ಅಂಕಣದೇಶಪ್ರಚಲಿತಲೈಫ್ ಸ್ಟೈಲ್

ಮುಖ ಮಾಡಿ ಮಲಗುವ ದಿಕ್ಕುಗಳೂ ಬದುಕನ್ನು ಬದಲಿಸುತ್ತವೆ! ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದೆಂಬ ಹಿಂದಿನ ನಿಗೂಢ ಸತ್ಯವೊಂದರ ಅರಿವಿದೆಯೇ?!

“ಆ ಬದಿಗೆ ತಲೆ ಹಾಕಿ ಮಲಗಬೇಡ, ಈ ಕಡೆ ತಿರುಗು” ಅಂದರು ನನ್ನಜ್ಜಿ. ಆವಾಗ ನನಗೆ ೭ ವರ್ಷ. ತತ್‌ಕ್ಷಣ ನಾನು ಅವರಲ್ಲಿ “ಯಾಕೆ” ಅಂತ ಕೇಳಿದೆ. ಅದಕ್ಕೆ
“ನಿಂಗೆ ಮೊನ್ನೆ ಗಣಪತಿಯ ಕಥೆ ಹೇಳಿದ್ದೆನಲ್ಲಾ, ಗಣಪತಿಗೆ ತಂದ ಆನೆ ಉತ್ತರದ ದಿಕ್ಕಿಗೆ ಮಲಗಿಕೊಂಡಿತ್ತು. ಹಾಗಾಗಿ ಆ ಕಡೆಗೆ ತಲೆ ಹಾಕಿ ಮಲಗಬಾರದು”
ಅಂತಂದರು.

ಗಣಪತಿಯ ಕಥೆಯಲ್ಲದೆ, ಭಾರತದಲ್ಲಿ ಉತ್ತರದ ಕಡೆಗೆ ತಲೆ ಹಾಕಿ ಮಲಗಬಾರದು ಎಂಬುದನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ವಿಷ್ಣು ಪುರಾಣದಲ್ಲಿ “ಓ
ರಾಜನೇ, ಪೂರ್ವಾಭಿಮುಖವಾಗಿ ಅಥವಾ ದಕ್ಷಿಣಾಭಿಮುಖವಾಗಿ ಮಲಗುವುದು ಹೆಚ್ಚು ಶ್ರೇಯಸ್ಕರ. ಇವುಗಳ ವಿರುದ್ಧ ದಿಕ್ಕಿಗೆ ತಲೆಹಾಕಿ ಮಲಗಿದವನು
ರೋಗಿಷ್ಟನಾಗುತ್ತಾನೆ” ಎಂದು ಹೇಳಲಾಗಿದೆ. ಮಹಾಭಾರತದಲ್ಲಿ “ಮನುಷ್ಯ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದರಿಂದ ಬುದ್ಧಿವಂತನಾಗುತ್ತಾನೆ” ಅಂತ ಹೇಳಲಾಗಿದೆ. ತಮಿಳಿನಲ್ಲಿ “ವಾರತ ವಶ್ವು ವಂತಾಲಂ ವಡಕ್ಕೆ ತಲೈ ವೈಕ್ಕಾಕೂದಾತು” ಅಂದರೆ, “ಎಂತಹ ಉನ್ನತ ಅದೃಷ್ಟದ ಸಮಯದಲ್ಲೂ, ಒಬ್ಬ
ಉತ್ತರಾಭಿಮುಖವಾಗಿ ಮಲಗಬಾರದು” ಎಂಬ ಮಾತೇ ಇದೆ. ವಧು – ವರರನ್ನು ಪೂರ್ವಾಭಿಮುಖವಾಗಿಯೇ ಕುಳ್ಳಿರಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ
ಪ್ರತಿಯೊಂದು ಕಾರ್ಯಕ್ಕೂ ಇಂತಹದೇ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು ಎಂಬ ನಂಬಿಕೆ ಇದೆ. ಉತ್ತರಾಭಿಮುಖವಾಗಿ ಹಿರಿಯರು ಕಿರಿಯರಿಗೆ ಆಶೀರ್ವಾದವನ್ನೂ ಮಾಡಬಾರದು ಎಂಬ ನಿಯಮ ಇದೆ. ಅಂತ್ಯಸಂಸ್ಕಾರದ ಸಮಯದಲ್ಲೂ ಶವವನ್ನು ದಕ್ಷಿಣದ ದಿಕ್ಕಿಗೆ ಮುಖ ಮಾಡಿ ಮಲಗಿಸುತ್ತಾರೆ.

