ಅಂಕಣಪ್ರಚಲಿತ

ಮಾನ್ಯ ಡೀಕೇಶಿಯವರೇ, ಮೋದಿಯ ಮುಖಭಂಗ ಮಾಡಲು ನಿಮಗೆ ಇದೇ ಸರಿಯಾದ ಸಮಯ.

ಕರ್ನಾಟಕದ ಪವರ್ ಫುಲ್ ಸಚಿವ ಎಂದೇ ಖ್ಯಾತರಾದ,ದೇಶದ ಎರಡನೇ ಅತ್ಯಂತ ಶ್ರೀಮಂತ ಸಚಿವರೆಂದೇ ಹೆಸರು ದಾಖಲಿಸಿಕೊಂಡ ಮಾನ್ಯ ಡೀಕೇಶಿಯವರೇ,

ನಿಮ್ಮ ಮೇಲೆ ಅಮಾನವೀಯವಾಗಿ ಐಟಿ ದಾಳಿ ನಡೆದಿದೆ.ಬಹುಷಃ ದೇಶದ ಇತಿಹಾಸದಲ್ಲೇ ಇಷ್ಟೊಂದು ಧೀರ್ಘ ಹಾಗೂ ಇಷ್ಟೊಂದು ವ್ಯವಸ್ಥಿತ ದಾಳಿಯನ್ನು ಯಾವ ಕಾಂಗ್ರೆಸ್ ನಾಯಕರೂ ಎದುರಿಸಿದಂತಿಲ್ಲ.ಇದರ ಹಿಂದೆ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಸ್ವತಃ ನಿಮ್ಮ ತಾಯಿಯವರೇ ಹೇಳಿದ್ದರೂ ನಿಮ್ಮ ತಾಯಿಯವರು ಹೇಳಿದ್ದು ಸುಳ್ಳು ಎಂದು ನೀವೇ ನಂಬಿದ್ದೀರಿ ಎನ್ನುವುದು ನಮಗೂ ಗೊತ್ತು.ನಿಮ್ಮ ಹಾಗೂ ನಿಮ್ಮ ಅಭಿಮಾನಿ ಕಾರ್ಯಕರ್ತರ ಪ್ರಕಾರ ಇದೆಲ್ಲವನ್ನೂ ನಿಮ್ಮ ಬೆಳವಣಿಗೆ ಸಹಿಸಲಾರದೇ ಪ್ರಧಾನಿ ನರೇಂದ್ರ ಮೋದಿಯವರೇ ಮಾಡಿಸಿರುವುದು!

ನೀವು ತಪ್ಪಿತಸ್ಥರಲ್ಲದಿದ್ದರೂ ನಿಮ್ಮ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಈ ಪ್ರಕರಣವನ್ನೇ ಉಪಯೋಗಿಸಿಕೊಂಡು ನೀವೇಕೆ ನರೇಂದ್ರ ಮೋದಿಯವರಿಗೇ ತಿರುಮಂತ್ರ ಹಾಕಬಾರದು?ಇದೇ ಪ್ರಕರಣವನ್ನು ಉಪಯೋಗಿಸಿಕೊಂಡು ನೀವೇಕೆ ಇಡೀ ದೇಶದಲ್ಲಿ ಅವರ ಪಕ್ಷವನ್ನು ಮಣ್ಣು ಮುಕ್ಕಿಸಬಾರದು?

ಮೊದಲೇ ನೀವು ಅಮಾಯಕರು.ಹಾಗಿರುವಾಗ ಆದಾಯ ತೆರಿಗೆ ಇಲಾಖೆಯವರು ಸರ್ಚ್ ವಾರಂಟ್ ತೋರಿಸಿ ದಾಳಿ ಮಾಡಿದ್ದಾರೆ.ಆ ಅಧಿಕಾರಿಗಳ ಮೇಲೆ ‘ರಾತ್ರಿಯ ಹೊತ್ತು ಮನೆಗೆ ಬಂದು ಸರ್ಚ್ ವಾರಂಟ್ ತೋರಿಸಿ ಬೆದರಿಸಿದರು’ ಎಂದು ಕೇಸ್ ದಾಖಲಿಸಿ.ಖಂಡಿತಾ ಪೊಲೀಸರು ಅದನ್ನು ನಂಬಿ ನಿಮ್ಮ ಕೇಸ್ ದಾಖಲಿಸಿಕೊಂಡು ಆ ಐಟಿ ಅಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ.

