ಪ್ರಚಲಿತ

ಮೂರು ಕಾಂಗ್ರೆಸ್ ಮಂತ್ರಿಗಳು ಮೂರು ತಿಂಗಳೊಳಗೆ ಬಿಜೆಪಿಗೆ! ಆ ಮೂರು ಸಚಿವರಾರು ಗೊತ್ತೇ?!

ಸಿದ್ದರಾಮಯ್ಯನ ಸರ್ವಾಧಿಕಾರಿ ಧೋರಣೆಗೆ ಸ್ವತಃ ಕಾಂಗ್ರೆಸ್ಸಿಗರೇ ಗಡಗಡ ಅಲುಗಾಡುತ್ತಿದ್ದಾರೆ. ಪಕ್ಷದಲ್ಲಿನ ನಿಷ್ಠಾವಂತರಿಗೆ, ಮೂಲ ಕಾಂಗ್ರೆಸ್ಸಿಗರಿಗೆ ಆ ಪಕ್ಷದಲ್ಲಿ ಬೆಲೆಯೇ ಇಲ್ಲ. ಜನತಾದಳದಲ್ಲಿದ್ದ ಸಿದ್ದರಾಮಯ್ಯ ಯಾವಾಗ ಕಾಂಗ್ರೆಸ್ ಗೆ ಬಂದರೋ ಅಂದಿನಿಂದ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಲಾರಂಭಿಸಿದರು. ಸಿದ್ದುನನ್ನು ಯಾಕಾಗಿ ಕಾಂಗ್ರೆಸ್ ಗೆ ಕರೆತಂದೆವೋ ಎಂದು ಪಶ್ಚಾತಾಪಡುವಂತಾಯಿತು. ಒಂದು ಕಡೆ ಹೈಕಮಾಂಡಿನ ಮುಂದೆ ಮಂಡಿಯೂರಿ ಗುಲಾಮರಂತೆ ಬದುಕಬೇಕು. ಮತ್ತೊಂದೆಡೆ ಸಿದ್ದರಾಮಯ್ಯನ ತುಘಲಕ್ ದರ್ಬಾರ್‍ಗೆ ಜನತೆ ಮಾತ್ರವಲ್ಲ, ಮೂಲ ಕಾಂಗ್ರೆಸ್ಸಿಗರೂ ಜರ್ಝರಿತರಾಗಿದ್ದಾರೆ. ಇದೆಲ್ಲಾ, ಮುಂದೆ ಕಾಂಗ್ರೆಸ್‍ನ ಹಲವು ವಿಕೆಟ್ ಪತನವಾಗುವ ಹತ್ತಿರಕ್ಕೆ ತಂದು ನಿಲ್ಲಿಸಿದೆ.

