ಅಂಕಣ

ಪ್ರಧಾನಿ ಮೋದಿಯನ್ನು ಮುಗಿಸಲು ಎಲ್ಲಾ ತಯಾರಿ ನಡೆಸಿದ್ದಳು ಆ ವಿಷಕನ್ಯೆ

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿನ ಕಾರ್ಯದರ್ಶಿ ಆರ್‌ವಿಎಸ್ ಮಣಿ, ಐಪಿಎಸ್ ಅಧಿಕಾರಿ ಡಿಜಿ ವನ್ಝಾರಾ, ಮಾಜಿ ರಾ ಅಧಿಕಾರಿ ಆರ್‌ಎಸ್‌ಎನ್ ಸಿಂಗ್ ಹೀಗೆ ಒಬ್ಬರ ನಂತರ ಒಬ್ಬರು ಬಾಯ್ಬಿಟ್ಟಿದ್ದಾರೆ.

ಅಮೆರಿಕದ ಜೈಲಿನಲ್ಲಿರುವ ಹಾಗೂ 2008, ನವೆಂಬರ್ 26ರ ಮುಂಬೈ ದಾಳಿಯ ರೂವಾರಿಗಳಲ್ಲೊಬ್ಬನಾದ ಡೆವಿಡ್ ಹೆಡ್ಲಿ ಭಾರತದ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯ ನಂತರ, ಇಶ್ರತ್ ಜಹಾನ್ ಲಷ್ಕರೆ ತಯ್ಯೆಬಾದ ಭಯೋತ್ಪಾದಕಿ ಎಂಬ ಅಂಶವನ್ನು ಹೊರಹಾಕಿದ ಬಳಿಕ ಒಬ್ಬೊಬ್ಬ ಅಧಿಕಾರಿಗಳೂ ಧೈರ್ಯ ತಂದುಕೊಂಡು ಯುಪಿಎ ಆಡಳಿತಾವಧಿಯಲ್ಲಿ ನಡೆದ ಪ್ರಯತ್ನಗಳನ್ನು, ಸೃಷ್ಟಿಸಿದ ಪರಿಸ್ಥಿತಿಯನ್ನು ಹೊರಹಾಕಿದ್ದಾರೆ

ಬಹುತೇಕ ಪತ್ರಕರ್ತರು ತಮ್ಮ ಆತ್ಮಸಾಕ್ಷಿಯನ್ನೇ ಕಾಂಗ್ರೆಸ್ಸಿಗೆ ಮಾರಿಕೊಂಡು ಕುಳಿತಿರುವ ಸಮಯದಲ್ಲಿ ಖ್ಯಾತ ಟಿವಿ ಆಂಕರ್ ಅರ್ನಾಬ್ ಗೋಸ್ವಾಮಿಯವರು ಮಾತ್ರ, ಈ ವಿಷಯದ ಬೆನ್ನುಹತ್ತಿ ಒಂದೊಂದೇ ಅಂಶಗಳನ್ನು ಹೊರಗೆಡವಿದ್ದಾರೆ. ಮೊದಲಿಗೆ ಮೋದಿಯವರನ್ನು ಮುಗಿಸುವ ಯತ್ನ. ಅದು ಫಲಿಸದೇ ಹೋದಾಗ ಒಬ್ಬ ಭಯೋತ್ಪಾದಕಿಗೆ ಅಮಾಯಕಿಯ ಪಟ್ಟಕಟ್ಟಿ, ಆಕೆಯನ್ನು ನಕಲಿ ಎನ್‌ಕೌಂಟರ್ ಮಾಡಿದ್ದಾರೆ ಎಂಬ ಆರೋಪದ ನೆಪದಲ್ಲಿ ಹೇಗೆ ಅಮಿತ್ ಶಾ ಹಾಗೂ ಅಂತಿಮವಾಗಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಗೂ ಮೊದಲೇ ಜೈಲಿಗೆ ದಬ್ಬಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನ ನಡೆದಿತ್ತು ಎಂಬ ಅಂಶ ದಿನದಿಂದ ದಿನಕ್ಕೆ ತೆರೆದುಕೊಳ್ಳುತ್ತಾ ಹೋಗುತ್ತಿದೆ! He was not collecting evidence, but engineering the evidence, ಅವರು ಸಾಕ್ಷ್ಯವನ್ನು ಕಲೆಹಾಕುತ್ತಿರಲಿಲ್ಲ, ಸಾಕ್ಷ್ಯವನ್ನು ಸೃಷ್ಟಿ ಮಾಡುತ್ತಿದ್ದರು. ಅದಕ್ಕಾಗಿ ತನಗೆ ಸಿಗರೇಟಿನ ಬೆಂಕಿಯಿಂದ ಸುಟ್ಟು ಬೆದರಿಸಿದ್ದರು ಎಂದು ಸಿಬಿಐ ಅಧಿಕಾರಿ ಸತೀಶ್ ವರ್ಮಾ ಕೊಟ್ಟ ಕಾಟದ ಬಗ್ಗೆ ಆರ್‌ವಿಎಸ್ ಮಣಿ ಹೇಳಿರುವ ಮಾತಿನ ಹಿಂದಿರುವ ಪಿತೂರಿಯಾದರೂ ಎಂಥದ್ದು?