ಅಂಕಣಇತಿಹಾಸ

ಹದಿನೆಂಟು ದಿನಗಳ ಮಹಾಭಾರತ ಯುದ್ಧ ಹೇಗಿತ್ತು? ಬಳಕೆಯಾದ ಮಹಾ ಶಶ್ತ್ರಾಸ್ತ್ರಗಳು ಯಾವುದು?

ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ ಹಲವಾರು ಶಶ್ತ್ರಾಸ್ತ್ರಗಳು ಬಳಕೆಯಾದವು. ಅವುಗಳ ಪರಿಣಾಮ ಊಹಿಸಲೂ ಸಾಧ್ಯವಿರಲಿಲ್ಲ. ಶಶ್ತ್ರಾಸ್ತ್ರಗಳು ಹೇಗೆ ಬಳಕೆಯಾದವೋ ಅದೇ ರೀತಿಯಲ್ಲಿ ಅವುಗಳ ಅನುಸಂಧಾನವೂ ನಡೆಯಿತು. ಅನುಸಂಧಾನ ಮಾಡದೇ ಇರುತ್ತಿದ್ದರೆ ಈ ಭೂಮಿ ಎಂದೋ ನಾಶವಾಗುತ್ತಿತ್ತು. ಆದರೆ ಭಗವಾನ್ ಶ್ರೀಕೃಷ್ಣ ಕೃಪೆಯಿಂದ ಹಲವಾರು ಮಹಾಸ್ತ್ರಗಳು ಅನುಸಂಧಾನದಿಂದ ಭೂಮಿ ನಾಶವಾಗದೆ ಉಳಿಯಿತು. ಆದರೆ ಕೆಲವು ಶಶ್ತ್ರಾಸ್ತ್ರಗಳಿಂದ ಅನೇಕ ದುಷ್ಟರ ನಾಶವಾಯಿತು.

ಧರ್ಯೋಧನನು ಪಾಂಡವರಿಗೆ ಒಂದು ಸೂಜಿಮೊನೆಯಷ್ಟೂ ಜಾಗ ಕೊಡಲಾರೆನು ಎಂದು ಹಠ ಹಿಡಿದುದರಿಂದ ಕುರುಕ್ಷೇತ್ರ ಯುದ್ಧ ಅನಿವಾರ್ಯವಾಯಿತು. ಈ ಯುದ್ಧವನ್ನು ತಪ್ಪಿಸಲು ಧರ್ಮರಾಯ ಸರ್ವಪ್ರಯತ್ನಗಳನ್ನು ಮಾಡಿದರೂ, ದುರ್ಯೋಧನ ಹಠದಿಂದ ಯುದ್ಧವನ್ನೇ ಆಯ್ಕೆ ಮಾಡಿದನು. ಎರಡೂ ಕಡೆಗಳಲ್ಲಿ ಸೈನ್ಯಬಲ ಶೇಖರಣೆಯಾಯಿತು. ಆರಂಭದಲ್ಲಿ ಧರ್ಮರಾಯನು ಶತಾನಂದರನ್ನು ಸಂಧಿಗೆ ಕಳಿಸಿ ಯುದ್ಧವನ್ನು ಬಿಟ್ಟು, ಧರ್ಮರಾಯ ಕೇಳಿದ ಐದು ಊರುಗಳನ್ನು ಕೊಡುವಂತೆ ಕೇಳಿಕೊಂಡರು. ಆದರೆ ಅದೂ ಕೂಡಾ ನಿರರ್ಥಕವಾಯಿತು. ಕೌರವನ ಆಸ್ತಾನದಲ್ಲಿದ್ದ ಸಂಜಯನೂ ಶಾಂತಿ ಪ್ರಸ್ತಾಪವನ್ನೂ ಮಾಡಿದನು. ವಿದುರ ಕೂಡಾ ಧೃತರಾಷ್ಟ್ರನಲ್ಲಿ ಮಗನ ಮೇಲಿನ ವ್ಯಾಮೋಹದಿಂದ ಯುದ್ಧಕ್ಕೆ ಆಸ್ಪದ ನೀಡದಂತೆ ಪರಿಪರಿಯಾಗಿ ಕೇಳಿದನು. ಮಹರ್ಷಿ ಸನತ್ಸುಜಾತರೂ ಕೂಡಾ ಧೃತರಾಷ್ಟ್ರನಿಗೆ ಬ್ರಹ್ಮವಿದ್ಯೆಯನ್ನು ಉಪದೇಶಿಸಿದರು. ಆ ಬಳಿಕ ಭಗವಾನ್ ಶ್ರೀಕೃಷ್ಣನೂ ಸಂಧಿಗೆ ರಾಯಭಾರಿಯಾಗಿ ಆಗಮಿಸಿದನು. ಹಸ್ತಿನಾವತಿಯಲ್ಲಿ ಕೃಷ್ಣನಿಗೆ ಭವ್ಯವಾದ ಆತಿಥ್ಯವನ್ನು ಸಿದ್ಧಪಡಿಸಿದ್ದರೆ ಕೃಷ್ಣ ವಿದುರನ ಮನೆಗೆ ತೆರಳಿ ಆತಿಥ್ಯವನ್ನು ಸ್ವೀಕರಿಸಿದನು.
ಮರುದಿನ ಸಂಧಿಗೆಂದು ಹಸ್ತಿನಾವತಿಗೆ ತೆರಳಿದರೆ ದುರ್ಯೋಧನನು ಕೃಷ್ಣನಿಗೆ ಗೌರವಿಸದೆ ಅವಮಾನ ಮಾಡಲು ಮುಂದಾದನು. ಆದರೆ ಕೃಷ್ಣನು ದುರ್ಯೋಧನನ ಸಿಂಹಾಸನವನ್ನು ಬೀಳಿಸಿ ಕಾಲಿಗಡ್ಡಬೀಳುವಂತೆ ಮಾಡಿದನು. ಇದರಿಂದ ಸಿಟ್ಟಿಗೆದ್ದ ವಿಧುರನಿಂದ ಧನುರ್ಭಂಗವಾಯಿತು.
ಸಂಧಿಯ ಕಾಲದಲ್ಲೇ ವಿದುರನಿಂದ ಧನುರ್ಭಂಗ ನಡೆದಿರುವುದು ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಪತನಗೊಂಡ ಶಶ್ತ್ರಾಸ್ತ್ರವಾಗಿದೆ. ಕೃಷ್ಣನನ್ನು ಅವಮಾನ ಮಾಡಿದ ದುರ್ಯೋಧನನ್ನು ಕಂಡು ಕೋಪಗೊಂಡ ವಿದುರನು, `ಕೃಷ್ಣನನ್ನು ತುಂಬಿದ ಸಭೆಯಲ್ಲಿ ಹಂಗಿಸಿದೆಯಾ? ಯುದ್ಧದ ಕೊನೆಯಲ್ಲಿ ಭೀಮನು ನಿನ್ನನ್ನು ಕೊಲ್ಲುವಾಗ ಬದುಕಿಸಲೆಂದು ಒಂದು ಮಹಾಸ್ತ್ರವನ್ನು ಜೋಪಾನವಾಗಿರಿಸಿದ್ದೆನು. ಇನ್ನು ನಿನ್ನ ಮೇಲೆ ಎಲ್ಲಿದೆ ಮಮತೆ?’ ಎಂದು ಸುಯೋಧನನ್ನು ರಕ್ಷಿಸಲೆಂದು ಇಟ್ಟಿದ್ದ ಮಹಾಸ್ತ್ರವನ್ನು ಮುರಿದು ಶತ್ರುವಿನ ಕೈಯ್ಯಲ್ಲಿ ಒದ್ದಾಡಿ ಒದ್ದಾಡಿ ಸಾಯುವುದೇ ನಿನ್ನ ಹಣೆಬರಹ ಎಂದು ಸಭೆಯಿಂದ ಹೊರನಡೆದನು. ನಂತರ ಕೃಷ್ಣನನ್ನು ಸುಯೋಧನ ಹಾಗೂ ಕರ್ಣ ಕಟ್ಟಿಹಾಕಲು ಮುಂದಾದಾಗ ಕೃಷ್ಣನು ಅಲ್ಲಿದ್ದವರಿಗೆ ವಿಶ್ವರೂಪ ದರ್ಶನವನ್ನು ಮಾಡಿಸಿದನು. ಆ ಬಳಿಕ ಕೃಷ್ಣನಿಂದ ನಡೆದ ಸಂಧಿಯನ್ನು ತಿರಸ್ಕರಿಸಿದ ಸುಯೋಧನ ಕೃಷ್ಣನಲ್ಲಿ ರಣವೀಳ್ಯವನ್ನು ಕೊಟ್ಟು ಯುದ್ಧಕ್ಕೆ ಸಿದ್ಧನಾದನು.
ಮೊದಲ ದಿನದ ಯುದ್ಧದಲ್ಲಿ ಪಾಂಡವ ಹಾಗೂ ಕೌರವ ಪಕ್ಷದಲ್ಲಿ ವ್ಯಾಪಕ ಪ್ರಾಣ ಹಾನಿಯಾದವು. ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯವಿದ್ದರೆ ಕೌರವರ ಕಡೆಯಲ್ಲಿ ಬರೋಬ್ಬರಿ 11 ಅಕ್ಷೋಹಿಣಿ ಸೈನ್ಯವಿದ್ದಿದ್ದು. ಕ್ರೂರ ರಾಕ್ಷಸರು ಕೂಡಾ ಕೌರವನನ್ನು ಬೆಂಬಲಿಸಿದ್ದರು. ಪಾಂಡವರ ಕಡೆಯಲ್ಲಿ ಅರ್ಜುನ, ಭೀಮ, ಅಭಿಮನ್ಯುವಿನಂಥಾ ವೀರರಿದ್ದು, ಕೃಷ್ಣನು ಸಾರಥಿಯಾಗಿ ಪಾಂಡವರನ್ನು ರಕ್ಷಿಸಿದನು. ಎಲ್ಲಿ ಧರ್ಮವಿರುತ್ತದೋ ಅಲ್ಲಿ ಕೃಷ್ಣನಿರುತ್ತಾನೆ. ಕೃಷ್ಣನಿದ್ದ ಕಡೆ ಜಯವು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಕೃಷ್ಣ ಈ ಯುದ್ಧದಲ್ಲಿ ತೋರಿಸಿಕೊಟ್ಟನು.
ಮೊದಲ ದಿನದ ಯುದ್ಧದಲ್ಲಿ ಪಾಂಡವ ಪಕ್ಷದಲ್ಲಿದ್ದ ಉತ್ತರಕುಮಾರನನ್ನು ಶಲ್ಯನು ಸಂಹರಿಸಿದನು. ಕೌರವನ ಸೇನಾಧಿಪತಿಯಾಗಿದ್ದ ಭೀಷ್ಮರು ಲಕ್ಷೋಪಲಕ್ಷ ಸೈನಿಕರನ್ನು ಸಂಹರಿಸಿದರು. ಮೊದಲ ದಿನದ ಯುದ್ಧದಲ್ಲೇ ಶ್ವೇತನೆನ್ನುವ ವೀರನನ್ನು ಎದುರುಗೊಂಡು ವಿಶಾಲ ಹಾಗೂ ಭಲ್ಲ ಎಂಬ ಸಪ್ತಶರವನ್ನು ಪ್ರಯೋಗಿಸಿದರು. ಆಗ ಶ್ವೇತನು ಶಕ್ತ್ಯಾಯುಧವನ್ನು ಪ್ರಯೋಗಿಸಿದನು. ಇದನ್ನು ಗಾಂಗೇಯರು 17 ಶರಗಳಿಂದ ಕತ್ತರಿಸಿದರು. ಕೊನೆಗೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಶ್ವೇತನನ್ನು ಸಂಹರಿಸಿದರು. ಶ್ವೇತನು ಪ್ರಯೋಗಿಸಿದ ವಿಶಾಲ ಹಾಗೂ ಭಲ್ಲ ಆಯುಧಗಳನ್ನು ಭೀಷ್ಮರು ಕತ್ತರಿಸದೇ ಹೋಗಿದ್ದರೆ ಹದಿನೆಂಟು ದಿನಗಳ ಯುದ್ಧ ನಡೆಯದೆ ಅಂದೇ ಎಲ್ಲಾ ಮುಗಿದುಹೋಗಿರುತ್ತಿತ್ತು! ಗಾಂಗೇಯರು ಆ ದಿನ ಪ್ರಯೋಗಿಸಿದ ಬಾಣಗಳಿಂದ ಪಾಂಡವ ಪಕ್ಷಕ್ಕೆ ವ್ಯಾಪಕವಾದ ಹಾನಿಯಾಯಿತು.