ಅನೇಕರಿಗೆ ಇದೆಲ್ಲ ಹಿಂದೂಗಳ ಮೂಢನಂಬಿಕೆಗಳು ಅಂತ ಅನ್ನಿಸಬಹುದು. ಆದರೆ ಇದರ ಹಿಂದೆ ವಿಜ್ಞಾನ ಇದೆ ಅಂತ ಬಹಳ ಕಡಮೆ ಮಂದಿಗೆ ಅರಿವಿರಬಹುದು. ಕಥೆಗಳು ತಿಳಿಹೇಳುವ ಕೆಲಸವನ್ನು ಸುಲಭ ಮಾಡುತ್ತದೆ. ವೈಜ್ಞಾನಿಕ ಮನೋಧರ್ಮ ಇಲ್ಲದವನಿಗೆ ವಿಜ್ಞಾನವನ್ನು ಅವನಿಗೆ ಅರ್ಥವಾಗುವ ಮಾರ್ಗದಲ್ಲಿ ತಿಳಿಹೇಳುವ ಮಾರ್ಗಗಳನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆ.

ಭೂಮಿಯು ವಿವಿಧ ಮೂಲಗಳಿಂದ ಶಕ್ತಿಯನ್ನು ಸ್ವೀಕರಿಸುತ್ತದೆ. ಅದು ಶಾಖದ ರೂಪದಲ್ಲಾಗಿರಬಹುದು, ಬೆಳಕಿನ ರೂಪದಲ್ಲಿ, ಆಯಸ್ಕಾಂತೀಯ ಶಕ್ತಿಯ ರೂಪದಲ್ಲಿ, ಕಾಸ್ಮಿಕ್ ಕಿರಣಗಳ ರೂಪದಲ್ಲಿ, ಹೀಗೆ ಹಲವಾರು ವಿಧಗಳಲ್ಲಿ ಶಕ್ತಿಯು ಭೂಮಿಯೊಳಗೆ ಬರುತ್ತದೆ. ಈ ಎಲ್ಲಾ ಶಕ್ತಿಗಳ ಮುಖ್ಯವಾದ ಮೂಲ ಸೂರ್ಯ. ಭೂಮಿಯ ಪೂರ್ವ ಭಾಗವು ಬಿಸಿಯಾದಾಗ, ಪಶ್ಚಿಮದ ಭಾಗವೂ ಇನ್ನೂ ಕತ್ತಲಲ್ಲಿದ್ದು ತಣ್ಣಗಾಗಿಯೇ ಇರುತ್ತದೆ. ಈ ಕಾರಣದಿಂದಾಗಿ ಉಷ್ಣ ವಿದ್ಯುತ್ ಉತ್ಪತ್ತಿಯಾಗುತ್ತದೆ ಮತ್ತು ಅದು ಪೂರ್ವದಿಂದ ಪಶ್ಚಿಮದ ಕಡೆಗೆ ಪ್ರವಹಿಸುತ್ತದೆ. ಈ ವಿದ್ಯುತ್ ಪ್ರವಹನವೇ ಭೂಮಿಯ ಆಯಸ್ಕಾಂತೀಯತೆಗೆ ಕಾರಣವಾಗಿದೆ. ಇದರಿಂದಾಗಿಯೇ ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳು ರೂಪುಗೊಂಡಿವೆ. ಫ್ಯಾರಡೆಯ ನಿಯಮದ ಪ್ರಕಾರ ವಿದ್ಯುತ್ ಪ್ರವಹಿಸುವ ದಿಕ್ಕಿನ ಬಲಭಾಗದಲ್ಲಿ ಉತ್ತರ ಧ್ರುವ ಹಾಗೂ ಎಡ ಭಾಗಕ್ಕೆ ದಕ್ಷಿಣ ಧ್ರುವ ಉಂಟಾಗುತ್ತದೆ. ಈ ರೀತಿಯಲ್ಲಿ ಗಮನಿಸಿದಾಗ, ಭೂಮಿಯು ಒಂದು ದೊಡ್ಡ ಉಷ್ಣ ವಿದ್ಯುತ್ತಿನ ಆಯಸ್ಕಾಂತ ಅಂತ ಕರೆಯಬಹುದು. ಹಿಂದಿನ ನಾವಿಕರ ಕಾಲದಿಂದ ಈಗಿನವರೆಗೂ ನಾವು ಉತ್ತರ ದಿಕ್ಕನ್ನು ಗುರುತಿಸಲು ಕಂಪಾಸ್ ನ್ನು ಇದೇ ಕಾರಣದಿಂದ ಬಳಸುತ್ತಿದ್ದೇವೆ.

