ಅಂಕಣ

ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಎಂಜಿನಿಯರ್ಸ್ ಡೇ ಆಗಿ ಆಚರಿಸಲು ಕಾರಣವೇನು ಗೊತ್ತಾ?!

ಒಬ್ಬ ಮನುಷ್ಯ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವೇ…. ಹೌದು ಈ ಮನುಷ್ಯನನ್ನು ಕಂಡಾಗ ಹಾಗೆಯೇ ಅನಿಸುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಏನೆಲ್ಲಾ ಸಾಧನೆ ಮಾಡಲು ಸಾಧ್ಯವಿಲ್ಲವೋ ಆ ಎಲ್ಲಾ ಸಾಧನೆಗಳನ್ನು ಈ ಒಬ್ಬ ಮನುಷ್ಯ ಮಾಡಿದ್ದನೆಂದರೆ ಅದನ್ನು ನಂಬಲು ಸಾಧ್ಯವೇ ಇಲ್ಲ ಎಂದೆನಿಸಬಹುದು. ಭಾರತದ ರಿಯಲ್ ಹೀರೋ ಆಗಿರುವ ಈ ವ್ಯಕ್ತಿ ಮಾಡಿರುವ ಸಾಧನೆಗಳನ್ನು ನೋಡಿದಾಗ ಈತ ನಿಜವಾಗಿಯೂ ಮನುಷ್ಯನೋ ದೇವರೋ ಎಂದು ಪ್ರಶ್ನೆ ಮೂಡುವುದು ಸಹಜ.

ಹೌದು ಈ ವ್ಯಕ್ತಿ ಬೇರ್ಯಾರೂ ಅಲ್ಲ.. ಅವರೇ ಸರ್ ಎಂ. ವಿಶ್ವೇಶ್ವರಯ್ಯ!!!

ಸಮಕಾಲೀನ ಭಾರತದ ಇತಿಹಾಸದ ಪ್ರಭಾವಶಾಲಿ ಇಂಜಿನಿಯರ್‍ಗಳ ಪಟ್ಟಿಯನ್ನು ಮಾಡಿದರೆ ಇದರಲ್ಲಿ ಸರ್ ಎಂ .ವಿಶ್ವೇಶ್ವರಯ್ಯ ಅವರ ಹೆಸರು ಈ ಪಟ್ಟಿಯ
ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಸರ್ ಎಂ. ವಿಶ್ವೇಶ್ವರಯ್ಯ ಅವರು ಕರ್ನಾಟಕವನ್ನು (ಹಿಂದಿನ ಮೈಸೂರು ರಾಜ್ಯ) ಮಾತ್ರ
ಅಭಿವೃದ್ಧಿಪಡಿಸಿದ್ದರು ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಇವರ ಎಂಜಿನಿಯರಿಂಗ್ ಕೆಲಸಗಳು ಇಡೀ ದೇಶವೇ ಸ್ಮರಿಸುವಂತಾಗಿದೆ. ತನ್ನ ವೃತ್ತಿಜೀವನದ ಉದ್ದಕ್ಕೂ ಅಂದರೆ ಮೂವತ್ತು ವರ್ಷಗಳ ಕಾಲ ಅವರು ಮಾಡಿದ ಎಂಜಿನಿಯರಿಂಗ್ ಕೆಲಸಗಳು ಇಡೀ ದೇಶವನ್ನು ವ್ಯಾಪಿಸಿದೆ. 20 ವರ್ಷಗಳ ಕಾಲ ಆಡಳಿತಾತ್ಮಕವಾಗಿ ಸೇವೆ ಸಲ್ಲಿಸಿದ ವಿಶ್ವೇಶ್ವರಯ್ಯನವರು ಪ್ರತಿಯೊಂದೂ ಕ್ಷೇತ್ರದಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ದೇಶಕ್ಕೆ ಅಮೋಘ ಕೊಡುಗೆಗಳನ್ನು ನೀಡಿದರು.

ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ 15, 1861 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು. ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು 15 ವರ್ಷದವರಿರುವಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ಅವರ ಪೂರ್ವಜರು ಈಗಿನ ಆಂಧ್ರ ಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ.