ಆದಿರಲಿ, 2004, ಜೂನ್ 15ರಂದು ಹತ್ಯೆಯಾದ ಇಶ್ರತ್ ಜಹಾನ್ ನಿಜಕ್ಕೂ ಅಮಾಯಕಿಯಾಗಿದ್ದಳೇ? ಆಗ ಇಶ್ರತ್‌ಗೆ 19 ವರ್ಷ. ಮುಂಬಯಿನ ಹೊರವಲಯದಲ್ಲಿರುವ ಮುಂಬ್ರಾದ ಅಝ್ಮತ್ ಪಾರ್ಕ್ ನಿವಾಸಿ. ಆಂಟಿ ಮನೆಗೆ ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಜೂನ್ 12 ರಂದು ಮನೆ ಬಿಟ್ಟಿದ್ದಾ ಳೆ. ಇತ್ತ ಗೋಪಿನಾಥ್ ಪಿಳ್ಳೆ ಎಂಬುವರ ಪುತ್ರ ಪ್ರಾಣೇಶ್ ಕುಮಾರ್ ಪಿಳ್ಳೆ ಕೇರಳದ ತಾಮರಕ್ಕುಲಂನವನು. ಸಾಜಿದಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರಾಣೇಶ್, ಆಕೆಯನ್ನು ವಿವಾಹವಾಗುವ ಸಲುವಾಗಿ ಇಸ್ಲಾಂಗೆ ಮತಾಂತರಗೊಂಡು ಜಾವೆದ್ ಗುಲಾಂ ಮೊಹಮದ್ ಶೇಕ್ ಆಗಿದ್ದ. ಜಾವೆದ್‌ಗೆ ಎಲೆಕ್ಟ್ರಿಷಿಯನ್ ಆಗುವ ಹಂಬಲ. ತರಬೇತಿಗಾಗಿ 1988ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದಿದ್ದ. ಆಗ ಇಶ್ರತ್‌ಳ ಅಪ್ಪನ ಪರಿಚಯವಾಯಿತು. 1992ರಲ್ಲಿ ಅವರ ಬಳಿಯೇ ಕೆಲಸಕ್ಕೆ ಸೇರಿದ. 1998ರಲ್ಲಿ ದುಬೈಗೆ ಹಾರಿದ ಜಾವೆದ್ ವಾಪಸ್ಸಾಗಿದ್ದು 2002ರಲ್ಲಿ. ಪ್ರಾಣೇಶ್ ಮತ್ತು ಜಾವೆದ್ ಎಂಬ ಎರಡೂ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಾಸ್‌ಪೋರ್ಟ್ ಹೊಂದಿದ್ದ ಆತ ಮುಂಬಯಿಗೆ ಮರಳಿದ್ದೇ ತಡ ಮೂರು ಪ್ರಕರಣಗಳು ಹಾಗೂ ಮಾರಕಾಸ್ತ್ರ ಹೊಂದಿದ ಅಪರಾಧಕ್ಕಾಗಿ ಪೊಲೀಸರ ಅತಿಥ್ಯವನ್ನೂ ಸ್ವೀಕರಿಸಿದ.ಇಂತಹ ಜಾವೆದ್ ಮತ್ತು ಆಂಟಿ ಮನೆಗೆಂದು ಹೇಳಿ ಹೊಸ್ತಿಲಾಚೆ ಕಾಲ್ತೆಗೆದ ಇಶ್ರತ್, ಜೂನ್ 12ರಂದು ಅಹಮದಾಬಾದ್‌ಗೆ ಹೊರಟಿದ್ದಾ ರೆ. ಆ ದಿನ ರಾತ್ರಿ ಮಾಲೆಗಾಂವ್‌ನಲ್ಲಿ ತಂಗಿದ್ದು, ಜೂನ್ 13ರಂದು ಅಹಮದಾಬಾದ್ ತಲುಪಿದ್ದಾರೆ. ಅಲ್ಲಿ ಅಮ್ಜದ್ ಅಲಿ ಆಲಿಯಾಸ್ ರಾಜ್‌ಕುಮಾರ್ ಅಕ್ಬರ್ ಅಲಿ ರಾಣಾ ಮತ್ತು ಜಿಸಾನ್ ಜೋಹರ್ ಅಬ್ದುಲ್ ಘನಿ ಜತೆಗೂಡಿದ್ದಾ ರೆ. ನಾಲ್ವರೂ ಸೇರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿವಾಸವನ್ನು ವೀಕ್ಷಿಸಿದ್ದಾ ರೆ. ಈ ನಡುವೆ ನೀಲಿ ಇಂಡಿಕಾ ಕಾರಿನಲ್ಲಿ ತೆರಳುತ್ತಿರುವ ನಾಲ್ವರು, ಸಂಶಯಾಸ್ಪದ ಭಯೋತ್ಪಾದಕರು ಎಂಬ ಮಾಹಿತಿ ಜೂನ್ 14ರ ರಾತ್ರಿ 11 ಗಂಟೆಗೆ ಗುಪ್ತಚರ ಏಜೆನ್ಸಿಗಳಿಂದ ಅಹಮದಾಬಾದ್ ಪೊಲೀಸ್‌ನ ಅಪರಾಧ ದಳಕ್ಕೆ ಬಂದು ಮುಟ್ಟಿದೆ. ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆಸುತ್ತಿದ್ದಾ ರೆಂಬ ಗುಮಾನಿ ಬಂದಿದೆ. ಈ ಸುದ್ದಿ ಮುಟ್ಟಿದ ಕೂಡಲೇ ಅಹಮದಾಬಾದ್ ಪೊಲೀಸರು 6 ತಂಡಗಳಲ್ಲಿ ನಗರದ ಎಲ್ಲ ಪ್ರವೇಶ ದ್ವಾರಗಳ ಮೇಲೂ ಹದ್ದಿನಗಣ್ಣು ಇಟ್ಟಿದ್ದಾರೆ. ಜೂನ್ 15ರಂದು ಬೆಳಗಿನ ಜಾವ 4 ಗಂಟೆಗೆ ಮುಂಬೈನಿಂದ ನರೋಲಾ ಕಡೆಗೆ ತೆರಳುತ್ತಿರುವ ನೀಲಿ ಇಂಡಿಕಾ ಕಾರು ಎಸಿಪಿ ನರೇಂದ್ರ ಅಮೀನ್ ಕಣ್ಣಿಗೆ ಬಿದ್ದಿದೆ. ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದ ನಂತರ ಅಮೀನ್ ತಂಡದಲ್ಲಿದ್ದ ಭದ್ರತಾ ಅಧಿ ಕಾರಿಯೊಬ್ಬರು ತಮ್ಮ ಎ.ಕೆ. -47 ರೈಫಲ್ ಮೂಲಕ ಕಾರಿನ ಟೈಯರ್‌ಗಳಿಗೆ ಗುಂಡು ಹಾರಿಸಿದ್ದಾ ರೆ. ಪಂಕ್ಚರ್ ಆಗಿ ಕಾರು ನಿಂತಿದೆ. ಆಗ ಬೆಳಗಿನ ಜಾವ 4 ಗಂಟೆ 30 ನಿಮಿಷ. ಕಾರಿನಿಂದ ಕೆಳಗಿಳಿದ ಒಬ್ಬ ವ್ಯಕ್ತಿ ತನ್ನ ಎ.ಕೆ.-56 ರೈಫಲ್ ತೆಗೆದು ಪೊಲೀಸರತ್ತ ಗುಂಡು ಹಾರಿಸಲು ಆರಂಭಿಸಿದ್ದಾ ನೆ. ಆ ವೇಳೆಗಾಗಲೇ ಎಸಿಪಿ ಪಿ. ಸಿಂಘಾಲ್ ನೇತೃತ್ವದ ತಂಡ ಇನ್ನೊಂದು ಬದಿಯಿಂದ ದಾಳಿ ಮಾಡಿದೆ. ಎಂಟು ನಿಮಿಷಗಳ ಗುಂಡಿನ ಚಕಮಕಿಯ ನಂತರಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ಜಾವೆದ್, ಅಮ್ಜದ್ ಅಲಿ, ಜಿಸಾನ್ ಜೋಹರ್ ಮತ್ತು ಇಶ್ರತ್ ಜಹಾನ್ ಹೆಣವಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಒಂದು ಎ.ಕೆ.-56 ರೈಫಲ್, ಒಂದು ಪಿಸ್ತೂಲು, ಸೆಟಲೈಟ್ ಫೋನ್ ಮತ್ತು ಡೈರಿಗಳು ಸಿಕ್ಕಿವೆ.