ಅಂಕಣಪ್ರಚಲಿತ

ಮೂಕವಿಸ್ಮಿತರನ್ನಾಗಿಸುವ ಒಂದು ಮಾತುಕಥೆ! ಈ ಯೋಧನ ಕಥೆ ಕಂಬನಿ ತರಿಸಿದರೆ ಒಮ್ಮೆ ಅತ್ತುಬಿಡಿ!

ಆ ಯೋಧರಿಗೆ ಗಡಿಗೆ ಹೊರತಾದ ಬದುಕಿಲ್ಲ. ಸೇನಾ ಜಮಾವಣೆ, ಕದನವಿರಾಮ ಎಂಬ ಪದಗಳು ಅವರಿಗೆಂದೂ ಅನ್ವಯವಾಗಿಲ್ಲ. ಕ್ಷಣಹೊತ್ತು ಕೂಡಾ ಅವರು ಬಂದೂಕು ಇಳಿಸಿಲ್ಲ. ರಜೆ ಎಂಬುದನ್ನು ಆ ಪಡೆ ಇಂದಿನವರೆಗೂ ಕಂಡಿಲ್ಲ. ಇವರ ಕರ್ತವ್ಯಕ್ಕೆ ಯಾವ ದ್ವಿಪಕ್ಷೀಯ ಮಾತುಕತೆಗಳೂ ಅಡ್ಡಿಯಾಗಿಲ್ಲ. ಅಲ್ಲಿ ನಡೆಯುವ ಗುಂಡಿನ ಚಕಮಕಿ ಅಂತಾರಾಷ್ಟ್ರೀಯ ಸುದ್ದಿಯಾಗುವುದೂ ವಿರಳ. ಅಲ್ಲಿ ದಿನನಿತ್ಯ ರಕ್ತದ ಅನ್ನ. ಗಡಿಯಲ್ಲಿ ಹೆಬ್ಬಂಡೆಯಂತೆ ಆತ ನಿಲ್ಲದೇ ಇರುತ್ತಿದ್ದರೆ ಗಡಿಗಳು ಎಂದೋ ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತಿತ್ತು. ಅದೊಂದು ಮಹಾಗೋಡೆ. ಅದರ ಹೆಸರು ಗಡಿ ಭದ್ರತಾ ಪಡೆ. ಆ ಮಹಾಗೋಡೆಗೀಗ 50 ವರ್ಷಗಳು. ದೇಶವನ್ನು ಅಂತಾರಾಷ್ಟ್ರೀಯ ಗಡಿಗಳಿಂದ ಕಾಪಾಡುತ್ತಲೇ ಗಡಿ ಭದ್ರತಾ ಪಡೆ ಅರೆ ಶತಮಾನವನ್ನು ಸವೆಸಿಬಿಟ್ಟಿದೆ. ಬರೋಬ್ಬರಿ 186 ಬೆಟಾಲಿಯನ್‌ಗಳು, 2.4 ಲಕ್ಷ ಯೋಧರ ವಿಶ್ವದ ಅತೀ ದೊಡ್ಡ ಗಡಿ ಭದ್ರತಾ ಪಡೆ.
ತನ್ನದೇ ಆದ ನೌಕಾ ಮತ್ತು ವಾಯು ತುಕಡಿ, ಶ್ವಾನದಳವನ್ನು ಒಳಗೊಂಡ ಜಗತ್ತಿನ ಅತ್ಯಾಧುನಿಕ ಸೇನಾಪಡೆ. ಸೇನೆಯ ಹೊರತಾಗಿಯೂ ದೇಶವನ್ನು ರಕ್ಷಿಸಬಲ್ಲ ತಾಕತ್ತಿನ ಪಡೆ ನಮ್ಮ ಗಡಿಭದ್ರತಾ ಪಡೆ. ಪ್ಯಾರಾಮಿಲಿಟರಿ ಪಡೆ ಎಂಬ ಪಟ್ಟ, ಕೆಲವೊಮ್ಮೆ ಗಡಿ ದಾಟಿದ ಸಾಹಸ, ಗಡಿಯೊಳಗಿನ ವಿಪ್ಲವಗಳ ನಿವಾರಣೆ, ಶತ್ರುಗಳ ಮೊಟ್ಟಮೊದಲ ಗುಂಡಿಗೆ ಎದೆಯೊಡ್ಡಬೇಕಾದ ಅನಿವಾರ್ಯತೆಗಳಿದ್ದರೂ ತನ್ನ ಸಾಧನೆ ಯನ್ನು ಹಕ್ಕು ಪ್ರತಿಪಾದನೆಯನ್ನಾಗಿ ಮಾಡದ ರಾಮ ಸೇವಕ ಸೈನಿಕರ ವಿನಯವಂತಿಕೆ ಭಾರತೀಯ ಗಡಿಭದ್ರತಾ ಪಡೆಯದ್ದು.