ಸದ್ಯದ ಮಾಹಿತಿಯ ಪ್ರಕಾರ ಆರಂಭದಲ್ಲಿ ಕಾಂಗ್ರೆಸ್‍ನ ಮೂರು ವಿಕೆಟ್ ಪತನವಾಗುವ ಸುಳಿವು ಲಭಿಸಿದೆ. ಒಂದು ಕಡೆ ಕಾಂಗ್ರೆಸ್ ನಾಯಕತ್ವದ ನಿರಂಕುಶ ಪ್ರಭುತ್ವದಿಂದ ಬೇಸರವಾದರೆ ಮತ್ತೊಂದೆಡೆ ಅವರನ್ನು ಮೂಲೆಗುಂಪಾಗಿ ಮಾಡುವುದರಿಂದ ರೋಸಿಹೋಗಿ ಈ ಮೂವರು ಮುಖಂಡರು ತಾವಾಗಿಯೇ ಬಿಜೆಪಿಗೆ ಬರುತ್ತೇವೆಂದು ಬಿಜೆಪಿಯ ಬಾಗಿಲು ಬಡಿದಿದ್ದಾರೆ ಎಂಬ ಮಾಹಿತಿ ಬಲ್ಲಮೂಲಗಳಿಂದ ಲಭಿಸಿದೆ. ಇನ್ನು ಕೆಲವರಿಗೆ ಬಿಜೆಪಿಯೇ ಗಾಳ ಹಾಕಿರುವುದಾಗಿ ಹೇಳಲಾಗಿದೆ. ಸದ್ಯದ ಮಟ್ಟಿಗೆ ಬಿಜೆಪಿಗೆ ಬರುವ ಮುಖಂಡರಲ್ಲಿ ಒಬ್ಬರು ಕಾಂಗ್ರೆಸ್‍ನ ಹಿರಿಯ ಮುಖಂಡರಾಗಿದ್ದು, ಕಾಂಗ್ರೆಸ್‍ನಿಂದ ಮೂಲೆ ಗುಂಪಾದವರಾಗಿದ್ದಾರೆ. ಇದೇ ರೀತಿ ಹಲವು ಮೂಲೆಗುಂಪಾದವರು ಬಿಜೆಪಿಗೆ ಹಾರುವ ಸುಳಿವು ಲಭಿಸಿದೆ. ಸದ್ಯದಲ್ಲೇ ಬಿಜೆಪಿಗೆ ಹಾರಲಿರುವ ಮೂವರು ಕಾಂಗ್ರೆಸ್ ಮುಖಂಡರ್ಯಾರು ಗೊತ್ತೇ?

1. ಆರ್.ವಿ. ದೇಶಪಾಂಡೆ
2. ಪ್ರಮೋದ್ ಮಧ್ವರಾಜ್
3. ಶಕುಂತಳಾ ಶೆಟ್ಟಿ

ಆರ್.ವಿ ದೇಶಪಾಂಡೆ ಅವರು ಕಾಂಗ್ರೆಸ್‍ನ ನಿಷ್ಠಾವಂತ ಮುಖಂಡ. ಆದರೆ ಇಂದು ಅವರು ಎಲ್ಲಿದ್ದಾರೆಂದೂ ಗೊತ್ತಾಗುತ್ತಿಲ್ಲ. ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿರುವ ದೇಶಪಾಂಡೆಗೆ ಪಕ್ಷದೊಳಗಿನ ಚಟುವಟಿಕೆಗಳು  ಬೇಸರ ತರಿಸಿದೆ. ಅದಕ್ಕಾಗಿಯೇ ಅವರು ಪಕ್ಷ ತೊರೆದು ಬಿಜೆಪಿ ಪಾಳಯ ಸೇರುತ್ತಾರೆಂಬ ಮಾಹಿತಿ ಇದೆ. ಕೆಲವು ಬಿಜೆಪಿಗರು ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸಿದ್ದಾರೆಂಬ ಮಾತುಗಳೂ ಕೇಳಿಬಂದಿವೆ.

