ಇತಿಹಾಸ

ಅದೆಷ್ಟು ಪಾಪಿಗಳನ್ನು ನರಕಕ್ಕೆ ಕಳಿಸಿದ್ದೇವೋ ಸ್ವಲ್ಪ ಎಣಿಸಿ ನೋಡಿ!!! ರಾಶಿಗಟ್ಟಲೆಯಿದ್ದ ಶತ್ರುಗಳ ಹೆಣ ನೋಡಿ ಮುಗುಳ್ನಕ್ಕ ಎಡಗೈ ವೀರ‌ಯೋಧ!!”

 

ಅಯ್ಯೋ.. ಅದು ನಿಮಗೆ ಅರಿಯದೇ?? ನಾನು 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮನಾದೆ.

1858ರಲ್ಲಿ ಪುನ: ಹುಟ್ಟುಬಂದೆ – ಮತ್ತೆ ಹೋರಾಡಲು. ಆಗ ಪಾಪ ದೇವರಿಗೆ ಬಲಗೈ ಜೋಡಿಸಲೂ ಸಮಯವಿರಲಿಲ್ಲ.” – ಹುಟ್ಟುತ್ತಲೇ ಅಂಗವಿಕಲನಾಗಿದ್ದೇ
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೂಫಿ ಅಂಬಾ ಪ್ರಸಾದರ‌ ಹೃದಯಸ್ಪರ್ಶಿ ನುಡಿಗಳಿವು. ಅವರ ಪ್ರತೀ ನುಡಿಯಲ್ಲೂ ದೇಶಭಕ್ತಿಯ‌ ಜ್ವಾಲೆ
ಹೊರಹೊಮ್ಮುತ್ತಿತ್ತು. ಆ ಕಾಲದಲ್ಲಿ ನಾವು ಬದುಕಿದ್ದೆವೋ ಇಲ್ಲವೋ ಆ ಭಗವಂತನಿಗೇ ಗೊತ್ತು. ಆದರೆ ಈಗಲೂ ಅಂತಹ ವೀರರನ್ನು ನೋಡುವ, ಸಂದರ್ಶಿಸುವ
ಸೌಭಾಗ್ಯವನ್ನಂತು ದಯಪಾಲಿಸಿದ್ದಾನೆ ಭಗವಂತ. ಈತನ ವೀರ ಕಥನವನ್ನು ಓದುವಾಗ, ಕೇಳುವಾಗಲೆಲ್ಲಾ ಅಂಬಾ ಪ್ರಸಾದರೇ ಮತ್ತೆ ಹುಟ್ಟಿ ಬಂದಿದ್ದರೆಂಬ ಭಾವನೆ
ಬರುತ್ತದೆ.

ದಿನಾಂಕ: ಫೆಬ್ರುವರಿ 1948.

ಸ್ಥಳ : ನೌಶೇರಾ, ಕಾಶ್ಮೀರ.

ಬಹಳ ಕುತೂಹಲದಿಂದ ನಾಯಕ ಕೃಷ್ಣ ಸೋನವಾಣೆ ಮುಂದುಗಡೆಯಿದ್ದ ಬೆಟ್ಟಗಳ ಕಡೆಗೆ ದೃಷ್ಟಿ ಹರಿಸಿದ. “ದೇವರೇ, ನನಗೆ ವಿಫಲತೆ ಬಾರದೇ ಇರಲಿ”,
ಮನಸ್ಸಿನಲ್ಸಿಯೇ ಪ್ರಾರ್ಥಿಸಿದ ಆತ.

ತನ್ನ ಮೇಲಿದ್ದ ಜವಾಬ್ದಾರಿಯ ಪೂರ್ತಿ ಅರಿವು ಆತನಿಗಿತ್ತು. ಬಹಳ ಆಯಕಟ್ಟಿನ ಜಾಗದಲ್ಲಿದ್ದ ಮುಂಚೂಣಿ ರೇಖೆಯಲ್ಲಿನ ಮೀಡಿಯಮ್ ಮಿಷಿನ್ ಗನ್ ಠಾಣೆಯೊಂದಕ್ಕೆ ಮುಖ್ಯಸ್ಥನಾಗಿದ್ದ. ಎದುರಿಗೆ ಪ್ರಬಲವಾದ ಶತ್ರುಗಳ ನೆಲೆಯಿತ್ತು. ಅವರು ಭಾರತೀಯ ಪಡೆಗಳಿಗಿಂತ ‌ಅದೆಷ್ಟೋ‌ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸ್ವಲ್ಪ ಮುಂಚೆ ಕಮಾಂಡಿಂಗ್ ಅಧಿಕಾರಿ ಮಾತನಾಡುತ್ತಾ ಹೇಳಿದ್ದ :