ಕಳೆದ 50 ವರ್ಷಗಳಿಂದ ಒಂದರೆಕ್ಷಣವೂ ವಿರಮಿಸದ ಬಿಎಸ್‌ಎಫ್ ಎಂಬ ಗೋಡೆಯ ಇಟ್ಟಿಗೆಗಳು ದೇಶಕ್ಕೆ ಕಂಡಿದ್ದು ಅಪರೂಪ. ಯುದ್ಧವಿಲ್ಲದೇ ಇದ್ದಾಗಲೂ ದೇಶವನ್ನು ಕಾಯುವ ಆ ಇಟ್ಟಿಗೆಗಳು ನಿಜವಾದ ದೇಶ ಕಟ್ಟುವ ಇಟ್ಟಿಗೆಗಳು. ಆ ಮಹಾಗೋಡೆಯ ಇಟ್ಟಿಗೆಗಳ ಅಂತರಂಗ, ಪರಿಪಾಟಲು, ದೇಶಹಿತಕ್ಕಾಗಿ ಅವೆಲ್ಲವನ್ನೂ ಮರೆಯುವ ಅವರ ಆದರ್ಶಗಳ ಬಗ್ಗೆ ದೇಶ ಮಾತಾಡಿದ್ದು ಕಡಿಮೆ. ಇದು ಅಂತಾ ಮಹಾಗೋಡೆಯ ಒಂದು ಇಟ್ಟಿಗೆ. ಹವಾಲ್ದಾರ್ ಕೆ.ಎಸ್. ನರೇಂದ್ರ.
ಒಂದು ರುದ್ರಭೀಕರ ಮಳೆಗಾಲದಲ್ಲಿ ದಕ್ಷಿಣ ಕೊಡಗಿನ ಗೋಣಿಕೊಪ್ಪ-ನಾಗರಹೊಳೆ ಹೆದ್ದಾರಿಯ ಗದ್ದೆ ಬಯಲು ಬೇಗೂರು ಕೊಲ್ಲಿ ಎಂಬಲ್ಲಿ ಮಾತಿಗೆ ಸಿಕ್ಕವರು ಹವಾಲ್ದಾರ್ ಕೆ.ಎಸ್. ನರೇಂದ್ರ. ಅವರು ನಾಟಿ ಕೆಲಸವನ್ನು ಕತ್ತಲಾಗುವುದರೊಳಗೆ ಮುಗಿಸಿಯೇ ತೀರುವೆನೆಂಬ ಹಟ ತೊಟ್ಟು ಗದ್ದೆಗೆ ಬಂದಿದ್ದರು. ಸೊಂಟದ ಕೆಳಗೆ ಪ್ಲಾಸ್ಟಿಕ್ ಸುತ್ತಿ, ತಲೆಗೆ ಹ್ಯಾಟು, ಖಾಕಿ ಬಣ್ಣದ ಆರ್ಮಿ ಸ್ವೆಟರ್ ಧರಿಸಿದ್ದ ಅವರು ಗದ್ದೆಯ ಏರಿಯಲ್ಲಿ ನಿಂತು ಆಳುಗಳನ್ನು ಆಗಾಗ್ಗೆ ಗದರಿಸುತ್ತಿದ್ದರು. ಟಿಲ್ಲರ್ ಕೆಸರು ಗದ್ದೆಯನ್ನು ಕರ್ಕಶವಾಗಿ ಸದ್ದು ಮಾಡುತ್ತಾ ಹದ ಮಾಡುತ್ತಿತ್ತು. ಹವಲ್ದಾರರ ಮಾತುಗಳು ಟಿಲ್ಲರ್ ಸದ್ದಿನ ನಡುವೆ ತೇಲಿಹೋಗದೆ ಅಸಲಿ ಮಿಲಿಟರಿ ಸ್ವರದಲ್ಲಿ “ಅಂದು ಜೈ ಜವಾನ್. ಇಂದು ಜೈ ಕಿಸಾನ್. ಇಂದು ಅನ್ನ ಬೆಳೆಯುತ್ತಿದ್ದೇನೆ. ಅಂದು ರಕ್ತದ ಅನ್ನವನ್ನೇ ಉಂಡಿದ್ದೇನೆ. ಬಾ ಕೂರು” ಎಂದವರೇ ಗದ್ದೆಯ ಏರಿಯಲ್ಲಿ ಕುಳಿತರು. “ಎಲ್ಲದಕ್ಕೂ ಸಿದ್ಧವಾಗುವುದು,ಎಲ್ಲವನ್ನೂ ಎದೆಗುಂದದೆ ಎದುರಿಸುವುದು ಯೋಧರ ಕೆಲಸ ಎಂದು ಹೇಳುತ್ತಾರಲ್ಲಾ. ಅದಕ್ಕೆ ಯುದ್ಧವೇ ಆಗಬೇಕೆಂದಿಲ್ಲ.
