ಇತಿಹಾಸ

ಸಮಸ್ತ ಹಿಂದೂಗಳಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು!! ಮಹರ್ಷಿ ವಾಲ್ಮೀಕಿಗಳ ಜೀವನ ವೃತ್ತಾಂತ!!!

ರಾಮ ಮತ್ತು ಸೀತಾಮಾತೆಯರ ಜೀವನಚರಿತ್ರೆಯ ಕಥೆಯೇ ‘ರಾಮಾಯಣ’. ರಾಮಾಯಣವನ್ನ ಸ್ವತಃ ಶ್ರೀ ರಾಮಚಂದ್ರ ಪ್ರಭುಗಳೇ ಲವ ಕುಶರ ಬಾಯಲ್ಲಿ ಆಲಿಸಿ ಸಂತೋಷಗೊಂಡಿದ್ದರಂತೆ. ಆದರೆ ಆಗ ಲವ ಕುಶ ಇಬ್ಬರೂ ತನ್ನ ಮಕ್ಕಳೇ ಅನ್ನೋದು ಶ್ರೀರಾಮಚಂದ್ರನಿಗೆ ತಿಳಿದಿರಲಿಲ್ಲ. ‘ರಾಮಾಯಣ’ವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಲವ ಮತ್ತು ಕುಶರಿಗೆ ರಾಮಾಯಣವನ್ನ ಹಾಡು, ಕಥೆಯ ಮೂಲಕ ಕಲಿಸಿದ್ದರು.

ವಾಲ್ಮೀಕಿಯ ರಾಮಾಯಣವು ಸಂಸ್ಕೃತ ಭಾಷೆಯಲ್ಲಿದೆ. ಇದು ಒಬ್ಬ ಶ್ರೇಷ್ಠ ನಾಯಕನ ಕಥೆಯನ್ನು ನಿರೂಪಿಸುವ ಒಂದು ಸುಂದರವಾದ ದೀರ್ಘ ಕವಿತೆಯಾಗಿದೆ. ಇದನ್ನು ಮಹಾಕಾವ್ಯ ಎಂದೂ ಕರೆಯಲಾಗುತ್ತದೆ.

* ವಾಲ್ಮೀಕಿ ‘ರಾಮಾಯಣ’ ಸಂಸ್ಕೃತದಲ್ಲಿ ಬರೆದ ಮೊದಲ ಕಾವ್ಯ. ಹಾಗಾಗಿಯೇಇದನ್ನು ‘ಆದಿಕಾವ್ಯ’ ಎಂದು ಕರೆಯಲಾಗುತ್ತದೆ. ವಾಲ್ಮೀಕಿ ಮಹರ್ಷಿಯನ್ನನ್ನು ‘ಆದಿಕವಿ’ ಎಂದೂ ಕರೆಯಲಾಗುತ್ತದೆ, ಇದರರ್ಥ ‘ಮೊದಲ ಕವಿ’.

* ವಾಲ್ಮೀಕಿ ಎಂಬ ಹೆಸರನ್ನ ಅವರ ತಂದೆ ತಾಯಿ ಇಟ್ಟ ಹೆಸರಾಗಿರಲಿಲ್ಲ. ವಾಲ್ಮೀಕಿಯ ಮೂಲ ಹೆಸರು ರತ್ನಾಕರ, ರಾಮಾಯಣ ಬರೆಯಲು ಕೂರುವ ಮುನ್ನ ಘೋರ ತಪಸ್ಸಿಗೆ ಕೂತ ರತ್ನಾಕರನ ಸುತ್ತ ಹುತ್ತ ಬೆಳೆದು ಮೈಯೆಲ್ಲಾ ಹುತ್ತದಿಂದಾವೃತವಾಗಿರುತ್ತೆ. ದೇವದೇವಾದಿಗಳು ರತ್ನಾಕರನ ತಪಸ್ಸಿಗೊಲಿದು
ಆಶೀರ್ವದಿಸದರು. ಮೈಮೇಲಿದ್ದ ಹುತ್ತವನ್ನ ‘ವಲ್ಮೀಕ’ವೆಂದೂ ಹಾಗು ಅದನ್ನ ಮೈಯೆಲ್ಲಾ ಆವೃತವಾಗಿಸಿಕೊಂಡಿದ್ದ ರತ್ನಾಕರನನ್ನ ‘ವಾಲ್ಮೀಕಿ’ ಎಂದು ಕರೆಯುತ್ತಾರೆ.