“ನಾಯಕ್, ನೆನಪಿಡು.‌ ನಿನ್ನ ಠಾಣೆ ಮುರಿದುಬಿದ್ದರೆ, ಹಿಂದೆ ಇರುವ ನೆಲೆಗಳಿಗೆ ಶತ್ರುಗಳನ್ನು ತಡೆಯುವುದು ಅಸಾಧ್ಯವೇ ಆದೀತು.”

ಹೌದು.ನಿಜ. ಆ ಮಾತು‌ ಸೋನೆವಾಣೆಗೆ ನೆನಪಿತ್ತು. ತಕ್ಷಣ ಘರ್ಜಿಸಿ ಹೇಳಿದ. – ” ಅಗೋ ಬಂದರು, ಹೊಡೆಯಿರಿ.”

ಮೂರೂ ದಿಕ್ಕುಗಳಿಂದ ದಾಳಿಗಾರರು ಆಕ್ರಮಣ ಹೂಡಿದರು. ಸಾವಿರದಷ್ಟಿತ್ತು‌ ಅವರ ಸಂಖ್ಯೆ. ಅವರು ರಕ್ಷಣಾವಲಯದೊಳಗೆ ಕಾಲಿಡುತ್ತಲೇ ನಾಯಕನ ಸಣ್ಣ ಪಡೆ‌ ಕಾರ್ಯಮಗ್ನವಾಯಿತು. ದಾಳಿಗಾರರ ಪ್ರಥಮ ಗುಂಪು ಹತ್ತಿರ ಬಂದಾಗ ಮಶಿನ್ ಗನ್ ಕಾರಪ್ರಾರಂಭಿಸಿತು.

ತನ್ನ ಸಂಗಡಿಗರ ಸಾಹಸ ಕಂಡು ಹಮ್ಮೆಪಟ್ಟ. “ಭೇಷ್, ಮುಂದುವರಿಸಿ” ಸ್ನೇಹತರ ಬೆನ್ನು‌ತಟ್ಟಿದ. ಒಂದೊಂದು ಸುತ್ತು ಹೊಡೆತಕ್ಕೂ ಹತ್ತಿಪ್ಪತ್ತು ಶತ್ರುಗಳ ಹೆಣ
ಉರುಳುತ್ತಿತ್ತು.

ಪ್ರಾಣದ ಹಂಗು ಬಿಟ್ಟು ದಾಳಿಗಾರರು ದಾಳಿ ಮಾಡುತ್ತಿದ್ದರು. ಆದರೂ ಭಾರತೀಯ ಯೋಧರ ಹೊಡೆತಕ್ಕೆ ಹಿಮ್ಮೆಟ್ಟಿದರು ಶತ್ರುಗಳು. ಅಷ್ಟರಲ್ಲಿ,

” ಹಾಯ್…!!”

ತನ್ನ ಬಳಿಯೇ ಇದ್ದ ಯುದ್ಧ ಮಾಡುತ್ತಿದ್ದ ಸೈನಿಕ ಗುಂಡು ತಾಗಿ ಕೂಗಿದ. ಸೋನವಾಣೆ ತನ್ನ ಸ್ವಂತ ರಕ್ಷಣೆಯನ್ನೂ ‌ನಿರ್ಲಕ್ಷಿಸಿ ಸಹಾಯಕ್ಕೆ ಧಾವಿಸಿದ.

ಅದೇ ಸಮಯಕ್ಕೆ ಸರಿಯಾಗಿ ಬಹು ಹತ್ತಿರದಲ್ಲೇ ಶತ್ರುವಿನ ಕಡೆಯಿಂದ ಒಂದು ಮಶಿನ್‌ಗನ್ ಅಬ್ಬರಿಸಿತು. ಅದು ಸಿಡಿಗುಂಡುಗಳು ಅತೀವ ರಭಸದಿಂದ
ಸೋನವಾಣೆಯ ಬಲಬದಿಯಲ್ಲಿ ಹಾದುಹೋದವು. ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ಅವನ ಬಲತೋಳು ಛಿದ್ರಛಿದ್ರವಾಗಿ ಹಾರಿಹೋಗಿತ್ತು. ಕೈ ಇತ್ತೆಂಬುದಕ್ಕೆ ಸಾಕ್ಷಿಯಾಗಿ ಭುಜದಿಂದ ಒಂದು ತುಣುಕು ಮೂಳೆ ಮಾತ್ರ ನೇತಾಡುತ್ತಿತ್ತು..!!

