ಅಂಕಣ

ತಾಜ್‌ಮಹಲ್ ಪ್ರೀತಿಯ‌ ಪ್ರತೀಕವೋ, ಐತಿಹಾಸಿಕತೆಯ‌ ಪ್ರತಿಬಿಂಬವೋ ಅಥವಾ‌ ರಕ್ತಾಂಕಿತೆಯ‌ ಚರಿತ್ರೆಯ ರೂಪವೋ??

ಅದು ಅತಿ ಸುಂದರವಾದ ಅಮೃತಶಿಲಾ ಸೌಧ . ಬಹುಶಃ ಪ್ರಪಂಚದ ನಿರ್ಮಾಣಗಳಲ್ಲಿ ಅದ್ಭುತವೆಂದು ಪರಿಗಣಿಸಲಾಗುತ್ತಿರುವ ಸೌಧವದು. ನಾವು ಪ್ರೈಮರಿಯಲ್ಲಿ ಇರುವಾಗಲೇ ಇದರ ಕುರಿತಾದ ಪಾಠಗಳನ್ನು ಕಲಿತು ಕಲಿತು ಬೆಳೆಯುತ್ತೇವೆ.. ತಾಜ್ ಮಹಲ್‌ ಅಂದ ಕೂಡಲೇ ಶಾಜಹಾನ್ ಹಾಗೂ ಮುಮ್ತಾಜಳ ಅಮರ ಪ್ರೇಮದ ಚಿತ್ರಣ ಕಣ್ಣ ಮುಂದೆ ಹಾದುಹೋಗುತ್ತದೆ. ಅದರ ಅದ್ವಿತೀಯ ಸೌಂದರ್ಯ‌ ಮಾಡಿದ‌ ಮೋಡಿಯದು ಎಂದೇ ಬೇಕಾದರೆ ಹೇಳಬಹುದು.

ಆದರೆ ಅದರ ಹಿಂದಿನ ಕಥನ ಮಾತ್ರ ತದ್ವಿರುದ್ಧ..!! ಇದೇ ಸೌಧ ಮುಮ್ತಾಜಳ ಸಮಾಧಿಯೇ ಆದರೂ ಅದನ್ನು ‌ಕಟ್ಟಿಸಿದವನು ಮಾತ್ರ ಷಾಜಹಾನ್ ಅಲ್ಲ. ಆ ದಂಪತಿ ಈ ಧರೆಗೆ ಆಗಮಿಸುವುದಕ್ಕಿಂತ‌ ಮುಂಚೆಯೇ ಆ ಕಟ್ಟಡವಿತ್ತು. ಹಾ.. ಬಾಬರನ ಕಾಲದಲ್ಲಿಯೇ ಇತ್ತು. ಆತನ ಉಸಿರು ಕೂಡ‌ ಆ ಮಂದಿರದಲ್ಲೇ ಅಂತ್ಯವಾದುದು..!!

ಇದುವರೆಗೆ ನಾವು ಕಟ್ಚುಕಥೆಗಳನ್ನೇ ಆಲಿಸುತ್ತಾ ಬಂದಿದ್ದೇವೆ. ನಾವು ನೋಡಿದ ಸಿನೆಮಾಗಳಲ್ಲಿ, ನಾಟಕಗಳಲ್ಲಿ, ಪುಸ್ತಕಗಳಲ್ಲಿ ಮಾಡಿದ ವರ್ಣನೆ, ವೈಭವಗಳ ಚಿತ್ರಣಗಳೇ ಅವಕ್ಕೆ ಕಾರಣ. ಆದ್ದರಿಂದಲೇ ಈ ಸಂಗತಿಯ‌ ಅರಿವಾದರೂ ನಂಬಲು ಕಷ್ಟಸಾಧ್ಯವೆನಿಸಬಹುದು. ಆದರೆ ಇದು ವಾಸ್ತವ..!!

ಭಾರತ ಸರಕಾರಕ್ಕೆ ಸೇರಿದ ಪ್ರಾಚೀನ ಪತ್ರ ಭಾಂಡಾಗಾರ (ನ್ಯಾಷನಲ್ ಆರ್ಕೈವ್ಸ್) ದಲ್ಲಿ ಸಂರಕ್ಷಿಸಿಡಲಾಗಿರುವ ಬಾದಷಹನಾಮವನ್ನು ಪ್ರೋ. ಪಿ. ಎನ್. ಓಕರು ಆಂಗ್ಲಾನುವಾದವನ್ನು ಮಾಡಿದ್ದಾರೆ. ಅದರಲ್ಲಿರುವ ಉಲ್ಲೇಖದಂತೆ , ಆ ಮಹಾನ್ ನಗರದ ದಕ್ಷಿಣದಲ್ಲಿ ಭವ್ಯವಾದ, ರಮಣೀಯವಾದ ಹುಲುಸಾಗಿ ಬೆಳೆದಿರುವ ಉದ್ಯಾನದಿಂದ ಆವರಿಸಲ್ಪಟ್ಟಿರುವ ಪ್ರದೇಶದ ನಡುವೆ ಒಂದು ಭವನ ಉಂಟು. ಇದನ್ನು ರಾಜಾ ಮಾನ್ ಸಿಂಗ್ ಮಹಲ್ ಎನ್ನುತ್ತಾರೆ. ಪ್ರಸ್ತುತ ಅದರ‌ ಯಜಮಾನ ರಾಜಾ‌ಜಯಸಿಂಗ್.(ಮಾನ್ ಸಿಂಗರ ಮೊಮ್ಮಗ) (ಪುಟ. 403).