ಭೂಮಿಯ ಆಯಸ್ಕಾಂತೀಯತೆಯ ಕುರಿತು ಅರ್ಥಮಾಡಿಕೊಂಡದ್ದು ಹೌದಾದರೂ, ಅದು ಮಾನವನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಂತ ಅರ್ಥ
ಮಾಡಿಕೊಳ್ಳುವುದು ಇನ್ನೂ ಮುಖ್ಯವಾದದ್ದು. ಆಯಸ್ಕಾಂತೀಯ ಆಕರ್ಷಣೆಯನ್ನು ಅನೇಕರು ಗುರುತಿಸಿರಬಹುದು. ಉದಾಹರಣೆಗೆ, ಹಾಳಾದ ರೇಡಿಯೋಗಳ
ಧ್ವನಿವರ್ಧಕಗಳಲ್ಲಿ ಮ್ಯಾಗ್ನೆಟ್‌ಗಳು ಸಿಗುತ್ತಿದ್ದುವು. ಇವು ಮಕ್ಕಳಿಗೆ ಸುಲಭವಾಗಿ ದೊರಕುತ್ತಿದ್ದ ಆಯಸ್ಕಾಂತ. ಹಾಗೆಯೇ, ೮ನೇ ತರಗತಿಯಲ್ಲಿ ಬಾರ್ ಮ್ಯಾಗ್ನೆಟ್‌ನ ಕುರಿತು ಪಾಠವೇ ಇದೆ. ಅದರಲ್ಲಿ ಕೂಡಾ ಬರುವಂತೆ, ಒಂದು ಆಯಸ್ಕಾಂತದಿಂದ ಇನ್ನೊಂದು ಆಯಸ್ಕಾಂತೀಯ ಶಕ್ತಿಯ ಪ್ರವಹಕವನ್ನು ಆಯಸ್ಕಾಂತವಾಗಿ ಪರಿವರ್ತಿತಗೊಳಿಸಬಹುದು. ಇದೇ ನಿಯಮದ ಪ್ರಕಾರ ಭೂಮಿಯ ಆಯಸ್ಕಾಂತೀಯ ಶಕ್ತಿಯು ಮನುಷ್ಯ ದೇಹವನ್ನೂ ಕೂಡಾ ಆಯಸ್ಕಾಂತೀಯಗೊಳಿಸಬಹುದು. ನಮ್ಮ ಕಾಲುಗಳು ನಿರಂತರವಾಗಿ ಭೂಮಿಗೆ ಸ್ಪರ್ಶವಾಗುವುದರಿಂದ, ಕಾಲುಗಳು ದಕ್ಷಿಣ ಧ್ರುವೀಯತೆಯನ್ನು ಹಾಗೆಯೇ, ತಲೆಯ ಭಾಗ ಉತ್ತರ ಧ್ರುವೀಯತೆಯನ್ನು ಗಳಿಸಿಕೊಳ್ಳುತ್ತವೆ. ದೇಹದ ಧ್ರುವೀಯತೆ ಈ ರೀತಿಯಲ್ಲಿ ಒಮ್ಮೆ ಸ್ಥಾಪಿತವಾದ ನಂತರ, ಒಂದು ವೇಳೆ ನಾವು ಉತ್ತರಾಭಿಮುಖವಾಗಿ ಮಲಗಿದರೆ, ದೇಹದಲ್ಲಿರುವ ಆಯಸ್ಕಾಂತೀಯ ಸ್ಥಿರತೆ ಕೆಡುತ್ತದೆ. ಯಾಕೆಂದರೆ ಉತ್ತರದ ಕಡೆ ತಲೆ ಹಾಕಿದಾಗ, ಭೂಮಿಯ ಉತ್ತರ ಧ್ರುವೀಯತೆ ತಲೆಯ ಉತ್ತರ ಧ್ರುವೀಯತೆಗಿಂತ ಹೆಚ್ಚು ಶಕ್ತಿಶಾಲಿಯಾದ ಕಾರಣ ತಲೆಯ ಭಾಗದಲ್ಲಿ ದಕ್ಷಿಣ ಧ್ರುವೀಯತೆಯನ್ನು ಉಂಟುಮಾಡುತ್ತದೆ.
ಇದರಲ್ಲಿ ಇನ್ನೂ ಒಂದು ಅಂಶವನ್ನು ನಾವು ಗಮನಿಸಬೇಕಾದ್ದು ಏನಂದರೆ ಈ ಎಲ್ಲಾ ನಿಯಮಗಳು ಉತ್ತರ ಗೋಳಾರ್ಧದಲ್ಲಿರುವವರಿಗೆ ಅನ್ವಯವಾಗುತ್ತದೆ. ಆದರೆ ದಕ್ಷಿಣ ಗೋಳಾರ್ಧದಲ್ಲಿರುವವರು ಉತ್ತರಾಭಿಮುಖವಾಗಿಯೇ ಮಲಗಬೇಕು. ಆಗಲೇ ಅವರ ದೇಹದ ಆಯಸ್ಕಾಂತೀಯ ಸ್ಥಿರತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ.

