ಅಂಕಣ

“ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು” ಎಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದ್ದು ಮಡಿವಂತರಿಂದ ದೌರ್ಜನ್ಯಕ್ಕೊಳಗಾದ ಅಂಬೇಡ್ಕರ್ ಅವರೇ ಎಂದರೆ ನಂಬುತ್ತೀರಾ?!

ಅಂಬೇಡ್ಕರ್ ಎಂದರೆ ಹಿಂದು ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು.

ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬೈಗುಳಗಳ ಸುರಿಮಳೆಗೈದ ಚಾಲಕ, ನಿಂದಿಸಿ ಹಿಂತಿರುಗಿ ಹೊರಟುಹೋದ. ಇತ್ತ ಮಾರ್ಗ ಮಧ್ಯದಲ್ಲಿ ದಿಕ್ಕು ತೋಚದಂತಾದ ಬಾಲಕರು ಬಾಯಾರಿಕೆಯಿಂದ ಬಳಲಲಾರಂಭಿಸಿದರು. ಆದರೆ ಬೇಡಿಕೊಂಡರೂ ಬೊಗಸೆ ನೀರು ಸಿಗಲಿಲ್ಲ. ಬಾಯಾರಿಕೆಯನ್ನು ತಾಳಲಾರದೆ ಬಾವಿಯ ಬಳಿಗೆ ಹೋದ ಕಿರಿಯ ಸಹೋದರ ದಾಹವನ್ನು ಆರಿಸಿಕೊಂಡ. ಅದನ್ನು ಗಮನಿಸಿದ ಮೇಲ್ಜಾತಿಯವರು ಮನುಷ್ಯತ್ವವನ್ನೇ ಕಳೆದುಕೊಂಡು ಆತನನ್ನು ದಂಡಿಸಿದರು.

ಅಂದು ಮಡಿವಂತಿಕೆಯ ಕ್ರೌರ್ಯಕ್ಕೆ ಸಿಕ್ಕು ಹಿಪ್ಪೆಯಾಗಿದ್ದು, ಅವಮಾನಿತರಾಗಿದ್ದು ಮತ್ತಾರೂ ಅಲ್ಲ ಡಾ. ಭೀಮರಾವ್ ಅಂಬೇಡ್ಕರ್.

“ಸಂಸ್ಕೃತಕ್ಕೆ ಹೋಲಿಸಿದರೆ ಪರ್ಷಿಯನ್ ಏನೇನೂ ಅಲ್ಲ. ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ತಿಳಿಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ” ಎಂದಿದ್ದು, “ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು” ಎಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದ್ದು ಮಡಿವಂತರಿಂದ ದೌರ್ಜನ್ಯಕ್ಕೊಳಗಾದ ಅಂಬೇಡ್ಕರ್ ಅವರೇ ಎಂದರೆ ನಂಬುತ್ತೀರಾ?

ಅದರ ಹಿಂದೆಯೂ ಒಂದು ಕಥೆಯಿದೆ, ಕಾರಣವೂ ಇದೆ.

