ಅಂಕಣಪ್ರಚಲಿತರಾಜ್ಯಲೈಫ್ ಸ್ಟೈಲ್

ಬ್ಲೂ-ವೇಲ್ ಎಂಬ ಸೂಸೈಡ್ ಗೇಮ್!! ಪೋಷಕರೇ ಹುಷಾರ್ !! ಈ ಮೊಬೈಲು ಆಟದಿಂದ ಅಧಿಕ ಮಕ್ಕಳು ಬಲಿಯಾಗಿದ್ದಾರೆ!! ಎಚ್ಚರವಹಿಸಿ !!

ತಂತ್ರಜ್ಞಾನವು ನಮ್ಮ ಅಗತ್ಯವನ್ನು ಪೂರೈಸುವ ಸಾಧನವಾಗಬೇಕೇ ಹೊರತು ನಮ್ಮ ಜೀವನದ ಅಂಗವಾಗಬಾರದು. ಈ ಮಾತನ್ನು ಪದೇ ಪದೇ ನೆನಪಿಸುತ್ತಿದ್ದರೆ ನಮ್ಮ ಆಯಸ್ಸು ಸ್ವಲ್ಪ ಗಟ್ಟಿಯಾಗಬಹುದು. ಇದು ಅನೇಕ ನಿದರ್ಶನಗಳಿಂದ ನಿರೂಪಿಸಲ್ಪಟ್ಟಿದೆ. ಇವತ್ತು ತಂತ್ರಜ್ಞಾನ ಮಾಹಿತಿಯನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಇನ್ನೊಬ್ಬರನ್ನು ತಮ್ಮ ಅರಿವಿಗೆ ಬರದೇ ಕೊಲೆ ಮಾಡಿಸುತ್ತದೆ. ಅರೇ !! ತಂತ್ರಜ್ಞಾನ ಕೊಲೆ ಮಾಡುತ್ತಾ??

ಹೌದು. ಇವತ್ತು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಕೈಯಲ್ಲೂ ತಂತ್ರಜ್ಞಾನ ಇದೆ. ಆಟಗಳ ನೆಪದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ತಂತ್ರಜ್ಞಾನ ಕೈಬೀಸಿ ಕರೆಯುತ್ತಿದೆ. ಕೆಲವು ತಿಂಗಳುಗಳ ಹಿಂದೆ ಪೋಕಿಮೋನ್ ಗೋ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಆಡುವ ಆಟ ಬಹಳಷ್ಟು ಸುದ್ದಿಯಾಗಿತ್ತು. ಅದೇ ತೆರನಾದ ಮಗದೊಂದು ಆಟ ಬಿಡುಗಡೆಯಾಗಿ ಮಕ್ಕಳನ್ನು ಆಕರ್ಷಿಸಿ ಅವರನ್ನು ಯಮ ಕೈಬೀಸಿ ಕರೆಯುವಂತೆ ಮಾಡುತ್ತಿದೆ. ಅದವೇ ಬ್ಲೂ ವೇಲ್ ಚಾಲೆಂಜ್ !!!

