ಅಂಕಣ

ಸ್ವತಂತ್ರ ಭಾರತದ ಪೋಷಣೆ ಮಾಡಬೇಕಾದವರು ಇಂದು ಆರೆಸ್ಸೆಸ್ ದೂಷಣೆ ಮಾಡುತ್ತಿರುವುದು ಎಷ್ಟು ಸರಿ?

ಗಾಂಧಿ ನೇತೃತ್ವದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದ್ದ Quit India ಚಳುವಳಿಗೆ ಇಂದು ಅಂದರೆ ಆಗಷ್ಟ್ 8 ಕ್ಕೆ ಬರೋಬ್ಬರಿ 75 ವರ್ಷಗಳು ತುಂಬಿವೆ.

ಸ್ವಾತಂತ್ರ್ಯವೇನೋ ಸಿಕ್ಕಿತು ಆದರೆ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಎಷ್ಟು ಹುತಾತ್ಮರು ನಮ್ಮ ನೆನಪಲ್ಲಿದಾರೆ? ಎಷ್ಟು ಜನ ಕ್ರಾಂತಿಕಾರಿಗಳ ಬಗ್ಗೆ ನಾವು ಪಠ್ಯಪುಸ್ತಗಳಲ್ಲಿ ಓದುತ್ತಿದ್ದೇವೆ? ಸ್ವಾತಂತ್ರ್ಯ ಹೋರಾಟದ ಬಗ್ಗೆಯಾಗಲಿ, ದೇಶಕ್ಕಾಗಿ ಪ್ರಾಣತೆತ್ತ ಆರೂವರೆ ಲಕ್ಷ ಜನ ಕ್ರಾಂತಿಕಾರಿಗಳ ಬಗ್ಗೆ
ನಮ್ಮ ಈಗಿನ ಪೀಳಿಗೆಗೆ ಎಷ್ಟು ಗೊತ್ತು?

ಗೊತ್ತಿರಲ್ಲ, ಯಾಕಂದ್ರೆ ಅವರ ಹೆಸರುಗಳನ್ನು ಅವರ ವ್ಯಕ್ತಿತ್ವವನ್ನ ಅವರ ಆದರ್ಶಗಳನ್ನ ಅವರ ಸಿದ್ಧಾಂತಗಳನ್ನು ನಮ್ಮ ಮಕ್ಕಳಿಗೆ ಇಂದು ತಿಳಿಸಿದರೆ ಎಲ್ಲಿ ತಮ್ಮ ಸೆಕ್ಯೂಲರಿಸಮ್ಮಿಗೆ ಧಕ್ಕೆ ಬರುತ್ತೋ, ಎಲ್ಲಿ ತಮಗೆ ಬರಬೇಕಾದ ಅಲ್ಪಸಂಖ್ಯಾತ ಮತಗಳು ಬೇರೆ ಪಕ್ಷಗಳ ಪಾಲಾಗಿ ಬಿಡುತ್ತವೆಯೋ ಅನ್ನೋ ಭಯದಿಂದ ಹಾಗು ರಾಜಕೀಯ ಪಕ್ಷಗಳ ತುಷ್ಟೀಕರಣದ ನೀತಿಯಿಂದ ಇಂದಿನ ನಮ್ಮ ಜನರೇಷನ್ ವಂಚಿತವಾಗಿದೆ.

ವಂಚಿತವಾದರೂ ಪರವಾಗಿಲ್ಲ ಆದರೆ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರ ಬಗ್ಗೆಯೂ ಇಂದು ವಿಷ ತುಂಬಿಕೊಳ್ಳುವಂತೆ ಮಾಡಿರುವ ಕಾಂಗ್ರೆಸ್, ಕಮ್ಯೂನಿಸ್ಟರು, ತಥಾಕಥಿತ ವಿಚಾರವಾದಿಗಳು, ಸೆಕ್ಯೂಲರ್’ಗಳು, ಪ್ರಗತಿಪರರಿಂದ ಈಗಿನ ನಮ್ಮ ಪೀಳಿಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಇಲ್ಲವಾದರೆ ಸುಳ್ಳು ಗೊಳ್ಳು ಇತಿಹಾಸವನ್ನೋದಿ ನಮ್ಮ ದೇಶವನ್ನೇ ಬಲಿ ತೆಗೆದುಕೊಳ್ಳುವತ್ತ ನಮ್ಮ ಸಮಾಜ ಸಾಗುವ ಸಮಯ ದೂರವಿರಲ್ಲ.

1942 ರಲ್ಲಿ ಗಾಂಧಿಜೀ ಕರೆ ಕೊಟ್ಟ ಕ್ವಿಟ್ ಇಂಡಿಯಾ ಚಳುವಳಿಗೆ ಇಂದು ಬರೋಬ್ಬರಿ 75 ವರ್ಷಗಳು ಸಂದಿವೆ. ಆದರೆ ಈ ಕ್ವಿಟ್ ಇಂಡಿಯಾ ಚಳುವಳಿ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ಜನಗಳಿಗೆ ತಿಳಿಸಿ ಅವರಲ್ಲೂ ದೇಶಭಕ್ತಿ ಇಮ್ಮಡಿಗೊಳಿಸುವುದನ್ನ ಬಿಟ್ಟು ನಮ್ಮ ರಾಜಕಾರಣಿಗಳು, ತಥಾಕಥಿತ ಬುದ್ಧಿಜೀವಿಗಳು, ಕಮ್ಯೂನಿಸ್ಟ್ಮರು ಮಾತ್ರ ಆರೆಸ್ಸೆಸ್ ಎಂಬ ದೇಶಭಕ್ತ ಸಂಘಟನೆ, ವೀರ ಸಾವರ್ಕರ್ ಎಂಬ ಅಪ್ರತಿಮ ದೇಶಭಕ್ತನ ತೇಜೋವದೆಗೆ ಮುಗಿಬಿದ್ದಿರುವುದು ಮಾತ್ರ ನಮ್ಮ ದುರಾದೃಷ್ಟವೇ ಸರಿ.

“1942 ರ ಕ್ವಿಟ್ ಇಂಡಿಯಾ ಮೂವಮೆಂಟಿನಲ್ಲಿ ಆರೆಸ್ಸೆಸ್ ಭಾಗವಹಿಸಿರಲಿಲ್ಲ, ಆರೆಸ್ಸೆಸ್ ಬ್ರಿಟಿಷರ ಪರವಾಗಿ ಬ್ಯಾಟಿಂಗ್ ಮಾಡಿತ್ತು, ಸಾವರ್ಕರ್ ಒಬ್ಬ ದೇಶದ್ರೋಹಿ” ಅಂತೆಲ್ಲಾ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆದರೆ ಆ ಸುದ್ದಿಗಳೆಲ್ಲಾ ನಿಜವಾ?

