ಅಂಕಣಪ್ರಚಲಿತ

ಮೂರು ಸಾವಿರ ಮಕ್ಕಳಿಗೆ ಮೂಕಾಂಬಿಕೆಯ ಸನ್ನಿಧಿಯಿಂದ ಪ್ರಸಾದ ಭೋಜನ ಬರದಂತೆ ಮಾಡಿದ ಪಾಪವನ್ನು ಇಂದಿರಾ ಕ್ಯಾಂಟೀನ್ ತೊಳೆಯಲಾರದು ನಾಯಕರೇ..!

ಕರ್ನಾಟಕದ‌ ಸರಕಾರದ‌ ಘನಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಣಾಮಗಳು.

ಮುಖ್ಯಮಂತ್ರಿಗಳೇ, ನೀವು  ಜಾರಿಗೆ ತರುವ ಅನೇಕ ಯೋಜನೆಗಳು ಜನಹಿತವಾಗಿರಬೇಕೆಂಬ ಬಲವಾದ ಆಕಾಂಕ್ಷೆಯುಳ್ಳವರು ನಾವು. ಯಾವುದೇ ಜಾತಿಭೇದವಿಲ್ಲದೇ, ಯಾವುದೇ ಪಂಗಡದ ಪರವಾಗಿಲ್ಲದೇ ಆ ಯೋಜನೆಗಳು ಸರ್ವರಿಗೂ ತಲುಪಬೇಕೆಂಬ ಬಯಕೆ ನಮ್ಮದು..ಯಾಕೆಂದರೆ ಒಬ್ಬ ರಾಜ ಎಲ್ಲ ಪ್ರಜೆಗಳನ್ನು ಒಂದೇ ರೀತಿಯಾಗಿ ನೋಡಬೇಕೆಂಬ ನಿಯಮವಿದೆ ಅಲ್ಲವೇ?? ಹಾಗಿದ್ದರೆ ಮಾತ್ರ ಪ್ರತೀ ಬಾರಿಯ ಚುನಾವಣೆ ಬಂದಾಗ ಜನ ನಿಮ್ಮನ್ನು ಪ್ರೀತಿಸಿ, ಗೌರವಿಸಿ ಮತ ಹಾಕುತ್ತಾರೆ. ಇದಕ್ಕೆ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ರಾಜ್ಯಗಳಲ್ಲಿ ಪದೇ ಪದೇ ಒಂದೇ ಸರಕಾರ ಆಯ್ಕೆಯಾಗುವುದು ಒಂದು ಉದಾಹರಣೆ. ಅಂತಹ ಆಯ್ಕೆ ನಿಮ್ಮದೂ ಆಗಬಹುದು. ಆದರೆ ನೀವು ಆ ದೃಷ್ಟಿಯಲ್ಲಿ ಆಲೋಚನೆ ಮಾಡಿದ್ದಿಲ್ಲ.

ನಮಗೆ ಮತ ಸಿಗೋದಿಲ್ಲವೆಂದು ಖಾತ್ರಿಪಡಿಸಿಕೊಂಡಂತೆ ವ್ಯವಹರಿಸುತ್ತಿದ್ದೀರಿ. ಅದಕ್ಕೋಸ್ಕರವೇ ಕೆಲವು ಜಾತಿಗಳನ್ನು, ಧರ್ಮವನ್ನು ಮಾತ್ರ ಗಣನೆಗೆ ಪರಿಗಣಿಸಿ ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಿದ್ದೀರಿ. ಆ ಯೋಜನೆಗಳು ನಿಜವಾದ ಅಲ್ಪಸಂಖ್ಯಾತರಿಗೆ, ಅಶಕ್ತರಿಗೆ ತಲುಪುತ್ತಿದ್ದರೆ ನಮಗೂ ಖುಷಿ ತರುತ್ತಿತ್ತು. ಆದರೆ ಈ ವಿಚಾರದಲ್ಲಿಯೂ ಹಾಗಾಗುತ್ತಿಲ್ಲ. ಒಂದು ರೂ. ಒಂದು ಕೆಜೆ‌ ಅಕ್ಕಿ ಕೊಡುವ ಮೂಲಕ ಪ್ರಜೆಗಳನ್ನು ಇನ್ನಷ್ಟು ಆಲಸಿಗಳನ್ನಾಗಿ ಮಾಡಿದ್ದೀರಿ. ಯಾವಾಗ ತಾನು ಬೆವರು ಸುರಿಸಿ, ಒಂದು ಹೊತ್ತಿನ ಅನ್ನಕ್ಕಾಗಿ ಕಷ್ಟಪಡುತ್ತಾನೋ ಆಗ ಆತನಿಗೆ ರೈತ ಕಷ್ಟಪಟ್ಟು ಬೆಳೆದ‌ ಅನ್ನದ ಬೆಲೆಯ ಅರಿವಾಗುತ್ತದೆ. ಪ್ರತಿನಿತ್ಯವೂ ಯಾವ ರೀತಿಯಾಗಿಯೂ ದುಡಿಯದೇ ಅಕ್ಕಿ ಸಿಗುವ ಹಾಗೆ‌ ಮಾಡಿದರೆ ಆತ ಈ ರಾಷ್ಟ್ರಕ್ಕೆ ಯಾವ ರೀತಿಯಾದ ಕೊಡುಗೆಗಳನ್ನು ಕೊಡಬಹುದು?? ನೀವೇ ಹೇಳಿ.