ಇದರಿಂದ ಒಂದು ವಿಚಾರ ಮಾತ್ರ ಸ್ಪಷ್ಟವಾಯಿತು. ಷಾಜಹಾನನ ಹೆಂಡತಿಯ ಸಮಾಧಿ-ಸ್ಥಳದಲ್ಲಿ – ಅವಳು ತೀರಿಕೊಳ್ಳುವ ಮೊದಲೇ ಒಂದು ಪುರಾತನವಾದ ರಾಜಮಹಲ್ ಇತ್ತೆಂಬುದು. ಪ್ರಸ್ತುತ ಇರುವ ತಾಜ್ ಮಹಲ್ ಮುಮ್ತಾಜಳ ಸಮಾಧಿ ಮಾಡಿದ ಸ್ಥಳವೆಂಬುದಾಗಿಯೂ ಹೇಳಲಾಗುತ್ತಿದೆ. ಸರಿ. ಈಗ ನೀವೇ ಯೋಚಿಸಿ. ಅಲ್ಲಿ ಇದ್ದ ಒಂದು ಅದ್ಭುತ ಮಂದಿರವನ್ನು, ನೂರಾರು ಕೋಣೆಗಳಿದ್ದ ಕಟ್ಟಡವನ್ನು ನೆಲಸಮ ಮಾಡಿ, ಅದರ ಅವಶೇಷಗಳನ್ನು ಸ್ಥಳಾಂತರ ಮಾಡಿ, ಬೃಹತ್ ಆದ‌ ನವ ಸೌಧವನ್ನು ನಿರ್ಮಿಸಲು ಎಷ್ಟು ವರ್ಷ ಹಿಡಿಯುತ್ತದೆ?? ಅದು ಸಿದ್ಧವಾಗುವವರೆಗೆ ಮುಮ್ತಾಜಳ ಶವ ಎಲ್ಲಿತ್ತೆಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಸರಿ. ಬದುಕಿದ್ದಾಗಲೇ ಪ್ರೀತಿಯ ದ್ಯೋತಕವಾಗಿ ಒಂದು ಸೌಧವನ್ನು ನಿರ್ಮಿಸಬೇಕೆಂದು ಯೋಜಿಸಿದ್ದ‌ ಎಂದು ಯಾವ ಇತಿಹಾಸಕಾರನೂ ಉಲ್ಲೇಖಿಸಲಿಲ್ಲವಲ್ಲಾ. ಷಾಹಜಾನನಿಗೆ 14ನೆಯ ಮಗುವನ್ನು ಹಡೆಯುವ ಪ್ರಯತ್ನದಲ್ಲಿಯೇ ಅಸುನೀಗಿದ ಮುಮ್ತಾಜಳನ್ನು ಆ ಊರಿನಲ್ಲಿಯೇ ಹೂಳಿದ್ದರು. ನಂತರ ಅದೇ ಆಗ್ರಾದಲ್ಲಿದ್ದ‌ ಮಾನ್ ಸಿಂಗ್ ಪ್ಯಾಲೇಸನ್ನು ಕೆಡವಿ ಒಂದು ಕಟ್ಟಡ‌ನಿರ್ಮಾಣ ಮಾಡಬೇಕೆಂಬ ದುರಾಲೋಚನೆ ಬಂದಾಗ, ಆರು ತಿಂಗಳ ನಂತರ ಬುರ್ಹಾನ್ ಪುರದಲ್ಲಿರುವ ಗೋರಿಯನ್ನು ಅಗೆದು ಶವವನ್ನು 600 ಮೈಲು ದೂರದಲ್ಲಿದ್ದ ಆಗ್ರಾಕ್ಕೆ ಸ್ಥಳಾಂತರಿಸಿ ಸಮಾಧಿ ಮಾಡಿದರು. ಇದು ನಾನು ಸೃಷ್ಟಿಸಿರುವ ಇತಿಹಾಸವಲ್ಲ. ಸ್ವತ: ಷಾಜಹಾನ್ ಕಾಲದಲ್ಲಿದ್ದ ಇನಾಯತ್ ಖಾನ್ ಬರೆದ ಷಾಜಹಾನ್ ನಾಮದಲ್ಲಿ ಉಲ್ಲೇಖವಾದ ವಿಚಾರ. ಈ ಹಸ್ತಪ್ರತಿಯನ್ನು
A.R.Fuller ಆಂಗ್ಲಕ್ಕೂ ತುರ್ಜಮೆ ಮಾಡಿದ್ದ.

On the 17th of Zi’L – Qada, 1040(17 June 1631)the unfortunate demise of her Majesty the Queen took place… The treasury of chastity was buried temporarily in a pavilion in the garden of Zainabad in Burhanpur..(page.70)

ಮುಂದುವರಿದು, A R Fuller ಬರೆದ ಪುಸ್ತಕದ 73-74ನೆಯ‌ಪುಟದಲ್ಲಿ, ( 1631 ರ ಡಿಸೆಂಬರ್ 11 ರಂದು ಸ್ವರ್ಗೀಯ ಮಹಾರಾಣಿಯವರ ಭೌತಿಕ ದೇಹವನ್ನು ಬುರ್ಹಾನಿಪುರದಿಂದ ಅಕ್ಬರಾಬಾದ್ (ಈಗಿನ ಆಗ್ರಾ) ಗೆ ತಂದರು. ಆ ನಗರಕ್ಕೆ ದಕ್ಷಿಣದಲ್ಲಿ ಆಕೆಯ ‌ಸಮಾಧಿಗೆ ಎತ್ತರದಲ್ಲಿದ್ದ ಒಂದು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿದರು. ಅದು ಹಿಂದೆ ರಾಜಾ ಮಾನ್ ಸಿಂಗ್ ನ ಆಸ್ತಿ. ಪ್ರಸ್ತುತ ಆತನ ಮೊಮ್ಮಗ ರಾಜಾ‌ಜಯಸಿಂಗನಿಗೆ ಸೇರಿದೆ… ಅಕ್ಬರಾಬಾದಿಗೆ ತಲುಪಿದ ನಂತರ ಭೈತಿಕ ಕಾಯವನ್ನು 1632 ರ ಜನವರಿ 15ರಂದು ಸಮಾಧಿ ಮಾಡಿದರು).

ಹಾಗಾದರೆ ಆಗ್ರಾದಲ್ಲಿ ಒಂದು ಖಾಲಿ ಜಾಗವನ್ನು ಆಯ್ಕೆ‌ ಮಾಡಿ, ಅಲ್ಲಿ ತನ್ನ ಪ್ರೀತಿಯ (?) ಪತ್ನಿಯ ಸಮಾಧಿ ಎರಡನೆಯ ಬಾರಿ ನಿರ್ಮಿಸಿ ಒಂದು
ಬೃಹತ್ತಾದ ಕಟ್ಟಡ ನಿರ್ಮಾಣವನ್ನು ಮಾಡಿದನೆಂದು ಅಂದಾಜಿಸಬಹುದೇ? ಬಿಡಿ. ಪ್ರಪಂಚ‌ ಈಗ ನಂಬುತ್ತಿರುವುದೂ ಇದೇ ಕಥೆಯನ್ನು. ಎನ್ಸೈಕ್ಲೋಪೀಡಿಯಾ
ಬ್ರಿಟಾನಿಕಾ ದಲ್ಲಿಯೂ ಇದೇ ಮಾತನ್ನು ಉಲ್ಲೇಖಿಸಲಾಗಿದೆ.

