ಅಂಕಣದೇಶಪ್ರಚಲಿತ

ವಿಶ್ವ ಆರೋಗ್ಯ ಸಂಸ್ಥೆಯೇ ಕೈಚೆಲ್ಲಿ ಕೂತರೂ ಕೂಡ ಪ್ರಧಾನಿ ಮೋದಿ ಮಾತ್ರ ಭರವಸೆ ನೀಡುತ್ತಲೇ ಇದ್ದಾರೆ… ಏನಿದರ ಅರ್ಥ?

ಕಣ್ಣಿಗೆ ಕಾಣದ ವೈರಸ್ ಒಂದು ಇಡೀ ಜಗತ್ತನ್ನೇ ನಡುಗಿಸಿದೆ ಎಂದರೆ ನಿಜಕ್ಕೂ ಕಾಲದ ಆಟಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂಬುದು ಸ್ಪಷ್ಟವಾಗಿದೆ ಮಾತ್ರವಲ್ಲದೆ ಮನುಷ್ಯ ತನ್ನ ಲಾಭಕ್ಕಾಗಿ ಆಸೆಗಾಗಿ ಮಾಡಿದ ಅನಾಚಾರಗಳಿಗೆ ಇಂದು ಕಣ್ಣೀರಿಡುವಂತಾಗಿದೆ. ಇದು ವಿಧಿಯ ಆಟವೋ ಅಥವಾ ಮಾನವನ ಪಾಪದ ಫಲವೋ ಹೇಳಲು ಅಸಾಧ್ಯ. ಆದರೆ ಒಂದಂತೂ ಸತ್ಯ, ಮನುಷ್ಯ ತಾನೊಂದು ಬಗೆದರೆ ಆ ದೇವರು ಮತ್ತೊಂದು ಬಗೆಯುತ್ತಾನೆ‌ ಎಂಬುದು ಮನದಟ್ಟಾಗಿದೆ.

ಕೊರೊನಾ ವೈರಸ್ ಸದ್ಯ ಯಾವ ಗಂಭೀರ ಸ್ವರೂಪಕ್ಕೆ ತಿರುಗಿದೆ ಎಂದರೆ ಭಾರತ ಸರಕಾರದ ಓರ್ವ ಸಚಿವರು ಮಾತ್ರವಲ್ಲದೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಅಸಹಾಯಕತೆಯ ಎಚ್ಚರಿಕೆ ನೀಡಿದ್ದಾರೆ. “ಕೊರೊನಾ ಎಂಬುದು ಮುಗಿಯದ ಸಮಸ್ಯೆ, ಮನುಷ್ಯ ಇದರ ಜೊತೆಗೆ ಜೀವನ‌ ನಡೆಸಬೇಕಾದ ಅನಿವಾರ್ಯತೆ ಇದೆಯೇ ಹೊರತು, ನಾವು ಬೇರೇನೂ ಮಾಡಲು ಸಾಧ್ಯವಿಲ್ಲ” ಎಂದು ನೇರವಾಗಿ ಹೇಳಿಬಿಟ್ಟಿದ್ದಾರೆ. ಇಂತಹ ಮಾತುಗಳನ್ನು ಕೇಳುವಾಗ ಸಾಮಾನ್ಯವಾಗಿ ಜನರು ಭಯಭೀತರಾಗುವುದು ಖಂಡಿತ.‌ ಲಾಕ್ ಡೌನ್ ಮುಗಿದ ನಂತರ ನಮ್ಮ ಸ್ಥಿತಿ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಪೂರಕವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಪ್ರತೀ ದಿನ ದೇಶವಾಸಿಗಳಲ್ಲಿ ಭರವಸೆ ಮತ್ತು ಧೈರ್ಯ ನೀಡುತ್ತಾ ಬಂದಿದ್ದಾರೆ. ಜನರು ಧೃತಿಗೆಡದೆ ನಿಂತರೆ ಕೊರೊನಾ ಹೋರಾಟದಲ್ಲಿ ಜಯಗಳಿಸಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಹೌದು, ಮೋದಿ ರಾತ್ರಿ 8 ಗಂಟೆಗೆ ಮಾಧ್ಯಮದ ಮುಂದೆ ಬರುತ್ತಾರೆ ಎಂದರೆ ಸಾಕು, ಇಡೀ ದೇಶವೇ ಟಿವಿ ಎದುರು ಕೂತು ಪ್ರಧಾನಿಯವರ ಮಾತುಗಳನ್ನು ಆಲಿಸುತ್ತಾರೆ. ಯಾಕೆಂದರೆ ಭರವಸೆ ಎಂದರೆ ಅದು ಮೋದಿ ಮಾತ್ರ ಎಂಬುದು ಪ್ರತಿಯೊಬ್ಬರೂ ಒಪ್ಪಿಕೊಂಡ‌ ಸತ್ಯ. ಇಂತಹ ಸಂದರ್ಭದಲ್ಲಿ ಕೂಡ ಅನೇಕರು ತಮ್ಮ ತೀಟೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದು ತೆರೆಮರೆಯಲ್ಲಿ ಉಳಿಯದ ಸತ್ಯ. ಟೀಕಿಸುವವರು ಟೀಕಿಸುತ್ತಲೇ ಇರುತ್ತಾರೆ ಎಂಬುದು ಎಷ್ಟು ಸತ್ಯವೋ, ಮೋದಿ ಕೂಡ ಟೀಕಕಾರರಿಗೆ ಯಾವುದೇ ಪ್ರತ್ಯುತ್ತರ ನೀಡದೆ ಸಮಸ್ತ ಭಾರತೀಯರನ್ನು ಒಂದೇ ಎಂದು ನೋಡುತ್ತಿರುವುದು ಕೂಡ ಅಷ್ಟೇ ಸತ್ಯ.