ಅದು ನಿಜವಾ ಸುಳ್ಳಾ ತಿಳಿಯೋಣ ಬನ್ನಿ

ಆರೆಸ್ಸೆಸ್ ದೇಶಭಕ್ತ ಸಂಘಟನೆಯೋ ಅಥವ ದೇಶವಿರೋಧಿ ಸಂಘಟನೆ ಎಂಬುದನ್ನು ತಿಳಿಯಲು ಮೊದಲು ಆರೆಸ್ಸೆಸ್ ಹುಟ್ಟು ಹೇಗಾಯಿತು ಅನ್ನೋದನ್ನ ನಾವು ತಿಳಿಯಲೇ ಬೇಕು

ಸಂಘದ ಸ್ಥಾಪನೆಯಾದದ್ದು ವಿಜಯದಶಮಿಯ ಸೆಪ್ಟೆಂಬರ್ 27 1925 ರಂದು ಮತ್ತು ಸ್ಥಾಪನೆ ಮಾಡಿದವರು ಡಾ.ಕೇಶವ ಬಲಿರಾಮ್ ಹೆಡಗೆವಾರರು.

ಆರೆಸ್ಸೆಸ್ ಸ್ಥಾಪಕ ಡಾ.ಹೆಡಗೆವಾರರು ಹುಟ್ಟು ದೇಶಭಕ್ತರು. ಹೆಡಗೆವಾರರು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಇಂಗ್ಲೆಂಡಿನ ರಾಣಿಯ 60ನೆ ವರ್ಷದ ಪಟ್ಟಾಭಿಷೇಕದ ಅಂಗವಾಗಿ ಶಾಲೆಯಲ್ಲಿ ಆಚರಿಸಿ ನೀಡಲಾಗಿದ್ದ ಸ್ವೀಟನ್ನ ನಿರಾಕರಿಸಿದ್ದರು.

ಇದನ್ನ ತನ್ನ ಅಣ್ಣ ಪ್ರಶ್ನಿಸಿದ್ದಕ್ಕೆ ಹೆಡಗೆವಾರರು ಕೊಟ್ಟ ಉತ್ತರವೇನು ಗೊತ್ತಾ? “ನಮ್ಮ ಭೋಂಸಲಾ ರಾಜವಂಶವನ್ನ ಕೊನೆಗೊಳಿಸಿದ ಈ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಆಚರಣೆಯಲ್ಲಿ ನಾನು ಭಾಗವಹಿಸಿ ಸ್ವೀಟ್ ತಿನ್ನೋದಾ?” ಅಂತ ಹೇಳಿದ್ದರಂತೆ

ಹೀಗೆ ಹುಟ್ಟು ದೇಶಭಕ್ತರಾಗಿದ್ದ ಹೆಡಗೆವಾರರ ಕಣಕಣದಲ್ಲೂ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿ ಉರಿಯುತ್ತಿತ್ತು.

ಒಮ್ಮೆ ಶಾಲೆಯಲ್ಲಿ ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಪರಿಶೀಲನೆ(Inspection)ಗೆ ಬಂದ ಸಂದರ್ಭದಲ್ಲಿ “ವಂದೇ ಮಾತರಂ” ಕೂಗಿದ್ದಕ್ಕೆ ಶಾಲೆಯಿಂದಲೇ ಹಾಕಲ್ಪಟ್ಟಿದ್ದರು ಹೆಡಗೆವಾರರು. ನಂತರ ಕ್ಷಮೆ ಕೊರಳು ಶಾಲಾ ಸಿಬ್ಬಂದಿಗಳು ಒತ್ತಾಯಿಸಿದರೂ ಪಟ್ಟುಬಿಟ್ಟಿರಲಿಲ್ಲ.

ಇದಾದ ನಂತರ ಕಲ್ಕತ್ತಾದಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮಾಡುತ್ತಿರುವಾಗ ಅಲ್ಲಿನ ಕ್ರಾಂತಿಕಾರಿ ಹೋರಾಟಗಾರರ ಸಂಘ ಬೆಳೆಸಿದ್ದ ಹೆಡಗೆವಾರರು ತಮ್ಮ 18 ನೆಯ ವಯಸ್ಸಿನಲ್ಲಿ ಅಂದರೆ 1907 ರಲ್ಲಿ ಸ್ಥಳೀಯ ಪೋಲಿಸ್ ಸ್ಟೇಷನ್ನಿನ ಮೇಲೆ ಬಾಂಬ್ ಕೂಡ ಎಸೆದಿದ್ದರು.

ಹೀಗೆ ತಮ್ಮ ಜೊತೆಗೆ ಆತ್ಮೀಯ ಒಡನಾಟವಿದ್ದ “ಅನುಶೀಲನ್ ಸಮಿತಿ”ಯ ಸದಸ್ಯರಾಗಿದ್ದ ಹಾಗು ತಮ್ಮ ಮಿತ್ರರಾದ ರಾಮಲಾಲ್ ವಾಜಪೇಯಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೆಡಗೆವಾರರ ಕುರಿತಾಗಿ ಹೀಗೆ ಬರೆದಿದ್ದಾರೆ

“ಶ್ರೀ ದಾಜಿದಾಹೇಬ್ ಬುಟಿ ರವರಿಂದ ಹಣಕಾಸಿನ ಸಹಾಯ ಪಡೆದು ಆರೆಸ್ಸೆಸ್ಸಿನ ಸ್ಥಾಪಕರಾದ ಶ್ರೀ ಕೇಶವ ಬಲಿರಾಮ ಹೆಡಗೆವಾರರು ಕಲ್ಕತ್ತಾಗೆ ಹೋಗಿ ಅಲ್ಲಿ ಶ್ರೀ ಪುಲಿನ್ ಬಿಹಾರಿ ದಾಸರವರ ಉಸ್ತುವಾರಿಯಲ್ಲಿ ಕ್ರಾಂತಿಕಾರಿ ತರಬೇತಿ ಪಡೆದು ಬಂದಿದ್ದರು”

ಯುವ ಕೇಶವ ಹೆಡಗೆವಾರರು ನಂತರದ ದಿನಗಳಲ್ಲಿ ಅನುಶೀಲನ್ ಸಮಿತಿಗೆ ಪರಿಚಯಿಸಲ್ಪಟ್ಟು ಅದರ ಆಂತರಿಕ ಸದಸ್ಯರಾಗಿಯೇ ಬಿಟ್ಟರು.

ತಮ್ಮ ವಿದ್ಯಾಭ್ಯಾಸದ ನಂತರ 1917 ರಲ್ಲಿ ನಾಗಪುರಕ್ಕೆ ಹಿಂತಿರುಗಿದ ಹೆಡಗೆವಾರರು ಮಧ್ಯಭಾರತದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಭಾವುಜಿ ಕಾವರೆ ಹಾಗು ಅಪ್ಪಾಜೀ ಜೋಶಿಯವರ ಜೊತೆಗೂಡುತ್ತಾರೆ.

ಬಾಲಗಂಗಾಧರನಾಥ ತಿಲಕರ ನಿಧನರಾದರು ನಂತರ ಕ್ರಾಂತಿಕಾರಿ ಚಳುವಳಿಯ ಕಾವು ನಿಧಾನವಾಗಿ ತಣ್ಣಗಾಗುತ್ತಿದೆ ಎಂದರಿತ ಹೆಡಗೆವಾರರು ಸ್ವಾತಂತ್ರ್ಯ ಚಳುವಳಿಗಾಗಿ ಆಯ್ದುಕೊಂಡ ಪಕ್ಷ ಕಾಂಗ್ರೆಸ್, ಕಾಂಗ್ರೆಸ್ಸಿಗೆ ಅದಾಗಲೇ ಆಫ್ರಿಕಾದಿಂದ ಮರಳಿದ್ದ ಗಾಂಧಿಯವರು ಕೂಡ ಸೇರ್ಪಡೆಯಾಗಿ ಒಂದು ರೀತಿಯ ಚಳುವಳಿಯನ್ನು(ಅಹಿಂಸಾತ್ಮಕ) ಆರಂಭಿಸಿದ್ದರು & ಇದು ಜನರ ಮನಸ್ಸನ್ನ ಆಕರ್ಷಿಸಿತ್ತು.