“.…She died… in Burhanpur in 1631. The building was commenced in 1632 after plans had been prepared by a council of architects from India, Persia, Central Asia and beyond..More than 20000 workmen were employed daily to complete the Mausoleum building itself by about 1643 although the whole taj complex took 22 years to
complete, at a cost of 40,000,000 rupees. “

ಓರ್ವ ವಿದೇಶೀ ಲೇಖಕರು ಬರೆದರೆಂದರೆ ಮುಗಿಯಿತು.‌ ನಮ್ಮ ದೇಶದ ಎಡಬಿಡಂಗಿ ಇತಿಹಾಸಕಾರರಿಗೆ ಅದುವೇ ವೇದವಾಕ್ಯ. ಯಾವ ವಿಮರ್ಶೆಯನ್ನೂ ಮಾಡಲೇ ಇದಮಿತ್ಥಂ ಎಂಬುದಾಗಿ ಒಪ್ಪಿದ್ದರು. ಅದುವೇ ನಮಗೆ ಪಾಠವೂ ಆಯಿತು. ಆದರೆ…

ದಿನಕ್ಕೆ 20000 ಕೆಲಸಗಾರರನ್ನು ನೇಮಿಸಿ ಒಂದೇ ಸಮನೆ 21 ವರ್ಷಗಳ ಕಾಲ ಕೋಟಿಗಟ್ಟಲೆ ರುಪಾಯಿಗಳನ್ನು ವೆಚ್ಚ‌ ಮಾಡಿ ಬಾರಿ ಪ್ರಾಜೆಕ್ಟ್ ನಿರ್ಮಾಣ
ಕಾರ್ಯ ಒಂದೇ ಸಮನೆ ನಡೆಯಿತೆಂದಾಗ ಹಲವು ಪ್ರಶ್ನೆಗಳು ಕಾಡುತ್ತವೆ. ಎಮ್ ವಿ ಆರ್ ಶಾಸ್ತ್ರೀ ಬರೆದ “ಏದಿ ಚರಿತ್ರೆ” ಯಲ್ಲಿಯೂ ಈ ವಿಚಾರವನ್ನು ಅವರು
ಉಲ್ಲೇಖಿಸುತ್ತಾರೆ. ಆ ಪುಸ್ತಕ ಕನ್ನಡಕ್ಕೂ ಬಾಬು ಕೃಷ್ಣಮೂರ್ತಿಯವರು ಅನುವಾದಿಸಿದ್ದಾರೆ.

ಇಡೀ ಸಾಮ್ರಾಜ್ಯದಲ್ಲಿ ಅನೇಕ ವರ್ಷಗಳ ಕಾಲ ಅದೇ ಒಂದು ಅತ್ಯಂತ ‌ವಿಶಿಷ್ಟ ಸಂಗತಿಯಲ್ಲವೇ? ಆಡಳಿತ ಯಂತ್ರವಿಡೀ ಆ ಯೋಜನೆಯ ಕುರಿತು ವರ್ಷಗಟ್ಟಲೇ ನಿಮಗ್ನರಾಗಿರಬೇಕಲ್ಲವೇ? ಮಹಾಶಿಲ್ಪಿಗಳನ್ನು ಕರೆಸಿ, ವ್ಯವಸ್ಥಿತವಾದ ಪ್ಲಾನ್ ಒಂದನ್ನು ರೂಪಿಸುವಲ್ಲಿಂದ ಪ್ರಾರಂಭಿಸಿ, ಸಮಾಧಿ ಗೃಹವನ್ನು ರಚಿಸಿ , ಉಳಿದ ನಿರ್ಮಾಣಗಳನ್ನು ಪೂರೈಸುವಲ್ಲಿಯವರೆಗೆ… ಭಾರೀ ಕೋಲಾಹಲವನ್ನೇ ಉಂಟುಮಾಡಿರಬೇಕಲ್ಲವೇ?? ಸರಕು- ಸಾಮಾಗ್ರಿಗಳ ಸಾಗಾಣಿಕೆ ಅತಿಯಾದ ಪ್ರಮಾಣದಲ್ಲಿ ನಡೆದಿರಬೇಕು. ಪ್ರಪಂಚದಲ್ಲಿ ಹಿಂದೆಂದೂ ಕೇಳರಿಯದ ಇಂತಹ ಪ್ರೇಮ ಸ್ಮಾರಕದ ನಿರ್ಮಾಣ ಯಜ್ಞವನ್ನು ವರ್ಷಗಳ ಕಾಲ ಕಣ್ಣಾರೆ ಕಂಡ ಆಸ್ಥಾನದ ಮಂದಿಮಾಗಧರು ಆ ವಿವರಗಳನ್ನು ಅತಿಶಯೋಕ್ತಿಗಳಿಂದ ವರ್ಣಿಸಿರಬೇಕಲ್ಲವೇ?? ಕನಿಷ್ಠ ಪಕ್ಷ ಉಲ್ಲೇಖವಾದರೂ ಇರಬೇಕಲ್ಲವೇ??

ಹಾಗಾದರೆ ಆ ರೆಕಾರ್ಡ್ ಗಳು ಎತ್ತ‌ಮಾಯವಾದವು??

ಈ ವಿಚಾರ ನಂಬಲು ಸ್ವಲ್ಪ ಕಷ್ಟವೆನಿಸಿದರೂ ಸತ್ಯವಿದು. ತಾಜ್ ಮಹಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊಗಲ್ ದರ್ಬಾರಿನಲ್ಲಿ ಕಿಂಚಿತ್ತೂ ದಾಖಲೆಯಿಲ್ಲ. ನಿಜಕ್ಕೂ ಅಂತಹ ಬೃಹತ್ ನಿರ್ಮಾಣ ಒಂದು ನಡೆಯಿತೆಂಬ ದಾಖಲೆಯೇ ಕಾಣಸಿಗುವುದಿಲ್ಲ. ಆ ನಿರ್ಮಾಣಕ್ಕೆ ತಗುಲಿದ ವೆಚ್ಚದ ಕುರಿತಾಗಿ ಅನೇಕ ಅಭಿಪ್ರಾಯವಿದೆಯಷ್ಟೇ.ಆ ಖರ್ಚುಗಳಿಗೆ ಸಂಬಂಧಿಸಿದ‌ ಇದಮಿತ್ಥಂ ಎಂಬ ದಾಖಲೆಗಳಿಲ್ಲವೆಂಬುದೇ ಆಶ್ಚರ್ಯಕರ..