ವಾಲ್ಮೀಕಿ ಮಹರ್ಷಿಗಳು ಶ್ರೀ ರಾಮನು ಬದುಕಿದ್ದ ‘ತ್ರೇತಾಯುಗ’ದಲ್ಲೇ ಬದುಕಿದ್ದವರು. ಆ ದಿನಗಳಲ್ಲಿ, ಗಂಗಾ ನದಿಯ ದಡದ ಉದ್ದಕ್ಕೂ ದಟ್ಟ ಕಾಡಿತ್ತು. ಅನೇಕ
ಋಷಿಗಳು ಆ ಅರಣ್ಯದಲ್ಲಿ ಅವರ ತಪಸ್ಸಿಗಾಗಿ ತಮ್ಮ ಆಶ್ರಮಗಳನ್ನ ನಿರ್ಮಿಸಿಕೊಂಡಿದ್ದರು. ಅಂತಹ ಋಷಿಗಳಲ್ಲೊಬ್ಬರಾದ ‘ಪ್ರಚೇತಾಸ’ ಎಂಬ ಹೆಸರಿನ ಅದೇ ಕಾಡಿನ ಕುಟೀರದಲ್ಲಿ ವಾಸವಾಗಿದ್ದವರು. ಪ್ರಚೇತಸರಿಗೆ ‘ರತ್ನಾಕರ’ ಎಂಬ ಮಗನಿದ್ದನು. ಆತ ಚಿಕ್ಕವನಿದ್ದಾಗ ಕಾಡಿನಲ್ಲಿ ಆಟವಾಡಲು ಹೋದಾಗ ದಾರಿ ತಪ್ಪಿ ಕಾಡಿನಲ್ಲಿ ಕಳೆದುಹೋಗುತ್ತಾನೆ. ಮನೆಗೆ ಹೇಗೆ ಹೋಗೋದೆಂದು ತಿಳಿಯದ ಬಾಲಕ ರತ್ನಾಕರ ಕಾಡಿನಲ್ಲಿ ಅಳುತ್ತಾ ನಿಂತಿರುತ್ತಾನೆ. ಆಗ ಅದೇ ಸಮಯಕ್ಕೆ ಬೇಟೆಗಾಗಿ ಬೇಟೆಗಾರನೊಬ್ಬ ಕಾಡಿನಲ್ಲಿ ಅಲೆಯುತ್ತಿದ್ದ. ಆ ಬೇಟೆಗಾರ ಈ ದುಂಡುಮುಖದ ಹುಡುಗನನ್ನು ಕಂಡು ಅದೇನೋ ಉಲ್ಲಸಿತನಾಗುತ್ತಾನೆ. ಅಳುತ್ತಿದ್ದ ಮಗುವನ್ನು ಸಮಾಧಾನಪಡಿಸಿ ಬೇಟೆಗಾರನಿಗೂ ಮಕ್ಕಳಿರದ ಕಾರಣ ಬಾಲಕನನ್ನ ತನ್ನ ಮಗುವಾಗಿ ಸಾಕಲು ಶುರು ಮಾಡಿದ.

ಇತ್ತ ರತ್ನಾಕರನ ತಂದೆ ತನ್ನ ಮಗನಿಗೆ ಅರಣ್ಯದಲ್ಲಿ ಹುಡುಕಾಡಿದನು ಆದರೆ ಮಗ ಮಾತ್ರ ಸಿಗಲೇ ಇಲ್ಲ. ಕೊನೆಗೆ ರತ್ನಾಕರ ಕಾಡಿನಲ್ಲಿ ಯಾವುದೋ ಪ್ರಾಣಿಗೆ ಬಲಿಯಾಗಿದ್ದಾನೆಂದುಕೊಂಡು ನೊಂದು ತುಂಬಾ ಕಣ್ಣೀರಿಟ್ಟರು.