ಎರಡನೇ ದಿನದ ಯುದ್ಧದಲ್ಲಿ ಪಾಂಡವ ಸೇನಾಧಿಪತಿಯಾಗಿದ್ದ ದೃಷ್ಟದ್ಯುಮ್ನನು ಕ್ರೌಂಚಾರುಣ ವ್ಯೂಹವನ್ನು ರಚಿಸಿದರು. ಕ್ರೌಂಚ ಅಂದರೆ ಒಂದು ಪಕ್ಷಿ. ಪಕ್ಷಿಯಂತೆಯೇ ಇದ್ದ ವ್ಯಹ ಅಭೇದ್ಯವಾಗಿತ್ತು. ಕ್ರೌಂಚ ಹಕ್ಕಿಯಂತೆ ದಾಳಿ ನಡೆಸಿ ವೈರಿಪಡೆಯನ್ನು ನಿರ್ಣಾಮಗೊಳಿಸುವುದು ಪಾಂಡವರ ಉದ್ದೇಶ. ಆದರೆ ಗಾಂಗೇಯರು ಅದಕ್ಕೆ ಪ್ರತಿಯಾದ ವ್ಯಹವೊಂದನ್ನು ರಚಿಸಿ ಎರಡೂ ಕಡೆಗಳಿಂದ ಭೀಕರ ಯುದ್ಧ ನಡೆಯಿತು. ಚತುರ್ದಿಕ್ಕುಗಳೂ ಶರಾವಳಿಗಳಿಂದ ತುಂಬಿಕೊಂಡವು. ಭೀಮನ ಆಯುಧಪಾಣಿಯಾಗಿ ಯುದ್ಧಕ್ಕೆ ಇಳಿದರೆ ವೈರಿಪಡೆ ನಿರ್ಣಾಮವಾಗುತ್ತಿತ್ತು. ದಶಸಹಸ್ರದಷ್ಟು ಸೈನಿಕರು ವೀರಮರಣವನ್ನಪ್ಪಿದರು.

ಮೂರನೇ ದಿನದ ಯುದ್ಧದಲ್ಲಿ ಭೀಷ್ಮರು ಗರುಡ ವ್ಯಹವನ್ನು ರಚಿಸಿದರು. ಗರುಡನಂತೆ ಒಮ್ಮೆಲೆ ಎರಗಿ ಪಾಂಡವ ಪಡೆಯನ್ನು ಮಣ್ಣುಮುಕ್ಕಿಸುವುದು ಗಾಂಗೇಯರ ಉದ್ದೇಶ. ಅದಕ್ಕಾಗಿಯೇ ವ್ಯೂಹದ ಕೊಕ್ಕಿನ ಭಾಗದಲ್ಲಿ ಭೀಷ್ಮರಿದ್ದರು. ಇದನ್ನು ಕಂಡ ಪಾಂಡವರಯ ಅರ್ಧಚಂದ್ರ ವ್ಯಹವನ್ನು ರಚಿಸಿದರು. ಯುದ್ಧದಲ್ಲಿ ಗಾಂಗೇಯರ ಶರಾವಳಿಗಳಿಂದ ಯುದ್ಧಭೂಮಿಯಲ್ಲಿ ಕತ್ತಲಾವರಿಸಿತ್ತು. ದಶಸಹಸ್ರ ವೀರರನ್ನು ಚೆಂಡಾಡಿದರು. ಇದನ್ನೆಲ್ಲಾ ಕಂಡ ಅರ್ಜುನನು ಅಂದು ಐಂದ್ರಾಸ್ತ್ರವನ್ನು ಪ್ರಯೋಗಿಸಿ ವೈರಿಗಳನ್ನು ಎದುರಿಸಬೇಕಾಯಿತು. ಈ ಐಂದ್ರಾಸ್ತ್ರವನ್ನು ಸ್ವತಃ ಇಂದ್ರನೇ ಅರ್ಜುನನಿಗೆ ನೀಡಿದ್ದು, ಮಹಾಸ್ತ್ರವಾಗಿತ್ತು.