ಇಂತಹ ಅನೇಕ ಅಸಂಬದ್ಧ ಯೋಜನೆಗಳನ್ನು ಬಹಳಷ್ಟು ವಿಮರ್ಶಿಸಿ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಬರಲೇಬಾರದು ಅನ್ನುವ ಸಂಕಲ್ಪ ಮಾಡಿದಂತಿದೆ. ಆದರೆ ನಿಮ್ಮ ಸರಕಾರವನ್ನು ಕಳೆದ ಬಾರಿ ನಾವು ಆಯ್ಕೆ ಮಾಡಿದಾಗ ಬಹಳಷ್ಟು ಕನಸನ್ನು ಕಂಡಿದ್ದೆವು. ಭ್ರಷ್ಟಾಚಾರ ನಿರ್ಮೂಲನೆಯ ವಾಗ್ದಾನದ ಮೂಲಕ ಆಯ್ಕೆಯಾದ ನೀವು ಮಾಡಿದ್ದು ಸಮಾಜ ಒಡೆಯುವ ಕಾರ್ಯ. ಇದು ನಿಮ್ಮ ತಪ್ಪಲ್ಲ ಬಿಡಿ. ನೀವು ಕಾರ್ಯ ಮಾಡುವ ಪಕ್ಷದ ಅಂತರಂಗದಲ್ಲೇ ಸಮಾಜವನ್ನು ಒಡೆದರೆ ಮಾತ್ರ ಮತ ಸಿಗುತ್ತದೆಂಬ ಚಿಂತನೆ ಬೇರೂರಿದೆ.ಪಾಪ …! ನೀವು ತಾನೆ ಏನು ಮಾಡಲು ಸಾಧ್ಯ. ಅಲ್ಲವೇ? ಹಿಂದೂ ಧರ್ಮದಲ್ಲಿ ಒಂದಾಗಿದ್ದ ಲಿಂಗಾಯತರನ್ನು ಪ್ರತ್ಯೇಕ ಧರ್ಮದ ಸ್ಥಾನವನ್ನು ಕಲ್ಪಿಸಬೇಕೆಂದು ಪ್ರಯತ್ನ ಪಟ್ಟಿರಿ. ಕೆಲವು ಪಂಗಡಗಳಿಗೆ ಮಾತ್ರ ಮದುವೆಯನ್ನೂ‌ ಮಾಡಿಸಿದಿರಿ. ಸರಕಾರದ ಹುದ್ದೆಗಳಿಗೂ ಅದೇ ತಾರತಮ್ಯವನ್ನು ಮಾಡಿದಿರಿ. ಉಳಿದ ವರ್ಗದ ಜನರು ಕರ್ನಾಟಕದ ಪ್ರಜೆಗಳೇ ಅಲ್ಲ ಅನ್ನುವ ರೀತಿ ವ್ಯವಹರಿಸುತ್ತಿದ್ದೀರಿ.

ಈಗ ನಿಮ್ಮ‌ ಅಸಂಬದ್ಧ ಯೋಜನೆಗಳ ಪಟ್ಟಿಗೆ ಮಗದೊಂದನ್ನು ಸೇರಿಸಿದಿರಿ. ಛೇ…. ಓರ್ವ ಸಾಮಾನ್ಯ ಪ್ರಜೆಯಾದ ನನಗಂತೂ ನಿಮ್ಮ ಈ ನಡೆಯಿಂದ ನಿಜವಾಗಿಯೂ ಬೇಸರವಾಗಿದೆ ಹಾಗೂ ನಿಮ್ಮ ಸರಕಾರ ಕುರಿತಾಗಿ ಅಸಹ್ಯ ಪಡುವಂತೆ ಮಾಡಿದ್ದೀರಿ. ಅಲ್ಲದೇ ಮತ್ತೇನು??

ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕೊಲ್ಲೂರು ಶ್ರೀ‌ಮೂಕಾಂಬಿಕ ದೇವಾಲಯವು ಪ್ರಸಾದದ ರೂಪದಲ್ಲಿ ನೀಡುತ್ತಿದ್ದರು. ದೇವಾಲಯದ‌ ಆಸ್ತಿಗಳೆಲ್ಲ ನಿಮ್ಮದೆಂದು ತಿಳಿದರೆ ನಿಮ್ಮಷ್ಟು ಮಾಢರು ಇನ್ನಾರು ಇರರೆಂದು ತಿಳಿಯಿರಿ. ಯಾಕೆಂದರೆ ಅಂತಹ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು, ಸಮಾಜಹಿತವಾದ ಕಾರ್ಯವು ಆ ಕ್ಷೇತ್ರದ ವತಿಯಿಂದ‌ ನಡೆಯಬೇಕೆಂಬ ಬಲವಾದ ಆಸೆಯನ್ನಿಟ್ಟು ಭಗವಂತನನ್ನು ಪ್ರಾರ್ಥಿಸಿ ಹುಂಡಿಗೆ ಕಾಣಿಕೆ ಹಾಕುವವರು ಭಕ್ತರಾದ ನಾವು.. ಇದುವರೆಗೆ ಜಾತಿ ರಾಜಕಾರಣ ಮಾಡಿಕೊಂಡು, ಓಲೈಕೆಯ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ನೀವು, ಈಗ ಏನೂ ಅರಿಯದ ಮಕ್ಕಳ ಮೇಲೆ ನಿಮ್ಮ ರಾಜಕಾರಣವನ್ನು ಪ್ರಯೋಗಿಸಲು ಮುಂದಾಗಿದ್ದೀರಿ. ದೇವಾಲಯದ ವತಿಯಿಂದ ಆ ಎರಡು ಶಾಲೆಗಳಿಗೆ ಬರುತ್ತಿದ್ದ ಅನುದಾನಕ್ಕೆ ಪೂರ್ಣವಿರಾಮವನ್ನು ಇಟ್ಟಿದ್ದೀರಿ. ಇದರ ಪರಿಣಾಮ ಮಂದೆ ಯಾವ ಮಟ್ಟಕ್ಕಿರಬಹುದೆಂದು ಊಹಿಸಿದ್ದೀರಾ ಪ್ರಜಾಧಿಪತಿಗಳೇ??

ನಿಮಗೆ ಅರಿಯದೇ ಏನಲ್ಲ. ಆ ಶಾಲೆಗೆ ಬರುವವರು ತೀರಾ ಬಡತನದಲ್ಲಿರುವ ವಿದ್ಯಾರ್ಥಿಗಳು. ಅಲ್ಲಿ ಬಿಸಿಯೂಟದ ವ್ಯವಸ್ಥೆ ಮಾತ್ರ‌ ಅಲ್ಲ, ಉಚಿತ ಶಿಕ್ಷಣ, ಉಚಿತ ವಸತಿ ಕೂಡ ‌ಕಲ್ಪಿಸಲಾಗಿದೆ. ಪಾಪ…! ಆ ವಿದ್ಯಾರ್ಥಿಗಳು ಮಾಡಿದ ಪಾಪವಾದರೂ ಏನು?? ಭಾರತೀಯ ಸಂಸ್ಕೃತಿಯನ್ನು ಶಾಲೆಯಲ್ಲಿ ಕಲಿಯುವುದು ತಪ್ಪೇ? ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಶಾಲೆಯ ತಪ್ಪೇ?? ನೀವೇ ಉತ್ತರಿಸಬೇಕು. ಯಾರಾದರೂ ಹಸಿವಿನಿಂದ‌ ಬಂದರೆ ಅನ್ನ ಹಾಕಿದರೆ ಅದರಷ್ಟು‌ ಪುಣ್ಯದ‌ ಕಾರ್ಯವಿಲ್ಲವಂತೆ.. ಅನ್ನದಾತೋ ಸುಖೀ ಭವ ಎಂಬ ಮಾತನ್ನು ಮರೆತಿರಾ ಮುಖ್ಯಮಂತ್ರಿಗಳೇ? ಬಡ ವಿದ್ಯಾರ್ಥಿಗಳ ಅನ್ನವನ್ನು ಕಸಿದರೆ ನಿಮಗೆ ಮತ‌ ಬರುತ್ತದೆಯೇ?