ಮುಂದೆ ಬರುವ ಪ್ರಶ್ನೆ, ಪೂರ್ವಾಭಿಮುಖವಾಗಿ ಮಲಗುವುದರಿಂದ ಏನು ಪ್ರಯೋಜನ?

ಮೊದಲೇ ನಾವು ತಿಳಿದುಕೊಂಡಂತೆ, ಭೂಮಿಯ ಪೂರ್ವಾರ್ಧದಿಂದ ಪಶ್ಚಿಮದ ಕಡೆಗೆ ಉಷ್ಣ ವಿದ್ಯುತ್ ಪ್ರವಹಿಸುತ್ತದೆ. ಇದು ಪ್ರವಹಿಸುವುದು ಭೂಮಿಯ ಮೇಲ್ಮೈಯಲ್ಲಿ. ಅಂದರೆ, ಅದು ಎಲ್ಲಾ ದೇಹಗಳ ಮೂಲಕವೂ ಪ್ರವಹಿಸುತ್ತದೆ. ಯಾವಾಗ ಈ ಶಕ್ತಿಯು ನಮ್ಮ ತಲೆಯಿಂದ ಕಾಲಿನ ಕಡೆಗೆ ಚಲಿಸುತ್ತದೋ, ಮೆದುಳಿನ ಮೇಲೆ ಉತ್ತಮ ಪರಿಣಾಮವನ್ನುಂಟುಮಾಡುತ್ತದೆ. ಬದಲಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಮೆದುಳಿನ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಅಂದರೆ ಮಲಗುವ ದಿಕ್ಕು ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಬುದ್ಧಿಯ ಮೂಲ ಸ್ಥಾನವೇ ಮೆದುಳಾಗಿರುವಾಗ, ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯ.

ಹೀಗೆ ಕಥೆಯ ಮೂಲಕ ತಿಳಿಹೇಳಿದ ಹಿರಿಯರ ಮಾತಿನ ಹಿಂದೆ ಎಂತ ಒಂದು ದೊಡ್ಡ ವೈಜ್ಞಾನಿಕತೆ ಅಡಗಿದೆ ಅಂತ ಅರ್ಥಮಾಡಿಕೊಳ್ಳುವಾಗ,
ರೋಮಾಂಚನವಾಗುತ್ತದೆ. ನಮ್ಮ ದಿನಚರಿಯ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಗಮನಿಸಿ, ಅದನ್ನು ಪ್ರಕೃತಿಯೊಂದಿಗೆ ಮೇಳೈಸಿ, ಉನ್ನತವಾದ ಜೀವನವನ್ನು ನಮ್ಮ ಹಿರಿಯರು ಕಂಡಿದ್ದಾರೆ. ಅವರ ಮಾತುಗಳನ್ನು ಅವೈಜ್ಞಾನಿಕ, ಮೂಢನಂಬಿಕೆ ಎಂದು ತಿರಸ್ಕರಿಸುವುದರ ಬದಲು, ಅವರ ಮಾತುಗಳ ಹಿಂದೆ ಇರುವ ತರ್ಕ ಏನು ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಇನ್ನು ಮುಂದೆಯಾದರೂ, ಸರಿಯಾದ ದಿಕ್ಕಿನಲ್ಲಿ ಮಲಗಿ, ಉತ್ತಮ ಜೀವನವನ್ನು ನಡೆಸಿ.

-ಅಕ್ಷರ ದಾಮ್ಲೆ

 

Tags

Related Articles

Close