ನಾಲ್ಕನೇ ದಿನದ ಯುದ್ಧದಲ್ಲಿ ಕೌರವರು ವ್ಯಾಲ ಎಂಬ ಅಭೇದ್ಯವ್ಯೂಹವನ್ನು ರಚನೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪಾಂಡವರು ಅಭೇದ್ಯವಾದ ಮತ್ತೊಂದು ವ್ಯೂಹವನ್ನು ರಚನೆ ಮಾಡಿದರು. ಆ ಯುದ್ಧದಲ್ಲಿ ಭೀಮನು ಧೃತರಾಷ್ಟ್ರನ ಹದಿನಾಲ್ಕು ಮಕ್ಕಳನ್ನು ಕೊಂದನು. ಇದರಿಂದ ಕ್ರುದ್ಧನಾದ ದಾನವ ಭಗದತ್ತ ಎನ್ನುವವ ಮಾಯಾ ಯುದ್ಧವನ್ನು ಹೂಡಿದನು. ಇದಕ್ಕೆ ಪ್ರತಿಯಾಗಿ ಭೀಮನ ಮಗ ಘಟೋತ್ಕಚನು ಮಾಯಾಯುದ್ಧವನ್ನು ಆರಂಭಿಸಿದನು. ಈ ಯುದ್ಧದಲ್ಲಿ ಕೋಟಿಗಟ್ಟಲೆ ಮಂದಿ ವೀರಮರಣವನ್ನು ಗೈದರು.

ಐದನೇ ದಿವಸದ ಯುದ್ಧದಲ್ಲಿ ಮಕರ ವ್ಯೂಹವು ರಚಿಸಲ್ಪಟ್ಟಿತು. ಮಕರ ಎಂದರೆ ಮೊಸಳೆ. ಮೊಸಳೆಯಂತೆ ಕಾಣುವ ಈ ವ್ಯೂಹದಲ್ಲಿ ಮೊಸಳೆಯಂತೆ ಆಕ್ರಮಣ ಮಾಡುವುದು ಈ ವ್ಯೂಹದ ಉದ್ದೇಶ. ಪಾಂಡವ ಪಕ್ಷದ ಸಾತ್ಯಕಿಯು ಭೀಕರ ಯುದ್ಧವನ್ನು ಹೂಡಿದನು. ಅದಕ್ಕೆ ಪ್ರತಿಯಾಗಿ ಭೀಷ್ಮ ವೃದ್ಧರಾಗಿದ್ದರೂ ಭೀಕರ ಯುದ್ಧವನ್ನು ಹೂಡಿ ಲಕ್ಷೋಪಲಕ್ಷ ಮಂದಿಯನ್ನು ಸಂಹಾರ ಮಾಡಿದರು.

ಆರನೇ ದಿವಸದ ಯುದ್ಧದಲ್ಲಿ ಯುದಿಷ್ಟಿರನು ಮಕರ ವ್ಯೂಹ ರಚಿಸಿದನು. ಇದಕ್ಕೆ ಪ್ರತಿಯಾಗಿ ಕೌರವರಿಂದ ಕ್ರೌಂಚ ವ್ಯಹ ರಚಿಸಲ್ಪಟ್ಟಿತು. ಇದರ ನಡುವೆ ಅಭಿಮನ್ಯುವಿನಿಂದ ಸೂಜಿಮುಖ ವ್ಯೂಹ ರಚನೆಯಾಯಿತು. ಎರಡೂ ಪಕ್ಷಗಳಲ್ಲಿ ಜಯಾಪಜಯ ಗೊತ್ತಾಗಲಿಲ್ಲ. ಈ ಯುದ್ಧದಲ್ಲಿ ದೃಷ್ಟದ್ಯುಮ್ನನು ಮೋಹನಾಸ್ತ್ರವನ್ನು ಪ್ರಯೋಗಿಸಿದನು. ಇದರಿಂದ ಸಾವಿರಾರು ಸೈನಿಕರು ಮೂರ್ಛೆ ಹೋದರು.

ಏಳನೇ ದಿವಸದ ಯುದ್ಧದಲ್ಲಿ ಮಂಡಲವ್ಯೂಹವನ್ನು ಭೀಷ್ಮರು ರಚಿಸಿದರು. ಇದರಲ್ಲಿ ಭೀಕರವಾದ ಅಸ್ತ್ರಗಳಿದ್ದು, ವ್ಯೂಹವು ವರ್ತುಲಾಕಾರದಲ್ಲಿತ್ತು. ಇದನ್ನು ಭೇದಿಸಲು ಧರ್ಮರಾಯನು ವಜ್ರವ್ಯೂಹವನ್ನು ರಚನೆ ಮಾಡಿದನು. ಅಂದಿನ ಯುದ್ಧದಲ್ಲಿ ಮಾರಕ ಅಸ್ತ್ರಗಳ ಪ್ರಯೋಗವಾಗದಿದ್ದರೂ ಧರ್ಮರಾಯ ಏಳು ಶರಗಳಿಂದ ಗಾಯಗೊಂಡಿದ್ದನು. ಜಯದ್ರಥನು ಪಾಂಡವರಿಗೆ ಅಪಾರ ಹಾನಿ ಮಾಡಿದನು. ಲಕ್ಷೋಪಲಕ್ಷ ಮಂದಿಯ ಪ್ರಾಣ ಹರಣವಾಯಿತು.

ಎಂಟನೇ ದಿವಸದ ಯುದ್ಧದಲ್ಲಿ ಭೀಷ್ಮರಿಂದ ಮಹಾವ್ಯೂಹ ರಚನೆಯಾಯಿತು. ಅದಕ್ಕೆ ಪ್ರತಿಯಾಗಿ ಪಾಂಡವರಿಂದ ಶ್ರಂಗಾಟಕ ವ್ಯೂಹ ರಚನೆಯಾಯಿತು. ಶೃಂಗ ಎಂದರೆ ಕೊಂಬು ಎಂದರ್ಥ. ಈ ಯುದ್ಧದಲ್ಲಿ ಪಾಂಡವರ ಕಡೆಯಿಂದ ಇರಾವಂತನು ಕೊಲ್ಲಲ್ಪಟ್ಟರೆ, ಧೃತರಾಷ್ಟ್ರನ 17 ಮಕ್ಕಳು, ಶಕುನಿಯ ಹದಿನೈದು ಸಹೋದರರು ಕೊಲ್ಲಲ್ಪಟ್ಟರು. ಕರ್ಣನು ಭೀಷ್ಮನಿರುವವರೆಗೆ ಯುದ್ಧಕ್ಕೆ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದರಿಂದ ಅಷ್ಟೂ ದಿನಗಳ ಯುದ್ಧದಲ್ಲಿ ಅವನು ದೂರ ಉಳಿದಿದ್ದನು.

