ಪ್ರಚಲಿತ

ಸದ್ದು ಗದ್ದಲವಿಲ್ಲದೇ ಲಾಕ್ ಡೌನ್ ಸಮಯದಲ್ಲೂ ಪಂಚಶ್ರೀ ಪಂಜ ಅಂಬ್ಯುಲೆನ್ಸ್ ಬರೆಯಿತು ಮತ್ತೊಂದು ಹೊಸ ದಾಖಲೆ

ಹೇಳಿ ಕೇಳಿ ಕೊರೊನಾ ಮಹಾಮಾರಿ ಯಮರೂಪಿ ನರ್ತನಕ್ಕೆ ಇಡೀ ಜಗತ್ತೇ ನರಳುತ್ತಿರುವ ನಡುವೆ ಯುವ ತೇಜಸ್ಸು ಟ್ರಸ್ಟ್ (ರಿ) ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ (ರಿ) ಪಂಜದ ಸಹಯೋಗದೊಂದಿಗೆ ಎರಡು ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡ ಅಂಬ್ಯುಲೆನ್ಸ್ ಇದೀಗ ಮತ್ತೊಮ್ಮೆ ತನ್ನ ಇರುವಿಕೆಯ ಜೊತೆಗೆ ತನ್ನ ಪ್ರಯೋಜನವನ್ನು ಲೋಕಕ್ಕೆ ಸಾರಿ ಹೇಳಿದೆ‌.

ಪಂಜದ ದಂತಹ ಕುಗ್ರಾಮದಿಂದ ಪುತ್ತೂರು ಮಂಗಳೂರು ಗೆ ಲಾಕ್ ಡೌನ್ ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಲು ಹಾಗು ಮಂಗಳೂರಿನಿಂದ ಪಂಜಕ್ಕೆ ಅಗತ್ಯ ಔಷಧಿಗಳ ಸರಬರಾಜು ಮಾಡಲು ನೆರವಿಗೆ ಬಂದದ್ದು ಇದೇ ಪಂಚ ಶ್ರೀ ಅಂಬ್ಯುಲೆನ್ಸ್. ಸರಿಸುಮಾರು ಎರಡೂವರೆ ತಿಂಗಳ ಅವಧಿಯಲ್ಲೇ ಸುಮಾರು 75 ರೋಗಿಗಳ ಕೇಸ್’ಗಳಿಗೆ ನೆರವಾದ ಹೆಗ್ಗಳಿಕೆ ಈ ಅಂಬ್ಯುಲೆನ್ಸ್ ನದು..

ಮೂರು ವರುಷಗಳ ಹಿಂದೆ ಯುವ ತೇಜಸ್ಸು ಸಂಸ್ಥೆ ಆರಂಭವಾದ ನಂತರ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಯುವಕರನ್ನು ಒಗ್ಗೂಡಿಸಿಕೊಂಡು ಹಲವಾರು ಯೋಜನೆಗಳು, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಸಂಪೂರ್ಣ ಯಶಸ್ವಿಯಾಗಿತ್ತು.‌ ಪಂಜ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಅಂಬ್ಯುಲೆನ್ಸ್ ನ ಪ್ರಸ್ತಾಪ ಕೂಡ ಯುವ ತೇಜಸ್ಸು ಬಳಗದಿಂದಲೇ ಆಗಿದ್ದು, ಅದರ ಈಡೇರಿಕೆಗೆ ಪಂಚಶ್ರೀಯ ಕೆಲ ಪದಾಧಿಕಾರಿಗಳು ಕಾರ್ಯಸೂಚಿ ಪ್ರಾರಂಭಿಸಿದಾಗ ಅದೇ ಯುವ ತೇಜಸ್ಸಿನ ಯುವಕರು ಹೆಗಲು ಕೊಡಲು ಮುಂದಾಗಿದ್ದು, ಪಂಚಶ್ರೀ ಪಂಜದ ಪಾಲಿಗೆ ಬಲು ಮಹತ್ವವೂ ಆಗಿತ್ತು. ಈಗಲೂ ಅಷ್ಟೇ ಪಂಚಶ್ರೀ ಪಂಜ ಮತ್ತು ಯುವ ತೇಜಸ್ಸು ಟ್ರಸ್ಟ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.‌ ಹೆಸರು ಬೇರೆ ಬೇರೆಯಾದರೂ ಎರಡೂ ಸಂಸ್ಥೆಗಳಲ್ಲಿಯೂ ಇದೇ ಯುವಕರೇ ಸಕ್ರಿಯರಾಗಿದ್ದಾರೆ. ಅಂಬ್ಯುಲೆನ್ಸ್ ನ ಯಶಸ್ಸಿಗೆ ಇದೂ ಒಂದು ಪ್ರಮುಖ ಕಾರಣ, ಹಾಗಾಗಿ ಯಶಸ್ಸಿನ ಶ್ರೇಯ ಎರಡೂ ಸಂಸ್ಥೆಗೂ ಸಲ್ಲುತ್ತದೆ.