1928ರಲ್ಲಿ ‘ಜವಾಬ್ದಾರಿ ಸರ್ಕಾರ’ದ ಅಂಗವಾಗಿ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಆಯ್ಕೆಯಾಗಿ ಬಂದ ಅಂಬೇಡ್ಕರ್, ದಲಿತರಿಗೆ ದೇವಾಲಯ ಪ್ರವೇಶವನ್ನು ದೊರಕಿಸಿಕೊಡಲು ಬಹಳ ಕಾಲದಿಂದಲೂ ಹೋರಾಡುತ್ತಿದ್ದರು. ಆ ಹೊತ್ತಿನಲ್ಲಿಯೇ ಕೆಲ ಮೇಲ್ವರ್ಗದವರು ಮಹಾತ್ಮ ಗಾಂಧೀಜಿಯವರ ಕರೆಯನ್ನು ಧಿಕ್ಕರಿಸಿ ನಾಸಿಕ್‌ನ ಕೇಲಾರಾಮ್ ದೇವಾಲಯಕ್ಕೆ ದಲಿತರು ಪ್ರವೇಶ ಮಾಡುವುದಕ್ಕೆ ಅಡ್ಡಿಪಡಿಸಿದರು. ಆಗ ಅಂಬೇಡ್ಕರ್ ಅವರೇ ದೇವಾಲಯ ಪ್ರವೇಶ ಚಳವಳಿಯ ನೇತೃತ್ವ ವಹಿಸಿಕೊಂಡರು. ಆದರೆ ದಲಿತರು ದೇವಾಲಯ ಪ್ರವೇಶ ಮಾಡುವುದಕ್ಕೆ ಶಾಸ್ತ್ರಗಳು ಅಡ್ಡಿಬರುತ್ತವೆ ಎಂದು ಮೇಲ್ವರ್ಗದವರು ಪ್ರತಿಪಾದಿಸುತ್ತಿದ್ದರು. ಹಾಗಾಗಿ ತಾವು ಹಿಂದು ಆಗಿದ್ದರೂ ದೇವಾಲಯದೊಳಕ್ಕೆ ಹೋಗಲು ಬಾಧಕವೇನು ಎಂಬುದನ್ನು ತಿಳಿಯಲು ಅಂಬೇಡ್ಕರ್ ಮುಂದಾದರು. ಸ್ವತಃ ಶಾಸ್ತ್ರಗಳನ್ನು ಓದಿ ಮೂಲದಿಂದಲೇ ತಿಳಿಯುವ ಮನಸು ಮಾಡಿದರು. ಅದಕ್ಕಾಗಿ ಸಂಸ್ಕೃತವನ್ನು ಕರಗತ ಮಾಡಿಕೊಳ್ಳಲು ನಿಶ್ಚಯಿಸಿ ತಕ್ಕ ಗುರುವಿನ ಅನ್ವೇಷಣೆಯಲ್ಲಿ ತೊಡಗಿದರು.

ಇತ್ತ ಹೊಸಕೆರೆ ಪಂಡಿತ ನಾಗಪ್ಪ ಶಾಸ್ತ್ರಿಯವರು ನಮ್ಮ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಪ್ಲೀಡರ್(ಲಾಯರ್) ಆಗಿದ್ದರು. ಸಂಸ್ಕೃತದಲ್ಲಿ ಅಸಾಧಾರಣ ಪಾಂಡಿತ್ಯ ಸಾಧಿಸಿದ್ದ ಅವರು ಪ್ಲೀಡರ್ ಪರೀಕ್ಷೆಗಾಗಿ ಓದುತ್ತಿದ್ದಾಗಲೇ ಮೈಸೂರು ಅರಮನೆಯಲ್ಲಿ ರಾಜಕುಮಾರ, ಕುಮಾರಿಯರಿಗೆ ಪಾಠ ಹೇಳಿದ್ದಂಥ ವ್ಯಕ್ತಿ. 1905ರಲ್ಲೇ ಪಂಡಿತ ಹಾಗೂ ಶಾಸ್ತ್ರಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದರು. ಪ್ಲೀಡರ್ ಪರೀಕ್ಷೆಯ ನಂತರ ನರಸಿಂಹರಾಜಪುರಕ್ಕೆ ಹಿಂತಿರುಗಿದ ಅವರು ಲಾಯರ್‌ಗಿರಿ ಆರಂಭಿಸಿದರು. ಜತೆಗೆ ಸಂಸ್ಕೃತ ಅಭ್ಯಾಸವೂ ನಿರಂತರವಾಗಿತ್ತು. ಶಾಸ್ತ್ರಿಗಳಿಗೆ 6 ಹೆಣ್ಣು ಹಾಗೂ 4 ಗಂಡು ಮಕ್ಕಳು. ಗೌತಮಬುದ್ಧನ ವಿಚಾರಧಾರೆಯನ್ನು ಮೆಚ್ಚಿದ ಈ ಮಡಿವಂತ, ಸಂಸ್ಕೃತದಲ್ಲಿ “ಬುದ್ಧ ಭಾಗವತ” ಬರೆಯಲು ಮುಂದಾಗಿದ್ದರು. ಇತ್ತ 1929ರಲ್ಲಿ ಕರ್ನಾಟಕಕ್ಕೆ ಆಗಮಿಸಿದ ಮದನಮೋಹನ ಮಾಳವೀಯ ಹಾಗೂ ನಾಗಪ್ಪ ಶಾಸ್ತ್ರಿಯವರು ಚಿಕ್ಕಮಗಳೂರಿನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಪರಸ್ಪರ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು. ಶಾಸ್ತ್ರಿಗಳು ಬರೆಯುತ್ತಿದ್ದ “ಬುದ್ಧ ಭಾಗವತ”ದ ಹಸ್ತಪ್ರತಿಗಳನ್ನು ಓದಿದ ಮಾಳವೀಯ ಬೆಚ್ಚಿ ಬೆರಗಾದರು. ಮುಂಬೈಗೆ ಬರುವಂತೆ ಶಾಸ್ತ್ರಿಗಳಿಗೆ ಆಹ್ವಾನ ನೀಡಿದರು. ಲಾಯರ್‌ಗಿರಿಯೂ ಸರಿಯಾಗಿ ನಡೆಯದ ಕಾಲವದು. ಜತೆಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಸೋತಿದ್ದ ಶಾಸ್ತ್ರಿಗಳು ಸಂಸಾರವನ್ನು ಊರಲ್ಲಿ ಬಿಟ್ಟು 1929, ಅಕ್ಟೋಬರ್‌ನಲ್ಲಿ ಮುಂಬೈಗೆ ತೆರಳಿದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಪ್ರಾರ್ಥನಾ ಸಭೆಯೊಂದರ ವೇಳೆ ಮಾಳವೀಯರು ನಾಗಪ್ಪ ಶಾಸ್ತ್ರಿಯವರನ್ನು ಗಾಂಧೀಜಿಯವರಿಗೆ ಪರಿಚಯ ಮಾಡಿಕೊಟ್ಟರು. ಗಾಂಧೀಜಿಯವರು ಅಲ್ಲಿಯೇ ಇದ್ದ ಅಂಬೇಡ್ಕರ್ ಅವರನ್ನು ಕರೆದು “ತುಮ್ಹೆ ಗುರು ಕಾ ತಲಾಶ್ ಥಾ ನ? ಆಗಯಾ ದೇಖೋ ತುಮ್ಹಾರಾ ಗುರು’ ಎಂದು ನಗೆಯಾಡಿದರು.