ಅನೇಕ ಕ್ಷಣಗಳ ಕಾಲ ಭಾರತದ ಮಶಿನ್ ಗನ್ ಗಳು‌ ಸದ್ದೇ‌ ಮಾಡಲಿಲ್ಲ. ತನ್ನ ನಾಯಕನ ಸ್ಥಿತಿಯನ್ನು‌ ನೋಡುವುದರಲ್ಲೇ ಸಂಗಡಿಗರು ನಿರತರಾದರು. ಇದಕ್ಕಿಂತ‌ ಉತ್ತಮ ಅವಕಾಶ ಶತ್ರಗಳಿಗೆ ಲಭಿಸೀತೇ?? “ಅಲ್ಲಾಹೋ ಅಕ್ಬರ್, ನಡೆಯಿರಿ,” ಎನ್ನುತ್ತಾ‌ ಮುನ್ನುಗ್ಗಿ ಬಂದರು.

ಕೆಲವು ಸಮಯಗಳ ನಂತರ ಸೋನವಾಣೆಯ‌ ಎದೆಬಡಿತ ಸ್ಥಿಮಿತಕ್ಕೆ ಬಂದಿತು. ಎದುರಿಗೆ ನೋಡಿದ. ಒಂದು ನಿಮಿಷ‌ ತಡಮಾಡಿದರೂ ನಮ್ಮ ಠಾಣೆಗೆ ಅವರು
ನುಗ್ಗುತ್ತಾರೆಂಬುದು ಆತನಿಗೆ ಖಚಿತವಾಯಿತು. ಗಾಯಗೊಂಡಿದ್ದ ಸ್ನೇಹಿತನನ್ನು ಪಕ್ಕಕ್ಕೆ ತಳ್ಳಿದ.ಪಾಪ.. ನಾಯಕನಿಗೆ ಸಾಯುವುದಕ್ಕೂ ಸಮಯವಿರಲಿಲ್ಲ. ಇನ್ನು
ರಕ್ತಸೋರುತ್ತಿದ್ದ ಬಲಗೈಯನ್ನು ನೋಡುತ್ತಾ ಕುಳಿತಾನೆಯೇ?? ತಕ್ಷಣ ತನ್ನ ಮಶೀನ್ ಗನ್ ಗೆ ಆಹಾರ ನೀಡಿದ. ಗರ್ಜಿಸುವ ಶಕ್ತಿಯನ್ನು ದಯಪಾಲಿಸಿದ. ಶತ್ರುಗಳ ಆಹುತಿ ಮಾಡಲು ಪ್ರಾರಂಭಿಸಿದ.

ಬಹಳ ಸಮಯ‌ ಕಳೆದಿರಲಿಲ್ಲ.

” ಬೂಮ್….. ಬೂಮ್ !”

ಒಂದು ಗ್ರೆನೇಡ್ ಗಾಳಿಯಲ್ಲಿ ತೂರಿ ಬಂದು ಮಶೀನ್ ಗನ್ನಿನ ಮೇಲೆ ಬಿದ್ದು‌ ಸಿಡಿಯಿತು. ಸೋನವಾಣೆ ಕುಳಿತಂತೆಯೇ ಒಂದು ಹೆಜ್ಜೆ ಹಿಂದಕ್ಕೆ ಕುಪ್ಪಳಿಸಿದ. ಪ್ರಮುಖ ಶಸ್ತ್ರ – ಆ ಮಶಿನ್ ಗನ್ ರಿಪೇರಿಗೆ ಸಾಧ್ಯವಿಲ್ಲದಷ್ಟು ಘಾಸಿಯಾಗಿತ್ತು.

ಆಗ ಶತ್ರುವಿನ ಅಟ್ಟಹಾಸಕ್ಕೆ ಪಾರವೇ ಇರಲಿಲ್ಲ. ಸರ್ವರೂ ಒಟ್ಟಾಗಿ ನುಗ್ಗಲು ಸಿದ್ಧರಾದರು. ಕಡೆಗಾಲ ಬಂದಂತೆಯೇ ಭಾಸವಾಯಿತು.