ಬಡ ವಿದ್ಯಾರ್ಥಿಗಳ ಅನ್ನವನ್ನು ಕಿತ್ತು‌ ಸಮಾಜಕ್ಕೆ ಕ್ಯಾಂಟೀನ್ ಕಲ್ಪಿಸಲು ಮುಂದಾದಿರಿ. ಇಂದಿರಾ ಕ್ಯಾಂಟೀನ್….! ಅದಾದರೂ ಸರಿಯಾಗಿ ವ್ಯವಸ್ಥೆ ಆಗಿದೆಯಾ ಎಂದು ಕೇಳಿದರೆ ಅದಕ್ಕೂ ಇಲ್ಲವೆಂಬುದೇ ಉತ್ತರ. ನಮಗೆ ಆಸರೆಯಾಗಿರುವ ಸುಂದರ ಪ್ರಕೃತಿಯನ್ನು ನಾಶ ಮಾಡಿ‌ ಅಲ್ಲಿ ಕ್ಯಾಂಟೀನ್ ಮಾಡಲು ಹೊರಟಿರೆ. ಆದರೆ ಈ ದೇಶನ್ನು ಅಗಾಧವಾಗಿ ಪ್ರೀತಿಸುವ ಪ್ರಜೆಗಳು ಮೂಢರಲ್ಲ.‌ಅವರ‌ ವಿರೋಧ ಬಲವಾದಾಗ‌ ಹಲವು ಕಡೆ ಆಗಬೇಕಾದ‌ ಕ್ಯಾಂಟೀನ್ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದರಿ. ಇಂತಹ ಮೂಢತನವನ್ನು ಇನ್ನೆಷ್ಟು ಸಮಯ‌‌ ಮಾಡುತ್ತೀರಿ ಸರ್?

ಒಂದು ವಿಚಾರವಂತೂ ಸ್ಪಷ್ಟವಾಗಿ ನಿಮ್ಮಲ್ಲಿ ನಾನು ನಿವೇದಿಸಬೇಕೆಂದು ಬಯಸುತ್ತೇನೆ. ನೀವದೆಷ್ಟೇ ಕ್ಯಾಂಟೀನ್ ಅನ್ನು ಪ್ರಾರಂಭಮಾಡಿದರೂ ಬಡವಿದ್ಯಾರ್ಥಿಗಳ ಅನ್ನವನ್ನು ಕಿತ್ತ ಪಾಪವನ್ನು ತೊಳೆಯಲಾಗದು ನಾಯಕರೇ… ವಿನಾಶ ಕಾಲೇ ವಿಪರೀತ‌ ಬುದ್ಧಿ: ಅನ್ನುವ ಮಾತಿದೆ. ಆ ರೀತಿಯಾಗಿ ಆಗದೇ ಇರಲಿಯೆಂಬುದೇ ನಮ್ಮ ಆಶಯ.ಯಾಕೆಂದರೆ ಆ ವಿಪರೀತ‌ ಬುದ್ಧಿ ಇನ್ನಷ್ಟು‌‌ ಪ್ರಜಾಕಂಟಕವಾದರೆ ಬಡಪಾಯಿಗಳಾದ ನಾವು ಏನು ಮಾಡೋಣ ಹೇಳಿ..

ಗೌರವಾನ್ವಿತ‌ ಮುಖ್ಯಮಂತ್ರಿಗಳೇ.. ಓರ್ವ ವಿದ್ಯಾರ್ಥಿ, “ನಾನು ‌ಕೂಲಿಕಾರ್ಮಿಕನ ಮಗ. ನನಗೆ ದಿನನಿತ್ಯದ ಖರ್ಚಿಗೂ ಕಷ್ಟಪಡಬೇಕು. ಅಂತಹ ಸಮಯದಲ್ಲಿ‌ ಉಚಿತವಾಗಿ ಲಭಿಸುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿದರೆ ನಾವು ಏನು‌ ಮಾಡಬೇಕು” ಎಂಬ ಮಾತನ್ನು‌ ಹೇಳಿದಾಗಲೂ ನಿಮ್ಮ ಮನಸ್ಸು ಕರಗುತ್ತಿಲ್ಲವೇ? ನಿಮ್ಮಲ್ಲಿ ಒಂದೇ‌ ಒಂದು ವಿನಂತಿಯನ್ನು‌ ಪ್ರಜೆಯಾಗಿ ಮಾಡುತ್ತೇನೆ.. ರಾಜಕೀಯದ್ವೇಷಕ್ಕೆ ಏನೂ ಅರಿಯದ ಮುಗ್ಧಮಕ್ಕಳ ಭವಿಷ್ಯವನ್ನು ಕತ್ತಲಾಗಿಸಬೇಡಿ. ಮುಂದಿನ ಚಿಂತನೆ‌ ನಿಮಗೆ‌ ಬಿಟ್ಟಿದ್ದು.
ಇಂತಿ ನೊಂದ‌ ಕರ್ನಾಟಕದ ಸಾಮಾನ್ಯ ಪ್ರಜೆ.

 

– ವಸಿಷ್ಠ

Tags

Related Articles

Close