ಇರಲಿ ಬಿಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಯಾವ ರೀತಿ ಸಾಗುತ್ತಿದೆ ಎಂಬುದನ್ನು ಗಮನಿಸಿದಾಗ ನಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಯಾಕೆಂದರೆ ಕೊರೊನಾ ವೈರಸ್‌ನ ಗಂಭೀರತೆಯನ್ನು ಅರಿತ ಭಾರತ ಸರಕಾರ ಕೂಡಲೇ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿ ನಂತರದಲ್ಲಿ ಲಾಕ್ ಡೌನ್ ಜಾರಿಗೊಳಿಸಿತು. ಸರಕಾರವೇನೋ ಗಂಭೀರತೆಯನ್ನು ಅರಿತು ಈ ರೀತಿ ನಿರ್ಧಾರ ಕೈಗೊಂಡಿತ್ತು, ಆದರೆ ನಾವು ನಮ್ಮ ಮೂರ್ಖತನದ ಬುದ್ಧಿಯನ್ನು ಪ್ರದರ್ಶಿಸಿಯೇ ಬಿಟ್ಟೆವು. ಹೌದು, ಸರಕಾರದ ನಿರ್ಧಾರಕ್ಕೆ ಶೇಕಡಾ 30ರಷ್ಟು ಜನ ಸಾಥ್ ನೀಡದೆ ಈ ಕೊರೊನಾ ಮಹಾಮಾರಿಯನ್ನು ದೇಶಾದ್ಯಂತ ಪರರಿಸುವ ಕೆಲಸ ಮಾಡಿದರು.‌ ಅವರ್ಯಾರು ಮತ್ತು ಅವರ ಉದ್ದೇಶ ಏನೆಂಬುದನ್ನು ನಾವಿಲ್ಲಿ ಮತ್ತೊಮ್ಮೆ ಹೇಳಬೇಕಾದ ಅವಶ್ಯಕತೆ ಇಲ್ಲ, ಯಾಕೆಂದರೆ ಈಗಾಗಲೇ ನಿಮಗೂ ತಿಳಿದಿದೆ. ಇರಲಿ, ಬೆಂಬಲಿಸುವ ಜನರು ಇರುವಾಗ ವಿರೋಧಿಸುವವರು ಕೂಡ ಬೇಕಲ್ಲವೇ..?

ಆದರೆ ಇದು ನಮ್ಮ ಒಬ್ಬರ ಅಥವಾ ನಮ್ಮ ಕುಟುಂಬದ ವಿಚಾರವಲ್ಲ, ಇಡೀ ದೇಶದ ವಿಚಾರ ಆಗಿರುವುದರಿಂದ ನಂತರದಲ್ಲಿ ಸರಕಾರ ಕೂಡ ಕೊಂಚ ಹೆಚ್ಚು ಗಂಭೀರವಾಗಿ ಪರಿಗಣಿಸಿ ಜನರನ್ನು ರಸ್ತೆಗೆ ಇಳಿಯದಂತೆ ಲಾಕ್ ಡೌನ್ ಮಾಡಿಬಿಟ್ಟಿತು. ಇಷ್ಟಾದರೂ ಕೂಡ ಕೆಲ ಅವಿವೇಕಿಗಳು ಮಾತ್ರ ತಮ್ಮ ತೀಟೆ ತೀರಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಾಡಿ ಹೇಗೋ ಕೊರೊನಾದ ಜೊತೆಗೆ ಕೈಜೋಡಿಸಿಬಿಟ್ಟರು.