ಸರಿ. ಷಾಹಜಾನನಿಗೆ ಪಬ್ಸಿಸಿಟಿಯ ಹುಚ್ಚು ಇರಲಿಲ್ಲ. ಅದಕ್ಕಾಗಿಯೇ ಯಾವ ರೆಕಾರ್ಡನ್ನು ಕೂಡ ಬರೆಯಲು, ದಾಖಲಿಸಲು ಅನುಮತಿಯನ್ನು ನೀಡಲಿಲ್ಲ ಎಂಬುದನ್ನು ಅರಿತರೇ, ಅದೂ ಮೂಢತನವೇ ಆಗುತ್ತದೆ. ಯಾಕೆ ಗೊತ್ತಾ?? 1609 ರಲ್ಲಿ ಷಾಜಹಾನನ ಆಸ್ಥಾನವನ್ನು ಸಂಪರ್ಕಿಸಿದ ಇಂಗ್ಲಿಷ್ ವಿಲಿಯಂ ಹಾಕಿನ್ಸನ ದಾಖಲಿಸಿದ ಸಂಗತಿಗಳ ಒಂದು ಸ್ಯಾಂಪಲ್ ನೋಡಿ.

” ಆರು ಕಪ್ಪುಗಳ ಗಾಢವಾದ ಮದ್ಯವನ್ನು ಕುಡಿದಾಗ ಆತ ಕೆಲಸಕ್ಕೆ ಬಾರದ ಎಷ್ಟೋ ಮಾತುಗಳನ್ನು ಒದರುತ್ತಾನೆ. ಗುಂಡು ಹಾಕಿದಾಗ, ಹಾಕದೇ ಇರುವಾಗ ಸಹ ಆತ‌ ಏನು ಹೇಳಿದರೂ, ಏನು ಮಾಡಿದರೂ ಕೂಡಲೇ ರೆಕಾರ್ಡ್ ಮಾಡಲು ರೊಟೇಷನ್ ಪದ್ಧತಿಯಲ್ಲಿ ಲಿಪಿಕಾರರು ಕಾಯುತ್ತಿರುತ್ತಾರೆ.‌ಅವನ ಜೀವನದ ಯಾವ ಒಂದು ಚಿಕ್ಕ ಘಟನೆಯನ್ನೂ ಅವರು ರೆಕಾರ್ಡ್ ಮಾಡದೇ ಇರುವುದಿಲ್ಲ – ಅಂತಿಮವಾಗಿ ಆತ ಪಾಯಿಖಾನೆಗೆ ಹೋಗುವುದೂ, ಹೆಂಡತಿಯರೊಂದಿಗೆ ಮಲಗುವುದೂ ಕೂಡ…)” (ಸಂಪುಟ 7, ಪುಟ- 176)

ಪಾಯಿಕಾನೆಗೆ ಹೋಗುವುದನ್ನೂ ದಾಖಲಿಸುತ್ತಾನೆಂದರೆ ಆತನಿಗೆ ಅದೆಷ್ಟು ಪ್ರಚಾರದ ಕುರಿತಾಹಿ ಹುಚ್ಚಿದ್ದಿರಬಹುದು.‌ಅಂತಹದ್ದರಲ್ಲಿ ಒಂದು ಶತಮಾನವಿಡೀ
ಕಾಲಘಟ್ಟದಲ್ಲಿಯೇ ಅಪರೂಪವಾದ ಕಟ್ಟಡವನ್ನು ನಿರ್ಮಿಸಿರುವಾದ ದಾಖಲಿಸದೇ ಇರುತ್ತಾನೆಯೇ?? ನಿಮಗೆ ಅರಿವಿರಲಿ. ಮುಮ್ತಾಜಳ ಸಮಾಧಿಯೆಂದು
ಹೇಳುವುದಕ್ಕಾದರೂ ಅಲ್ಲಿ ಮುಮ್ತಾಜಳ ಶಿಲಾಫಲಕವಿಲ್ಲ.. ಅದಕ್ಕೆ ದಾಖಲೆಯಾಗಿ ಶಿಲಾಶಾಸನವೂ ಇಲ್ಲ. ಯಾಕೆ ಹೀಗೆ?? ಅದು ತಾನು ಅತಿಕ್ರಮಣ ಮಾಡಿ
ಏರ್ಪಡಿಸಿದ ಪುರಾತನ ರಾಜಭವನವೆಂಬ ಸತ್ಯ ಪ್ರಜೆಗಳಿಗೆಲ್ಲಾ ತಿಳಿದಿದೆ ಎಂಬ ಕಾರಣಕ್ಕಾಗಿಯೇ ಅದನ್ನು ತನ್ನ ಘನಕಾರ್ಯವನ್ನಾಗಿ ಚಿತ್ರಿಸಲು ಷಾಜಹಾನ್ ಸಾಹಸ ಮಾಡಲಿಲ್ಲ ಅನ್ನೋಣವೇ??