ಒಂಬತ್ತನೇ ದಿನದ ಯುದ್ಧದಲ್ಲಿ ಸರ್ವತೋಭದ್ರ ಎನ್ನುವ ವ್ಯೂಹವನ್ನು ರಚನೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪಾಂಡವರು ವ್ಯೂಹ ರಚನೆ ಮಾಡಿದರು. ಆ ಯುದ್ಧದಲ್ಲಿ ಅಂಬುಲಷ ಎಂಬ ರಾಕ್ಷಸನು ಮಾಯಾಂಧಕಾರವನ್ನು ಸೃಷ್ಟಿಸಿದ್ದನು. ಎಲ್ಲೆಲ್ಲೂ ಕತ್ತಲೆಯೇ ಕತ್ತಲೆ. ಆದರೆ ಆ ಯುದ್ಧದಲ್ಲಿ ಅಭಿಮನ್ಯುವು ಭಾಸ್ಕರ ಶರವನ್ನು ಹೂಡಿ ಕತ್ತಲೆಯನ್ನು ಹೋಗಲಾಡಿಸಿದನು. ಭಾಸ್ಕರ ಶರವನ್ನು ಹೂಡದೇ ಇದ್ದಿದ್ದರೆ ಪಾಂಡವರು ಸೇನೆ ಸೋತು ಅಂದೇ ಯುದ್ಧ ಮುಗಿದು ಧುರ್ಯೋಧನನ ಪಟ್ಟ ಗಟ್ಟಿಯಾಗಿರುತ್ತಿತ್ತು. ಈ ಯುದ್ಧದಲ್ಲಿ ಪೋರನಾಗಿದ್ದ ಅಭಿಮನ್ಯುವು ಭೀಷ್ಮರನ್ನು ಎದುರಿಸಿದನು. ಆ ಯುದ್ಧ ಭೀಕರವಾಗುತ್ತಿರುವುದನ್ನು ಮನಗಂಡ ಅರ್ಜುನನು ವಾಯುವ್ಯಾಸ್ತ್ರವನ್ನು ಪ್ರಯೋಗಿಸಿದನು. ಈ ಅಸ್ತ್ರವನ್ನು ಭೀಷ್ಮರು ಶೈಲವೆಂಬ ಅಸ್ತ್ರದಿಂದ ಖಂಡಿಸಿದರು. ಹೀಗೆ ಶರಗಳ ಸಂಧಾನ ಅನುಸಂಧಾನದಿಂದ ಯುದ್ಧವು ಮುಂದುವರಿಯಿತು. ಆದಿನದ ಯುದ್ದದಲ್ಲಿ ಅರ್ಜುನನ ಸಾರಥಿಯಾಗಿದ್ದ ಕೃಷ್ಣನ ಹಣೆಗೆ ಭೀಷ್ಮರು ಮಹಾಸ್ತ್ರವನ್ನು ಪ್ರಯೋಗಿಸಿ ಗಾಯ ಮಾಡಿದರು. ಯುದ್ಧದಲ್ಲಿ ಅನೇಕ ಶರಾಘಾತಗಳಿಂದ ನೋವುಂಡಿದ್ದರೂ ಕೃಷ್ಣನು ಭೀಷ್ಮರು ಹಾಕಿದ ಪ್ರತಿಜ್ಞೆಯ ಸಲುವಾಗಿ ಚಕ್ರಧಾರಿಯಾಗಬೇಕಾಯಿತು. ಯಾಕೆಂದರೆ ಭೀಷ್ಮರು ಯುದ್ಧದಲ್ಲಿ ಕೃಷ್ಣನು ಚಕ್ರಧಾರಿಯಾಗುವಂತೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಭೀಷ್ಮರು ತನ್ನ ಭಕ್ತರಾಗಿರುವುದರಿಂದ ಕೃಷ್ಣನು ಅವರ ಪ್ರತಿಜ್ಞೆಯನ್ನು ಪೂರೈಸಿ ಚಕ್ರವನ್ನು ಕೈಯ್ಯಲ್ಲಿ ಎತ್ತಿ ಕೊನೆಗೆ ಅರ್ಜುನನ ಸಲಹೆಯಂತೆ ಕೆಳಗಿಟ್ಟನು.

ಹತ್ತನೇ ದಿವಸದ ಯುದ್ಧದಲ್ಲಿ ಪಾಂಡವರು ಮಹಾವ್ಯೂಹವನ್ನು ರಚಿಸಿದ್ದರು. ಈ ಯುದ್ಧದಲ್ಲಿ ಅರ್ಜುನ ಮತ್ತು ಭೀಷ್ಮರ ಮಧ್ಯೆ ಭಾರೀ ಕಾಳಗವಾಯಿತು. ಅಂದು ಭೀಷ್ಮರು ಸರ್ಪಬಾಣವನ್ನು ಪ್ರಯೋಗಿಸಿದರು. ವಿಶದ ಜ್ವಾಲೆ ಎಲ್ಲೆಡೆ ವ್ಯಾಪಿಸಿತು. ಅದಕ್ಕೆ ಪ್ರತಿಯಾಗಿ ಅರ್ಜುನನು ಗರುಡಬಾಣವನ್ನು ಪ್ರಯೋಗಿಸಿ ಖಂಡಿಸಬೇಕಾಯಿತು. ಅದಕ್ಕೆ ಪ್ರತಿಯಾಗಿ ಭೀಷ್ಮರು ಅಗ್ನಿ ಅಸ್ತ್ರವನ್ನು ಪ್ರಯೋಗಿಸಿದರೆ ಅರ್ಜುನನು ಅದನ್ನು ಜಲಾಸ್ತ್ರದಿಂದ ಖಂಡಿಸಿದನು. ಭೀಷ್ಮರು ಗಿರಿ ಬಾಣವನ್ನು ಪ್ರಯೋಗಿಸಿ ಪರ್ವತಗಳನ್ನು ಹೊತ್ತು ತರಲಾರಂಭಿಸಿದರು. ಇದನ್ನು ಅರ್ಜುನನು ವಜ್ರಬಾಣದಿಂದ ಖಂಡಿಸಬೇಕಾಯಿತು. ಅರ್ಜುನನು ಅಂದು ತಿಮಿರಾಸ್ತ್ರ ಪ್ರಯೋಗಿಸಿ ಕತ್ತಲೆಯಾಗುವಂತೆ ಮಾಡಿದರೆ ಭೀಷ್ಮರು ಅಂದು ಭಾಸ್ಕರಾಸ್ತ್ರದಿಂದ ಖಂಡಿಸಿದರು. ಭೀಷ್ಮರು ಶಕ್ತಾಯುಧವನ್ನು ಪ್ರಯೋಗಿಸಿದರೆ ಅರ್ಜುನನು ಅಂದು ನಿಶಿತ ಬಾಣಗಳಿಂದ ಖಂಡಿಸಿದನು. ಅಂದು ಭೀಕರ ಹತ್ಯಾಕಾಂಡ ನಡೆಯಿತು.

ಸ್ತ್ರೀಯರೊಂದಿಗೆ ಯುದ್ಧ ಮಾಡುವುದಿಲ್ಲ ಎಂದು ಭೀಷ್ಮರು ಪ್ರತಿಜ್ಞೆ ಮಾಡಿರುವುದರಿಂದ ಪಾಂಡವರು ಶಿಖಂಡಿಯನ್ನು ಮುಂದೆ ತಂದಿಟ್ಟಾಗ ಪ್ರತಿಜ್ಞೆಯಂತೆ ಭೀಷ್ಮರು ಅಸ್ತ್ರತ್ಯಾಗವನ್ನು ಮಾಡಿದರು. ಶಿಖಂಡಿಯು ಭೀಷ್ಮರನ್ನು ಬಾಣಗಳಿಂದ ಗಾಯಗೊಳಿಸಿದನು. ಅರ್ಜುನನು ನಿಶಿತ ಬಾಣಗಳಿಂದ ಭೀಷ್ಮರನ್ನು ಗಾಯಗೊಳಿಸಿ ಬಾಣಗಳಿಂದಲೇ ಸರಳ ಮಂಚವನ್ನು ಪ್ರಾಪ್ತಿಮಾಡಿದನು. ಭೀಷ್ಮರು ಇಚ್ಛಾಮರಣಿಯಾಗಿರುವುದರಿಂದ ಉತ್ತರಾಯಣ ಬರುವವರೆಗೆ ಅದೇ ಬಾಣಗಳ ಮಂಚದಲ್ಲಿದ್ದುಕೊಳ್ಳಬೇಕಾಯಿತು. ಆ ಬಳಿಕ ಕರ್ಣನು ಸೇನಾಧಿಪತ್ಯವನ್ನು ಕೈಗೊಂಡನು.