ನೀವು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಎದುರಿನಲ್ಲೇ ಕೆಲವು ದಾಖಲೆ ಪತ್ರಗಳನ್ನು ಹರಿದು ಹಾಕಿದ ಪ್ರಕರಣ ದಾಖಲಾಗಿದೆಯಂತೆ.ಎಲ್ಲದರಂತೆ ಇದನ್ನೂ ಕೂಡಾ ನೀವು ಮೋದಿಯ ವಿರುದ್ಧದ ಪ್ರಚಾರಕ್ಕೆ ಬಳಸಿಕೊಳ್ಳಬಹುದು.ನಿಮ್ಮ ದಾಖಲೆ ಪತ್ರಗಳನ್ನು ಹರಿದು ಹಾಕುವ ಸ್ವಾತಂತ್ರ್ಯ ನಿಮಗಿದ್ದೇ ಇದೆ.ನಿಮ್ಮ ಹರಿಯುವ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ.ಹಾಗೊಂದು ವೇಳೆ ಪ್ರಶ್ನಿಸಿದರೂ ಅದು ಹರಿಯುವ ಸ್ವಾತಂತ್ರ್ಯದ ಹರಣ ಮಾಡಿದಂತಾಗುತ್ತದೆ.ಇದನ್ನೇ ಒಂದು ದೊಡ್ಡ ವಿವಾದವನ್ನಾಗಿ ಮಾಡಿ ಮೋದಿ ಸರ್ಕಾರ ಸಾರ್ವಜನಿಕರ ‘ಹರಿಯುವ ಸ್ವಾತಂತ್ರ್ಯದ ಹರಣ’ ಮಾಡುತ್ತಿದೆ ಎಂದು ಗುಲ್ಲೆಬ್ಬಿಸಿ.ದೇಶದಾದ್ಯಂತ ಪ್ರತಿಭಟನೆಗಳನ್ನು ಮಾಡಿಸಿ.ನಿಮ್ಮ ಹರಿಯುವ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಮೋದಿ ಸರ್ಕಾರದ ಕ್ರಮವನ್ನು ವಿರೋಧಿಸಿ ಸಾಹಿತಿಗಳು,ಬುದ್ಧಿಜೀವಿಗಳಿಂದ ಪ್ರಶಸ್ತಿಯನ್ನು ವಾಪಸು ಮಾಡಿಸುವುದರ ಜೊತೆಗೆ ಮಾನವ ಹಕ್ಕು ಆಯೋಗಕ್ಕೂ ಒಂದು ದೂರು ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಮುಖಭಂಗ ಮಾಡಿಸಿ.

ನಿಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಇನ್ನೊಂದು ದೂರು ಕೂಡಾ ದಾಖಲಾದ ಬಗ್ಗೆ ವರದಿಯಾಗಿದೆ.ನಿಷೇಧಿತ ನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡಿರುವ ಆರೋಪದ ಕೇಳಿ ಬಂದಿದ್ದು, 2,000 ಕೋಟಿ ರೂ.ಅವ್ಯವಹಾರದ ನಡೆಸಿದ್ದೀರಿ ಎನ್ನಲಾಗಿದೆ.ಆದರೆ ಇದರ ಬಗ್ಗೆ ಕೂಡಾ ತಾವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.ನೋಟು ನಿಷೇಧದಿಂದಾಗಿ ನಿಮ್ಮ ಕ್ಷೇತ್ರದ ಕಡು ಬಡವ ಮಹಿಳೆಯರು,ಕೂಲಿ ಕಾರ್ಮಿಕರು ಸೂಕ್ತ ದಾಖಲೆಗಳಿಲ್ಲದೇ ತಮ್ಮ ಮನೆಯ ಸಾಸಿವೆ ಡಬ್ಬಿಯಲ್ಲಿಟ್ಟಿದ್ದ ಲಕ್ಷಾಂತರ ರೂ.ಗಳನ್ನು ಬ್ಯಾಂಕ್ ಗೆ ಕಟ್ಟಲಾಗದೇ ಸಂಕಟಪಡುತ್ತಿದ್ದಾಗ ಅವರಿಗೆ ಸಹಾಯ ಮಾಡಲು ಆ ಹಣವನ್ನು ಅವರಿಂದ ಪಡೆದು ಹೊಸಾ ನೋಟುಗಳನ್ನು ಕೊಟ್ಟಿದ್ದೇನೆ.ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಡು ಬಡವರ ಮತ್ತು ಮಹಿಳೆಯರ ವಿರುದ್ಧವಿದ್ದು ಅದೇ ಕಾರಣಕ್ಕೆ ಈ ಪ್ರಕರಣದಲ್ಲಿ ನನ್ನ ಮೇಲೆ ದೂರು ದಾಖಲು ಮಾಡಲಾಗಿದೆ ಎಂದು ಪ್ರಚಾರ ಮಾಡಿ.ನಂತರ ಬಡ ಮಹಿಳೆಯರನ್ನು ಮತ್ತು ಮಹಿಳಾಪರ ಸಂಘಟನೆಗಳನ್ನು ಬಳಸಿಕೊಂಡು ರಾಷ್ಟ್ರದಾದ್ಯಂತ ಬಡವರ ವಿರೋಧೀ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಸಿ.ಆಗ ಕಡು ಬಡವರು,ಮಹಿಳೆಯರು ಮೋದಿಯವರ ಪಕ್ಷದಿಂದ ದೂರವಾಗಿಯೇ ಆಗುತ್ತಾರೆ.