ಅದೇ ಕಟ್ಟಡಲ್ಲಿ ತನ್ನ ತಾತನ ತಾತ ಬಾಹರ್ ಕೂಡ ವಾಸವಿದ್ದನೆಂಬ ಉಲ್ಲೇಖವೂ ಇದೆ. “ಗುರುವಾರ ನಾನು ಆಗ್ರಾವನ್ನು ಪ್ರವೇಶಿಸಿ ಸುಲ್ತಾನ್ ಇಬ್ರಾಹಿಂ ಪ್ಯಾಲೇಸ್ ನಲ್ಲಿ ವಸತಿ ಏರ್ಪಡಿಸಿದೆ. ಈದ್ ನ ಕೆಲ ದಿನಗಳ ನಂತರ ಅಲ್ಲಿನ ಗುಮ್ಮಟದ ಕೆಳಗೆ ಕಲ್ಲುಕಂಬಗಳ ಶ್ರೇಣಿಯಿರುವ ರಮ್ಯವಾದ ವಿಶಾಲ ಹಜಾರದಲ್ಲಿ ಭಾರಿ ಔತಣವನ್ನು ನೆರವೇರಿಸಿದೆವು” ಎಂಬುದಾಗಿ ಬಾಬರ್ ತನ್ನ ಆತ್ಮವೃತ್ತಾಂತದಲ್ಲಿಯೂ ಬರೆಯುತ್ತಾನೆ. (Zehir-Ed-Din-Babur.Vol.|| p.192&251) ಕಲ್ಲಿನ ಗುಮ್ಮಟ, ಕಲ್ಲು ಕಂಬಗಳ ಶ್ರೇಣಿ ಇರುವ ಪ್ಯಾಲೇಸ್ ಆಗ್ರಾದಲ್ಲಿರುವುದು ಈಗಿನ ತಾಜ್ ಮಹಲ್ ಒಂದೇ. ಇದ್ದಿದ್ದರೆ ಅದರ ಉಲ್ಲೇಖದ ಸುಳಿವಾದರೂ ಸಿಗಬೇಕಿತ್ತು. ಸಮುದ್ರದ ಆಳದಲ್ಲಿ ದ್ವಾರಕೆ ಸಿಕ್ಕಿರಬೇಕಾದರೆ ಇದನ್ನು ಸಂಶೋಧಿಸಲು ಕಷ್ಟವಿರಲಿಲ್ಲ. ಹಾಗೆಯೇ – ಆಗ್ರಾದಲ್ಲಿನ ಗಾರ್ಡನಿ ಪ್ಯಾಲೇಸ್ ನಲ್ಲು ಬಾಬರ್ ಸತ್ತನೆಂದು ವಿನ್ಸೆಂಟ್ ಸ್ನಿತ್ ಬರೆದಿದ್ದಾನೆ. ತಾಜ್ ಮಹಲ್ ಬಿಟ್ಟರೆ ಇನ್ನೊಂದು ತೋಟದಲ್ಲಿರುವ ಪ್ಯಾಲೇಸ್ ಆಗ್ರಾದಲ್ಲಿಲ್ಲ.

ಈಗ ನಮಗೆ ಸಂಶಯಗಳು ಅಧಿಕವಾಗಬಹುದು. ಈ ವಿಚಾರಗಳು ಸತ್ಯವೋ, ಸುಳ್ಳೋ ಎಂಬುದಾಗಿ ನಮ್ಮನ್ನು ಕಾಡಬಹುದು. ಆದರೆ ಇದು ಒಂದು ಪ್ರಾಚೀನ ಕಟ್ಟಡವೆಂದು ಸ್ವತ: ಷಾಜಹಾನಿನ ಮಗ ‌ಔರಂಗಜೇಬನೇ ಲಿಖಿತಬದ್ಧವಾಗಿ ದೃಢೀಕರಿಸಿದ್ದ. 1652 ರಲ್ಲಿ ರಾಜಕುಮಾರ ಔರಂಗಜೇಬ್ ತಂದೆಗೆ ಬರೆದ ಪತ್ರದಲ್ಲಿ ತನ್ನ ತಾಯಿಯನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಇರುವ ಏಳಂತಸ್ತುಗಳ ಭವನ ಬಹಳ ಪುರಾತನವಾಗಿತ್ತೆಂದೂ, ಎಲ್ಲಂದರಲ್ಲಿ ನೀರು ಸೋರುತ್ತಿದೆಯೆಂಬುದಾಗಿಯೂ, ಉತ್ತರ ದಿಕ್ಕಿನಲ್ಲಿರುವ ಗುಮ್ಮಟ ಬಿರುಕು ಬಿಟ್ಚಿದೆಯೆಂದು ತಿಳಿಸಿದ್ದಾನೆ. ಔರಂಗಜೇಬ ಬರೆದ ಈ ಪತ್ರದ ಪ್ರಸ್ತಾಪ Aadaab-e-Alamgiri, Yadgarnama, Muruqqai Akbarbadi ಎಂಬ ಹಂಸರುಗಳುಲ್ಲ ಮೂರು ಪರ್ಶಿಯನ್ ಗ್ರಂಥಗಳಲ್ಲಿ ಕಂಡುಬರುತ್ತದೆ. 1652 ರ
ವೇಳೆಗೇ ಆ ಭವನ ಸಂಕೀರ್ಣ ಹಳೆಯದಾಗಿದ್ದು ದುರಸ್ತಿ ಅವಶ್ಯಕವಿತ್ತೆಂದು ಯುವರಾಜನೇ ಸ್ವಯಂನೋಡಿ ಹೇಳಿರುವಾಗ… ನವ ತಾಜ್ ಮಹಲ್ ನಿರ್ಮಾಣ
1653ರ ವೇಳೆಗೆ ಪೂರ್ತಿಯಾಯಿತೆಂದು,ಎಲ್ಲವನ್ನೂ ಬಲ್ಲ ಭಾರತ ಸರಕಾರದವರು ತಾಜ್ ಮಹಲ್ ಮುಂದೆ ಇಟ್ಟಿರುವ ಫಲಕದಲ್ಲಿ ಹೇಳಿದ್ದಾದರೂ ಯಾವ
ಆಧಾರದಲ್ಲಿ??

ತಾಜ್ ಮಹಲ್ ಅಕ್ಷರಶ: ಹಿಂದೂ ವಾಸ್ತುಶಾಸ್ತ್ರ ಪ್ರಕಾರ ನಿರ್ಮಿತವಾಗಿವೆ. ಅಷ್ಟಭುಜ ಮಂದಿರಗಳು, ಗೋಪುರಗಳ ಮೇಲೆ ಕಲಶಗಳೂ, ಆಪತ್ತು
ಬಂದಾಗ ಅಮೂಲ್ಯವಾದ ಸಂಪತ್ತು ಶತ್ರುಗಳಿಗೆ ಎಟುಕದಂತೆ ಮೂಟೆ ಕಟ್ಟಿಹಾಕಲು ಪ್ರತಿ ಅಂತಸ್ತಿನಲ್ಲಿಯೂ ಬಾವಿಗಳು ಸಾಧಾರಣವಾಗಿ ಇರುವಂತಹವೇ.