ಇನ್ನು ಪ್ರಮೋದ್ ಮಧ್ವರಾಜ್ ಅವರು ಹಿಂದಿನಿಂದಲೂ ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಈ ಬಗ್ಗೆ ಜಾಲತಾಣಗಳಲ್ಲೂ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದನ್ನು ಸ್ವತಃ ಮಧ್ವರಾಜ್ ತಿರಸ್ಕರಿಸಿದ್ದರು. ಸದ್ಯದಲ್ಲಿ ಹಿಂದೂ ಸಂಘಟನೆಗಳ ಜೊತೆಗೆ ರಹಸ್ಯವಾಗಿ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಅವರು ಬಿಜೆಪಿಗೆ ಬರುವುದು ನಿಚ್ಚಳವಾಗಿದೆ. ಸಚಿವರಾದ ಆರ್.ವಿ. ದೇಶಪಾಂಡೆ ಹಾಗೂ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಬಿಜೆಪಿಯ ದೆಹಲಿ ಮಟ್ಟದ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆರ್‍ಎಸ್‍ಎಸ್’ನ ಪ್ರಮುಖರು ಸಹ ಅವರನ್ನು ಸೆಳೆಯುವ ದಿಸೆಯಲ್ಲಿ ತಮ್ಮ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರು ಮೂಲತಃ ಸಂಘಪರಿವಾರದಲ್ಲಿ ಗುರುತಿಸಿಕೊಂಡವರು. ಅವರ ರಾಜಕೀಯ ವಿದ್ಯಮಾನಗಳಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನ ಸಭಾ ಚುನಾವಣೆಯಲ್ಲಿ ಜಯಗಳಿಸಿದರು. ಆದರೆ ಶಾಸಕಿಯಾದರೂ ಸಹ ಅವರಿನ್ನೂ ಸಂಘಪರಿವಾರದ ಧೋರಣೆಯನ್ನು ಹೊಂದಿದ್ದಾರೆ ಎಂಬ ಆರೋಪವನ್ನು ಸ್ವತಃ ಕಾಂಗ್ರೆಸ್ಸಿಗರೇ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ಶಕುಂತಳಾ ಶೆಟ್ಟಿಯವರೊಂದಿಗೆ ಮುನಿಸಿಕೊಂಡಿದ್ದು, ಇಂದಿಗೂ ಅವರನ್ನು ಬಿಜೆಪಿಗರೆಂಬಂತೆಯೇ ನೋಡುತ್ತಿದ್ದಾರೆ. ಪುತ್ತೂರು ಮಹಲಿಂಗೇಶ್ವರ ದೇಗುಲದ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಡಿಸಿಯ ಹೆಸರು ವಿವಾದ ಇದ್ದಿದ್ದಕ್ಕಾಗಿ ವಿವಾದವಾಗಿದ್ದಾಗ, ಹಿಂದೂ ಸಂಘಟನೆಗಳ ಪರವಾಗಿ ಕೆಲಸ ಮಾಡಿದ್ದರೆಂಬ ಆರೋಪವೂ ಶಕುಂತಳಾ ಶೆಟ್ಟಿಯವರ ಮೇಲಿದೆ. ಈ ಮುಂಚೆಯೇ ಅವರು ಕಾಂಗ್ರೆಸ್ ತೊರೆಯಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದರೂ ಇದೆಲ್ಲಾ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ ಚುನಾವಣೆಯ ಸಂದರ್ಭ ಅವರು ಮತ್ತೆ ಬಿಜೆಪಿಗೆ ಹಾರಲಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿರುವ ಮಾತುಗಳು.

ಇನ್ನು ಬಿಜೆಪಿಗೆ ಹಾರಲಿರುವ ಪಟ್ಟಿಯಲ್ಲಿ ಈಶ್ವರ ಖಂಡ್ರೆಯವರ ಹೆಸರೂ ಇದೆ. ಲಿಂಗಾಯಿತ ಪ್ರತ್ಯೇಕ ಧರ್ಮ ಎನ್ನುವುದನ್ನು ಅವರು ಒಪ್ಪುವುದಿಲ್ಲ. ಅಲ್ಲದೆ ಸಚಿವ ಎಂ.ಬಿ ಪಾಟೀಲ್ ಅವರು ಸಿದ್ದಗಂಗಾ ಸ್ವಾಮೀಜಿಗಳು ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದರು. ಆದರೆ ಇದೆಲ್ಲಾ ಈಶ್ವರ ಖಂಡ್ರೆಯವರ ಮನಸ್ಸಿಗೆ ನೋವಾಗಿದ್ದು, ವೀರಶೈವರು ಬೇರೆ ಅಲ್ಲ, ಲಿಂಗಾಯತರು ಬೇರೆ ಅಲ್ಲ. ಬಸವಣ್ಣನವರು ಇವ ನಮ್ಮವ, ಇವ ನಮ್ಮವ ಎಂದಿದ್ದರು. ಆದರೆ ಕೆಲವರು ನಮ್ಮವರೇ ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ. ಕೆಲವರು ನಮ್ಮ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ತಿಳಿಯದ ನಮ್ಮವರು ದುರ್ಬಲರಾಗುತ್ತಿದ್ದಾರೆ. ಹಿಂದೆ ಕೆಲವರು ವೀರಶೈವರು, ಲಿಂಗಾಯತರು ಒಂದೇ ಎಂದು ಬರೆದಿದ್ದರು. ಆದರೆ ಅವರೇ ಇಂದು ಬೇರೆ ಬೇರೆ ಎನ್ನುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಖಂಡ್ರೆಯವರ ಮನಸ್ತಾಪವನ್ನೇ ಇಟ್ಟುಕೊಂಡು ಬಿಜೆಪಿ ಅವರನ್ನು ಪಕ್ಷಕ್ಕೆ ಸೆಳೆಯಲು ತಂತ್ರ ಅನುಸರಿಸುತ್ತಿದ್ದು, ಇನ್ನೂ ಫೈನಲ್ ಆಗಿಲ್ಲ.

ಉಳಿದಂತೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಬಿಜೆಪಿಗೆ ಹಾರಲಿದ್ದಾರೆ ಎಂಬ ಗುಸುಗುಸು ಹಬ್ಬಿದ್ದು, ಆದರೆ ಅವರಿಬ್ಬರು ಕಾಂಗ್ರೆಸ್ ತೊರೆಯುವುದು ದೂರದ ಮಾತು ಎಂದು ತಿಳಿದುಬಂದಿದೆ.

ಕಾಂಗ್ರೆಸ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೇಲುಗೈ ಸಾಧಿಸುವ ಕನಸು ಕಾಣುತ್ತಿದೆ. ಆದರೆ ಕಾಂಗ್ರೆಸ್, ಜನತೆಯ ವಿಶ್ವಾಸ ಕಳೆದುಕೊಂಡಿದ್ದಲ್ಲದೆ, ಪಕ್ಷದೊಳಗಿನ ಭಿನ್ನಮತವನ್ನು ಸರಿಪಡಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್‍ನ ನಿರಂಕುಶ ಆಡಳಿತವು ಅವರನ್ನು ಸೊಲ್ಲೆತ್ತದಂತೆ ಮಾಡುತ್ತಿದ್ದು ಸದ್ಯದ ಪ್ರಕಾರ ಇದೆಲ್ಲಾ ಬೂದಿ ಮುಚ್ಚಿದ ಕೆಂಡದಂತಿದೆ. ನಾಯಕತ್ವದ ವಿರುದ್ಧ ಮಾತಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆಯೊಡ್ಡುವುದು ಅವರನ್ನು ಇನ್ನಿಲ್ಲದಂತೆ ಬೇಸರಕ್ಕೆ ನೂಕಿದೆ. ಅಲ್ಲದೆ ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಗಳು ಕಾಂಗ್ರೆಸ್‍ನಲ್ಲಿರುವ ಹಿಂದೂ ಮುಖಂಡರಿಗೆ ಬೇಸರ ತರಿಸಿದೆ. ಕಾಂಗ್ರೆಸ್‍ ನ ಹಿಂದೂ ವಿರೋಧಿ ನೀತಿಯಿಂದ ಪಕ್ಷದ ಮುಖಂಡರು ಬೆಲೆತೆರುತ್ತಿದ್ದು, ಜನರು ಅವರ ವಿರುದ್ಧ ಬಹಿರಂಗ ಟೀಕೆಯನ್ನು ಮಾಡುತ್ತಿದ್ದಾರೆ.

