ಅಂಕಣದೇಶಪ್ರಚಲಿತ

ಒಲ್ಲನೋ ಹರಿ ಕೊಳ್ಳನೋ ಎಲ್ಲಾ ಸಾಧನವಿದ್ದು ತುಲಸಿ ಇಲ್ಲದ ಪೂಜೆ.. ಸರ್ವರೋಗ ನಿವಾರಣಿಸುವ ತುಲಸಿಯ‌‌ ಕಥೆ‌ ಕೇಳಿ!!

ಪುಷ್ಪೇಷು ತುಲನಾಪ್ಯಸ್ಯಾ ನಾಸೀದ್ದೇವೀಷು ವಾ‌ ಮುನೇ |
ಪವಿತ್ರರೂಪಾ ಸರ್ವಾಸು ತುಲಸೀ ಸಾ ಚ‌ ಕೀರ್ತಿತಾ ||
– ( ಬ್ರಹ್ಮವೈವರ್ತಪುರಾಣ, ಪ್ರಕೃತಿ (22/42)

ದೇವತೆಗಳಲ್ಲೂ ಸಹ ಇವಳಿಗೆ ಸರಿಗಟ್ಟುವವರು ಇಲ್ಲ. ಅಂತಹ ಪವಿತ್ರಗಳಲ್ಲೂ ಪವಿತ್ರಳೆನ್ನಿಸಿದ ಕಾರಣದಿಂದ ಇದಕ್ಕೆ ತುಳಸಿ ಎಂದು ಹೆಸರು.

ತುಳಸಿಯ ಪಾವಿತ್ರ್ಯವನ್ನು ಬಣ್ಣಿಸುವ ಶ್ಲೋಕವದು. ಯಾವ ಪೂಜೆ, ಹವನಗಳೂ ತುಲಸಿಯಿಲ್ಲದೇ ಅಪೂರ್ಣವೇ. “ಒಲ್ಲನೋ ಹರಿ ಕೊಳ್ಳನೋ ಎಲ್ಲಾ ಸಾಧನವಿದ್ದು ತುಲಸಿ ಇಲ್ಲದ ಪೂಜೆ” ಈ ಮಾತು ಅದರ ಮಹತ್ವವನ್ವು ಸಾರಿ ಸಾರಿ ಹೇಳುತ್ತವೆ. ತುಳಸಿಯ ಮಹಿಮೆ ಅದು ವರ್ಣಾತೀತವೆನ್ನಬಹುದು.‌ಪುರಾಣಗಳು ತುಳಸಿಯ‌ ಮಹಾತ್ಮೆಯ‌ ಕುರಿತಾಗಿ ಬಹಳಷ್ಟು‌ ಅಭಿವರ್ಣಸಿದ್ದಾವೆ.