ವಿಶ್ವೇಶ್ವರಯ್ಯನವರು ತನ್ನ ಸೇವೆಯ ಮೊದಲ ದಿನದಿಂದಲೇ, ಎಂಜಿನಿಯರಿಂಗ್ ಮತ್ತು ರಾಷ್ಟ್ರ ಕಟ್ಟುವಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. 1884ರಲ್ಲಿ ಇವರು ಪೂನಾ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಆದರೆ ಇಂಜಿನಿಯರ್ ಪದವಿ ಪಡೆಯುವ ಮುಂಚೆಯೇ ಅವರು ಹಲವಾರು ಪದವಿಗಳನ್ನು ಗಳಿಸಿದ್ದರು. ವಿಶ್ವವಿದ್ಯಾಲಯಗಳಲ್ಲಿ ಪದವಿಯನ್ನು ಪಡೆದಿದ್ದರು. ಪರೀಕ್ಷೆಗಳಲ್ಲಿ ಟಾಪರ್ ಆಗಿರುವ ಎಂವಿ ಅವರ ಬುದ್ಧಿಮತ್ತೆ ಅಮೋಘವಾಗಿದೆ. ಇವರ ಬುದ್ಧಿಮತ್ತೆಯನ್ನು ಕಂಡು ಬಾಂಬೆ ಸರಕಾರ ಯಾವುದೇ ಸಂದರ್ಶನವನ್ನು ಮಾಡದೆ ಪಬ್ಲಿಕ್ ವರ್ಕ್ ಇಲಾಖೆಯಲ್ಲಿ ಸಹಾಯ ಇಂಜಿನಿಯರ್ ಆಗಿ ನೇಮಿಸಿತು. ಈ ಕೆಳಗಡೆ ನೀಡಿರುವ ಆಯ್ದ ಭಾಗಗಳು ವಿಶ್ವೇಶ್ವರಯ್ಯನವರ ಆತ್ಮಚರಿತ್ರೆ “ಮೆಮೊರೀಸ್ ಆಫ್ ಮೈ ವರ್ಕಿಂಗ್ ಲೈಫ್”ನ ಮೊದಲ ಪರಿಚ್ಛೇದವಾಗಿದೆ. (ಈ ಲೇಖನದಲ್ಲಿರುವ ಬರಹಗಳು ಭಾಗಗಳು ಕೂಡಾ ಇದೇ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.)

ಸರ್ ಎಂ.ವಿ ವಿಶ್ವೇಶ್ವರಯ್ಯನವರು ಒಂದು ದಶಕದ ಒಳಗಾಗಿ ತನ್ನ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ಸಮರ್ಥ
ಪರಿಹಾರ ನೀಡುವ ಮೂಲಕ ಅತ್ಯಂತ ಸಮರ್ಥ ಎಂಜಿನಿಯರ್ ಎಂಬ ಖ್ಯಾತಿಯನ್ನು ಪಡೆದರು. 1890ರ ದಶಕದ ಮಧ್ಯದಲ್ಲಿ, ಅವರು ಸರ್ಕಾರಿ ಮತ್ತು
ಇಂಜಿನಿಯರ್ ಆಗಿ ಮಾತ್ರ್ರವಲ್ಲದೇ ಜನಸಾಮಾನನದಲ್ಲೂ ಜನಪ್ರಿಯರಾಗಿದ್ದರು. 1895ರಲ್ಲಿ ಅವರು ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದರು.
ಸುಕ್ಕೂರ್‍ನಲ್ಲಿ (ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲ ಸುಕ್ಕೂರು ಅವಿಭಜಿತ ಭಾರತದ ಭಾಗವಾಗಿತ್ತು) ಅವರು ನಡೆಸಿದ ತನ್ನ ಮೊದಲ ಸವಾಲಿನ ಕೆಲಸಕ್ಕಾಗಿ ಎಲ್ಲರಿಂದ ಸಾಕಷ್ಟು ಪ್ರಶಂಸೆಗೊಳಪಟ್ಟರು.