ಅಲ್ಲಿಗೆ ಪೊಲೀಸರ ಎನ್‌ಕೌಂಟರ್ ಏನೋ ಮುಗಿಯಿತು, ಆದರೆ ಮಾಧ್ಯಮಗಳ ಅನುಮಾನ ಆರಂಭವಾಯಿತು!ಅದೇ ಸಮಯಕ್ಕೆ ಗುಜರಾತ್‌ನಲ್ಲಿ ಮೋದಿಯವರ ನಾಯಕತ್ವದ ವಿರುದ್ಧ ರಾಜ್ಯ ಬಿಜೆಪಿಯಲ್ಲಿ ಬಂಡಾಯ ವೆದ್ದಿತ್ತು. ಅದನ್ನು ದಿಕ್ಕುತಪ್ಪಿಸುವ ಸಲುವಾಗಿ ಮೋದಿ ಮಾಡಿದ ಹುನ್ನಾರವೇ ಅಮಾಯಕಿ ಇಶ್ರತ್ ಜಹಾನ್‌ಳ ಎನ್ಕೌಂಟರ್ ಎಂದು ಮಾಧ್ಯಮಗಳು ಷರಾ ಬರೆದವು. ನನ್ನ ಮಗ ಮುಸ್ಲಿಂ ಯುವತಿಯನ್ನು ವಿವಾಹವಾಗಿ, ಇಸ್ಲಾಂಗೆ ಮತಾಂತರಗೊಂಡ ಮಾತ್ರಕ್ಕೆ ಆತ ಭಯೋತ್ಪಾದಕನಾಗಲು ಸಾಧ್ಯವೆ ಎಂದು ಗೋಪಿನಾಥ್ ಪಿಳ್ಳೆ  ಪ್ರಶ್ನಿಸಿದರು. ಇತ್ತ ಖಾಲ್ಸಾ ಕಾಲೇಜಿನ ಉಪನ್ಯಾಸಕರು, ಸಹಪಾಠಿಗಳು ಇಶ್ರತ್ ಭಯೋತ್ಪಾದಕಳಾಗಿರಲು ಸಾಧ್ಯವೇ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ಒಂದು ವೇಳೆ ಇದೆನಿಜವೇ ಆಗಿದ್ದಿದ್ದರೆ ಅರ್ಧರಾತ್ರಿಯಲ್ಲಿ ಆಕೆ ಜಾವೆದ್ ಜತೆ ತೆರಳಿದ್ದೇಕೆ? ಜಾವೆದ್‌ಗೂ ಆಕೆಗೂ ಏನು ಸಂಬಂಧ? ಆಂಟಿ ಮನೆಗೆ ಎಂದು ಅಮ್ಮನ ಬಳಿ, ಸ್ನೇಹಿತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಸಹೋದರಿಗೆ ಸುಳ್ಳು ಹೇಳಿ ಅಹಮದಾಬಾದ್‌ಗೆ ಹೋಗಿದ್ದೇಕೆ? ಆಕೆ ಮನೆ ಬಿಟ್ಟಿದ್ದು ಜೂನ್ 12ರಂದು, ಎನ್‌ಕೌಂಟರ್ ಆಗಿದ್ದು ಜೂನ್ 15ರಂದು. ಈ ನಡುವಿನ ಮೂರು ದಿನ ಆಕೆ ಎಲ್ಲಿದ್ದಳು? ಮೂರು ದಿನ ಕಳೆದರೂ ಮಗಳು ಮನೆಗೆ ಬರಲಿಲ್ಲ ಎಂದು ಗೊತ್ತಾದ ಕೂಡಲೇ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ? ಎನ್‌ಕೌಂಟರ್‌ನಲ್ಲಿ ಬಲಿಯಾದ ನಾಲ್ವರು ಅಮಾಯಕರಾಗಿದ್ದರೆ ಎಕೆ-56 ರೈಫಲ್, ಪಿಸ್ತೂಲ್ ಎಲ್ಲಿಂದ ಬಂದವು? ಸಾಮಾನ್ಯವಾಗಿ ಮುಸಲ್ಮಾನರಲ್ಲಿ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ಅನ್ಯ ಗಂಡಸರ ಜತೆ ಹೊರಕ್ಕೆ ಕಳುಹಿ ಸುವುದು ಸಾಧ್ಯವೇ ಇಲ್ಲ. ಹಾಗಿದ್ದಾಗ್ಯೂ ಆಕೆ ಜಾವೆದ್ ಜತೆ ಹೋಗಲು ಹಾಗೂ ಕಳುಹಿಸಲು ಕಾರಣವೇನು?ಆಕೆ ದೇಶವಿರೋಧಿ ಶಕ್ತಿಗಳ ಜತೆ ಭಾಗಿಯಾಗಿದ್ದಳು ಎಂಬುದಕ್ಕೆ ಇವಿಷ್ಟೇ ಕಾರಣಗಳು ಸಾಕಿದ್ದವು.