ಕಾಂಗ್ರೆಸ್ಸಿನ ಜೊತೆ ಜೊತೆಗೆ ಹೆಡಗೆವಾರರು ನಾಗಪುರದ ತಮ್ಮ ಕೆಲ ಸ್ನೇಹಿತರ ಜೊತೆಗೂಡಿ ನಾಗಪುರ ನ್ಯಾಶನಲ್ ಯೂನಿಯನ್ ಕೂಡ ಶುರು ಮಾಡಿದ್ದರು.
ನಂತರ 1920 ರಲ್ಲಿ ಕಾಂಗ್ರೆಸ್ಸಿನ AICC ಸೆಷನ್ ಶುರುವಾದಾಗ ಕಾಂಗ್ರೆಸ್ಸಿನ ಸ್ವಯಂಸೇವಕರ ಮುಂದಾಳತ್ವವನ್ನ ಹೆಡಗೆವಾರರು ಮುನ್ನಡೆಸಿದ್ದರು.

ಇದೇ ಸಂದರ್ಭದಲ್ಲಿ “Complete Independence as its sole objective” ಎಂಬ ಪ್ರಸ್ತಾವನೆಯನ್ನ ಕಾಂಗ್ರೆಸ್ಸಿನ ಸಮಿತಿಗೆ ಹೆಡಗೆವಾರರ ನಾಗಪುರ ನ್ಯಾಶನಲ್ ಯೂನಿಯನ್ ನೀಡಿತ್ತು.

ಹೆಡಗೆವಾರರ ಈ ಪ್ರಸ್ತಾವನೆಯಲ್ಲಿ ಕಾಂಗ್ರೆಸ್ ಭಾರತವನ್ನ ಸಾಮ್ರಾಜ್ಯಶಾಹಿಗಳಾದ ಬ್ರಿಟಿಷರಿಂದ ಮುಕ್ತಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.

ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಕಾಂಗ್ರೆಸ್ ಸನ್ 1885 ರಲ್ಲಿ ಸ್ಥಾಪನೆಯಾಗಿದ್ದರೂ ಕೂಡ ಅದು ಸ್ವಾತಂತ್ರ್ಯ ಚಳುವಳಿಗೆ ಅಧಿಕೃತ ಕರೆ(ಪೂರ್ಣ ಸ್ವರಾಜ್ಯ) ಕೊಟ್ಟಿದ್ದು ಮಾತ್ರ 44 ವರ್ಷಗಳ ನಂತರ, ಅಂದರೆ 1929 ರಂದು.

ಕಾಂಗ್ರೆಸ್ ಸ್ಥಾಪನೆಯಾದ ಮೊದಲ ವರ್ಷಗಳಲ್ಲಿ ಅಂದರೆ 1880 ರಿಂದ 1890 ರ ವರೆಗೂ ಕಾಂಗ್ರೆಸ್ಸಿನ ನಾಯಕರು ಮಾತ್ರ ಬ್ರಿಟಿಷರು ನಮ್ಮ ದೇಶವನ್ನಾಳುತ್ತಿರುವುದು ಹೆಮ್ಮೆಯ ವಿಷಯ & ನಮ್ಮ ದೇಶದ ಸೌಭಾಗ್ಯ ಅಂತಲೇ ಹೇಳಿಕೊಂಡು ಓಡಾಡುತ್ತಿದ್ದರು.

ಕಾಂಗ್ರೆಸ್ ಪಕ್ಷ ಬಲವರ್ಧನೆಗೊಂಡು ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತಲು ಕನಿಷ್ಠ 20 ವರ್ಷಗಳೇ ಬೇಕಾಯಿತು.

1920 ರ ದಶಕದಿಂದ 1929 ರ ತನಕ ಬ್ರಿಟಿಷರಿಗೆ ಕಾಂಗ್ರೆಸ್ ಒತ್ತಾಯಿಸಿದ್ದು ಭಾರತಕ್ಕೆ ‘ಡೊಮಿನಿಯನ್ ಪ್ರಾಶಸ್ತ್ಯ’ ಕೊಡಿ ಎಂಬ ಒತ್ತಾಯವಾಗಿತ್ತು.

ಡೊಮಿನಿಯನ್ ಸ್ಟೇಟಸ್ ಅಂದರೆ ಅಧಿಕಾರ ಮಾತ್ರ ದೇಶದ ಕೈಯಲ್ಲಿರುತ್ತದೆ ಆದರೆ ಸಂವಿಧಾನ ಮಾತ್ರ ಆಯಾ ದೇಶವನ್ನಾಳುವವರ ಕೈಯಲ್ಲಿರುತ್ತದೆ.(ಇದರರ್ಥ ದೇಶದ ಸಂವಿಧಾನ ನೀವು ನಡೆಸಿ ಆದರೆ ಅಧಿಕಾರ ನಿಮ್ಮಿಂದ ನಮಗೆ ವರ್ಗಾಯಿಸಿ ಅನ್ನೋದು ಕಾಂಗ್ರೆಸ್ಸಿನ ವಾದವಾಗಿತ್ತು)

ಕಾಂಗ್ರೆಸ್ ಪೂರ್ಣ ಸ್ವರಾಜ್ಯ(ಸನ್ 1929) ಘೋಷಿಸುವ ಹತ್ತು ವರ್ಷಗಳ ಹಿಂದೆಯೇ ಹೆಡಗೆವಾರರು ಕಾಂಗ್ರೆಸ್ಸಿಗೆ ಒತ್ತಾಯಿಸಿದ್ದರು.
ಆದರೆ ಹೆಡಗೆವಾರರ ಪ್ರಸ್ತಾವನೆಯನ್ನ AICC ತಿರಸ್ಕರಿಸಿತ್ತು.

ನಂತರ 1921 ರಲ್ಲಿ ಗಾಂಧಿಯವರು ಕೈಗೊಂಡ ಅಸಹಕಾರ ಚಳುವಳಿಯಲ್ಲಿ ಡಾ.ಹೆಡಗೆವಾರರು ತಮ್ಮ ಸ್ನೇಹಿತರೊಂದಿಗೆ ಸಕ್ರಿಯವಾಗಿಯೇ ಪಾಲ್ಗೊಂಡು 1 ವರ್ಷ ಜೈಲುಪಾಲಾಗಿದ್ದರೂ ಕೂಡ.

ಜೈಲು ಪಾಲಾಗಿದ್ದ ಹೆಡಗೆವಾರರ ವಿರುದ್ಧ ಬ್ರಿಟಿಷ್ ನ್ಯಾಯಾಧೀಶ ಸ್ಮೆಲ್ಲಿ ನೀಡಿದ್ದ ತೀರ್ಪಿನಲ್ಲಿ ಹೇಳಿದ್ದೇನು ಗೊತ್ತಾ?