ಯಾವುದೇ ಕಠಿಣ ಸವಾಲುಗಳನ್ನು ಸುಲಭವಾಗಿ ನಿರ್ವಹಿಸುವ ವಿಶ್ವೇಶ್ವರಯ್ಯನವರನ್ನು ಹಲವಾರು ಮಂದಿ ಬೆರಗುಗಣ್ಣಿನಿಂದ ನೋಡಿದ್ದಾರೆ. ಅವರು ಯಾವುದೇ
ಕೆಲಸವನ್ನು ಮಾಡಬೇಕಾದೂ ಒತ್ತಡವಿಲ್ಲದೆ ನಿರಾಳವಾಗಿ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದರು. ಅವರ ಉತ್ಸಾಹ, ಕೆಲಸದ ಬಗ್ಗೆ ಇರುವ ಶ್ರದ್ಧೆ,
ಏಕಾಗ್ರತೆಯಿಂದಾಗಿ ಎಲ್ಲರಿಂದ ಮುಕ್ತಕಂಠದಿಂದ ಶ್ಲಾಘನೆಗೊಳಗಾಗಿದ್ದರು.

ಉದಾಹರಣೆಗೆ, ಜಲಾಶಯದ ನೀರು ಉಕ್ಕಿ ಹರಿಯುವುದರಿಂದ ಅಣೆಕಟ್ಟು ಕಟ್ಟಲು ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆಯನ್ನುಪರಿಹರಿಸಲು, ಅವರು ಸ್ವಯಂಚಾಲಿತ ಸ್ಲೂಯಿಸ್ ಗೇಟ್‍ಗಳನ್ನು ವಿನ್ಯಾಸಗೊಳಿಸಿದರು. ಇದನ್ನು ಮುಂದೆ ಲೇಕ್ ಫೀಫ್ ಆಗಿ ಮರುಬಳಕೆ ಮಾಡಲಾಗುತ್ತಿತ್ತು. ಅದೇ ವಿನ್ಯಾಸವನ್ನು ಟೈಗ್ರಾ ಡ್ಯಾಮ್ ಮತ್ತು ಕೆಆರ್‍ಎಸ್ ಅಣೆಕಟ್ಟುಗೆ ಮರುಬಳಕೆ ಮಾಡಲಾಯಿತು. ಮುಂದಕ್ಕೆ ಅವರು ಈ ವಿನ್ಯಾಸವನ್ನು ಪೇಟೆಂಟ್ ಮಾಡಿಕೊಂಡ ಕಾರಣ ಸಾಕಷ್ಟು ಹಣವೂ ಸಿಗುತ್ತಿತ್ತು. ಈ ಹಣವನ್ನು ತನ್ನ ಸ್ವಂತಕ್ಕಾಗಿ ಬಳಸದೆ ಇದೇ ಹಣದಿಂದ ಸರಕಾರದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಳಸಿದರು.

ವಿಶ್ವೇಶರಯ್ಯನವರು ಮುಂದಿನ 10 ವರ್ಷಗಳಲ್ಲಿ (1895 ಮತ್ತು 1905ರ ನಡುವೆ) ಭಾರತದ ವಿವಿಧ ಭಾಗಗಳಲ್ಲಿ ಮಾಡಿರುವ ಕೆಲಸಗಳು:

– ಹೈದರಾಬಾದ್ ನಗರವನ್ನು ಹೊಸದಾಗಿ ವಿನ್ಯಾಸಗೊಳಿಸಿದರು ಮತ್ತು ಅದರ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಿದರು.

– ಬಾಂಬೆಯಲ್ಲಿ ನೀರಾವರಿ ವ್ಯವಸ್ಥೆಯ್ನು ಕಲ್ಲಿಸಿದರು. ನೆರಹಾವಳಿಯನ್ನು ತಡೆಗಟ್ಟಲು ಪ್ರವಾಹ ತಡೆ ಗೇಟ್ ನಿರ್ಮಿಸಿದರು.

– ಬಿಹಾರ ಮತ್ತು ಒರಿಸ್ಸಾದಲ್ಲಿ ಅವರು ರೈಲ್ವೆ ಸೇತುವೆಗಳನ್ನು ನಿರ್ಮಿಸಿದರು. ಜೊತೆಗೆ ನೀರಿನ ಪೂರೈಕೆ ಯೋಜನೆಗಳನ್ನು ನಿರ್ಮಿಸುವಲ್ಲಿ ಸಫಲರಾದರು.

