ಅಂಕಣಇತಿಹಾಸದೇಶಪ್ರಚಲಿತ

ಚಾಣಕ್ಯನದು ಸಹಜ ಸಾವೋ ಅಥವಾ ಹತ್ಯೆಯೋ?! ರಾಜಗುರುವಿನ ಸಾವಿನ ರಹಸ್ಯ!!

ಚಾಣಕ್ಯ ಒಬ್ಬರು ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞರು. ಇಷ್ಟು ಮಾತ್ರವಲ್ಲ ಇವರೊಬ್ಬರು ಶ್ರೇಷ್ಠ ತತ್ವಜ್ಞಾನಿ, ಶ್ರೇಷ್ಠ ಗುರು, ವಿದ್ವಾಂಸ, ನ್ಯಾಯಾಧೀಶರು, ರಾಜ ಗುರು ಎಂದು ಹೆಸರು ಪಡೆದಿದ್ದಷ್ಟೇ ಅಲ್ಲದೆ ಅಪಾರ ಬುದ್ಧಿಮತ್ತೆಯಿಂದ ಪ್ರಖ್ಯಾತರಾಗಿದ್ದರು. ಇವರನ್ನು ಕೌಟಿಲ್ಯ ಎಂದೂ ಕರೆಯಲಾಗುತ್ತದೆ. ಮಹಾನ್ ತಂತ್ರಜ್ಞ, ವಿಶ್ಲೇಷಕ ಎಂದು ಹೆಸರು ಪಡೆದಿದ್ದ ಚಾಣಕ್ಯ ತನ್ನ ಮಾಸ್ಟೆರ್ ಮೈಂಡ್‍ನಿಂದ ಭಾರತಕ್ಕೆ ದಂಡೆತ್ತಿಕೊಂಡು ಬಂದಿದ್ದ ಅಲೆಕ್ಸಾಂಡರ್‍ನ ಆಕ್ರಮಣದಿಂದ ಭಾರತವನ್ನು ಅನೇಕ ಬಾರಿ ರಕ್ಷಿಸಿದ್ದರು.

ಇವರು ಅರ್ಥಶಾಸ್ತ್ರ, ರಾಜನೀತಿ, ತತ್ವಜ್ಞಾನಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಇಂದಿನ ಕಾಲಕ್ಕೂ ಸಾಕಷ್ಟು ಪ್ರಸ್ತುತ ಎನಿಸುತ್ತದೆ. ಅವರು ಬರೆದಿರುವ
`ಅರ್ಥಶಾಸ್ತ್ರ’ ಎನ್ನುವ ಮಹಾನ್ ಪುಸ್ತಕ ಇಂದಿಗೂ ರಾಜನೀತಿಗೆ ಪೂರಕ ಎನಿಸಿದೆ. ಇನ್ನು ಅವರ ಚಾಣಕ್ಯ ನೀತಿ ಎನ್ನುವ ಪುಸ್ತಕ ಹಲವು ರಹಸ್ಯಗಳನ್ನು
ಒಳಗೊಂಡಿದೆ. ಚಾಣಕ್ಯ ಅವರನ್ನು ಭಾರತದ ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ ಕ್ಷೇತ್ರದ ಪ್ರವರ್ತಕ ಎಂದೇ ಕರೆಯಲಾಗುತ್ತದೆ. ಇವರ ಅರ್ಥಶಾಸ್ತ್ರ ಕೃತಿಯಿಂದ ಭಾರತ ಪ್ರಾಚೀನ ಕಾಲದಲ್ಲೂ ಆಡಳಿತ ವ್ಯವಸ್ಥೆಯಲ್ಲಿ ಆರ್ಥಿಕ ವ್ಯವಸ್ಥೆ ಎಷ್ಟೊಂದು ಉತ್ತುಂಗ ಸ್ಥಿತಿಯಲ್ಲಿತ್ತು ಎಂಬುವುದನ್ನು ತಿಳಿಸುತ್ತದೆ.