“ಹೆಡಗೆವಾರರು ಮೊದಲು ಮಾಡಿದ್ದ ಭಾಷಣಕ್ಕಿಂತ ಈಗ ಅವರು ಮಾಡುತ್ತಿರುವ ಕೆಲಸ ಅವರು ಮೊದಲು ಮಾಡಿದ್ದ ಕೆಲಸಕ್ಕಿಂತ ದೊಡ್ಡ ದೇಶದ್ರೋಹ”

ತಾಯ್ನಾಡನ್ನು ವಿದೇಶಿ ಶಕ್ತಿಗಳಿಂದ ಮುಕ್ತಗೊಳಿಸಬೇಕು ಅಂತ ಆಗ ತಾನೆ ಸ್ಥಾಪಿತವಾದ ಆರೆಸ್ಸೆಸ್ ಪಣ ತೊಟ್ಟಿತ್ತು.

ಹಾಗಂತ ಅವರೇನು ಗಾಂಧಿಯವರ ಚಳುವಳಿಯಿಂದ ದೂರವೇನೂ ಉಳಿಯಲಿಲ್ಲ,
ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಅಥವ ದಂಡಿ ಸತ್ಯಾಗ್ರಹವನ್ನ ಏಪ್ರಿಲ್ 6, 1930 ರಲ್ಲಿ ಶುರು ಮಾಡಿದ್ದ ಸಂದರ್ಭದಲ್ಲಿ ಅವರ ಜೊತೆ ಹೆಡಗೆವಾರರು ಕೈ ಜೋಡಿಸಿದರು.

ಇದರ ನಂತರ ಹೆಡಗೆವಾರರು ಸರ್ವಾನುಮತದಿಂದ ಆರೆಸ್ಸೆಸಿಸ್ಸಿನ ಸರಸಂಘಚಾಲಕರಾದರು.

ಹೆಡಗೆವಾರರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದ ಕಾರಣ ಆರೆಸ್ಸೆಸ್ಸಿನ ಜವಾಬ್ದಾರಿಯನ್ನು ಅವರು ಡಾ.ಎಲ್.ವಿ.ಪರಂಜಪೆಯವರಿಗೆ ವಹಿಸಿದ್ದರು. ಆಗ ಆರೆಸ್ಸೆಸ್ ಇನ್ನೂ ಒಂದು ದೊಡ್ಸಡಂಘಟನೆಯಾಗಿರಲಿಲ್ಲ ಅದು ಅಂಬೆಗಾಲಿಡುವ ಕೂಸಾಗಿತ್ತು.

ಆಗಿನ್ನು ಆರೆಸ್ಸೆಸ್ಸಿನಲ್ಲಿ ಕೆಲವೇ ಕೆಲವು ಶಾಖೆಗಳು ಹಾಗು ಕೇವಲ 10-15 ಸ್ವಯಂಸೇವಕರಷ್ಟೇ ಇದ್ದರು.

ಜಂಗಲ್ ಸತ್ಯಾಗ್ರಹದಲ್ಲಿ 9 ತಿಂಗಳ ಕಾರಾಗೃಹವಾಸ ಅನುಭವಿಸಿದ್ದಾರೆ ಕಾರಣ ಸಂಘವನ್ನು ಬಲಪಡಿಸಲು ಹೆಡಗೆವಾರರಿಗೆ ಆಗಿರಲಿಲ್ಲ.

ಮಧ್ಯ ಪ್ರಾಂತ್ಯದಲ್ಲಿನ ಅರಣ್ಯ ಕಾಯ್ದೆಯನ್ನ ಉಲ್ಲಂಘಿಸಿ ಬ್ರಿಟಿಷರನ್ನು ಕಡುವಾಗಿ ವಿರೋಧಿಸಲಾಯಿತು.

ಹೆಡಗೆವಾರರ ನೇತೃತ್ವದಲ್ಲಿ ಆರೆಸ್ಸೆಸ್ ಹಾಗು ಕಾಂಗ್ರೆಸ್ಸಿನ ಕಾರ್ಯಕರ್ತರ ಒಂದು ತಂಡ ನಾಗಪುರದಿಂದ ಸುಮಾರು 150 ಕಿಲೋಮೀಟರ್ ದೂರದ ಯವತ್ಮಾಲ್ ಅರಣ್ಯಕ್ಕೆ ಹೊರಟರು. ಮಾರ್ಗ ಮಧ್ಯೆ ಪುಸಾದ್ ಎಂಬಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸ್ವಾತಂತ್ರ್ಯದ ಕುರಿತಾಗಿ ಹೆಡಗೆವಾರರು ಈ ರೀತಿ ಭಾಷಣ ಮಾಡಿದ್ದರು.

“ನಾವು ಭಾರತೀಯರು ಬ್ರಿಟಿಷರ ಬೂಟು ಪಾಲಿಶ್ ಮಾಡುವುದಕ್ಕೆ ಇರುವವರಲ್ಲ ಬದಲಾಗಿ ಅವರ ಬೂಟುಗಳಿಂದಲೇ ಅವರ ತಲೆ ಮೇಲೆ ಹೊಡೆದು ಅವರನ್ನ ದೇಶದಿಂದ ಹೊರದಬ್ಬಬೇಕು”

ಇದೇ ಕಾರಣಕ್ಕಾಗಿ ಅಂದರೆ ‘ಜಂಗಲ್ ಸತ್ಯಾಗ್ರಹ’ದ ಕಾರಣವೇ ಅವರಿಗೆ 9 ತಿಂಗಳು ಕಾರಾಗೃಹವಾಸವಾಗಿ ಅಕೋಲಾ ಜೈಲು ಪಾಲಾಗಬೇಕಾಯಿತು.

ಡಿಸೆಂಬರ್ 31, 1929 ರಂದು ಲಾಹೋರಿನ ರಾವಿ ನದಿಯ ತಟದಲ್ಲಿ ಕಾಂಗ್ರೆಸ್ ಒಂದು ಐತಿಹಾಸಿಕ ನಿರ್ಣಯ ಕೈಗೊಂಡಿತ್ತು. ಅದೇ ‘ಪೂರ್ಣ ಸ್ವರಾಜ್ಯ’ ಎಂಬ ಸಂಕಲ್ಪ ಹಾಗು ಜನೇವರಿ 26, 1930 ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು.

ಇದೇ ವಿಷಯನ್ನ ಡಾ.ಹೆಡಗೆವಾರರು ಹತ್ತು ವರ್ಷಗಳ ಮುಂಚೆಯೆ ಕಾಂಗ್ರೆಸ್ಸಿಗೆ ಮಾಡಲು ಸೂಚಿಸಿದ್ದರು ಎಂಬುದು ಗಮನಾರ್ಹ. ತಡವಾದರೂ ಕಾಂಗ್ರೆಸ್ ಒಳ್ಳೆಯ ನಿರ್ಧಾರ ಕೈಗೊಂಡಿತು ಅಂತ ಹೆಡಗೆವಾರರು ಸಂತಸಗೊಂಡಿದ್ದರು ಹಾಗು ಆರೆಸ್ಸೆಸ್ಸಿನ ಎಲ್ಲ ಶಾಖೆಗಳ ಮೇಲೂ ರಾಷ್ಟ್ರಧ್ವಜ ಹಾರಿಸಿ ದೇಶ ಸ್ವಾತಂತ್ರ್ಯವಾಗಿದೆ ಎಂಬ ಸ್ಪಷ್ಟ ಸಂದೇಶ ಬ್ರಿಟಿಷರಿಗೆ ನೀಡಲು ಸಂಘದ ಸ್ವಯಂಸೇವಕರಿಗೆ ಸೂಚನೆ ನೀಡಲಾಗಿತ್ತು.