ಹಾಗಾದರೆ ಎತ್ತಣ ಮಾಮರ ಎತ್ತಣ ಕೋಗಿಲೆ ಈ ಷಾಜಹಾನ??

ಗೋರಿಗಳು, ಸಮಾಧಿಗಳು ಇರುವ ಸ್ಥಳದಲ್ಲಿ ಹಳ್ಳಗಳನ್ನು ಅಗೆಸಿದ್ದು, ಹೂಳಿದ್ದು, ನೆಲಕ್ಕೆ, ಗೋಡೆಗಳಿಗೆ ಕುಸುರಿ ಕೆಲಸ ಮಾಡಿಸಿದ್ದು, ಗೋರಿಯನ್ನು ಅಂದವಾಗಿ ಅಲಂಕರಿಸಿದ್ದು, ಗೋಡೆಗಳ ಮೇಲೆ, ಕಮಾನುಗಳ ಮೇಲೆ ಕುರಾನ್ ಸೂಕ್ತಿಗಳನ್ನು ಕೆತ್ತಿಸಿದ್ದೇ ಮುಂತಾದ ಕಾರ್ಷಗಳನ್ನು ಮಾಡಿದ್ದು ಷಾಜಹಾನನೇ. ಇವಿಷ್ಚನ್ನು ಮಾಡಲು ಬರೋಬ್ಬರಿ 20 ವರ್ಷಗಳು ಬೇಕಾಯಿತೇ ಅನ್ನುವುದು ಮಾತ್ರ ಯಕ್ಷಪ್ರಶ್ನೆ. ಮೇಲಾಗಿ ನಿಯುಕ್ತಿ ಮಾಡಿದ ಕೆಲಸದವರಿಗೆ ಸರಿಯಾದ‌ ವೇತನವನ್ನೂ ನೀಡದೇ ದಾರುಣವಾಗಿ ಹಿಂಸಿಸುತ್ತಿದ್ದ ಅನೇಕ ಉದಾಹರಣೆಯೂ ಇವೆ. ಅದರ ಮರುನಿರ್ಮಾಣದ ಹೆಸರಿನಲ್ಲಿ ಆದುದು ರಕ್ತಸಿಕ್ತ ಕಥನವೆಂಬುದಷ್ಟೇ ಸತ್ಯ..

ಷಾಜಹಾನ್ ಅಂತಹ ಕ್ರೂರತನವನ್ನು ಪ್ರದರ್ಶಿಸುವವನೇ ಎಂದು ಪ್ರಶ್ನಿಸಬೇಡಿ.‌ ಆತ ಸ್ವತ: ಮಹಾಕ್ರೂರಿಯಾಗಿದ್ದ. ಜಹಂಗೀರನ ಮರಣಾನಂತರ ತಾನು ಗದ್ದುಗೆ ಏರಬಹುದೆಂಬ ಸೂಚನೆ ಸಿಕ್ಕ ತಕ್ಷಣ ತನ್ನ ಸೋದರರನ್ನು, ದಾಯಾದಿಗಳನ್ನು ಬರ್ಬರವಾಗಿ ಹತ್ಯೆಗೈಯ್ಯುದಷ್ಟೇ ಅಲ್ಲ, ಆ ವಿಚಾರವನ್ನು ತನ್ನ ಮಾವನಾದ ಅಸಫ್ ಖಾನಿಗೆ ಹೇಳಿದ ಧಾಟಿಯಲ್ಲೇ ಆತ ಎಂಥಹ ವ್ಯಕ್ತಿಯೆಂಬುದು ತಿಳಿಯುತ್ತದೆ.

ನಿಜವಾದ ಪ್ರೇಮ ಯಾರದ್ದು ಗೊತ್ತಾ??

ನಾವೆಲ್ಲಾ ಇತಿಹಾಸವನ್ನು ಕೆದಕುವಾಗ, ಅವರೀರ್ವರದ್ದು ಅದೆಂತಹ ಅದಮ್ಯ ಪ್ರೇಮ ವೆಂಬುದಾಗಿ ಉದ್ಗರಿಸುತ್ತೇವೆ. ಆದರೆ ಅಂಜುಮಾನ್ ಬಾನು ಅಲಿಯಾಸ್ ಮುಮ್ತಾಜಳ ಮೇಲೆ ಅವನಿಗೆ ಪ್ರೇಮ ಪ್ರವಾಹ ಉಕ್ಕಿತೆಂದು ಎಲ್ಲಿಯಾ ಉಲ್ಲೇಖವಿಲ್ಲ. ಆ ವಿಚಾರದಲ್ಲಿ ಜಹಾಂಗೀರ್ ನೂರ್ ಜಹಾನಳ ಮೇಲೆ ತೋರಿದ ಪ್ರೇಮವೇ ನೂರು ಪಟ್ಟು ಅಧಿಕವೆನ್ನಬಹುದು. ತನ್ನ ಪತ್ನಿಯ ಹೆಸರಿನಲ್ಲಿ ನಾಣ್ಯವನ್ನು ಟಂಕಿಸಿದ. ಜಾರಿ ಮಾಡಿದ ಪ್ರತೀ ಫರ್ಮಾನಿನ ಮೇಲೂ ಚಕ್ರವರ್ತಿಯ ಹೆಸರಿನೊಂದಿಗೆ ಅವಳ ಹೆಸರೂ ಇರುತ್ತಿತ್ತು. ಹೆಸರಿಗೆ ಜಹಂಗೀರ್ ಆದರೂ ಆಡಳಿತ ನಡೆಸುತ್ತಿದ್ದವಳು ಅವಳೇ..

ಆದರೆ ಷಾಜಹಾನ್..??