ಹೀಗೆ 1930ರಲ್ಲಿ ನಾಗಪ್ಪ ಶಾಸ್ತ್ರಿಗಳಿಂದ ಅಂಬೇಡ್ಕರ್ ಅವರಿಗೆ ಸಂಸ್ಕೃತ ಪಾಠ ಆರಂಭವಾಯಿತು.

ವಾರಕ್ಕೆ ಮೂರು ದಿನ ಪಾಠ, ಮುಂದಿನ ಪಾಠಕ್ಕೆ ಹೋದೊಡನೆಯೇ ಹಿಂದಿನ ಪಾಠದ ಬಗ್ಗೆ ಅಂಬೇಡ್ಕರ್ ಅವರಿಂದ ಪ್ರಶ್ನೆಗಳ ಪಟ್ಟಿಯೇ ಸಿದ್ಧವಾಗಿರುತ್ತಿತ್ತು. ಅದಕ್ಕೆ ಉತ್ತರ ಹೇಳಿದ ಮಾತ್ರಕ್ಕೆ ಅ ಪ್ರಶ್ನೆ ಮತ್ತೆ ಬರುವುದಿಲ್ಲವೆಂಬ ಬಗ್ಗೆ ಯಾವ ಖಾತ್ರಿಯೂ ಇರಲಿಲ್ಲ. ಅಂಬೇಡ್ಕರ್ ತಮ್ಮ ಮನದಲ್ಲಿ ಮೂಡಿದ ಸಂಶಯಗಳನ್ನೆಲ್ಲ ಮುಂದಿಟ್ಟು ಚರ್ಚಿಸುತ್ತಿದ್ದರು. ಹೀಗೆ ಎರಡು ವರ್ಷಗಳ ಕಾಲ ನಾಗಪ್ಪ ಶಾಸ್ತ್ರಿಗಳ ಬಳಿ ಸಂಸ್ಕೃತ ಕಲಿತ ಅಂಬೇಡ್ಕರ್ ಏಳು ವರ್ಷಗಳಲ್ಲಿ ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದರು.