ಅದರಲ್ಲೂ ಬಿಎಸ್‌ಎಫ್‌ನಲ್ಲಿ ಗಡಿ ಕಾಯುವುದು ಎಂದರೆ ದಿನನಿತ್ಯ ರಕ್ತದ ಅನ್ನ ಉಂಡಂತೆ. ಅವರಿಗೆ ಪ್ರಕೃತಿಯೊಡನೆ ಹೋರಾಡುವುದೇ ಯುದ್ಧ. ಅದರ ಹೊರತಾಗಿಯೂ ನಾನು ಅಲ್ಲಿ ಎದುರಿಸಿದ, ಯಾರಿಗೂ ಬರಬಾರದ ಸಂಗತಿಯೊಂದಿದೆ” ಎನ್ನುತ್ತಾ ಹವಾಲ್ದಾರ್ ನರೇಂದ್ರ ಗಂಟಲು ಸರಿ ಮಾಡಿಕೊಂಡರು. ಧ್ಯಾನಕ್ಕಿಳಿದಂತೆ ಕಂಡರು. ಟಿಲ್ಲರಿನ ಕರ್ಕಶ ಸದ್ದು ಕೇಳಿಸದಾಯಿತು.“ನಾನು ಬಿಎಸ್‌ಎಫ್‌ಗೆ ಸೇರಿ ಏಳೆಂಟು ವರ್ಷ ಆಗಿತ್ತು. ಒಮ್ಮೆ ಮೇ ತಿಂಗಳ ರಜೆಯಲ್ಲಿ ಬಂದಾಗ ನನ್ನ ತಂದೆಯವರಿಗೆ ಹುಷಾರಿರಲಿಲ್ಲ. ಎರಡನೇ ವಿಶ್ವಯುದ್ಧದಲ್ಲಿ ಅವರ ಕಾಲಿಗೆ ಆಗಿದ್ದ ಸಣ್ಣ ನೋವು ವಯಸ್ಸಾದ ಮೇಲೆ ಮತ್ತೆ ಕಾಡುತ್ತಿತ್ತು. ನನಗೆ ರಜೆ ಮುಗಿಸಿ ಹೋಗುವಾಗ ಯಾಕೋ ಮನಸ್ಸು ಭಾರವಾಗಿತ್ತು. ಇಂಥ ಎಷ್ಟೋ ರಜೆ ಮುಗಿಸಿ ಮಿಲಿಟರಿಗೆ ಹೋಗುತ್ತಿದ್ದ ತಂದೆಯವರಿಗೆ ನನ್ನ ಮನಸ್ಸು ಅರ್ಥವಾಯಿತೇನೋ. ನನ್ನನ್ನು ಬಳಿಗೆ ಕರೆದು ‘ನೀನು ಚಿಂತೆ ಮಾಡಬೇಡ. ನನಗೇನೂ ಆಗುವುದಿಲ್ಲ. ಪುತ್ತರಿ ಹೊತ್ತಿಗೆ ನೀನು ಬರುತ್ತೀಯಲ್ಲಾ ಆಗ ನನ್ನ ಆರೋಗ್ಯ ಸುಧಾರಿಸಿರುತ್ತದೆ. ದೇಶದ ಕೆಲಸಕ್ಕೆ ಹೋಗುವವರು ಮನಸ್ಸು ಕೆಡಿಸಿಕೊಳ್ಳಬಾರದು. ಕಾರ್ಯಪ್ಪಜ್ಜ ನನಗೆ ಅದನ್ನೇ ಹೇಳುತ್ತಿದ್ದರು’ ಎಂದಿದ್ದರು.