ಹನ್ನೊಂದನೇ ದಿವಸದ ಯುದ್ಧವು ದ್ರೋಣರ ಮುಂದಾಳತ್ವದಲ್ಲಿ ನಡೆಯಿತು. ಅಂದು ಕೂಡಾ ಮಹಾಸ್ತ್ರಗಳ ಪ್ರಯೋಗ ನಡೆಯಿತು. ಕೌರವರ ಪಕ್ಷದಿಂದ ಭಾರೀ ಯುದ್ಧ ನಡೆದು ಪಾಂಡವ ಸೇನೆಯ ದೆಸೆಗೆಡೆಯಿತು. ಅಂದು ಅರ್ಜುನನು ತ್ವಾಷ್ಟ್ರ ಎನ್ನುವ ಅಸ್ತ್ರವನ್ನು ಪ್ರಯೋಗಿಸಿದನು. ಈ ಅಸ್ತ್ರದಿಂದ ಸಾವಿರಾರು ಅರ್ಜುನನ ಪ್ರತಿರೂಪ ಕಂಡುಬಂದಿತು. ವೈರಿಗಳು ಪ್ರತಿಯೊಬ್ಬರೂ ಅರ್ಜುನನೆಂದೇ ಭಾವಿಸಿ ತನ್ನದೇ ಸೈನಿಕರನ್ನು ಒಬ್ಬರನ್ನೊಬ್ಬರು ಕೊಂದರು. ಅಲ್ಲಿ ಎಷ್ಟು ಮಂದಿ ಕೃಷ್ಣರು, ಎಷ್ಟು ಮಂದಿ ಅರ್ಜುನರಿದ್ದರು ಎಂದು ಅಂದಾಜಿಸಲಾಗಲಿಲ್ಲ. ಇದಕ್ಕೆ ಪ್ರತಿಯಾಗಿ ಕೌರವನ ಕಡೆಯಿಂದ ಬಾಣಗಳು ಪ್ರಯೋಗವಾಗಿ ಆಕಾಶವನ್ನು ಮುಚ್ಚಿದಾಗ ಅರ್ಜುನನು ಅದನ್ನು ವಾಯುವ್ಯಾಸ್ತ್ರದಿಂದ ಬಿಡಿಸಿದನು. ಕೌರವರು ಗರುಡವ್ಯೂಹವನ್ನು ರಚಿಸಿದರು. ದೃಷ್ಟದ್ಯುಮ್ನನು ಗರುಡವ್ಯಹ ರಚಿಸಿದನು. ದ್ರೋಣಾಚಾರ್ಯರು ರಣಚಂಡಿಯಂತೆ ಹೋರಾಡಿದರು. ಇವರನ್ನು ಮಟ್ಟ ಹಾಕಲು ದಿವ್ಯಾಸ್ತ್ರದ ಪ್ರಯೋಗವೂ ನಡೆಯಿತು.
ಭಗದತ್ತನೆಂಬ ರಾಕ್ಷಸನು ತನ್ನ ಆನೆಯಾದ ಸುಪ್ರತೀಕದಿಂದ ಯುದ್ಧಕ್ಕೆ ಇಳಿದನು. ಸುಪ್ರತೀಕ ಆನೆಯೂ ಸೊಂಡಿಲುಗಳನ್ನು ಬೀಸಿ ಪಾಂಡವರ ಸೈನ್ಯವನ್ನು ಮಣ್ಣುಮುಕ್ಕಿಸಿತು. ಅರ್ಜುನನು ಆಗಮಿಸಿ ಭಗದತ್ತ ಹಾಗೂ ಸುಪ್ರತೀಕದೊಂದಿಗೆ ಯುದ್ಧ ನಡೆಸಿದನು. ಭಗದತ್ತನಿಂದ ಅರ್ಜುನನ ಮೇಲೆ ವೈಷ್ಣವಾಸ್ತ್ರ ಪ್ರಯೋಗಿಸಲ್ಪಟ್ಟಿತು. ವೈಷ್ಣವಾಸ್ತ್ರವನ್ನು ಶಮನಗೊಳಿಸಲು ಕೃಷ್ಣನಿಗಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವಿಸಿ ಕೃಷ್ಣನು ಎದೆಯೊಡ್ಡಿ ಅದನ್ನು ಸ್ವೀಕರಿಸಿ ಶಕ್ತಿಹೀನನನ್ನಾಗಿ ಮಾಡಿದನು. ಆ ವೈಷ್ಣವಾಸ್ತ್ರವು ಕೃಷ್ಣನು ತಾನು ವರಹಾವತಾರದಲ್ಲಿದ್ದಾಗದ ಕೋರೆ ಹಲ್ಲಾಗಿತ್ತು ಅದು ನಷ್ಟ ಹೊಂದಿರುವುದರಿಂದ ಇನ್ನು ಭಗದತ್ತನ ಆಟ ನಡೆಯುವುದಿಲ್ಲ ಎಂದು ಹೇಳಿ ಅರ್ಜುನನ್ನು ಹುರಿದುಂಬಿಸಿದನು. ಮೊದಲಾಗಿ ಸುಪ್ರತೀಕ ಆನೆಯನ್ನು ಸಂಹರಿಸಿ ಅರ್ಧಚಂದ್ರ ಬಾಣದಿಂದ ಭಗದತ್ತನನ್ನು ಸಂಹರಿಸಿದನು.

ಹದಿಮೂರನೇ ದಿನದ ಯುದ್ಧದಲ್ಲಿ ದ್ರೋಣರಿಂದ ಅಭೇದ್ಯ ಚಕ್ರವ್ಯೂಹ ರಚನೆಯಾಯಿತು. ಪಾಂಡವರಿಂದ ಮಕರ ವ್ಯೂಹ ರಚನೆಯಾಯಿತು. ಚಕ್ರವ್ಯೂಹವನ್ನು ಭೇದಿಸಬಲ್ಲ ಅರ್ಜುನನನ್ನು ಸಂಶಪ್ತಕರು ಯುದ್ಧಕ್ಕೆ ಆಹ್ವಾನಿಸಿದರು. ಏಕಕಾಲಕ್ಕೆ ಎರಡು ಕಡೆಗಳಲ್ಲಿ ಯುದ್ಧ ಮಾಡುವುದು ಎಂದು ತಿಳಿಯದೆ ಅರ್ಜುನನು ಚಿಂತೆಯಲ್ಲಿರುವಾಗ ಅಭಿಮನ್ಯುವ ಚಕ್ರವ್ಯೂಹವನ್ನು ಹೊಕ್ಕನು. ಅಭಿಮನ್ಯುವು ಕೌರವರನ್ನು ತನ್ನ ಬಾಣಗಳಿಂದ ರಕ್ತದಿಂದ ತೋಯಿಸಿದನು. ಆ ಯುದ್ಧದಲ್ಲಿ ಅಭಿಮನ್ಯುವು ದ್ರೋಣರನ್ನು ಕೊಲ್ಲದೆ ಬಿಟ್ಟನು. ಕೌರವ ಹಾಗೂ ಆತನ ಉಳಿದ ಸಹೋದರರನ್ನು ಭೀಮನು ಕೊಲ್ಲುತ್ತೇನೆಂದು ಪ್ರತಿಜ್ಞೆಗೈದಿರುವುದರಿಂದ ಅವರನ್ನೂ ಕೊಲ್ಲದೆ ಬಿಟ್ಟನು. ಕರ್ಣನನ್ನು ಅರ್ಜುನನು ಕೊಲ್ಲುವುದಾಗಿ ಪ್ರತಿಜ್ಞೆಗೈದಿರುವುದರಿಂದ ಅವನಿಗೂ ಜೀವದಾನ ನೀಡಿದನು. ಕರ್ಣನ ರಕ್ಷಣೆಗೆ ಧಾವಿಸಿದ ಶಲ್ಯನಿಗೂ ಬಾಣಗಳ ರುಚಿ ತೋರಿಸಿದ ಅಭಿಮನ್ಯು. ಕೌರವನ ಲಕ್ಷೋಪಲಕ್ಷ ಸೈನಿಕರು ಅಭಿಮನ್ಯುವಿನಿಂದ ಹತರಾದರು. ಭೀಮ, ನಕುಲ, ಸಹದೇವರನ್ನು ಚಕ್ರವ್ಯೂಹ ಪ್ರವೇಶಿಸದಂತೆ ಸೈಂಧವನು ತಡೆದನು. ಅಭಿಮನ್ಯುವಿನಿಂದ ಕೌರವನ ಮಕ್ಕಳೆಲ್ಲಾ ಹತರಾದರು. ಕೌರವ ಪಕ್ಷಕ್ಕೆ ವ್ಯಾಪಕ ಹಾನಿಯಾಗುವುದನ್ನು ಮನಗಂಡ ಕೌರವನು ಕರ್ಣನನ್ನು ಕರೆದನು. ಅಭಿಮನ್ಯುವನ್ನು ಸುತ್ತುವರಿದು ಬಾಣ ಪ್ರಯೋಗವನ್ನು ಮಾಡಿದರು.