ಬೇಟೆಗಾರ ಮತ್ತು ಅವನ ಹೆಂಡತಿಯು ರತ್ನಾಕರನನ್ನ ತಮ್ಮ ಸ್ವಂತ ಮಗನಂತೆ ಬೆಳೆಸಿದರು. ರತ್ನಾಕರನು ತನ್ನ ಹೆತ್ತವರನ್ನು ಮರೆತನು. ಬೇಟೆಗಾರನಾಗಿದ್ದ ತಂದೆ ಮಗನಿಗೂ ಬೇಟೆಯಾಡೋದನ್ನ ಕಲಿಸಿದ. ತೀಕ್ಷ್ಣ ಬುದ್ಧಿಯವನಾಗಿದ್ದ, ಚತುರಮತಿಯನಾಗಿದ್ದ ರತ್ನಾಕರ ಬೇಟೆಯಾಡುವುದರಲ್ಲಿ ತಂದೆಯನ್ನೇ
ಬೇಟೆಯಲ್ಲಿ ಮೀರಿಸುವಷ್ಟು ಬೆಳೆದು ನಿಂತ.

ರತ್ನಾಕರನ ಸಾಕು ತಂದೆ ಮದುವೆಯ ವಯಸ್ಸಿಗೆ ಬಂದ ಮಗನನ್ನು ಬೇಟೆಗಾರ ಕುಟುಂಬದ ಸುಂದರ ಯುವತಿಯೊಂದಿಗೆ ಮದುವೆ ಮಾಡಿಸಿದ. ದಂಪತಿಗಳು ಕೆಲವು ವರ್ಷಗಳಲ್ಲಿ ಮುದ್ದಾದ ಮಕ್ಕಳಿಗೂ ಜನ್ಮ ನೀಡಿದರು. ಹೀಗಾಗಿ ರತ್ನಾಕರ ಕುಟುಂಬವು ಬೆಳೆಯಿತು. ಆತನಿಗೆ ದೊಡ್ಡ ಕುಟುಂಬದ ಜವಾಬ್ದಾರಿ ನಿಭಾಯಿಸಲು ಕಷ್ಟವಾದಾಗ ರತ್ನಾಕರ ದರೋಡೆ ಮಾಡಲು ಮುಂದಾದ. ಒಂದು ಗ್ರಾಮದಿಂದ ಮತ್ತೊಂದಕ್ಕೆ ಹೋಗುವ ಜನರನ್ನು ಆಕ್ರಮಣ ಮಾಡಿ ಅವರನ್ನು ಹೆದರಿಸಿ ಲೂಟಿ ಮಾಡಲು ನಿಂತ, ವಿರೋಧಿಸಿದವರನ್ನ ಕೊಂದೂ ಹಾಕುತ್ತಿದ್ದ.

ಒಂದು ದಿನ ದರೋಡೆ ಮಾಡಲು ಯಾರಾದರೂ ಸಿಗುತ್ತಾರಾ ಅಂತ ಹೊಂಚು ಹಾಕಿ ಕೂತಿದ್ದ ರತ್ನಾಕರನಿಗೆ ಸಿಕ್ಕದ್ದು ನಾರದ ಮುನಿಗಳು. ನಾರದರ ಕೈಲ್ಲಿ ವಾದ್ಯ, ವೀಣೆಯನ್ನ ಕಂಡ ರತ್ನಾಕರ ಅವರನ್ನ ಗದರಿಸಿ ನಿನ್ನ ಹತ್ತಿರವಿರುವ ಎಲ್ಲಾ ಆಭರಣಗಳು, ಒಡವೆಗಳೆಲ್ಲ ಕೊಟ್ಟು ಬಿಡು ಇಲ್ಲವಾದರೆ ನಿನ್ನನ್ನ ಕೊಂದು ಬಿಡುತ್ತೇನೆ ಅಂತ ಹೆದರಿಸಿದ.