ಇಂತಹದ್ದೊಂದು ಪಂಥಾಹ್ವಾನದ ಆಟ ಪ್ರಾರಂಭವಾಗಿದ್ದು 2013 ರಲ್ಲಿ. ಇದನ್ನು 22 ವರ್ಷದ ಫಿಲಿಪ್ ಬುಡೆಯಿಕಿನ್ ಎಂಬ ರಶ್ಯನ್ ಪ್ರಜೆ ಪ್ರಾರಂಭಿಸಿದ್ದ. ಒಂದು ಸಂದರ್ಶನದಲ್ಲಿ ರಶ್ಯಾದ 17 ಯುವಕರ ಆತ್ಮಹತ್ಯೆಗೆ ಪರೋಕ್ಷವಾಗಿ ತಾನೇ ಕಾರಣವೆಂಬುದನ್ನು ಒಪ್ಪಿ ಇದೇ ಮೇ ತಿಂಗಳಲ್ಲಿ ಬಂಧನಕ್ಕೂ ಒಳಗಾಗಿದ್ದ. 3 ವರ್ಷಗಳ ಕಾಲ ಕಾರಾಗೃಹವಾಸವನ್ನು ಆತ ಅನುಭವಿಸುತ್ತಿದ್ದಾನೆ. ಯಾರಿಗೆ ಆತ್ಮಹತ್ಯೆ ಮಾಡಲಿಕ್ಕೆ ಇಚ್ಛೆ ಇದೆಯೋ ಅವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಲಿಯೆಂಬ ಚಿಂತನೆ ಆತನಲ್ಲಿತ್ತು. ಅದಿಕ್ಕೋಸ್ಕರವೇ ಆತ ಇದನ್ನು ಸಾವಿನ ತಂಡ ಎನ್ನುತ್ತಿದ್ದ. ರಶ್ಯಾದಲ್ಲಿ ಬ್ಲೂ-ವೇಲ್ ಮಾಡಿದ ಅನಾಹುತವನ್ನು ಗಂಭೀರವಾಗಿ ಪರಿಗಣಿಸಿದ ರಶ್ಶಿಯಾ ದೇಶ ಆತ್ಮಹತ್ಯೆ ರಕ್ಷಣೆಗೆ ಒಂದು ಕಾಯ್ದೆಯನ್ನೇ ಜಾರಿಗೆ ತಂದಿತು. ವಿಶ್ವದಲ್ಲಿಯೂ ಅದರ ಕುರಿತಾಗಿ ಜಾಗೃತಿ ಮೂಡಿಸಲು ಆ ದೇಶ ಮುಂದಾಯಿತು.

ಅಷ್ಟಕ್ಕೂ ಅಂತಹ ಸ್ಪರ್ಧೆಗಳು ಅದರಲ್ಲೇನಿದೆ??

ಯಾರು ಬ್ಲೂ-ವೇಲ್ ಚಾಲೆಂಜ್ಅನ್ನು ಸ್ವೀಕರಿಸುತ್ತಾರೋ ಅವರು 50 ಕಾರ್ಯಗಳನ್ನು ಮಾಡಬೇಕು. ಅಂದರೆ 50 ಹಂತವನ್ನು ಆತ ತಲುಪಬೇಕು. ಬೆಳಗ್ಗೆ 4:30 ರ ವೇಳೆಗೆ ಹಾಡು ಕೇಳುವಂತೆ ಮಾರ್ಗದರ್ಶಕರೊಬ್ಬರು ನಿರ್ದೇಶಿಸುತ್ತಾರೆ. ಅದು ಮೊದಲನೆಯ ಹಂತ. ನಂತರ ಭಯಹುಟ್ಟಿಸುವ ಚಲನಚಿತ್ರವನ್ನು ನೋಡುವುದು, ತಮ್ಮ ಅಂಗಾಗಗಳನ್ನು ತಾವೇ ಕತ್ತರಿಸುವುರಿಂದ ಹಿಡಿದು ಅಂತಿಮವಾಗಿ ಅತೀ ಎತ್ತರದಿಂದ ಜಿಗಿದು ತಮ್ಮನ್ನು ತಾವೇ ಆತ್ಮಾರ್ಪಣೆ ಮಾಡುವಲ್ಲಿಯವರೆಗೆ ಬ್ಲೂ ವೇಲ್ ಪಂಥಾಹ್ವಾನ ಮಾಡುತ್ತದೆ. ಪ್ರತಿಯೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದೇನೆಂದು ತೋರ್ಪಡಿಸಲು ಸಾಕ್ಷಿಯನ್ನು ಮಾರ್ಗದರ್ಶಕರಿಗೆ ವೀಡಿಯೋದ ಮೂಲಕ ಅಥವಾ ಇನ್ನಿತರ ಮಾಧ್ಯಮದ ಮೂಲಕ ಕಳುಹಿಸಬೇಕು. ಆಗ ಮಾತ್ರ ಮುಂದಿನ ಹಂತಕ್ಕೆ ನೀವು ಹೋಗಬಹುದು. ಇದು ಅಂತರ್ಜಾಲದಲ್ಲಿ ವ್ಯಾಪಕ ಪ್ರಚಾರವನ್ನು ಪಡೆದು ವಿಶ್ವದಲ್ಲೇ ಭಯ ಹುಟ್ಟಿಸುವ ವಾತಾವರಣವನ್ನು ನಿರ್ಮಿಸಿದೆ.