ತಮ್ಮ ವೃತ್ತಿಜೀವನದ ಕೊನೆಯಲ್ಲಿ ಕಾರ್ಯಪ್ಪಜ್ಜನವರ ಸಾಮೀಪ್ಯ ಸಿಕಿದ್ದ ಅವರು ಆಗಾಗ್ಗೆ ಅವರನ್ನು ಉಲ್ಲೇಖಿಸುತ್ತಿದ್ದರು. ತಂದೆಯವರ ಮಾತು ನನಗೆ ಧೈರ್ಯ ತಂದಿತ್ತು. ನಾನು ಕುಪ್ವಾರಾ ಗಡಿಗೆ ಹೋದೆ” “ಕುಪ್ವಾರಾ ಆಗ ಬಿಗುವಿನಿಂದ ಇದ್ದ ಪ್ರದೇಶ. ನಮ್ಮದೋ ಗಡಿ ಭದ್ರತಾ ಪಡೆ. ಗಡಿಯೇ ನಮ್ಮ ಊರು. ಬಂಕರ್‌ಗಳೇ ಅರಮನೆ. ಕುಪ್ವಾರಾ ನಮಗೆಷ್ಟು ಒಗ್ಗಿತ್ತೆಂದರೆ ಎರಡು ಮೂರು ದಿನಗಳಿಗೊಮ್ಮೆ ಗುಂಡಿನ ಸದ್ದು ಕೇಳದಿದ್ದರೆ ಏನನ್ನೋ ಕಳೆದು ಕೊಂಡಂತಾಗುತ್ತಿತ್ತು. ಪಾಕಿಸ್ಥಾನ ಆ ಅವಕಾಶವನ್ನು ನಮಗೆ ಒದಗಿಸುತ್ತಲೇ ಇತ್ತು. ಬೆಟ್ಟದ ಮೇಲೆ ನಮ್ಮ ಬಂಕರುಗಳಿದ್ದರೆ ಬೆಟ್ಟದ ಕೆಳಗೆ ನಮ್ಮ ಬೇಸ್ ಇತ್ತು. ಯಾವಾಗಾದರೂ ಒಮ್ಮೊಮ್ಮೆ ಬೆಟ್ಟ ಇಳಿದು ಹೋಗಬಹುದಿತ್ತು. ಆದರೆ ಪರಿಸ್ಥಿತಿಗಳು ನಮ್ಮನ್ನು ಹೆಚ್ಚು ಬೆಟ್ಟ ಇಳಿಯಲು ಬಿಡುತ್ತಿರಲಿಲ್ಲ. ಕ್ರಮೇಣ ಆ ಬಂಕರುಗಳೇನಮಗೆ ಇಷ್ಟವಾಗಿಬಿಟ್ಟಿತ್ತು. ನಮ್ಮ ಅಧಿಕಾರಿಯಾಗಿ ಸೋಮಯ್ಯ ಎಂಬ ಕೊಡಗಿನ ಅಧಿಕಾರಿ ಇದ್ದರು. ಪಾಕ್ ಕಡೆಯಿಂದ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ನಮ್ಮ ಅಧಿಕಾರಿ ಸೋಮಯ್ಯನವರು ಕೆಟ್ಟದಾಗಿ ಪಾಕಿಗಳನ್ನು ಬಯ್ಯುತ್ತಾ ಬೊಬ್ಬೆ ಹೊಡೆಯುತ್ತಿದ್ದರು. ನಮಗೆ ಹುಚ್ಚು ಉತ್ಸಾಹ ಬಂದುಬಿಡುತ್ತಿತ್ತು. ನಾವೂ ಪಾಕಿಗಳಿಗೆ ಬಯ್ಯುತ್ತಾ ಉತ್ತರ ಕೊಡುತ್ತಿದ್ದೆವು. ಹೀಗೆ ಕಾಲ ಕಳೆಯುತ್ತಿತ್ತು. ನವೆಂಬರ್ ಬಂತು. ಹಿಮ ಬೀಳಲಾರಂಭಿಸಿತ್ತು. ಅಲ್ಲಿನ ಚಳಿಗಾಲ ಇಲ್ಲಿನ ಮಳೆಗಾಲಕ್ಕಿಂತ ಭೀಕರ. ಮಣ್ಣೆಲ್ಲಾ ಹಿಮದಿಂದ ಮುಚ್ಚಿರುತ್ತದೆ. ಬಂಕರೊಳಗೆ ನಾವು ಬೆಳಗ್ಗೆ ಬೆಳಿಗ್ಗೆಯೇ ರಮ್ ಕುಡಿಯುತ್ತಾ ಬಿಸಿಯೇರಿಸಿಕೊಳ್ಳುತ್ತಿದ್ದೆವು. ಈಗಲೂ ನೆನಪಿದೆ. ಅದೊಂದು ಮುಂಜಾನೆ. ಬೆಟ್ಟದ ಮೇಲಿನ ನಮ್ಮ ಬಂಕರಿಗೂ ಬೆಟ್ಟದ ಕೆಳಗಿನ ನಮ್ಮ ಬೇಸಿಗೂ ದೂರವಾಣಿಸಂಪರ್ಕ ಇರುತ್ತಿತ್ತು. ಬೇಸ್‌ನಲ್ಲಿ ನನ್ನ ಪಕ್ಕದೂರಿನ ಯುವಕ ನಾಯಕ್ ಉಮೇಶ್ ನನ್ನನ್ನು ಸಂಪರ್ಕಿಸಿದ್ದ. ಅವತ್ತು ಉಮೇಶ ಯಾಕೋ ಮೊದಲಿನಂತಿಲ್ಲ ಎಂಬುದು ಅವನ ಧ್ವನಿಯಿಂದಲೇ ನಾನು ಕಂಡುಹಿಡಿದೆ. ಅವನು ‘ನಿನಗೆ ಮನೆಯಿಂದ ಕಾಗದ ಬಂದಿದೆ’ ಎಂದು ಹೇಳಿದ.
