ ಸಭೆ ನಡೆಸಿದ ಮೋದಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.

Related Articles

FOR DAILY ALERTS
Close