ಮುಮ್ತಾಜಳೋಡನೆ ನಿಶ್ಚಿತಾರ್ಥ‌ ಮಾಡಿಕೊಂಡರೂ 5 ವರ್ಷಗಳ ಕಾಲ ವಿವಾಹವಾಗಿದ್ದಿರಲಿಲ್ಲ. ಷಾಜಹಾನ್ 7 ವಿವಾಹವಾಗಿದ್ದ ಅನ್ನುವ ವಿಚಾರ ನಮಗೆ ತಿಳಿದೇ ಇದೆ. ಆತ ಮುಮ್ತಾಜಳನ್ನ ಅಕ್ಷರಶ: ಭೋಗದ ವಸ್ತುವಾಗಿ ಪರಿಗಣಿಸಿದ್ದನೇ ಹೊರತು ಓರ್ವ ಪತ್ನಿಯಾಗಲ್ಲ. ಆಕೆ ಸತ್ತ ಸಂದರ್ಭವೇ ಅದನ್ನು ಸೂಚಿಸುತ್ತದೆ. ಸತ್ತುಹೋದ ನಂತರ ತಾಜ್ ಮಹಲ್ ಸಂಕೀರ್ಣದಲ್ಲಿ ಹೂಳಿ ಭಾರೀ ಸಮಾಧಿ ಮಂದಿರವಾಗಿ ಕುಸುರಿ ಕೆಲಸ ಮಾಡಿಸಿ ಅಲಂಕರಿಸಿದರೂ ಅಲ್ಲಿ ಹೂತಿದ್ದು ಮುಮ್ತಾಜ್ ಒಬ್ಬಳನ್ನೇ ಅಲ್ಲ. ಸ್ವತ: ತನ್ನ ಇನ್ನೊಂದು ಪತ್ನಿ ಸಿರ್ಹಿಂದ್ ಬೇಗಂ ಅನ್ನೂ ಕೂಡ.. ನೆವಪಿರಲಿ. ತನಗೆ ಇಷ್ಟವಾಗಿದ್ದ ಪರಿಚಾರಿಕೆ ಸತೀಉನ್ನೀಸಾ ಳನ್ನೂ ಸಮಾಧಿ ಮಾಡಿದ್ದು ಇದೇ ತಾಜ್ ಮಹಲ್ ಅಡಿಯಲ್ಲಿ..!!!ಈಗ ಹೇಳಿ. ಪರಿಚಾರಿಕೆಗೂ ತನ್ನ ಪತ್ನಿಗೂ ಒಂದೇ ಸ್ಥಾನವನ್ನು ಕಲ್ಪಿಸಿದ್ದ ಷಾಜಹಾನ್ ಯಾವು ದೃಷ್ಟಿಕೋನದಿಂದ ಅಮರಪ್ರೇಮಿ?!!

ನಿಮಗೆ ಅರಿವಿರಬಹುದು. ಗೋರಿಗಳು ಇದ್ದ ಪ್ರದೇಶವನ್ನು ಬಿಟ್ಟು ಮಿಕ್ಕ ಅಂತಸ್ತುಗಳನ್ನು, ಸಂಕೀರ್ಣದಲ್ಲಿರುವ ಭವನಗಳನ್ನು ಸಂದರ್ಶಕರು ನೋಡಲು ಅವಕಾಶವಿಲ್ಲದಂತೆ ಸ್ವತ: ಸ್ವತಂತ್ರ‌ಭಾರತದ ಸರಕಾರ ಕೂಡ ನಿರ್ಭಂಧ ಹೇರಿತು. ಒಟ್ಟು 7 ಅಂತಸ್ತುಗಳಲ್ಲಿ 5 ಅಂತಸ್ತುಗಳಿಗೆ ಸೀಲು ಹಾಕಲಾಯಿತು.
ಸಂಪೂರ್ಣ ಇತಿಹಾಸವನ್ನು ನೋಡುವ ಅವಕಾಶ ಪ್ರಜೆಗಳಿಗೆ ತಪ್ಪಿ ಹೋದುದು ಮಾತ್ರ ವಾಸ್ತವ..

ತಾಜ್ ಮಹಲ್ ಪುರಾತನವಾದ ರಾಜ್ ಮಹಲ್ ಎಂಬುದನ್ನು ಪಿ ಎನ್ ಓಕ್ ಎಂಬ ಮಹನೀಯರು ನಾಲ್ಕೈದು ದಶಕಗಳ ಹಿಂದೆ ಒಂದೇ ಉಸಿರಿನಲ್ಲಿ ಹೇಳಿದ್ದರು. ಅದರ ಕುರಿತಾಗಿ ಪ್ರಬಲ ಸಾಕ್ಷ್ಯಾಧಾರವನ್ನು ಇಟ್ಟು ಗ್ರಂಥಗಳನ್ನೇ ಬರೆದರು. ಆದರೆ ಅದಕ್ಕೆ ದನಿಗೂಡಿಸುವ ಯಾವ ಪ್ರಯತ್ನವೂ ಸರಕಾರದ‌ ಕಡೆಯಿಂದ ನಡೆಯಲಿಲ್ಲ. ಈಗ ನಡೆಯುತ್ತಿರುವುದು ಉತ್ತಮ ಬೆಳವಣೆಗೆಯೆನ್ನಬಹುದು.

ತಾಜ್‌ಮಹಲ್ ಹಿಂದೆ ರಾಜ್‌ಮಹಲ್ ಆಗಿತ್ತೆಂಬ ವಿಚಾರ‌ತಿಳಿದರೆ ಆಗುವಂತಹದ್ದೇನೂ ಇಲ್ಲ. ಬಾಬರಿ ಮಸೀದಿಯಂತೆ‌ ಮತಪರವಾದ ಚಿಂತನೆಯನ್ನು ಇಲ್ಲಿ
ಲೇಪಿಸುವ ಅಗತ್ಯವೇನು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅದರ ಅಗತ್ಯತೆ ಕೂಡ ಇಲ್ಲ. ಷಾಜಹಾನ್ ದೇಶದ್ರೋಹಿ ಎಂಬ ಕಾರಣಕ್ಕೆ ಅಲ್ಲ. ಬದಲಾಗಿ ನೈಜ
ಇತಿಹಾಸದ ಅರಿವು ನಮಗಿರಬೇಕು ಎಂಬ ಕಾರಣಕ್ಕಷ್ಟೇ. ಅದ್ವಿತೀಯ‌ ಪ್ರಾಮುಖ್ಯತೆಯುಳ್ಳ ರಾಷ್ಟ್ರೀಯ ‌‌ಕಟ್ಟಡ‌ ಒಂದರ ಚರಿತ್ರೆಯನ್ನು ಸರಿಯಾಗಿ ಅರ್ಥೈಸಿ,
ಸುಳ್ಳುಗಳ ಬಲೆಯಿಂದ, ಅಜ್ಞಾನದ ಅಂಧಕಾರದಿಂದ ಹೊರಬೀಳುವುದರಿಂದ ರಾಷ್ಟ್ರಕ್ಕೆ ಒಳಿತೇ ಆಗುತ್ತದೆ ವಿನಹ: ಹಾನಿ ಏನೂ ಆಗುವುದಿಲ್ಲ.