ಆ ಚಳಿಯಲ್ಲೂ ನನಗೆ ಬೆಚ್ಚಗಿನ ಅನುಭವವಾಯಿತು. ಗಡಿಯಲ್ಲಿರುವವರಿಗೆ ಮನೆಯಿಂದ ಕಾಗದ ಬರುವಷ್ಟು ಸಂತೋಷವನ್ನು ಜಗತ್ತಿನ ಯಾವ ಸಂತೋಷವೂ ಕೊಡುವುದಿಲ್ಲ. ನನಗೂ ಹಾಗೆ ಅಯಿತು. ಅದರೆ ಉಮೇಶ ತಡೆದೂ ತಡೆದೂ ‘ನರೇಂದ್ರ, ಬಂದಿರುವುದು ನಿನ್ನಪ್ಪನ ತಿಥಿ ಕಾಗದ. ತಿಥಿ ಮುಗಿದು ಇಂದಿಗೆ ಮೂರು ದಿನ ಅಯಿತು’ ಎಂದು ಭಾರೀ ಕಷ್ಟ ಪಟ್ಟುಕೊಂಡು ಹೇಳಿ ಸಂಪರ್ಕ ಕಟ್ ಮಾಡಿದ. ರಿಸೀವರ್ ಹಿಡಿದಿದ್ದವನು ಕುಸಿದು ಬಿದ್ದೆ. ಎಲ್ಲವೂಕತ್ತಲು ಕತ್ತಲಾದಂತಾಯಿತು. ನನಗೇನೂ ಆಗುವುದಿಲ್ಲ, ನೀನು ಬರುವವರೆಗೆ ಸುಧಾರಿಸಿರುತ್ತೇನಪ್ಪಾ ಎನ್ನುತ್ತಿದ್ದ ನನ್ನಪ್ಪ, ಮಿಲಿಟರಿಯ ಕಥೆಗಳಿಂದಲೇ ನಮ್ಮನ್ನು ಬೆಳೆಸಿದ್ದ ಅಪ್ಪ, ನನ್ನ ಪಾಲಿನ ಮಹಾ ವಾರಿಯರ್ ಆಗಿದ್ದ ಅಪ್ಪ, ನನಗೆ ಗಡಿಯ ಹುಚ್ಚು ಹಿಡಿಸಿದ್ದ ಅಪ್ಪ ನನ್ನನ್ನು ಬಿಟ್ಟು ಹೋಗಿದ್ದರು. ಅಪ್ಪನ ಮುಖ ನೋಡುವ ಭಾಗ್ಯವನ್ನೇ ನನ್ನಿಂದ ದೇವರು ಕಿತ್ತುಕೊಂಡಿದ್ದ. ಎಷ್ಟು ಹೊತ್ತು ಹಾಗೆ ಕುಸಿದಿದ್ದೆನೋ ಗೊತ್ತಿಲ್ಲ. ಗೆಳೆಯರು ಬಂದು ಎಬ್ಬಿಸಿದರು. ಹಿರಿಮಗನಾದ ನಾನೇ ಅವರ ವಿಧಿಗಳನ್ನು ಮಾಡಬೇಕಿತ್ತು. ನಿಧನರಾದ ಮರುದಿನವೇ ನನ್ನ ತಲೆಯನ್ನು ಬೋಳಿಸಿರಬೇಕಿತ್ತು. ಆದರೆ ನಾನು ಮಣಭಾರದ ಬಂದೂಕು, ಮದ್ದುಗುಂಡುಗಳ ಮ್ಯಾಗಜೀನ್ ಹೊತ್ತುಕೊಂಡು ಚಳಿಯಿಂದ ಜೀವ ಉಳಿಸಿಕೊಳ್ಳಲು ಬೆಳಿಗ್ಗೆ ಬೆಳಿಗ್ಗೆಯೇ ರಮ್ ಹೀರುತ್ತಿದ್ದೆ.