ತುಳಸಿಯ ಸೇವೆಯ ಫಲವೇ ಅದು ಅಪೂರ್ವವಾದುದು. ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರೀತಿಪಾತ್ರವಾಗಿರುವ ತುಳಸಿ ನಮ್ಮ ಪಾಲಿನ ದೇವತೆಯೇ ಸರಿ. ಸದ್ಗತಿಪ್ರಾಪ್ತಿಗೆ ಹಾಗೂ ಅಪಾರ ಸಿದ್ಧಿಗೆ ತುಲಸಿಯು ಖಚಿತ ಸಾಧನ. ತುಂಬಾ ಜಿತೇಂದ್ರಿಯನಾದ ಸ್ಕಂದನು ತುಲಸಿಯನ್ನು ಸೇವಿಸಿದ ಫಲವಾಗಿ ತಾರಕಾಸುರನನ್ನು ಸಂಹರಿಸಿ, ದೇವಸೇನಾಧಿಪತಿಯೆಂದೆನ್ನಿಸಿದ. ಪದ್ಮಪುರಾಣದಲ್ಲಿ ಇದರ ಉಲ್ಲೇಖವಿದೆ. ತುಲಸಿಯನ್ನು ಸೇವಿಸಿದ್ದರಿಂದಲೇ ಗರುಡನು ಮಹಾ ಬಲಶಾಲಿ ಎಂದೆನಿಸಿ, ವಿಷ್ಣುವಿಗೆ ವಾಹನವೆನ್ನಿಸಿದನು; ಉತ್ತಮವಾದ ಅಮೃತವನ್ನು ತಂದನು. ಅಪ್ಸರೆಯರ‌ ಮಧ್ಯದಲ್ಲಿ ರಂಭೆಯೆನ್ನುವವಳು ಹಿಂದೆ ತುಲಸಿಯ ‌ಸೇವನೆಯಿಂದಲೇ ದೇವತೆಗಳು ನೀಡಿದ ವರವನ್ನು ಪಡೆದು ದೇವೇಂದ್ರನಿಗೆ ಪ್ರಿಯಳೆನ್ನಿಸಿದಳು. (ಪದ್ಮಪುರಾಣ). ಇದೇ ಪುರಾಣದಲ್ಲಿ ಉಲ್ಲೇಖವಾಗಿರುವ ಸೃಷ್ಟಿಖಂಡದಲ್ಲಿ ಪ್ರಮುಖ ವಿಚಾರವೊಂದೂ ಉಲ್ಲೇಖವಾಗಿವೆ. ತುಲಸಿಯನ್ನು ಸೇವಿಸುವವನು ಸಕಲ ತೀರ್ಥಗಳನ್ನು ಸೇವಿಸಿದ ಫಲವನ್ನು ಪಡೆಯುವವನು. ಗುರುತೀರ್ಥ-ವಿಪ್ರತೀರ್ಥ-ದೇವತೀರ್ಥ ಈ ಮೂರೂ ತುಲಸಿಯ‌ ಸೇವನೆಯಿಂದ ಸೇವಿತವಾಗುವುವು. ಆದ್ದರಿಂದ ತುಲಸಿಯನ್ನು ಸೇವಿಸಬೇಕೆಂಬುದಾಗಿ ಹೇಳುತ್ತವೆ ಪುರಾಣಗಳು.

ತುಲಸಿಯ ಮಹತ್ವವನ್ನು ತಿಳಿದರೆ ಸಾಕೇ?? ಅದು ಜಗಕೆ ಮಾಡುವ ಪರಿಣಾಮವನ್ನೂ ತಿಳಿಯಲೇಬೇಕು. ಸ್ಕಂದಪುರಾಣ ಹೇಳುತ್ತದೆ.
“ಗೃಹಸ್ಯಾಂಗಣಮಧ್ಯೇ ವಾ ಗೃಹಸ್ಯೋಪವನೇಪಿ ವಾ |
ಶುಚೌ ದೇಶೇ ಚ ‌ತುಲಸೀಮರ್ಚಯೇತ್ ಬುದ್ಧಿಮಾನ್ನರ: ||
ಮನೆಯ ಅಂಗಳದ ಮಧ್ಯದಲ್ಲಾಗಲೀ, ಮನೆಯ‌ ಉಪವನದಲ್ಲಾಗಲೀ, ಶುಚಿಯಾದ ಸ್ಥಳದಲ್ಲಿ ಬುದ್ಧಿವಂತನಾದ ಮನುಷ್ಯ ತುಲಸಿಯನ್ನು ಪೂಜಿಸಬೇಕೆಂಬುದು ಇದರ ತಾತ್ಪರ್ಯ. ಎಲ್ಲಿ ತುಲಸಿ ಇರುವುದೋ ಅಲ್ಲಿ ಜಗತ್ಸ್ವಾಮಿಯಾದ ಶ್ರೀವಿಷ್ಣು ಸದಾ ಪ್ರೀತಿಮನಸ್ಕನಾಗಿ ನೆಲೆಸಿಬಿಡುವನು.

ವೈದ್ಯರಿಗೆ ವೈದ್ಯ ನಾರಾಯಣವೆನ್ನುತ್ತೇವಲ್ಲಾ?? ಅದು ಅಕ್ಷರಶ: ಸತ್ಯ. ಯಾಕೆಂದರೆ ತುಲಸಿಯ ಮೂಲಕ ಸರ್ವರೋಗ ಪರಿಹಾರವನ್ನೂ‌ ಮಾಡುವವ ಶ್ರೀಹರಿ.