ಅಂತಿಮ ವಾಣಿ :

 

ಈಗ ವಿಮರ್ಶೆ ಮಾಡಿ. ತಾಜ್ ಮಹಲ್ ಅದಮ್ಯ ಪ್ರೇಮದ ಸಂಕೇತವೋ , ಐತಿಹಾಸಿಕತೆಯ ಪ್ರತಿಬಿಂಬವೋ ‌ಅಥವಾ ರಕ್ತಾಂಕಿತ ಚರಿತ್ರೆಯ ರೂಪವೋ??
ಷಾಜಹಾನ್ ದೇಶದ್ರೋಹಿ ಎಂಬ ವಾದ ಅದೆಷ್ಚು ಸಮಂಜಸವೋ ಅರಿಯದು. ಆದರೆ ಆತ ಕಟ್ಟಿದ ಕಟ್ಟಡ ಮಾತ್ರ ಯಾವುದೇ ಮಹತ್ವವನ್ನು ಸಾರುವಂತಿಲ್ಲವೆಂಬುದು ಮಾತ್ರ ಸ್ಪಷ್ಟ ಹಾಗೂ ಸತ್ಯ. ನಮ್ಮ ಭಾರತದಲ್ಲಿ ಬ್ರಿಟಿಷರು ಕಟ್ಟಿಡ ಕಟ್ಟಡ ಇತಿಹಾಸವನ್ನು ಸಾರುತ್ತವೆ. ಸ್ವಾತಂತ್ರ್ಯ ಸಂಗ್ರಾಮದ ಚಿಂತನೆಯನ್ನು ನೀಡುತ್ತವೆ. ಅಲ್ಲಿ ಹಾರಾಡುತ್ತಿದ್ದ ಆಂಗ್ಲರ ಧ್ವಜವನ್ನು ಇಳಿಸಿ, ಅದೇ ಕಟ್ಟಡದಲ್ಲಿ ತ್ರಿವರ್ಣ ಧ್ವಜ ಏರಿಸಿದಾಗ ಆಗುವ ಆನಂದ ವರ್ಣನಾತೀತ. ಅದು ದಾಸ್ಯದ ಸಂಕೋಲೆಯಿಂದ ಮುಕ್ತಿಯಾದ ಸಂಕೇತ. ಅದೇ ಕೋಟೆಯನ್ನು ನಾವು ವಶಪಡಿಸಿದ್ದೇವೆಯೆನ್ನುವ ಪ್ರತೀಕ ಮಾತ್ರವಲ್ಲ, ಇಡೀಯ‌ ರಾಷ್ಟ್ರ ಸ್ವತಂತ್ರವಾಯಿತೆಂಬುದನ್ನು ಸಾರುತ್ತವೆ. ಆದರೆ ತಾಜ್ ಮಹಲ್?? ಅದು ಭಾರತದ ಅತೀ ಸುಂದರ ಕಟ್ಟಡಗಳಲ್ಲಿ ಒಂದೆಂಬುದು ನಿಸ್ಸಂಶಯ. ಆದರೆ ನೈಜ ಇತಿಹಾಸವನ್ನು ಮರೆತು‌ ಕೇವಲ ಆಡಂಬರಕ್ಕೆ ಮಿಥ್ಯ ಇತಿಹಾಸವನ್ನು ಸಾರುವುದು ಅದೆಷ್ಟು ಸರಿ?? ಅದರ ಪೂರ್ವಾಶ್ರಮದಲ್ಲಿ ಅದು ರಾಜ್ ಮಹಲ್ ಎಂಬುದಾಗಿ ಅಂಗೀಕಾರವಾದರೆ ತಾಜ್ ಮಹಲ್ ನ ಅಂದಚಂದಕ್ಕೇನು ಅಡ್ಡಿಯಾಗುವುದಿಲ್ಲವಲ್ಲವೇ?? ಯೋಚಿಸಬೇಕಾಗಿದೆ.

ನಿಮಗೆ ಅರಿವಿರಲಿ. ಕೆಂಪು ಕೋಟೆಯನ್ನು ನಿರ್ಮಿಸಿದವನೂ ಇದೇ ಷಾಜಹಾನ್. ಆದರೆ ಅದನ್ನು ಇನ್ನು‌ ಮುಂದೆ ಗೌರವಿಸಬೇಡಿ ಎಂದು ಯಾರೂ ಹೇಳುವುದಿಲ್ಲ.
ಮೊಘಲರು ಭಾರತೀಯ ಶಿಲ್ಪಕಲೆಗೆ ನೀಡಿದ ಕೊಡುಗೆಗಳು ಅದ್ವಿತೀಯ ಹಾಗೂ ಅವಿಸ್ಮರಣೀಯ. ಆದರೆ ತೇಜೋ ಮಹಾಲಯದ ಕಥೆ ವಿಭಿನ್ನ ಆಗಿರುವುದರಿಂದ, ನೈಜ ಇತಿಹಾಸಕ್ಕೆ ಅಷ್ಟೊಂದು ಸಾಕ್ಷ್ಯಗಳು ಇರುವುದರಿಂದ ಅದನ್ನು ಗುರುತಿಸಿ ಗೌರವಿಸಿಯೆಂಬ ಚಿಂತನೆ ಬರುತ್ತಿದೆಯಷ್ಟೇ.

ನೆನಪಿರಲಿ : ಇತಿಹಾಸವನ್ನು ಮರೆತ ರಾಷ್ಟ್ರಕ್ಕೆ ಭವಿತವ್ಯವಿಲ್ಲ. ಅಲ್ಲವೇ??

ಆಧಾರ : ಏದಿ ಚರಿತ್ರೆ : ಎಮ್ ವಿ ರ್ ಶಾಸ್ತ್ರೀ ( ಕನ್ನಡಾನುವಾದ : ಯಾವುದು ಚರಿತ್ರೆ – ಬಾಬು ಕೃಷ್ಣಮೂರ್ತಿ)
The Tajmahal – The true story – P.N.Oak

– ಜಯದೇವ ಹಿರಣ್ಯ

Tags

Related Articles

Close