ಅಧಿಕಾರಿಗಳು ನಿಮ್ಮ ಆ ಲಾಕರ್ ಓಪನ್ ಮಾಡಲು ಹೇಳಿದಾಗ ನೀವು ನಿರಾಕರಿಸಿದ್ದೀರಿ ಎನ್ನುವ ಸುದ್ದಿಗಳಿವೆ.ಒಂದು ವೇಳೆ ಅದು ನಿಜವೇ ಆಗಿದ್ದರೆ ಚಿಂತಿಸಬೇಡಿ.ಲಾಕರ್ ನಲ್ಲಿ ನಿಮ್ಮ ಮನೆಯ ದೇವರುಗಳಿದ್ದು ಅದನ್ನು ಯಾವುದೋ ರಾಜ್ಯದಿಂದ ಬಂದ ಐಟಿ ಅಧಿಕಾರಿಗಳು ಮುಟ್ಟಿದರೆ ದೇವರಿಗೆ ಮೈಲಿಗೆಯಾಗುತ್ತದೆ ಎನ್ನುವ ಕಾರಣಕ್ಕೆ ಓಪನ್ ಮಾಡಲು ನಿರಾಕರಿಸಿದೆನೇ ಹೊರತೂ ಅದರಲ್ಲಿ ಕಪ್ಪು ಹಣವಾಗಲೀ,ದಾಖಲೆಗಳಾಗಲೀ ಇದೆ ಎನ್ನುವ ಕಾರಣಕ್ಕಲ್ಲ ಎನ್ನುವುದನ್ನು ದೇಶದ ಜನರ ಮುಂದೆ ಹೇಳಿ ಕೇಂದ್ರ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿ.ಖಂಡಿತ ಜನ ಇದನ್ನು ನಂಬುತ್ತಾರೆ.

ನಿಮ್ಮ ಆಪ್ತ ಜ್ಯೋತಿಷಿಯ ಬಳಿ ಸುಮಾರು 800 ಕೋಟಿಯ ಆಸ್ತಿ ದಾಖಲೆಗಳು ಹಾಗೂ ನಿಮ್ಮಿಬ್ಬರ ನಡುವಿನ ಒಪ್ಪಂದ ಪತ್ರಗಳೂ ಸಿಕ್ಕಿವೆಯಂತೆ.ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ,ಆ ಜ್ಯೋತಿಷಿಗಳು ನನ್ನ ಸಹಿಯನ್ನು ನಕಲಿ ಮಾಡಿರಬಹುದು ಎಂದು ದೂರು ಕೊಡಿ.ಜೊತೆಗೆ ಆ ನಿಮ್ಮ ಆಪ್ತ ಜ್ಯೋತಿಷಿಗಳಿಗೆ 800 ಕೋಟಿ ಹಣವನ್ನು ಜನಸಾಮಾನ್ಯರಿಗೆ ಜ್ಯೋತಿಷ್ಯ ಹೇಳುವ ಮೂಲಕವೇ ಸಂಪಾದಿಸಿದ್ದು ಎಂದು ಐಟಿ ಅಧಿಕಾರಿಗಳ ಮುಂದೆ ಸಾಬೀತುಪಡಿಸಲು ತಿಳಿಸಿ.ಮೋದಿಯವರ ವರ್ಚಸ್ಸನ್ನು ರಾಷ್ಟ್ರ ಮಟ್ಟದಲ್ಲಿ ಕುಗ್ಗಿಸಲು ಇದಕ್ಕಿಂತಲೂ ಒಳ್ಳೆಯ ಅವಕಾಶ ಬೇಕೇ?