1928 ರ ವರೆಗೆ ಸಂಘದ 18 ಶಾಖೆಗಳು ನಾಗಪುರ ಹಾಗು ವಾರ್ಧಾಗೆ ಮಾತ್ರ ಸೀಮಿತವಾಗಿತ್ತು.

ನಂತರ ಬಲವರ್ಧನೆಗೊಂಡ ಅರೆಸ್ಸೆಸ್ 37 ಶಾಖೆಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿ ಜನೇವರಿ 26, 1930 ಕ್ಕೆ ಕಾಂಗ್ರೆಸ್ ಮಾಡಲು ಉದ್ದೇಶಿಸಿದ್ದ ‘ಪೂರ್ಣ ಸ್ವರಾಜ್ಯ’ ಆಂದೋಲನಕ್ಕೆ ಆರೆಸ್ಸೆಸ್ ಸಂಪೂರ್ಣ ಬೆಂಬಲ ಸೂಚಿಸಿ ತಮ್ಮ ಸ್ವಯಂಸೇವಕರನ್ನು ಉದ್ದೇಶಿಸಿ ಹೀಗೆ ಹೇಳಿತ್ತು

“ಈ ವರ್ಷ ಸಂಘದ ಆಶಯದ ಪ್ರಕಾರ ಕಾಂಗ್ರೆಸ್ ಪ್ರಸ್ತಾಪಿಸಿದ ಪೂರ್ಣ ಸ್ವರಾಜ್ಯವನ್ನ ನಾವೆಲ್ಲ ಬೆಂಬಲಿಸೋಣ, ಈ ಕಾರ್ಯವನ್ನ ಯಾವ ಸಂಘಟನೆ ಮಾಡಿದರು ಅದಕ್ಕೆ ನಾವು ಬೇಷರತ್ ಬೆಂಬಲ ನೀಡೋಣ & ಜನೇವರಿ 26, 1930 ರ ಸಾಯಂಕಾಲ 6 ಗಂಟೆಗೆ ತಮ್ಮ ತಮ್ಮ ಶಾಖೆಗಳಲ್ಲಿ ಒಟ್ಟಾಗಿ ಸೇರಿ ಭಗವಾ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ನಮಗ್ಯಾಕೆ ಮುಖ್ಯ ಅನ್ನೋದನ್ನ ಪ್ರತಿಯೊಬ್ಬ ಭಾರತೀಯನಿಗೂ ತಿಳಿಸೋಣ ಹಾಗು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಸಂಘದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು”

ಇದರ ನಂತರ ಪುಣೆಯ ‘ಕೇಸರಿ’ ಪತ್ರಿಕೆ, ನಾಗಪುರದ ‘ಮಹಾರಾಷ್ಟ್ರ’ ಪತ್ರಿಕೆ, ‘ದಿ ಹಿತವಾದ’ ಪತ್ರಿಕೆಗಳಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಲೇಖನಗಳು, ಸಾಮಪಾದಕೀಯಗಳು ಪ್ರಕಟಗೊಂಡವು, ಗುಪ್ತಚರ ಇಲಾಖೆಯಿಂದ ಸರ್ಕಾರಿ ನೌಕರರು ಆರೆಸ್ಸೆಸ್ ನಲ್ಲಿದ್ದಾರೆ ಅಂತ ಮಾಹಿತಿ ಪಡೆದುಕೊಂಡ ಬ್ರಿಟಿಷರು ಕೆಂಡಾಮಂಡವಾದ ಬ್ರಿಟಿಷರು ಮಧ್ಯ ಪ್ರಾಂತ್ಯದ ಸರ್ಕಾರಿ ಹಾಗು ಸ್ಥಳೀಯ ಸರ್ಕಾರದ ನೌಕರರನ್ನು ಆರೆಸ್ಸೆಸ್ ಸೇರದಂತೆ ನಿರ್ಬಂಧ ಹೇರಿಬಿಟ್ಟರು.

ಈ ವಿಷಯ ನಂತರ ಬ್ರಿಟಿಷ್ ಸಂಸತ್ತಿನ ಬಜೆಟ್ ಸಂದರ್ಭದಲ್ಲಿ ಚರ್ಚೆಯಾಗಿ ಬ್ರಿಟಿಷ್ ಸರಕಾರ ಸಂಸತ್ತಿನಲ್ಲಿ ಸೋತು ಸುಣ್ಣವಾಯಿತು. ಮುಸ್ಲಿಮರಾದ ಎಂ.ಎಸ್ ರೆಹಮಾನ್ ರವರ ಸಹಿತ ಎಲ್ಲ ಪಕ್ಷಗಳ ನಾಯಕರು ಅರೆಸ್ಸೆಸ್ಸಿನ ನಡೆಯನ್ನು ಸಮರ್ಥಿಸಿಕೊಂಡರು.

ಇದಕ್ಕೆ ಕಾರಣ ಸಾಮ್ರಾಜ್ಯಶಾಹಿ ವಿರೋಧಿಯಾಗಿದ್ದ ಆರೆಸ್ಸೆಸ್ ಕಾಂಗ್ರೆಸ್ಸಿಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಬೇಷರತ್ ಬೆಂಬಲ ನೀಡಿದ್ದಾಗಿತ್ತು.

1932 ರ ಸಮಯದಲ್ಲಿ ಆರೆಸ್ಸೆಸ್ಸಿನ ಈ ಹೋರಾಟವನ್ನ ಹೇಗಾದರೂ ಮಾಡಿ ಬಗ್ಗುಬಡಿಯಬೇಕೆಂದು ತೀರ್ಮಾನಿಸಿದ ಮಧ್ಯ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಇ.ಗೋರ್ಡಾನ್ ನು ಆರೆಸ್ಸೆಸ್ ಒಂದು ಸಾಂಪ್ರದಾಯಿಕ ಹಾಗು ರಾಜಕೀಯ ಶಕ್ತಿಯಾಗಿರುವ ಕಾರಣ ಅದರಲ್ಲಿರುವ ಸರ್ಕಾರಿ ನೌಕರ ಆರೆಸ್ಸೆಸ್ಸನ್ನ ಸೇರಬಾರದು ಅಂತ
ಒಂದು ಸುತ್ತೋಲೆಯನ್ನು ಕೂಡ ಹೊರಡಿಸಿದ.

ನಂತರ 1933 ರ ಡಿಸೆಂಬರ್ ಈ ಸುತ್ತೋಲೆಯನ್ನು ಸರ್ಕಾರಿ ನೌಕರರಿಗಷ್ಟೇ ಅಲ್ಲದೇ ಎಲ್ಲ ವರ್ಗದ ಕಾರ್ಮಿಕರಿಗೂ ಹಾಗು ಶಿಕ್ಷಕರಿಗೂ ಹೊರಡಿಸಿದ.