– ಮೈಸೂರಿನ ಕೆಆರ್‍ಎಸ್ ಅಣೆಕಟ್ಟು ನಿರ್ಮಾಣದ ಮೇಲ್ವಿಚಾರಣೆ ಮಾಡಿದರು. ಇದು ಏಷ್ಯಾದಲ್ಲಿ ಅತಿದೊಡ್ಡ ಅಣೆಕಟ್ಟು ಎಂಬ ಹೆಸರನ್ನು ಪಡೆದಿದೆ.

20ನೇ ಶತಮಾನದ ಮೊದಲ ಎರಡು ದಶಕದ 25 ವರ್ಷಗಳ ಅನುಭವವನ್ನು ನೋಡಿದರೆ ಸರ್ ಎಂ. ವಿಶ್ವೇಶರಯ್ಯನವರು ಪ್ರಪಂಚದ ಅತ್ಯಂತ ನಿಪುಣ
ಇಂಜಿನಿಯರ್ ಎಂದು ಹೆಸರು ಗಳಿಸಿದ್ದಾರೆ. ಪ್ರಪಂಚದ ಹಲಾವರು ಸಂಸ್ಥೆಗಳು ತಮ್ಮಲ್ಲಿ ಸಮಸ್ಯೆಗಳಾದ ಇವರ ಸಲಹೆಯನ್ನು ಪಡೆಯುತ್ತಿದ್ದರು. ಅಲ್ಲದೆ ವಿವಿಧ
ಆಮಿಷಗಳನ್ನು ಒಡ್ಡಿ ತನ್ನ ದೇಶದಲ್ಲಿ ಕೆಲಸ ನಿರ್ವಹಿಸುವಂತೆ ದುಂಬಾಲುಬೀಳುತ್ತಿದ್ದರು. ಆದರೆ ಎಂವಿ ಮಾತ್ರ ಭಾರತದಲ್ಲೇ ಸೇವೆ ಸಲ್ಲಿಸಿ ಅಪ್ಪಟ ದೇಶಭಕ್ತಿಯನ್ನು
ಮೆರೆದರು.

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸರ್. ಎಂ.ವಿ. ಅವರ ಅವಶ್ಯಕತೆಯನ್ನು ಮನಗಂಡ ಅಂದಿನ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರು ವಿಳಂಬ ಮಾಡದೆ, ವೈಯಕ್ತಿಕವಾಗಿ ಸರ್ ಎಮ್ವಿ ಅವರನ್ನು ಭೇಟಿಯಾದರು. ತಮ್ಮ ಸೇವೆ ಮೈಸೂರು ರಾಜ್ಯಕ್ಕೆ ಇದೆ ಎಂದು ಅವರಲ್ಲಿ ಮನವರಿಕೆ ಮಾಡಿಕೊಂಡರು. ಒಡೆಯರ್ ಅವರು 1908ರಲ್ಲಿ `ದಿವಾನ್'(ಪ್ರಧಾನಿ) ಹುದ್ದೆಯನ್ನು ನೀಡಿದರು. ಮೈಸೂರು ರಾಜ್ಯದ ಎಲ್ಲಾ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು.

ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶರಯ್ಯನವರ ಆಡಳಿತದಲ್ಲಿ ಮೈಸೂರು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿತು. ಈ ಅವಧಿಯನ್ನು ಮೈಸೂರಿನ ಪಾಲಿನ
ಸುವರ್ಣಯುಗವೆಂದೇ ಕರೆಯಲಾಗುತ್ತದೆ. ಇವರಷ್ಟು ಅಭಿವೃದ್ಧಿಯನ್ನು ಬೇರೆ ಯಾರಿಗೂ ಮಾಡಲು ಸಾಧ್ಯವೇ ಇಲ್ಲ ಅನ್ನುವ ಮಾತು ಇಂದು ಜನಜನಿತವಾಗಿದೆ.