“ಜನ್ಮನಾ ಜಾಯತೇ ಶೂದ್ರಃ…. ಸಂಸ್ಕಾರಾತ್ ದ್ವಿಜ ಉಚ್ಯತೇ!!”

ಅಂದರೆ ಹುಟ್ಟುವಾಗ ಎಲ್ಲರೂ ಶೂದ್ರರೇ. ಆದರೆ ಸಂಸ್ಕಾರದಿಂದ ಉಚ್ಚರಾಗಬಹುದು ಎಂಬ ಮಾತಿದೆ. ಕರ್ದಮ, ವಸಿಷ್ಠ, ಪರಾಶರ, ಕೃಷ್ಣ, ದ್ವೈಪಾಯನ(ವ್ಯಾಸ), ಕಪಿಲ, ದರ್ವತಿ (ಮಾತಂಗಿ), ಸತ್ಯಕಾಮ ಜಾಬಾಲಿ, ವಾಲ್ಮೀಕಿ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳ ಮೂಲವನ್ನು ಹುಡುಕಿಕೊಂಡು ಹೋದರೆ ಅವರ್ಯಾರೂ ಬ್ರಾಹ್ಮಣರಲ್ಲ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗಬೇಕು, ಎಂಜಿನಿಯರ್ ಮಕ್ಕಳು ಎಂಜಿನಿಯರ್‌ಗಳೇ ಆಗಬೇಕು ಎಂದು ಹೇಗೆ ಇಲ್ಲವೋ ಅದೇ ರೀತಿ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗುವುದೂ ಇಲ್ಲ. ಆದರೆ ಬ್ರಾಹ್ಮಣನ ಮಗನಾಗಿ ಹುಟ್ಟುವುದರಿಂದ ಜ್ಞಾನ,
ಸಭ್ಯ ನಡತೆಗಳಂತಹ ವಿಚಾರಗಳನ್ನು ಸಹಜವಾಗಿಯೇ ಪಡೆದುಕೊಳ್ಳುವ ಅನುಕೂಲವಿರುತ್ತದೆ. ಆದರೂ ಬ್ರಾಹ್ಮಣನಾಗಬೇಕಾದರೆ ಸ್ವತಃ ಜ್ಞಾನ ಸಂಪಾದನೆ
ಮಾಡಿಕೊಳ್ಳಬೇಕು. ಹಾಗೆ ಜ್ಞಾನ ಸಂಪಾದನೆ ಮಾಡಿಕೊಂಡಾಗ ಆತನಿಗೆ ಮರುಹುಟ್ಟು ಲಭಿಸುತ್ತದೆ, ದ್ವಿಜನಾಗುತ್ತಾನೆ. ಮಹರ್ಷಿ ಅರವಿಂದ್, ಪಂಡಿತ್ ಶ್ಯಾಮ್‌ಜಿ ಕೃಷ್ಣವರ್ಮ (ಪಂಡಿತ ಪದವಿ ಪಡೆದ ಮೊದಲ ಬ್ರಾಹ್ಮಣೇತರ), ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಕೆ.ಕೆ. ಮುನ್ಷಿ ಇವರ್ಯಾರೂ ಬ್ರಾಹ್ಮಣರಲ್ಲ, ಕಲಿತು ಶ್ರೇಷ್ಠರೆನಿಸಿಕೊಂಡವರು.

ಅಂಬೇಡ್ಕರ್ ಕೂಡ ಅದೇ ಸಾಲಿಗೆ ಸೇರುತ್ತಾರೆ.