* ತುಲಸಿ ತೀರ್ಥವು ಗಂಗಾಜಲದಷ್ಟೇ ಪವಿತ್ರವಾಗಿದೆ.
* ಬೆಳಗಿನ ಜಾವ ಪ್ರತೀದಿನ ತುಲಸಿ ಮಿಶ್ರಿತ ನೀರು ಕುಡಿಯುವುದರಿಂದ ರಕ್ತವು ಶುದ್ಧವಾಗುತ್ತದೆ. ರಕ್ತದ ಒತ್ತಡ ಪ್ರಮಾಣವು ಏರುಪೇರಾಗದೇ ಸಹಜ‌ಸ್ಥಿತಿಯಲ್ಲಿರುತ್ತದೆ.
* ಶರೀರದ ರಕ್ತ ಚಲನೆ ಸುಗಮವಾಗಿದ್ದು ಎಲ್ಲಿಯೂ ಹೆಪ್ಪುಗಟ್ಟುವುದಿಲ್ಲ.
* ಶೀತ, ಗಂಟಲು ನೋವು, ನೆಗಡಿ ಮೊದಲಾದವುಗಳಿಗೆ ತುಲಸಿ ಕಷಾಯ ರಾಮಬಾಣವೇ ಆಗಿದೆ.
* ಶುದ್ಧವಾದ ಪರಿಸರ ಹಾಗೂ ಗಾಳಿಯು ಇದರಿಂದ‌ ಲಭ್ಯವಾಗುತ್ತವೆ.
* ತುಲಸೀ‌‌ ಕಟ್ಟೆಯನ್ನು ಪ್ರದಕ್ಷಿಣೆ ಬರುವುದರಿಂದ ಮನಸ್ಸಿನಲ್ಲಿ ನಿರ್ಮಲ ಭಾವನೆಗಳು ಬರುತ್ತವೆ.
* ತುಲಸೀ ಪುಡಿಯನ್ನು ಜೇನುತುಪ್ಪದಲ್ಲಿ ಕಲೆಸಿ ಮಕ್ಕಳಿಗೆ ತಿನ್ನಿಸುವುದರಿಂದ ಕೆಮ್ಮು ವಾಸಿಯಾಗುತ್ತದೆ.
* ತುಲಸೀ ಪುಡಿ, ನೀರು, ಜೇನುತುಪ್ಪ ಹಾಗೂ ನಿಂಬೆರಸ ಕಲೆಸಿ ಕುಡಿಯುವುದರಿಂದ ಪಿತ್ತಕ್ಕೆ ಸಂಬಂಧಿಸಿದ ದೋಷಗಳು ವಾಸಿಯಾಗುತ್ತದೆ.
*ಚೆನ್ನಾಗಿ ಒಣಗಿದ ತುಲಸಿ ಬೀಜಗಳನ್ನು ಜೇನುತುಪ್ಪದಲ್ಲಿ ಕಲೆಸಿ ತಿನ್ನುವುದರಿಂದ ಹೃದಯ ಬಡಿತ‌ ಸರಾಗವಾಗುತ್ತದೆ.
* ಉಸಿರಾಟದ ಕ್ರಿಯೆಯು ಸುಗಮವಾಗುತ್ತದೆ.
* ಹೃದಯದ ರಕ್ತವನ್ನು ಪಂಪ್ ಮಾಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತದೆ.
*ತುಲಸಿ ಬೀಜಗಳು+ನೀರು+ಕಲ್ಲುಸಕ್ಕರೆ ಹಾಕಿ ಕಲೆಸಿ ಕುಡಿಯುವುದರಿಂದ ಜಠರ ಮತ್ತು ಮೂತ್ರಕೋಶದ(ಕಿಡ್ನಿ) ಆರೋಗ್ಯ ಉತ್ತಮವಾಗಿರುತ್ತದೆ.
*ತುಲಸಿ ಪುಡಿಯನ್ನು ಕೊಬ್ಬರಿಯೆಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲುಗಳಿಗೆ ಅಗತ್ಯವಾಗಿರುವ ಪೋಷಕಾಂಶವನ್ನು ದಯಪಾಲಿಸುತ್ತವೆ.
* ಇದೇ ಮದ್ದು ಚರ್ಮರೋಗಕ್ಕೂ‌ ರಾಮಬಾಣವಾಗಿವೆ.
*ಒಣಗಿದ ತುಲಸಿ ಪುಡಿಗೆ ಸ್ವಲ್ಪ ಉಪ್ಪು ಹಾಗೂ ಪುದಿನದ ಪುಡಿ ಹಾಕಿ ಹಲ್ಲುಗಳನ್ನು ಉಜ್ಜುವುದರಿಂದ ಹೊಳಪು ಅಧಿಕವಾಗುತ್ತವೆ, ಅಷ್ಟೇ ಅಲ್ಲದೇ ಹಲ್ಲು ನೋವು ನಿವಾರಣೆಯಾಗುತ್ತದೆ.