ಕರ್ಣನು ಮೋಸದಿಂದ ಅಭಿಮನ್ಯುವಿನ ಮೇಲೆ ಹಿಂದಿನಿಂದ ಬಾಣ ಪ್ರಯೋಗವನ್ನು ಮಾಡಿ ಸಾರಥಿಯನ್ನು ಕೊಂದು ಬಿಲ್ಲನ್ನು ಕತ್ತರಿಸಿದನು. ರಥದಿಂದ ಕೆಳಗೆ ಬಿದ್ದ ಅಭಿಮನ್ಯುವು ಕತ್ತಿಯಿಂದ ಶತ್ರುಗಳನ್ನು ಕತ್ತರಿಸಿ ಹಾಕಿದನು. ಹಿಂದಿನಿಂದ ಬಾಣ ಪ್ರಯೋಗಿಸಿದ ಕರ್ಣ ಅವನ ಕತ್ತಿಯನ್ನೂ ಕತ್ತರಿಸಿದನು. ಆಗ ಅಭಿಮನ್ಯು ನಾರಾಚವನ್ನು ತೆಗೆದು ಸಾವಿರಾರು ಶತ್ರುಗಳನ್ನು ಕೊಂದು ಕರ್ಣನ ರಥವನ್ನು ನೆಲಕ್ಕಪ್ಪಳಿಸಿದನು. ಕೊನೆಗೆ ಕರ್ಣನು ದಿವ್ಯಾಸ್ತ್ರದಿಂದ ಅಭಿಮನ್ಯುವಿನ ಕೈಗಳನ್ನು ಕತ್ತರಿಸಿದನು. ಆದರೂ ಧೃತಿಗೆಡದ ಅಭಿಮನ್ಯು ಚಕ್ರವನ್ನು ಕಾಲಿನಿಂದ ಒದ್ದು ಶತ್ರುಗಳನ್ನು ನಾಶ ಮಾಡಿದ. ಅದನ್ನು ಕಂಡು ಕರ್ಣ ಕಣವನ್ನು ಬಿಟ್ಟು ತೆರಳಿದ. ದುಶ್ಯಾಸನ ಮಗನು ಅಭಿಮನ್ಯುವಿನ ಉರ ಪ್ರದೇಶಕ್ಕೆ ಒದ್ದನು. ಆದರೆ ಕಾಲುಗಳಿಂದಲೇ ಆತನನ್ನು ಕೊಂದನು. ಕೊನೆಗೆ ಶಕ್ತಿಹೀನನಾದ ಅಭಿಮನ್ಯು ನೆಲಕ್ಕೆ ಬಿದ್ದು ನೀರಿಗಾಗಿ ಕರ್ಣನಲ್ಲಿ ಕೇಳಿದನು. ಆದರೆ ದಾನಶೂರ ಕರ್ಣ ಅಭಿಮನ್ಯು ಜೀವ ಹೋಗುವಾಗ ನೀರು ಕೊಡಲಿಲ್ಲ. ದ್ರೋಣದಿ ಕರ್ಣರೆಲ್ಲಾ ಸೇರಿ ಅಭಿಮನ್ಯುವನ್ನು ಮೋಸದಿಂದ ಕೊಂದು ಹಾಕಿದರು.

ಹದಿನಾಲ್ಕನೇ ದಿನದ ಯುದ್ಧದಲ್ಲಿ ಪರಶು, ತ್ರಿಶೂಲ, ಮುದ್ಗರ, ಚಕ್ರ, ತೋಮರದಿಂದ ಭೀಕರ ಯುದ್ಧ ನಡೆಯಿತು. ಭೀಮನ ಅಂದು ಭೀಕರವಾಗಿ ಯುದ್ಧ ಮಾಡಿ ಹಲವು ವೀರರನ್ನು ಕೊಂದು ಹಾಕಿದನು. ಅಂದು ಭೀಮನು ಕೌರವನ 31 ಸಹೋದರರನ್ನು ಕೊಂದು ಹಾಕಿದನು. ಕರ್ಣ ಹಾಗೂ ಭೀಮನ ಮಧ್ಯೆ ನಿಶಿತ ಬಾಣಗಳ ಪ್ರಯೋಗವಾಯಿತು. ಅಂದು ಭೂರೀಶ್ರವನ ವಧೆಯಾಯಿತು. ಸೈಂದವನನ್ನು ಸೂರ್ಯಾಸ್ತವಾಗುವ ಮೊದಲು ಕೊಲ್ಲುತ್ತೇನೆಂದು ಅರ್ಜುನ ಪ್ರತಿಜ್ಞೆ ಮಾಡಿರುವುದರಿಂದ ಕೃಷ್ಣನು ಸುದರ್ಶನವನ್ನು ಸೂರ್ಯನಿಗೆ ಯೋಗಮಾಯೆಯಿಂದ ಅಡ್ಡ ಹಿಡಿದು ಕತ್ತಲಾಗುವಂತೆ ಮಾಡಿದನು. ಕತ್ತಲಾಯಿತೆಂದು ಹೊರಬಂದ ಸೈಂಧವನನ್ನು ಅರ್ಜುನನ್ನು ಕೊಂದನು.
ಆ ದಿನ ರಾತ್ರಿಯೂ ಯುದ್ಧ ನಡೆಸುವಂತೆ ದ್ರೋಣರು ನಿಶಿಯದ್ದಕ್ಕೆ ಆದೇಶಿಸಿದರು. ನಿಶಿಯುದ್ಧ ಚತುರ ಘಟೋತ್ಕಚನು ಯುದ್ಧರಂಗಕ್ಕಿಳಿದನು. ಕೌರವನ ಪರವಾಗಿ ಸಹಸ್ರಾರು ರಕ್ಕಸರು ಯುದ್ಧಕ್ಕಿಳಿದರು. ಇವರೆನ್ನೆಲ್ಲಾ ಘಟೋತ್ಕಚನು ಕೊಂದು ಹಾಕಿದನು. ಅದೃಶ್ಯಯುದ್ಧವನ್ನೂ ಮಾಡಿದನು. ಕೊನೆಗೆ ಕರ್ಣನು ಇಂದ್ರನಿಂದ ಅನುಗ್ರಹಿತವಾದ ಶಕ್ತಾಯುಧದಿಂದ ಕೊಲ್ಲುವಂತೆ ಕೌರನು ಆದೇಶಿಸಿದನು. ಈ ಅಸ್ತ್ರವನ್ನು ಕರ್ಣನು ಅರ್ಜುನನ್ನು ಕೊಲ್ಲಲು ಇಟ್ಟಿದ್ದ. ಆದರೆ ಘಟೋತ್ಚಕನನ್ನು ಸಂಹಾರ ಮಾಡಲು ವಿಧಿ ಇಲ್ಲದೆ ಅವನ ಮೇಲೆ ಪ್ರಯೋಗಿಸಬೇಕಾಯಿತು. ವೈಜಯಂತೀ ಶಕ್ತಿಯನ್ನು ಉಪಯೋಗಿಸಿ ವಿಂಧ್ಯ ಪರ್ವತದಂತಿದ್ದ ಘಟೋತ್ಚಚನನ್ನು ಕರ್ಣನು ಸಂಹರಿಸಿದನು.

ಹದಿನೈದನೇ ದಿನದ ಯುದ್ಧದಲ್ಲಿ ದ್ರೋಣಾರ್ಜುನರಲ್ಲಿ ಭಾರೀ ಯುದ್ಧ ನಡೆಯಿತು. ದ್ರೋಣರನ್ನು ಕೊಲ್ಲಲು ಅಶ್ವತ್ಥಾಮ ಎನ್ನುವ ಆನೆಯು ಸತ್ತಿತು ಎಂದು ಹೇಳಿ ಅವರಿಗೆ ಕರ್ಣಾಘಾತವಾಗುವಂತೆ ಮಾಡಿದಾಗ ದ್ರೋಣರು ಶರಸನ್ಯಾಸ ಮಾಡಿದರು. ತನ್ನ ಮಗ ಅಶ್ವತ್ತಾಮನೇ ಸತ್ತನೆಂದು ಅವರು ನಂಬಿದರು. ಇವರನ್ನು ಯುದ್ಧದಲ್ಲಿ ಕೊಲ್ಲಲಾಯಿತು. ಈ ಬಗ್ಗೆ ತಿಳಿದುಕೊಂಡ ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಪ್ರಯೋಗಿಸಿದ. ಅದು ಮಹಾರೂಪವನ್ನು ತಾಳಿ ಪಾಂಡವರನ್ನು ಕೊಲ್ಲಲು ಬಂದಾಗ ಕೃಷ್ಣನ ಆಣತಿಯಂತೆ ಎಲ್ಲರೂ ಬಾಣಗಳನ್ನು ಕೆಳಗಿಟ್ಟು ಸಾಷ್ಟಾಂಗ ನಮಿಸಿದಾಗ ಆ ಅಸ್ತ್ರವು ಶಮನಗೊಂಡಿತು.

