ಪ್ರಚಲಿತ

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶುರುವಾಯ್ತಾ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ?

ಈಗಾಗಲೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರು ತಮ್ಮ ಕುಟುಂಬದಲ್ಲಿ ಕೇವಲ ಇಬ್ಬರು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸ್ತಾರೆ ಅಂತಿದ್ರು ಆದರೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಶುರುವಾಯ್ತಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ!!

ಈ ಹಿಂದೆ “ಚನ್ನಪಟ್ಟಣದಲ್ಲಿ ಕಣಕ್ಕಿಳಿಸಲು ಬೇರೆ ಯಾರನ್ನಾದರೂ ಗುರುತಿಸಿ ಎಂದು ಸ್ಥಳೀಯ ಮುಖಂಡರಿಗೆ ತಿಳಿಸಲಾಗಿದೆ,” ಎನ್ನುವ ಮೂಲಕ ಅನಿತಾ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವುದಿಲ್ಲ ಎಂದು ದೇವೇಗೌಡರು ಹೇಳಿಕೆ ನೀಡಿದ್ದರು ಆದರೆ ಇದೀಗ ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿ.ಜೆ.ಪಿ.ಗೆ ಸೇರ್ಪಡೆಯಾಗಿರುವ ಸಿ.ಪಿ. ಯೋಗೇಶ್ವರ್ ಅವರಿಗೆ ಶಿವಕುಮಾರ್ ಟಾಂಗ್ ನೀಡಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ.

ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿ ಸಚಿವ ಡಿ.ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡಿದ್ದು, “ಟೆಂಪರರಿ ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ನಿಮ್ಮ ಜೊತೆ ನಾವು ಶಾಶ್ವತವಾಗಿ ಇರುತ್ತೇವೆ” ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಚೆನ್ನಪಟ್ಟದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಶುರುವಾಯ್ತಾ ಎನ್ನುವ ಗುಮಾನಿ ಹುಟ್ಟಿಕೊಂಡಿದ್ದು, ಅನಿತಾ ಕುಮಾರಸ್ವಾಮಿ ಸಿ.ಪಿ. ಯೋಗೇಶ್ವರ್ ಹಣಿಯಲು ಸಜ್ಜಾದಂತೆ ಕಾಣುತ್ತಿದೆ!!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, “ನಿಮ್ಮೆಲ್ಲರನ್ನು ನಂಬಿ ಅನಿತಾ ಕುಮಾರಸ್ವಾಮಿ ಬಂದಿದ್ದಾರೆ. ನಿಮ್ಮೊಂದಿಗೆ ನಾವೆಲ್ಲಾ ಇದ್ದೇವೆ. ಟೆಂಪರರಿ ನಾಯಕರು ಬರ್ತಾರೆ, ಹೋಗ್ತಾರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ”. ಹೆಣವಾಗಲಿ, ಪಲ್ಲಕ್ಕಿಯಾಗಲಿ ಹೊರುವವರು ನಾವೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಚನ್ನಪಟ್ಟಣ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಮುಖ್ಯಮಂತ್ರಿಯವರು 300 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆದರೆ ಅವರನ್ನೇ ತಾಲ್ಲೂಕಿಗೆ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ.

ಕೆರೆ ಬಾಗಿನ ಕಾರ್ಯಕ್ರಮಗಳಲ್ಲಿ ಅವರ ಒಂದು ಫೆÇೀಟೋ ಕೂಡ ಹಾಕಿಲ್ಲ. ಹಾಗಾಗಿ ನಮಗೆ ಯಾರು ಸಹಾಯ ಮಾಡಿರುತ್ತಾರೆ ಅವರನ್ನು ನೆನೆಯಬೇಕು. ಸಹಾಯ ಮಾಡಿದವರನ್ನು ಸ್ಮರಿಸಬೇಕು. ನಾಲಿಗೆ ತಪ್ಪಬಾರದು ಆವಾಗ ಒಳ್ಳೆಯ ಮನುಷ್ಯ ಎನ್ನುತ್ತಾರೆ ಎಂದರು. ಅಷ್ಟೇ ಅಲ್ಲದೇ ನಾನು ರಾಜಕೀಯವನ್ನು ಬಿಡುವುದಿಲ್ಲ, ಚನ್ನಪಟ್ಟಣವನ್ನು ಬಿಡುವುದಿಲ್ಲ. ಯಾಕೆಂದರೆ ಚನ್ನಪಟ್ಟಣವನ್ನು ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ. “ನಾನು” ಎಂದ ಎಲ್ಲಾ ಚಕ್ರವರ್ತಿಗಳು ಬಿದ್ದು ಹೋಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿ ಮತ್ತೊಮ್ಮೆ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ದೇವೇಗೌಡ್ರ ಕುಟುಂಬದಲ್ಲಿ ಮತ್ತೊಬ್ರು ಕಣಕ್ಕಿಳಿಯಲು ಸಿದ್ಧತೆ- ತೆರೆಮರೆಯಲ್ಲಿ ಸಜ್ಜಾಗುತ್ತಿದ್ದಾರಾ ಅನಿತಾ ಕುಮಾರಸ್ವಾಮಿ?