ಈ ಪಂಥಾಹ್ವಾನದ ಆಟಕ್ಕೆ ಭಾರತದ ಅನೇಕರು ಬಲಿಯಾಗಿದ್ದಾರೆ, ಬಲಿಯಾಗುತ್ತಿದ್ದಾರೆ. ತಿರುವನಂತಪುರಮ್, ಪುಣೆ, ಮುಂಬೈ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಈ ಆಟಕ್ಕೆ ಮುಗ್ಧ ಮಕ್ಕಳು ಬಲಿಯಾಗಿದ್ದಾರೆ. 2017 ನೇ ಆಗಸ್ಟ್ 10 ನಂದು ಇಂದೋರ್ ಪ್ರದೇಶದಲ್ಲಿರುವ ಏಳನೆಯ ತರಗತಿಯ ವಿದ್ಯಾರ್ಥಿಯು ಚಮಾಲಿ ದೇವಿ ಪಬ್ಲಿಕ್ ಸ್ಕೂಲ್ ನ ಮೂರನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತ ತನ್ನ ಡೈರಿಯಲ್ಲಿ ಬ್ಲೂ ವೇಲ್ ಆಟದ 50 ಹಂತಗಳನ್ನು ತಲುಪಿ ಕೊನೆಯ ಹಂತವನ್ನು ತಲುಪಲಿದ್ದೇನೆ ಎಂಬುದನ್ನು ಬರೆದಿದ್ದ ಎಂಬುದಾಗಿ ಪೋಲಿಸರ ತನಿಖೆಯಲ್ಲಿ ನಂತರ ಬಹಿರಂಗಗೊಳ್ಳುತ್ತದೆ. ಅಂದರೆ ಯಾವ ರೀತಿ ಮಕ್ಕಳ ಮನಸ್ಥಿತಿಯ ಮೇಲೆ ಆ ಆಟ ಪರಿಣಾಮವನ್ನು ಬೀರಿದೆ ಎಂಬುದನ್ನು ನಾವು ಅವಲೋಕನ ಮಾಡಬಹುದು.

ಬ್ಲೂ ವೇಲ್ ಆಟವನ್ನು ಗೆಲ್ಲಲು ಆತ್ಮಹತ್ಯೆ ಮಾಡಿಕೊಂಡ ಕೇರಳದ ವಿದ್ಯಾರ್ಥಿ :

ತಿರುವನಂತಪುರಮ್ ಜಿಲ್ಲೆಯ ಪೆರುಂಕುಲಮ್ ಪ್ರದೇಶದ ವಿದ್ಯಾರ್ಥಿಯಾಗಿದ್ದ 16 ವರ್ಷದ ಮನೋಜ್ ಎಂಬಾತ ನೇಣು ಹಾಕಿಕೊಂಡು ಜುಲೈ 26 ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ಅಸಹಜ ಸಾವೆಂದು ಪೋಲಿಸರು ಪ್ರಕರಣವನ್ನು ದಾಖಲಿಸಿದ ನಂತರ ಮನೋಜ್ ಅವರ ತಾಯಿ,”ನನ್ನ ಮಗನ ಸಾವಿಗೆ ಬ್ಲೂವೇಲ್ ಆಟ ವೇ ಕಾರಣ” ವೆಂದು ಹೇಳಿಕೆ ಕೊಡುತ್ತಾರೆ.