ಹದಿನಾರನೇ ದಿವಸದ ಯುದ್ಧದಲ್ಲಿ ಕರ್ಣನು ಸೇನಾಧಿಪತ್ಯ ವಹಿಸಿದನು. ಭೀಮ ಹಾಗೂ ಅಶ್ವತ್ಥಾಮರಿಬ್ಬರು ಮಹಾಸ್ತ್ರಗಳ ಪ್ರಯೋಗ ಮಾಡಿದರು. ಕೊನೆಗೆ ಅಶ್ವತ್ಥಾಮನು ಅರ್ಜುನನಲ್ಲಿ ಸಂಗ್ರಾಮಕ್ಕೆ ಇಳಿದನು. ಕೃಷ್ಣಾರ್ಜುನರನ್ನು ನೂರು ಬಾಣಗಳಿಂದ ನೋಯಿಸಿದನು. ಆಗ ಅರ್ಜುನನು ಎಲ್ಲಾ ಕಡೆಗಳಲ್ಲಿ ಅಲಗುಳ್ಳ ಸರ್ವತೋಧಾರ ಅಸ್ತ್ರವನ್ನು ಪ್ರಯೋಗಿಸಬೇಕಾಯಿತು. ಮಂತ್ರಾಸ್ತ್ರದ ಪ್ರಯೋಗವೂ ನಡೆಯಿತು. ಅಶ್ವತ್ಥಾಮನು ಎಂಟು ಎತ್ತಿನ ಗಾಡಿಯಲ್ಲಿ ಹೊತ್ತುತರಬಹುದಾದ ಬಾಣಗಳನ್ನು ಕ್ಷಣದಲ್ಲಿ ವೈರಿಯ ಮೇಲೆ ಪ್ರಯೋಗಿಸಬಲ್ಲವನಾಗಿದ್ದನು.

ಹದಿನೇಳನೆಯ ದಿವಸದ ಯುದ್ಧದಲ್ಲಿ ಶಲ್ಯನನ್ನು ಸಾರಥಿಯನ್ನಾಗಿಸಿ ಕರ್ಣನು ಯುದ್ಧಕ್ಕೆ ಹೊರಟನು. ಎರಡೂ ಕಡೆಗಳಿಂದ ವ್ಯೂಹ ರಚನೆಯಾಯಿತು. ಕರ್ಣನು ಧರ್ಮರಾಯ, ಭೀಮ, ನಕಲುನೊಂದಿಗೆ ಯುದ್ಧ ಮಾಡಿ ಮುಂದೆ ಸಾಗಿದನು. ಅದೇ ದಿನ ಭೀಮನು ದುಶ್ಯಾಸನನನ್ನು ಹಾಕಿದ ಪ್ರತಿಜ್ಞೆಯಂತೆ ಆತನ ಹೊಟ್ಟೆಯನ್ನು ಸೀಳಿ, ಕರುಳನ್ನು ಮಡದಿದ್ರೌಪತಿಗೆ ಮುಡಿದು, ಅವನ ಹಲ್ಲನ್ನು ಉದುರಿಸಿ ಅದರಿಂದಲೇ ಆಕೆಯನ್ನು ತಲೆಯನ್ನು ಬಾಚಿ ಆತನನ್ನು ಕೊಂದನು. ಕೊನೆಗೆ ಕರ್ಣ ಹಾಗೂ ಅರ್ಜುನನ ಮಧ್ಯೆ ಯುದ್ಧ ನಡೆಯಿತು. ಇಬ್ಬರಿಂದಲೂ ಮಹಾಬಾಣಗಳ ಪ್ರಯೋಗ ನಡೆಯಿತು. ಅರ್ಜುನನು ಆಗ್ನೇಯಾಸ್ತ್ರ ಪ್ರಯೋಗಿಸಿದರೆ, ಅದಕ್ಕೆ ಪ್ರತಿಯಾಗಿ ಕರ್ಣನು ಪ್ರಜ್ವಲಿಸುವ ಅಗ್ಯಸ್ತ್ರಗಳನ್ನು ಪ್ರಯೋಗಿಸಿದನು. ಹೊಗೆಯನ್ನು ಕಾರುವ ಕರಿ ಮೋಡಗಳಂತಾಗುವ ಅಸ್ತ್ರವನು ಅರ್ಜುನನು ಎಸೆದನು. ಅದರೊಂದಿಗೆ ಕ್ಷುರಪ, ಅಂಜಲೀಕ, ಅರ್ಧಚಂದ್ರ, ನಾರಾಚ, ವರಾಹಕರ್ಣ, ಮೊದಲಾದ ದಿವ್ಯಾಸ್ತ್ರಗಳನ್ನು ಎಸೆದನು. ಆದರೆ ಇವೆಲ್ಲವನ್ನೂ ಕರ್ಣನು ತುಂಡರಿಸಿದನು. ಕರ್ಣನು ಬಾಣವನ್ನು ಅರ್ಧ ಚಂದ್ರಾಕೃತಿಯಲ್ಲಿ ಬಗ್ಗಿಸಿ ಭೀಕರ ಶಬ್ದವನ್ನುಂಟು ಮಾಡುವ ಭಾರ್ಗವಾಸ್ತ್ರವನ್ನು ಪ್ರಯೋಗಿಸಿದ. ಅದರಿಂದ ಅರ್ಜುನನ ವಜ್ರಾಸ್ತ್ರ ಕತ್ತರಿಸಲ್ಪಟ್ಟಿತು. ಜೊತೆಗೆ ನಿಶಿತಾಸ್ತ್ರಗಳ ಪ್ರಯೋಗವೂ ನಡೆಯಿತು. ಕರ್ಣನು ಅರ್ಜುನನ ಮೇಲೆ ಸರ್ಪಬಾಣವನ್ನು ಹೂಡಿದನು. ಎಲ್ಲೆಡೆ ವಿಷಜ್ವಾಲೆ ಹಬ್ಬಿತು. ಎಲ್ಲರೂ ಗರುಡ ಪಂಚಾಕ್ಷರಿ ಮಂತ್ರವನ್ನು ವಾಚಿಸಿದರು. ಆದರೆ ಕೃಷ್ಣನು ರಥವನ್ನು ತಗ್ಗಿಸಿದ ಕಾರಣ ಸರ್ಪಾಸ್ತ್ರವು ಅರ್ಜುನನ ಕಿರೀಟವನ್ನು ಕಿತ್ತುಕೊಂಡಿತು. ಯುದ್ಧದಲ್ಲಿ ಕರ್ಣನ ರಥವು ಮುಗ್ಗರಿಸಿ ಬಿದ್ದಾಗ ನೆಲಕ್ಕೆ ಬಿದ್ದ ಕರ್ಣನನ್ನು ಪ್ರಾಂಜಲೀಕ ಶರದಿಂದ ಅರ್ಜುನನು ಕೊಂದನು.