ಇದು ಒಂದು ರೀತಿಯ ಸತ್ಯವಾದರೆ, ಇತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತ್ರ ದೇಶದ ಜನರಲ್ಲಿ ಧೈರ್ಯ ತುಂಬುತ್ತಲೇ ಬಂದಿದ್ದಾರೆ. ಅನೇಕರು ಹೇಳಬಹುದು, ಇದು ಒಬ್ಬ ಜನನಾಯಕನ ಕರ್ತವ್ಯ ಅಥವಾ ಜವಾಬ್ದಾರಿ ಎಂದು. ಹೌದು, ಒಪ್ಪಿಕೊಳ್ಳೋಣ, ಆದರೆ ಜಗತ್ತಿನ ಯಾವ ನಾಯಕನಿಗೂ ಇರದ ಕರ್ತವ್ಯ ನರೇಂದ್ರ ಮೋದಿಯವರಿಗೆ ಮಾತ್ರ ಇತ್ತೇ? ಸಾವಿರಾರು ಜನರು ಸತ್ತು ಹೆಣವಾಗಿ ಬೀಳುತ್ತಿರುವ ಈ ಸಮಯದಲ್ಲೂ ಕೂಡ ಮೋದಿ ಅವರು ಮಾತ್ರ ಪ್ರತೀ ದಿನ ಜನರಿಗೆ ಧೈರ್ಯ ನೀಡುತ್ತಿದ್ದಾರೆ ಮತ್ತು ಅನೇಕ ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

ಈಗಾಗಲೇ ದೇಶದ ಜನರಿಗೆ ಸಹಯವಾಗುವ ರೀತಿಯ 20 ಲಕ್ಷ ಕೋಟಿಯ ಬಜೆಟ್ ಘೋಷಣೆ ಮಾಡಿದ್ದು, ವಿರೋಧಿಗಳು ಕೂಡ ಬಾಯಿ ಮುಚ್ಚಿ ಕೂರುವಂತಾಗಿದೆ. ವಿಶೇಷವೆಂದರೆ ಯಾರು ನರೇಂದ್ರ ಮೋದಿಯವರನ್ನು ವಿರೋಧಿಸುತ್ತಾರೋ, ಅವರೇ ಈ ಯೋಜನೆಗಳಿಗೆ ಅರ್ಜಿ ಹಾಕಲು ಮೊದಲು ಬಂದು ನಿಲ್ಲುತ್ತಾರೆ. ಇದೂ ಕೂಡ ಒಪ್ಪಿಕೊಳ್ಳಬೇಕಾದ ಸತ್ಯ. ಇಂತಹ ಅನೇಕ ವಿಚಾರಗಳು ನಮ್ಮಲ್ಲಿ ಇದೆ, ಆದರೆ ಈ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸುಮ್ಮನಿರಬೇಕಾಗಿದೆ.

ಕೊರೊನಾ ವಿಚಾರದಲ್ಲಿ ನಾವು ನಮ್ಮ ಜಾಗರೂಕತೆಯಿಂದ ಮಾಡಬೇಕಾದ ಎಚ್ಚರಿಕೆಯ ವ್ಯವಸ್ಥೆಯನ್ನು ಮಾಡಬೇಕೇ ಹೊರತು, ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದು ಕೂತರೆ ನಮ್ಮ ಸಾವಿಗೆ ನಾವೇ ಕಾರಣರಾಗುತ್ತೇವೆ, ಖಂಡಿತ. ಯಾಕೆಂದರೆ ಕೊರೊನಾ ಇರಲಿ ಅಥವಾ ಹೋಗಲಿ, ಆದರೆ ಲಾಕ್ ಡೌನ್ ಸಡಿಲಗೊಂಡು ದಿನನಿತ್ಯದ ಬದುಕು ಮತ್ತೆ ಪ್ರಾರಂಭವಾಗಬಹುದು. ಆದರೆ ನಮ್ಮ ಜೀವಕ್ಕೆ ಜೀವನಕ್ಕೆ ನಾವೇ ಹೊಣೆಯಾಗಿರುತ್ತೇವೆ. ಇದು ಸರಕಾರ ನೀಡುವ ಎಚ್ಚರಿಕೆ ಅಥವಾ ಆದೇಶ ಅಲ್ಲವೇ ಅಲ್ಲ, ನಮಗೆ ನಾವೇ ನೀಡಬೇಕಾದ ಎಚ್ಚರಿಕೆ.

ಅದೇನೇ ಇರಲಿ, ಟೀಕೆಗಳು ಎಷ್ಟೇ ಬಂದರೂ ಕೂಡ ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ಕೂಡ ಇಷ್ಟೊಂದು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಿರುವ ಪ್ರಮಾಣ ಕಂಡು ಎಲ್ಲಾ ನಾಯಕರೂ ಕೈಚೆಲ್ಲಿ ಕೂತಿರುತ್ತಿದ್ದರು. ಆದರೆ ಮೋದಿಜೀಯ ಮಾತುಗಳನ್ನು ಕೇಳಿ ಇಂದು ಎಲ್ಲಾ ನಾಯಕರುಗಳು ಕೂಡ ಮತ್ತಷ್ಟು ಹೆಚ್ಚು ಧೈರ್ಯದಿಂದ ಎದುರಿಸಿ ನಿಲ್ಲುವಂತಾಗಿದೆ…!

ಇರಲಿ, ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಗೆಲುವು ಮಾನವ ಕುಲದ್ದೇ ಆಗಲಿ ಎಂಬುದು ನಮ್ಮ ಆಶಯ..!

ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
Close