9 ತಿಂಗಳುಗಳ ಹಿಂದೆ ಮನೋಜ್ ಈ ಆಟದ ಕುರಿತಾಗಿ ತನ್ನ ತಾಯಿಯಲ್ಲಿ ಚರ್ಚಿಸುತ್ತಾನೆ. ಆ ಹೆಸರನ್ನು ಕೇಳಿದ ತಕ್ಷಣ ತಾಯಿ ನಗುತ್ತಾಳೆ. ಆಗ ಆ ಆಟದ ಕುರಿತಾಗಿ ವಿವರಿಸಿದ ಮನೋಜ್, ಅದರಲ್ಲಿ ತನ್ನನ್ನು ತಾನೇ ಹಿಂಸಿಸಬೇಕು. ಇತರರನ್ನು ಹಿಂಸಿಸಬೇಕು ಎಂಬುದಾಗಿ ಎಲ್ಲಾ ವರ್ಣಿಸಲು ಪ್ರಾರಂಭಿಸುತ್ತಾನೆ. ಇದನ್ನು ಕೇಳಿ ಗಾಬರಿಗೊಂಡ ತಾಯಿ ಇಂತಹ ಆಟವನ್ನು ಆಡಬಾರದೆಂದು ಹೇಳಿ ತನ್ನ ಮಗನ ಕೈಯಿಂದ ಮಾತನ್ನೂ ಪಡೆದುಕೊಳ್ಳುತ್ತಾನೆ.

ಈ ಆಟದ ಕುರಿತಾಗಿ ಹೇಗೆ ಗೊತ್ತಾಯಿತು ಅನ್ನವ ಪ್ರಶ್ನೆಗೆ ಉತ್ತರಿಸಿದ್ದ ಮನೋಜ್. “ನನಗೆ ಈ ಆಟದ ಬಗ್ಗೆ ಮಾಹಿತಿ ಸಿಕ್ಕುತ್ತು. ನಂತರ ಅದರ ಬಗ್ಗೆ ತಿಳಿದುಕೊಂಡೆ” ಎಂದಿದ್ದ ಎಂದು ಅವರ ತಾಯಿ ಮಾಧ್ಯಮಗಳ ಮುಂದೆ ಹೇಳಿದ್ದರು.

ಯಾವತ್ತೂ ಒಬ್ಬನೇ ಸುತ್ತಾಡದ ಮನೋಜ್, ಕಳೆದ ಒಂಬತ್ತು ತಿಂಗಳಿಂದ ಒಬ್ಬನೇ ಬೀಚ್ ಗೆ ತೆರಳುತ್ತಿದ್ದ. ರಾತ್ರಿಯಿಡೀ ಎಚ್ಚೆತ್ತು ಬೆಳಗಿನ ಜಾವ 5 ಗಂಟೆ ಅವಧಿಗೆ ಮಲಗಲು ಹೋಗುತ್ತಿದ್ದ. ತನ್ನ ಸ್ನೇಹಿತನ ಕೈಯಿಂದ ಬಲವಂತವಾಗಿ ತನ್ನ ಕೈಯಲ್ಲಿ ಕಂಪಾಸ್ ಮೂಲಕ ಮೂರು ಆಂಗ್ಲ ಅಕ್ಷರವನ್ನು ಬರೆಸಿದ್ದ ಎಂಬ ವಿಚಾರವನ್ನೂ ತಾಯಿ ಬಹಿರಂಗಗೊಳಿಸಿದರು.

ಕೊನೆಗೆ ತಾನು ಸತ್ತರೆ ನೀವು ದುಃಖದಿಂದ ಆದಷ್ಟು ಬೇಗ ಹೊರಬರುತ್ತೀರಲ್ಲವೇ ಎಂಬುದಾಗಿ ತಾಯಿಯಲ್ಲಿ ಕೇಳಿದ್ದ. ನಂತರ ಅವರು ನೀನು ಮತ್ತು ನಿನ್ನ ತಂಗಿ ನನ್ನ ಎರಡು ಕಣ್ಣುಗಳಿದ್ದ ಹಾಗೆ. ಯಾವದನ್ನೂ ಕಳೆದುಕೊಳ್ಳಲು ನಾನು ಬಯಸಲಾರೆ. ನೀನು ಹೀಗೆ ಯಾಕೆ ಮಾತನಾಡುತ್ತಿ ಎಂದು ಬೈದರು. ಆಗ ಸುಮ್ಮನೆ ತಮಾಷೆ ಮಾಡಿದೆ ಎಂದು ಸಮರ್ಥನೆ ಕೊಟ್ಟಿದ್ದ ಮನೋಜ್ ನಂತರ ನೇಣಿಗೆ ಶರಣಾಗಿದ್ದ.