ಹದಿನೆಂಟನೆಯ ದಿನದ ಯುದ್ಧದಲ್ಲಿ ಕೌರವನ ಸೇನಾಧಿಪತ್ಯವನ್ನು ಶಲ್ಯನು ವಹಿಸಿದನು. ಇವನನ್ನು ಮುಗಿಸಲು ಸ್ವತಃ ಧರ್ಮರಾಯನೇ ಮುಂದೆ ಬಂದನು. ಪಾಂಡವರಿಂದ ಸದಾ ಪೂಜಿಸಲ್ಪಡುವ ವಿಶ್ವಕರ್ಮನು ನಿರ್ಮಿಸಿದ ಶಕ್ತಾಯುಧವನ್ನು ಧರ್ಮರಾಯನು ತೆಗೆದುಕೊಂಡು ಶಲ್ಯನನ್ನು ಕೊಂದನು. ಯುದ್ಧದಲ್ಲಿ ಸೋತ ಧುರ್ಯೋಧನನು ದ್ವೈಪಾಯನ ಸರೋವರವನ್ನು ಪ್ರವೇಶಿಸಿದನು. ಇವನು ಅಡಗಿರುವ ಸುದ್ದಿ ತಿಳಿದ ಪಾಂಡವರು ಅವನ್ನು ಅಲ್ಲಿಂದ ಮೇಲಕ್ಕೆಬ್ಬಿಸಿದರು. ಭೀಮನು ಗಧಾಯುದ್ಧದಿಂದ ಕೌರನ ತೊಡೆಯನ್ನು ಮುರಿದುಹಾಕಿದನು. ಕೌರವ ಅರೆಜೀವನಾಗಿದ್ದನು. ಕೊನೆಗೆ ಅಶ್ವತ್ಥಾಮನು ಸೇನಾಧಿಪತ್ಯವನ್ನು ಪಡೆದನು. ಕತ್ತಲಾಗುತ್ತಿದ್ದಂತೆ ದ್ರೌಪತಿಯ ಐವರು ಪುತ್ರರಿದ್ದಲ್ಲಿಗೆ ಅಹೋರಾತ್ರಿ ಅಶ್ವತ್ಥಾಮನು ಮೋಸದಿಂದ ಹೊಕ್ಕನು. ಧರ್ಬೆಯನ್ನೇ ಮಂತ್ರದಿಂದ ಮಹಾ ಅಸ್ತ್ರವನ್ನಾಗಿಸುವ ಶಕ್ತಿ ಇವನ್ನಲ್ಲಿತ್ತು. ಶಿಬಿರವನ್ನು ರಕ್ಷಿಸುತ್ತಿದ್ದ ಶಿವನ ಮಹಾಭೂತಗಣದಿಂದ ಪಾರಾಗಲು ಶಿವನನ್ನು ಮೆಚ್ಚಿಸಿದ ಅಶ್ವತ್ಥಾಮನು ಶಿಬಿರ ಪ್ರವೇಶ ಮಾಡಿದನು. ಶಿಬಿರದಲ್ಲಿ ಸಿಕ್ಕಸಿಕ್ಕ್ವರನ್ನೆಲ್ಲಾ ಕೊಂದು ಹಾಕಿದನು. ದ್ರೌಪತಿಯ ಐವರು ಮಕ್ಕಳನ್ನು ಕೊಲೆ ಮಾಡಿದನು. ದೃಷ್ಟದ್ಯುಮ್ನ, ಶಿಖಂಡಿಯನ್ನು ಅನ್ಯಾಯವಾಗಿ ಕೊಲೆ ಮಾಡಿದನು. ಮರುದಿನ ಈ ವಿಷಯವನ್ನು ಅರೆಜೀವದಲ್ಲಿದ್ದ ಧುರ್ಯೋಧನನಿಗೆ ತಿಳಿಸಿ ಕಾಡಿಗೆ ತೆರಳಿದನು. ಧುರ್ಯೋಧನನು ಮೃತನಾದನು.
ಅಶ್ವತ್ಥಾಮನಿಗೆ ಬುದ್ಧಿ ಕಲಿಸಲು ಪಂಚಪಾಂಡವರು ಅವನ ಬೆನ್ನುಹತ್ತಿದರು. ಇವನ ಬಳಿ ಬ್ರಹ್ಮಶಿರ ಎನ್ನುವ ಮಹಾಸ್ತ್ರ ಇತ್ತು. ಪಾಂಡವರನ್ನು ನಾಶ ಮಾಡಲಿ ಎಂದು ದರ್ಬೆಗೆ ಶಕ್ತಿ ತುಂಬಿ ಆ ಅಸ್ತ್ರವನ್ನು ಅಶ್ವತ್ಥಾಮ ಪ್ರಯೋಗಿಸಿದನು. ಇಡೀ ಲೋಕವನ್ನು ಸುಡಲು ಮುಂದಾಯಿತು. ಆ ಅಸ್ತ್ರವನ್ನು ಶಮನಮಾಡಲು ಅರ್ಜುನನು ಬ್ರಹ್ಮಾಸ್ತ್ರವನ್ನು ಹೂಡಿದನು. ಈ ಬಾಣಗಳೆರಡರಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಇಡೀ ಜಗತ್ತೇ ನಾಶವಾಗಲೆತ್ನಿಸಿತು. ವೇದವ್ಯಾಸ ಮುನಿಗಳಾದಿಯಾಗಿ ಅರ್ಜುನನಲ್ಲಿ ಇಡೀ ಲೋಕವನ್ನೇ ದಹಿಸುವ ಬ್ರಹ್ಮಾಸ್ತ್ರವನ್ನು ಶಮನಗೊಳಿಸುವಂತೆ ಕೇಳಿಕೊಂಡರು. ಅಂತೆಯೇ ಅರ್ಜುನ ಬಾಣವನ್ನು ಉಪಸಂಹಾರ ಮಾಡಿದನು. ಆದರೆ ಅಶ್ವತ್ಥಾಮನಿಗೆ ಅದರ ಉಪಸಂಹಾರ ತಿಳಿದಿರಲಿಲ್ಲ. ಕೊನೆಗೆ ಅದು ಉತ್ತರೆಯ ಗರ್ಭವನ್ನು ಪ್ರವೇಶಿಸಿತು. ಆದರೆ ಕೃಷ್ಣನು ಆ ಮಗುವಿಗೆ ಜೀವದಾನ ನೀಡಿದನು. ಆ ಮಗುವೇ ಪರೀಕ್ಷಿತ ಮಹಾರಾಜನಾದನು. ಕೊನೆಗೆ ಅಶ್ವತ್ಥಾಮನಿಗೆ ಪಾಪದ ಫಲವಾಗಿ ಮೂರು ಸಹಸ್ರ ಸಂವತ್ಸರ ರೋಗಿಷ್ಟನಾಗಿ ಅಲೆದಾಡುತ್ತಾ ಇರು ಎನ್ನುತ್ತಾನೆ. ಕೊನೆಗೆ ಅಶ್ವತ್ಥಾಮನು ತಲೆಯಲ್ಲಿದ್ದ ಮಣಿಯನ್ನು ಪಾಂಡವರಿಗೆ ಒಪ್ಪಿಸಿ ಕಾಡಿಗೆ ತೆರಳುತ್ತಾನೆ. ಅಶ್ವತ್ಥಾಮ ಇಂದಿಗೂ ಉತ್ತರಭಾರತದಲ್ಲಿ ಸಂಚರಿಸುತ್ತಾ ಇದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಕೌರವರ ನಾಶವಾಗಿ ಪಾಂಡವರು ರಾಜ್ಯಭಾರ ನಡೆಸಿದರು.
ಈ ಯುದ್ಧದಲ್ಲಿ ಒಂದುನೂರ ಅರುವತ್ತಾರು ಕೋಟಿ ಇಪ್ಪತ್ತು ಸಾವಿರ ಯೋಧರು ಹತರಾದರು. ಇಪ್ಪತ್ತನಾಲ್ಕು ಸಾವಿರದ ನೂರೈವತ್ತು ಮಂದಿ ನಾಪತ್ತೆಯಾಗಿದ್ದರು. ಹೀಗೆ ಮಹಾಭಾರತದ ಯುದ್ಧದಲ್ಲಿ ಮಹಾ ಅಸ್ತ್ರಗಳು ಪ್ರಯೋಗವಾದರೂ ಅವುಗಳ ಸರಿಯಾದ ಅನುಸಂಧಾನದಿಂದ ಈ ಜಗತ್ತಿನ ನಾಶ ಸಂಭವಿಸಲಿಲ್ಲ. ಒಂದು ವೇಳೆ ಮುಂದೆ ಯುದ್ಧ ನಡೆದರೆ ಶತ್ರು ರಾಷ್ಟ್ರಗಳು ಪ್ರಯೋಗಿಸುವ ಅಸ್ತ್ರವನ್ನು ಅನುಸಂಧಾನ ಮಾಡುವ ವಿದ್ಯೆಯನ್ನು ಕಲಿಯಬೇಕು. ಇಲ್ಲವಾದರೆ ಪ್ರಪಂಚವೇ ನಾಶವಾಗಿಬಿಡಬಹುದು.

ಗಿರೀಶ್

Tags

Related Articles

FOR DAILY ALERTS
Close