ಜತೆಗೆ ಎನ್ಕೌಂಟರ್‌ನ ಬೆನ್ನ ಆಕೆ ತಮ್ಮ ಸಂಘಟನೆಗೆ ಸೇರಿದವಳು ಎಂದು ಲಷ್ಕರೆ ತಯ್ಯೆಬಾ ತನ್ನ ವೆಬ್‌ಸೈಟ್‌ನಲ್ಲಿ, ಮ್ಯಾಗಝಿನ್‌ನಲ್ಲಿ ಸ್ವತಃ ಒಪ್ಪಿಕೊಂಡಿತು. ಇಷ್ಟಾಗಿಯೂ ಆಕೆ ಮುಸ್ಲಿಮಳು, ಎನ್‌ಕೌಂಟರ್ ನಡೆದಿದ್ದು ನರೇಂದ್ರ ಮೋದಿಯವರ ಗುಜರಾತ್‌ನಲ್ಲಿ ಎಂಬ ಅಂಶಗಳು ಮಾತ್ರ ಅನುಮಾನದ ಸರಮಾಲೆಯನ್ನು ಉದ್ದ ಮಾಡುತ್ತಲೇ ಹೋದವು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಸಾಹಿತ್ಯ ರಚನೆಗಿಂತ ಅಲ್ಪಸಂಖ್ಯಾತರ ಪರ ಹೋರಾಟವನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿರುವ ಜಾವೆದ್ ಅಖ್ತರ್ ಹಾಗೂ ಅವರ ಪತ್ನಿ ಶಬಾನಾ ಆಜ್ಮಿಯವರು ಗುಜರಾತ್‌ನಲ್ಲಿ ನಡೆದಿರುವ ಎಲ್ಲ ಎನ್‌ಕೌಂಟರ್‌ಗಳೂ ನಕಲಿಯಾಗಿದ್ದು ಅವುಗಳ ಬಗ್ಗೆ ಕೂಲಂಕಷ ತನಿಖೆಯಾಗಬೇಕು ಎಂದು 2007ರಲ್ಲಿ ಸುಪ್ರೀಂಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹಾಕಿದರು. ಇಶ್ರತ್‌ಳ ಅಮ್ಮ ಶಮೀಮಾ ಶೇಕ್ ಕೂಡ, ‘ನನ್ನ ಮಗಳು ಅಮಾಯಕಿ, ಸರಕಾರ ಉತ್ತರ ಕೊಡಬೇಕು’ ಎಂದು ಪ್ರಶ್ನಿಸಲಾರಂಭಿಸಿದರು. ಅದೊಂದು ನಕಲಿ ಎನ್‌ಕೌಂಟರ್ ಎಂದು ಕೋರ್ಟ್ ಮುಂದೆ ಪ್ರತಿಪಾದಿಸಿದರು. ಇಂತಹ ವಾದಗಳನ್ನೆಲ್ಲ ಆಲಿಸಿದ ಗುಜರಾತ್ ಹೈಕೋರ್ಟ್, 2009, ಆಗಸ್ಟ್‌ನಲ್ಲಿ ಮೂವರು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತು. 2009, ಸೆಪ್ಟೆಂಬರ್ 7 ರಂದು ವರದಿ ನೀಡಿದ ಜಿ ಮಾಜಿಸ್ಟ್ರೇಟ್ ತಮಾಂಗ್, ಇಶ್ರತ್  ಅಮಾಯಕಿ ಎಂದುಬಿಟ್ಟರು. 2004, ಜೂನ್ 15ರಂದು ನಡೆದ ‘ನಕಲಿ’ ಎನ್‌ಕೌಂಟರ್‌ನಲ್ಲಿ ಜಾವೆದ್ ಗುಲಾಂ ಮೊಹಮದ್ ಶೇಕ್, ಅಮ್ಜದ್ ಅಲಿ ಹಾಗೂ ಜಿಹಾನ್ ಜೋಹರ್ ಜತೆ ಅಬ್ದುಲ್ ಘನಿ ಎಂಬ ಮೂವರ ಜತೆ ಇಶ್ರತ್‌ಳನ್ನೂ ಗುಜರಾತ್ ಪೊಲೀಸರು ಹತ್ಯೆಗೈದರು ಎಂದು ವರದಿಯಲ್ಲಿ ಹೇಳಿದರು! ಹತ್ಯೆಗೀಡಾದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿಯರು ಎಂಬ ಗುಜರಾತ್ ಪೊಲೀಸರ ಪ್ರತಿಪಾದನೆ ಕೂಡ ಸುಳ್ಳು, ಎಲ್ಲರೂ ಭಾರತೀಯರೇ ಎಂದು ಉಪಸಂಹಾರ ಮಾಡಿದರು. ಅಷ್ಟೇ ಅಲ್ಲ, ಅವರೆಲ್ಲರೂ ಅಮಾಯಕರು ಎಂದು ತೀರ್ಪು ನೀಡಿದರು. ಅಲ್ಲಿಗೆ ನರೇಂದ್ರ ಮೋದಿ ಮುಸ್ಲಿಮರ ಪಾಲಿಗೆ ಮತ್ತೊಮ್ಮೆ ಖಳನಾಯಕನಾಗಿ ಬಿಟ್ಟರು.No limits…