ಆದರೆ ನಾರದ ಮುನಿಗಳು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಆತ ದೈವಿ ಸ್ವರೂಪ ಋಷಿಯಾಗಿದ್ದಂಥವರು, ಭೂಮಿ, ಸ್ವರ್ಗ ಮತ್ತು ಪಾತಾಳದಲ್ಲೂ ಸಂಚರಿಸುವ ತ್ರಿಲೋಕ ಸಂಚಾರಿಯಾಗಿದ್ದ. ಇಂತಹ ನಾರದ ರತ್ನಾಕರನ ಬೆದರಿಕೆಗೆ ಜಗ್ಗದೆ ನಗುತ್ತಾ ಹೇಳ್ತಾರೆ “ಮಗುವೇ ನನ್ನ ಹತ್ತಿರ ಈ ಹಳೆಯ ವೀಣೆ ಮತ್ತು ನಾನು ಧರಿಸಿರುವ ಈ ಬಟ್ಟೆ ಬಿಟ್ಟರೆ ಮತ್ತೇನೂ ಇಲ್ಲ. ನೀವು ಬೇಕೆಂದರೆ ನಿನಗೆ ಇವುಗಳನ್ನು ಕೊಟ್ಟು ಬಿಡುತ್ತೇನೆ, ಈ ವಸ್ತುಗಳಿಗಾಗಿ ನನ್ನನ್ನ ಕೊಲ್ತೀಯ?”

ನಾರದರ ಮಾತುಗಳನ್ನು ಕೇಳಿದ ರತ್ನಾಕರನು ಆಶ್ಚರ್ಯಚಕಿತನಾದನು. ಭಯ, ಕೋಪ ಎಳ್ಳಷ್ಟೂ ಇರದ ನಾರದರ ಮುಖವನ್ನೇ ನೋಡುತ್ತ ನಿಂತ. ಅಂತಹ ತೇಜಸ್ಸಿನ ಮುಖವನ್ನು ಅವನು ಎಂದಿಗೂ ನೋಡಿರಲಿಲ್ಲ. ಆ ಮುಖ ನೋಡಿ ರತ್ನಾಕರನ ಕ್ರೂರ ಮನಸ್ಸು ಕರಗಿತ್ತು.

ನಾರದ ರತ್ನಾಕರನಿಗೆ, “ಸಹೋದರ, ಕಳ್ಳತನ ಪಾಪವಾಗಿದ್ದು ಪ್ರಾಣಿಗಳನ್ನು ಕೊಲ್ಲುವುದು ಕೂಡ ಪಾಪದ ಕೆಲಸವಾಗುದೆ, ನೀನು ಯಾಕೆ ಈ ಕೆಟ್ಟ ಕೆಲಸ ಮಾಡುತ್ತಿದ್ದೀಯ?” ಅದಕ್ಕೆ ರತ್ನಾಕರ, “ನನಗೆ ದೊಡ್ಡ ಕುಟುಂಬವಿದೆ ನನ್ನ ಹೆತ್ತವರು, ನನ್ನ ಹೆಂಡತಿ ಮತ್ತು ಮಕ್ಕಳಿರುವ ದೊಡ್ಡ ಕುಟುಂಬವಿದೆ. ಅವರನ್ನ ಸಂತೋಷದಿಂದಿಡಲು ನಾನು ಬೇಟೆಯಾಡುತ್ತೇನೆ, ದುಡ್ಡಿಗಾಗಿ ದರೋಡೆ ಮಾಡುತ್ತೇನೆ”

ಇದಕ್ಕೆ ನಾರದರು ಮುಗುಳ್ನಕ್ಕು ಹೇಳ್ತಾರೆ, “ನಿಮ್ಮ ಕುಟುಂಬದ ಯಾವುದೇ ಸದಸ್ಯರೂ ಸಹ ನಿನ್ನ ಪಾಪದಲ್ಲಿ ಪಾಲು ತೆಗದುಕೊಳ್ಳುತ್ತಾರಾ? ಹೋಗಿ ಅವರನ್ನೇ ಕೇಳಿಕೊಂಡು ಬಾ, ನೀನು ಬರುವವರೆಗೂ ನಾನು ಇಲ್ಲೇ ಇರುತ್ತೇನೆ, ನಿನಗೆ ನಂಬಿಕೆಯಿಲ್ಲವಾದರೆ ನನ್ನನ್ನ ಕಟ್ಟಿ ಹಾಕಿ ಹೋಗು”