ಈ ಎಲ್ಲದರ ನಡುವೆ ತೀರಾ ಮೊನ್ನೆ ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರು ತೆರಳಲು ವಾಹನ ಸೇವೆಗಾಗಿ ಎಲ್ಲಾ ಪ್ರಯತ್ನ ಮಾಡಿ ಅದರಲ್ಲಿ ಯಾವುದೇ ಫಲ ಕಾಣದಾದಾಗ ಪಂಜ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಅಧಿಕಾರಿಗಳಾದ ದೇವಿಪ್ರಸಾದ್ ಕಾನತ್ತೂರು ಜೊತೆಯಲ್ಲಿ ಸಹಾಯ ಕೇಳಿದಾಗ ಅವರು ಗುರುಪ್ರಸಾದ್ ಪಂಜ ಅವರ ಬಳಿ ವಿವರ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಗುರುಪ್ರಸಾದ್ ಅವರು ದೈನಂದಿನ ಅಂಬ್ಯುಲೆನ್ಸ್ ಚಾಲಕರಿಲ್ಲದೇ ಇದ್ದರೂ ಸ್ವಯಂ ಚಾಲಕರಾಗಿ ತನ್ನ ಗೆಳೆಯರಾದ ಉದಯ್ ಕುಮಾರ್ ಹುದೇರಿ ಅವರೊಂದಿಗೆ ಬೆಂಗಳೂರಿಗೆ ತೆರಳುವ ದಿಟ್ಟ ನಿರ್ಧಾರ ಕೈಗೊಂಡರು. ಆದರೆ ಪಂಜದ ಜನರ ತುರ್ತು ಸೇವೆಗೆ ಸದಾ ಸಿದ್ಧವಾಗಿರಬೇಕೆಂಬ ಏಕೈಕ ಉದ್ದೇಶದಿಂದ ಊರಿನ ಜನರಿಗೆ ತೊಂದರೆ ಆಗದಂತೆ ರಾತ್ರಿ 11 ರ ನಂತರ ಬೆಂಗಳೂರಿನ ಬನಶಂಕರಿ ಗೆ ಕಳುಹಿಸಿ ಪುನಃ ಬೆಳಗ್ಗೆ ಪಂಜದ ಜನತೆಯ ಸಹಾಯಕ್ಕಾಗಿ ಬೆಳಗ್ಗೆ 7ಗಂಟೆಯ ಮೊದಲು ಪಂಜಕ್ಕೆ ತಲುಪುವಂತೆ ವ್ಯವಸ್ಥೆ ಮಾಡಿರುತ್ತಾರೆ.

ಕೇವಲ 8 ಗಂಟೆಯಲ್ಲಿ ಸುಮಾರು 600 ಕಿಮೀ ಗಿಂತಲೂ ಹೆಚ್ಚು ದೂರವನ್ನು ರಾತ್ರಿ ಚೂರು
ನಿದ್ರೆ ಮಾಡದೇ ಚಲಾಯಿಸಿದ ಗುರುಪ್ರಸಾದ್ ಪಂಜ ಹಾಗೂ ಉದಯ ಕುಮಾರ್ ಹುದೇರಿ ಅವರಿಗೂ, ಯಾವುದೇ ಸಮಯದಲ್ಲಿ ಯಾರೇ ಆಗಲಿ ಸಹಾಯ ಬೇಡಿದಾಗ ಮುಂದೆ ನಿಂತು ಬೆಂಬಲಿಸಿ ಪ್ರೋತ್ಸಾಹಿಸುವ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಗೂ ಯುವ ತೇಜಸ್ಸು ಬಳಗಕ್ಕೂ ಅಭಿನಂದನೆಗಳು. ಸದಾ ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಿರುವ ಯುವ ತೇಜಸ್ಸು ಬಳಗದ ಈ ಮಹಾನ್ ಕಾರ್ಯ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ತಮ್ಮ ಜೀವದ ಹಂಗನ್ನು ತೊರೆದು ಸಮಾಜಕ್ಕಾಗಿ ದುಡಿಯುತ್ತಿರುವ ದಕ್ಷ ದಿಟ್ಟ ಯುವ ಪಡೆ ಹೊಂದಿರುವ ಯುವ ತೇಜಸ್ಸಿನ ಸಾಮಾಜಿಕ ಕಳಕಳಿಯು ಸದಾ ಹೀಗೆ ಇರಲೆಂಬ ಅಶಯದೊಂದಿಗೆ ಧನ್ಯವಾದಗಳು..

Related Articles

FOR DAILY ALERTS
Close