ತುಲಸೀ ಕಷಾಯದ ಕುರಿತಾಗಿ ಆಗಲೇ ಉಲ್ಲೇಖಮಾಡಿದೆ. ಸರ್ವ ರೋಗದ ನಿವಾರಣೆಗೂ ಅದು ಸಹಾಯಕಾರಿ. ಮಾಡುವ ವಿಧಾನವನ್ನು ಒಮ್ಮೆ ತಿಳಿಯೋಣ.

* ನೀರು ಕುದಿಸಿ, ಕುದಿಯುತ್ತಿರುವಾಗಲೇ 2 ಚಮಚದಷ್ಚು ತುಲಸಿ ಪುಡಿ ,‌ಕಲ್ಲುಸಕ್ಕರೆ ಹಾಗೂ ಏಲಕ್ಕಿ ಹಾಕಿ.
* 5-8 ನಿಮಿಷದಷ್ಚು‌‌ ಕಾದು ಡಿಕಾಕ್ಷನ್ ಆದಾಗ ನೀರು ಕುದಿಸಿದ ಪಾತ್ರೆಯನ್ನು‌ ಒಲೆಯಿಂದಿಳಿಸಿ, ಕಷಾಯವನ್ನು ಶೋಧಿಸಿ ಲೋಟಕ್ಕೆ ಹಾಕಿ ಕುಡಿಯಿರಿ.
* ಆದರೆ ಬಿಸಿಯಿರುವಾಗ ಕುಡಿದರೆ ಮಾತ್ರ‌ ಅತ್ಯಂತ ಪರಿಣಾಮಕಾರಿಯಾಗುವುದು.

ಈ ರೀತಿಯಾಗಿ ಭಗವಂತ‌ ನಮಗೆ ದಯಪಾಲಿಸಿದ ‌ತುಲಸಿಯು ಶುದ್ಧ‌ವಾತಾವರಣವನ್ನು‌ ನಿರ್ಮಿಸುವುದು ಮಾತ್ರವಲ್ಲ ನಮ್ಮ ರೋಗಗಳನ್ನು ನಿವಾರಿಸಿ ಸಂಜೀವಿನಿಯಾಗುತ್ತಿದೆ. ಹಾಗಾಗಿ ಸರ್ವರ ಮನೆಯಲ್ಲಿಯೂ ಒಂದಾದರು ತುಲಸಿ ಗಿಡವಿರಬೇಕೆನ್ನುವುದು.

ಸೋಜಿಗದ ವಿಚಾರ ಕೇಳಿ. ಮತಾಂಧ ಔರಂಗಜೇಬನ ಕಾಲದಲ್ಲಿ‌, ಆಗಿರಲಿ ಬಾಬರನ ಕಾಲದಲ್ಲಾಗಲಿ ಸನಾತನ ಪರಂಪರೆಯನ್ನು ನಾಶಮಾಡಲು ಯತ್ನಿಸಿದರೆಂಬ ಅಂಶ ಸಿಗುತ್ತದೆಯೇ ಹೊರತು‌ ಸನಾತನ ಸಂಸ್ಕೃತಿಯ‌ ಆಧಾರವಾದ ತುಲಸಿಯನ್ನು‌ ನಾಶಮಾಡಲು ಹೊರಟ‌ ಉದಾಹರಣೆ ಇತಿಹಾಸದಲ್ಲಿಲ್ಲ. ಅದು ಭಗವಂತನ ಅದಮ್ಯ ಚೈತನ್ಯ‌ ಅದರಲ್ಲಿವೆ ಅನ್ನುವ ಕಾರಣಕ್ಕಾ? ಅರಿಯದು. ಆದರೆ ಆ ಮತಾಂಧನ ಗೋರಿಯಲ್ಲಿಯೂ ಈಗ ‌ತುಲಸಿ ಬೆಳೆದು ನಿಂತಿದೆ. ಯಾರ‌ು ಅದನ್ನು ಕಿತ್ತೆಸೆಯಲು ಪ್ರಯತ್ನಿಸಲಿಲ್ಲ. ತುಲಸಿಯ ಶ್ರೇಷ್ಠತೆಗೆ ಚಿಕ್ಕ ಉದಾಹರಣೆಯಷ್ಟೇ ಇದು.