ರತ್ನಾಕರ ಸರಿ ಎಂದು ನಾರದರನ್ನ ಒಂದು ಮರಕ್ಕೆ ಕಟ್ಟಿಹಾಕಿ ತನ್ನ ಮನೆಗೆ ತೆರಳಿದ. ಮನೆಗೆ ಹೋದ ರತ್ನಾಕರ ಮೊದಲು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪ, ನಮ್ಮ ಕುಟುಂಬದ ಸುಖಕ್ಕಾಗಿ ನಾನು ದೋಚುತ್ತೇನೆ. ಅದು ಪಾಪ ಎಂದು ತೋರುತ್ತಿದೆ, ನೀವೂ ಕೂಡ ಆ ಪಾಪದಲ್ಲಿ ಪಾಲುದಾರರಲ್ಲವೇ?” ಇದಕ್ಕೆ ಆತನ ತಂದೆಯು ಕೋಪಗೊಂಡು, “ನೀನು ಪಾಪಿ, ಈ ಕೆಟ್ಟ ಕೆಲಸಗಳನ್ನು ಮಾಡಬಾರದು, ನಾನು ನಿನ್ನ ಪಾಪಗಳಲ್ಲಿ ಪಾಲುದಾರನೇ? ಸಾಧ್ಯವೇ ಇಲ್ಲ” ಅಂತಾನೆ.

ರತ್ನಾಕರನು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮ, ನೀನು ನನ್ನ ಪಾಪವನ್ನು ಹಂಚಿಕೊಳ್ಳುತ್ತೀಯಾ?” ಆದರೆ ಅವಳೂ ಕೂಡ “ಇಲ್ಲ” ಎಂಬ ಉತ್ತರವನ್ನೇ ಕೊಟ್ಟಳು. ನಂತರ ತನ್ನ ಹೆಂಡತಿಗೆ ಹೋಗಿ ಕೇಳ್ತಾನೆ, “ನಾನು ನಿಮಗೋಸ್ಕರ ನಿಮ್ಮ ಸುಖ ಸಂತೋಷಗಳಿಗಾಗಿ ದುಡಿಯುತ್ತಿದ್ದೇನೆ, ಅದೂ ದರೋಡೆಯ ಮೂಲಕ. ನಾನಿದನ್ನೆಲ್ಲ ಮಾಡುತ್ತಿರೋದು ನಿಮಗೋಸ್ಕರನೆ. ಆದ್ದರಿಂದ ನೀವು ನನ್ನ ಪಾಪದಲ್ಲೂ ಪಾಲುದಾರರಾಗಿದ್ದೀರಿ ಅಲ್ಲವೇ?”

ಅದಕ್ಕೆ ಹೆಂಡತಿ ಹೇಳ್ತಾಳೆ “ನೀವು ಏನು ಹೇಳುತ್ತಿದ್ದೀರ? ನನಗೆ ಗಂಡನಾಗಿ, ಮಕ್ಕಳಿಗೆ ತಂದೆಯಾಗಿ ನಮ್ಮ ಪೂರೈಕೆಗಳನ್ನ ಪೂರೈಸುವುದು ನಿಮ್ಮ ಕರ್ತವ್ಯವೇ ಹೊರತು ನೀವು ಮಾಡುವ ಪಾಪದಲ್ಲಿ ನಾವ್ಯಾಕೆ ಪಾಲುದಾರರಾಗ್ತೀವಿ?”