ನನ್ನಪ್ಪ ಸತ್ತಾಗ ಬಂಕರಿನ ಗೆಳೆಯರೆಲ್ಲರಿಗೂ ಅವರವರ ಅಪ್ಪ ನೆನಪಾಗಿದ್ದರು. ನಾನು ಅತ್ತಾಗ ಅವರೂ ಅತ್ತಿದ್ದರು. ನಮ್ಮ ಅಧಿಕಾರಿ ಸೋಮಯ್ಯನವರು ‘ಯೋಧನಿಗೆ ಇಂಥದ್ದೆಲ್ಲಾ ಇದ್ದದ್ದೇ. ದೇಶದ ಕೆಲಸಕ್ಕೆ ಬಂದವನಿಗೆ ಇದು ಅನಿವಾರ್ಯ. ಧೈರ್ಯ ತಂದುಕೋಬೇಕು’ ಎಂದು ಧೈರ್ಯ ತುಂಬಿದರು. ‘ಸರ್ ನಾನೀಗಲೇ ಹೊರಡಬೇಕು. ಕಳುಹಿಸಿಕೊಡಿ’ ಎಂದೆ. ಆಗ ಕುಪ್ವಾರಾದಿಂದ ಜಮ್ಮುವಿಗೆ ಹೇಗೆಂದರೆ ಹಾಗೆ ಹೋಗುವಂತಿರಲಿಲ್ಲ. ದಿನಕ್ಕೆರಡು ಬಾರಿ ಮಿಲಿಟರಿ ರಕ್ಷಣೆಯಲ್ಲಿ ಸಾರ್ವಜನಿಕರು ಸಂಚರಿಸಬೇಕಿತ್ತು. ನನ್ನ ದುರದೃಷ್ಟಕ್ಕೆ ಅಂದು ಡ್ರೈ ಡೇ. ಅಂದು ಕಾನ್‌ವಾಯ್ ಹೊರಡುವಂತಿಲ್ಲ. ನಾನೊಬ್ಬನೇ ಹೋಗುತ್ತೇನೆಂದು ಪಟ್ಟು ಹಿಡಿದೆ. ಸೋಮಯ್ಯ ನವರು ‘ದುಡುಕಬೇಡ. ನಾಳೆ ಬೆಳಗ್ಗೆ ಆದಷ್ಟು ಬೇಗ ವ್ಯವಸ್ಥೆ ಮಾಡುತ್ತೇನೆ’ ಎಂದರು. ಆ ರಾತ್ರಿ ರಾತ್ರಿಯಲ್ಲ. ಇಡೀ ಬಂಕರ್ ಸೂತಕದಲ್ಲಿದ್ದಂತೆನಿಸಿತು. ನನ್ನ ಗೆಳೆಯರೂ ಅಂದು ಊಟ ಮಾಡಲಿಲ್ಲ. ಮರುದಿನ ಬೆಳಗ್ಗೆ ಬೇಗನೆ ನನಗಾಗಿ ಸೋಮಯ್ಯನವರು ವಾಹನದ ವ್ಯವಸ್ಥೆ ಮಾಡಿದ್ದರು.
ಒಬ್ಬನೇ ಹೋಗಬೇಡವೆಂದು ಗೆಳೆಯರು ನನ್ನ ರಕ್ಷಣೆಗೆ ಬಂದರು. ನಾನು ಜಮ್ಮು ತಲುಪಿದೆ. ನಾಲ್ಕು ದಿನಗಳ ನಂತರ ಕೊಡಗು ಮುಟ್ಟಿದೆ. ಅಮ್ಮ ಗೇಟಿನಲ್ಲಿ ನನ್ನನ್ನೇ ಕಾಯುತ್ತಾ ನಿಂತಿದ್ದರು. ಎಷ್ಟೋ ಹೊತ್ತಿನಿಂದ ಹಾಗೆ ನಿಂತಿದ್ದರಂತೆ. ದಿಗ್ಭ್ರಾಂತನಾಗಿದ್ದೆ. ಅಮ್ಮ ಬಿಳಿ ಸೀರೆ ಉಟ್ಟು ನಿಂತಿದ್ದರು. ಅಮ್ಮನನ್ನು ನೋಡಿ ನಾನು ಮಂಕಾಗಿ ಬಿದ್ದುಬಿಟ್ಟೆ.”ಕಥೆ ಹೇಳುತ್ತಾ ನಡುನಡುವೆ ಬಿಕ್ಕುತ್ತಿದ್ದ ಹವಾಲ್ದಾರ್ ನರೇಂದ್ರ  ಎರಡೂ ಕೈಗಳಿಂದ ಕಣ್ಣನ್ನೊಮ್ಮೆ ಒರೆಸಿಕೊಂಡರು. ಬುಳುಬುಳನೆ ಹರಿದ ಕಣ್ಣೀರು ನಾಟಿ ಗದ್ದೆಗೆ ಬಿತ್ತು. ಬೆರೆತಿತು. “ಎಲ್ಲಾ ಮುಗಿಸಿ ಕುಪ್ವಾರಾಕ್ಕೆ ಬೆಳಿಗ್ಗೆಯೇ ಬಂದು ಮುಟ್ಟಿದೆ. ಗೆಳೆಯರೆಲ್ಲರೂ ಬೆಟ್ಟದ ಮೇಲಿದ್ದರು. ನನಗೂ ತಕ್ಷಣ ಬೆಟ್ಟಕ್ಕೆ ಹೋಗಬೇಕಿತ್ತು. ಪ್ರಯಾಣದ ಆಯಾಸಕ್ಕೆ ಬಂಕರಿನಲ್ಲೇ ಸ್ವಲ್ಪ ಮಲಗಬೇಕು ಎಂದುಕೊಳ್ಳುತ್ತಿದ್ದೆ. ಗೆಳೆಯರೆಲ್ಲರೂ ಸುತ್ತ ಕುಳಿತು ಮನೆ ಸಮಾಚಾರವನ್ನು ವಿಚಾರಿಸುತ್ತಿದ್ದರು.