ಚನ್ನಪಟ್ಟಣದ ಜೆಡಿಎಸ್ ಮುಖಂಡರು ಮಾತ್ರ ಶಾಸಕ ಯೋಗೇಶ್ವರ್ ವಿರುದ್ಧ ಅನಿತಾ ಕುಮಾರಸ್ವಾಮಿಯವರನ್ನ ಕಣಕ್ಕೆ ಇಳಿಸುವಂತೆ ಒತ್ತಡ ಹಾಕುತ್ತಿದ್ದು, ಇದರ ನಡುವೆ ಅನಿತಾ ಕುಮಾರಸ್ವಾಮಿಯವರು ಇತ್ತೀಚೆಗೆ ಪದೇ ಪದೇ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತಾನಾಡಿದ ಅನಿತಾ ಮುಂದಿನ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇದೆ. ಅಷ್ಟೇ ಅಲ್ಲದೇ, ಕ್ಷೇತ್ರದ ಜನರು ಕೂಡ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಆದರೆ ಇದೀಗ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಈ ಚುನಾವಣೆಯಲ್ಲಿ ಯೋಗೇಶ್ವರ್ ಅವರನ್ನು ಸೋಲಿಸಲು ಡಿಕೆಶಿ ಸರ್ವಪ್ರಯತ್ನ ನಡೆಸುತ್ತಿದ್ದು, ಈ ತಂತ್ರದ ಭಾಗವಾಗಿ ಅನಿತಾ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಅನಿತಾರನ್ನೇ ಬೆಂಬಲಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಡಿಕೆಶಿ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಿಂದ ಕೇಳಿಬಂದಿದೆ.

ಇನ್ನು ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರ ಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಅಷ್ಟೇ ಅಲ್ಲದೇ, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು.

ಆದರೆ ಈ ಹಿಂದೆ ಗುಜರಾತಿನ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಂಶಾಡಳಿತ ವರ್ಸಸ್ ಅಭಿವೃದ್ಧಿ ಎಂಬ ಮಾತನ್ನು ಉದಾಹರಿಸಿದ ಮಾತಾನಾಡಿದ್ದ ಕುಮಾರಸ್ವಾಮಿಯವರು, ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರನನ್ನು ರಾಜಕಾರಣಕ್ಕೆ ಕರೆತರಬೇಕು ಅಂತಿದ್ದಾರೆ. ಎಚ್.ಸಿ.ಮಹದೇವಪ್ಪ ಅವರಿಗೆ ತಮ್ಮ ಮಗನನ್ನು ಕರೆದುಕೊಂಡು ಬರಬೇಕು. ಈ ರೀತಿ ಎಲ್ಲ ಪಕ್ಷದಲ್ಲೂ ಇದೆ ಎನ್ನುವ ಮೂಲಕ ಕುಟುಂಬ ರಾಜಕಾರಣದಲ್ಲಿ ಕುಮಾರಸ್ವಾಮಿ ಕುಟುಂಬವು ಒಂದಾಗಲಿರುವುದು ಸ್ಪಷ್ಟವಾಗಿದೆ!!

ಆದರೆ ಈ ಬಾರಿ ದೇವೇಗೌಡ್ರ ಕುಟುಂಬದಲ್ಲಿ ಮತ್ತೊಬ್ರು ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ದ ಅನಿತಾ ಕುಮಾರ ಸ್ವಾಮಿ ಬ್ಯಾಟಿಂಗ್ ಮಾಡಲು ಸಜ್ಜಾಗಿರುವಂತೆ ಮೇಲ್ನೊಟಕ್ಕೆ ಎದ್ದು ಕಾಣುತ್ತಿದೆ!!

– ಅಲೋಖಾ

Tags

Related Articles

Close