ಅರ್ಧ ವಯಸ್ಸು ಕಳೆದ ಮೇಲೆ ಸಂಸ್ಕೃತ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದರು. ವೇದ-ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ವಿಶ್ಲೇಷಿಸುವ ಸಾಮರ್ಥ್ಯ ಪಡೆದರು. ಅದರ ಫಲವೇ ‘Riddles in Hinduism” ಪುಸ್ತಕ. ವೇದಗಳ ಕಾಲದಲ್ಲಿ ಜಾತಿ ಪದ್ಧತಿಯಿರಲಿಲ್ಲ. ಅಸ್ಪೃಶ್ಯತೆಯೂ ಇರಲಿಲ್ಲ. ಹಾಗಾದರೆ ಜಾತಿ ವ್ಯವಸ್ಥೆ ಹಿಂದು ಸಮಾಜದಲ್ಲಿ ಹೇಗೆ ಸೇರಿಕೊಂಡಿತು? ಮುಂತಾದ 24 ಒಗಟುಗಳನ್ನು ಪಟ್ಟಿ ಮಾಡಿರುವ ಅಂಬೇಡ್ಕರ್, ನಮ್ಮ ಪಂಡಿತ-ಪಾಮರ ವರ್ಗದ ವಂಚನೆಗಳನ್ನು ಈ ಪುಸ್ತಕದಲ್ಲಿ ಬಯಲುಗೊಳಿಸಿದರು.

ಹಾಗಂತ…

ಅವರು ಯಾರ ಮೇಲೂ ದ್ವೇಷ ಕಾರಲಿಲ್ಲ. “ಸಂಸ್ಕೃತವನ್ನೇ ಅಧಿಕೃತ ಭಾಷೆಯಾಗಿ ಸ್ವೀಕರಿಸುವಂತೆ” 1949, ಸೆಪ್ಟೆಂಬರ್ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್ ಅವರೇ. ಅಂಬೇಡ್ಕರ್ ಎಂದರೆ ಹಿಂದು ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅಷ್ಟಿಲ್ಲವಾದರೂ ದೇಶ ವಿಭಜನೆ ಅನಿವಾರ್ಯವಾದಾಗ ಭೂಭಾಗವನ್ನು ಹಂಚಿಕೊಳ್ಳುವ ಜತೆಗೆ “ಪಾಪುಲೇಷನ್ ಎಕ್ಸ್‌ಚೇಂಜ್‌” ಕೂಡ ಮಾಡಿಕೊಳ್ಳಿ, ಹಿಂದು-ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬ
ಕಟುಸತ್ಯವನ್ನು ದಿಟ್ಟವಾಗಿ  ಹೇಳಿದವರು ಅವರು ಮಾತ್ರ!

ಅಷ್ಟೇ ಅಲ್ಲ…

ಭಾರತದೊಂದಿಗೆ 1947, ಅಕ್ಟೋಬರ್ 25ರಂದು ಮಹಾರಾಜ ಹರಿಸಿಂಗ್ ಸಹಿ ಹಾಕುವುದರೊಂದಿಗೆ ಭಾರತದ ಒಕ್ಕೂಟದೊಳಗೆ ಸೇರ್ಪಡೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ  ಪ್ರಸ್ತಾಪಕ್ಕೆ ಆಗಿನ ಕಾನೂನು ಸಚಿವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದ್ದರು. ಎಲ್ಲ ರಾಜ್ಯಗಳೂ ಸಮಾನ ಹಾಗೂ ಸಮಾನ ಹಕ್ಕು-ಅವಕಾಶಗಳನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಹೀಗೆ ಅಂಬೇಡ್ಕರ್ ನಮಗೆ ಬಗ್ಗುವುದಿಲ್ಲ ಎಂದು ತಿಳಿದ ನೆಹರು ನರಿಉಪಾಯ ಮಾಡಿದರು. “ಅನಾರೋಗ್ಯ”ದ ಕಾರಣ ಮರುದಿನ ಅಂಬೇಡ್ಕರ್ ಸದನಕ್ಕೆ ಬರಲೇ ಇಲ್ಲ, ಅವರ ಅನುಪಸ್ಥಿತಿಯಲ್ಲಿ 370 ವಿಧಿಗೆ ಅನುಮೋದನೆ ದೊರೆತು ಸಂವಿಧಾನ ಸೇರಿತು. ಈ ಘಟನೆ ನಡೆದ ಮಾರನೇ ದಿನವೇ ಸದನಕ್ಕೆ ಆಗಮಿಸಿದ ಅಂಬೇಡ್ಕರ್‌ರನ್ನು ಕಾರಣ ಕೇಳಿದಾಗ “ಬರಬೇಡ” ಎಂದು ನೆಹರು ಅವರೇ ಹೇಳಿದ್ದರು ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ನೆಹರು ಬಣ್ಣ ಬಯಲಾಯಿತು, ಕಾಶ್ಮೀರ ಶಾಶ್ವತವಾಗಿ ಭಾರತಕ್ಕೆ ಮಗ್ಗುಲ ಮುಳ್ಳಾಯಿತು, ದೇಶದ್ರೋಹಿಗಳ ನೆಲೆವೀಡಾಯಿತು. ಇದೆಲ್ಲವೂ ಸಂವಿಧಾನದ ಕರಡು ಸಮಿತಿಯ ಚರ್ಚೆಗಳಲ್ಲಿ ದಾಖಲಾಗಿವೆ. ಇತ್ತ ಅಂಬೇಡ್ಕರ್ ತಮ್ಮ ನಿಷ್ಠುರವಾದದಿಂದ ನೆಹರು ವೈಷಮ್ಯಕ್ಕೆ ಬಲಿಯಾಗಬೇಕಾಗಿ ಬಂತು. 1951-52ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ಧ ಅಭ್ಯರ್ಥಿ ನಿಲ್ಲಿಸಿ ಸೋಲಿಸಿದ್ದು ಇವತ್ತು ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ನೆಹರು ಅವರ ಕಾಂಗ್ರೆಸ್ಸೇ!