ಅಷ್ಟರಲ್ಲೇ ಧಡಧಡ ಎಂದು ಗುಂಡುಗಳು ಹಾರಿ ಬರುವ ಸದ್ದುಗಳು ಕೇಳಿದವು. ಪಾಕಿಗಳು ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದರು. ನಮ್ಮ ಪಿತ್ತ ನೆತ್ತಿಗೇರಿತು. ‘ನೆಂಟರು ಬಂದರೆಂದು ಕಾಣುತ್ತದೆ. ಬನ್ನಿ ಮರ್ಯಾದಿ ಮಾಡೋಣ’ ಎನ್ನುತ್ತಾ ಹೊರಗೆ ಬಂದೆವು. ನಾವು ಅವರಿಗೆ ತಕ್ಕ ಉತ್ತರವನ್ನು ಕೊಟ್ಟೆವು. ನಾನು ಹಾರಿಸಿದ ಪ್ರತೀ ಗುಂಡಿನಲ್ಲೂ ಅಪ್ಪ ಇದ್ದಂತೆನಿಸಿತ್ತು. ಹೀಗೆ 26 ವರ್ಷ ಭಾರತದ ಅನ್ಯಾನ್ಯ ಗಡಿಗಳಲ್ಲಿ ಬದುಕಿದೆ. ಆ 26 ವರ್ಷದ ಒಂದೊಂದು ಕ್ಷಣವನ್ನೂ ಮರೆಯಲಾಗದು. ಒಮ್ಮೊಮ್ಮೆ ಅತೀ ಶೀತ ಪ್ರದೇಶದ ಗಡಿಗಳು, ಇನ್ನೊಮ್ಮೆ ಅತೀ ಸೆಖೆಯ ಗಡಿಗಳು, ಮತ್ತೊಮ್ಮೆ ಅತೀ ಮಳೆಯ ಗಡಿಗಳು. ಎಲ್ಲಾ ಕಡೆಯೂ ನಾನು ಗಡಿ ಕಾವಲು ಮಾಡಿದ್ದೇನೆ. ಬಿಎಸ್‌ಎಫ್ ನನಗೆ ಭಾರತವನ್ನು ಅರ್ಥ ಮಾಡಿಸಿಕೊಟ್ಟಿದೆ. ದೇಶವನ್ನು ಮತ್ತಷ್ಟು ಪ್ರೀತಿಸುವುದನ್ನು ಕಲಿಸಿದೆ. ಗಡಿ ತಂಟೆಕೋರರನ್ನು ಇದೇ ಕೈಯಿಂದ ನಿರ್ದಾಕ್ಷಿಣ್ಯದಿಂದ ಸದೆಬಡಿದಿದ್ದೇನೆ.
ಕುಪ್ವಾರಾ, ಗುಲ್ಮಾರ್ಗ್, ಬಿಕಾನೇರ್ಗಳಲ್ಲಿ ರಾತ್ರಿ ಪೆಟ್ರೋಲಿಂಗ್, ನಾಕಾಬಂಧಿ, ಪಹರೆಗಳನ್ನು ಎಂದಾದರೂ ಮರೆಯುವುದುಂಟೇ? ನೋಮ್ಯಾನ್ಸ್ ಲೈನ್ ಇರುವ ರಣಧೀರ್‌ಸಿಂಗ್ ಪುರದಲ್ಲೂ ಕೆಲಸ ಮಾಡಿದ್ದೇನೆ. ಪ್ರತೀ ಗಡಿಯಲ್ಲೂ ಚಿತ್ರ ವಿಚಿತ್ರವಾದ ಅನುಭವಗಳು, ಪ್ರತೀ ಗಡಿಯಲ್ಲೂ ನೂರಾರು ಕಥೆಗಳು.”“ಒಮ್ಮೆ ನಾನು ಪಾಕ್‌ನಲ್ಲಿದ್ದೆ, ಕೇಳು” ಎಂದರು ನರೇಂದ್ರ ಮಾಮ. “ಒಂದು ದಿನ ಬೇಲಿಯಾಚೆಯಿದ್ದ ಪಾಕ್ ಸೈನಿಕನೊಬ್ಬ ಹಂದಿಯೊಂದಕ್ಕೆ ಗುಂಡು ಹೊಡೆದಿದ್ದೇವೆಂದೂ ಬೇಕಾದರೆ ಕೊಂಡೊಯ್ಯಬಹುದೆಂದೂ ನಮಗೆ ತಿಳಿಸಿದ. ಕೆಲವು ಗೆಳೆಯರು ಗಡಿ ದಾಟಬೇಡ ಎಂದರು. ಕೊಡಗಿಗೆ ಹೋಗಿ ಹತ್ತು ತಿಂಗಳಾಗಿತ್ತು. ಹಂದಿ ಮಾಂಸದ ಆಸೆಯಾಗಿತ್ತು. ಒಂದಿಷ್ಟು ಮ್ಯಾಗಜೀನ್ ಜೇಬಿಗೇರಿಸಿ, ಬಂದೂಕನ್ನು ಕುತ್ತಿಗೆಯಲ್ಲಿ ಸಿಕ್ಕಿಸಿ ಬೇಲಿ ಹಾರಿದೆ. ಪಾಕ್ ನೆಲದಲ್ಲಿದ್ದೆ. ಒಂದು ಕಾಲದ ನಮ್ಮದೇ ನೆಲ. ಒಮ್ಮೆ ಮೈ ಜುಂ ಎನ್ನಿಸಿತ್ತು. ಅವರ ನೆಲದ ಮೇಲೆ ನಮಗೆಂದೂ ಆಸೆ ಇರಲಿಲ್ಲ. ಆದರೂ ಇದು ನಮ್ಮ ನೆಲ ಎಂದೇ ಮನಸ್ಸು ಹೇಳುತ್ತಿತ್ತು.