ಚಾಣಕ್ಯ ಭಾರತದ ಇತಿಹಾಸದ ಪ್ರಸಿದ್ಧ ರಾಜ ಚಂದ್ರಗುಪ್ತನನ್ನು ರೂಪಿಸಿದ ವ್ಯಕ್ತಿಯಾಗಿದ್ದು, ಮೌರ್ಯ ಸಾಮ್ರಾಜ್ಯಕ್ಕೆ ನಾಂದಿ ಹಾಡಿತು. ಚಾಣಕ್ಯ ಬೀದಿಯಲ್ಲಿದ್ದ
ಹುಡುಗನೊಬ್ಬನನ್ನು ಆಯ್ಕೆ ಮಾಡಿ ನಂದಾಸನ ನ್ಯಾಯಾಲಯದಲ್ಲಿ ತಾನು ಅನುಭವಿಸಿದ ಅವಮಾನಕ್ಕೆ ಪ್ರತೀಕಾರ ತೀರಿಸಲು ರಾಜನನ್ನಾಗಿ ಪರಿವರ್ತಿಸಿದನು. ಅವನೇ ರಾಜ ಚಂದ್ರಗುಪ್ತ ಮೌರ್ಯ. ಚಾಣಕ್ಯ ಚಂದ್ರಗುಪ್ತನಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತಿ ಸಮರ್ಥ ರಾಜನನ್ನಾಗಿ ರೂಪಿಸಿದ. ಚಂದ್ರಗುಪ್ತ ಭಾರತೀಯ ರಾಜರನ್ನೆಲ್ಲಾ ಒಟ್ಟು ಸೇರಿಸಿ ಅವರಲ್ಲಿಯೂ ದೇಶಭಕ್ತಿಯನ್ನು ಹುಟ್ಟುಹಾಕಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಉಂಟುಮಾಡಿದ್ದನು. ಭಾರತೀಯರ ಮಧ್ಯೆ ಸಾಮರಸ್ಯದ ಪ್ರಾಮುಖ್ಯತೆಯನ್ನು ಸಾರಿದನು. ತನ್ನ ಆಡಳಿತದಲ್ಲಿ ಉತ್ತಮ ರಾಜನೀತಿಯನ್ನು ಪಾಲಿಸಿ ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿದನು. ಚಂದ್ರಗುಪ್ತತನ್ನ ಗುರು ಚಾಣಕ್ಯನ ಮಾರ್ಗದರ್ಶನದಲ್ಲಿ ತಾನೊಬ್ಬ ಸಮರ್ಥ ರಾಜನೆಂದು ಸಾಬೀತುಪಡಿಸಿದನು.

ಚಾಣಕ್ಯನ ಉಪದೇಶ, ಸಿದ್ಧಾಂತಗಳು ಪ್ರಸ್ತುತ ಕಾಲಘಟ್ಟದಲ್ಲಿ ಪೂರಕ ಎನಿಸಿದೆ. ಚಾಣಕ್ಯನ ಬೋಧನೆಗಳನ್ನು ಅನುಸರಿಸಿದರೆ ಜೀವನದಲ್ಲಿ ಸುಖ, ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ. ಚಾಣಕ್ಯನ ಬೋಧನೆಗಳು ಇಂದಿನ ಅರ್ಥಶಾಸ್ತ್ರಜ್ಞರಿಗೆ, ರಾಜಕಾರಣಿಗಳಿಗೆ ತೀರಾ ಅಗತ್ಯವಾಗಿದೆ. ಆದರೆ ಚಾಣಕ್ಯನ ಜೀವನದ ಒಂದು ರಹಸ್ಯವಿದೆ. ಅದುವೇ ಚಾಣಕ್ಯನ ಮರಣ. ಚಾಣಕ್ಯ ಮೃತಪಟ್ಟಿದ್ದು ಹೇಗೆ ಎಂಬ ಗೊಂದಲ ಇಂದಿಗೂ ಇದೆ.

ಚಾಣಕ್ಯನ ಮರಣದ ಸತ್ಯ ಯಾರಿಗೂ ಗೊತ್ತಿಲ್ಲ. ಚಾಣಕ್ಯನ ಮರಣದ ಹಿಂದೆ ಎರಡು ಪಿತೂರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಜವಾಗಿಯೂ ಏನು
ನಡೆಯಿತೆಂದು ತೋರಿಸಲು ಸ್ಪಷ್ಟವಾದ ಪುರಾವೆಗಳಿಲ್ಲ.