ಇನ್ನೊಂದೆಡೆ ಸಿದ್ದರಾಮಯ್ಯನ ಸರ್ವಾಧಿಕಾರಿ ಧೋರಣೆ! ಜನತಾಪರಿವಾರದಿಂದ ಬಂದಿರುವ ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಹುದ್ದೆಗೇರಿಸಲಾಯಿತು. ಆ ಬಳಿಕ ಸಿದ್ದು ಆಡಿದ್ದೇ ಆಟ… ಮಾಡಿದ್ದೇ ಕೆಲಸ. ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಆಹ್ವಾನಿಸಿದ ಎಚ್. ವಿಶ್ವನಾಥ್ ಅವರೇ ಸಿದ್ದುವನ್ನು ಯಾಕಾಗಿ ಆಹ್ವಾನಿಸಿದೆನೋ ಎಂದು ಲಬೋಲಬೋ ಎನ್ನುವಂತಾಯಿತು. ಸಿದ್ದರಾಮಯ್ಯನನ್ನು ಬಹಿರಂಗವಾಗಿಯೇ ಟೀಕಿಸಲಾರಂಭಿಸಿದ್ದ ಎಚ್. ವಿಶ್ವನಾಥ್ ಕೊನೆಗೊಮ್ಮೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ನೊಬ್ಬರು ಮಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ. ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎನ್ನುವ ಸ್ಥಿತಿ ಜನಾರ್ದನ ಪೂಜಾರಿಯದ್ದು. ಸಿದ್ದರಾಮಯ್ಯನ ಆಡಳಿತ ಕ್ರಮದಿಂದ ಬೇಸತ್ತು ಬಹಿರಂಗವಾಗಿಯೇ ತನ್ನದೇ ಸರಕಾರವನ್ನು ಟೀಕಿಸುತ್ತಿದ್ದ  ಜನಾರ್ದನ ಪೂಜಾರಿಯವರನ್ನು ಮೂಲೆಗುಂಪು ಮಾಡಲಾಯಿತು. ಬ್ಯಾಂಕಿಂಗ್‍ನಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧಿಸಿದ್ದ ಪೂಜಾರಿ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಯಾವಾಗ ಸಿದ್ದು ಕಾಂಗ್ರೆಸ್‍ ಗೆ ವಕ್ಕರಿಸಿದರೂ ಕಾಂಗ್ರೆಸ್‍ನ ನಿಷ್ಠಾವಂತ ಮುಖಂಡರಾಗಿದ್ದ ಪೂಜಾರಿಯವರ ಮಾತುಗಳಿಗೆ ಬೆಲೆಯೇ ಇಲ್ಲದಾಯ್ತು. ಇವರ ನಿಷ್ಠಾವಂತ ಶಿಷ್ಯರಾಗಿದ್ದ ಹರಿಕೃಷ್ಣ ಬಂಟ್ವಾಳ್ ಅವರು ಪೂಜಾರಿಗೊದಗಿದ ಪರಿಸ್ಥಿತಿಯನ್ನು ಕಂಡು ಸ್ವತಃ ಪತ್ರಕರ್ತರ ಮುಂದೆಯೇ ಕಣ್ಣೀರು ಹಾಕಿದ್ದರು. ಕೊನೆಗೊಂದು ದಿನ ಹರಿಕೃಷ್ಣ ಬಂಟ್ವಾಳ್ ಅವರು ಪೂಜಾರಿಯವರ ಆಶೀರ್ವಾದ ಪಡೆದುಕೊಂಡೇ ಬಿಜೆಪಿಗೆ ಸೇರ್ಪಡೆಗೊಂಡರು.