ನೀವು ಬಾಳಾಸಾಹೇಬ್ ಗಂಗಾಧರ್ ಖೇರ್ ಅಥವಾ ಬಿ.ಜಿ. ಖೇರ್ ಹೆಸರು ಕೇಳಿದ್ದೀರಾ?

ಅವರು ಈಗ ಮಹಾರಾಷ್ಟ್ರವಾಗಿರುವ ಅಂದಿನ ಬಾಂಬೆ ರಾಜ್ಯದ (ಮಹಾರಾಷ್ಟ್ರ-ಗುಜರಾತ್) ಮೊದಲ ಮುಖ್ಯಮಂತ್ರಿ. ಮುಂಬೈನಲ್ಲೊಂದು ಸಾರ್ವಜನಿಕ ಸಭೆ ಆಯೋಜನೆಯಾಗಿತ್ತು. ಪಂಡಿತ್ ನೆಹರು, ಮೊರಾರ್ಜಿ ದೇಸಾಯಿ ಅವರಂಥ ಗಣ್ಯರು ಉಪಸ್ಥಿತರಿದ್ದರು. ಮಾತಿಗೆ ನಿಂತ ಬಿ.ಜಿ. ಖೇರ್ ಭಾಷಣದ ಮಧ್ಯೆ, ‘I am an Indian first and a Maharashtrian next, ನಾನು ಮೊದಲು ಭಾರತೀಯ, ನಂತರ ಮಹಾರಾಷ್ಟ್ರಿಗ” ಎಂದುಬಿಟ್ಟರು. ತಮ್ಮ ಸರದಿ ಬಂದಾಗ ಬಿ.ಜಿ. ಖೇರ್ ಅವರ ಮಾತನ್ನು ದೃಷ್ಟಿಯಲ್ಲಿಟ್ಟುಕೊಂಡು, ‘I am an Indian first and Indian last, ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ” ಎಂದರು ಡಾ. ಅಂಬೇಡ್ಕರ್!

I am an Indian first, Then a Muslim or Hindu or Christian ಎನ್ನುವ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸೋಗಲಾಡಿಗಳು ತುಂಬಿರುವ ಈ ಕಾಲದಲ್ಲಿ “ನಾನು ಭಾರತೀಯ ಮಾತ್ರ” ಎನ್ನುವ ಅಂಬೇಡ್ಕರ್‌ರಂಥ ಭಾವನೆ ನಮ್ಮೆಲ್ಲರಲ್ಲೂ ಮೂಡಬೇಕು, We are Indians, Firstly and Lastly ಎಂದು ನಾವೆಲ್ಲ ಹೇಳಬೇಕು, ಅಲ್ಲವೆ?

-ಪ್ರತಾಪ್ ಸಿಂಹ

Tags

Related Articles

Close