ಚಂದ್ರಗುಪ್ತನ ಬಳಿಕ ಆತನ ಪುತ್ರ ಬಿಂದುಸಾರ ಮೌರ್ಯ ಸಾಮ್ರಾಜ್ಯದ ಪಟ್ಟವನ್ನೇರಿದನು. ಇದಾದ ಬಳಿಕವೂ ಚಾಣಕ್ಯನು ಬಿಂದುಸಾರನ ಮುಖ್ಯ
ಮಾರ್ಗದರ್ಶಕನಾಗಿ ಮುಂದುವರಿದನು. ಬಿಂದುಸಾರ ಕೂಡಾ ಚಾಣಕ್ಯನನ್ನು ಹೆಚ್ಚಾಗಿ ಗೌರವಿಸುತ್ತಿದ್ದನು. ಚಾಣಕ್ಯ ಮತ್ತು ಬಿಂದುಸಾರ ಬಾಂಧವ್ಯವನ್ನು ನೋಡಿ
ಅನೇಕರಿಗೆ ಸಹಿಸಲಾಗುತ್ತಿರಲಿಲ್ಲ. ಚಾಣಕ್ಯ ಮತ್ತು ಬಿಂದುಸಾರನ ಬಾಂಧವ್ಯವನ್ನು ಹೇಗಾದರೂ ಮಾಡಿ ಮುರಿಯಬೇಕೆಂದು ಕೆಲವರು ಉಪಾಯ ಹೂಡಿದರು. ಇದರ ಹಿಂದಿನ ಪ್ರಧಾನ ಸೂತ್ರಧಾರ ಸುಬಂಧು. ಈತ ಬಿಂದುಸಾರನ ಮಂತ್ರಿಯಾಗಿದ್ದನು.

ಚಾಣಕ್ಯನು ಬಿಂದುಸಾರನ ತಾಯಿಯನ್ನು ವಿಶ್ವಾಸಘಾತಕ ರೀತಿಯಲ್ಲಿ ಕೊಲ್ಲಿಸಿದ ಎಂಬ ಭಾವನೆ ಬರುವಂತೆ ಸುಬಂಧು ಕುತಂತ್ರ ಹೂಡಿದ್ದ. ಇದರಿಂದ
ಬಿಂದುಸಾರನಿಗೆ ಚಾಣಕ್ಯನ ಬಗ್ಗೆ ತೀವ್ರ ತಿರಸ್ಕಾರದ ಭಾವನೆ ಮೂಡಿತು. ಬಿಂದುಸಾರನ ವರ್ತನೆಯಿಂದ ಚಾಣಕ್ಯ ತೀವ್ರ ನೊಂದುಕೊಂಡಿದ್ದನು. ನೀನು
ರಾಜ್ಯದಲ್ಲಿರುವ ಉದ್ದೇಶವೇನು ಎಂದು ಬಿಂದುಸಾರನು ಚಾಣಕ್ಯರಲ್ಲಿ ಪ್ರಶ್ನಿಸಿದನು.

ಅವಮಾನವನ್ನು ತಾಳಲಾರದ ಚಾಣಕ್ಯ ರಾಜ್ಯ ಬಿಟ್ಟು ತೆರಳುತ್ತಾನೆ. ಬಳಿಕ ತಾನು ಸಾಯುವ ತನಕ ಉಪವಾಸ ಹೂಡುತ್ತಾನೆ. ಬಿಂದುಸಾರನ ತಾಯಿ ಧುರ್ಧರನ್ನು ನೋಡಿಕೊಳ್ಳುತ್ತಿದ್ದ ಪರಿಚಾರಕಿಯೊಬ್ಬಳು ತಾಯಿ ದುರ್ಧಾ ಸಾಯಲು ಕಾರಣವೇನೆಂಬ ಸತ್ಯವನ್ನು ವಿವರಿಸಿದಳು. ಶತ್ರುಗಳ ಸಂಚಿನಿಂದ ಚಂದ್ರಗುಪ್ತನಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಆತನನ್ನು ರಕ್ಷಿಸಲು ಚಾಣಕ್ಯ ಚಂದ್ರಗುಪ್ತನಿಗೆ ತಿಳಿಯದಂತೆ ಆಹಾರದಲ್ಲಿ ಸ್ವಲ್ಪ ಪ್ರಮಾಣದ ವಿಷ ಸೇರುತ್ತಿದ್ದರು.