ಇಶ್ರತ್ ಜಹಾನ್ ಶಮೀಮ್ ರಾಝಾಳ ಹತ್ಯೆ ಒಂದು ನಕಲಿ ಎನ್‌ಕೌಂಟರ್ ಎಂದು ಮಹಾನಗರ ನ್ಯಾಯಾಧಿ ಎಸ್ಪಿ ತಮಾಂಗ್ ಅವರು 2009, ಸೆಪ್ಟೆಂಬರ್ 7ರಂದು 240 ಪುಟಗಳ ವರದಿಯನ್ನು ನೀಡಿದಾಗ, ಗುಜರಾತ್‌ನ ಕ್ರೌರ್ಯಕ್ಕೆ ಮಿತಿಯೇ ಇಲ್ಲ ಎಂಬರ್ಥದಲ್ಲಿ ಇಂಗ್ಲಿಷ್ ಮಾಧ್ಯಮಗಳು ಈ ಮೇಲಿನಂತೆ ವರ್ಣಿಸಿದವು. ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ ಆಗ ಜೈಲಿನಲ್ಲಿದ್ದ ಗುಜರಾತ್ ಪೊಲೀಸ್ ಅಧಿಕಾರಿ ಡಿ.ಜಿ. ವನ್ಝಾರಾ ನೇತೃತ್ವದ ತಂಡವೇ ಇಶ್ರತ್‌ಳನ್ನೂ ಹತ್ಯೆ ಮಾಡಿದ್ದು ಎಂಬ ಮಾತು ಕೇಳಿ ಬಂದ ನಂತರವಂತೂ ಮಾಜಿಸ್ಟ್ರೇಟ್ ವರದಿ ನೂರಕ್ಕೆ ನೂರರಷ್ಟು ಸತ್ಯ ಎಂದೇ ಎಲ್ಲರೂ ನಂಬುವಂತಾಯಿತು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಮುಸ್ಲಿಮರಿಗೆ ಉಳಿಗಾಲವಿಲ್ಲ ಎಂದು ಬಿಂಬಿಸಲಾಯಿತು. ಆದರೆ…ಮ್ಯಾಜಿಸ್ಟ್ರೇಟ್ ತಮಾಂಗ್ ವರದಿ ಹೊರಬಿದ್ದು ಹತ್ತು ತಿಂಗಳು ತುಂಬುವ ಮೊದಲೇ ಇಶ್ರತ್ ಜಹಾನ್ ಎನ್ಕೌಂಟರ್ ಘಟನೆ ಮತ್ತೊಂದು ತಿರುವು ಪಡೆದುಕೊಂಡಿತು. 2010, ಜುಲೈ 5ರಂದು ದೇಶಾದ್ಯಂತ ಪ್ರಕಟವಾದ ಬಹುತೇಕ ಪತ್ರಿಕಾ ವರದಿಗಳ ಶೀರ್ಷಿಕೆಯ ಒಟ್ಟಾರೆ ತಾತ್ಪರ್ಯ  ‘Ishrat was a fidayeen: Headley’ ಎಂದಾಗಿತ್ತು!! ಇಷ್ಟಕ್ಕೂ ಮುಂಬೈ ದಾಳಿಯ ಮುಖ್ಯ ಪಿತೂರಿದಾರ ಹಾಗೂ ಅಮೆರಿಕ ಮೂಲದ ಪಾಕಿಸ್ತಾನಿ ಭಯೋತ್ಪಾದಕ ಡೆವಿಡ್ ಹೆಡ್ಲಿ ಹೇಳಿದ್ದಾ ದರೂ ಏನು? ಪ್ರಸ್ತುತ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿಯನ್ನು ವಿಚಾರಣೆ ಮಾಡಲು ಭಾರತದ ‘ರಾಷ್ಟ್ರೀಯ ತನಿಖಾ ಏಜೆನ್ಸಿ’(NIA) ಅಧಿ ಕಾರಿಗಳು 2010ರಲ್ಲಿ ಮೊದಲಿಗೆ ತೆರಳಿದ್ದರು. ಆಗ 2004ರಲ್ಲಿ ಹತ್ಯೆಯಾದ ಮುಂಬೈ ಯುವತಿ ವಾಸ್ತವದಲ್ಲಿ ಲಷ್ಕರೆ ತಯ್ಯೆಬಾದ ಫಿದಾಯಿನ್(ಆತ್ಮಹತ್ಯಾ ಬಾಂಬರ್). 2007ರವರೆಗೂ ಲಷ್ಕರೆ ತಯ್ಯೆಬಾದ ಭಾರತದ ಕಾರ್ಯಾಚರಣೆಯ ಮುಖ್ಯ ಪಿತೂರಿದಾರನಾಗಿದ್ದ ಕಮಾಂಡರ್ ಮುಝಾಮಿಲ್ ಆಕೆಯನ್ನು ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದ್ದ ಎಂಬ ವಿಷಯವನ್ನು ಹೆಡ್ಲಿ ಬಹಿರಂಗ ಮಾಡಿದ್ದ. ಮೋದಿ ಹತ್ಯೆಗೆಂದು ತೆರಳಿದ್ದವರಲ್ಲಿ ಇಬ್ಬರು ಪಾಕಿಸ್ತಾನಿಯರು ಎಂದೂ ಹೇಳಿದ. ಕೆಲವು ವಿಐಪಿಗಳನ್ನು ಹತ್ಯೆ ಮಾಡುವ ಸಲುವಾಗಿ ಮುಝಾಮಿಲ್, ಇಶ್ರತ್ ಹಾಗೂ ಇತರ ಮೂವರನ್ನು ಗುಜರಾತ್‌ಗೆ ಕಳುಹಿಸಿದ್ದ ಎಂದು ಗುಜರಾತ್ ಪೊಲೀಸರು ಮಾಡಿದ್ದ ಪ್ರತಿಪಾದನೆ ಹೆಡ್ಲಿ ಮಾಹಿತಿಯಿಂದ ನಿಜವಾದಂತಾಯಿತು. ಇಶ್ರತ್ ಹತ್ಯೆಯ ಬೆನ್ನ ಆಕೆ ನಮ್ಮ ಸಂಘಟನೆಗೆ ಸೇರಿದವಳು ಎಂದು ಪಾಕಿಸ್ತಾನದಲ್ಲಿರುವ ಲಷ್ಕರೆ ತಯ್ಯೆಬಾದ ಮುಖವಾಣಿ ‘ಘಝ್ವಾ ಟೈಮ್ಸ್’ ಪ್ರತಿಪಾದಿಸಿತ್ತು. ಈ ಎಲ್ಲವನ್ನೂ ಡೆವಿಡ್ ಹೆಡ್ಲಿ ಹೊರಹಾಕಿರುವ ಅಂಶಗಳು ನಿಜವಾಗಿಸಿದವು.ಅಂದಹಾಗೆ, ತಮಾಂಗ್ ಅವರು ವರದಿಯಲ್ಲಿ ಹೇಳಿದಂತೆ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿ ನಾಗರೀಕರಲ್ಲ, ಭಾರತೀಯರೇ ಆಗಿದ್ದರು ಎಂದಾದರೂ ಹೆಣಗಳನ್ನು ತೆಗೆದುಕೊಂಡು ಹೋಗಲು ಯಾರೂ ಏಕೆ ಮುಂದೆ ಬರಲಿಲ್ಲ? ಇಶ್ರತ್ ಜಹಾನ್ ಹಾಗೂ ಜಾವೆದ್ ಶೇಕ್‌ನ ಹೆಣಗಳು ತಮ್ಮ ಮಕ್ಕಳದೆಂದು ಅವರವರ ತಂದೆ- ತಾಯಂದಿರು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವುದಾದರೆ ಉಳಿದ ಇಬ್ಬರಿಗೂ ಯಾರಾದರೂ ತಂದೆ-ತಾಯಿ ಇರಲೇಬೇಕಿತ್ತಲ್ಲವೆ? ಇದಕ್ಕಿಂತ ದೊಡ್ಡ ತಮಾಷೆ ನೋಡಿ.. ‘ಹೆಡ್ಲಿ ಪ್ರತಿಪಾದನೆ ಸುಳ್ಳು. ಇಶ್ರತ್ ಜಹಾನ್, ಜಾವೆದ್‌ನ ಬ್ಯಾಂಕ್ ಖಾತೆಗಳನ್ನಷ್ಟೇ ನಿಭಾಯಿಸುತ್ತಿದ್ದಳು.

ಆಕೆ ಭಯೋತ್ಪಾದಕಿಯಾಗಿರಲು ಸಾಧ್ಯವೇ ಇಲ್ಲ’ ಎಂದು ‘Encountered on Saffron Agenda’ ಎಂಬ ಸಾಕ್ಷ  ಚಿತ್ರ ರೂಪಿಸಿದ್ದ ಸುಬ್ರದೀಪ್ ಚಕ್ರವರ್ತಿ ಎಂಬ ಪಾರ್ಟ್ ಟೈಮ್ ಪತ್ರಕರ್ತ ಹೇಳಿಕೆ ನೀಡಿದ. ಅ, ಜಾವೆದ್‌ನ ಬ್ಯಾಂಕ್ ಖಾತೆಗಳನ್ನು ಇಶ್ರತ್ ನಿಭಾಯಿಸುತಿದ್ದಳು ಎನ್ನುವುದಕ್ಕೆ ಎಲೆಕ್ಟ್ರಿಶಿಯನ್ ಕೆಲಸ ಮಾಡಿಕೊಂಡಿದ್ದ ಜಾವೆದ್ ಏನು ದೊಡ್ಡ ಉದ್ಯಮಿಯೇ? ಎರಡೆರಡು ಪಾಸ್‌ಪೋರ್ಟ್ ಇಟ್ಟುಕೊಂಡಿದ್ದ ದೇಶದ್ರೋಹಿ ವ್ಯಕ್ತಿ ಜತೆ ಸಂಪರ್ಕ, ವ್ಯವಹಾರ ಇಟ್ಟುಕೊಂಡಿರುವವರ ಸಾಚಾತನದ ಬಗ್ಗೆ ಅನುಮಾನಗಳಿರುವುದಿಲ್ಲವೆ?ಈ ಘಟನೆಯ ನಂತರ ಇಶ್ರತ್ ಅಮಾಯಕಿಯೆಂಬುದನ್ನು ಸಾಬೀತು ಮಾಡುವುದು ಕಷ್ಟವೆಂದು ಗೊತ್ತಾದ ಕೂಡಲೇ ಸೋನಿಯಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಕಲಿ ಎನ್‌ಕೌಂಟರ್ ಎಂಬ ಹೊಸ ತಗಾದೆ ತೆಗೆದು ಮೊದಲಿಗೆ ಅಧಿಕಾರಿಗಳನ್ನು ಹಣಿಯಲು, ಆನಂತರ ಅವರನ್ನು ದಾಳವಾಗಿಟ್ಟುಕೊಂಡು ಮೋದಿಯವರನ್ನು ಜೈಲಿಗೆ ದಬ್ಬುವ ತಂತ್ರಕ್ಕೆ ಕೈಹಾಕಿತು. ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿನ ಕಾರ್ಯದರ್ಶಿ ಆರ್‌ವಿಎಸ್ ಮಣಿ ಹೊರಹಾಕಿರುವ ಒಂದೊಂದು ಅಂಶಗಳು ಹೇಗೆ ಆಗಿನ ಗೃಹ ಸಚಿವ ಪಿ. ಚಿದಂಬರಂ ನೇರವಾಗಿ ಪಿತೂರಿಯಲ್ಲಿ ಭಾಗಿಯಾದ್ದರು ಎಂಬ ವಿಚಾರವನ್ನು ಬಯಲುಗೊಳಿಸುತ್ತಿವೆ. ಇನ್ನೊಂದೆಡೆ ಡೆವಿಡ್ ಹೆಡ್ಲಿ ನೇರವಾಗಿ ಭಾರತೀಯ ನ್ಯಾಯಾಲಯದ ಮುಂದೆಯೇ (ವಿಡಿಯೋ ಕಾನೆರೆನ್ಸ್ ಮೂಲಕ) ಇಶ್ರತ್ ನಿಜರೂಪವನ್ನು ಅನಾವರಣ ಮಾಡಿದ್ದಾನೆ. ಈ ಸಂಬಂಧ ಟೈಮ್ಸ್ ನೌ ಚಾನೆಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ರಾ ಅಧಿಕಾರಿ ಆರ್‌ಎಸ್‌ಎನ್ ಸಿಂಗ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಯಾವಾಗ ಇಶ್ರತ್ ಹಾಗೂ ಗುಜರಾತ್ ಹಿಂಸಾಚಾರದ ವಿಷಯವನ್ನಿಟ್ಟುಕೊಂಡು ಮೋದಿಯವರನ್ನು ಜೈಲಿಗೆ ಹಾಕಲು ಸಾಧ್ಯವಾಗಲಿಲ್ಲವೋ ಆಗ, 2014ರ ಲೋಕಸಭೆ ಚುನಾವಣೆಗೆ ಮೊದಲೇ ಮೋದಿಯವರನ್ನು ಮುಗಿಸಬೇಕೆಂದು ಪಾಟ್ನಾದಲ್ಲಿ ಅಂತಿಮ ಪ್ರಯತ್ನ ಮಾಡಲಾಯಿತು ಎಂದಿದ್ದಾರೆ!

ಆ ಪಾಟ್ನಾ ಯತ್ನ ಮತ್ತಾವುದೂ ಅಲ್ಲ, 2013 ಅಕ್ಟೋಬರ್ 27ರಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಹೂಂಕಾರ್ ರ‍್ಯಾಲಿಯಲ್ಲಿ ಮಾತನಾಡಲು ಆಗಮಿಸುವ ಸಂದರ್ಭದಲ್ಲಿ ನಡೆದ ಬಾಂಬ್ ಸೋಟ! ಸುಮಾರು 8 ಲಕ್ಷ ಜನ ನೆರೆದಿದ್ದ ಈ ಸಭೆ ಸಂದರ್ಭದಲ್ಲಿ ನಡೆದ ಈ ಸರಣಿ ಬಾಂಬ್ ಸ್ಪೋಟದಲ್ಲಿ 6 ಜನ ತೀರಿಕೊಂಡರು. ಮೋದಿಯವರು ಭಾಷಣ ಮಾಡುತ್ತಿದ್ದ ವೇದಿಕೆಗೆ 40 ಅಡಿ ದೂರದಲ್ಲೇ ಬಾಂಬ್ ಪತ್ತೆಯಾಯಿತು! ಸಭೆ ಮುಗಿದ ನಂತರ ನಡೆದ ತಪಾಸಣೆಯಲ್ಲಿ ಸುಮಾರು 17 ಸಜೀವ ಬಾಂಬುಗಳು ಸಿಕ್ಕಿದವು. ಆರ್‌ಎಸ್‌ಎನ್ ಸಿಂಗ್ ಬೊಟ್ಟು ಮಾಡುತ್ತಿರುವುದೂ ಇದನ್ನೇ ಹಾಗೂ ಈ ಕೊಲೆ ಯತ್ನವನ್ನೇ!! ನರೇಂದ್ರ ಮೋದಿಯವರ ಮೇಲಿರುವ ದ್ವೇಷದ ತೀವ್ರತೆಯನ್ನು ಅರಿಯಲು ಇದಕ್ಕಿಂತ ಉದಾಹರಣೆ ಇನ್ನೇನು ಬೇಕು?ಆದರೇನಂತೆ…

God’s Chosen One ಅನ್ನುತ್ತಾರಲ್ಲಾ ಹಾಗೆ ನಮ್ಮ ಮೋದಿಯವರು.
ಹಾಗಾಗಿಯೇ ಶತ್ರುಗಳ ಪ್ರಯತ್ನ ಫಲಿಸಿಲ್ಲ.

ಪ್ರತಾಪ್ ಸಿಂಹ

Tags

Related Articles

Close