ಬ್ಲೂ ವೇಲ್ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ??

* ಯಾರಿಗೆ ಈ ಆಟವನ್ನಾಡಲು ಆಸಕ್ತಿಯಿದೆಯೋ ಅವರು ಸಾಮಾಜಿಕ ಜಾಲತಾಣದ ಮೂಲಕವೇ ಪ್ರವೇಶಿಸುತ್ತಾರೆ.
* ಕೆಲವು ಹ್ಯಾಶ್‍ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರೆ, ನಂತರ ಅವರನ್ನು ಮಾರ್ಗದರ್ಶಕರು ಸಂಪರ್ಕಿಸಿ ಮಾರ್ಗದರ್ಶಿಸುತ್ತಾರೆ.
* ಆಟಗಾರರು ಮತ್ತು ಮಾರ್ಗದರ್ಶಕರು ಸಾಮಾಜಿಕ ಮಾಧ್ಯಮದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಮತ್ತು ಆಟಗಾರರು ಮಾಡಬೇಕಾದ ಕಾರ್ಯವನ್ನೂ ಅದರಲ್ಲೇ ನಿರ್ದೇಶಿಸುತ್ತಾರೆ.
* ಆಟಗಾರರು ಯಶಸ್ವಿಯಾಗಿ ಆ ಕಾರ್ಯವನ್ನು ಪೂರೈಸಿದ್ದೇ ಆದಲ್ಲಿ, ಅದರ ಸಾಕ್ಷಿಯನ್ನು ಮಾರ್ಗದರ್ಶಕರಿಗೆ ತಲುಪಿಸಬೇಕು. ಅದು ಫೊಟೊ, ವೀಡಿಯೋ ಅಥವಾ ಇನ್ನಾವುದೂ ಆಗಿರಬಹುದು. ಆಗ ಮಾತ್ರ ಮುಂದಿನ ಹಂತಕ್ಕೆ ಹೋಗಬಹುದು.
* ಆಟಗಾರರು ಮತ್ತು ಮಾರ್ಗದರ್ಶಕರು ವೈಯುಕ್ತಿಕವಾಗಿಯೂ ಸಂಪರ್ಕದಲ್ಲಿರುಬಹುದಾದ ಸಾಧ್ಯತೆಗಳೂ ಇವೆ.
* ಆಟವನ್ನು ನಿರ್ದೇಶಿಸುವ ಒಬ್ಬ ವ್ಯಕ್ತಿ ಆಟಗಾರರ ವೈಯುಕ್ತಿಕ ವಿಚಾರಗಳನ್ನು ತಿಳಿದು , ಪಂಥವನ್ನು ಅರ್ಧದಲ್ಲಿ ಕೈಬಿಟ್ಟರೆ, ಆ ವಿಚಾರಗಳನ್ನು ಬಹಿರಂಗ ಪಡಿಸುವ ಬೆದರಿಕೆಯನ್ನೂ ಹಾಕಬಹುದು.
* 50 ನೆಯ ದಿವಸ, ಕೊನೆಯ ಹಂತದಲ್ಲಿ, ಅತೀ ಎತ್ತರದ ಸ್ಥಳದಿಂದ ಜಿಗಿಯಬೇಕೆಂಬ ನಿಯಮವಿರುತ್ತದೆ, ಅನೇಕರು ಮಾರ್ಗದರ್ಶಕರ ಮಾತನ್ನು ಆಲಿಸಿ ತಮ್ಮ ಜೀವವನ್ನೇ ಬ್ಲೂ ವೇಲ್ ಗೆ ಅರ್ಪಿಸುತ್ತಾರೆ.