ಇದರ ಬಗ್ಗೆ ಚಂದ್ರಗುಪ್ತನ ಪತ್ನಿ ಧುರ್ಧಾರಿಗೆ ಅರಿವಿರಲಿಲ್ಲ. ಚಂದ್ರಗುಪ್ತ ತಟ್ಟೆಯಲ್ಲಿ ಬಿಟ್ಟಿದ್ದ ಎಂಜಲು ಆಹಾರವನ್ನು ಸೇವಿಸಿ ವಿಷಪ್ರಾಶನವಾಗಿ
ಒದ್ದಾಡಲಾರಂಭಿಸಿದಳು. ಈ ವೇಳೆ ರಾಣಿ ಗರ್ಭಿಣಿಯಾಗಿದ್ದಳು. ರಾಣಿ ಉಳಿಯುವುದು ಸಾಧ್ಯವಿಲ್ಲ ಎಂದು ತಿಳಿದ ಚಾಣಕ್ಯ ರಾಜ್ಯದ ಉತ್ತರಾಧಿಕಾರಿಯನ್ನು ಉಳಿಸುವ ಸಲುವಾಗಿ ರಾಣಿಯ ಗರ್ಭವನ್ನು ಕತ್ತರಿಸಿ ತೆಗೆದರು. ಮಗುವನ್ನು ವಿಷದಿಂದ ಪಾರು ಮಾಡಲಾಯಿತು. ಆ ಮಗುವಿಗೆ ಚಾಣಕ್ಯ ಬಿಂದುಸಾರ ಎಂದು ನಾಮಕರಣ ಮಾಡಿದರು. ಅಮ್ಮನ ರಕ್ತದ ಬಿಂದು ಮಗುವಿನ ಹಣೆಯ ಮೇಲೆ ಮೆತ್ತಿದ ಕಾರಣಕ್ಕೆ ಬಿಂದುಸಾರ ಎಂಬ ಹೆಸರಿಡಲು ಕಾರಣವೆಂದು ತಿಳಿದುಬಂದಿದೆ.

ಈ ವಿಷಯವನ್ನು ದಾದಿಯಿಂದ ಪಡೆದ ಬಿಂದುಸಾರನಿಗೆ ನಿಜ ಅರ್ಥ ತಿಳಿದು, ತೀವ್ರ ನೊಂದುಕೊಂಡನು. ಚಾಣಕ್ಯನನ್ನು ಮರಳಿ ರಾಜ್ಯಕ್ಕೆ ಬರುವಂತೆ ಮನವಿ
ಮಾಡಿದನು. ಆದರೆ ಆವಾಗಲೇ ಸಲ್ಲೇಖನ ವೃತ ಕೈಗೊಂಡಿದ್ದ ಚಾಣಕ್ಯ ಅದರಿಂದ ಮರಣವನ್ನಪ್ಪಿದರು ಎನ್ನಲಾಗಿದೆ. ಸಲ್ಲೇಖನ ವೃತ ಎಂದರೆ ಸಾಯುವ ತನಕ
ಆಹಾರ ಸೇವಿಸದೆ ಮರಣವನ್ನಪ್ಪುವ ಒಂದು ಕಠಿಣ ವೃತ. ಕ್ರಿಸ್ತಪೂರ್ವ 283ರಲ್ಲಿ ಪಾಟಲೀಪುತ್ರದಲ್ಲಿ ಚಾಣಕ್ಯ ಮೃತಪಟ್ಟರು ಎಂದು ಹೇಳಲಾಗಿದೆ.

ಇನ್ನೊಂದು ವಿಷಯದ ಪ್ರಕಾರ ಸುಬಂಧು ಚಾಣಕ್ಯರನ್ನು ಬೆಂಕಿಯಲ್ಲಿ ದಹಿಸಿ ಕೊಂದನು ಎಂದೂ ಹೇಳಲಾಗುತ್ತದೆ. ನಿಜ ವಿಷಯ ಅರಿತುಕೊಂಡ ಬಿಂದುಸಾರನು ತನ್ನ ಗುರುಗಳನ್ನು ಕೊಂದ ಪ್ರತೀಕಾರವಾಗಿ ಸುಬಂಧುವನ್ನು ಕೊಂದನು ಎಂದು ಹೇಳಲಾಗುತ್ತಿದೆ.

– ಚೇಕಿತಾನ

Tags

Related Articles

Close