ರಾಜರಾಜೇಶ್ವರಿ ನಗರದಲ್ಲಿರುವ ನಿಮ್ಮ ಒಡೆತನದ ಕಾಲೇಜಿನಲ್ಲಿ 500 ಹಾಗೂ 1000 ಮುಖಬೆಲೆಯ ಹಳೆಯ ನೋಟುಗಳು ಪತ್ತೆಯಾಗಿವೆ ಎನ್ನುವ ವರದಿಗಳಿವೆ.ಇದು ನಿಜವೇ ಆಗಿದ್ದರೆ ಆ ನೋಟುಗಳನ್ನು ನಮ್ಮ ಕಾಲೇಜಿನ ಮಕ್ಕಳಿಗೆ ನಮ್ಮ ದೇಶದ ನೋಟುಗಳ ಇತಿಹಾಸ ತಿಳಿಸುವ ಸಲುವಾಗಿ ಅಲ್ಲಿ ಮೂಟೆ ಕಟ್ಟಿ ಬಚ್ಚಿಡಲಾಗಿತ್ತು ಎಂದು ಮನವರಿಕೆ ಮಾಡಿಕೊಡಿ.ಹಾಗೆಯೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿನಲ್ಲಿ ಕೂಡಿಟ್ಟಿದ್ದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡ ಆದಾಯ ತೆರಿಗೆ ಇಲಾಖೆಯ ವಿರುದ್ಧ ಯೂತ್ ಕಾಂಗ್ರೆಸ್ ಮೂಲಕ ರಾಷ್ಟ್ರದಾದ್ಯಂತ ಹೋರಾಟ ಮಾಡಿಸಿ.ಇದರಿಂದ ದೇಶದ ಯುವಜನತೆಯ ಕಣ್ಣಲ್ಲಿ ನಿಮ್ಮ ವರ್ಚಸ್ಸು ಮತ್ತಷ್ಟು ಹೆಚ್ಚಾಗುವುದಲ್ಲದೇ ಮೋದಿಯವರ ವರ್ಚಸ್ಸು ಸಂಪೂರ್ಣವಾಗಿ ಕುಸಿದು ಹೋಗುತ್ತದೆ.

ನಿಮ್ಮ ಮನೆಗಳಲ್ಲಿ ಹನ್ನೊಂದು ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.ಒಂದು ವೇಳೆ ಅದೇನಾದರೂ ನಿಜವಾಗಿದ್ದರೆ ನೀವೇನೂ ಹೆದರಬೇಕಿಲ್ಲ.ಹಾಗೆಯೇ ಅದಕ್ಕೆ ಲೆಕ್ಕ ಕೂಡಾ ಕೊಡಬೇಕಿಲ್ಲ.ಅದು ನಿಮ್ಮ ಜಮೀನಿನಲ್ಲಿ ಆಲೂಗೆಡ್ಡೆ ಬೆಳೆದು ಸಂಪಾದಿಸಿದ ಹಣ ಎಂದು ವಾದಿಸಿ.ರೈತ ಕುಟುಂಬದಿಂದ ಬಂದ ನಾನು ಅದಕ್ಕೆ ಲೆಕ್ಕ ಕೊಡುವ ಅವಶ್ಯಕತೆ ಇಲ್ಲ ಎಂದೂ ವಾದಿಸಿ.ಹಾಗೊಂದು ವೇಳೆ ಅಧಿಕಾರಿಗಳು ನಿಮ್ಮ ವಾದಕ್ಕೆ ಸೊಪ್ಪು ಹಾಕದಿದ್ದರೆ ನಿಮ್ಮದೇ ಪಕ್ಷದ ಇನ್ನೊಂದು ಘಟಕವಾದ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಮೂಲಕ ‘ಐಟಿ ಇಲಾಖೆಯವರು ಬಡ ರೈತನ ಆದಾಯವನ್ನು ಪ್ರಶ್ನಿಸುವ ಮೂಲಕ ಹಿಂಸೆ ಕೊಡುತ್ತಿದ್ದಾರೆ’ ಎಂದು ರಾಷ್ಟ್ರದಾದ್ಯಂತ ಪ್ರತಿಭಟನೆ ಮಾಡಿಸಿ ಮೋದಿಯವರ ಪಕ್ಷಕ್ಕೆ ರೈತರ ಬೆಂಬಲ ಕೈತಪ್ಪುವಂತೆ ಮಾಡಿ.

ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ನಿಮ್ಮ ಸಹೋದರಿಯ ಮನೆ ಹಾಗೂ ಅತ್ಯಾಪ್ತರ ಮನೆಗಳಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನಾಭರಣಗಳು ಪತ್ತೆಯಾಗಿವೆ ಎನ್ನುವ ಸುದ್ದಿಯಿದೆ.ಒಂದು ವೇಳೆ ಈ ಸುದ್ದಿ ಕೂಡಾ ನಿಜವಾಗಿದ್ದರೆ ಗಾಬರಿಯೇನೂ ಆಗಬೇಕಿಲ್ಲ.ಎರಡೇ ದಿನದಲ್ಲಿ ವರಮಹಾಲಕ್ಷ್ಮಿ ಪೂಜೆಯಿದ್ದು ಅದಕ್ಕಾಗಿ ಹತ್ತಿಪ್ಪತ್ತು ಕೇಜಿಯಷ್ಟು ಚಿನ್ನಾಭರಣವನ್ನು ಮನೆಗೆ ತಂದಿಟ್ಟುಕೊಂಡರೆ ತಪ್ಪೇನು ಎಂದು ಪ್ರಶ್ನಿಸಿ.ಜೊತೆಗೆ ಇದು ಹಿಂದೂಗಳ ಆಚರಣೆಗಳಿಗೆ ಧಕ್ಕೆ ತರಲು ನಡೆಸಿದ ಕುತಂತ್ರ ಎಂದು ಪ್ರಚಾರ ಮಾಡುವ ಮೂಲಕ ಹಿಂದೂಗಳನ್ನು ಮೋದಿಯ ವಿರುದ್ಧ ಎತ್ತಿ ಕಟ್ಟಿ.

ಹೀಗೆ ನಿಮ್ಮ ಮೇಲೆ ನಡೆದ ಐಟಿ ದಾಳಿಯನ್ನೇ ಬಳಸಿಕೊಂಡು ನರೇಂದ್ರ ಮೋದಿ ಸರ್ಕಾರದ ಬುಡವನ್ನೇ ಅಲ್ಲಾಡಿಸಿಬಿಡುವ ಅವಕಾಶ ನಿಮಗೀಗ ಒದಗಿ ಬಂದಿದೆ.ಇಂತಹಾ ಐಡಿಯಾಗಳು ಒಂದು ಕಾಲದಲ್ಲಿ ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯನಾಗಿದ್ದು ಇಂದು ದೇಶದಲ್ಲೇ ಶ್ರೀಮಂತ ಸಚಿವ ಎಂದು ಹೆಸರು ಗಳಿಸಿರುವ,ಇಲ್ಲಿ ನಿಮ್ಮ ಮೇಲೆ ಐಟಿ ದಾಳಿ ನಡೆದರೆ ಅಲ್ಲಿ ಲೋಕಸಭೆ-ರಾಜ್ಯಸಭೆಗಳೇ ಅದುರಿ ಹೋಗುವ ಮಟ್ಟಿಗೆ ಬೆಳೆದಿರುವ ನಿಮಗೆ ತಿಳಿಯದ್ದೇನೂ ಅಲ್ಲ.ಆದರೆ ಈಗ ನೀವಿರುವ ಮಾನಸಿಕ ಒತ್ತಡದ ನಡುವೆ ಈ ಉಪಾಯಗಳು ನಿಮ್ಮ ತಲೆಯಲ್ಲಿ ಹೊಳೆಯದೇ ಹೋಗಬಾರದು ಎನ್ನುವ ಉದ್ದೇಶಕ್ಕಷ್ಟೇ ನಿಮಗೆ ಮತ್ತೊಮ್ಮೆ ಇದನ್ನು ನೆನಪಿಸುತ್ತಿದ್ದೇನೆ.ದಯವಿಟ್ಟು ಯೋಚಿಸಿ.ಪರಿಸ್ಥಿತಿಯ ಲಾಭ ಪಡೆದುಕೊಳ್ಳಿ.

Tags

Related Articles

Close