ಹಂದಿಯನ್ನು ಎಳೆದುಕೊಂಡು ಬಂದೆ. ಇಂದು ಆ ನಂಬಿಕೆ ಪಾಕ್ ಸೈನಿಕರ ಮೇಲೆ ಉಳಿದಿಲ್ಲ. ಆದರೆ ನಾವೆಂದೂ ಯಾವುದೇ ಕಾರಣಕ್ಕೂ ಪಾಕ್ ಸೈನಿಕರನ್ನು ಗಡಿ ಪ್ರವೇಶಿಸಲು ಆಸ್ಪದ ಕೊಡಲಿಲ್ಲ.”ಈಗ ಹೇಳು ನಮ್ಮದು ರಕ್ತದ ಅನ್ನ ಅಲ್ಲವಾ? ಎಂದರು ನರೇಂದ್ರ ಮಾಮ. “1997ರಲ್ಲಿ ನಾನು ನಿವೃತ್ತನಾಗಿ ಊರಿಗೆ ಬಂದೆ. ಯಾರೂ ನನ್ನಲ್ಲಿ ಸೀಮಾದ ಕಥೆಯನ್ನು ಕೇಳಲಿಲ್ಲ. ನಮ್ಮ ಜನಕ್ಕೆ ಮಿಲಿಟರಿಯವರು ಎಂದರೆ ಒಂದು ಕೆಲಸ ಮಾತ್ರ. ನಮ್ಮ ಜನಕ್ಕೆ ಮಿಲಿಟರಿಯ ಮಹತ್ವ ಗೊತ್ತಿಲ್ಲ. ಉತ್ತರದಲ್ಲಿ ನೋಡಬೇಕು, ನಾವು ಕೆಲಸದ ನಿಮಿತ್ತ ಹಳ್ಳಿಗಳಿಗೆ ಹೋದಾಗ ಹೆಂಗಸರು ತಿಲಕ ಇಡುತ್ತಾರೆ. ಸಿಹಿ ಉಂಡೆ ತಿನ್ನಿಸಿ ಕಳುಹಿಸುತ್ತಾರೆ. ರೈಲಲ್ಲಿ ಪರಿಚಯವಾದವರು ಮಕ್ಕಳನ್ನು ಕಾಲಿಗೆ ಬೀಳಿಸುತ್ತಾರೆ.”‘ಏ ಸರಿಯಾಗಿ ನಾಟಿ ಮಾಡ್ರೋ’ ಎಂದು ಆಳುಗಳನ್ನು ಗದರಿದರು. ಕಥೆ ಹೇಳುತ್ತಿದರೂ ಕರ್ತವ್ಯದ ಎಚ್ಚರ ಗಡಿಯಲ್ಲಿ ಕಲಿತ ಪಾಠ ಎನ್ನಿಸಿತ್ತು.ಬಿಎಸ್‌ಎಫ್ ನಿವೃತ್ತ ಯೋಧರದ್ದು ಜೀವನದಲ್ಲಿ ಮತ್ತೊಂದು ಹೋರಾಟ. ಅಲ್ಲಿ ನಿವೃತ್ತರಾಗುವುದೆಂದರೆ ಅನಾರೋಗ್ಯ ಪ್ರಾರಂಭ ಎಂದೇ ಅರ್ಥ. ನೋವಿನೊಟ್ಟಿಗೆ ಗಡಿಯನ್ನೂ ನೆನಪಿಸಿಕೊಂಡು ಬದುಕುವುದು ಬಿಎಸ್‌ಎಫ್ ಯೋಧರ ಸಾಮಾನ್ಯ ಲಕ್ಷಣ. ಕಳೆದ 50 ವರ್ಷಗಳಿಂದ ನಮಗೆ ಕಂಡ ಆ ಮಹಾಗೋಡೆಯ ಇಟ್ಟಿಗೆಗಳೆಲ್ಲವೂ ಅಂಥವೇ.

 

ಸಂಗ್ರಹ – ಪೃಥ ಅಗ್ನಿಹೋತ್ರಿ

Tags

Related Articles

Close