ಹಾಗಾದರೆ ಬ್ಲೂ ವೇಲ್ ಆಟದ ನಿಷೇಧ ಸಾಧ್ಯವಿಲ್ಲವೇ ?

ಈ ಆಟ ನಮ್ಮಲ್ಲಿ ಭಯವನ್ನು ಮೂಡಿಸುತ್ತಾದರೂ, ಅದರ ನಿಷೇಧ ಕಷ್ಟಸಾಧ್ಯ. ಬ್ಲೂ ವೇಲ್ ಎಂಬ ಪಂಥಾಹ್ವಾನದ ಆಟ ಸಾಮಾಜಿಕ ಜಾಲತಾಣದಲ್ಲಿ ಹ್ಯಾಷ್‍ಟ್ಯಾಗ್ ಮಾಡುವ ಮೂಲಕ ಪ್ರಾರಂಭವಾಗುವ ಆಟ. ಅದಕ್ಕೆ ಪ್ರತ್ಯೇಕ ಆಪ್ ಇಲ್ಲ. ಅದಕ್ಕೋಸ್ಕರವೇ ಯಾವುದೇ ರೀತಿಯಲ್ಲಿ ಅದಕ್ಕೆ ನಿಷೇಧ ಹೇರುವುದು ಕಷ್ಟಸಾಧ್ಯ.
ಒಂದೇ ಒಂದು ರೀತಿತಯಲ್ಲಿ ಈ ಅಸಂಬದ್ಧ ಕಾರ್ಯವನ್ನು ಸ್ಥಗಿತಗೊಳ್ಳಿಸಬಹುದು. ಯಾರಾದರೂ ಹ್ಯಾಷ್ ಟ್ಯಾಗ್ ಅನ್ನು ಮಾಡಿ ಸಂದೇಶವನ್ನು ಕಳಿಸಿದಾಗ ಯಾವುದೇ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆಗಳನ್ನು ಕೊಡದಂತೆ ಮಾಡಿದರೆ ಈ ಆಟಕ್ಕೆ ಬಲಿಯಾಗುವವರ ಸಂಖ್ಯೆ ಕ್ಷೀಣಿಸಬಹುದು. ಈ ಹ್ಯಾಷ್‍ಟ್ಯಾಗ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಸ್ವಲ್ಪ ಮಟ್ಟಿಗೆ ಮಕ್ಕಳನ್ನು ಬಲಿ ತೆಗೆಯುತ್ತಿರುವ ಕಾರ್ಯಕ್ಕೆ ತಡೆಹಿಡಿಬಹುದು.

ಮುಗ್ಧ ಜೀವಿಗಳನ್ನು ಬಲಿ ತೆಗೆಯುತ್ತಿರುವ ಇಂತಹ ಆಟಗಳನ್ನು ನಾವೆಲ್ಲಾ ಸೇರಿ ಸಮಾಜದಿಂದ ಕಿತ್ತೊಗೆಯಬೇಕಿದೆ. ಇಲ್ಲವಾದರೆ ಇಂದು ಮನೋಜ್, ನಾಳೆ ನಮ್ಮ ಮಕ್ಕಳು ಇಂತಹದಕ್ಕೆ ಬಲಿಯಾದರೆ ಅದಕ್ಕೆ ಯಾರನ್ನು ಹೊಣೆಗಾರರಾಗಿಸೋದು. ನೀವೇ ಯೋಚಿಸಿ. ನಮ್ಮ ಮಕ್ಕಳು ಉಪಯೋಗಿಸುತ್ತಿರುವ ಮೊಬೈಲ್ ಮೇಲೆ ನಿಗಾವಹಿಸಿದರೆ ಮಾತ್ರ ನಮ್ಮ ಮಕ್ಕಳ ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ಬಂದೀತು ಎಂಬ ಭಾವನೆ ಎಂದೂ ಬಾರದಿರಲಿ.

– ವಸಿಷ್ಠ

Tags

Related Articles

Close