ಪ್ರಚಲಿತ

ಆಮಿಷಕ್ಕೆ ತುತ್ತಾಗಿ ಮತಾಂತರ‌ವಾಗುವ ಪರಿಶಿಷ್ಟ ವರ್ಗಕ್ಕೆ ಕೇಂದ್ರ ಸರ್ಕಾರ‌ದ ಪಾಠ

ಅಖಂಡ ಭಾರತ ಖಂಡ ತುಂಡವಾದದ್ದು ಮತದ, ಧರ್ಮದ ಆಧಾರದಲ್ಲಿ‌ಯೇ. ಅಲ್ಲಿಂದ ಈ ವರೆಗೆ ಭಾರತ ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಎಲ್ಲಾ ಧರ್ಮದವರಿಗೂ ಆಶ್ರಯ ನೀಡುವಲ್ಲಿ ಬೇಧ ಮಾಡಿಲ್ಲ. ಆದರೂ ದುರಾದೃಷ್ಟ ಎಂಬಂತೆ ಭಾರತದ‌ಲ್ಲಿರುವ ಹಿಂದೂಗಳಂತೆ ಇತರ ಧರ್ಮದ‌ ಕೆಲವರಲ್ಲಿ ಸಹಿಷ್ಣುತೆ, ಏಕತಾ ಮನೋಭಾವ ಈ ವರೆಗೂ ಬಂದಿಲ್ಲ ಎಂಬುದು ದುರಂತ.

ಅಂದ ಹಾಗೆ ಬ್ರಿಟಿಷರು ಭಾರತವನ್ನು ಒಡೆದು ಆಳಿದ ಬಳಿಕ ಈ ದೇಶದಲ್ಲಿ ಧರ್ಮ ಧರ್ಮದ ನಡುವೆ ಕಲಹ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ‌ರುವ ಕೆಲವು ಕ್ರೈಸ್ತರು, ಮುಸಲ್ಮಾನ‌ರು ತಮ್ಮ ಧರ್ಮ‌ಕ್ಕೆ ಬೇರೆ ಧರ್ಮದ‌ವರನ್ನು ನಾನಾ ತರದ ಆಮಿಷವನ್ನೊಡ್ಡಿ ಮತಾಂತರ ಮಾಡುತ್ತಿರುವ ಸಂಗತಿಗಳು ಪ್ರತಿನಿತ್ಯ ಕೇಳುವಂತಾಗಿದೆ. ಹಣ, ಆಸ್ತಿ, ಲವ್ ಜಿಹಾದ್ ಹೀಗೆ ನಾನಾ ರೀತಿಯ ಆಮಿಷಗಳ ಮೂಲಕ ಹೆಚ್ಚಾಗಿ ಹಿಂದೂ ಧರ್ಮೀಯರನ್ನೇ ಟಾರ್ಗೆಟ್ ಮಾಡಿ, ಬಲವಂತ‌ದ ಮತಾಂತರದಂತಹ ಚಟುವಟಿಕೆಗಳು ನಡೆಯುತ್ತಲೇ ಇದೆ ಎನ್ನುವುದು ದುರಂತ. ಇದಕ್ಕೆ ಕಡಿವಾಣ ಹಾಕುವುದು ಹೇಗೆ?, ಇಂತಹ ಕೃತ್ಯಕ್ಕೆ ಬಲಿಯಾಗುತ್ತಿರುವವರನ್ನು ಮಾತೃ ಧರ್ಮದಲ್ಲಿ‌ಯೇ ಉಳಿಸಿಕೊಳ್ಳುವುದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆ.

ಅಂದ ಹಾಗೆ ಪ್ರಮುಖವಾಗಿ ಹಿಂದೂ ಧರ್ಮವನ್ನೇ ಗುರಿಯಾಗಿಸಿಕೊಂಡು ಎಗ್ಗಿಲ್ಲದೆ ನಡೆಯುತ್ತಿರುವ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಸಂಘ ಸಂಸ್ಥೆಗಳು ಅವಿರತ ಶ್ರಮ ವಹಿಸುತ್ತಿದ್ದರೂ, ಮತಾಂಧ ಶಕ್ತಿಗಳು ಒಡ್ಡುವ ಆಸೆ, ಅಮಿಷಕ್ಕೆ ಅಥವಾ ಕೆಲವೊಮ್ಮೆ ಬೆದರಿಕೆಗೆ ಬಲಿಯಾಗಿ ಮತಾಂತರ ಕಾರ್ಯ ನಡೆಯುತ್ತಲೇ ಇದೆ. ಈ ಬಗ್ಗೆ ಜನರಿಗೆ ಅದೆಷ್ಟೇ ಅರಿವು ಮೂಡಿಸಿದರೂ, ಕೆಲವೊಂದು ಹಿಂದೂ ಕುಟುಂಬಗಳು, ವ್ಯಕ್ತಿ‌ಗಳು ಬೇರೆ ಧರ್ಮದತ್ತ ಆಕರ್ಷಣೆಗೆ ಒಳಗಾಗುತ್ತಿದ್ದಾರೆ ಎನ್ನುವುದು ನೋವಿನ ಸಂಗತಿ.