ಜಿ.ಪರಮೇಶ್ವರ ಅವರು ದಲಿತ ಮುಖಂಡರಾಗಿದ್ದು, ಕಾಂಗ್ರೆಸ್‍ನ ತತ್ವ ಸಿದ್ಧಾಂತಗಳಿಗೆ ಬೆಲೆಕೊಟ್ಟು ಕೆಲಸ ಮಾಡಿಕೊಂಡಿರುತ್ತಿದ್ದರು. ಪರಮೇಶ್ವರ ಅವರು ರಾಜ್ಯದ ಗೃಹಸಚಿವರಾಗಿದ್ದ ಸಂದರ್ಭ ಕರ್ನಾಟಕದ ಪರಿಸ್ಥಿತಿ ಚೆನ್ನಾಗಿತ್ತು. ಆದರೆ ಅವರ ಕೈಯಿಂದ ಹುದ್ದೆಯನ್ನು ಕಸಿದು ಕೆ.ಜೆ. ಜಾರ್ಜ್‍ಗೆ ವಹಿಸಲಾಯಿತು. ಆದರೆ ಜಾರ್ಜ್ ಮೇಲೆ ಆರೋಪ ಕೇಳಿಬಂದ ಮೇಲೆ ಆ ಹುದ್ದೆಯನ್ನು ರಾಮಲಿಂಗ ರೆಡ್ಡಿಗೆ ನೀಡಲಾಯಿತು. ಪರಮೇಶ್ವರ್ ಅವರ ಉಪಮುಖ್ಯಮಂತ್ರಿ ಬೇಡಿಕೆಯನ್ನೂ ತಿರಸ್ಕರಿಸಲಾಯಿತು. ಇಂದು ಪರಮೇಶ್ವರ್ ಕೈಯ್ಯಲ್ಲಿ ಏನೂ ಇಲ್ಲ. ಸಿದ್ದು ಜೊತೆ ಒಳಗೊಳಗೇ ಮುನಿಸಿಕೊಂಡಿರುವ ಪರಮೇಶ್ವರ್ ಪಕ್ಷಾಂತರ ಮಾಡುವ ದಿನಗಳೂ ದೂರವಿಲ್ಲ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.

ಇನ್ನು ಇಂಧನ ಸಚಿವ ಡಿಕೆಶಿ ಅವರು ಗೃಹ ಸಚಿವ ಹುದ್ದೆಯ ಆಕಾಂಕ್ಷಿಯಾಗಿದ್ದರು. ಜೊತೆಗೆ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸುವ ಮಾತುಗಳೂ ಕೇಳಿಬಂದಿದ್ದವು. ಆದರೆ ಅವೆಲ್ಲಾ ಠುಸ್ ಆಯಿತು. ಇದಕ್ಕೆ ಸ್ವತಃ ಸಿದ್ದು ಅವರೇ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗುತ್ತಿದೆ. ಇಂದು ಡಿಕೆಶಿ ಅವರ ಮೇಲೆ ಐಟಿ ರೈಡ್ ಆಗಿದ್ದು, ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇದರಿಂದ ಪರೋಕ್ಷವಾಗಿ ತನಗೇ ಲಾಭವಾಯಿತೆಂದು ಒಳಗೊಳಗೇ ಸಿದ್ದು ಖುಷಿಪಡುತ್ತಿದ್ದಾರೆ ಎಂಬ ಆರೋಪ ಮುಂಚಿನಿಂದಲೂ ಕೇಳಿಬರುತ್ತಿದೆ.

ಚುನಾವಣೆಯ ಸಂದರ್ಭ ಇನ್ನಷ್ಟು ಮಂದಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಆದರೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಅನೇಕ ಮಂದಿ ವಿಧಾನ ಸಭಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಒಂದು ವೇಳೆ ಕಾಂಗ್ರೆಸ್ಸಿಗರು ಬಂದು ಬಿಜೆಪಿಯಲ್ಲಿ ಟಿಕೆಟ್ ಬಯಸಿದ್ದೇ ಆದರೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾಗುವ ಲಕ್ಷಣಗಳೂ ಇದೆ. ಇದನ್ನೆಲ್ಲಾ ಸರಿದೂಗಿಸಿಕೊಂಡು ಬಿಜೆಪಿಗರು ಪಕ್ಷಾಂತರಿಗಳಿಗೆ ಮಣೆ ಹಾಕಬೇಕಾಗಿದೆ. ಕಾರ್ಯಕರ್ತರನ್ನು ದೂರ ಇಟ್ಟುಕೊಂಡು ಪಕ್ಷಾಂತರಿ ಕಾಂಗ್ರೆಸ್ಸಿಗರಿಗೆ ಮಣೆ ಹಾಕಿದ್ದೇ ಆದರೆ ಮುಂದೆ ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

-ಚೇಕಿತಾನ

Tags

Related Articles

Close