ಆರೆಸ್ಸೆಸ್ಸಿನ ಈ ಸ್ವಾತಂತ್ರ್ಯ ಚಳುವಳಿಯನ್ನ ಹತ್ತಿಕ್ಕಲು ಚಳುವಳಿಗೆ ಕೋಮು ಪ್ರಚೋದಕ ಅಥವಾ ಸಾಂಪ್ರದಾಯಿಕ ಬಣ್ಣ ಕೊಡುವುದೆ ಈತನ ಉದ್ದೇಶವಾಗಿತ್ತು. ಕೋಮು ಪ್ರಚೋದಕ ಬಣ್ಣ ಕೊಡಲು ಕೂಡ ಪ್ರಬಲವಾದ ಕಾರಣವಿತ್ತು ಅದೇನೆಂದರೆ ಸ್ಥಳೀಯ ಬ್ರಿಟಿಷ್ ಸರ್ಕಾರದ ಮಂತ್ರಿಯೊಬ್ಬ ಮುಸಲ್ಮಾನನಾಗಿದ್ದ. ಹೇಗಾದರೂ ಮಾಡಿ ಆರೆಸ್ಸೆಸ್ಸಿನ ಚಳುವಳಿಯನ್ನು ಧರ್ಮಗಳ ಘರ್ಷಣೆಯಾಗಿ ಪರಿವರ್ತಿಸಲು ಬ್ರಿಟಿಷರು ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು.

ಆದರೆ ಆರೆಸ್ಸೆಸ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಬ್ರಿಟಿಷ್ ವಸಾಹತುಷಾಹಿಯನ್ನ ಮಾತ್ರ ವಿರೋಧಿಸುತ್ತ ಭಾರತದ ಸ್ವಾತಂತ್ರ್ಯಕ್ಕಾಗಿ ಪಟ್ಟು ಹಿಡಿದಿತ್ತು.

ಸಂಘದ ಸ್ಥಾಪನೆಯ ನಂತರ ಪ್ರತಿ ನಿತ್ಯ ಸಂಘದ ಒಂದು ಗಂಟೆಯ ಶಾಖೆಯ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಮಯ ಕೊಡಿ ಅಂತ ಹೇಳಿದ್ದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಹೆಡಗೆವಾರರು ಸ್ವಯಂಸೇವಕರಿಗೆ ಇದೆ ಪಕ್ಷ ಅಥವಾ ಇದೇ ಸಂಘಟನೆಯ ಮುಖಾಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಅಂತ ಕಟ್ಟಪ್ಟಣೆಯೇನೂ ಮಾಡಿರಲಿಲ್ಲ. ಆದರೆ ಸಂಘದ ಬ್ಯಾನರ್ ಏನೂ ಬೇಡ ಬದಲಾಗಿ ಸ್ವದೇಶಿ ಕುರ್ತಾ ಪೈಜಾಮಾ ಹಾಕಿಕೊಳ್ಳಿ ಅನ್ನೋ ಕರೆ ಕೊಟ್ಟಿದ್ದರು.

1940ರಲ್ಲಿ ಡಾ.ಹೆಡಗೆವಾರರ ನಿಧನದ ನಂತರ ಆರೆಸ್ಸೆಸ್ಸಿನ ಎರಡನೆ ಸರಸಂಘಚಾಲಕರಾದ ಗೊಳವಲ್ಕರ ಗುರೂಜಿಯವರೂ ಕೂಡ ಸ್ವಯಂಸೇವಕರಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸೋಕೆ ಕರೆ ನೀಡಿದ್ದರು (ನೆನಪಿರಲಿ ಆಗ ಜನಸಂಘ ಅಥವಾ ಬಿಜೆಪಿ ಎಂಬ ಪಕ್ಷಗಳೇ ಹುಟ್ಟಿರಲಿಲ್ಲ).

ಹೀಗೆ ಸ್ವಾತಂತ್ರ್ಯಕ್ಕಾಗಿ ಗೊಳವಲ್ಕರ ಗುರೂಜಿ ನೀಡಿದ್ದ ಕರೆ ಮೊದಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದ ಗಾಂಧಿಯವರಿಗೂ ಸ್ಪೂರ್ತಿ ನೀಡಿತ್ತು.

ನೆನಪಿರಲಿ ಸಂಘ ಸ್ಥಾಪನೆಯಾದದ್ದು 1925 ರಲ್ಲಿ ಆದ ಕಾರಣ ಸಂಘ ಈಗಿನ ಹಾಗೆ ಕೋಟ್ಯಾಂತರ ಕಾರ್ಯಕರ್ತರನ್ನ ಆಗಿನ್ನು ಹೊಂದಿರಲಿಲ್ಲ.

ಸಂಘ ಬಲವರ್ಧನೆಯಾಗುತ್ತಿರುವುದನ್ನು ತಡೆಯಲು ಬ್ರಿಟಿಷರು – ಮುಸ್ಲಿಂ ಲೀಗ್ ಹಾಗು ಕಾಂಗ್ರೆಸ್ ಆಗಲೂ ಪ್ರಯತ್ನಪಟ್ಟಿತ್ತು.

ಆದರೂ ಎಲ್ಲ ಅಡತಡೆಗಳನ್ನ ಮೆಟ್ಟಿ ಆರೆಸ್ಸೆಸ್ ಮಾತ್ರ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿತ್ತು.

ಆರೆಸ್ಸೆಸ್ & 1942 ರ ಚಳುವಳಿ :

ದುರದೃಷ್ಟವಶಾತ್ ಡಾ.ಹೇಗೆವಾರರು ಜೂನ್ 1940 ರಲ್ಲಿ ವಿಧಿವಶರಾದರು. ವಿಧಿವಶರಾಗುವ ಮುನ್ನವೇ ಆರೆಸ್ಸೆಸ್ಸಿನ ಜವಾಬ್ದಾರಿಯನ್ನು ತಮ್ಮ ಆಪ್ತರಾಗಿದ್ದ ಪೂಜ್ಯ ಎಂ.ಎಸ್.ಗೊಳವಲ್ಕರರವರಿಗೆ ವಹಿಸಿದ್ದರು.

ಆರೆಸ್ಸೆಸ್ಸಿನ ಜವಾಬ್ದಾರಿಯನ್ನ ಸ್ವೀಕರಿಸಿದ್ದ ಗೊಳವಲ್ಕರ್ ಗುರೂಜಿಯವರ ಮುಂದಿನ ದಿನಗಳು 1942 ರ “ಭಾರತ ಬಿಟ್ಟು ತೊಲಗಿ (Quit India)” ಆಂದೋಲನವಾಗಿತ್ತು, ನಂತರ ಭಾರತದಲ್ಲಿ ಮುಸ್ಲಿಂ ಲೀಗಿನ ಒತ್ತಾಯ ಹಾಗು ಅದಕ್ಕಾಗಿ ಮುಸ್ಲಿಂ ಲೀಗ್ ಅನುಸರಿಸಿದ ಹಿಂದು ಮುಸ್ಲಿಂ ಗಲಭೆಗಳಾಗಿ ಅನೇಕ ಹಿಂದುಗಳ ಮಾರಣಹೋಮವಾಗಿ ಜಿನ್ನಾರ ಆಸೆಯಂತೆ ಭಾರತ ವಿಭಜನೆಯಾಗ ಬ್ರಿಟಿಷರಿಂದ ಸ್ವಾತಂತ್ರ್ಯವಾಯಿತು.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಆರೆಸ್ಸೆಸ್ 1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತಟಸ್ಥವಾಗಿತ್ತು ಹಾಗು ಅದರಲ್ಲಿ ಭಾಗವಹಿಸಲೇ ಇಲ್ಲ ಅಂತ ಈಗ ಆರೋಪ ಮಾಡುತ್ತಿರುವವರಿಗೆ ಮಾತ್ರ ಇತಿಹಾಸದ ಅರಿವು ಇದ್ದಂಗೆ ಕಾಣುತ್ತಿಲ್ಲ.

ಆದರೆ ಆರೆಸ್ಸೆಸ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರುವ ವಿಚಾರ ಕಾಂಗ್ರೆಸ್, ಕಮ್ಯೂನಿಸ್ಟ್, ಬುದ್ಧಿಜೀವಿಗಳಿಗೆ ತಿಳಿದಿದ್ದರು ಕೂಡ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಅಥವಾ ಆರೆಸ್ಸೆಸ್ಸನ್ನ ದೂಷಿಸುವ ಸಲುವಾಗಿ ಈ ರೀತಿಯ ಪ್ರಚಾರ ಸಂಘದ ಬಗ್ಗೆ ಮಾಡಲಾಗುತ್ತಿದೆ.

ಇರಲಿ 1942 ರ ಚಳುವಳಿಯ ಬಗ್ಗೆ ಹಾಗು ಅದರಲ್ಲಿ ಆರೆಸ್ಸೆಸ್ಸಿನ ಪಾತ್ರದ ಬಗ್ಗೆ ತಿಳಿದುಕೊಳ್ಳೋಣ. ಆಗಷ್ಟ್ 9, 1942 ರಲ್ಲಿ ಪೂರ್ವ ಸಿದ್ಧತೆಯಿಲ್ಲದೆಯೇ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳುವಳಿಯನ್ನು ಶುರು ಮಾಡಿತ್ತು. ಇದರ ಉದ್ದೇಶ ಬ್ರಿಟಿಷರು ಭಾರತ ಬಿಟ್ಟು ತೊಲಗಲಿ ಎಂಬುದಾಗಿತ್ತು ಆದರೆ ಈ ಚಳುವಳಿಯ ಮುನ್ಸೂಚನೆ ಸಿಕ್ಕ ಬ್ರಿಟಿಷರು ಉಪವಾಸ ಸತ್ಯಾಗ್ರಹ ಮಾಡಲು ಹೊರಟಿದ್ದ ಪ್ರಮುಖ ಕಾಂಗ್ರೆಸ್ ನಾಯಕರನ್ನೆಲ್ಲ ಬಂಧಿಸಿದರು. ಯಾವುದೇ ಚಳುವಳಿ ಅಥವಾ ಹೋರಾಟದ ನಾಯಕನಿಲ್ಲದೇ ಆ ಹೋರಾಟ ಮುಂದುವರೆಯಲು ಸಾಧ್ಯವೇ? ನಂತರ ಈ ಚಳುವಳಿ ನಾವಿಕನಿಲ್ಲದ ಹಡಗಿನಂತಾಯಿತು.

ಆದರೆ ಆರೆಸ್ಸೆಸ್ಸಿನ ಸರಸಂಘಚಾಲಕರಾಗಿದ್ದ ಗೊಳವಲ್ಕರ್ ಗುರೂಜಿಯವರ ಅಣತಿಯಂತೆ ಆರೆಸ್ಸೆಸ್ ಸ್ವಯಂಸೇವಕರು ಕಾಂಗ್ರೆಸ್ಸಿನ ಈ ಸತ್ಯಾಗ್ರಹವನ್ನು ಮುಂದುವರೆಸಿದರು. ಇಷ್ಟೇ ಅಲ್ಲದೇ ಕೆಲ ಸ್ವಯಂಸೇವಕರು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಚಿಮುರ-ಅಶ್ತಿ ಯಲ್ಲಿ ಬ್ರಿಟಿಷರಿಗೆ ಸೆಡ್ಡು ಹೊಡೆದು ಪರ್ಯಾಯ ಸರ್ಕಾರ ರಚನೆ ಮಾಡಲು ಮುಂದಾದರು.

ನಂತರ ಈ ಕೆಲಸಕ್ಕೆ ಬ್ರಿಟಿಷರು ಕೆಲ ಸ್ವಯಂಸೇವಕರನ್ನ ಗಲ್ಲು ಶಿಕ್ಷೆಯನ್ನೂ ವಿಧಿಸಿದರು.

ಆದರೆ ಸ್ವಾತಂತ್ರ್ಯದ ಕಿಚ್ಚು ಅಷ್ಟು ಸುಲಭವಾಗಿ ಆರುವಂತದ್ದಾಗಿರಲಿಲ್ಲ, ಇಷ್ಟಾದರೂ ಸ್ವಯಂಸೇವಕರು ಸುಮ್ಮನೆ ಕುಳಿತುಕೊಳ್ಳದೆ ದೆಹಲಿ-ಮುಜಫ್ಫರ್ ನಗರದ ರೇಲ್ವೆ ಹಳಿಯನ್ನ ಉಡಾಯಿಸೋಕೆ ಪ್ರಯತ್ನಪಟ್ಟು, ಉತ್ತರಪ್ರದೇಶದ ಮೀರತ್ ಜಿಲ್ಲೆಯ ಮೇವಾನ್ ತಹಸೀಲ್ ಕಛೇರಿಯ ಮೇಲೆ ತಿರಂಗಾ ಹಾರಿಸಲು ಪ್ರಯತ್ನಪಟ್ಟು ಬ್ರಿಟಿಷರ ಗುಂಡಿಗೆ ಎದೆಯೊಡ್ಡಬೇಕಾಯಿತು.

ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ಭೂಗತರಾಗಿದ್ದ ಹಲವಾರು ಕಾಂಗ್ರೆಸ್ಸಿನ ನಾಯಕರು ಆಶ್ರಯ ಪಡೆದದ್ದು ಆರೆಸ್ಸೆಸ್ಸಿನ ಕಾರ್ಯಕರ್ತರ ಮನೆಯಲ್ಲಿ.

ಇದರಲ್ಲಿ ಪ್ರಮುಖರಾದ ಅರುಣಾ ಆಸಫ್ ಅಲಿ, ಜಯಪ್ರಕಾಶ ನಾರಾಯಣ ರವರು ದೆಹಲಿಯ ಸಂಘಚಾಲಕ ಲಾಲಾ ಹಂಸರಾಜ ಗುಪ್ತಾರವರ ಮನೆಯಲ್ಲಿ, ಅಚ್ಯುತ್ ಪಟವರ್ಧನ, ಸಾನೆ ಗುರೂಜಿಯವರು ಪುಣೆಯ ಸಂಘಚಾಲಕ ಭಾವುಸಾಹೇಬ್ ದೇಶಮುಖರ ಮನೆಯಲ್ಲಿ ಆಶ್ರಯ ಪಡೆದಿದ್ದರು ಹಾಗು ಕ್ರಾಂತಿವೀರ ನಾನಾ ಪಾಟೀಲರು ಔಂಧಿನ ಸಂಘಚಾಲಕರಾಗಿದ್ದ ಎಸ್.ಡಿ.ಸತ್ವಲೇಕರರ ಮನೆಯಲ್ಲಿ ಆಶ್ರಯ ಪಡೆದು ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಎಲ್ಲ ರೀತಿಯ ತಂತ್ರಗಳನ್ನ ಹೆಣೆಯುತ್ತಿದ್ದರು.