ಆದರೆ ನಾಯಕ ಕೃಷ್ಣ ಸೋನವಾಣೆಯ ಜೀವ ಇನ್ನೂ ಉಳಿದಿತ್ತು.‌ಅದಿರುವಲ್ಲಿಯವರೆಗೆ ಎಲ್ಲಿಯ‌ ಸೋಲು?? ತನ್ನವರನ್ನು ಕುರಿತು ಹೇಳಿದ –

” ನೋಡಿ, ಏನೇ ಆದರೂ ಈ ಕುನ್ನಿಗಳನ್ನು ಮುಂದೆ ಬಿಡಕೂಡದು..”

ಹೇಳಹೇಳುತ್ತಲೇ ಅವನು ಗ್ರೆನೇಡ್ ಗೆ ಕೈಹಾಕಿದ. ತನ್ನ ಎಡಗೈಯಿಂದಲೇ ಒಂದೊಂದಾಗಿ ಗುರಿಯಿಟ್ಟೆಸೆಯ ತೊಡಗಿದ. ಅವನ ಸಂಗಡಿಗರೂ ಹಾಗೇ ಮಾಡಿದರು. ಶತ್ರುಗಳು ಮುಂದಿಟ್ಟ ಹೆಜ್ಜೆ‌ ಹಿಂದೆ ಕಿತ್ತರು.

ಅವನು ಉತ್ಸಾಹದಿಂದ ನುಡಿಗಳಾನ್ನಾಡುತ್ತಿದ್ದ. ದಾಳಿಗಾರರ ದೇಹಗಳು ಚಿಂದಿಚಿಂದಿಯಾಗಿ ಬೀಳುತ್ತಿದ್ದವು. ಸೋನವಾಣೆಯ ಮೊಂಡುತೋಳಿನಿಂದ ರಕ್ತ‌ ಒಂದೇ ಸಮನೆ ಸುರಿಯುತ್ತಿತ್ತು. ಮಿತಿಮೀರಿ ದಣಿದುಹೋಗಿದ್ದ. ಆದರೆ ಅವನ ಎಡಗೈ ಯಂತ್ರದಂತೆ‌ ಕೆಲಸ ಮಾಡುತ್ತಿತ್ತು. – ಗ್ರೆನೇಡ್ ತೆಗೆಯುವುದು ಮತ್ತು‌ ಗುರಿ ನೋಡಿ ಎಸೆಯುವುದು !

ಕಡೆಗೂ‌ ಈ ಭೀಕರ ಹೋರಾಟ‌ ಅಂತ್ಯವಾಯಿತು. ದಾಳಿಯನ್ನು ಬಗ್ಗುಬಡಿದು ‌ಹಿಂದಕ್ಕಟ್ಟಲಾಯಿತು. ಭಾರತೀಯರ ಪೆಟ್ಟು ತಾಳಲಾರದೇ ದಾಳಿಗಾರರು ದಿಕ್ಕುಪಾಲಾಗಿ‌ ಓಡಿಹೋದರು.

ಸೋನವಾಣೆ ‌ಮುಂದೆ ಬಿದ್ದಿದ್ದ ರಾಶಿಗಟ್ಟಲೇ‌ ಹೆಣಗಳನ್ನು ತೃಪ್ತಿಯಿಂದ ನೋಡಿದ. ತನ್ನವರನ್ನು ಕರೆದು ಕೇಳಿದ – ” ಅದೆಷ್ಟು‌ ಪಾಪಿಗಳನ್ನು ನರಕಕ್ಕೆ ಕಳಿಸಿದ್ದೇವೋ ಸ್ವಲ್ಪ‌ಯೆಣಿಸಿ ನೋಡಿ!!”

ಒಟ್ಟು ಸಂಖ್ಯೆ ಸಾರ್ಥಕವಾಗುವಷ್ಟಿತ್ತು – ಏಳುನೂರಕ್ಕೂ ಕೊಂಚ‌ ಹೆಚ್ಚು !!

ನಂತರ ನಾಯಕ ಕೃಷ್ಣ ಸೋನವಾಣೆಗೆ ಮಹಾವೀರ ಚಕ್ರ ಪುರುಸ್ಕಾರ ನೀಡಿ ನಮ್ಮ ನಾಡು ಗೌರವಿಸಿತ್ತು.

ಆತನಿಗೆ ನಮ್ಮ ಪರವಾಗಿ ಒಂದು ಸಲಾಮ್!!!

– ವಸಿಷ್ಠ

Tags

Related Articles

Close