ಕೇಂದ್ರ‌ದ ನಿರ್ಣಯ ಶ್ಲಾಘನೀಯ

ಇಸ್ಲಾಂ, ಕ್ರೈಸ್ತರ ಆಮಿಷಗಳಿಗೆ ಒಳಗಾಗಿ ಮತಾಂತರ‌ವಾಗುವ ಪರಿಶಿಷ್ಟ ಜಾತಿಯಲ್ಲಿ ಬರುವ ಜನರಿಗೆ ಆ ಜಾತಿಯ ಸ್ಥಾನಮಾನ‌ವನ್ನು ನೀಡದೇ ಇರಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಏಕೆಂದರೆ ಮತಾಂತರ‌ವಾದ ದಲಿತರಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಿದಲ್ಲಿ, ಹಿಂದೂ ಧರ್ಮ‌ ಅಂದರೆ ತಮ್ಮ ಮೂಲ ಧರ್ಮ‌ದಲ್ಲಿಯೇ ಇರುವ ದಲಿತರ ಹಕ್ಕುಗಳಿಗೆ ಅನ್ಯಾಯ ಎಸಗಿದಂತಾಗುತ್ತದೆ. ಅವರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣವನ್ನಿರಿಸಿಕೊಂಡು ಕೇಂದ್ರ ಸರ್ಕಾರ ಇಂತಹ ಒಂದು ಮಹತ್ವದ ನಿರ್ಣಯವನ್ನು ಪ್ರಕಟಿಸಿದೆ.

ಮತಾಂತರ ಆದವರಿಗೂ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕು ಎಂದು ಸ್ವಯಂಸೇವಾ ಸಂಸ್ಥೆ‌ಯೊಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ‌ದ ಅಭಿಪ್ರಾಯ‌ವನ್ನು ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಕ್ರೈಸ್ತ, ಇಸ್ಲಾಂ ಧರ್ಮದ‌ಲ್ಲಿ ಅಸ್ಪೃಶ್ಯತೆ‌ಯಂತಹ ದೌರ್ಜನ್ಯ‌ಗಳಿಲ್ಲ ಎನ್ನುವ ಕಾರಣಕ್ಕೆ ಪರಿಶಿಷ್ಟ ವರ್ಗದ ಕೆಲವು ಜನರು ಆ ಧರ್ಮವನ್ನು ಒಪ್ಪಿಕೊಂಡು ಮತಾಂತರವಾಗಿದ್ದಾರೆ. ಆ ಕಾರಣದಿಂದ ಅವರಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಲಾಗುವುದಿಲ್ಲ. ಹಿಂದೂ, ಸಿಖ್ ಮತ್ತು ಬೌದ್ಧ ಧ್ರಮದ ಜನರಿಗೆ ಮಾತ್ರ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಲು ಸಾಧ್ಯ. ವಿದೇಶಿ ಧರ್ಮಗಳಿಗೆ ಮತಾಂತರ‌ ಹೊಂದಿದ ಜನರಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ ಅಸ್ಪೃಶ್ಯತೆ, ಹಣ, ಸಂಪತ್ತಿನ ಆಸೆಗೆ ಬಲಿಯಾಗಿ ಇಸ್ಲಾಂ, ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡು ಮತಾಂತರ‌ವಾಗುವವರಿಗೆ ದಿಟ್ಟ ನಿಲುವಿನ ಮೂಲಕ ಕೇಂದ್ರ ಸರ್ಕಾರ ಮುಟ್ಟಿ ನೋಡುವಂತೆ ಉತ್ತರ ನೀಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇನ್ನಾದರೂ ಆಮಿಷ‌ಗಳಿಗೆ ಬಲಿಯಾಗಿ ಮತಾಂತರ ಹೊಂದುವವರು ಆಲೋಚಿಸುವಂತಾಗಲಿ. ಹಿಂದೂ ಧರ್ಮದ ಪ್ರಾಮುಖ್ಯತೆ ಅರಿಯುವಂತಾಗಲಿ.

Tags

Related Articles

Close