“ಬ್ರಿಟಿಷರನ್ನ ಭಾರತದಿಂದ ದೇಶ ಬಿಟ್ಟು ಓಡಿಸುವುದೇ ಆರೆಸ್ಸೆಸ್ಸಿನ ಭವಿಷ್ಯತ್ತಿನ ಉದ್ದೇಶವಾಗಿದೆ”. 1943 ರ ಬ್ರಿಟಿಷ್ ಗುಪ್ತಚರ ಇಲಾಖೆ ಬ್ರಿಟಿಷರನ್ನ ಆರೆಸ್ಸೆಸ್ಸಿನ ಬಗ್ಗೆ ಹೀಗೆ ಎಚ್ಚರಿಸಿತ್ತು.

ಭಾರತ ರತ್ನ ಪುರಸ್ಕೃತ ಡಾ.ಭಗವಾನ್ ದಾಸರು ದೇಶ ಒಡೆಯುವ ಹುನ್ನಾರದಲ್ಲಿದ್ದ ಮುಸ್ಲಿಮ್ ಲೀಗಿನ ಪ್ರಯತ್ನವನ್ನ ಆರೆಸ್ಸೆಸ್ ಸ್ವಯಂಸೇವಕರು ಹೇಗೆ ಕಟುವಾಗಿ ವಿರೋಧಿಸಿದ್ದರು ಅಂತ ಅವರು ಆರೆಸ್ಸೆಸ್ಸಿನ ಬಗ್ಗೆ ಬರೆದ ಮಾತುಗಳನ್ನ ಉಲ್ಲೇಖಿಸಲೇಬೇಕು.

ಕಾಂಗ್ರೆಸ್ಸಿನ ಆಗಿನ ಪ್ರಭಾವಶಾಲಿ ನಾಯಕರನ್ನ ಮುಸ್ಲಿಂ ಲೀಗ್ ಹೇಗೆ ದಮನ ಮಾಡಲು ಪ್ರಯತ್ನಿಸಿದ್ದರು ಎಂಬುದನ್ನ ಭಗವಾನ್ ದಾಸರು ಅಕ್ಟೋಬರ್ 1, 1948 ರಲ್ಲಿ ಹೀಗೆ ಬರೆಯುತ್ತಾರೆ.

“ದೇಶದಲ್ಲಿ ಮುಸ್ಲಿಂ ಲೀಗ್ ದಂಗೆ ಸೃಷ್ಟಿಸಿ ಶಸ್ತ್ರಾಧಾರಿತವಾಗಿ ಯುದ್ಧಸನ್ನದ್ಧವಾಗಿ ಭಾರತ ವಿಭಜನೆಗೆ ಎಲ್ಲ ತಯಾರಿ ಮಾಡಿಕೊಂಡಿದೆ & ಭಾರತ ಸರ್ಕಾರದ ಮಂತ್ರಿಗಳನ್ನು ಹಾಗು ಮುಖ್ಯ ಅಧಿಕಾರಿಗಳನ್ನ ದಮನ ಮಾಡಿ ದೆಹಲಿಯ ಲಾಲ್ ಕಿಲ್ಲೆಯ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿ ಭಾರತದ ಮೇಲೆ ಪ್ರಭುತ್ವ ಸಾಧಿಸುವ ಎಲ್ಲ ಹುನ್ನಾರ ಮಾಡಿದೆ ಎಂದು ಆರೆಸ್ಸೆಸ್ ಅದಾಗಲೇ ಜವಾಹರಲಾಲ್ ನೆಹರು ಹಾಗು ಸರ್ದಾರ್ ಪಟೇಲರಿಗೆ ತಿಳಿಸಿತ್ತು”

“ಈ ರಾಷ್ಟ್ರವಾದಿ ಆರೆಸ್ಸೆಸ್ ಯುವಕರು ಒಂದೊಮ್ಮೆ ಮುಸ್ಲಿಂ ಲೀಗಿನ ಈ ಹುನ್ನಾರದ ಬಗ್ಗೆ ನೆಹರು ಹಾಗು ಪಟೇಲರಿಗೆ ತಿಳಿಸಿರದೇ ಇದ್ದರೆ ಭಾರತವಿಡೀ ಪಾಕಿಸ್ತಾನವಾಗಿದ್ದಿರುತ್ತಿತ್ತು; ತಮ್ಮ ದೇಶದಲ್ಲೇ ಲಕ್ಷಾಂತರ ಹಿಂದುಗಳ ಮಾರಣ ಹೋಮವಾಗಿ ಅನೇಕ ಹಿಂದುಗಳನ್ನ ಬಲವಂತವಾಗಿ ಇಸ್ಲಾಮಿಗೆ ಮತಾಂತರ ಮಾಡಿ ಮತ್ತೇ ನಮ್ಮ ದೇಶ ಗುಲಾಮಗಿರಿಗೆ ಒಳಪಡುತ್ತಿತ್ತು. ಒಂದು ಸ್ಪಷ್ಟ ವಿಚಾರವೆಂದರೆ ನಮ್ಮ ಸರ್ಕಾರ ಲಕ್ಷಾಂತರ ರಾಷ್ಟ್ರವಾದಿ ಆರೆಸ್ಸೆಸ್ ಸ್ವಯಂಸೇವಕರ ಶಕ್ತಿಯನ್ನ ಸದುಪಯೋಗಪಡಿಸಿಕೊಳ್ಳಬೇಕು ಹೊರತು ಅವರ ಮೇಲೆ ಹಿಡಿತ ಸಾಧಿಸಬಾರದು”

ಆರೆಸ್ಸೆಸ್ ಕಾರ್ಯಕರ್ತರು ತಮ್ಮ ದೇಶಭಕ್ತಿಯನ್ನ ಪ್ರದರ್ಶಿಸಿದ್ದಕ್ಕೆ ತಾವು ಜೈಲಿನಲ್ಲಿ ಕೊಳೆಯಬೇಕಾದ ಪರಿಸ್ಥಿತಿ ಬರುತ್ತದೆಯೆಂದು ಕನಸು ಮನಸ್ಸಿನಲ್ಲು ಯೋಚಿಸಿರಲಿಲ್ಲವೇನೋ, ಗಾಂಧೀಜಿಯವರ ಹತ್ಯೆಯ ನಂತರ ಯಾವ ನ್ಯಾಯಾಲಗಳಲ್ಲಾಗಲಿ ಅಥವಾ ಸರ್ಕಾರ ರಚಿಸಿದ ಯಾವ ಆಯೋಗಗಳ ವರದಿಯಲ್ಲೂ ಆರೆಸ್ಸೆಸ್ಸಿನ ಪಾತ್ರವಿಲ್ಲ ಅಂತ ಸಾಬೀತಾದರೂ ಕೂಡ ದೇಶದ ತಥಾಕಥಿತ ಸೆಕ್ಯೂಲರ್, ಎಡಪಂಥೀಯರು ಹಾಗು ಕಾಂಗ್ರೆಸ್ ಮಾತ್ರ ಆರೆಸ್ಸೆಸ್ಸನ್ನ ವಿನಾಕಾರಣ ದೂಷಿಸುತ್ತಿರುವುದು ಮಾತ್ರ ಖೇದಕರ ವಿಷಯವೇ ಸರಿ.

– Vinod Hindu Nationalist

Tags

Related Articles

Close