ಕಬ್ಬು ಬೆಳೆಗಾರರಿಗೆ ದೀರ್ಘಾವಧಿ ಪ್ರಯೋಜನ ಕಲ್ಪಿಸಲು ಕಬ್ಬಿನ ಕಾರ್ಖಾನೆಯನ್ನು ನಿರ್ಮಿಸಿದರು. ಇದರಿಂದ ಮಂಡ್ಯ ಸಕ್ಕರೆ ನಗರ ಎಂದು ಕರೆಯಲ್ಪಟ್ಟಿತ್ತು.
ನೀರಾವರಿ ವ್ಯವಸ್ಥೆಗೆ ಕೆಆರ್‍ಎಸ್ ಅಣೆಕಟ್ಟು ನಿರ್ಮಿಸಿದರು. ಕೈಗಾರಿಕಾ ಕ್ರಾಂತಿ ಕೈಗೊಂಡು ಮೈಸೂರು ಸೋಪ್ ಕಾರ್ಖಾನೆ ನಿರ್ಮಿಸಿದರು. ಭದ್ರಾವತಿ ಐರನ್
ಆಂಡ್ ಓರ್ ಕಂಪನಿ, ಸ್ಟೀಲ್ ಕಾರ್ಖಾನೆ, ಮೈಸೂರು ಲಾಂಪ್ಸ್, ಮೈಸೂರು ಕೆಮಿಕಲ್ಸ್, ಮೈಸೂರು ಪೈಂಟ್ಸ್, ಶಿಕ್ಷಣಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯ,
ಬ್ಯಾಂಕಿಂಗ್‍ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಾಣಿಜ್ಯಕ್ಕಾಗಿ ಮೈಸೂರು ಛೇಂಬರ್ ಆಫ್ ಕಾಮರ್ಸ್, ವಾಯುಯಾನ (ಎಚ್‍ಎಎಲ್) ಮತ್ತು ಉಕ್ಕಿನ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಿದರು. ಇವರ ಕೆಲಸವನ್ನು ಮಹತ್ಮಾಗಾಂಧಿಯೂ ಕೊಂಡಾಡಿದ್ದರು.

ಸರ್ ಎಂ. ವಿಶ್ವೇಶರಯ್ಯನವರು ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಸೇವೆಗಳಿಂದ ನಿವೃತ್ತಿಯ ಬಳಿಕವೂ ಹಲವಾರು ರಾಷ್ಟ್ರೀಯ ಸಮಿತಿಗಳಲ್ಲಿ ಮತ್ತು ಸಲಹಾ ಮಂಡಳಿಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದರು. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಪಾತ್ರವನ್ನು ಅವರು ಪದೇ ಪದೇ ಒತ್ತು ನೀಡಿದ್ದರು. ನಿವೃತ್ತಿಯ ಬಳಿಕವೂ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಭಾರತ ಸರ್ಕಾರವು ಅವರ ಸಮರ್ಪಣೆ ಮತ್ತು ಎಂಜಿನಿಯರಿಂಗ್ ಕಡೆಗೆ ನೀಡಿದ ವಿಶೇಷ ಕೊಡುಗೆಗಳನ್ನು ಗುರುತಿಸಿ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು.

ಸರ್ ಎಂ.ವಿ. ತನ್ನ ಇಡೀ ಜೀವನವನ್ನು ರಾಷ್ಟ್ರದ ಅಭಿವೃದ್ಧಿಯ ಕಡೆಗೆ ಸಮರ್ಪಿಸಿಕೊಂಡಿದ್ದರು. ತನ್ನ ಜೀವನದುದ್ದಕ್ಕೂ ಆದರ್ಶ ಎಂಜಿನಿಯರ್ ಎಂಬ ಹೆಸರನ್ನು
ಗಳಿಸಿದರು. ಅವರು ಹುಟ್ಟಿದ ದಿನವನ್ನು ಎಲ್ಲ ಗುಣಗಳನ್ನು ಸಮಗ್ರವಾಗಿ ನಿರೂಪಿಸಿದ. ಆದ್ದರಿಂದ ಅವರ ಹುಟ್ಟುಹಬ್ಬವನ್ನು `ಇಂಜಿನಿಯರ್ದಿನಾಚರಣೆ’ಯನ್ನಾಗಿ
ಆಚರಿಸಲಾಗುತ್ತದೆ.

-ಚೇಕಿತಾನ

Tags

Related Articles

Close