ರತ್ನಾಕರನಿಗೆ ಆಗ ಅರಿವಾಯಿತು, ತನ್ನ ಎಲ್ಲಾ ಪಾಪಗಳಿಗೂ ತಾನೇ ಜವಾಬ್ದಾರನು ಹೊರತು ತನ್ನ ಪಾಪವನ್ನು ಯಾರೂ ಹಂಚಿಕೊಳ್ಳುವುದಿಲ್ಲ ಎಂ ಅರಿವಾಯಿತು. ತಕ್ಷಣ ನಾರದರ ಬಳಿಗೆ ತೆರಳಿದ ರತ್ನಾಕರ ಮನೆಯಲ್ಲಿ ನಡೆದ ಎಲ್ಲ ವೃತ್ತಾಂತವನ್ನೂ ವಿವರಿಸಿದ. “ಈಗ ನನ್ನಲ್ಲಿ ಏನುಳಿದುದೆ? ನಾನು ಮಾಡಿದ ಎಲ್ಲಾ ಪಾಪಗಳ ಪರಿಹಾರ ನಾ ಹೇಗೆ ಮಾಡಿಕೊಳ್ಳಲಿ? ನೀನೇ ನನಗೆ ದಾರಿ ತೋರಬೇಕು” ಎಂದು ನಾರದರ ಕಾಲಿಗೆ ಬೀಳುತ್ತಾನೆ. ನಾರದರು ಅವನನ್ನು ಸಂತೈಸುತ್ತ ಆತನ ಕಣ್ಣೀರನ್ನ ಒರೆಸಿ “ಭಯಪಡಬೇಡ, ನಿನ್ನ ಪಾಪಗಳನ್ನು ತೊಳೆದುಕೊಳ್ಳುವ ಮಾರ್ಗವನ್ನು ನಾನು ಹೇಳುತ್ತೇನೆ” ಎಂದು ಹೇಳುತ್ತ ಶ್ರೀ ರಾಮನ ಬಗ್ಗೆ ತಿಳಿಸಿದ ನಾರದ ರಾಮ ನಾಮ ಜೊತೆ ಮಾಡುತ್ತ ಕೂರು, ನಾನು ಬರುವವರೆಗೂ ಎಲ್ಲಿಗೂ ಹೋಗದಿರಲು ಸೂಚಿಸಿ ನಾರದರು ಹೊರಟರು.

ರತ್ನಾಕರನು ರಾಮನಾಮ ಪಠಿಸುತ್ತ ತನ್ನ ತಪಸ್ಸಲ್ಲಿ ತಲ್ಲೀನನಾಗಿಬಿಟ್ಟ. ದಿನ ರಾತ್ರಿಗಳೂ ಆತನಿಗೆ ತಿಳಿಯಲಿಲ್ಲ, ತಪಸ್ಸಲ್ಲೇ ಕೇಂದ್ರೀಕೃತವಾಗಿದ್ದ ಆತನ ಸುತ್ತ ಹುತ್ತ ಬೆಳೆಯಲಾರಂಭಿಸಿತ್ತು. ಕೊನೆಗೆ ಒಂದು ದಿನ ಋಷಿ ನಾರದರು ಬಂದು ರತ್ನಾಕರನ ಸುತ್ತ ಬೆಳೆದಿದ್ದ ಹುತ್ತವನ್ನ ತೆಗೆದು ಹಾಕಿದರು. ಆದರೆ ರತ್ನಾಕರನು ಮಾತ್ರ ತನ್ನ ತಪಸ್ಸಿನಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿದ್ದ. ನಾರದರು ರತ್ನಾಕರನ ಕಿವಿಗಳಲ್ಲಿ ರಾಮನ ಹೆಸರನ್ನು ಪಠಿಸಿದರು. ಆಗ ಕಣ್ಣು ತೆರೆದ ರತ್ನಾಕರ ನಾರದರನ್ನ ವಂದಿಸಿದರು.

“ರತ್ನಾಕರ ನೀನೀಗ ಸಂಪೂರ್ಣವಾಗಿ ಬದಲಾಗಿದ್ದೀಯ. ನಿನ್ನ ಪಾಪಗಳು ಪರಿಹಾರವಾಗಿವೆ. ದೇವರು ನಿನ್ನನ್ನ ಆಶೀರ್ವದಿಸಿದ್ದಾನೆ, ದೇವರು ನಿನ್ನ ತಪಸ್ಸಿನಿಂದ ಸಂತುಷ್ಟಗೊಂಡಿದ್ದಾನೆ” ಅಂದರು.

ನಾರದರ ಮಾತುಗಳನ್ನಾಲಿಸಿದ ವಾಲ್ಮೀಕಿಯವರ ಕಣ್ಣಲ್ಲಿ ಆನಂದಬಾಷ್ಪ ಹರಿಯುತ್ತಿತ್ತು. ನಂತರದ ದಿನಗಳಲ್ಲಿ ರಾಮನ ಜೀವನದ ಕುರಿತಾದ ಜೀವನಚರಿತ್ರೆಯನ್ನ ಬರೆದ ವಾಲ್ಮೀಕಿ ಮಹರ್ಷಿಗಳು ‘ಆದಿಕವಿ’ಯೆಂದು ಪ್ರಸಿದ್ಧರಾದರು.

-Vinod Hindu Nationalist

Tags

Related Articles

Close