ಶ್ರೀಕೃಷ್ಣ ತುಲಸಿಯ ‌ಮಹತ್ವವನ್ನೂ ಮಹಾಭಾರತದಲ್ಲಿಯೂ ಸಾರಿ ಹೇಳಿದ್ದಾನೆ.‌ಒಂದು ಸಂದರ್ಭದಲ್ಲಿ ಭಗವಂತನನ್ನು ತುಲಾಭಾರ ಮಾಡಿದಾಗ ‌ಯಾವ ವೈಭವೋಪೇತ ವಸ್ತುಗಳೂ ಭಗವಂತನಿಗೆ ಪ್ರೀತಿಪಾತ್ರವಾಗಲಿಲ್ಲ, ಆದರೆ‌ ನಿರ್ಮಲ ಮನಸ್ಸಿನಿಂದ ಅರ್ಪಿಸಿದ ಗರಿಕೆ ಹಾಗೂ ತುಲಸಿ ಭಗವಂತನನ್ನು ಭಕ್ತರೆಡೆಗೆ ಕರೆತಂದಿತು. ಕೆಲವು ಗ್ರಂಥಗಳಲ್ಲಿ‌ ಗರಿಕೆಯೆಂದೂ ಕೆಲವುಗಳಲ್ಲಿ ಅದು ತುಲಸಿಯೆಂದೂ ಪ್ರತಿಪಾದಿಸಲ್ಪಟ್ಟಿದೆ. ಅಂದು ತುಲಸಿಯ‌ ಭಜಿಸಿದರೆ ನಮ್ಮ ರೋಗಗಳು ವಾಸಿಯಾಗುತ್ತಿತ್ತೆಂದು ಪುರಾಣಗಳು ಪ್ರತಿಪಾದಿಸುತ್ತವೆ. ‌ಆದರೆ ಇಂದು ಅದೇ ತುಲಸಿಯನ್ನು ಸಮರ್ಪಕವಾಗಿ ಉಪಯೋಗಿಸಿದರೆ ಖಂಡಿತವಾಗಿಯೂ‌ ನಮ್ಮ ಪಾಲಿನ ಫ್ಯಾಮಿಲಿ ಡಾಕ್ಟರ್ ಆಗಲಿದ್ದಾಳೆ ತುಲಸಿ !!!!

ಆಧ್ಯಾತ್ಮ ದೃಷ್ಟಿಯಿಂದ ನೋಡಿದರೆ ತುಲಸಿ ದೇವಸಾನಿಧ್ಯವನ್ನೇ ದಯಪಾಲಿಸಬಲ್ಲ ಶಕ್ತಿಯುಳ್ಳವಳು, ಲೌಕಿಕ ದೃಷ್ಟಿಯಿಂದ ನೋಡಿದರೆ ನಮ್ಮ ರೋಗಗಳನ್ನು ನಿವಾರಿಸಬಲ್ಲ ಸಂಜೀವಿನಿ. ತುಲಸಿಯ‌ ಮಹಿಮೆ ಇತರ ಪವಿತ್ರವಸ್ತುಗಳಿಗಿಂತಲೂ ಸಹ ಹೆಚ್ಚು ಪಾವನವೆನಿಸಿ ವಿಶೇಷವಾಗಿ ಮಾನ್ಯವಾಗಿದೆಯೆನ್ನುವುದು ಅಷ್ಟೇ ಸ್ಪಷ್ಟ‌ ಹಾಗೂ ಸತ್ಯ.

– ವಸಿಷ್ಠ

Tags

Related Articles

Close